ಇದು ಮುಂದಿನ ಮಹಾ ಸಮರಕ್ಕೆ ಮುನ್ನುಡಿಯಾ?
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಅವರ ತಂಡದ ವಿರುದ್ಧ ಸಿಡಿದೆದ್ದಿರುವ ಪಕ್ಷದ ಹಿರಿಯ ಮುಖಂಡ, ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರಿಗೆ ಪಕ್ಷದ ಶಿಸ್ತು ಸಮಿತಿ ನೋಟೀಸ್ ನೀಡಿದೆ. ಇದಕ್ಕೆ ಅವರು ಉತ್ತರಿಸಿಲ್ಲ. ಉತ್ತರಿಸುವ ಸಾಧ್ಯತೆಗಳೂ ಸದ್ಯಕ್ಕೆ ಕಂಡು ಬರುತ್ತಿಲ್ಲ. ಅತಿ ಕ್ಷಿಪ್ರ ಗತಿಯಲ್ಲಿ ಅವರಿಗೆ ಕಾರಣ ಕೇಳಿ ಶಿಸ್ತು ಸಮಿತಿ ನೋಟೀಸ್ ನೀಡಿರುವುದರ ಹಿಂದಿನ ಲೆಕ್ಕಾಚಾರಗಳು ಮಾತ್ರ ಪಕ್ಷದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಈ ಬಂಡಾಯ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಮೇಲ್ನೋಟಕ್ಕೆ ಇದು ರೇಣುಕಾಚಾರ್ಯ ಅವರಿಗೆ ಕಾರಣ ಕೇಳಿ ನೀಡಿರುವ ನೋಟೀಸ್ ಇದಾದರೂ ಇದರ ಹಿಂದೆ ಬೇರೆಯದೇ ಉದ್ದೇಶಗಳಿವೆ. ಈ ಸನ್ನಿವೇಶವನ್ನು ಬಳಸಿಕೊಂಡು ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗೊತ್ತಲು ಕಟೀಲ್ ಗುಂಪು ತಯಾರಿ ನಡೆಸಿದೆ ಎಂಬ ಅನುಮಾನಗಳು ಬಿಜೆಪಿಯಲ್ಲಿ ದೃಢವಾಗತೊಡಗಿದೆ. ಲೋಕಸಭೆಗೆ ಚುನಾವಣೆ ಸಮೀಪಿಸುತ್ತಿರುವ ಈಗಿನ ಸಂದರ್ಭದಲ್ಲಿ ಪರಾಕಾಷ್ಟೆಯ ಹಂತ ಮುಟ್ಟಿರುವ ಆಂತರಿಕ ಕಚ್ಚಾಟ ಈಗ ಬೀದಿಗೆ ಬಂದಿದೆ. ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ನಂತರ ಬಿಜೆಪಿಯಲ್ಲಿ ಆರಂಭವಾಗಿರುವ ಈ ಅಂತರ್ಯುದ್ಧ ಈಗ ಪ್ರಚ್ಛನ್ನ ಸಮರವಾಗುವ ಎಲ್ಲ ಲಕ್ಷಣಗಳೂ ಗೋಚರಿಸತೊಡಗಿವೆ.
