ಸಿದ್ದು ಹಣಿಯಲು ಮೂಲ ಕಾಂಗ್ರೆಸ್ಸಿಗರ ರಣ ತಂತ್ರ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಲು ಪೈಪೋಟಿಗೆ ಬಿದ್ದವರ ಕತೆ. ವಿಧಾನಸಭೆ ಚುನಾವಣೆ  ಅಧಿಕೃತ ಘೋಷಣೆಗೆ ಇನ್ನೂ ಮೂರು ತಿಂಗಳು ಇದೆ. 
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಲು ಪೈಪೋಟಿಗೆ ಬಿದ್ದವರ ಕತೆ. ವಿಧಾನಸಭೆ ಚುನಾವಣೆ ಅಧಿಕೃತ ಘೋಷಣೆಗೆ ಇನ್ನೂ ಮೂರು ತಿಂಗಳು ಇದೆ. ಯಾವ ಪಕ್ಷ ಗೆದ್ದು ಅಧಿಕಾರಕ್ಕೆ ಬರಲಿದೆ ಎಂಬುದರ ಬಗ್ಗೆ ಒಂದಷ್ಟು ಆಂತರಿಕ ಸಮೀಕ್ಷೆಗಳೂ ನಡೆಯುತ್ತಿವೆ. 

ಇಂತಹ ಸನ್ನಿವೇಶದಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರಸ್ಪರ ಜಿದ್ದಿಗೆ ಬಿದ್ದು ಮುಂದಿನ ಮುಖ್ಯಮಂತ್ರಿ ಗಾದಿಗಾಗಿ ಪೈಪೋಟಿ ಆರಂಭಿಸಿದ್ದಾರೆ. 

ಇಷ್ಟು ದಿನ ತೆರೆ ಮರೆಯಲ್ಲಿ ಬೆಂಬಲಿಗರ ಮಟ್ಟದಲ್ಲಿ ನಡೆಯುತ್ತಿದ್ದ ಚಟುವಟಿಕೆ ಇದೀಗ ಬಯಲಿಗೆ ಬಂದಿದ್ದು ಇಬ್ಬರೂ ಪರಸ್ಪರ ಶಕ್ತಿ ಪ್ರದರ್ಶನಕ್ಕಿಳಿದಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್ ನಲ್ಲಿ ಆರಂಭವಾಗಿರುವ ಈ ಕದನ ಮುಂದಿನ ದಿನಗಳಲ್ಲಿ ವಿವಾದದ ಪರಾಕಾಷ್ಠೆ ಮುಟ್ಟುವ ಎಲ್ಲ ಸಂಭವವೂ ಇದೆ. ರಾಜ್ಯದ ಅತ್ಯಂತ ಹಿರಿಯ ನಾಯಕ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಕಾರ್ಯಕರ್ತರ ಪಾಳೇಯಲ್ಲಿ ಅಧಿಕಾರದ ಹೊಸ ಕನಸು ಮೊಳಕೆಯೊಡೆದಿದೆ. ಇಂತಹ ಸನ್ನಿವೇಶದಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆಯೂ ಸಮೀಪಿಸುತ್ತಿರುವುದರಿಂದ ಉತ್ಸಾಹ ಇಮ್ಮಡಿಗೊಂಡಿದೆ. 

ಅಧಿಕಾರದಿಂದ ದೂರ ಇದ್ದು ಮತ್ತೆ ಆಡಳಿತ ಸೂತ್ರ ಹಿಡಿಯಬೇಕೆನ್ನುವ ಹಂಬಲ ಯಾವುದೇ ರಾಜಕೀಯ ಪಕ್ಷಕ್ಕೆ ಅಸಹಜವೇನಲ್ಲ. ಆದರೆ ಅಧಿಕಾರಕ್ಕೆ ಬರುವ ಕನಸು ಕಟ್ಟಿಕೊಂಡಿರುವ ಕಾಂಗ್ರೆಸ್ ನಾಯಕರ ಮಟ್ಟದಲ್ಲಿ ಎಲ್ಲವೂ ಸರಿ ಇಲ್ಲ. ಆಂತರಿಕ ಸಂಘರ್ಷ ಬೀದಿಗೆ ಬಂದಿದೆ. ಇದೇ ಈಗ ಮುಂದಿನ ದಿನಗಳಲ್ಲಿ ಅಧಿಕಾರದ ಹಾದಿಗೆ ಮುಳ್ಳಾಗಲಿದೆ.

ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪಕ್ಷದಲ್ಲಿ ರಣೋತ್ಸಾಹ ಇಮ್ಮಡಿಯಾಗಿದೆ. ಇದಕ್ಕೆ ಅವರ ಕಾರ್ಯ ವೈಖರಿಯೂ ಕಾರಣ. ಅಧ್ಯಕ್ಷರಾಗಿ ಪಕ್ಷಕ್ಕೊಂದು ಗುರುತು ತಂದುಕೊಟ್ಟಿದ್ದಾರೆ. ಇದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ.

