ನರೇಂದ್ರ ಮೋದಿ ಮತ್ತು ದೇವೇಗೌಡ
ನರೇಂದ್ರ ಮೋದಿ ಮತ್ತು ದೇವೇಗೌಡ

ಬಿಜೆಪಿ ಜತೆ ಮೈತ್ರಿ ಪ್ರಸ್ತಾಪ: ಗೊಂದಲದಲ್ಲಿ ದೇವೇಗೌಡರು (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಬಿಜೆಪಿ ಜತೆ ಮೈತ್ರಿ ಬೇಕಾ…? ಬೇಡವಾ...? ಮೈತ್ರಿಯಾದರೆ ಇಬ್ಬರಲ್ಲಿ ಯಾರಿಗೆ ಹೆಚ್ಚಿನ ಲಾಭ? ಮೈತ್ರಿ ಆಗದಿದ್ದರೆ ಯಾರಿಗೆ ಹೆಚ್ಚಿನ ನಷ್ಟ? ಮೈತ್ರಿಯೇ ಅಂತಿಮವಾದರೆ ಅದರಿಂದ ಪಕ್ಷದ ಸಂಘಟನೆ ಮೇಲೆ ಆಗುವ ಪರಿಣಾಮಗಳು ಏನು?
Published on

ಬಿಜೆಪಿ ಜತೆ ಮೈತ್ರಿ ಬೇಕಾ…? ಬೇಡವಾ...? ಮೈತ್ರಿಯಾದರೆ ಇಬ್ಬರಲ್ಲಿ ಯಾರಿಗೆ ಹೆಚ್ಚಿನ ಲಾಭ? ಮೈತ್ರಿ ಆಗದಿದ್ದರೆ ಯಾರಿಗೆ ಹೆಚ್ಚಿನ ನಷ್ಟ? ಮೈತ್ರಿಯೇ ಅಂತಿಮವಾದರೆ ಅದರಿಂದ ಪಕ್ಷದ ಸಂಘಟನೆ ಮೇಲೆ ಆಗುವ ಪರಿಣಾಮಗಳು ಏನು? ಬಿಜೆಪಿ ಗಿಂತ ಹೆಚ್ಚಾಗಿ ಜೆಡಿಎಸ್ ನಾಯಕರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕಂಡುಕೊಳ್ಳಲು ಸ್ವತಃ ಜೆಡಿಎಸ್ ನ ಪರಮೋಚ್ಚ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರಿಗೂ ಸಾಧ್ಯವಾಗುತ್ತಿಲ್ಲ. ಹಾಗಾಗೇ ಅವರು ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಯಾವುದೇ ಸ್ಪಷ್ಟ ತೀರ್ಮಾನವನ್ನು ಪ್ರಕಟಿಸಿಲ್ಲ. ಈ ಕುರಿತಂತೆ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ನಂತರ ತಮ್ಮ ನಿಲುವು ತಿಳಿಸುವುದಾಗಿ ಹೇಳಿ ಬಂದಿದ್ದಾರೆ.

