ಹಲವು ನಾಯಕರ ನಿದ್ದೆ ಕೆಡಿಸಿರುವ ಡಿಕೆಶಿ ರಣತಂತ್ರ (ಸುದ್ದಿ ವಿಶ್ಲೇಷಣೆ)
ರೆಸಾರ್ಟ್ ರಾಜಕಾರಣಕ್ಕೆ ಫಲಿತಾಂಶ ಮುನ್ನುಡಿ ಬರೆಯಲಿದೆಯೆ? ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದು ಫಲಿತಾಂಶ ಹೊರ ಬೀಳಲು ಇನ್ನು ಒಂದೇ ದಿನ ಬಾಕಿ ಇರುವ ಸನ್ನಿವೇಶದಲ್ಲಿ ಇಂಥದೊಂದು ಕುತೂಹಲ ಸಾರ್ವತ್ರಿಕವಾಗಿ ಇಮ್ಮಡಿಯಾಗಿದೆ.
Published: 12th May 2023 12:39 PM | Last Updated: 12th May 2023 02:40 PM | A+A A-

ಡಿಕೆ ಶಿವಕುಮಾರ್
ರೆಸಾರ್ಟ್ ರಾಜಕಾರಣಕ್ಕೆ ಫಲಿತಾಂಶ ಮುನ್ನುಡಿ ಬರೆಯಲಿದೆಯೆ? ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದು ಫಲಿತಾಂಶ ಹೊರ ಬೀಳಲು ಇನ್ನು ಒಂದೇ ದಿನ ಬಾಕಿ ಇರುವ ಸನ್ನಿವೇಶದಲ್ಲಿ ಇಂಥದೊಂದು ಕುತೂಹಲ ಸಾರ್ವತ್ರಿಕವಾಗಿ ಇಮ್ಮಡಿಯಾಗಿದೆ.
ಇದುವರೆಗೆ ಬಂದಿರುವ ಚುನಾವಣಾ ಪೂರ್ವ ಹಾಗೂ ಮತಗಟ್ಟೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಲಿದ್ದು ಅಧಿಕಾರಕ್ಕೆ ಬರಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ. ಪ್ರಕಟವಾಗಿರುವ ಸಮೀಕ್ಷೆಗಳಲ್ಲಿ ಮತದಾರರ ಒಲವು ಕಾಂಗ್ರೆಸ್ ಪಕ್ಷದತ್ತ ವಾಲಿರುವುದು ಕಂಡು ಬಂದಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲೂ ಬಹುಮತದ ಮುನ್ಸೂಚನೆ ದೊರೆತಿದೆ. ಹೀಗಾಗಿ ಮತ ಎಣಿಕೆ ಪ್ರಕ್ರಿಯೆಗೆ ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಕಾಂಗ್ರೆಸ್ ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷ 141 ಸ್ಥಾನಗಳನ್ನು ಗಳಿಸಲಿದ್ದು ಯಾವುದೇ ಪಕ್ಷದ ಬೆಂಬಲವಿಲ್ಲದೇ ಸರ್ಕಾರ ರಚಿಸುವುದಾಗಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಅವರದ್ದು ನಿಖರವಾದ ನಿಲುವು. ಆದರೆ ಇದೇ ಪ್ರಮಾಣದ ಆತ್ಮ ವಿಶ್ವಾಸ ಆ ಪಕ್ಷದ ಉಳಿದ ನಾಯಕರಲ್ಲಿ ಕಂಡು ಬರುತ್ತಿಲ್ಲ. ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ ಬಹುಮತ ಗಳಿಸುತ್ತದೆ ಎಂದಷ್ಟೇ ಹೇಳಿದ್ದಾರೆ, ಆದರೆ ನಿಖರ ಅಂಕಿ ಅಂಶ ನೀಡಿಲ್ಲ.