ಇನ್ನು ವಿಧಾನಸಭೆಯ ಪ್ರತಿ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಸದನದ ಒಳಗೆ ಹಾಗೂ ಸದನದ ಹೊರಗೆ ಸರ್ಕಾರದ ಹಗರಣಗಳ ವಿರುದ್ಧ ಮುಗಿ ಬೀಳುತ್ತಿರುವುದು ಕಾಂಗ್ರೆಸ್ ಗೆ ಒಂದು ಸಮರ್ಥ ವಿರೋಧ ಪಕ್ಷ ಎಂಬ ಹೆಗ್ಗಳಿಕೆ ತಂದುಕೊಟ್ಟಿದೆ.

ಇವೆಲ್ಲವೂ ಸರಿ, ಸಂಘಟನೆಯ ರಥದ ಎರಡು ಗಾಲಿಗಳಂತೆ ಸಾಗಬೇಕಾಗಿದ್ದ ಇಬ್ಬರು ನಾಯಕರೂ ಪಕ್ಷದೊಳಗೆ ತಮ್ಮದೇ ಆದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸಮಸ್ಯೆ ಇರುವುದೇ ಇಲ್ಲಿ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಒಬ್ಬ ನಾಯಕನಿಗೆ ಇದು ಸಹಜವಾದ ಆಸೆ. ಆದರೆ ಪರಿಸ್ಥಿತಿ ಪಕ್ಷದೊಳಗೆ ಅವರು ಅಂದುಕೊಂಡಂತೆ ಇಲ್ಲ. ಅವರು ಹೋದಲ್ಲಿ ಬಂದಲ್ಲಿ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಎಂದು ಅವರನ್ನು ಬಹಿರಂಗವಾಗೇ ಬಿಂಬಿಸುತ್ತಿದ್ದರೆ, ಇನ್ನೇನು ಪದವಿ ತಮಗೆ ಸಿಕ್ಕೇಬಿಟ್ಟಿತೆಂಬ ಉಮೇದಿನಲ್ಲಿ ಸಿದ್ದರಾಮಯ್ಯ ಕೂಡಾ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಪಕ್ಷದ ಸಂಘಟನೆ ಮೇಲೆ ಹಿಡಿತ ಸಾಧಿಸುವ ಅವರ ಆಸೆಗೆ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಡೆಗೋಡೆಯಾಗಿದ್ದು ಇತ್ತೀಚೆಗೆ ಭಾಗವಹಿಸಿದ್ದ ಸಮುದಾಯದ ಕೆಲವು ಸಭೆಗಳಲ್ಲಿ ಮುಖ್ಯಮಂತ್ರಿ ಆಗುವ ತಮ್ಮ ಹಂಬಲ ಬಿಚ್ಚಿಟ್ಟಿದ್ದಾರೆ. 

ಚುನಾವಣೆಗೆ ಪಕ್ಷದ ಕಾಂಗ್ರೆಸ್ ಟಿಕೆಟ್ ಕೋರಿ ಬಂದಿರುವ ಅರ್ಜಿಗಳನ್ನು ಗಮನಿಸಿದರೆ ಇನ್ನಿಲ್ಲದ ಉತ್ಸಾಹವೇನೋ ಕಂಡು ಬಂದಿದೆ. ಆದರೆ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದೇ ಇನ್ನೂ ನಿಗೂಢ.

ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋತ ನಂತರ ಒಂದಷ್ಟು ದಿನ ಅತ್ತ ಹೆಜ್ಜೆಯನ್ನೇ ಇಟ್ಟಿರಲಿಲ್ಲ. ನಂತರದ ದಿನಗಳಲ್ಲಿ ಕ್ಷೇತ್ರದ ಜನರ ಮೇಲಿನ ತಮ್ಮ ಸಿಟ್ಟು ಮರೆತು ಅಲ್ಲಿಗೆ ಭೇಟಿ ನೀಡಿದ್ದರಾದರೂ ಮತ್ತೆ ಅಲ್ಲಿಂದಲೇ ಸ್ಪರ್ಧಿಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಅವರು ಬೆಂಗಳೂರಿನ ಚಾಮರಾಜಪೇಟೆ, ಕೋಲಾರ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಕೇಳಿ ಬರುತ್ತಿದೆಯಾದರೂ ಯಾವುದೂ ಖಚಿತವಾಗಿಲ್ಲ. 