ಒಂದಂತೂ ಸ್ಪಷ್ಟ, ಕಳೆದ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ನಂತರ ಜೆಡಿಎಸ್ ನಲ್ಲಿ ಹೊಸ ಹುಮ್ಮಸ್ಸು ಕಾಣುತ್ತಿಲ್ಲ.ಚುನಾವಣೆಗೆ ಮುನ್ನ ರಾಜ್ಯದಲ್ಲಿ ತಮ್ಮ ಪಕ್ಷದ ಬೆಂಬಲ ಇಲ್ಲದೇ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ವಿಶ್ವಾಸ ಹೊಂದಿದ್ದ ಆ ಪಕ್ಷದ ನಾಯಕರುಗಳಿಗೆ ಚುನಾವಣಾ ಫಲಿತಾಂಶ ಭಾರೀ ಆಘಾತ ನೀಡಿದೆ. ಅದರಿಂದ ಇನ್ನೂ ಚೇತರಿಸಿಕೊಂಡು ಪಕ್ಷಕ್ಕೆ ಮತ್ತೆ ಹೊಸ ಚೈತನ್ಯ ತುಂಬಲು ಸಾಧ್ಯವಾಗುತ್ತಿಲ್ಲ. ಅದಕ್ಕಿಂತ ಮಿಗಿಲಾಗಿ ತನ್ನ ರಾಜಕೀಯ ನಿಲುವುಗಳ ಕುರಿತಾಗೇ ಜೆಡಿಎಸ್ ನಾಯಕರುಗಳಿಗೆ ಇನ್ನೂ ಗೊಂದಲವಿದೆ. ಪಕ್ಷದೊಳಗಿನ ಆಂತರಿಕ ಗೊಂದಲಗಳನ್ನು ಸರಿಪಡಿಸಿಕೊಳ್ಳದೇ ಮೈತ್ರಿಗೆ ಮುಂದಾದರೆ ಅದರಿಂದ ತೀವ್ರ ಸ್ವರೂಪದ ನಷ್ಟ ಅನುಭವಿಸಬೇಕಾದೀತು ಎಂಬ ಸತ್ಯ ಅರಿತಿರುವ ದೇವೇಗೌಡರು ಮಾತುಕತೆ ಸಂದರ್ಭದಲ್ಲಿ ಬಿಜೆಪಿ ನಾಯಕರುಗಳಿಗೆ ಸ್ಪಷ್ಟ ಭರವಸೆಯನ್ನೇನೂ ನೀಡಿಲ್ಲ. ಹೀಗಾಗಿ ಎರಡೂ ಪಕ್ಷಗಳ ನಡುವೆ ಚುನಾವಣಾ ಮೈತ್ರಿಗೆ ಭೂಮಿಕೆ ಸಿದ್ಧವಾಗೇ ಬಿಟ್ಟಿದೆ ಎಂಬ ತೀರ್ಮಾನಕ್ಕೂ ಬರುವ ಸನ್ನಿವೇಶವೂ ನಿರ್ಮಾಣ ಆಗಿಲ್ಲ.

ಮುಖ್ಯವಾಗಿ ಗೌಡರನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ಜನತಾದಳ ತನ್ನ ಜಾತ್ಯತೀತ ನಿಲುವುಗಳನ್ನು ಉಳಿಸಿಕೊಂಡೇ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕೆ? ಎಂಬುದು. ಹಿಂದುತ್ವದ ಸಿದ್ಧಾಂತವನ್ನೇ ಪ್ರಧಾನವಾಗಿ ನಂಬಿಕೊಂಡಿರುವ ಬಿಜೆಪಿ ಜತೆ ಒಂದುವೇಳೆ ಹೊಂದಾಣಿಕೆ ಮಾಡಿಕೊಂಡಿದ್ದೇ ಆದರೆ ಅದರಿಂದ ಪಕ್ಷದ ಜಾತ್ಯತೀತ ನಿಲುವಿಗೆ ಧಕ್ಕೆ ಬರಬಹುದಲ್ಲದೇ ಸಂಘಟನಾತ್ಮಕವಾಗಿಯೂ ಪಕ್ಷಕ್ಕೆ ದೊಡ್ಡ ಸಮಸ್ಯೆ ಎದುರಾಗಲಿದೆ. ಈ ಹೊಂದಾಣಿಕೆಗೆ ಪಕ್ಷದಲ್ಲೇ ಹೆಚ್ಚಿನ ಮಂದಿಯ ವಿರೋಧವಿರುವುದು ಒಂದು ಸಮಸ್ಯೆಯಾದರೆ ಈ ಮೈತ್ರಿಯಿಂದ ಬಿಜೆಪಿಗೆ ಹೆಚ್ಚಿನ ಲಾಭ ಆಗಬಹುದೇ ಹೊರತೂ ತಮ್ಮ ಪಕ್ಷಕ್ಕೆ ಹೆಚ್ಚಿನ ಅನುಕೂಲವೇನೂ ಆಗಲಾರದು ಹಾಗಂತ ಮೈತ್ರಿ ಪ್ರಸ್ತಾಪ ನಿರಾಕರಿಸಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಈಗಿರುವುದಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗದೇ ಹೋಗಬಹುದು. ಕಳೆದ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲದೇ ರಾಜ್ಯದಲ್ಲಿ ಬಿಜೆಪಿ25 ಸ್ಥಾನಗಳನ್ನು ಗಳಿಸಿತ್ತು. ಇದಕ್ಕೆ ಪ್ರಧಾನಿ ಮೋದಿ ಜನಪ್ರಿಯತೆಯ ಅಲೆಯ ಜತೆಗೇ ಸಂಘಟನಾತ್ಮಕವಾಗಿ ಬಿಜೆಪಿ ಬಲಯುತವಾಗಿದ್ದು , ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗಿದ್ದ ವರ್ಚಸ್ಸೂ ಕಾರಣವಾಗಿತ್ತು. 

