ಬಿಎಸ್ ವೈ ಉತ್ತರಾಧಿಕಾರಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಸೋಮವಾರ ( ಫೆ.27) ಯಡಿಯೂರಪ್ಪನವರ ಹುಟ್ಟು ಹಬ್ಬವೂ ಹೌದು. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ಮೋದಿ ದಿಲ್ಲಿಯಿಂದ ನೇರವಾಗಿ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ದಾರೆ.
ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾ
ಯಡಿಯೂರಪ್ಪ, ಪ್ರಧಾನಿ ಮೋದಿ- ಅಮಿತ್ ಶಾ

ಮುಂದೇನು?.... ಬಿ. ವೈ.ವಿಜಯೇಂದ್ರ ಪಟ್ಟಕ್ಕೆ ಬರುತ್ತಾರಾ?

ಹಿರಿಯ ನಾಯಕ,ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕೃತವಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ಹಂತದಲ್ಲಿ ರಾಜಕಿಯ ವಲಯಗಳಲ್ಲಿ ಉದ್ಬವಿಸಿರುವ ಪ್ರಶ್ನೆ ಇದು.

ಯಡಿಯೂರಪ್ಪನವರು ಬಹಳ ತಿಂಗಳ ಹಿಂದೆಯೇ ಇನ್ನು ಮುಂದೆ ತಾನು ಚುನಾವಣೆಗೆ ನಿಲ್ಲುವುದಿಲ್ಲ, ಶಿಕಾರಿಪುರ ಕ್ಷೇತ್ರದಿಂದ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಬಹಿರಂಗವಾಗೇ ಪ್ರಕಟಿಸಿದ್ದರು. ಆಗ ಚುನಾವಣೆಯ ಸನ್ನಿವೇಶ ಈಗಿನಷ್ಟು ತೀವ್ರವಾಗಿರಲಿಲ್ಲ. ಈ ಹೇಳಿಕೆಯ ಕುರಿತು ಬಿಜೆಪಿ ಹೈಕಮಾಂಡ್ ಕೂಡಾ ಗಂಭೀರವಾಗಿ ಪ್ರತಿಕ್ರಿಯಿಸಿರಲಿಲ್ಲ. ಪ್ರಧಾನಿ ಮೋದಿ ಜನಪ್ರಿಯತೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಕಾರ್ಯ ತಂತ್ರಗಳ ಮುಂದೆ ಯಡಿಯೂರಪ್ಪ ಶಕ್ತಿ ಏನೇನೂ ಅಲ್ಲ ಎಂಬ ಚರ್ಚೆಯೂ ರಾಜ್ಯ ಬಿಜೆಪಿಯಲ್ಲಿ ನಡೆದಿತ್ತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡಾ ಕಾರ್ಯಕರ್ತರ ಸಭೆಗಳಲ್ಲಿ ಯಡಿಯೂರಪ್ಪ ನಾಯಕತ್ವ ಅನಿವಾರ್ಯ ಅಲ್ಲ ಎಂದೇ ಮಾತನಾಡಿದ್ದರು. 

ವಿಧಾನಸಭೆ ಚುನಾವಣೆಗೆ ಇನ್ನೇನು ಅಧಿಸೂಚನೆ ಹೊರ ಬೀಳಲು ಕೆಲವೇ ದಿನಗಳು ಬಾಕಿ ಇವೆ. ಈ ಹಂತದಲ್ಲಿ ರಾಜಕೀಯ ವಾತಾವರಣದ ಒಳ ಹೊಕ್ಕು ನೋಡಿದರೆ ಬಿಜೆಪಿಯ ಸ್ಥಿತಿ ಹಿಂದಿನಷ್ಟು ಉತ್ತಮವಾಗಿಲ್ಲ. ಸ್ವತಂತ್ರವಾಗಿ ಗೆದ್ದು ಅಧಿಕಾರಕ್ಕೆ ಬರುವ ಸನ್ನಿವೇಶ ಇಲ್ಲ.