ಈಗ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರವೂ ಅವರಿಗೆ ಈ ಬಾರಿ ಸುರಕ್ಷಿತವಲ್ಲ ಎಂಬ ವರದಿಗಳೂ ಇವೆ. ಹೀಗಾಗಿ ಕ್ಷೇತ್ರ ಆಯ್ಕೆ ವಿಚಾರದಲ್ಲಿ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣ, ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ. ಅವರನ್ನು ಆಂತರಿಕವಾಗಿ ವಿರೋಧಿಸುವ ನಾಯಕರು ಮುಖಂಡರ ಸಂಖ್ಯೆ ದಿನೇ ದಿನೇ ಬಲಗೊಳ್ಳುತ್ತಿದೆ. ಇದಲ್ಲದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೂ ಕೂಡಾ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಅಗತ್ಯವಾದ ಎಲ್ಲ ರಾಜಕೀಯ ತಂತ್ರಗಳನ್ನೂ ರೂಪಿಸುತ್ತಿವೆ. 

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಎದುರಿಸುತ್ತಿರುವ ಮುಖ್ಯ ಸಮಸ್ಯೆ ಎಂದರೆ ಮೂಲ ಕಾಂಗ್ರೆಸ್ ನಾಯಕರ ವಿಶ್ವಾಸ ಗಳಿಸದೇ ಇರುವುದು. ಅವರ ಬಗ್ಗೆ ಅನೇಕರಿಗೆ ಸಮ್ಮತಿಯಿಲ್ಲ. ಪಕ್ಷದ ನಾಯಕರಾಗಿದ್ದೂ ದಿನೇ ದಿನೇ ಏಕಾಂಗಿ ಆಗುತ್ತಿದ್ದಾರೆ, ಅವರ ಜತೆಗೆ ಉಳಿದು ನಿಖರವಾಗಿ ಅವರನ್ನು ಬೆಂಬಲಿಸುತ್ತಿರುವವರೆಂದರೆ ಕಾಂಗ್ರೆಸ್ ನಲ್ಲಿರುವ ಹಳೇ ಜನತಾ ಪರಿವಾರದ ಗೆಳೆಯರಾದ ರಮೇಶ್ ಕುಮಾರ್, ಡಾ. ಮಹದೇವಪ್ಪ ಸೇರಿದಂತೆ ಇನ್ನಿತರರು ಮಾತ್ರ.  

ಖರ್ಗೆ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ನಂತರ ಸಿದ್ದರಾಮಯ್ಯ ಜತೆಗಿದ್ದ ಅನೇಕ ಅಹಿಂದ ವರ್ಗದ ಮುಖಂಡರು ನಿಧಾನವಾಗಿ ದೂರ ಸರಿದು ತಮ್ಮ ನಿಷ್ಠೆ ಬದಲಾಯಿಸತೊಡಗಿದ್ದಾರೆ. ಇದೂ ಒಂದು ರೀತಿ ಅವರನ್ನು ಅಧೀರರನ್ನಾಗಿಸಿದೆ.

ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ ಸುಗಮವೇನಲ್ಲ. ಸುಮಾರು 50ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಲಿದೆ. ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಈ ಬಾರಿ ಸಿದ್ದರಾಮಯ್ಯ ಹರ ಸಾಹಸ ಪಡಬೇಕಿದೆ. ಇಂತಹ ಸನ್ನಿವೇಶದಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ ಅವರು ಪಕ್ಷದ ನಾಯಕತ್ವದ ವಿರುದ್ಧ ತಿರುಗಿ ಬೀಳುವ ಸಂಭವವೇ ಜಾಸ್ತಿ.

ಬೆಂಬಲಿಗರ ಪ್ರಕಾರ 45 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹೇಳಿದವರೇ ಅಭ್ಯರ್ಥಿಗಳಾಗುತ್ತಾರೆ ಮತ್ತೂ ಗೆಲ್ಲುತ್ತಾರೆ. ಆದರೆ ಚುನಾವಣೆಯಲ್ಲಿ ಫಲಿತಾಂಶ ಹೀಗೇ ಎಂದು ನಿರ್ಣಯಿಸಲು ಬರುವುದಿಲ್ಲ. ಗೆಲುವಿಗೆ ನಾನಾ ಅಂಶಗಳು ಕೆಲಸ ಮಾಡುತ್ತವೆ. ಈ ಸತ್ಯ ಸಿದ್ದರಾಮಯ್ಯ ಅವರಿಗೂ ಗೊತ್ತು. ಫಲಿತಾಂಶ ಕಾಂಗ್ರೆಸ್ ಪರವಾಗಿ ಬಂದು ತನಗೆ ಅಧಿಕಾರ ಸಿಗದೇ ಹೋದರೆ ಅವರು ಪಕ್ಷದಲ್ಲಿ ಮುಂದುವರಿಯುವುದು ಅನುಮಾನ. 
 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com