ಇನ್ನುಳಿದಂತೆ ಪ್ರಮುಖ ನಾಯಕರಾದ ಡಾ. ಜಿ.ಪರಮೇಶ್ವರ್ ಹಾಗೂ ಎಂ.ಬಿ.ಪಾಟೀಲ್ ಅವರೂ ಪಕ್ಷ ಬಹುಮತ ಗಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಾ. ಪರಮೇಶ್ವರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ತಾನೂ ಒಬ್ಬ ಆಕಾಂಕ್ಷಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆತ್ಮವಿಶ್ವಾಸದ ನಡುವೆಯೂ ಬಿಜೆಪಿಗೆ ಒಳಗೊಳಗೇ ತಳಮಳ...
ಅಲ್ಲಿಗೆ ಮತ ಎಣಿಕೆ ಮುಗಿದು ಫಲಿತಾಂಶ ಹೊರ ಬರುವ ಮುನ್ನವೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಆರಂಭವಾಗಿದೆ. ಮತ್ತೊಂದು ಕಡೆ ಬಿಜೆಪಿಯಲ್ಲಿ ತಮ್ಮ ಪಕ್ಷ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಬಹುಮತ ಗಳಿಸುತ್ತದೆ ಎಂದು ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅವರನ್ನು ಹೊರತು ಪಡಿಸಿದರೆ ಉಳಿದವರಲ್ಲಿ ಆ ಮಟ್ಟಿನ ದೃಢ ಆತ್ಮ ವಿಶ್ವಾಸ ಕಾಣುತ್ತಿಲ್ಲ. ಜೆಡಿಎಸ್ ನೆರವಿನೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಕುರಿತು ಪ್ರಯತ್ನಗಳು ಮತ್ತೊಂದು ದಿಕ್ಕಿನಲ್ಲಿ ಸದ್ದಿಲ್ಲದೇ ನಡೆದಿದೆ. ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ತಮ್ಮ ಪಕ್ಷ 50 ಸ್ಥಾನಗಳನ್ನು ಗಳಿಸುತ್ತದೆ ಎಂಬ ನಿರೀಕ್ಷೆಯಲ್ಲಿರುವ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮನ್ನು ಬಿಟ್ಟು ಸರ್ಕಾರ ರಚನೆ ಮಾಡಲು ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಸಾಧ್ಯವಿಲ್ಲ ಎಂಬ ಪ್ರಚಂಡ ವಿಶ್ವಾಸದೊಂದಿಗೆ ಕಾಯುತ್ತಿದ್ದಾರೆ.
ಈ ಬಾರಿಯ ಮತದಾನದ ವಿವರಗಳನ್ನು ನೋಡಿದಾಗ ಬೆಂಗಳೂರು ನಗರ ಬಿಟ್ಟು ಉಳಿದಂತೆ ಹೆಚ್ಚುಪಾಲು ಜಿಲ್ಲೆಗಳಲ್ಲಿ ಶೇಕಡಾವಾರು ಉತ್ತಮ ಮತದಾನ ನಡೆದಿದೆ. ಇದೇ ವೇಳೆ ಚುನಾವಣೆ ಪ್ರಕ್ರಿಯೆಯ ಒಳಹೊಕ್ಕು ನೋಡಿದರೆ ಮೂರೂ ಪಕ್ಷಗಳಲ್ಲಿ ಪ್ರಮುಖ ಮುಖಂಡರುಗಳ ಭವಿಷ್ಯವೇ ಡೋಲಾಯಮಾನ ವಾಗುವ ಸಂಭವವಿದೆ ಎಂಬ ವರದಿಗಳು ಬರತೊಡಗಿವೆ. ಇದು ವಿಶೇಷವಾಗಿ ಬಿಜೆಪಿಯ ಮಟ್ಟಿಗೆ ಕುತೂಹಲಕ್ಕೆ ಕಾರಣವಾಗಿದೆ.
