ಎರಡೂ ದೋಣಿಯ ಮೇಲೆ ಕಾಲಿಟ್ಟ ಬಿಜೆಪಿ ವಲಸಿಗರು (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರೆಂದೇ ಗುರುತಿಸಿಕೊಂಡಿರುವವರ ಪರಿಸ್ಥಿತಿ ಇದು. ಜೆಡಿಎಸ್ ನಲ್ಲಿರುವ ಕೆಲವು ಶಾಸಕರೂ ಈ ಗೊಂದಲದಿಂದ ಹೊರತಾಗಿಲ್ಲ.
ಬಿಜೆಪಿಯಲ್ಲಿರುವ ವಲಸಿಗ ಶಾಸಕರು
ಬಿಜೆಪಿಯಲ್ಲಿರುವ ವಲಸಿಗ ಶಾಸಕರು
Updated on

ಇಲ್ಲಿರಲಾರೆ… ಅಲ್ಲಿಗೆ ಹೋಗದೇ ಇರಲಾರೆ…..!

ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರೆಂದೇ ಗುರುತಿಸಿಕೊಂಡಿರುವವರ ಪರಿಸ್ಥಿತಿ ಇದು. ಜೆಡಿಎಸ್ ನಲ್ಲಿರುವ ಕೆಲವು ಶಾಸಕರೂ ಈ ಗೊಂದಲದಿಂದ ಹೊರತಾಗಿಲ್ಲ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಬೆಂಗಳೂರಿನ ಶಾಸಕರಾದ ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಬೈರತಿ ಬಸವರಾಜು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಪ್ರಯತ್ನಗಳಿಗೆ ಸದ್ಯಕ್ಕೆ ತರೆ ಬಿದ್ದಿದೆ. ಕಾಂಗ್ರೆಸ್ ಸೇರುವುದಿಲ್ಲ,ಬಿಜೆಪಿಯಲ್ಲೇ ಇರುತ್ತೇವೆ ಎಂದು ಈ ನಾಲ್ವರು  ಬಿಜೆಪಿ ನಾಯಕರ ಸತತ ಸಂಧಾನದ ನಂತರ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಶಾಸಕರ ಬೆಂಬಲಿಗರು, ಪ್ರಮುಖ ಮುಖಂಡರು  ಕಾಂಗ್ರೆಸ್ ಸೇರಿದ್ದಾರೆ. ಇದು ಪಕ್ಷಾಂತರದ ಮೊದಲ ಹಂತ ಎಂದೂ ಹೇಳಲಾಗುತ್ತಿದೆ. ಯಶವಂತಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸೋಮಶೇಖರ್ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಎರಡು ಮೂರು ಸುತ್ತು ಮಾತುಕತೆ ನಡೆಸಿದ್ದರು. ಅದಾದ ನಂತರ ಅವರು ಕಾಂಗ್ರೆಸ್ ಸೇರುವ ಪ್ರಯತ್ನದಲ್ಲಿರುವ ಬಗ್ಗೆ ಪುಕಾರು ಎದ್ದಿತು.

ಅನುದಾನ ಬಿಡುಗಡೆ ರಾಜಕಾರಣ: ಈ ಸುದ್ದಿ ಹಬ್ಬಿದ್ದ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಅವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಿ ಅವುಗಳಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ನೀಡಿದರು. ಅವರನ್ನು ಜತೆಯಲ್ಲೇ ಕೂರಿಸಿಕೊಂಡ ಮುಖ್ಯಮಂತ್ರಿ ಬಿಬಿಎಂಪಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಈ ಕಾಮಗಾರಿಗಳಿಗೆ ತುರ್ತಾಗಿ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದರು. ಈ ಆದೇಶ ನೀಡಿದ 24 ಗಂಟೆಯಲ್ಲಿ ಸೋಮಶೇಖರ್ ಕ್ಷೇತ್ರಕ್ಕೆ ತುರ್ತಾಗಿ ಏಳು ಕೋಟಿ ರೂ ಅನುದಾನ ಬಿಡುಗಡೆಗೊಂದು ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲು ಆದೇಶವೂ ಹೊರಬಿದ್ದಿದೆ. ಸೋಮಶೇಖರ್ ವಿಚಾರದಲ್ಲಿ ತೋರಿಸಿದ ವಿಶೇಷ ಆಸಕ್ತಿಯನ್ನು ಸಿದ್ದರಾಮಯ್ಯ ಉಳಿದ 223 ಶಾಸಕರ ವಿಚಾರದಲ್ಲಿ ತೋರಿಸಿಲ್ಲ.

