ಕವಲು ದಾರಿಯಲ್ಲಿ ರಾಜ್ಯ ರಾಜಕಾರಣ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಮೇ ನಂತರ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಆಡಳಿತ ನಡೆಸುವವರು ಯಾರು ..? ಸಾರ್ವಜನಿಕರಲ್ಲೂ ಇಂಥದ್ದೊಂದು ಕುತೂಹಲ ದಟ್ಟವಾಗಿದೆ.
ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ
ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ

ಮೇ ನಂತರ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಆಡಳಿತ ನಡೆಸುವವರು ಯಾರು..? ಸಾರ್ವಜನಿಕರಲ್ಲೂ ಇಂಥದ್ದೊಂದು ಕುತೂಹಲ ದಟ್ಟವಾಗಿದೆ. ಸದ್ಯ ಮೂರೂ ರಾಜಕೀಯ ಪಕ್ಷಗಳೂ ಮುಂದಿನ ಅಧಿಕಾರ ನಮ್ಮದೇ ಎಂದು ಬೀಗುತ್ತಿವೆ. ಬಹಿರಂಗ ಸಭೆಗಳಲ್ಲಿ, ಪತ್ರಿಕಾ ಹೇಳಿಕೆಗಳಲ್ಲಿ ಜನರ ಮುಂದೆ ತಮ್ಮ ಪಕ್ಷಕ್ಕೇ ಅಧಿಕಾರ ಸಿಕ್ಕುವುದು ಖಚಿತ ಎಂಬ ಆತ್ಮ ವಿಶ್ವಾಸದ ಮಾತುಗಳನ್ನು ಆಡುತ್ತಿವೆ.

ರಾಜ್ಯ ವಿಧಾನಸಭೆಯ 224 ಸ್ಥಾನಗಳಿಗೆ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯ ಬೇಕೆಂದರೆ ಯಾವುದೇ ಪಕ್ಷಕ್ಕೆ ಸರಳ ಬಹುಮತವಾದ 125 ಸ್ಥಾನಗಳು ಬೇಕು. ಅಷ್ಟು ಸಂಖ್ಯೆಯ ಶಾಸಕರ ಬಲ ಹೊಂದಿರುವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದೀಗ ಚುನಾವಣೆಗೆ ಸದ್ಯದಲ್ಲೇ ದಿನಾಂಕ ಪ್ರಕಟವಾಗುವ ಸನ್ನಿವೇಶ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಧಿಕಾರ ಹಿಡಿಯುವ ಉಮೇದು ಕಂಡು ಬರುತ್ತಿರುವುದೇನೋ ನಿಜ.

ಆದರೆ ಚುನಾವಣೆ ಘೋಷಣೆಗೂ ಮುನ್ನ ಇರುವ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಬಹುಮುಖ್ಯವಾಗಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್- ಬಿಜೆಪಿಯಲ್ಲಿ ಪಕ್ಷಾಂತರ ಪರ್ವಆರಂಭವಾಗಿದೆ. ಅಳಕ್ಕಿಳಿದು ನೋಡಿದರೆ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸ ಎರಡೂ ರಾಜಕೀಯ ಪಕ್ಷಗಳಲ್ಲಿ ಕಾಣುತ್ತಿಲ್ಲ.

ಎರಡೂ ಪಕ್ಷಗಳು ನಡೆಸಿರುವ ಸಮೀಕ್ಷೆಗಳಲ್ಲಿ ಸ್ವತಂತ್ರವಾಗಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಫಲಿತಾಂಶ ಬಂದಿದೆ.

