social_icon

ಗೆಲುವಿನಲ್ಲೂ ಮಂಕಾದ ಸಿದ್ದರಾಮಯ್ಯ; ಸೋಲಿನಲ್ಲೂ ಡಿಕೆಶಿ ದಿಗ್ವಿಜಯದ ನಗೆ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್

ಅಧಿಕಾರ ಹಸ್ತಾಂತರದ ಒಪ್ಪಂದ ಜಾರಿ ಆಗುತ್ತಾ?  ಶನಿವಾರ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃದಲ್ಲಿ ಕಾಂಗ್ರೆಸ್ ನ ಸರ್ಕಾರ ಪಟ್ಟಕ್ಕೆ ಬರಲಿದೆ. ಇದೇ ಸಂದರ್ಭದಲ್ಲಿ ಈ ಪ್ರಶ್ನೆ ಸಾರ್ವತ್ರಿಕವಾಗಿ ತಲೆ ಎತ್ತಿದ್ದು  ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Published: 19th May 2023 01:14 PM  |   Last Updated: 20th May 2023 01:26 PM   |  A+A-


DK Shivakumar-Siddaramaiah

ಡಿಕೆ ಶಿವಕುಮಾರ್-ಸಿದ್ದರಾಮಯ್ಯ (ಸಂಗ್ರಹ ಚಿತ್ರ)

Posted By : Srinivas Rao BV
Source :

ಅಧಿಕಾರ ಹಸ್ತಾಂತರದ ಒಪ್ಪಂದ ಜಾರಿ ಆಗುತ್ತಾ?  ಶನಿವಾರ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃದಲ್ಲಿ ಕಾಂಗ್ರೆಸ್ ನ ಸರ್ಕಾರ ಪಟ್ಟಕ್ಕೆ ಬರಲಿದೆ. ಇದೇ ಸಂದರ್ಭದಲ್ಲಿ ಈ ಪ್ರಶ್ನೆ ಸಾರ್ವತ್ರಿಕವಾಗಿ ತಲೆ ಎತ್ತಿದ್ದು  ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಎರಡೂವರೆ ವರ್ಷದ ನಂತರ ಒಪ್ಪಂದದಂತೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡುತ್ತಾರಾ? ಅಂತಹ ಒಪ್ಪಂದ ಹೈಕಮಾಂಡ್ ಮಟ್ಟದಲ್ಲಿ ಆಗಿರುವುದುನಿಜವಾ? ಒಂದು ವೇಳೆ ಒಪ್ಪಂದ ಪಾಲನೆ ಆಗದಿದ್ದರೆ ಮುಂದಿನ ದಾರಿ ಏನು?

ಮುಖ್ಯ ಮಂತ್ರಿಯಾಗಿ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶನಿವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಏರುತ್ತಿರುವ  ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ನಡುವೆಯೇ ಪಕ್ಷದ ಕಾರ್ಯಕರ್ತರೂ ಸೇರಿದಂತೆ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಎಂದರೆ ಇನ್ನು ಎರಡೂವರೆ ವರ್ಷಗಳ ನಂತರ ಅಧಿಕಾರ  ಸುಲಭವಾಗಿ ಹಸ್ತಾಂತರ ಆಗುತ್ತಾ? ಎಂಬದು. ಸದ್ಯಕ್ಕೆ ಇದಕ್ಕೆ ಉತ್ತರಗಳು ಸಿಗುತ್ತಿಲ್ಲ.

ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ನಾಲ್ಕುದಿನಗಳ ಕಾಲ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಡೆದ ಪ್ರಹಸನಗಳನ್ನು  ಸೂಕ್ಷ್ಮವಾಗಿ ಗಮನಿಸಿದರೆ ಬಹುಮತ ಪಡೆದು ಅಧಿಕಾರಕ್ಕೆ ಏರಿದರೂ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಆಂತರಿಕವಾಗಿ  ಹೆಜ್ಜೆ ಹೆಜ್ಜೆಗೂ ಅನೇಕ ಸವಾಲು, ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಲಿದೆ. ಮುಖ್ಯಮಂತ್ರಿಯಾಗಿ ಅವರ ಆಡಳಿತದ ಮುಂದಿನ ಹಾದಿ ಸುಗಮವೇನೂ ಅಲ್ಲ. ಹೀಗಾಗೇ ಇಂತಹ ಹಲವಾರು ಸಂಶಗಳ ನಡುವೆಯೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. 