 ಈಗ ಇದೇ ಸಂಗತಿ ಕಾಂಗ್ರೆಸ್ ನಲ್ಲಿ ಬಹುತೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಂಶವನ್ನು ಮುಂದಿಟ್ಟುಕೊಂಡು ಅನ್ಯ ಪಕ್ಷಗಳ ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವುದು ಬೇಡ ಎಂಬ ತಕರಾರನ್ನು ತೆಗೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ಅಸಮಾಧಾನ ತೀವ್ರ ಸ್ವರೂಪವನ್ನು ಪಡೆದರೂ ಆಶ್ಚರ್ಯವಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಬಿಜೆಪಿ ಜೆಡಿಎಸ್ ಪಕ್ಷಗಳ ಎರಡನೇ ಹಂತದ ನಾಯಕರುಗಳಿಗೆ ಗಾಳ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅದರ ಫಲವಾಗಿ ಶಿವಮೊಗ್ಗದ ಮಾಜಿ ಸಂಸದ ಆಯನೂರು ಮಂಜುನಾಥ್, ಶಿಕಾರಿಪುರದ ನಾಗರಾಜೆ ಗೌಡ ಕಾಂಗ್ರೆಸ್ ಸೇರಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಮ್ಮ ಅಧಿಕಾರದ ಅವಧಿ ಮುಗಿದ ನಂತರ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು ಬಹುತೇಕ ನವೆಂಬರ್ ಅಂತ್ಯದಲ್ಲಿ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.

ಶಿಕಾರಿಪುರದ ನಾಗರಾಜೆ ಗೌಡ ಹಿಂದೆ ಕಾಂಗ್ರೆಸ್ ನಲ್ಲೇ ಇದ್ದವರು, ಮೇ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಶಿಕಾರಿಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಟಿಕೆಟ್ ಭರವಸೆ ನಿಡಿದ್ದರು. ಆದರೆ ನಿಗೂಢ ಕಾರಣಗಳಿಂದ ಅವರಿಗೆ ಕೈ ಟಿಕೆಟ್ ಕೈತಪ್ಪಿತು. ಬಂಡಾಯ ಅಭ್ಯರ್ಥಿಯಾಗಿ ಬಿಜೆಪಿಯ ವಿಜಯೇಂದ್ರ ವಿರುದ್ಧ ಸ್ಪರ್ಧಿಸಿ 11 ಸಾವಿರ ಮತಗಳ ಅಂತರದಲ್ಲಿ ಅವರು ಪರಾಭವಗೊಂಡರು. ಅವರಿಗೆ ಕಾಂಗ್ರೆಸ್ ಬಿ ಫಾರಂ  ತಪ್ಪಲು ಚುನಾವಣೆಯಲ್ಲಿ ತಮ್ಮ ಗೆಲುವಿನ ಹಾದಿ ಸುಗಮವಾಗಿಸಿಕೊಳ್ಳಲು ಕಾಂಗ್ರೆಸ್ ನ ಪ್ರಮುಖ ನಾಯಕರೊಬ್ಬರು ನಡೆಸಿದ ಹೊಂದಾಣಿಕೆ ರಾಜಕಾರಣವೇ ಕಾರಣ ಎಂಬ ಅಸಮಾಧಾನ ಕಾಂಗ್ರೆಸ್ ನಲ್ಲಿ ಈಗಲೂ ಇದೆ. ಈಗ ಮತ್ತೆ ಅವರು ಕಾಂಗ್ರೆಸ್ ತೆಕ್ಕೆಗೆ ಮರಳಿದ್ದಾರೆ.