ಹೈಕಮಾಂಡ್ ನಡೆಸಿದ ಪ್ರತ್ಯೇಕ ಸಮೀಕ್ಷೆಗಳಲ್ಲೂ. ಕಾಂಗ್ರೆಸ್ ನ್ನು ಹಗುರಾಗಿ ಪರಿಗಣಿಸುವಂತಿಲ್ಲ. ತಮ್ಮದೇ ಪ್ರತ್ಯೇಕ ಪಕ್ಷ ಮಾಡಿಕೊಂಡಿರುವ ಮಾಜಿ ಸಚಿವ ಬಳ್ಳಾರಿಯ ಜನಾರ್ದನ ರೆಡ್ಡಿಯಿಂದಲೂ ಬಿಜೆಪಿಗೆ ಅಪಾಯವಿದೆ. ಇದಲ್ಲದೇ ಹಳೇ ಮೈಸೂರು ಪ್ರಾಂತ್ಯ ಗಳಲ್ಲಿ ಜೆಡಿಎಸ್ ನ್ನು ಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಎಂಬ ಸಂಗತಿ ಹೈಕಮಾಂಡ್ ನ್ನು ಕಂಗಾಲಾಗಿಸಿದೆ.

ಇನ್ನು ಪಂಚಮ ಸಾಲಿ ಮೀಸಲಾತಿ ಹೋರಾಟದ ನೆಪದಲ್ಲಿ ಯಡಿಯೂರಪ್ಪ ವಿರುದ್ದ ತಿರುಗಿ ಬಿದ್ದಿದ್ದ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಲಿಂಗಾಯಿತರ ಪರ್ಯಾಯ ನಾಯಕನಾಗಿ ಹೊರ ಹೊಮ್ಮಬಹುದೆಂಬ ವರಿಷ್ಠರ ನಿರೀಕ್ಷೆಯೂ ಸುಳ್ಳಾಗಿದೆ. 

ಮತ್ತೊಂದು ಕಡೆ ಕಾಂಗ್ರೆಸ್ ನಲ್ಲಿರುವ ಲಿಂಗಾಯಿತ ನಾಯಕರು ಸಭೆ ಸೇರಿ ಪಕ್ಷ ಅಧಿಕಾರಕ್ಕೆ ಬಂದರೆ ಲಿಂಗಾಯಿತರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸ ಬೇಕು ಎಂಬ ಆಗ್ರಹ ಮುಂದಿಟ್ಟು ನಿರಂತರ ಸಭೆಗಳನ್ನು ನಡೆಸುತ್ತಿರುವುದೂ ಬಿಜೆಪಿಯನ್ನು ಕಂಗೆಡಿಸಿದೆ. ಈ ಕಾರಣದಿಂದಲೇ ಅಳೆದೂ ಸುರಿದೂ ಮತ್ತೆ ಯಡಿಯೂರಪ್ಪ ನಾಯಕತ್ವಕ್ಕೆ ಹೈಕಮಾಂಡ್ ಶರಣಾಗುವ ಹಂತಕ್ಕೆ ಮುಟ್ಟಿದೆ.

ಕರ್ನಾಟಕ ಬಿಟ್ಟರೆ ದಕ್ಷಿಣದ ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಇಲ್ಲಿ ಅಧಿಕಾರ ಕೈ ತಪ್ಪಿ ಕಾಂಗ್ರೆಸ್ ಕೈಗೆ ಹೋದರೆ 2024 ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸುವ ಸಾಧ್ಯತೆಗಳೇ ಹೆಚ್ಚು. ಹೀಗಾದಾಗ ಮತ್ತೆ ಲೋಕಸಭೆಯಲ್ಲಿ ಬಹುಮತ ಗಳಿಸಿ ಅಧಿಕಾರಕ್ಕೆ ಏರುವ ಕನಸು ಭಗ್ನವಾಗಬಹುದು ಎಂಬ ಆತಂಕ ಬಿಜೆಪಿ ದಿಲ್ಲಿ ನಾಯಕತ್ವಕ್ಕಿದೆ.