ಇದೇ ಸಂದರ್ಭದಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದರೆಂಬ ಕಾರಣಕ್ಕೆ ರೇಣುಕಾಚಾರ್ಯ ಅವರಿಗೇನೋ ನೋಟಿಸ್ ನೀಡಲಾಗಿದೆ. ಆದರೆ ಇಂಥದೇ ಆರೋಪ ಎದುರಿಸುತ್ತಿರುವ ಪಕ್ಷದ ಇನ್ನೊಬ್ಬ ಹಿರಿಯ ಮುಖಂಡ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಇಂತಹ ಯಾವುದೇ ನೋಟಿಸ್ ನೀಡಿಲ್ಲದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಲವೇ ದಿನಗಳ ಹಿಂದೆ ವಿಜಾಪುರದಲ್ಲಿ ನಡೆದ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇನ್ನಿತರ ಹಿರಿಯ ಮುಖಂಡರ ಸಮ್ಮುಖದಲ್ಲೇ ಯತ್ನಾಳ್ ಬೆಂಬಲಿಗರು ನಡೆಸಿದ ಗಲಾಟೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತು ಪಡಿಸಿದರೆ ಅದರ ಮುಂದುವರಿದ ಭಾಗ ಎಂಬಂತೆ ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತು ಯತ್ನಾಳ್ ನಡುವಿನ ಯುದ್ಧ ಬಹಿರಂಗವಾಗೇ ಮುಂದುವರಿದಿರುವುದು ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಹೀಗಾಗಿ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನಿಂದ ಪಕ್ಷದ ನಾಯಕತ್ವ ಪಾಠ ಕಲಿತಿಲ್ಲ ಎನ್ನುವ ಕಾರ್ಯಕರ್ತರ ಆಕ್ರೋಶ ಒಂದು ಕಡೆಯಾದರೆ, ಮತ್ತೊಂದು ಕಡೆ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಪಕ್ಷದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿರುವ ಕೆಲವು ಪ್ರಮುಖರು ಉದ್ದೇಶ ಪೂರ್ವಕವಾಗೇ ಯಡಿಯೂರಪ್ಪ ವಿರುದ್ಧ ತಮ್ಮ ಶಿಷ್ಯವೃಂದವನ್ನು ಪ್ರಚೋದಿಸುವ ಮೂಲಕ ಪಕ್ಷದಲ್ಲಿ ಇಕ್ಕಟ್ಟಿನ ಸನ್ನಿವೇಶ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆಕ್ರೋಶದ ಮಾತುಗಳೂ ಬಲವಾಗಿ ಕೇಳಿ ಬರುತ್ತಿವೆ.
ಜುಲೈ 3 ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು ಪ್ರತಿಪಕ್ಷದ ನಾಯಕರು ಯಾರು ಎಂಬುದು ಇನ್ನೂ ತೂಗುಯ್ಯಾಲೆಯಲ್ಲಿದೆ. ರಾಜ್ಯದಲ್ಲಿ ಚುನಾವಣೆ ನಡೆದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರತಿಪಕ್ಷವಾಗಿ ಹೋರಾಟಕ್ಕೆ ಮುಂದಾಗಬೇಕಾಗಿದ್ದ ಬಿಜೆಪಿಗೆ ಸದನದಲ್ಲಿ ತನ್ನ ನಾಯಕ ಯಾರು ಎಂಬುದನ್ನು ನಿರ್ಧರಿಸಲಾಗದ ಸ್ಥಿತಿಗೆ ಮುಟ್ಟಿರುವುದು, ದಿನಕ್ಕೊಂದು ನೆಪಗಳನ್ನು ಹೇಳುವ ಮೂಲಕ ಮುಂದೂಡುತ್ತಿರುವುದು ಆ ಪಕ್ಷಕ್ಕೆ ಒಂದು ಪ್ರಬಲ ರಾಜಕೀಯ ಹಿನ್ನಡೆಯೇ ಸರಿ. ಸಾಮಾನ್ಯವಾಗಿ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕರೇ ಆ ಪಕ್ಷದ ಶಾಸಕ ಪಕ್ಷದ ನಾಯಕರೂ ಆಗುವುದರಿಂದ ರಾಜಕೀಯವಾಗಿ ಅದನ್ನೊಂದು ಪ್ರತಿಷ್ಠಿತ ಸ್ಥಾನ ಎಂದೇ ಗುರುತಿಸಲಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆಯಾದರೂ ಇನ್ನು ಒಂದು ಸರ್ವ ಸಮ್ಮತ ಹೆಸರನ್ನು ನಿರ್ಧಾರ ಮಾಡಲು ಬಿಜೆಪಿ ನಾಯಕತ್ವಕ್ಕೆ ಸಾಧ್ಯವಾಗದೇ ಇರುವುದು ಆ ಪಕ್ಷ ಎದುರಿಸುತ್ತಿರುವ ಬಿಕ್ಕಟ್ಟಿನ ಸನ್ನಿವೇಶಕ್ಕೆ ಸಾಕ್ಷಿ.