ಈಗ ಐದು ವರ್ಷಗಳ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು ಕಾಂಗ್ರೆಸ್ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ಮತ್ತು ಇದೇ ಕಾರಣಕ್ಕೆ ಬಿಜೆಪಿ ಜೆಡಿಎಸ್ ಪಕ್ಷಗಳ ಪ್ರಭಾವಿ ಮುಖಂಡರನ್ನು ತನ್ನತ್ತ ಆಕರ್ಷಿಸಿದೆ. ಈ ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದು ಸಚಿವರಾಗಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆಗೊಂಡಿರುವ ಬಿಜೆಪಿಯ ಕೆಲವು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರುವ ಹಂತದಲ್ಲಿದ್ದಾರೆ. ಇದಲ್ಲೇ ಬಿಜೆಪಿಯ ಕೆಲವು ಮಾಜಿ ಶಾಸಕರು ಸೇರಿದಂತೆ ಇನ್ನೂ ಕೆಲವು ಲಿಂಗಾಯಿತ ಮುಖಂಡರು ಕಾಂಗ್ರೆಸ್ ಸೇರಲು ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದ್ದು ಸೇರ್ಪಡೆಗೆ ಮುಹೂರ್ತವಷ್ಟೇ ನಿಗದಿಯಾಗಬೇಕಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ನಂತರ ಆ ಪಕ್ಷವನ್ನು ಅದುವರೆಗೆ ಬೆಂಬಲಿಸಿಕೊಂಡು ಬಂದಿದ್ದ ಪ್ರಬಲ ಲಿಂಗಾಯಿತ ಸಮುದಾಯ ಈಗ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಿಷ್ಠೆ ಬದಲಾಯಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಬಿಜೆಪಿ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕರೇ ಇಲ್ಲದೇ ದಿಕ್ಕಾಪಾಲಾಗಿದೆ. ಈ ಸನ್ನಿವೇಶದ ಲಾಭ ಪಡೆದಿರುವ ಕಾಂಗ್ರೆಸ್ ಬಿಜೆಪಿಯ ಅತೃಪ್ತ ಶಾಸಕರು, ಪ್ರಭಾವೀ ಮುಖಂಡರುಗಳನ್ನು ತನ್ನತ್ತ ಸೆಳೆಯುವ ಕಾರ್ಯದಲ್ಲಿ ನಿರತವಾಗಿದೆ. ಈ ಕಾರ್ಯಾಚರಣೆಯ ನೇತೃತ್ವವನ್ನು ಸ್ವತಹಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ವಹಿಸಿಕೊಂಡಿರುವುದರಿಂದ ಹೆಚ್ಚಿನ ಮಹತ್ವ ಬಂದಿದೆ.  ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳೂ ಈಗ ರಾಜ್ಯದಲ್ಲಿ ಜನಪ್ರಿಯವಾಗಿದ್ದು ಆ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಿದೆ. 