ಕಳೆದ ವಿಧಾನಸಭೆಯ ಚುನಾವಣೆ ನಂತರವೂ ಇದೇ ಪರಿಸ್ಥಿತಿ ಎದುರಾಗಿತ್ತು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರ ಏರಲು ಸಾಧ್ಯವಾಗಲಿಲ್ಲ. ಚುನಾವಣೆಗೆ ಮೊದಲು ಪರಸ್ಪರ ಕಟು ಟೀಕೆಗಳನ್ನು ಮಾಡುತ್ತಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬಂದರೂ ಮೈತ್ರಿಕೂಟದ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ಪ್ರತಿ ಪಕ್ಷದಲ್ಲಿ ಕುಳಿತಿದ್ದ ಬಿಜೆಪಿ ನಡೆಸಿದ ಆಪರೇಷನ್ ಕಮಲ ಕಾರ್ಯಾಚರಣೆಯಿಂದಾಗಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡಿತು. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಆಯಿತು. ಈ ಸಂದರ್ಭದಲ್ಲಿ ನಡೆದ ಶಾಸಕರ ಪಕ್ಷಾಂತರದ ಕಾರ್ಯಾಚರಣೆಗಳು, ಪಕ್ಷಾಂತರ ಮಾಡಿದವರನ್ನು ಅಂದಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದು, ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೇಟ್ಟಿಲೇರಿ ಸ್ಪೀಕರ್ ಆದೇಶವನ್ನು ರದ್ದು ಮಾಡಿದ್ದು ಈಗ ಇತಿಹಾಸ.

ರಾಜಕೀಯ ವ್ಯವಸ್ಥೆಯಲ್ಲೀಗ ಅಧಿಕಾರ ಪಡೆಯುವುದೇ ಮುಖ್ಯವಾಗಿರುವುದರಿಂದ ನೈತಿಕತೆ ಪ್ರಶ್ನೆ ಇಲ್ಲಿ ಅಸಮಂಜಸ ಎಂಬ ಸ್ಥಿತಿಗೆ ರಾಜಕಾರಣ ಮುಟ್ಟಿದೆ. ಈ ಬಾರಿಯ ಪರಿಸ್ಥಿತಿಯೂ ಹಿಂದಿನದಕ್ಕಿಂತ ಆಶಾದಾಯಕವಾಗೇನೂ ಇಲ್ಲ. ಮೂರೂ ಪಕ್ಷಗಳಲ್ಲಿ ರಾಜಕೀಯ ಸ್ಥಿತ್ಯಂತರ ಗಳು ನಡೆದಿವೆ.

ಮತ್ತೆ ಬಿಎಸ್ ವೈ ನಾಯಕತ್ವದ ಜಪ: ಬಿಜೆಪಿ ಆಡಳಿತ ಪಕ್ಷವಾಗಿರುವುದರಿಂದ ಅದರ ಕುರಿತೇ ಇಲ್ಲಿಪ್ರಸ್ತಾಪಿಸಬೇಕಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಕಾರಣರಾದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ನಂತರ ಪಕ್ಷದಲ್ಲಿ ನಡೆದಿರುವ ಬೆಳವಣಿಗೆಗಳು, ಮತ್ತು ಅವರ ನಂತರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಸರಮಾಲೆ ಜನಪ್ರಿಯತೆಯನ್ನು ಕುಗ್ಗಿಸಿರುವುದು ಸ್ಪಷ್ಟ. ಯಡಿಯೂರಪ್ಪ ಪದಚ್ಯುತಿಯ ನಂತರ ಅವರನ್ನು ಸ್ವಲ್ಪ ಕಾಲ ಮೂಲೆಗೊತ್ತಿದ್ದ ಬಿಜೆಪಿ ಹೈಕಮಾಂಡ್, ಪರ್ಯಾಯ ನಾಯಕತ್ವದ ರಾಜಕೀಯ ಪ್ರಯೋಗಗಳು ವಿಫಲಗೊಂಡ ನಂತರ ಬೇರೆ ದಾರಿಯೇ ಇಲ್ಲ ಎಂಬಂತೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಅವರಿಗೇ ಶರಣಾಗಿದೆ.

ಯಡಿಯೂರಪ್ಪ ವರ್ಚಸ್ಸಿನ ಫಲವಾಗೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಸಮೀಪಕ್ಕೆ ಬರುವಷ್ಟು ಸ್ಥಾನಗಳನ್ನು ಗಳಿಸಲು ಸಾಧ್ಯವಾಯಿತು. ಬಿಜೆಪಿ ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ಅವರು ನಡೆಸಿದ ರಾಜಕೀಯ ಕಾರ್ಯತಂತ್ರವೇ ಕಾರಣ. ಆ ಸಂದರ್ಭದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಗೆ ವರಿಷ್ಠರ ಬೆಂಬಲ ಇಲ್ಲದಿದ್ದರೂ ವೈಯಕ್ತಿಕ ಮಟ್ಟದಲ್ಲಿ ಆಸ್ಥೆ ವಹಿಸಿದ್ದ ಅವರು ಸರ್ಕಾರವನ್ನು ತರಲು ಶ್ರಮಿಸಿದ್ದು ಸಾಮಾನ್ಯವೇನಲ್ಲ. 

ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೆಲೆಯೂರಲು ಕಾರಣರಾದ ಅವರಿಂದ ಎಲ್ಲ ರೀತಿಯ ಲಾಭ ಪಡೆದ ಪಕ್ಷದ ವರಿಷ್ಠರು ಪದವಿಯಿಂದ ಕೆಳಗಿಳಿಸಿದ್ದು, ಅಧಿಕಾರ ಬಿಡುವ ಕಡೇ ಘಳಿಗೆಯಲ್ಲಿ ಅವರು ಕಣ್ಣೀರು ಹಾಕಿದ್ದು ಅವರನ್ನು ಬೆಂಬಲಿಸುವ ಸಮುದಾಯದ ಮನಸ್ಸಿನಲ್ಲಿನ ಕಹಿ ಹಾಗೇ ಉಳಿದಿದೆ.ಇದೇ ಈಗ ಪ್ರತಿಪಕ್ಷಗಳಿಗೆ ಪ್ರಮುಖ ಅಸ್ತ್ರ.

ಬೊಮ್ಮಾಯಿ ವೈಫಲ್ಯಗಳು: ಅವರ ನಂತರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಸಮರ್ಥ ಆಡಳಿತ ಕೊಡಲು ಆಗದೇ ಹಲವು ವೈಫಲ್ಯಗಳು ಹಾಗೂ ಹಗರಣಗಳೇ ತುಂಬಿದ ಸರ್ಕಾರದ ನಾಯಕ ಎಂಬ ಅಪವಾದಕ್ಕೆ ಕಾರಣರಾಗಿದ್ದಾರೆ. ಬಿಜೆಪಿ ಸರ್ಕಾರ ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ.

ಪಕ್ಷದ  ವೈಫಲ್ಯಗಳನ್ನು ಮರೆ ಮಾಚಲು ಪ್ರಧಾನಿ ಮೋದಿಯಾದಿಯಾಗಿ ಬಿಜೆಪಿಯ ಹಲವು ಪ್ರಮುಖ ಮಹಾನ್ ದಂಡನಾಯಕರ ಪಡೆಯೇ ಈ ಬಾರಿ ಚುನಾವಣಾ ಪ್ರಚಾರದ ಕಣಕ್ಕೆ ಇಳಿದಿದೆ.ಇದು ಬಿಜೆಪಿ ಪಾಲಿಗೂ ಅಗ್ನಿ ಪರೀಕ್ಷೆ. ಆದರೆ ಜಾತಿ, ಅಭ್ಯರ್ಥಿ, ಸ್ಥಳೀಯ ನಾಯಕತ್ವದ ಮೇಲೇ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲು ಹೆಣಗಾಡುತ್ತಿದೆ.

ಇತ್ತೀಚೆಗೆ ತಾನೆ ನಡೆದ ಅದೇ ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರನ ಬಹು ಕೋಟಿ ಲಂಚ ಹಗರಣ, ಲೋಕಾಯುಕ್ತ ದಾಳಿ ಪಕ್ಷಕ್ಕೆ ಅಂಟಿದ್ದ ಕಳಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಲೋಕಾಯುಕ್ತ ದಾಳಿ ನಡೆದು ಶಾಸಕರ ಲಂಚಾವತಾರದ ಬಹಿರಂಗ ಪ್ರದರ್ಶನದ ನಂತರವೂ ಬಿಜೆಪಿ ನಾಯಕತ್ವ  ಅವರ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿ  ಕಾರ್ಯಕರ್ತರ ಮಟ್ಟದಲ್ಲೇ ಅಸಹ್ಯ ಹುಟ್ಟಿಸಿದೆ. ಘಟನೆ ನಡೆದು ಒಂದುವಾರ ಕಳೆದರೂ ಪಕ್ಷದಿಂದ ವಿರೂಪಾಕ್ಷಪ್ಪ ಅವರನ್ನು ಹೊರ ಹಾಕಿಲ್ಲ. ಬದಲಾಗಿ ಅವರ ಸಮರ್ಥನೆಗೆ ಇಳಿದಿದೆ. ನಿರೀಕ್ಷಣಾ ಜಾಮೀನು ಅರ್ಜಿ ಇತ್ಯರ್ಥ ಪ್ರಕರಣದಲ್ಲಿ ಒಟ್ಟು ವ್ಯವಸ್ಥೆ ನಡೆದುಕೊಂಡ ರೀತಿಯೇ ಈಗ ಹತ್ತು ಹಲವು ಬಗೆಯ ಟೀಕೆಗಳಿಗೆ ಗುರಿಯಾಗಿದೆ.