ಅಧಿಕಾರಕ್ಕೆ ಏರುವ ಭಾರೀ ಭರವಸೆ ಹೊಂದಿರುವ ಕಾಂಗ್ರೆಸ್ ಪಕ್ಷ ನಾಳೆ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾಗುತ್ತಿದಂತೆಯೇ ಗೆದ್ದ ಅಭ್ಯರ್ಥಿಗಳಿಗೆ ಹೆಚ್ಚುಸಮಯ ವ್ಯರ್ಥ ಮಾಡಲು ಬಿಡದೇ ಕೂಡಲೇ ಬೆಂಗಳೂರಿಗೆ ಬರಬೇಕೆಂದು ಸೂಚನೆ ನೀಡಲಾಗಿದೆ. ಗೆದ್ದ ಪಕ್ಷದ ಅಭ್ಯರ್ಥಿಗಳನ್ನು ಅನ್ಯ ಪಕ್ಷದ ಮುಖಂಡರು ಸಂಪರ್ಕಿಸಲು ಸಾಧ್ಯವಾಗದಂತೆ ಅವರನ್ನು ಕೂಡಲೇ ಬೆಂಗಳೂರಿಗೆ ಕರೆಸಿಕೊಳ್ಳಲು ಏರ್ಪಾಟು ಮಾಡಲಾಗಿದೆ. ಖುದ್ದು ಡಿ.ಕೆ.ಶಿವಕುಮಾರ್ ಅವರೇ ಇದರ ಉಸ್ತುವಾರಿ ವಹಿಸಿದ್ದು ಗೆದ್ದವರನ್ನು ಆಯಾಯ ಕ್ಷೇತ್ರಗಳಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಅಗತ್ಯ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಹೀಗೆ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿ ಸರ್ಕಾರ ರಚನೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ವರೆಗೆ ಒಂದೇ ಕಡೆ ಇರಿಸುವ ಯೋಜನೆಗಳೂ ಸಿದ್ಧವಾಗಿವೆ. ಬಹು ಮುಖ್ಯವಾಗಿ ಬಿಜೆಪಿಗೆ ಅಗತ್ಯ ಸಂಖ್ಯೆಯ ಬಹುಮತ ದೊರಕದೇ ಇದ್ದರೆ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಮಿಷ ಅಥವಾ ಬೆದರಿಕೆ ಒಡ್ಡಿ ಅವರನ್ನು ತನ್ನತ್ತ ಸೆಳೆದು ಬೆಂಬಲ ಗಿಟ್ಟಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಬಹುದು ಎಂಬ ಮುಂದಾಲೋಚನೆ ಇದಕ್ಕೆ ಕಾರಣ.
ಇದನ್ನೂ ಓದಿ: ಚುನಾವಣೆ ಗೆಲ್ಲಲು ಪ್ರತಿಷ್ಠೆ ಪಣಕ್ಕಿಟ್ಟ ತ್ರಿಮೂರ್ತಿಗಳು
ಈಗಾಗಲೇ ಬಿಜೆಪಿ ಹಿಂದೆ ನಡೆಸಿದ ಆಪರೇಷನ್ ಕಮಲ ಕಾರ್ಯಾಚರಣೆಯ ಸಂಪೂರ್ಣ ಅನುಭವ ಹೊಂದಿರುವ ಹಾಗೆಯೇ ಈ ಹಿಂದೆ ಸ್ವಯಂ ಇಂತಹ ಕಾರ್ಯಾರಚರಣೆಗಳನ್ನು ನಡೆಸಿ ಅನುಭವ ಇರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಈ ಬಾರಿಯೂ ಅದರ ಮುಂದಾಳತ್ವ ವಹಿಸಲಿದ್ದಾರೆ. ಮುಂದಿನ ಮುಖ್ಯಮಂತ್ರಿ ಪದವಿಯ ಮೇಲೆ ಕಣ್ಣಿಟ್ಟಿರುವ ಅವರಿಗೆ ಪಕ್ಷದಿಂದ ಗೆದ್ದಿರುವ ಅಭ್ಯರ್ಥಿಗಳು ಕದಲದಂತೆ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಇದೆ. ಈ ಬಾರಿಯ ಚುನಾವಣೆಯಲ್ಲಿ ತಾನೇ ಆಸ್ಥೆ ವಹಿಸಿ ಹೆಚ್ಚು ಪಾಲ ಹೊಸಬರಿಗೆ ಪಕ್ಷದ ಟಿಕೆಟ್ ನೀಡಿದ್ದು ಅವರೆಲ್ಲ ಗೆದ್ದರೆ ಅಷ್ಟೂ ಮಂದಿಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಅವರಿಗೆ ಇದೆ. ಹೀಗಾಗಿ ರೆಸಾರ್ಟ್ ರಾಜಕಾರಣದ ಕುರಿತು ಕಾಂಗ್ರೆಸ್ ಮುಂದಾಲೋಚನೆ ನಡೆಸಿರುವುದು ಸಹಜವಾಗೇ ಇದೆ.
