ಗ್ಯಾರಂಟಿಗಳ ಗೊಂದಲ. ಖಜಾನೆ ತುಂಬಿಸಲು ಹೊಸ ತೆರಿಗೆಗಳತ್ತ ಸಿಎಂ ಚಿತ್ತ (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ವಿವಿಧ ಗ್ಯಾರಂಟಿಗಳ ಅನುಷ್ಠಾನ ಖಾತ್ರಿಯಾಯಿತು. ಆದರೆ ಯೋಜನೆಗಳ ಜಾರಿಯಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಆರ್ಥಿಕ ಹೊರೆಯನ್ನು ತಪ್ಪಿಸುವುದು ಹೇಗೆ?
ಕಾಂಗ್ರೆಸ್ ನ 5 ಗ್ಯಾರೆಂಟಿಗಳು-ಸಿದ್ದರಾಮಯ್ಯ
ಕಾಂಗ್ರೆಸ್ ನ 5 ಗ್ಯಾರೆಂಟಿಗಳು-ಸಿದ್ದರಾಮಯ್ಯ

ವಿವಿಧ ಗ್ಯಾರಂಟಿಗಳ ಅನುಷ್ಠಾನ ಖಾತ್ರಿಯಾಯಿತು. ಆದರೆ ಯೋಜನೆಗಳ ಜಾರಿಯಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಆರ್ಥಿಕ ಹೊರೆಯನ್ನು ತಪ್ಪಿಸುವುದು ಹೇಗೆ? ಅಧಿಕಾರಕ್ಕೆ ಬಂದ ಉತ್ಸಾಹದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ.

ಸರ್ಕಾರದ ಪ್ರಾಥಮಿಕ ಅಂದಾಜುಗಳ ಪ್ರಕಾರ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನು ಯಥಾವತ್ತಾಗಿ ಮತ್ತು ಪೂರ್ಣವಾಗಿ ಜಾರಿಗೆ ತರಲು ಏನಿಲ್ಲವೆಂದರೂ ಅಂದಾಜು 59 ಸಾವಿರ ಕೋಟಿ ರೂ. ಬೇಕು. ಆದರೆ ಅದರಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಹೊರೆಯನ್ನು ತಪ್ಪಿಸಲು ಹೊಸ ತೆರಿಗೆ ಮತ್ತು ಮತ್ತೆ ಹೊಸ ಸಾಲಗಳ ಮೊರೆ ಹೋಗುವುದು ಬಿಟ್ಟರೆ ಬೇರೆ ಮಾರ್ಗ ಸದ್ಯಕ್ಕೆ ಕಾಣುತ್ತಿಲ್ಲ. ಲೋಕಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಹಿನ್ನೆಲೆಯಲ್ಲಿ ಹೊಸ ತೆರಿಗೆಗಳ ಜಾರಿ ಅಥವಾ ಈಗಿರುವ ತೆರಿಗೆಗಳ ಸ್ವರೂಪ ಬದಲಿಸಿ ಹೆಚ್ಚುವರಿ ತೆರಿಗೆಗಳನ್ನು ವಿಧಿಸಿದರೆ ಅದು ಬರಲಿರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ತೊಡಕಾಗಬಹುದು. ಹಾಗೆಂದು ಹೊಸ ಸಾಲ ಪಡೆಯುವ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಇಲ್ಲ. ಅದಕ್ಕೆ ಅದರದ್ದೇ ಆದ ನಿಯಮಗಳ ತೊಡಕು ಇದೆ. ಹೀಗಾಗಿ ಕೊಟ್ಟ ಮಾತು ಉಳಿಸಿಕೊಳ್ಳಲೂ ಆಗದ ಬಿಡಲೂ ಆಗದ ಸ್ಥಿತಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುಭವಿಸುತ್ತಿದೆ. ಈ ಎಲ್ಲ ಸಂಕಷ್ಟದ ಸ್ಥಿತಿಗಳ ನಡುವೆಯೂ ಹಂತ ಹಂತವಾಗಿ ಐದು ಗ್ಯಾರಂಟಿಗಳನ್ನು ಜಾರಿ ಮಾಲು ಮುಖ್ಯಮಂತ್ರಿ ಪಣ ತೊಟ್ಟಿದ್ದಾರೆ.