ಬಹು ಮುಖ್ಯವಾಗಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯರ್ಶಿ ಬಿ.ಎಲ್. ಸಂತೊಷ್ ಅವರ ಶಿಷ್ಯರೆಂದೇ ಗುರುತಿಸಲಾಗುವ ಮೈಸೂರು ಸಂಸದ ಪ್ರತಾಪ ಸಿಂಹ. ಮಾಜಿ ಸಚಿವರೂ ಆದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ವಿ.ಸೋಮಣ್ಣ, ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮತ್ತಿತರರು ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡು ನೀಡುತ್ತಿರುವ ಹೇಳಿಕೆಗಳ ಹಿಂದೆ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಕೃಪಾಶೀರ್ವಾದವೂ ಇದೆ. ಮತ್ತು ಈ ಎಲ್ಲ ಪ್ರಸಂಗಗಳು ಬಿ.ಎಲ್. ಸಂತೋಷ್ ಅವರ ನಿರ್ದೇಶನಕ್ಕೆ ಅನುಸಾರವಾಗೇ ನಡಯುತ್ತಿವೆ ಎಂಬ ಅಸಮಧಾನ ಯಡಿಯೂರಪ್ಪ ಬೆಂಬಲಿಗ ಶಾಸಕರು ಮುಖಂಡರಲ್ಲಿ ದಿನೇ ದಿನೇ ಬಲವಾಗುತ್ತಿದೆ. ವಿಶೇಷ ಎಂದರೆ ಪಕ್ಷದಲ್ಲಿ ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿದ್ದರೂ ಯಡಿಯೂರಪ್ಪ ಮಾತ್ರ ಅದರ ಬಗ್ಗೆ ತುಟಿ ಬಿಚ್ಚದೇ ಮೌನಕ್ಕೆ ಶರಣಾಗಿರುವುದೇ ಕುತೂಹಲ ಮೂಡಿಸಿದೆ.
ಪಕ್ಷದ ಸೋಲಿಗೆ ಕೆಲವು ಮುಖಂಡರು ನಡೆಸಿದ ಹೊಂದಾಣಿಕೆ ರಾಜಕಾರಣ ಎಂದು ಪರೋಕ್ಷವಾಗಿ ಆರೋಪಿಸುತ್ತಿದ್ದ ಸಂತೋಷ್ ಬೆಂಬಲಿಗರ ಪೈಕಿ ಪ್ರತಾಪ ಸಿಂಹ ಸೇರಿದಂತೆ ಒಂದಿಬ್ಬರು ಬಸವರಾಜ ಬೊಮ್ಮಾಯಿಯವರನ್ನು ಗುರಿಯಾಗಿಸಿಕೊಂಡು ನೇರವಾಗಿ ಟೀಕೆ ಮಾಡುತ್ತಿದ್ದಾರೆ. ಪ್ರಮುಖ ಸಂಗತಿ ಎಂದರೆ ಈ ಪ್ರತಿಕ್ರಿಯೆಗಳು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕಟೀಲು ಅವರಿಗೆ ಮತ್ತು ಕೇಂದ್ರ ಸಮಿತಿಯಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಮುಖಂಡರಿಗೆ ಅಶಿಸ್ತು ಎಂದು ಅನಿಸಿಯೇ ಇಲ್ಲ. ಮತ್ತೊಂದು ಸಂಗತಿ ಎಂದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಅವರ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿದಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮೊದ ಮೊದಲು ನೊಟೀಸ್ ಕೊಡುವ ಧೈರ್ಯ ಪ್ರದರ್ಶಿಸದ ಕಟೀಲು ಚುನಾವಣೆಗೆ ಕೆಲವೇ ತಿಂಗಳು ಇರುವ ಸಮಯದಲ್ಲಿ ನೋಟೀಸ್ ನೀಡುವ ಶಾಸ್ತ್ರ ನೆರವೇರಿಸಿದ್ದು ಬಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಆದರೆ ರೇಣುಕಾಚಾರ್ಯ ವಿಚಾರದಲ್ಲಿ ಮಾತ್ರ ಅತಿ ಕ್ಷಿಪ್ರ ಗತಿಯಲ್ಲಿ ನಿರ್ಧಾರ ಕೈಗೊಂಡು ಅವರು ಹೇಳಿಕೆ ನೀಡಿದ ದಿನವೇ ಸಂಜೆಯೊಳಗೆ ಕಾರಣ ಕೇಳಿ ನೋಟಿಸ್ ನೀಡಿದ್ದರ ಹಿನ್ನೆಲೆ ಏನು? ಎಂಬ ಪ್ರಶ್ನೆ ಪಕ್ಷದಲ್ಲಿನ ವಿದ್ಯಮಾನಗಳನ್ನು ಗಮನಿಸುತ್ತಾ ಬಂದಿರುವ ಮುಖಂಡರ ಪ್ರಶ್ನೆ.