ಇದೇ ತನ್ನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ ಕೂಡಾ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಯಾಗಿದ್ದಾರೆ. ವಿವಿಧ ಸಮೀಕ್ಷೆಗಳಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದ್ದು ಸಹಜವಾಗೇ ಅವರ ಆಕಾಂಕ್ಷೆಯನ್ನು ಇಮ್ಮಡಿಗೊಳಿಸಿದೆ. ಬಹು ಸಂಖ್ಯೆಯ ಶಾಸಕರು ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆಂಬ ಅಚಲ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಆದರೆ ಕಾಂಗ್ರೆಸ್ ನಲ್ಲಿ ಬೇರೆಯದೇ ಲೆಕ್ಕಾಚಾರ ನಡೆದಿದೆ. ಒಂದು ವೇಳೆ ಸರ್ಕಾರ ರಚನೆಗೆ ಅಗತ್ಯ ಸಂಖ್ಯೆಯ ಬಹುಮತ ಸಿಗದಿದ್ದರೆ ಜೆಡಿಎಸ್ ನೆರವು ಕೋರಿ ಸರ್ಕಾರ ರಚಿಸುವ ಪ್ರಸ್ತಾವನೆ ಪಕ್ಷದ ಸಭೆಗಳಲ್ಲಿ ಚರ್ಚೆ ಆಗಿದೆ. ಆದರೆ ಇದಕ್ಕೆ ಸಿದ್ದರಾಮಯ್ಯ ಮತ್ತ ಡಿ.ಕೆ.ಶಿವಕುಮಾರ್ ಸಹಮತ ನೀಡಿಲ್ಲ. ಅವರಿಬ್ಬರ ಲೆಕ್ಕಾಚಾರಗಳೇ ಬೇರೆಯದಾಗಿವೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಈ ಬಾರಿ ಪಕ್ಷ ಸರ್ಕಾರ ರಚನೆಗೆ ಅಗತ್ಯವಾದಷ್ಟು ಬಹುಮತ ಗಳಿಸಿದರೂ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಸಂಭವ ಕಡಿಮೆ. ಈ ವಿಚಾರದಲ್ಲಿ ಹೈಕಮಾಂಡ್ ನ ಚಿಂತನೆಯೇ ಬೇರೆಯದಾಗಿದೆ. ಈ ಇಬ್ಬರು ನಾಯಕರಲ್ಲಿ ಯಾರೇ ಮುಖ್ಯಮಂತ್ರಿ ಪದವಿಗೆ ಶಾಸಕಾಂಗ ಸಭೆಯಲ್ಲಿ ಸ್ಪರ್ಧಿಸಿದರೂ. ಪಕ್ಷ ಎರಡು ಬಣಗಳಾಗುವ ಸಾಧ್ಯತೆ ಇದೆ. ಆಗ ಪರಿಸ್ಥಿತಿಯ ಲಾಭ ಪಡೆದು ಬಿಜೆಪಿ ರಂಗಕ್ಕಿಳಿದು ಕಾಂಗ್ರೆಸ್ ನ ಗೆದ್ದ ಅಭ್ಯರ್ಥಿಗಳಿಗೆ ಗಾಳ ಹಾಕುವ ಸಾಧ್ಯತೆಗಳು ಹೆಚ್ಚು.