ಈ ಹಿನ್ನಲೆಯಲ್ಲೇ ಅಮಿತ್ ಶಾ ಸೇರಿದಂತೆ  ಬಿಜೆಪಿಯ ಇಡೀ ಮಹಾನ್ ದಂಡ ನಾಯಕರ ಪಡೆಯೇ ಕರ್ನಾಟಕದ ಚುನಾವಣೆ ಗೆಲ್ಲಲು ಲಗ್ಗೆ ಇಟ್ಟಿದೆ. ದುರಂತ ಎಂದರೆ ಸ್ಥಳೀಯ ವಿಷಯಗಳನ್ನು ನಿರ್ಲಕ್ಷಿಸಿ ಬರೀ ಮೋದಿ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಚುನಾವಣೆ ಎದುರಿಸಿದರೆ ಫಲ ಕೊಡುವುದಿಲ್ಲ ಎಂಬ ಅಂತರಿಕ ವರದಿ ಬಿಜೆಪಿಯ ನಾಯಕತ್ವ ವನ್ನು ಚಿಂತೆಗೆ ದೂಡಿದೆ.

ಮಂಗಳೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈ ಬಲಪಡಿಸಿ ಎಂದು ಹೇಳಿ ಅಸಮಾಧಾನದ ಜೇನು ಗೂಡಿಗೆ ಕಲ್ಲು ಒಗೆದಿದ್ದಾರೆ. ಆದರೆ ಈ  ಹೇಳಿಕೆಯಿಂದ ಪ್ರಬಲ ಲಿಂಗಾಯಿತ ಸಮುದಾಯ ಪಕ್ಷವನ್ನು ಸಾರಾ ಸಾಗಟಾಗಿ ಬೆಂಬಲಿಸುವುದು ಖಚಿತ ಎಂಬ ಅವರ ನಿರೀಕ್ಷೆ ಸುಳ್ಳಾಗಿದೆ. 

ಬೊಮ್ಮಾಯಿ ಜನತಾ ಪರಿವಾರದಿಂದ ಬಂದವರು. ಪಕ್ಷದ ಮೂಲ ನಿವಾಸಿಗಳು ಈಗಲೂ ಅವರ ನಾಯಕತ್ವವನ್ನು ಒಪ್ಪಿಕೊಂಡಿಲ್ಲ. ಮತ್ತೆ ಅದೇ ಕೈಯ್ಯನ್ನೇ ಬಲಪಡಿಸಿ ಎಂದರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಅವರೇ ಎಂದು ಘೋಷಿಸಿದಂತಾಗುತ್ತದೆ. ಹಾಗಾದಾಗ ನಮ್ಮ ಪರಿಸ್ಥಿತಿ ಏನು? ಎಂಬುದು ಪಕ್ಷದಲ್ಲಿ  ಸಿಎಂ ಪಟ್ಟದ ಆಕಾಂಕ್ಷಿಗಳಾಗಿರುವ ಉಳಿದ ಪ್ರಮುಖ ನಾಯಕರ ಆತಂಕ. ಬೊಮ್ಮಾಯಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಪಕ್ಷಕ್ಕೆ ಅನುಕೂಲ ಆಗುವ ಬದಲು ಹೆಚ್ಚು ಹಾನಿಯೇ ಆಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪ್ರಸ್ತಾಪಿಸಿರುವ ಸರ್ಕಾರದ ಹಲವು ಹಗರಣಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿವೆ.ಈಗ ಮತ್ತೆ ಅವರನ್ನೇ ಪಕ್ಷ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋ಼ಷಿಸಿದರೆ ಅದರಿಂದ ಹಾನಿಯೇ ಹೆಚ್ಚು ಎಂಬ ಅಂಶವನ್ನು ಮೂಲ ನಿವಾಸಿಗಳ ಗುಂಪು ವರಿಷ್ಠರ ಮುಂದಿಟ್ಟಿದೆ. 