ಹೊಸದಾಗಿ ಅಸ್ತಿತ್ವಕ್ಕೆ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವ ಸಂಪ್ರದಾಯ ಇದೆ. ಸರ್ಕಾರ ತಯಾರಿಸಿದ ಈ ಭಾಷಣವನ್ನು ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಓದುತ್ತಾರೆ. ನಂತರದ ದಿನಗಳಲ್ಲಿ ಅದರ ಮೇಲೆ ಚರ್ಚೆಗಳು ನಡೆದು ಉಭಯ ಸದನಗಳಲ್ಲಿ ಅಂಗೀಕಾರ ಆದ ನಂತರ ಅದಕ್ಕೊಂದು ಅಧಿಕೃತ ಸ್ವರೂಪ ಸಿಗುತ್ತದೆ. ರಾಜ್ಯಪಾಲರ ಭಾಷಣ ಸರ್ಕಾರದ ನೀತಿ ನಿರೂಪಣೆಗಳ ಮತ್ತು ಹೊಸ ಯೋಜನೆಗಳು, ಜನಕಲ್ಯಾಣ ಕಾರ್ಯಕ್ರಮಗಳ ಘೋಷಣೆಯ ಕೈಪಿಡಿಯಷ್ಟೇ ಅಲ್ಲ, ಅದು ರಾಜ್ಯ ಸರ್ಕಾರ ಜನರಿಗೆ ಆ ಮೂಲಕ ನೀಡುವ ಭರವಸೆಯೂ ಆಗಿದೆ. ಹೀಗಾಗಿ ಅದಕ್ಕೆ ಸಂವಿಧಾನ ಬದ್ಧ ಮಹತ್ವ ಇದೆ.  ಇತ್ತೀಚಿನ ದಶಕಗಳಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಿಖರ ಮತ್ತು ಆರೋಗ್ಯಕರ ಚರ್ಚೆ ನಡೆದದ್ದು ಮತ್ತು ಸರ್ಕಾರ ಪ್ರತಿಪಕ್ಷಗಳ ಸಲಹೆಗಳನ್ನು ಒಪ್ಪಿಕೊಂಡ ಉದಾಹರಣೆಗಳು ತೀರಾ ಕಡಿಮೆ.  

ಸದನದಲ್ಲಿ ಬಹುಮತ ಹೊಂದಿರುವ ಆಡಳಿತ ಪಕ್ಷ ತನಗಿರುವ ಸಂಖ್ಯಾಬಲವನ್ನು ಬಳಸಿಕೊಂಡು ಈ ಭಾಷಣಕ್ಕೆ ಸದನದ ಔಪಚಾರಿಕೆ ಸಮ್ಮತಿ ಪಡೆದದ್ದೇ ಜಾಸ್ತಿ. ಹೀಗಿರುವಾಗ ಇದೊಂದು ಕೇವಲ ಸಂಸದೀಯ ನಿಯಮಾವಳಿಗಳನ್ನು ಪಾಲನೆ ಮಾಡುವ ಪ್ರಕ್ರಿಯೆಯಾಗಿ ಮುಂದುವರಿದಿರುವುದು ಬಿಟ್ಟರೆ ಮಹತ್ವ ಪೂರ್ಣ ವಿಷಯವಾಗಿ ಉಳಿದಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಪ್ರಸ್ತಾಪಿಸುವ ಯೋಜನೆಗಳನ್ನೇ ನಂತರದ ದಿನಗಳಲ್ಲಿ ಮಂಡಲಿಸಲಿರುವ ಮುಂಗಡ ಪತ್ರದಲ್ಲಿ ಸೇರಿಸುವ ಸರ್ಕಾರ ಈ ಯೋಜನೆಗಳಿಗೆ ಆರ್ಥಿಕ ನೆರವನ್ನು ಘೋಷಿಸುತ್ತದೆ. 

ರಾಜ್ಯದ ಆರ್ಥಿಕ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ನೀಡುವ ಮುಂಗಡ ಪತ್ರದಲ್ಲಿ ಸರ್ಕಾರ ಸಂಪನ್ಮೂಲಗಳ ಕ್ರೂಡೀಕರಣದ ಬಗ್ಗೆಯೂ ಪ್ರಸ್ತಾಪಿಸಿವುದು ಕಡ್ಡಾಯವಾಗಿದೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲು ಹೊರಟಿರುವ ಗ್ಯಾರಂಟಿಗಳ ಜಾರಿಯಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಆರ್ಥಿಕ ಹೊರೆಯನ್ನು ಯಾವ ಮೂಲದಿಂದ ತುಂಬುತ್ತಾರೆ ಎಂಬುದೇ ಸದ್ಯದ ಪ್ರಶ್ನೆ. 