ಪರಸ್ಪರರ ನಡುವೆ ಪೈಪೋಟಿ ತಪ್ಪಿಸಲು ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಪಕ್ಷದ ವರಿಷ್ಠ ಮಂಡಳಿಗೆ ಬಿಟ್ಟು ದಿಲ್ಲಿ ನಾಯಕರು ಸೂಚಿಸುವ ಅಭ್ಯರ್ಥಿಗೆ ಬೆಂಬಲ ಸೂಚಿಸುವುದು ಕಾರ್ಯ ತಂತ್ರದ ಇನ್ನೊಂದು ಭಾಗ.
ಇದನ್ನೂ ಓದಿ: ಬಿಜೆಪಿ ಪಾಳೆಯದಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು!
ಈ ಕಾರ್ಯ ತಂತ್ರ ಫಲಿಸಿದರೆ ಪಕ್ಷದ ಹಿರಿಯ ನಾಯಕರೂ ಆದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನೇ ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವ ಚಿಂತನೆಯೂ ನಡೆದಿದೆ. ಪಕ್ಷದ ಎಲ್ಲ ಗುಂಪುಗಳಿಗೂ ಹೊಂದಾಣಿಕೆ ಆಗ ಬಲ್ಲ ಖರ್ಗೆಯವರೇ ಮುಖ್ಯಮಂತ್ರಿಯಾದರೆ ಅಹಿಂದ ತತ್ವದ ಪ್ರತಿಪಾದಕರಾದ ಸಿದ್ದರಾಮಯ್ಯ ಕೂಡಾ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾರೆ ಈ ಮೂಲಕ ಅವರನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಾಗಬಹುದು ಎಂಬುದು ಒಂದು ಲೆಕ್ಕಾಚಾರ.
ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಖರ್ಗೆ ವಾಪಸು ರಾಜ್ಯ ರಾಜಕಾರಣಕ್ಕೆ ಬರಲು ಒಪ್ಪುತ್ತಾರಾ? ಎಂಬುದು ಸದ್ಯದ ಪ್ರಶ್ನೆ. ಖರ್ಗೆ ಮುಖ್ಯಮಂತ್ರಿಯಾದರೆ ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್ ಸಂಘಟನೆ ಸುಲಭವಾಗುತ್ತದೆ ಎನ್ನುವ ಪಕ್ಷದ ಪ್ರಮುಖ ನಾಯಕರೊಬ್ಬರು ಲೋಕಸಭೆ ಚುನಾವಣೆ ಮುಗಿಯುವವರೆಗೆ ಖರ್ಗೆಯವರು ಎಐಸಿಸಿ ಅಧ್ಯಕ್ಷ ಸ್ಥಾನದಲ್ಲೂ ಮುಂದುವರಿಯಲು ಅಡ್ಡಿ ಇಲ್ಲ ಎಂಬ ವಾದ ಮುಂದಿಡುತ್ತಾರೆ. ಆ ಮೂಲಕ ಅಧಿಕಾರ ಮೂಲ ಕಾಂಗ್ರೆಸ್ಸಿಗರ ಬಳಿಯೇ ಉಳಿದಂತಾಗುತ್ತದೆ ಎಂಬುದೂ ಇನ್ನೊಂದು ಲೆಕ್ಕಾಚಾರ.
ಆದರೆ ಇದೇ ವೇಳೆ ಪಕ್ಷದ ಇನ್ನೊಬ್ಬ ಪ್ರಮುಖ ನಾಯಕ ಡಾ. ಜಿ.ಪರಮೇಶ್ವರ್ ಕೂಡಾ ತಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾಋಎ. ಈ ಹೇಳಿಕೆಯನ್ನು ಉಪೇಕ್ಷಿಲು ಬರುವುದಿಲ್ಲ. ಪರಮೇಶ್ವರ್ ಹೇಳಿಕೆಯ ಹಿಂದೆ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರ ಪ್ರಚೋದನೆ ಇದೆ ಎಂಬ ಮಾತೂ ಕೇಳಿ ಬರುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಈ ಮೂವರ ಹೊರತಾಗಿಯೂ ಕೆಲವು ಹೆಸರುಗಳು ಮುಂದಿನ ದಿನಗಳಲ್ಲಿ ಪ್ರಸ್ತಾಪಕ್ಕೆ ಬರುವ ಸಾಧ್ಯತೆಗಳೂ ಇವೆ.