ಮಾಜಿ ಸಂಸದ ಆಯನೂರು ಮಂಜುನಾಥ್ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಜತೆಗಿನ ತೀವ್ರ ಭಿನ್ನಾಭಿಪ್ರಾಯದಿಂದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಪ್ರಯತ್ನಿಸಿ  ವಿಫಲರಾಗಿದ್ದರು. ನಂತರ ಜೆಡಿಎಸ್ ಸೇರಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಈಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಈಗಾಗಲೇ ಎಲ್ಲ ಪಕ್ಷಗಳನ್ನೂ ಸುತ್ತಿ ಕಾಂಗ್ರೆಸ್ ಸೇರಿರುವ ಮಂಜುನಾಥ್ ಹಿಂದೊಮ್ಮೆ ಕಾಂಗ್ರೆಸ್ ನಲ್ಲೂ ಇದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು.ಚುನಾವಣೆ ಸಂದರ್ಭದಲ್ಲಿ ಅದಕ್ಕೂ ರಾಜೀನಾಮೆ ನೀಡಿದ್ದರು. ಈಗ ಕಾಂಗ್ರೆಸ್ ಗೆ ವಾಪಸಾಗಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಲೋಕಸಭೆ ಅಭ್ಯರ್ಥಿ?: ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಪ್ರಬಲವಾಗೇನೂ ಇಲ್ಲ.  ಲೋಕಸಭೆ ಚುನಾವಣೆಗೆ ಕನ್ನಡದ ಖ್ಯಾತ ಚಿತ್ರ ನಟ ಶಿವರಾಜ್ ಕುಮಾರ್ ಪತ್ನಿ ಶ್ರೀಮತಿ ಗೀತಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಲೋಚನೆಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ. ಗೀತಾ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ. ಅವರ ಸೋದರ ಮಧು ಬಂಗಾರಪ್ಪ ಈಗ ಸೊರಬ ಕ್ಷೆತ್ರದಿಂದ ಗೆದ್ದು ಮಂತ್ರಿ ಆಗಿದ್ದಾರೆ.

 ಬಂಗಾರಪ್ಪನವರ ಒಂದು ಕಾಲದ ಶಿಷ್ಯ ಬೇಳೂರು ಗೋಪಾಲಕೃಷ್ಣ ಸಾಗರದ ಶಾಸಕರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಗಾರಪ್ಪನವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಜತೆಗೇ ಬೇರೆ ಪಕ್ಷಗಳಿಂದ ಬಂದ ಪ್ರಮುಖರ ಬಲವೂ ಸೇರಿದರೆ ಕಾಂಗ್ರೆಸ್ ಇಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಇದೆ.

 ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಶಕ್ತಿಯೂ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಅವರ ಪುತ್ರ ರಾಘವೇಂದ್ರ ಈ ಕ್ಷೇತ್ರದ ಸಂಸದರು. ಈ ಹಿಂದೆ ಗಿತಾ ಶಿವರಾಜ್ ಕುಮಾರ್ ಇಲ್ಲಿಂದಲೇ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ರಾಜಕೀಯ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಿದೆ. ಬಿಜೆಪಿ ನಾಯಕ ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವಿನ ಸಂಬಂಧಗಳು ಹಿಂದಿನಷ್ಟು ಚೆನ್ನಾಗಿಲ್ಲ. ತಮ್ಮ ಹಾಗೂ  ಪುತ್ರನ ರಾಜಕೀಯ ಭವಿಷ್ಯಕ್ಕೆ ಯಡಿಯೂರಪ್ಪ ಅಡ್ಡಗಾಲಾಗಿದ್ದಾರೆ ಎಂಬ ಅಸಹನೆ ಈಶ್ವರಪ್ಪ ಅವರನ್ನು ಕಾಡುತ್ತಿದೆ. ಸಹಜವಾಗೇ ಈ ಭಿನ್ನಾಭಿಪ್ರಾಯದ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ತಂತ್ರ ಹೂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಇನ್ನಷ್ಟು ಬೇರೆ ಪಕ್ಷಗಳ ಪ್ರಮುಖರು ಕಾಂಗ್ರೆಸ್ ಸೇರುವ ಸಾಧ್ಯತೆಗಳೂ ಇವೆ.

ಗೌಡರ ಹೊಸ ರಾಜಕೀಯ ತಂತ್ರ: ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಕಾರ್ಯಾಚರಣೆ ಜೋರಾಗುತ್ತಿದ್ದಂತೆ ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಇದೀಗ ಮಾಜಿ ಪ್ರಧಾನಿ ದೇವೇಗೌಡರೇ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ನ ಕೆಲವು ಶಾಸಕರೂ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಪ್ರಯತ್ನದಲ್ಲಿರುವುದನ್ನು ಕಂಡು ಎಚ್ಚೆತ್ತ ಅವರೇ ಈಗ ಶಾಸಕರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಮುಂದಿನ ದಿನಗಳಲ್ಲಿ  ಜೆಡಿಎಸ್ ಗೆ ಅನುಕೂಲಕರವಾದ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯಲಿದ್ದ ದುಡುಕಿ ಪಕ್ಷ ತೊರೆಯದಂತೆ ಶಾಸಕರ ಮನವೊಲಿಸುತ್ತಿದ್ದಾರೆ.

