ಸಂದಿಗ್ಧದಲ್ಲಿ ದೇವೇಗೌಡ ಅಖಾಡಕ್ಕೆ; ಕಾರ್ಯತಂತ್ರ ಫಲ ಕೊಟ್ಟೀತೆ...? (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ದೇವೇಗೌಡರಿಗೆ ಮಗನನ್ನೂ ಬಿಡಲಾಗದ, ಜೊತೆಗಿದ್ದು ಸಂಘಟನೆಗಾಗಿ ಹೆಗಲು ಕೊಟ್ಟ ಹಿರಿಯ ಮುಖಂಡರನ್ನೂ ಬಿಡಲಾಗದ ಸಂದಿಗ್ಧ ಪರಿಸ್ಥಿತಿ.
ಜೆಡಿಎಸ್ ನಾಯಕ ಜಿಟಿ ದೇವೇಗೌಡ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಜೆಡಿಎಸ್ ನಾಯಕ ಜಿಟಿ ದೇವೇಗೌಡ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಜೆಡಿಎಸ್ ನ ಅಗ್ರ ಗಣ್ಯ ನಾಯಕ, ಮಾಜಿ ಪ್ರಧಾನಿ ದೇವೇಗೌಡರು ಮೈ ಕೊಡವಿಕೊಂಡು ಎದ್ದಿದ್ದಾರೆ. ಅವರ ಪಾಲಿಗೆ ಇದು ಈಗ ನಿರ್ಣಾಯಕ ಹೋರಾಟ. ಸಮುದಾಯದ ಪ್ರಶ್ನಾತೀತ ನಾಯಕನ ಪಟ್ಟ ತಮ್ಮ ಕೈ ಜಾರದಂತೆ ನೋಡಿಕೊಳ್ಳುವ ತವಕ ಅವರದ್ದು. ಮತ್ತೊಂದು ರೀತಿಯಲ್ಲಿ ಶತಾಯ ಗತಾಯ ಮುಂದಿನ ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೆ ಏರುವಂತೆ ಮಾಡುವ ಹಠ. 

ಗೌಡರಿಗೆ ಈಗ 90 ವರ್ಷ ವಯಸ್ಸು. ಪಕ್ಷ ಸಂಘಟನೆಗಾಗಿ ನಿರಂತರವಾಗಿ ರಾಜ್ಯ ಸುತ್ತಲು ಆರೋಗ್ಯ ಅನುಮತಿ ಕೊಡುತ್ತಿಲ್ಲ. ಆದರೆ ಅವರ ಉತ್ಸಾಹ ಮಾತ್ರ ಬತ್ತಿಲ್ಲ.   ಈ ಒಂದು ತಿಂಗಳ ಅವಧಿಯಲ್ಲಿ ಮೈಸೂರು, ಹಾಸನ ಜಿಲ್ಲೆಗಳ ಪ್ರವಾಸ ಕೈಗೊಂಡು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ. ಪಕ್ಷದ ಸಭೆಗಳಲ್ಲೂ ಭಾಗವಹಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಅಗತ್ಯವಾದ ಎಲ್ಲ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. 

ಅದರ ಮೊದಲ ಭಾಗ ಎಂಬಂತೆ ಪಕ್ಷದಿಂದ ದೂರ ಸರಿದು ಕಾಂಗ್ರೆಸ್-ಬಿಜೆಪಿ ಪಕ್ಷಗಳತ್ತ ವಾಲಿದ್ದ ಹಿರಿಯ ನಾಯಕ, ಶಾಸಕ ಜಿ.ಟಿ ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಇಡೀ ಜಿ.ಟಿ,ದೇವೇಗೌಡರ ಕುಟುಂಬ ಭಾವಾವೇಶದಿಂದ ಕಣ್ಣೀರು ಹಾಕಿದ್ದಲ್ಲದೇ ಮುಂದೂ ಅವರ ಜತೆ ನಿಲ್ಲುವ ವಚನ ನೀಡಿದೆ. ಅಲ್ಲಿಗೆ ಮೊದಲ ಸುತ್ತಿನ ರಾಜತಂತ್ರದಲ್ಲಿ ದೊಡ್ಡ ಗೌಡರು ಗೆದ್ದಿದ್ದಾರೆ. 

ಸಹಕಾರಿ ರಾಜಕಾರಣದಲ್ಲಿ ಪಳಗಿರುವ ಜಿ.ಟಿ, ದೇವೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆ.ಡಿ.ಎಸ್. ನಿಂದ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು. ಮೈಸೂರು ಭಾಗದಲ್ಲಿ ಅವರೊಬ್ಬ ಪ್ರಭಾವಿ ನಾಯಕರೂ ಹೌದು. ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗಿನ ಮುನಿಸಿನಿಂದ ಒಂದಷ್ಟು ಕಾಲ ಅಂತರ ಕಾಯ್ದುಕೊಂಡಿದ್ದರು.ಈ ನಡುವೆ ಅವರು ತಮ್ಮ ಹಳೆಯ ರಾಜಕೀಯ ವೈರಿ ಸಿದ್ದರಾಮಯ್ಯ ಜತೆಗೂ ರಾಜಿ ಆಗಿ, ಕಾಂಗ್ರೆಸ್ ಸೇರುವುದೂ ಖಚಿತವಾಗಿತ್ತು, ಮತ್ತೊಂದು ಕಡೆ ಬಿಜೆಪಿ ಜತೆಗೂ ಒಡನಾಟ ಇಟ್ಟುಕೊಂಡು ಹಲವು ಊಹಾ ಪೋಹಗಳಿಗೆ ಕಾರಣರಾಗಿದ್ದರು. ಈ ಸನ್ನಿವೇಶ ಅರಿತ ದೊಡ್ಡ ಗೌಡರು ತಾವೇ ಖುದ್ದಾಗಿ ಸಂಧಾನಕ್ಕಿಳಿದು ಯಶಸ್ವಿಯಾಗಿದ್ದಾರೆ. ಮತ್ತೊಂದು ರೀತಿಯಲ್ಲಿ ತಮ್ಮ ರಾಜಕೀಯ ವೈರಿ ಸಿದ್ದರಾಮಯ್ಯ ಅವರ ಕಾರ್ಯ ತಂತ್ರವನ್ನು ವಿಫಲಗೊಳಿಸಿದ್ದಾರೆ.     