ಒಂದು ವೇಳೆ ಜೆಡಿಎಸ್ ಬೆಂಬಲ ಅನಿವಾರ್ಯವಾದರೆ ಆಗ ಆ ಪಕ್ಷದ ಅಗ್ರಗಣ್ಯ ನಾಯಕರೂ ಆದ ಮಾಜಿ ಪ್ರಧಾನಿ ದೇವೇಗೌಡರು ಸೂಚಿಸುವ ವ್ಯಕ್ತಿ ಮುಖ್ಯಮಂತ್ರಿ ಪದವಿಗೇರುತ್ತಾರೆ. ಈಗಾಗಲೇ ಕುಮಾರಸ್ವಾಮಿಯೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿರುವ ದೇವೇಗೌಡರು ಪಟ್ಟಾಭಿಷೇಕಕ್ಕೆ ಮೇ 18 ರ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಹೀಗಾಗಿ ಪುತ್ರನ ಹೊರತಾಗಿ ಮೂರನೆಯವರ ಹೆಸರು ಸೂಚಿಸುವ ಔದಾರ್ಯವನ್ನು ಅವರು ತೋರಿಸುವ ಸಾಧ್ಯತೆಗಳು ತೀರಾ ಕಡಿಮೆ.
ಇದನ್ನೂ ಓದಿ: ಕವಲು ದಾರಿಯಲ್ಲಿ ರಾಜ್ಯ ರಾಜಕಾರಣ (ಸುದ್ದಿ ವಿಶ್ಲೇಷಣೆ)
ಬಿಜೆಪಿಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮುಂದಿನ ಅವಧಿಗೂ ಮುಖ್ಯಮಂತ್ರಿ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಘೋಷಿಸಿದ್ದಾರೆ. ಆದರೆ ಇದೇ ಅಂತಿಮವಲ್ಲ. ಒಂದು ವೇಳೆ ಈಗಿರುವ ಲೆಕ್ಕಾಚಾರ ತಲೆ ಕೆಳಗಾಗಿ ಬಿಜೆಪಿಯೇ ಅಧಿಕಾರಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾದರೆ ಬೇರೆಯವರ ಹೆಸರುಗಳೂ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಅದಿಲ್ಲದೇ ಜೆಡಿಎಸ್ ಬೆಂಬಲ ಪಡೆದ ಸರ್ಕಾರ ರಚಿಸುವ ಸಂದರ್ಭ ಒದಗಿ ಬಂದರೆ ಆಗ ಬಿಜೆಪಿ ನಾಯಕರು ಜೆಡಿಎಸ್ ವರಿಷ್ಠರ ಜತೆ ಪದವಿ ಕುರಿತು ಚೌಕಾಶಿ ವ್ಯಾಪಾರಕ್ಕೆ ಇಳಿಯುತ್ತಾರೆ. ಆಗಲೂ ಜೆಡಿಎಸ್ ತನ್ನ ಪಟ್ಟನ್ನು ಸಡಿಲಿಸುವ ಸಾಧ್ಯತೆಗಳು ತೀರಾ ಕಡಿಮೆ.
ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಆರಂಭಿಸಿರುವ ಚೆದುರಂಗದಾಟವಂತೂ ಹಲವರ ನಿದ್ದೆ ಕೆಡಿಸಿದೆ. ಶನಿವಾರ ಸಂಜೆಯ ವೇಳೆಗೆ ಇಡೀ 224 ಸ್ಥಾನಗಳ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಕ್ಕಲಿದೆ. ಅಲ್ಲಿಂದ ಮುಂದೆ ನಡೆಯುವ ರಾಜಕೀಯವೇ ಕುತೂಹಲಕರ ತಿರುವಿನಲ್ಲಿ ನಿಲ್ಲಲಿದೆ.
ಯಗಟಿ ಮೋಹನ್
yagatimohan@gmail.com