ದಿಲ್ಲಿ ನಾಯಕತ್ವ,ಪರ್ಯಾಯ ಕುರಿತಂತೆ ನಡೆಸಿದ ಅಧ್ಯಯನದಲ್ಲೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ.ಲಿಂಗಾಯಿತರನ್ನು ಬಿಟ್ಟರೆ ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತವಾಗಬಲ್ಲ ವ್ಯಕ್ತಿಯ ಆಯ್ಕೆಗೆ ನಡೆದ ಪ್ರಯೋಗವೂ ವಿಫಲವಾಗಿದೆ. ಈ ಸಮುದಾಯದ ಪ್ರಾಬಲ್ಯ ಇರುವ ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಚುನಾವಣೆಗೆ ಸಂಘಟನೆ ಸಜ್ಜುಗೊಳಿಸಲು ನಿಯೋಜಿತರಾಗಿದ್ದ ಕಂದಾಯ ಸಚಿವ ಆರ್.ಅಶೋಕ್, ನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಕಾಂಗ್ರೆಸ್, ಜೆಡಿಎಸ್ ತಂತ್ರಗಳನ್ನು ಎದುರಿಸಲಾಗದೇ ಅಸಹಾಯಕರಾಗಿ ಮರಳಿದ್ದಾರೆ. 

ಮಂಡ್ಯದಲ್ಲಿ ತಮ್ಮ ಪ್ರಾಬಲ್ಯ ಪ್ರದರ್ಶಿಸುವ ಉತ್ಸಾಹದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಬಹಿರಂಗ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತು ಆಡಿದ ಮಾತು ಬಿಜೆಪಿಗೆ ತಿರುಗು ಬಾಣವಾಗಿದೆ.ರಾಮನಗರ ಜಿಲ್ಲೆಯಲ್ಲೂ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧ ಶಕ್ತಿ ಪ್ರದರ್ಶಿಲು ಹೋಗಿ ಅಶ್ವತ್ಥ ನಾರಾಯಣ ಎಡವಿದ್ದಾರೆ.

ಬಿಜೆಪಿ ನಾಯಕತ್ವ ಈಗ ಮತ್ತೊಬ್ಬ ಒಕ್ಕಲಿಗ ಮುಖಂಡ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಯವರನ್ನು ಪ್ರಯೋಗಾಸ್ತ್ರ ವಾಗಿ ಬಳಸಲು ಹೊರಟಿದ್ದು ಅದೂ ನಿರೀಕ್ಷಿತ ಫಲ ಕೊಟ್ಟಿಲ್ಲ.ಈ ಎಲ್ಲ ಕಾರಣಗಳ ಹಿನ್ನಲೆಯಲ್ಲಿ ನೋಡುವುದಾದರೆ ಕಾಂಗ್ರೆಸ್ ,ಜೆಡಿಎಸ್ ವಿರುದ್ಧದ ಬಿಜೆಪಿಯ ಒಕ್ಕಲಿಗ ನಾಯಕತ್ವದ ಅಸ್ತ್ರವೂ ವಿಫಲವಾಗಿದೆ. 

ವಿಜಯೇಂದ್ರ ಹವಾ: ವಿಶೇಷ ಎಂದರೆ ಇತ್ತಿಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಡ್ಯದಲ್ಲಿ  ಇತ್ತಿಚೆಗೆ ನಡೆಸಿದ ಸಭೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು. ಮತ್ತು ಇದೇ ಸಭೆಯಲ್ಲೇ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂಬ ಘೋಷಣೆ ಕಾರ್ಯಕರ್ತರಿಂದ ಮೊಳಗಿರುವುದು. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಸಹಜ ಪ್ರತಿಕ್ರಿಯೆಯಾದರೂ  ಬಿಜೆಪಿಯಲ್ಲಿನ ಬೆಳವಣಿಗೆಗಳ ಆಳಕ್ಕಿಳಿದು ನೋಡಿದರೆ ಬೇರೆಯದೇ ಆದ ವಾತಾವರಣ ಕಂಡು ಬರುತ್ತದೆ. 