ಇಂಥದ್ದೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದವ ಸ್ವಪಕ್ಷೀಯ ಶಾಸಕನೇ ಆದರೂ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ಆತ ಶರಣಾಗುವಂತೆ ಅಥವಾ ತತ್ ಕ್ಷಣವೇ ಬಂಧನಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದ್ದರೆ ಅದಕ್ಕೊಂದು ಸಮರ್ಥನೆ ಇರುತ್ತಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲೂ ತೆರೆ ಮರೆಯಲ್ಲಿ ರಾಜಕಾರಣ ನಡೆಸುವ ಮೂಲಕ ಸ್ವ ಜಾತಿ ಶಾಸಕನ ಭ್ರಷ್ಟಾಚಾರಕ್ಕೆ ನೆರಳಾಗಿ ನೀಂತದ್ದು ಮಾತ್ರ ವಿಪರ್ಯಾಸ.ಎಂಬುದು ಹಿರಿಯ ಮುಖಂಡರೊಬ್ಬರ ಬೇಸರದ ನುಡಿ.

ಸಿಎಂ ಅಭ್ಯರ್ಥಿ ಯಾರು? ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದಷ್ಟೇ ಆ ಪಕ್ಷದ ರಾಷ್ಟ್ರೀಯ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಆ ಪಕ್ಷ ನೂರರ ಗಡಿ ದಾಟುವುದು ಕಷ್ಟ.

ಕಾಂಗ್ರೆಸ್ ಗೆ ಪ್ರಚಂಡ ವಿಶ್ವಾಸ: ಅಧಿಕಾರಕ್ಕೆ ಬಂದೇ ಬರುತ್ತೇವೆಂಬ ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆಯಾದರೂ ಒಳ ಜಗಳದ ವಿಚಾರಕ್ಕೆ ಬಂದರೆ ಆ ಪಕ್ಷದಲ್ಲೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಮುಂದುವರಿದೇ ಇದೆ.

224 ವಿಧಾನಸಭಾ ಕ್ಷೇತ್ರಗಳಿಗೆ ಪುರ್ಣವಾಗಿ  ಸರ್ವ ಸಮ್ಮತ ಸಮರ್ಥ ಅಭ್ಯರ್ಥಿಗಳು ಪಕ್ಷಕ್ಕೆ ಸಿಗುತ್ತಿಲ್ಲ. ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿ ಪರಿಣಮಿಸಿದೆ. ಸ್ವತಹಾ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದ ಕುರಿತೇ ಇನ್ನೂ ಗೊಂದಲಗಳು ಮುಂದುವರಿದಿದೆ. ಅಧಿಕಾರಕ್ಕೆ ಬಂದೇ ಬಿಟ್ಟೆವೆಂಬ ಉಮೇದಿನಲ್ಲಿರುವ ಕಾಂಗ್ರೆಸ್ ಪಕ್ಷವೂ ಸದ್ಯದ ಸ್ಥಿತಿಯಲ್ಲಿ ನಿಚ್ಚಳ ಬಹುಮತ ಗಳಿಸುವ ಸ್ಥಿತಿಯಲ್ಲಿ ಇಲ್ಲ.