ಇದನ್ನೂ ಓದಿ: ಕವಲು ದಾರಿಯಲ್ಲಿ ರಾಜ್ಯ ರಾಜಕಾರಣ (ಸುದ್ದಿ ವಿಶ್ಲೇಷಣೆ)

ದಿಲ್ಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ನಡೆದ ನಿರಂತರ ಸಮಾಲೋಚನೆಗಳ ಸಂದರ್ಭದಲ್ಲಿ ನಡೆದ ವಿದ್ಯಮಾನಗಳನ್ನು ನೋಡಿದಾಗ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇರಲಿಲ್ಲ, ಚುನಾವಣೆ ಸಂದರ್ಭದಲ್ಲಿ ನಡೆದ ವಿದ್ಯಮಾನಗಳೆಲ್ಲ ಬರೀ ತೋರಿಕೆಯದಾಗಿತ್ತು ಎಂಬುದು ಬಯಲಾಗಿದೆ. ಇದು ಹಾಗಿರಲಿ ದಿಲ್ಲಿಯಲ್ಲಿ ಮುಖ್ಯಮಂತ್ರಿ ಪದವಿಗಾಗಿ ಪಟ್ಟು ಹಿಡಿದ ಡಿ.ಕೆ.ಶಿವಕುಮಾರ್ ಕಡೆಗೆ ಕಾಂಗ್ರೆಸ್ ಅಧಿನಾಯಕಿ ಶ್ರೀಮತಿ ಸೋನಿಯಾಗಾಂಧಿಯವರ ಮನವೊಲಿಕೆ ನಂತರ ಕರಗಿ ತಮ್ಮ ಪಟ್ಟನ್ನು ಸಡಿಲಿಸಿ ಹೊಂದಾಣಿಕೆಗೆ ಒಪ್ಪಿದ್ದರ ಹಿನ್ನೆಲೆ ಏನು? ಎಂಬುದು ಇನ್ನೂ ಗೌಪ್ಯವಾಗಿದೆ.  

ಇಬ್ಬರಿಗೂ ತಲಾ ಎರಡೂವರೆ ವರ್ಷಗಳ ಅವಧಿಯನ್ನು ಹಂಚಿಕೆ ಮಾಡಲಾಗಿದೆ. ಮೊದಲ ಎರಡೂವರೆ ವರ್ಷದ ಅವಧಿ ಮುಗಿದ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ಸಹಕರಿಸಬೇಕೆಂಬ ಒಪ್ಪಂದ ಆಗಿರುವ ಕುರಿತು ಕಾಂಗ್ರೆಸ್ ಹೈಕಮಾಂಡ್ ನ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರ ಆಪ್ತ ಶಾಸಕರು ಈ ಒಪ್ಪಂದ ಆಗಿರುವುದು ನಿಜ ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ಶಿವಕುಮಾರ್ ಅವರಾಗಲೀ ಸಿದ್ದರಾಮಯ್ಯ ಅವರಾಗಲೀ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಇಬ್ಬರ ಮಾತು ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂಬುದಕ್ಕೇ ಸೀಮಿತವಾಗಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ವೈಭವೋಪೇತವಾಗಿ ಕಂಡರೂ ಆಂತರ್ಯದಲ್ಲಿ  ಬೇರೆಯದೇ ಬೆಳವಣಿಗೆಗಳು ನಡೆಯುತ್ತಿವೆ ಎಂಬುದಂತೂ ಸತ್ಯ. 

ದಿಲ್ಲಿಯಿಂದ ಗುರುವಾಗ ಹಿಂದಿರುಗಿದ ಸಿದ್ದರಾಮಯ್ಯನವರ ಮುಖದಲ್ಲಿ ಅಂತಹ ಖುಷಿಯೇನೂ ಕಾಣಲಿಲ್ಲ. ಒಂದು ಬಗೆಯ ಅಸಹನೆ, ಚಡಪಡಿಕೆ ಅವರ ವರ್ತನೆಯಲ್ಲಿ ಕಾಣ ಬರುತ್ತಿತ್ತು. ಸುದ್ದಿಗಾರರೊಂದಿಗೆ ಮಾತನಾಡುವಾಗಲೂ ಅವರು ಎಂದಿನಂತೆ ಸಂಬ್ರಮದಲ್ಲಿರಲಿಲ್ಲ. ಆದರೆ ಅವರೊಂದಿಗೇ ದಿಲ್ಲಿಯಿಂದ ಬಂದಿಳಿದ ಶಿವಕುಮಾರ್ ವರ್ತನೆಯಲ್ಲಿ ಯುದ್ಧ ಗೆದ್ದ ವಿಜಯೋತ್ಸವದ ಸಂಭ್ರಮ ಮನೆ ಮಾಡಿತ್ತು. 