ಈ ವಿಚಾರದಲ್ಲಿ ಹಣಕಾಸು ಖಾತೆಯನ್ನೂ ಹೊಂದಿದ್ದು ಹಲವು ಮುಂಗಡ ಪತ್ರಗಳನ್ನು ಮಂಡಿಸಿರುವ ದಾಖಲೆ ವೀರ ಎನಿಸಿಕೊಂಡಿರುವ ಸಿದ್ದರಾಮಯ್ಯನವರಿಗೂ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೂ ಬರುವ ಮುನ್ನ ಐದು ಗ್ಯಾರಂಟಿಗಳನ್ನು ಚುನಾವಣೆ ಸಂದರ್ಭದಲ್ಲಿ ಘೋಷಿಸಿದಾಗ ಯಾವುದೇ ಷರತ್ತುಗಳನ್ನು ವಿಧಿಸುವುದಾಗಿಯಾಗಲೀ ಅಥವಾ ನಿರ್ಧಿಷ್ಟ ವರ್ಗದ ಜನರಿಗೆ ಈ ಸೌಲಭ್ಯಗಳನ್ನು ಒದಗಿಸುತ್ತೇನೆಂದಾಗಲೀ ಹೇಳಿರಲಿಲ್ಲ. ಬದಲಾಗಿ ಎಲ್ಲರಿಗೂ ಈ ಉಚಿತ ಭಾಗ್ಯಗಳ ಭರವಸೆ ನೀಡಲಾಗಿತ್ತು. ಆದರೆ ಅಧಿಕಾರಕ್ಕೆ ಬಮದ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿಯ ನಿಜವಾದ ಚಿತ್ರಣ ಕಂಡುಕೊಂಡಿರುವ ಸರ್ಕಾರ ದಿನಕ್ಕೊಂದು ಷರತ್ತುಗಳನ್ನು ವಿಧಿಸುತ್ತಿದ್ದು ಸದ್ಯಕ್ಕೆ ಇದರಿಂದ ಉಂಟಾಗಿರುವ ಗೊಂದಲಗಳು ತಿಳಿಯಾಗುವ ಲಕ್ಷಣಗಳಿಲ್ಲ. ಹಾಗೆಯೇ ಈ ಷರತ್ತುಗಳನ್ನು ಪೂರೈಸದೆಯೇ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುವುದಿಲ್ಲ.  ಈ ಎಲ್ಲ ಪರಿಸ್ಥಿತಿಗಳನ್ನು ಗಮನಿಸಿದರೆ ಐದು ಗ್ಯಾರಂಟಿಗಳ ಸಂಪೂರ್ಣ ಅನುಷ್ಠಾನ ಸದ್ಯಕ್ಕೆ  ಜನ ಸಾಮಾನ್ಯರ ಪಾಲಿಗೆ ಮರೀಚಿಕೆಯಾಗೇ ಉಳಿಯಲಿದೆ. 

ಮುಂಬರುವ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೊಸ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಹಲವು ಹೊಸ ತೆರಿಗೆಗಳ ಪ್ರಸ್ತಾಪ ಅದರಲ್ಲಿ ಸೇರುವ ಸಾಧ್ಯತೆಗಳಿವೆ. ಈಗಾಗಲೇ ಬೆಂಗಳೂರು ಅಭಿವೃದ್ಧಿಯ ಖಾತೆ ಹೊತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದು ನೀರಿನ ದರ ಏರಿಕೆಯ ಮುನ್ಸೂಚನೆ ನೀಡಿದ್ದಾರೆ.  ಬೆಂಗಳೂರಿನಂತಹ ಮಹಾ ನಗರದಲ್ಲಿ ಅಕ್ರಮ ನಲ್ಲಿ ಸಂಪರ್ಕಗಳನ್ನು ಸಂಪೂರ್ಣವಾಗಿ ತಡೆಯಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಬೆಳೆಯುತ್ತಿರುವ ಬೆಂಗಳೂರಲ್ಲಿ ಹೊಸ ಸಮಸ್ಯೆಗಳೂ ಸೃಷ್ಟಿಯಾಗುತ್ತಿವೆ. ಇದರಲ್ಲಿ ಬೆಂಗಳೂರು ಜಲ ಮಂಡಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ತೆರಿಗೆ ಸೋರಿಕೆಯೂ ಒಂದು. ಅಕ್ರಮ ನಲ್ಲಿ ಸಂಪರ್ಕಗಳ ಹಿಂದೆ ಪ್ರಭಾವೀ ವ್ಯಕ್ತಿಗಳೇ ಇರುವುದರಿಂದ ಅದರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಇದು ತೆರಿಗೆ ಸೋರಿಕೆಗೆ ದಾರಿಯಾಗಿದೆ.ಈಗ ಉಪ 