ಬುಧವಾರ ವಿಧಾನ ಸಭೆಯಲ್ಲಿ ತಮ್ಮ ವಿದಾಯದ ಚುಟುಕು ಭಾಷಣ ಮಾಡಿದ ಹಿರಿಯ ನಾಯಕ ಯಡಿಯೂರಪ್ಪ ಮತ್ತೆ ವಿಧಾನ ಸಭೆಗೆ ಪ್ರವೇಶಿಸುವುದಿಲ್ಲ,ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘಂಟಾ ಘೋಷವಾಗಿ ಹೇಳಿದ್ದಾರೆ. 

ಚುನಾವಣೆಯ ಹೊಸ್ತಿಲಲ್ಲಿ ಅವರ ಈ ಹೇಳಿಕೆ ಬಿಜೆಪಿಗೆ ತಿರುಗು ಆಣವಾಗುವ ಎಲ್ಲ ಸಾಧ್ಯತೆಗಳೂ ಇವೆ. ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತರಾಗುವ ಮಾತು ಆಡುತ್ತಿರುವಾಗಲೇ ಅವರ ಪುತ್ರ ವಿಜಯೇಂದ್ರ ರಾಜ್ಯದಾದ್ಯಂತ ಚುರುಕಾಗಿ ಪಕ್ಷದ ವೇದಿಕೆಗಳಲ್ಲಿ ಸ್ವತಂತ್ರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ತಂದೆಯ ನಂತರ ಮುಖ್ಯಮಂತ್ರಿ ಪಟ್ಟಕ್ಕೆ ಏರಬೇಕೆಂಬ ಸಹಜ ಹಂಬಲವೂ ಅವರಿಗಿದೆ. ಅನುಭವದ ವಿಚಾರಕ್ಕೆ ಬಂದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಡೆದ ಹಲವು ಉಪ ಚುನಾವಣೆಗಳ ನೇರ ಉಸ್ತುವಾರಿ ವಹಿಸಿಕೊಂಡು ಆ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿಗೆ ಕಾರಣರಾಗುವ ಮೂಲಕ ತಮ್ಮ ರಾಜಕೀಯ ಕಾರ್ಯ ಕ್ಷಮತೆ ಪ್ರದರ್ಶಿಸಿದ್ದಾರೆ. ಅವರ ಚುನಾವಣಾ ತಂತ್ರಗಳು ಪಳಗಿದ ಅನೇಕ ಹಿರಿಯರನ್ನೂ ಆಶ್ಚರ್ಯಕ್ಕೆ ಸಿಲುಕಿಸಿದೆ. ವಿಜಯೇಂದ್ರ ಇದೀಗ ಪಕ್ಷದಲ್ಲಿ ಸ್ವತಂತ್ರ ಅಸ್ತಿತ್ವ ಹೊಂದುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಇದೇ ವೇಳೆ ತಮ್ಮ ಪುತ್ರನನ್ನು ಉನ್ನತಾಧಿಕಾರದ ಕುರ್ಚಿಯಲ್ಲಿ ಪ್ರತಿಷ್ಠಾಪಿಸುವ ಸಹಜ ಮಹತ್ವಾಕಾಂಕ್ಷೆ ಯಡಿಯೂರಪ್ಪನವರಿಗೂ ಇದೆ. ಬಿಜೆಪಿ ಸಂಘಟನೆಯನ್ನು ವಿಜಯೇಂದ್ರ ನಿಧಾನವಾಗಿ ಆವರಿಸಿಕೊಳ್ಳುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಅವರೂ ಮುಖ್ಯಮಂತ್ರಿ ಸ್ಥಾನಕ್ಕೆ ಒಬ್ಬ ಪ್ರಬಲ ಸ್ಪರ್ಧಿ ಆದರೂ ಆಶ್ಚರ್ಯ ಏನಿಲ್ಲ. 