ಇದನ್ನೂ ಓದಿ: ಚುನಾವಣೆ ಗೆಲ್ಲಲು ಪ್ರತಿಷ್ಠೆ ಪಣಕ್ಕಿಟ್ಟ ತ್ರಿಮೂರ್ತಿಗಳು

ದಿಲ್ಲಿಯಲ್ಲಿ ತಮ್ಮಿಬ್ಬರ ನಡುವೆ ಏನೂ ನಡೆದೇ ಇಲ್ಲ ಎಂಬಂತೆ ಅವರು ಪ್ರತಿಕ್ರಿಯಿಸಿದರು. ಇಲ್ಲಿ ಮಖ್ಯವಾಗಿ ಗಮನಿಸಬೆಕಾದ ಅಂಶ ಎಂದರೆ ಲೋಕಸಭಾ ಸದಸ್ಯರೂ ಆಗಿರುವ ಅವರ ಸೋದರ ಡಿ.ಕೆ.ಸುರೇಶ್ ನೀಡಿರುವ ಪ್ರತಿಕ್ರಿಯೆ. ದಿಲ್ಲಿಯಲ್ಲಿ ಆಗಿರುವ ತೀರ್ಮಾನ ತಮಗೆ ತೃಪ್ತಿ ತಂದಿಲ್ಲ ಆದರೂ ಒಪ್ಪಿಕೊಂಡಿದ್ದೇವೆ ಎಂದೂ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಅತೃಪ್ತಿಯ ಬೆಂಕಿ ಇನ್ನೂ ಬೂದಿ ಮುಚ್ಚಿದ ಕೆಂಡದ ಸ್ಥಿತಿಯಲ್ಲೇ ಇದೆ ಎಂಬುದು ಗೋಚರವಾಗುತ್ತದೆ. 

ಹೈಕಮಾಂಡ್ ಮುಂದೆ ಶಿವಕುಮಾರ್  ಇಟ್ಟಿರುವ ಪ್ರಸ್ತಾಪದಲ್ಲಿ ಮುಖ್ಯಮಂತ್ರಿಗೆ ಸಮನಾದ ಅಧಿಕಾರ, ಶಿಷ್ಟಾಚಾರದ ಸೌಲಭ್ಯಗಳು ಉಪ ಮುಖ್ಯಮಂತ್ರಿ ಆಗಲಿರುವ ತನಗೂ ನೀಡಬೇಕು ಹಾಗೆಯೇ ಮುಖ್ಯಮಂತ್ರಿಯಾಗಿ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕೈಗೊಳ್ಳುವ ಪ್ರತಿಯೊಂದು ತೀರ್ಮಾನಗಳೂ ತಮ್ಮನ್ನೂ ಒಳಗೊಂಡಂತೆ ಪಕ್ಷ ಮತ್ತು ಸರ್ಕಾರದ ಪ್ರಮುಖರ ಸಮಿತಿಯಲ್ಲಿ ಚರ್ಚೆಯಾಗಬೇಕು ಎಂಬ ಷರತ್ತನ್ನೂ ವಿಧಿಸಿದ್ದಾರೆ ಎನ್ನಲಾಗುತ್ತಿದೆ. ಇದು ಶಿವಕುಮಾರ್ ಷರತ್ತು ಎಂಬುದಕ್ಕಿಂತ ಕಾಂಗ್ರೆಸ್ ವರಿಷ್ಠ ಮಂಡಳಿಯೇ ಅವರ ಮೂಲಕ ಹೇಳಿಸಿರುವ ಮಾತು ಎಂದೂ ವಿಶ್ಲೇಷಿಸಬಹುದಾಗಿದೆ. 