ಮುಖ್ಯಮಂತ್ರಿಗಳು ನೀರಿನ ತೆರಿಗೆ ಏರಿಕೆಯ ಪ್ರಸ್ತಾಪ ಮಾಡಿದ್ದಾರೆ.ಅವರೇ ಹೇಳಿರುವ ಪ್ರಕಾರ  ಸುದೀರ್ಘ ಕಾಲದಿಂದ ನೀರಿನ ತೆರಿಗೆ ಪರಿಷ್ಕರಣೆ ಆಗಿಲ್ಲದೇ ಇರುವುದರಿಂದ ಜಲಮಂಡಳಿಗೆ ಸಂಪನ್ಮೂಲ ಕೊರತೆ ಉಂಟಾಗಿದೆ. ಹೀಗಾಗಿ ತೆರಿಗೆ ಹೆಚ್ಚಳ ಅನಿವಾರ್ಯ ಎಂದೂ ಹೇಳಿದ್ದಾರೆ. 

ಅಲ್ಲಿಗೆ ಸರ್ಕಾರ ನೀರಿನ ತೆರಿಗೆ ಹೆಚ್ಚಳ ಮಾಡಲು ಮುಂದಾಗಲಿದೆ. ಇನ್ನುಳಿದಂತೆ ಆದಾಯದ ಮೂಲವಾದ ಅಬಕಾರಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕ, ಮತ್ತು ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡಲು ಸರ್ಕಾರ ಮುಂದಾಗಲಿದೆ. ಬಹು ಮುಖ್ಯವಾಗಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ರಿಯಲ್ ಎಸ್ಟೇಟ್ ವ್ಯವಹಾರ ಈಗ ರಾಜ್ಯದ ಇತರ ಜಿಲ್ಲೆಗಳಿಗೂ ವ್ಯಾಪಿಸಿದ್ದು ಭೂಮಿಯ ಬೆಲೆ ದುಬಾರಿಯಾಗಿದೆ. ಹೊಸ ಲೇಔಟ್ ಗಳ ರಚನೆ ಮೂಲಕ ವಸತಿ ಚಟುವಟಿಕೆಗಳನ್ನು ವಿಸ್ತರಿಸಿರುವ ರಿಯಲ್ ಎಸ್ಟೇಟ್ ಉದ್ಯಮ ಇಂದು ರಾಜಕೀಯವಾಗಿಯೂ ಬಲಿಷ್ಠವಾಗಿದ್ದು ಸರ್ಕಾರ ರಚನೆಯಲ್ಲಿ , ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ.  ಸಹಜವಾಗೇ ಇದು ಸರ್ಕಾರದ ಖಜಾನೆಗೆ ಆದಾಯದ ಮೂಲವಾಗಿದೆ. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಹೊಸ ತೆರಿಗೆಗಳನ್ನು ಸರ್ಕಾರ ಹೇರುವ ಸಾಧ್ಯತೆಗಳು ಇವೆ. 