ಬಿಜೆಪಿ ದಿನೇ ದಿನೇ ದುರ್ಬಲವಾಗುತ್ತಿರುವುದರ ಲಾಭ ಪಡೆಯಲು ಜೆಡಿಎಸ್ ಗೆ ಸಾಧ್ಯವಾಗುತ್ತಿಲ್ಲ. ಒಂದು ಕಡೆ ಪ್ರಬಲವಾಗುತ್ತಿರುವ ಕಾಂಗ್ರೆಸ್ ಮತ್ತೊಂದು ಕಡೆ ದುರ್ಬಲವಾಗುತ್ತಿರುವ ಬಿಜೆಪಿಯ ನಡುವೆ ಪ್ರಬಲವಾಗುವ ಅವಕಾಶಗಳಿದ್ದರೂ ಜೆಡಿಎಸ್ ಅದನ್ನು ಬಳಸಿಕೊಳ್ಳುತ್ತಿಲ್ಲ. ಪಕ್ಷದ ನೇತಾರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರಂತೆ ಜನ ಮಾನಸದಲ್ಲಿ ಮತ್ತು ತಮ್ಮದೇ ಸಮುದಾಯದಲ್ಲಿ ಪ್ರಭಾವೀ ನಾಯಕರಾಗಿ ನೆಲೆಗೊಂಡಿಲ್ಲ. ಮತ್ತು ಅಂತಹ ವಿಶ್ವಾಸವನ್ನೂ ಗಳಿಸಿಲ್ಲ. ಸಂಘಟನೆಯನ್ನು ಅವರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಆರೋಪಗಳೂ ಅವರ ಮೇಲಿದೆ. ಪಕ್ಷದ ಇತರ ನಾಯಕರಲ್ಲೂ ಅವರಿಗೆ ವಿಶ್ವಾಸವಿದ್ದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ತೊರೆದು ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಜೆಡಿಎಸ್ ಗೆ ಬಂದು ಪಕ್ಷದ ಅಧ್ಯಕ್ಷರಾದ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಹಿಂದೆ ಅಧ್ಯಕ್ಷರಾಗಿದ್ದ ಎನ್. ತಿಪ್ಪಣ್ಣ, ಎಚ್.ವಿಶ್ವನಾಥ್, ಹಾಸನ ಜಿಲ್ಲೆಯ ಶಾಸಕರಾಗಿದ್ದ ಹಿರಿಯ ಮುಖಂಡ ಎಚ್.ಕೆ. ಕುಮಾರಸ್ವಾಮಿಯವರಂತೆ ಮೂಲೆಗುಂಪಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲೇ ಈ ಸಂಗತಿ ಬಹಿರಂಗವಾಗಿತ್ತು. ದೇವೇಗೌಡರ ನಾಯಕತ್ವನ್ನು ನಂಬಿ ಜೆಡಿಎಸ್ ನಲ್ಲಿರುವ ಅನೇಕ ಹಿರಿಯ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ದೊಡ್ಡ ಕಂದಕವೇ ಇದೆ. ಬಿಜೆಪಿ ಜತೆ ಮೈತ್ರಿಯ ಪ್ರಸ್ತಾಪಕ್ಕೆ ದೇವೇಗೌಡರು ಏನಾದರೂ ಸಮ್ಮತಿಯ ಮುದ್ರೆ ಹಾಕಿದರೆ ನಿಸ್ಸಂಶಯವಾಗಿ ಈ ಎಲ್ಲ ಮುಖಂಡರು ಅದನ್ನು ವಿರೋಧಿಸುವುದು ಖಚಿತ. 