ರೇಣುಕಾಚಾರ್ಯ ಆಡಿರುವ ಮಾತುಗಳು ಭಾವಾವೇಶದ್ದೇ ಆದರೂ ಅದರಲ್ಲಿ ಅನೇಕ ಸತ್ಯ ಸಂಗತಿಗಳಿವೆ ಎನ್ನುವ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಒಂದು ಪಂಚಾಯ್ತಿ ಚುನಾವಣೆ ಹೇಗೆ ನಡೆಯುತ್ತದೆ ಎಂಬುದರ ಪರಿವೆಯೇ ಇಲ್ಲದವರು ಇವತ್ತು ಪಕ್ಷದಲ್ಲಿ ಪ್ರಧಾನ ಸ್ಥಾನದಲ್ಲಿರುವುದೇ ಈ ಗೊಂದಲಗಳಿಗೆ ಕಾರಣ ಎನ್ನುತ್ತಾ ಸಂತೋಷ್, ಕಟೀಲು, ಮತ್ತು ಅರುಣ್ ಕುಮಾರ್ ರತ್ತ ಬೆಟ್ಟು ಮಾಡಿ ತೋರಿಸುತ್ತಾರೆ.
ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ಹೊಸಬರಿಗೆ ಟಿಕೆಟ್ ಕೊಡಿಸುವ ಮೂಲಕ ಪಕ್ಷದ ಸ್ಥಿತಿ ಮೂರಾಬಟ್ಟೆಯಾಗಲು ಕಾರಣ ಕರ್ತರಾದರು ಎಂಬ ಆರೋಪಗಳು ದಿನೇ ದಿನೇ ಬಲವಾಗುತ್ತಿವೆ. ಈ ಹಿನ್ನಲೆಯಲ್ಲೇ ಪಕ್ಷದ ಕೇಂದ್ರೀಯ ಸಮಿತಿಯಲ್ಲಿ ಅವರ ಮಾತುಗಳಿಗೆ ಮೊದಲಿನಂತೆ ಪ್ರಾಶಸ್ತ್ಯ ಸಿಗುತ್ತಿಲ್ಲ. ರಾಜ್ಯ ಸಭೆಗೆ ಮತ್ತು ವಿಧಾನ ಪರಿಷತ್ತಿಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಸಂತೋಷ್ ಯಡಿಯೂರಪ್ಪ, ಬೊಮ್ಮಾಯಿ ಸೇರಿದಂತೆ ಪಕ್ಷದ ಯಾವುದೇ ಹಿರಿಯ ಮುಖಂಡರ ಜತೆ ಸಮಾಲೋಚನೆ ನಡೆಸದೇ ತೆಗೆದುಕೊಂಡ ನಿರ್ಧಾರಗಳಿಂದ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿತು. ಈ ನಾಮಕರಣಗಳಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಮೂರುಕಾಸಿನ ಲಾಭವೂ ಆಗಲಿಲ್ಲ. ಅದೇನಾದರೂ ಆಗಿದ್ದರೆ ನಳಿನ್ ಕುಮಾರ್ ಕಟೀಲು ಮತ್ತು ಅವರ ತಂಡಕ್ಕೆ ಅಷ್ಟೇ ಎಂದು ಹಿರಿಯ ಮುಖಂಡರೊಬ್ಬರು ವ್ಯಂಗ್ಯವಾಡುತ್ತಾರೆ. ಇದೇ ಅಭಿಪ್ರಾಯವನ್ನು ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿತ್ತು ನಿಜ. ಆದರೆ ಅದಕ್ಕೆ ಅವಕಾಶವೇ ಇಲ್ಲ ಎಂಬುದು ಇದೇ ಮುಖಂಡರ ವಾದ.