ಜೆಡಿಎಸ್ ಗೆ ಕುಟುಂಬದ್ದೇ ಸಮಸ್ಯೆ: ಜ್ಯೋತೀಷಿಗಳ ಮಾತು ನಂಬಿ ಮುಂದಿನ ಮುಖ್ಯಮಂತ್ರಿ ತಾನೇ ಎಂಬ ಆತ್ಮ ವಿಶ್ವಾಸದಲ್ಲಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಇತರ ಎರಡು ಪಕ್ಷಗಳಿಗಿರುವಷ್ಟು ಚಿಂತೆ ಇದ್ದಂತೆ ಕಾಣುತ್ತಿಲ್ಲ. ರಾಜ್ಯವ್ಯಾಪಿ ಪ್ರವಾಸ ನಡೆಸಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಶ್ರಮ ಹಾಕುತ್ತಿದ್ದಾರೆ. ಶಾಸಕ ಶಿವಲಿಂಗೇಗೌಡ, ದೇವೇಗೌಡರ ಮಾನಸ ಪುತ್ರ ಎಂದೇ ಹೆಸರಾಗಿದ್ದ ವೈ.ಎಸ್.ವಿ.ದತ್ತ ಸೇರಿದಂತೆ ಅನೇಕ ಪ್ರಮುಖರು ಪಕ್ಷ ತೊರೆದಿರುವುದರಿಂದ ಸ್ವಲ್ಪ ಮಟ್ಟಿನ ಹಿನ್ನಡೆ ಆಗಿದೆ.

ಅದರ ಜತೆಗೆ ಹಾಸನದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕುಟುಂಬದಲ್ಲೇ ಒಡಕಿನ ದನಿ ಕಾಣಿಸಿಕೊಂಡಿದೆ. ಇದು ಇನ್ನೊಂದು ಸಮಸ್ಯೆ. ಕರಾರುವಕ್ಕಾಗಿ ಗೆಲ್ಲುವ  60 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿರುವ ಕುಮಾರಸ್ವಾಮಿ ಚುನಾವಣೆ ನಂತರ ಎರಡೂ ಪಕ್ಷಗಳು ಮತ್ತೆ ತಮ್ಮ ಮನೆ ಬಾಗಿಲಿಗೆ ಬೆಂಬಲ ಬಯಸಿ ಬರಲಿವೆ ಎಂಬ ನಿರೀಕ್ಷೆ ಹೊಂದಿದ್ದಾರೆ ಮತ್ತು ಇದೇ ಭರವಸೆಯ ಮೇಲೆ ಗೆಲ್ಲುವ ಸ್ಥಾನಗಳ ಮೇಲೆ ಮಾತ್ರ ತಮ್ಮ ದೃ಼ಷ್ಟಿ ಕೇಂದ್ರೀಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಒಕ್ಕಲಿಗರೇ ಪ್ರಧಾನವಾಗಿರುವ ಜಿಲ್ಲೆಗಳಲ್ಲಿ ತಮ್ಮ ಪಕ್ಷಕ್ಕಿರುವ ಬೆಂಬಲ ಕೈತಪ್ಪಬಾರದು ಎಂಬ ಮುಂದಾಲೋಚನೆಯಲ್ಲಿ ರಣ ತಂತ್ರ ರೂಪಿಸುತ್ತಿದ್ದಾರೆ.

ಪ್ರಚಾರದ ಅಖಾಡಕ್ಕೆ ದೇವೇಗೌಡರು: ಚುನಾವಣೆ ಹತ್ತಿರವಾದಂತೆ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರನ್ನೂ ಪ್ರಚಾರದ ಮುಂಚೂಣಿಗೆ ತಂದು ಪಕ್ಷದ ಪರ ಅನುಕಂಪ ಗಳಿಸಿಕೊಳ್ಳುವುದು ಅವರ ರಣ ನೀತಿ. ಅದೇನೇ ಇರಲಿ. ಸದ್ಯಕ್ಕಂತೂ ಕವಲು ದಾರಿಯಲ್ಲಿರುವ ರಾಜ್ಯ ರಾಜಕಾರಣ ಚುನಾವಣೆ ಪ್ರಕ್ರಿಯೆ ಪ್ರಾರಂಭದ ನಂತರ ಒಂದು ಸ್ಪಷ್ಟ ದಿಕ್ಕು ಹಿಡಿಯಬಹುದು. 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com