ಬಿಜೆಪಿ ಈಗ ಸೂತ್ರ ಕಿತ್ತ ಗಾಳಿಪಟ; ಕಾಂಗ್ರೆಸ್ ನತ್ತ ವಲಸಿಗರ ಚಿತ್ತ (ಸುದ್ದಿ ವಿಶ್ಲೇಷಣೆ)

'ಸೂತ್ರ ಹರಿದ ಗಾಳಿ ಪಟ'…. ರಾಜ್ಯ ಬಿಜೆಪಿಯಲ್ಲಿ ಚುನಾವಣೆ ನಂತರ  ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹೀಗೆ ಹೋಲಿಕೆ ಮಾಡುವುದು ಸರಿಯಾದೀತು.
ಬಿಜೆಪಿಯ ವಲಸಿಗ ಶಾಸಕರು- ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (ಸಾಂಕೇತಿಕ ಚಿತ್ರ
ಬಿಜೆಪಿಯ ವಲಸಿಗ ಶಾಸಕರು- ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (ಸಾಂಕೇತಿಕ ಚಿತ್ರ
Updated on

'ಸೂತ್ರ ಹರಿದ ಗಾಳಿ ಪಟ'…. ರಾಜ್ಯ ಬಿಜೆಪಿಯಲ್ಲಿ ಚುನಾವಣೆ ನಂತರ  ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹೀಗೆ ಹೋಲಿಕೆ ಮಾಡುವುದು ಸರಿಯಾದೀತು.

ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೂರು ದಿನಗಳು ತುಂಬಲಿರುವ ಸಂದರ್ಭದಲ್ಲಿ ಅದರ ಭರ್ಜರಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ವಿಧಾನ ಮಂಡಲದ ಉಭಯ ಸದನಗಳಿಗೆ ಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡುವುದು ಸಾಧ್ಯವಾಗಿಲ್ಲ.  ಪಕ್ಷದ ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕಾತಿ ವಿಚಾರವೂ ನೆನೆಗುದಿಗೆ ಬಿದ್ದಿದೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದರೂ ಆ ಸ್ಥಾನಗಳಿಗೆ ಸಮರ್ಥರನ್ನು ಆಯ್ಕೆ ಮಾಡಲು ಬಿಜೆಪಿಯ ದಿಲ್ಲಿ ನಾಯಕತ್ವಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಚಿವ ಸಹೋದ್ಯೊಗಿಗಳು ಸದನದೊಳಗೆ ಅವಕಾಶ ಸಿಕ್ಕ ಸಂದರ್ಭಗಳಲ್ಲೆಲ್ಲ ಈ ಕುರಿತು ಬಿಜೆಪಿಯ ಸದಸ್ಯರನ್ನು, ನಾಯಕತ್ವವನ್ನು ಛೇಡಿಸುತ್ತಲೇ ಬಂದಿದ್ದಾರೆ ಇದು ಮಾಧ್ಯಮಗಳಲ್ಲೂ ಸಾಕಷ್ಟು ಬಾರಿ ಪ್ರತಿಬಿಂಬಿತವಾಗಿದೆ. ಇಷ್ಟೆಲ್ಲ ಬೆಳವಣಿಗೆಯ ನಂತರವೂ ಪ್ರತಿಪಕ್ಷದ ನಾಯಕರು ಯಾರು ಎಂಬುದನ್ನು ಬಿಜೆಪಿಯ ನಾಯಕತ್ವ ನಿರ್ಧರಿಸಲಾಗದ ಸ್ಥಿತಿಗೆ ಮುಟ್ಟಿರುವುದು ಆ ಪಕ್ಷದ ನಾಯಕತ್ವ ರಾಜಕೀಯವಾಗಿ ದಿವಾಳಿ ಎದ್ದಿದೆ ಎಂಬ ಟೀಕೆಗಳನ್ನು ಋಜುವಾತು ಮಾಡುವ ಪರಿಸ್ಥಿತಿಗೆ ತನ್ನನ್ನೇ ತಾನು ಒಡ್ಡಿಕೊಂಡಿದೆ. 

ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯಲ್ಲಿನ ಗುಂಪುಗಾರಿಕೆ ಬೀದಿಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪರ ಮತ್ತು ವಿರುದ್ಧವಾಗಿ ಎರಡು ಗುಂಪುಗಳಿರುವುದು ಆಗಾಗ ಈ ಗುಂಪುಗಳ ಪರಸ್ಪರ ಅಸಹನೆ, ಭಿನ್ನಮತ ಸಾರ್ವಜನಿಕವಾಗೇ ಸ್ಫೋಟಗೊಳ್ಳುತ್ತಿದೆ. ಇದು ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ವಿಧಾನಸಭೆಯ ಒಳಗೂ ಇದು ಪರೋಕ್ಷವಾಗಿ ಪ್ರತಿಬಿಂಬಿತವಾಗಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರ ಹುದ್ದೆ ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗೆ ಸಮಾನಾದ ಹುದ್ದೆ ಎಂದು ಪರಿಗಣಿಸಲಾಗಿದೆ. ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಎರಡೂ ಸದನಗಳಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ರಣತಂತ್ರ ರೂಪಿಸುವ ಮಹತ್ವದ ಸಂಸದೀಯ ಮತ್ತು ರಾಜಕೀಯ ಹೊಣೆಗಾರಿಕೆ ವಿಪಕ್ಷದ್ದು. ಆದರೆ ಈ ಬಾರಿಯ ಅಧಿವೇಶನದಲ್ಲಿ  ಪ್ರತಿಪಕ್ಷವಾಗಿ ಬಿಜೆಪಿ ನಡೆದುಕೊಂಡ ರೀತಿಯನ್ನು ಗಮನಿಸಿದರೆ ಸಂಸದೀಯ ವ್ಯವಸ್ಥೆಯ ಉನ್ನತ ಮೌಲ್ಯಗಳ ಪಾಲನೆಗೆ ಅಲ್ಲಿ ಜಾಗವೇ ಇರಲಿಲ್ಲ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಬೇಕಾಗಿದ್ದ ಪಕ್ಷಕ್ಕೆ ಆಡಳಿತ ಪಕ್ಷದ ಮೂದಲಿಕೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪರದಾಟ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು.

ಇದೀಗ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಯಾಗಿ ವಿಧಾನಸಭೆಯ ಕಲಾಪವನ್ನೂ ಬಹಿಷ್ಕರಿಸಿ ಬೀದಿಗಿಳಿದಿದೆ. ಆದರೆ ಇಲ್ಲೂ ಪಕ್ಷ ಎಡವಿರುವುದು ಸ್ಪಷ್ಟವಾಗಿದೆ. ವಿಧಾನಸಭೆಯಲ್ಲಿ ಸರ್ಕಾರವನ್ನು ಚರ್ಚೆ ಮೂಲಕ ತರಾಟೆಗೆ ತೆಗೆದುಕೊಳ್ಳಲು ಇದ್ದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಿತ್ತು. ಮುಂಗಡ ಪತ್ರ ಮತ್ತು ಸರ್ಕಾರ ಮಂಡಿಸಿದ್ದ ವಿಧೇಯಕಗಳ ಮೇಲೆ ವಿಸ್ತೃತವಾಗಿ ಚರ್ಚೆ ನಡೆಸಲು ಸದನದಲ್ಲಿ ಇದ್ದ ಅವಕಾಶವನ್ನು ಬಳಸಿಕೊಳ್ಳದೇ ಏಕಾಏಕಿ ಸಭಾಧ್ಯಕ್ಷರ ಪೀಠದ ಮುಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ನಡೆದುಕೊಂಡ ರೀತಿ ಸಾರ್ವತ್ರಿಕವಾಗಿ ನಗೆಪಾಟಲಿಗೀಡಾಗಿದೆ.  ಸರ್ಕಾರ ರಚನೆಯಾಗಿ ನೂರು ದಿನಗಳಾಗುತ್ತಾ ಬಂದರೂ ಪ್ರತಿಪಕ್ಷದ ನಾಯಕರು ಯಾರು ಎಂಬುದನ್ನು ನಿರ್ಧರಿಸಲು  ಬಿಜೆಪಿಗೆ ಸಾಧ್ಯವಾಗದಿರುವ ಬಗ್ಗೆ ಆ ಪಕ್ಷದ ಅನೇಕ ಮುಖಂಡರೇ ಬೇಸರ ವ್ಯಕ್ತಪಡಿಸುತ್ತಾರೆ.

ಶಾಸಕಾಂಗ ಪಕ್ಷದ ಸ್ಥಿತಿ ಹೀಗಾದರೆ ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷರು ಯಾರಾಗಬೇಕೆಂಬ ಬಗ್ಗೆ ಬಿಜೆಪಿ ವರಿಷ್ಠ ಮಂಡಳಿ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆಯಾದರೂ ಯಾವುದೂ ನಿರ್ಧಾರವಾಗಿಲ್ಲ. ರಾಜ್ಯ ಘಟಕದಲ್ಲಿ ಅರಾಜಕತೆ ಮುಂದುವರಿದಿರುವ ಸಂದರ್ಭದಲ್ಲೇ  ಯಡಿಯೂರಪ್ಪ ಅವರ ಪುತ್ರ ಶಾಸಕ ಬಿ.ವೈ.ವಿಜಯೇಂದ್ರ ಗುರುವಾರ ದಿಢೀರನೆ ದಿಲ್ಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವರೂ ಆದ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ವಿದ್ಯಮಾನಗಳನ್ನು ಚರ್ಚಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವುದರಿಂದ ಪಕ್ಷದ ಹೈಕಮಾಂಡ್ ನ ನಾಯಕರ ಜತೆ ಇದೊಂದು ಸಾಮಾನ್ಯ ಸೌಜನ್ಯದ ಭೇಟಿ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿಯ ಆಂತರಿಕ ವಿದ್ಯಮಾನಗಳ ಒಳಹೊಕ್ಕು ನೋಡಿದರೆ ಅಲ್ಲಿ ಬೇರೆಯದೇ ಸಂಗತಿಗಳು ಗೋಚರಿಸುತ್ತವೆ. ರಾಜ್ಯ ಬಿಜೆಪಿ ಗೆ ನೂತನ ಅಧ್ಯಕ್ಷರ ನೇಮಕ ಹಾಗೂ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರ ನೇಮಕದ ವಿಚಾರಗಳಲ್ಲಿ ಇನ್ನಷ್ಟು ಕಾಲ  ತೀರ್ಮಾನ ಕೈಗೊಳ್ಳುವುದನ್ನು ವಿಳಂಬ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಂಘಟನೆ ಮೇಲೆ ಅದು ತೀವ್ರ ಪರಿಣಾಮ ಬೀರುವುದು ಖಚಿತ ಎಂಬ ಸಂದೇಶವನ್ನು ಪುತ್ರನ ಮೂಲಕ ಯಡಿಯೂರಪ್ಪ ಹೈಕಮಾಂಡ್ ಗೆ ನೇರವಾಗೇ ಮುಟ್ಟಿಸಿದ್ದಾರೆ.