ಈ ಎಲ್ಲ ಬೆಳವಣಿಗೆಗಳು ಒಂದು ಕಡೆಯಾದರೆ ಮೊನ್ನೆ ಹಿರಿಯ ಮುಖಂಡ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಲಸಿಗರಿಂದ ಪಕ್ಷದ ಸಂಘಟನೆ ಹಾಳಾಯಿತು ಎಂದು ನೀಡಿರುವ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿದೆ. ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಈಶ್ವರಪ್ಪ ತಮ್ಮ ನಡೆಯಿಂದ ಯಡಿಯೂರಪ್ಪ ವಿರೋಧಿ ನಾಯಕರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದರಿಂದ ಅವರಿಗೆ ನಿರೀಕ್ಷಿಸಿದ ಮಟ್ಟದಲ್ಲಿ ಲಾಭ ಆಗುತ್ತಿಲ್ಲ. ಬಿಜೆಪಿಯಲ್ಲಿನ ಕೆಲವು ಮುಖಂಡರು ತಮ್ಮ ಅಗತ್ಯಗಳಿಗೆ ತಕ್ಕಂತೆ ಅವರನ್ನು ಬಳಸಿಕೊಂಡು ನಂತರ ಮೂಲೆಗೊತ್ತುವ ಕೆಲಸ ಮಾಡುತ್ತಿದ್ದಾರೆ ಇದು ಈಶ್ವರಪ್ಪನವರಿಗೆ ಅರ್ಥವಾಗುತ್ತಿಲ್ಲ ಎಂಬುದು ಅವರ ಸಮೀಪ ವರ್ತಿಗಳ ಅಭಿಪ್ರಾಯ.
ಒಂದಂತೂ ಸ್ಪಷ್ಟ .ಪ್ರತಿಪಕ್ಷದ ನಾಯಕನ ಆಯ್ಕೆ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ವಿಚಾರದಲ್ಲೂ ಇದೇ ರೀತಿಯ ಗೊಂದಲಗಳು ಮುಂದುವರಿದು ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗದಿದ್ದರೆ ಯಡಿಯೂರಪ್ಪ ಮೌನಕ್ಕೆ ಶರಣಾಗುವ ಸಾಧ್ಯತೆಗಳು ಹೆಚ್ಚು. ಹಾಗೊಂದು ವೇಳೆ ಅದೇ ಅಂತಿಮವಾದರೆ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ವಿಧಾನಸಭೆ ಚುನಾವಣೆಯ ಪುನರಾವರ್ತನೆ ಆಗುತ್ತದೆ. ಬಿಜೆಪಿ ಸಮೀಕ್ಷೆಯ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಾಲಿ ಗೆದ್ದಿರುವ 26 ಸ್ಥಾನಗಳ ಪೈಕಿ ಕನಿಷ್ಟ 10 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇದೆಲ್ಲ ಏನೇ ಇರಲಿ, ಯಡಿಯೂರಪ್ಪನವರ ನಿಗೂಢ ಮೌನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದರ್ಥದಲ್ಲಿ ಅದು ಅಪಾಯಕಾರಿಯೂ ಹೌದು.!
ಯಗಟಿ ಮೋಹನ್
yagatimohan@gmail.com
Advertisement