ಜೆಡಿಎಸ್ ನ 19 ಶಾಸಕರ ಪೈಕಿ ಎಂಟಕ್ಕೂ ಹೆಚ್ಚು ಮಂದಿಗೆ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯೇ ಪ್ರಮುಖ ಎದುರಾಳಿ ಆಗಿರುವುದರಿಂದ ಸ್ಥಳೀಯವಾಗಿ ಆ ಪಕ್ಷದ ಜತೆ ಚುನಾವಣೆಯಲ್ಲಿ ಹೊಂದಾಣಿಕೆ ಕಷ್ಟವಾಗಲಿದೆ ಹೀಗಾಗಿ ಅವರು ಮೈತ್ರಿಯ ಪ್ರಸ್ತಾಪವನ್ನು ವಿರೋಧಿಸುವ ಸಾಧ್ಯತೆಗಳೇ ಹೆಚ್ಚು. ಲೋಕಸಭಾ ಚುನಾವಣೆಗೆ ಮತ್ತೆ ಸ್ಪರ್ಧಿಸಲು ಇಚ್ಛಿಸಿರುವ ದೇವೇಗೌಡರಿಗೆ ಬಿಜೆಪಿ ಜತೆ ಹೊಂದಾಣೀಕೆ ಮಾಡಿಕೊಂಡರೆ ತಮ್ಮ ಗೆಲುವು ಸಾಧ್ಯ ಆಗಬಹುದು ಎಂಬ ಲೆಕ್ಕಚಾರವೇನೋ ಇದೆ. ಆದರೆ ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿ ಅವರ ಪಕ್ಷದ ಸಂಸದರು ಆಯ್ಕೆಯಾದರೆ ಮಾತ್ರ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಪ್ರಾಮುಖ್ಯತೆ ಪಡೆಯಲು ಸಾಧ್ಯ. ಆದರೆ ಈಗಿನ ರಾಜಕೀಯ ಸನ್ನಿವೇಶದಲ್ಲಿ ಗೌಡರು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಜತೆಗೆ ಅದೇ ಪಕ್ಷದ ಪ್ರಬಲ ನಾಯಕರು ಹಾಗೂ ತಮ್ಮ ಕಡು ರಾಜಕೀಯ ವೈರಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸಬೇಕಿದೆ.ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಸನ್ನಿವೇಶದಲ್ಲಿ ತಮ್ಮ ಪಕ್ಷದ ಬಲವನ್ನು ಹೆಚ್ಚಿಸಿಕೊಂಡು ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್ ಈಗಾಗಲೇ ಆ ನಿಟ್ಟಿನಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ನಿಂದಲೂ ಒಂದಷ್ಟು ಶಾಸಕರನ್ನು ಸೆಳೆಯುವ ನೀಲ ನಕ್ಷೆಯನ್ನು ಅವರು ತಯಾರಿಸಿದ್ದು  ಆ ಮೂಲಕ ಆಪಕ್ಷದ ಜತೆಗೇ ಗೌಡರ ಕುಟುಂಬ ರಾಜಕಾರಣವನ್ನೂ ದುರ್ಬಲಗೊಳಿಸಬಹುದು ಎಂಬ ಲೆಕ್ಕಚಾರದಲ್ಲಿದ್ದಾರೆ. ಇದಕ್ಕೂ ಮಿಗಿಲಾಗಿ ಜೆಡಿಎಸ್ ಜತೆ ಮೈತ್ರಿಯೇ ಅಂತಿಮವಾದರೆ ಹಾಸನ, ಮಂಡ್ಯ ಸೇರಿದಂತೆ ಒಕ್ಕಲಿಗರೇ ಪ್ರಧಾನವಾಗಿರುವ ಜಿಲ್ಲೆಗಳಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಬಿಜೆಪಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಶಾಸಕರು, ಪ್ರಭಾವಿ ಮುಖಂಡರು ಕಾಂಗ್ರೆಸ್ ಸೇರುವ ಸಾಧ್ಯತೆಗಳೇ ಹೆಚ್ಚು. ಸಜ್ಜನ ರಾಜಕಾರಣಿ, ಅರಕಲಗೂಡಿನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸುವ ಆಲೋಚನೆಯಲ್ಲಿದ್ದಾರೆ. ಈ ಕ್ಷೇತ್ರದಿಂದ ಈಗ ಸಂಸದರಾಗಿರುವ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಅಯ್ಕೆಯನ್ನು ಹೈಕೋರ್ಟ್ ಈಗ ಅಸಿಂಧುಗೊಳಿಸಿದೆ, ಹೊಳೆ ನರಸೀಪುರ ಕ್ಷೇತ್ರದ ಶಾಸಕ ಗೌಡರ ಮತ್ತೊಬ್ಬ ಪುತ್ರ ಎಚ್.ಡಿ ರೇವಣ್ಣ  ಅವರಿಗೂ ಚುನಾವಣೆಯ ಅಕ್ರಮದ ಆರೋಪಗಳು ಸುತ್ತಿಕೊಂಡಿದ್ದು ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಅದೊಂದು ಸಮಸ್ಯೆ ಆಗಬಹುದು. ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆಯಾದರೂ ಸಂಸತ್ ಸದಸ್ಯತ್ವದಿಂದ ಅವರಿನ್ನೂ ಅನರ್ಹಗೊಂಡಿಲ್ಲ. ಈ ತೀರ್ಪು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಪ್ರಯತ್ನದಲ್ಲಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನಾರೋಗ್ಯಕ್ಕಿಡಾಗಿದ್ದು ಸಂಪೂರ್ಣ ವಿಶ್ರಾಂತಿಗೆ ವೈದ್ಯರು ಅವರಿಗೆ ಸೂಚಿಸಿದ್ದಾರೆ. ಹಿರಿಯ ನಾಯಕರಾದ ಪಕ್ಷಕ್ಕೆ ಚೈತನ್ಯ ತುಂಬಿ ಮತ್ತೆ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿಸುವ ಮಹತ್ವಾಕಾಂಕ್ಷೆಯೇನೋ ಗೌಡರಿಗೆ ಇದೆ. ಆದರೆ ಅವರ ಪ್ರಚಂಡ ಆತ್ಮ ವಿಶ್ವಾಸಕ್ಕೆ ವಯಸ್ಸು ಸಹಕರಿಸುತ್ತಿಲ್ಲ. ಅವರಿಗೆ ಈಗ 90 ವರ್ಷ ವಯಸ್ಸು. ಮೊದಲಿನಂತೆ ರಾಜ್ಯ ಪ್ರವಾಸ ಮಾಡಲು ಅವರಿಗೆ ಸಾಧ್ಯವಿಲ್ಲ. ಆದರೂ ಅವರಿಗೆ ಮತ್ತೆ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುವ ಹುಮ್ಮಸ್ಸಿದೆ. ಆದರೆ ಬಿಜೆಪಿ ಜತೆಗಿನ ಹೊಂದಾಣಿಕೆಯ ಪ್ರಸ್ತಾಪದ ಬಗ್ಗೆ ಅವರ ಪಕ್ಷದಲ್ಲೇ ಅಪಸ್ವರಗಳಿವೆ. ಮೋದಿ ಬ್ರಾಂಡ್ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ಹೆಚ್ಚಿನ ಸ್ಥಾನಗಳ ಲಾಭ ತರುವ ಸಾಧ್ಯತೆಗಳೂ ಇಲ್ಲ. ಏಕೆಂದರೆ ಆ ಪಕ್ಷದ ಅಡಿಪಾಯದಲ್ಲೇ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. 

ಯಗಟಿ ಮೋಹನ್
yagatimohan@gmail.com

X

Advertisement

X
Kannada Prabha
www.kannadaprabha.com