ಮೋದಿ ಮನವೊಲಿಕೆ: ಇದನ್ನು ಮನಗಂಡೇ ಇತ್ತೀಚೆಗೆ ಯಡಿಯೂರಪ್ಪ ಅವರನ್ನು ಇತ್ತೀಚೆಗೆ ದಿಲ್ಲಿಗೆ ಕರೆಸಿಕೊಂಡ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಬರುವಂತೆ ಮಾಡಿ,ನಿಮ್ಮ ಹಿತಾಸಕ್ತಿ ರಕ್ಷಣೆ ಭಾರ ನನಗಿರಲಿ ಎಂದು ಭರವಸೆ ನೀಡಿದ್ದಾರೆ.ಈ ಮಾತಿಗೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡದೇ ವಾಪಸಾಗಿದ್ದಾರೆ. 

ಕೇಂದ್ರ ಚುನಾವಣಾ ಸಮಿತಿ, ಮತ್ತು ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಾನು ಸೂಚಿಸಿದ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರೆ ಚುನಾವಣೆ ಯಿಂದ ದೂರ ಉಳಿಯುವ ಸಾಧ್ಯತೆಗಳೇ ಹೆಚ್ಚು.ಮುಂದಿನ ಮುಖ್ಯಮಂತ್ರಿ ಪಟ್ಟದ ಅಭ್ಯರ್ಥಿಯಾರೆಂದು ಘೋಷಣೆ ಆಗದ ಹೊರತೂ ಚುನಾವಣಾ ಕಣಕ್ಕೆ ಅವರು ಸಕ್ರಿಯವಾಗಿ ಧುಮುಕುವ ಸಂಭವ ಇಲ್ಲ. 

ಬಸವರಾಜ ಬೊಮ್ಮಾಯಿ ಸೇರಿದಂತೆ ಬೇರೆಯವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಯಡಿಯೂರಪ್ಪ ತಯಾರಿಲ್ಲ. ಆದರೆ ಅವರನ್ನು ನಿರ್ಲಕ್ಷಿಸಲು ಬಿಜೆಪಿ ರಾಷ್ಟ್ರೀಯ ನಾಯಕತ್ವಕ್ಕೂ ಧೈರ್ಯ ಇಲ್ಲ. ಮತ್ತೊಂದು ಕಡೆ ಹಿಂದುತ್ವದ ಪ್ರಯೋಗದಿಂದ ಚುನಾವಣೆ ಗೆಲ್ಲುವ ಕಾರ್ಯತಂತ್ರ ರಾಜ್ಯದಲ್ಲಿ ಫಲ ಕೊಡುವ ನಿರೀಕ್ಷೆಗಳೂ ಇಲ್ಲ. ಸದ್ಯಕ್ಕೆ ಬಿಜೆಪಿ ಹೈಕಮಾಂಡ್ ದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿಕೊಂಡ ಸ್ಥಿತಿ. 

ಮಾಧುಸ್ವಾಮಿ ಹೇಳಿಕೆ ಹಿನ್ನಲೆ ಏನು? ಮೊನ್ನೆ ವಿಧಾನ ಪರಿಷತ್ ನಲ್ಲಿ ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪನವರದ್ದೇ ಸಾರಥ್ಯ ಎಂದು ಹೇಳಿರುವುದರ ಹಿನ್ನೆಲೆಯೂ ಇದೇ ಎನ್ನಲಾಗುತ್ತಿದೆ. 

ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎಂಬ ಮಾತು ಬಿಜೆಪಿಯಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿದೆ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com