ಇದು ಒಂದು ಕಡೆಯಾದರೆ. ಬಿಜೆಪಿ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಾಯಕತ್ವ ನಂಬಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ನಂತರ ಸರ್ಕಾರದಲ್ಲೂ ಮಂತ್ರಿಗಳಾಗಿದ್ದ ಅನೇಕರು ಬದಲಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಅತಂತ್ರರಾಗಿದ್ದಾರೆ. ಬಿಜೆಪಿಯಲ್ಲಿ ಇರಲು ಮನಸ್ಸು ಒಪ್ಪುತ್ತಿಲ್ಲ, ಜೆಡಿಎಸ್ ಇರುವ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದು ಆಸರೆಗಾಗಿ ಬಿಜೆಪಿಯತ್ತ ಕೈಚಾಚಿದೆ. ಹಳೇ ಮೈಸೂರು ಭಾಗದಲ್ಲೇ ಅದರ ಶಕ್ತಿ ಕುಸಿಯುತ್ತಿದೆ. ಮತ್ತೆ ಪುಟಿದೆದ್ದು ಸಂಘಟನಾತ್ಮಕವಾಗಿ ಬಲಿಷ್ಠಗೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇನ್ನು ಅಧಿಕಾರಕ್ಕೆ ಬರುವುದು ಸದ್ಯಕ್ಕಂತೂ ದೂರವೇ ಉಳಿದಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರಲು ಅವರೆಲ್ಲರೂ ಆಸಕ್ತರಾಗಿದ್ದಾರಾದರೂ ಅಲ್ಲೂ ಪರಿಸ್ಥಿತಿ ಪೂರಕವಾಗಿಲ್ಲ. ನಿಚ್ಚಳ ಬಹುಮತದೊಂದಿಗೆ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ನಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಬಹು ದೊಡ್ಡ ಸಂಖ್ಯೆಯ ಶಾಸಕರೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಎಲ್ಲರಿಗೂ ಅಧಿಕಾರ ಸಿಗುವುದು ಕಷ್ಟ. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನಲ್ಲೂ ಪರಿಸ್ಥಿತಿಗಳು ಸರಿ ಇಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಶೀತಲ ಸಮರ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅಧಿಕಾರವೂ ಶಿವಕುಮಾರ್ ಬಳಿಯೇ ಇದೆ. ಹೀಗಾಗಿ ಯಾರನ್ನು ನಂಬಿ ಕಾಂಗ್ರೆಸ್ ಸೇರುವುದು ಎಂಬ ಪ್ರಶ್ನೆಗೆ ವಲಸಿಗರಿಗೆ ಉತ್ತರ ಸಿಗುತ್ತಿಲ್ಲ. ಹಾಗೆಂದು ಬಿಜೆಪಿಯಲ್ಲೇ ಇದ್ದರೆ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಮುಕ್ತ ಹಸ್ತದಿಂದ ಅನುದಾನ ನೀಡುವುದಿಲ್ಲ. ಹೀಗಾಗಿ ಭವಿಷ್ಯದ ರಾಜಕೀಯ ಭದ್ರತೆ  ದೃಷ್ಟಿಯಿಂದ ಕಾಂಗ್ರೆಸ್ ಸೇರುವುದೇ ಉಳಿದಿರುವ ಮಾರ್ಗ ಎಂಬ ತೀರ್ಮಾನಕ್ಕೆ ಬಂದಿರುವ ಈ ಮುಖಂಡರು ಮಂತ್ರಿಗಿರಿ ತತ್ ಕ್ಷಣಕ್ಕೆ ಸಿಗದಿದ್ದರೂ ಮುಂದಿನ ದಿನಗಳಲ್ಲಿ ಅಧಿಕಾರದ ಬಾಗಲು ತೆರೆಯಬಹುದು ಎಂಬ ದೂರಾಲೋಚನೆಯಿಂದ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಬಹುತೇಕ ಮುಂದಿನ ದಿನಗಳಲ್ಲಿ ಇದಕ್ಕೊಂದು ಅಂತಿಮ ರೂಪ ಸಿಕ್ಕಬಹುದು.  ಹಾಗೇನಾದರೂ ಆದರೆ ಬಿಜೆಪಿಯಿಂದ ಅಂದಾಜು 10 ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ.

ಇನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಚುನಾಣೆಯ ಸೋಲಿನಿಂದ ಸಂಪೂರ್ಣ ಕಂಗೆಟ್ಟಿದೆ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರೂ ಆ ಪಕ್ಷಕ್ಕೆ ಚೈತನ್ಯ ತುಂಬಿ ಬಲಿಷ್ಠ ಪ್ರಾದೇಶಿಕ ಪಕ್ಷವಾಗಿ ನೆಲೆ ನಿಲ್ಲಿಸಲು ಸಾಧ್ಯವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಫಲಿತಾಂಶದ ಕಡೇ ಘಳಿಗೆಯವರೆಗೂ ಪ್ರಚಂಡ ಆತ್ಮ ವಿಶ್ವಾಸದಲ್ಲಿದ್ದ ಕುಮಾರಸ್ವಾಮಿ ಫಲಿತಾಂಶದ ನಂತರ ಸೋಲಿನಿಂದ ಕಂಗೆಟ್ಟು ಬಿಜೆಪಿಯತ್ತ ಸಹಾಯಕ್ಕೆ ಕೈಚಾಚಿದ್ದಾರೆ. ಆದರೆ ಅಲ್ಲೂ ಅವರ ದಾರಿ ಸುಗಮವಾಗೇನೂ ಇಲ್ಲ. ಬಿಜೆಪಿ ಜತೆಗೆ ಯಾವುದೇ ರೀತಿಯ ಹೊಂದಾಣಿಕೆ ಬಗ್ಗೆ ಅವರ ಪಕ್ಷದ ಶಾಸಕರಲ್ಲೇ ವಿರೋಧ ಕೇಳಿ ಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಪಕ್ಷದ ಶಾಸಕರ ವಿರೋಧವನ್ನು ಎದುರಿಸಿ ಬಿಜೆಪಿ ಜತೆ ಕೈಜೋಡಿಸುವ ಧೈರ್ಯ ಅವರಿಗೂ ಇಲ್ಲ.

ಬಿಜೆಪಿಯಲ್ಲೂ ಕುಮಾರಸ್ವಾಮಿ ಜತೆಗಿನ ಹೊಂದಾಣಿಕೆಯ ಪ್ರಸ್ತಾಪಕ್ಕೆ ಒಕ್ಕಲಿಗ ಶಾಸಕರು, ಮುಖಂಡರ ಪ್ರಬಲ ವಿರೋಧ ಇದೆ. ಇನ್ನೊಂದು ಕಡೆ ಒಕ್ಕಲಿಗರೇ ಪ್ರಧಾನವಾಗಿರುವ ಜಿಲ್ಲೆಗಳಲ್ಲಿ ಅವರ ಹಿಡಿತ ತಪ್ಪುತ್ತಿದೆ. ಒಂದು ಕಾಲದಲ್ಲಿ ಅವರ ಜತೆಗಿದ್ದು ಈಗ ಕಾಂಗ್ರೆಸ್ ನಲ್ಲಿರುವ ಪ್ರಮುಖ ನಾಯಕರು ಮುಖ್ಯ ವಾಹಿನಿಯ ನಾಯಕರಾಗಿ ಬೆಳೆಯುತ್ತಿದ್ದಾರೆ. ಇದು ಸಹಜವಾಗೇ ಕುಮಾರಸ್ವಾಮಿಯವರಲ್ಲಿ ಅಭದ್ರತೆ ಹುಟ್ಟಿಸಿದೆ. ಮತ್ತೊಂದು ಕಡೆ ಜೆಡಿಎಸ್ ನಲ್ಲಿ ಈಗಿರುವ 19 ಶಾಸಕರ ಪೈಕಿ ಹೆಚ್ಚಿನವರಿಗೆ ಬಿಜೆಪಿ ಜತೆ ಹೋಗಲು ಇಷ್ಟವಿಲ್ಲ. ಹಾಗೇನಾದರೂ ಕುಮಾರಸ್ವಾಮಿ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡರೆ ಪಕ್ಷ ಇಬ್ಭಾಗ ಆಗುವ ಸನ್ನಿವೇಶವೂ ಎದುರಾಗಬಹುದು. ಈ ಸೂಚನೆ ಅರಿತ ಹಿರಿಯ ನಾಯಕ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ವಯೋ ಸಹಜ ಅನಾರೋಗ್ಯವನ್ನೂ ಲೆಕ್ಕಿಸದೆ ಅಖಾಡಕ್ಕಿಳಿದಿದ್ದಾರೆ. ಭವಿಷ್ಯದ ರಾಜಕೀಯದ ದೃಷ್ಟಿಯಿಂದ ಪಕ್ಷದ ಹಾಗೂ ಕುಟುಂಬದ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಅವರಿಗೆ ಬೇಕಾಗಿದೆ. ಆದರೂ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡರೆ ರಾಜಕೀಯ ಲಾಭ ಆಗಬಹುದು ಎಂಬ ದೂರದ ಲೆಕ್ಕಾಚಾರ ದೇವೇಗೌಡರಲ್ಲೂ ಇದೆ. 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com