ಇನ್ನುಳಿದಂತೆ ರಾಜ್ಯದ ಖಜಾನೆಗೆ ಕೋಟ್ಯಂತರ ರೂ ತೆರಿಗೆ ವಂಚನೆಯಾಗಿರುವ ಗಣಿ ಅಕ್ರಮದ ಕುರಿತು ಈವರೆಗೆ ಬಂದ ಎಲ್ಲ ಸರ್ಕಾರಗಳೂ ಮೌನವಾಗಿವೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಲೋಕಾಯುಕ್ತರಾಗಿದ್ದಾಗ ನೀಡಿದ್ದ ಗಣಿ ಅಕ್ರಮದ ಕುರಿತಾದ ವರದಿಯಲ್ಲಿ ಸರ್ಕಾರಕ್ಕೆ ಸೇರ ಬೇಕಾದ ಭಾರೀ ಮೊತ್ತದ ತೆರಿಗೆ ರೂಪದ ಹಣ ವಂಚನೆಯಾಗಿರುವುದನ್ನು ಪತ್ತೆ ಹಚ್ಚಿದ್ದು ಅದರ ವಸೂಲಾತಿಗೆ ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದ್ದಾರೆ. ಈ ಹಿಂದೆ ಇದ್ದ  ಬಿಜೆಪಿ ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿಂದೆ ಗಣಿ ಅಕ್ರಮದ ಕುರಿತು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದ ಯಾತ್ರೆ ನಡೆಸಿದ್ದ ಸಿದ್ದರಾಮಯ್ಯನವರೇ ಈಗ ಅಧಿಕಾರಕ್ಕೆ ಬಂದಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನ್ಯಾಯಯುತವಾಗಿ ಸೇರಬೇಕಾಗಿದ್ದು ಆದರೆ ತಪ್ಪಿ ಹೋಗಿರುವ ಕೋಟ್ಯಂತರ ರೂ. ತೆರಿಗೆ ವಂಚನೆಯ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೇ ಮರಳಿ ಅದನ್ನು ಸರ್ಕಾರದ ಬೊಕ್ಕಸಕ್ಕೆ ತರುವ ಧೈರ್ಯ ಪ್ರದರ್ಶಿಸುತ್ತಾರೆಯೆ ಕಾದು ನೋಡಬೇಕಿದೆ. 

ಇನ್ನುಳಿದಂತೆ ಐಟಿ ಬಿಟಿ ವಲಯಗಳಿಂದ ವಸೂಲಾಗುವ ತೆರಿಗೆಗಳತ್ತಲೂ ಮುಖ್ಯಮಂತ್ರಿ ಗಮನ ಹರಿಸುವ ಸಾಧ್ಯತೆಗಳಿವೆ. ಈ ಎಲ್ಲ ಸಂಭವನೀಯ ಹೊಸ ತೆರಿಗೆಗಳ ನಂತರವೂ ಕೊರತೆಯಾಗುವ ಸಂಪನ್ಮೂಲ ತುಂಬುವುದೇ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಕೇಂದ್ರಿಂದ ಸಿಗಬೇಕಾದ ತೆರಿಗೆಯ ಪಾಲಷ್ಟೇ ಅಲ್ಲದೇ ವಿವಿಧ ಅನುದಾನಗಳು ಮುಕ್ತವಾಗಿ ಬಿಡುಗಡೆ ಆಗುವ ಸಾದ್ಯತೆಗಳು ತಿರಾ ಕಡಿಮೆ. ಇಂತಹ ಸನ್ನಿವೇಶದಲ್ಲಿ ಕೇಂದ್ರದ ಜತೆ ಸಂಘರ್ಷವೂ ಅನಿವಾರ್ಯ ಆಗಬಹುದು. 

ರಾಜಕೀಯ ದೃಷ್ಟಿಕೋನದಿಂದ ನೋಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂದುಕೊಂಡಿದ್ದನ್ನು ಸಾಧಿಸಲು ಪಕ್ಷದೊಳಗೇ ಅನೇಕ ಅಡೆತಡೆಗಳಿವೆ. ಗ್ಯಾರಂಟಿಗಳ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟದ ಒಬ್ಬೊಬ್ಬ ಸಚಿವರೂ ಒಂದೊಂದು ಪ್ರತಿ ದಿನ ಬಗೆಯ ಹೇಳಿಕೆಗಳನ್ನು ನೀಡುತ್ತಾ ಈಗಿರುವ ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ. ಸಚಿವರಗಳದ್ದು ಈ ಪರಿಸ್ಥಿತಿಯಾದರೆ ಅಧಿಕಾರಿಗಳದ್ದು ಇನ್ನಷ್ಟು ದಯನೀಯ ಪರಿಸ್ಥಿತಿ. ಆಡಳಿತದ ಚುಕ್ಕಾಣಿ ಹಿಡಿದವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡುವ ವಿಚಾರದಲ್ಲಿ ಅವರು ಸೋತು ಅಸಹಾಯಕರಾಗಿದ್ದಾರೆ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com