ಸಿದ್ದರಾಮಯ್ಯ ಪಕ್ಷಕ್ಕೆ ಬಂದಾಗಿನಿಂದಲೂ ಮೂಲ ಕಾಂಗ್ರೆಸ್ಸಿಗರ ಜತೆ ಅವರ ಹೊಂದಾಣಿಕೆ ಅಷ್ಟೇನೂ ಸೌಹಾರ್ದವಾಗಿಲ್ಲ. ದಶಕಗಳಿಂದಲೂ ಕಾಂಗ್ರೆಸ್ ನಲ್ಲಿದ್ದು ಪಕ್ಷದ ನೀತಿ ನಿಲುವುಗಳಿಗೇ ಕಟಿಬದ್ಧ ರಾಗಿರುವ ಅನೇಕ ಮುಖಂಡರಿಗೆ ಅವರ ಕುರಿತು ಅಸಹನೆ ಇದೆ.  ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಕೃಷ್ಣ ಅವರ  ನೆಚ್ಚಿನ ಬಂಟರಾಗಿದ್ದರು. ಆ ಸಂದರ್ಭದಲ್ಲಿ ಕೃಷ್ಣ ಅವರ ಜತೆಗಿದ್ದ ಆತ್ಮಿಯತೆಯ ಪ್ರಭಾವವನ್ನು ಬಳಸಿಕೊಂಡು ವ್ಯಾಪ್ತಿ ಮೀರಿ ಇತರ ಸಚಿವರ ಖಾತೆಗಳಲ್ಲೂ ಅಧಿಕಾರ ಚಲಾಯಿಸಿದ್ದರು ಎಂಬುದೊಂದು ಆರೋಪ ಅವರ ಮೇಲೆ ಈಗಲೂ ಕೆಲವರಲ್ಲಿದೆ. ಈ ಮುಖಂಡರು ಈಗ ಇಷ್ಟವಿಲ್ಲದಿದ್ದರೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ

ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆದುಕೊಂಡಿರುವ ರೀತಿಯನ್ನು ಗಮನಿಸಿದರೆ ರಾಜ್ಯದಲ್ಲಿ ಸಿದ್ದರಾಮಯ್ಯ  ಅವರು ಸರ್ಕಾರದ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ನೀತಿ ನಿರೂಪಣೆಗಳನ್ನು ತೀರ್ಮಾನಿಸುವ ವಿಚಾರದಲ್ಲಿ ಸ್ವತಂತ್ರರಲ್ಲ. ಅದು ಸದಾ ವರಿಷ್ಠರ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂಬ ಸಂಗತಿ ಗೋಚರವಾಗುತ್ತದೆ.

ಸಂಪುಟಕ್ಕೆ ಸಚಿವರ ಆಯ್ಕೆ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಸೇರಿದಂತೆ ವಿವಿಧ ಅಧಿಕಾರ ಸ್ಥಾನಗಳಿಗೆ ಕಾರ್ಯಕರ್ತರು, ಮುಖಂಡರ ನೇಮಕಾತಿ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. 

ಇದನ್ನೂ ಓದಿ: ಹಲವು ನಾಯಕರ ನಿದ್ದೆ ಕೆಡಿಸಿರುವ ಡಿಕೆಶಿ ರಣತಂತ್ರ

ಐದು ದಶಕಗಳಿಂದ ಕಾಂಗ್ರೆಸ್ ರಾಜಕಾರಣದ ಭಾಗವೇ ಆಗಿದ್ದು ರಾಜ್ಯದ ವಿದ್ಯಮಾನಗಳ ಸೂಕ್ಷ್ಮ ಸಂಗತಿಗಳನ್ನು ಅರಿತಿರುವ ಅನುಭವಿ ನಾಯಕರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರು ಮುಂದಿನ ವರ್ಷ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು ರಾಜ್ಯದ 28 ಸ್ಥಾನಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. 

ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಭಾವವನ್ನು ಮಣ್ಣು ಮುಕ್ಕಿಸಿ  ಪಕ್ಷಕ್ಕೆ ಯಶಸ್ಸು ತಂದು ಕೊಟ್ಟ ಅವರ ತಂತ್ರಗಾರಿಕೆ ರಾಷ್ಟ್ರ ಮಟ್ಟದಲ್ಲಿ  ಅವರ ಗೌರವವನ್ನು ಹೆಚ್ಚಿಸಿದೆ ಅಷ್ಟೇ ಅಲ್ಲ. ಕಾಂಗ್ರೆಸ್ ವಿರೋಧಿ ಪಕ್ಷಗಳು ಕರ್ನಾಟಕದತ್ತ ತಿರುಗಿ ನೋಡುವಂತಾಗಿದೆ. ಬರಲಿರುವ ಲೋಕಸಭಾ ಚುನಾವಣೆ ಕೂಡಾ ಖರ್ಗೆಯವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆ ಕಾರಣಕ್ಕೆ ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿ ಇಬ್ಬರಿಗೂ  ನಿರ್ದಿಷ್ಠ ಸ್ಥಾನಗಳನ್ನು ಗೆಲ್ಲಿಸುವ ಹೊಣೆಗಾರಿಕೆ ನೀಡಿದ್ದಾರೆ. 

ಮುಖ್ಯಮಂತ್ರಿ ಆಯ್ಕೆಯ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ 'ಸಿದ್ದರಾಮಯ್ಯ ಬೇಡ, ನೀವೇ ಮಖ್ಯಮಂತ್ರಿ ಆಗಿ' ಎಂದು ಡಿ.ಕೆ.ಶಿವಕುಮಾರ್ ಮುದಿಟ್ಟ ಪ್ರಸ್ತಾಪವನ್ನು  ಅವರು ನಯವಾಗೇ ತಿರಸ್ಕರಿಸಿದ್ದರ ಹಿಂದೆಯೂ ರಾಜಕೀಯ ಮುತ್ಸದ್ದಿತನ ಕೆಲಸ ಮಾಡಿದೆ.ಈ ಮೂಲಕ ತಾವೊಬ್ಬ ದೂರದೃಷ್ಟಿಯ ನಾಯಕ ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ,

ಈ ಸಂಗತಿಗಳು ಏನೇ ಇರಲಿ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲಿ ಪರಸ್ಪರ ಸಹಮತ ಮೂಡುತ್ತದೆ ಎಂದು ಹೇಳಲು ಬರುವುದಿಲ್ಲ. ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಹುದ್ದೆಯ ಜತೆಗೇ ಕೆಪಿಸಿಸಿ ಅಧ್ಯಕ್ಷರ ಪದವಿಯಲ್ಲೂ ಮುಂದುವರಿದಿದ್ದಾರೆ. 

ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾದವರು ಎಲ್ಲದಕ್ಕೂ ಸಹೋದ್ಯೋಗಿಗಳ ಅಭಿಪ್ರಾಯ ಕೇಳಿ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಾಗದ ಮಾತು. ಅಂತಹ ಪ್ರಸಂಗಗಳಲ್ಲಿ ಇಬ್ಬರೂ ಪ್ರತಿಷ್ಠೆಗೆ ಬಿದ್ದರೆ ಅಲ್ಲಿ ಸಂಘರ್ಷದ ಕಿಡಿ ಹೊತ್ತಿಕೊಳ್ಳುವುದು ಖಚಿತ.ಅಂತಹ ಸನ್ನಿವೇಶವನ್ನು ಸಿದ್ದರಾಮಯ್ಯ ಹೇಗೆ ನಿಭಾಯಿಸುತ್ತಾರೆ ಎಂಬುದೇ ಈಗ ಕುತೂಹಲದ ವಿಚಾರ . 

ಏಕೆಂದರೆ ಅವರು ಈ ಹಿಂದಿನ ಅವಧಿಯಂತೆ ಸ್ವತಂತ್ರರಲ್ಲ. ದಿಲ್ಲಿಯಲ್ಲಿ ಬಲಿಷ್ಠ ಕಾಂಗ್ರೆಸ್ ಹೈಕಮಾಂಡ್ ಇದೆ. ಪಕ್ಷದ ಲಗಾಮು ಮತ್ತು ಚಾಟಿ  ಅನುಭವಿ ನಾಯಕ  ಖರ್ಗೆಯವರ ಕೈಲಿದೆ. ಇದೇ  ಹಿಂದಿಗೂ ಈಗಿನದಕ್ಕೂ ಇರುವ ವ್ಯತ್ಯಾಸ. 


ಯಗಟಿ ಮೋಹನ್
yagatimohan@gmail.com


Stay up to date on all the latest ಅಂಕಣಗಳು news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • dev

    Good part is now Lokyukta is there to control congress govt
    11 days ago reply
flipboard facebook twitter whatsapp