ಪಕ್ಷದ ಸಂಘಟನೆಯಲ್ಲಿ ಆಗುತ್ತಿರುವ ಲೋಪ ಗುರುತಿಸಿರುವ ಗೌಡರು ಹಿರಿಯ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಸಮನ್ವಯ ಸಮಿತಿಯನ್ನು ರಚಿಸಿದ್ದು ಶಾಸಕರು, ಕಾರ್ಯಕರ್ತರ ಬೇಡಿಕೆಗಳ ಬಗ್ಗೆ ಗಮನ ಹರಿಸಲು ಸೂಚಿಸಿದ್ದಾರೆ. ಅದರ ಫಲ ಎಂಬಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಮುನಿಸಿಕೊಂಡು ಪಕ್ಷ ತೊರೆಯಲು ಮುಂದಾಗಿದ್ದ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸೇರಿದಂತೆ ಕೆಲವು ಪ್ರಮುಖರು ಮತ್ತೆ ಜೆಡಿಎಸ್ ಕಡೆ ವಾಲುತ್ತಿದ್ದಾರೆ.

ಕುಮಾರಸ್ವಾಮಿಯದ್ದೇ ಸಮಸ್ಯೆ: ಆದರೆ ಪುತ್ರ ಕುಮಾರಸ್ವಾಮಿಯ ಗೊಂದಲದ ರಾಜಕೀಯ ನಿಲುವುಗಳು ಗೌಡರನ್ನು ಅಸಹಾಯಕತೆಗೆ ಈಡು ಮಾಡಿದೆ. ಸಂಘಟನೆ ವಿಚಾರದಲ್ಲಿ ಕುಮಾರಸ್ವಾಮಿ ಗೌಡರಷ್ಟು ಗಂಭೀರವಾಗಿಲ್ಲ. ಇದೇ ಜೆಡಿಎಸ್ ನ ಮೂಲ ಸಮಸ್ಯೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದ ವಲಸಿಗ ಶಾಸಕರನ್ನು ಯಡಿಯೂರಪ್ಪ ಸೇರಿದಂತೆ ಕೆಲವು ಪ್ರಮುಖ ಮುಖಂಡರು ಸಂಪರ್ಕಿಸಿ ಮನವೊಲಿಸಿದ್ದಾರೆ. ಈ ಶಾಸಕರ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿದ್ದ ಆರೋಪಗಳ ಮೇಲೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯ ಮುಖಂಡರುಗಳನ್ನ ಪಕ್ಷದಿಂದ ಉಚ್ಛಾಟಿಸುವ ಮೂಲಕ ವಲಸಿಗರನ್ನು ಸಮಾಧಾನ ಪಡಿಸುವ ಕಾರ್ಯ ನಡೆದಿದೆ.

ಈಗ ಈ ಶಾಸಕರು ತಾವು ಬಿಜೆಪಿ ತೊರೆಯುವ ಸುದ್ದಿಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಬಹು ಮುಖ್ಯವಾಗಿ ಕಾಂಗ್ರೆಸ್ ಸೇರಿದರೆ ಉಪ ಚುನಾವಣೆ ಎದುರಿಸಬೇಕಾಗುತ್ತದೆ. ಸ್ಥಳೀಯ ರಾಜಕಾರಣದ ದೃಷ್ಟಿಯಿಂದ ತಮ್ಮನ್ನು ಸೋಲಿಸಲು ಬಿಜೆಪಿ ಜೆಡಿಎಸ್ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸಂಘಟನಾತ್ಮಕ ಸಮರ ಸಾರಬಹುದು.

ಅದಕ್ಕೆ ಬದಲಾಗಿ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಗೆ ಕಳಿಸಿ  ಅವರು ಅಲ್ಲಿ ನೆಲೆ ಕಂಡುಕೊಂಡ ನಂತರ ತಾವೂ ಸೇರುವ ದೂರಗಾಮಿ ಲೆಕ್ಕಾಚಾರದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರಂಭಿಸಿರುವ ಆಪರೇಷನ್ ಹಸ್ತ ಕಾರ್ಯಾಚರಣೆಗೆ ಬಿಜೆಪಿಯಂತೂ ಬೆಚ್ಚಿ ಬಿದ್ದಿದೆ. ಆಂತರಿಕ ಗೊಂದಲಗಳಿಂದ ಆಪಕ್ಷ ಸದ್ಯಕ್ಕೆ ಮುಕ್ತವಾಗುವ ಲಕ್ಷಣಗಳಿಲ್ಲ. ಜೆಡಿಎಸ್ ಸ್ಥಿತಿಯೂಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com