ಗೌಡರೇ ನಾಯಕ: ರಾಜಕಾರಣದ ಸನ್ನಿವೇಶ ಏನೇ ಇರಲಿ, ಒಕ್ಕಲಿಗರಿಗೆ ಈಗಲೂ ದೇವೇಗೌಡರೇ ಪರಮೋಚ್ಚ ನಾಯಕ. ಸಮುದಾಯ ಅವರ ಬಗ್ಗೆ ಇಟ್ಟಿರುವ ಗೌರವ ಅಪರಿಮಿತ. ಒಕ್ಕಲಿಗರ ಪ್ರಾಬಲ್ಯದ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಅವರ ಪ್ರಭಾವ ಈಗಲೂ ಇದೆ. ಹೀಗಾಗಿ ತಮ್ಮ ಭದ್ರ ಕೋಟೆ ಕೈ ಜಾರದಂತೆ ಇಳಿ ವಯಸ್ಸಲ್ಲೂ ಅವರು ಅಖಾಡಕ್ಕಿಳಿದಿದ್ದಾರೆ. 

ಇನ್ನು ಹಾಸನ ಜಿಲ್ಲೆಯಲ್ಲೂ ಅವರದೇ ಪಕ್ಷದ ಶಾಸಕರಾದ ಶಿವಲಿಂಗೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಅಸಮಾಧಾನಿತರ ಪಟ್ಟಿಯಲ್ಲಿದ್ದಾರೆ. ತವರು ಜಿಲ್ಲೆಯಲ್ಲೂ ಪ್ರವಾಸ ಕೈಗೊಂಡಿದ್ದ ದೇವೇಗೌಡರು ಅತೃಪ್ತರೊಂದಿಗೆ ಮಾತಾಡಿದ್ದಾರೆ. ಬಹು ಮುಖ್ಯವಾಗಿ ಜಿಲ್ಲೆಯಲ್ಲಿ ಬಿಜೆಪಿ ನಿಧಾನವಾಗಿ ಬೇರು ಬಿಡುತ್ತಿರುವುದು ಕಾಂಗ್ರೆಸ್ ಮತ್ತೆ ತನ್ನ ಆಧಿಪತ್ಯ ಸ್ಥಾಪಿಸಲು ಸನ್ನಾಹ ನಡೆಸಿರುವುದು ಗೌಡರ ಆತಂಕಕ್ಕೆ ಕಾರಣವಾಗಿದೆ. 

ಇದು ನಿಜವಾದ ಸಮಸ್ಯೆ: ಸಂಘಟಾನಾತ್ಮಕ ವಿಚಾರಕ್ಕೆ ಬಂದರೆ, ಜೆಡಿಎಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅನೇಕ ನಿಲುವುಗಳು, ದೇವೇಗೌಡರ ಜತೆ ರಾಜಕಾರಣ ಮಾಡಿರುವ ಪಕ್ಷದ ಬಹಳಷ್ಟು ಹಿರಿಯ ಮುಖಂಡರುಗಳಿಗೆ ಸರಿ ಬರುತ್ತಿಲ್ಲ. ಈ ಹಿರಿಯರೊಂದಿಗೆ ಹೊಂದಿಕೊಂಡು ಹೋಗುವ ಪ್ರಯತ್ನವನ್ನು ಕುಮಾರಸ್ವಾಮಿಯೂ ಮಾಡುತ್ತಿಲ್ಲ. ಇದೇ ಸಮಸ್ಯೆ. ದೇವೇಗೌಡರದ್ದು ದೂರಗಾಮಿ ಲೆಕ್ಕಾಚಾರವಾದರೆ ಕುಮಾರಸ್ವಾಮಿಯದ್ದು ಆ ಕ್ಷಣದ ರಾಜಕೀಯ ಲಾಭ ಪಡೆಯುವ ದೃಷ್ಟಿಕೋನ. ಈ ಕಾರಣಕ್ಕೇ ಅವರು ಅನೇಕ ವಿಚಾರಗಳಲ್ಲಿ ವಿಫಲವಾಗುತ್ತಿದ್ದಾರೆ. ಸಂಘಟನೆ ಅವರ ಹಿಡಿತಕ್ಕೆ ಸಿಗುತ್ತಿಲ್ಲ. 

ಸಂದಿಗ್ಧದಲ್ಲಿ ಗೌಡರು: ದೇವೇಗೌಡರಿಗೆ ಈ ವಿಚಾರ ಗೊತ್ತಿಲ್ಲ ಎಂದಲ್ಲ. ಅವರದ್ದು ಮಗನನ್ನೂ ಬಿಡಲಾಗದ, ಜೊತೆಗಿದ್ದು ಸಂಘಟನೆಗಾಗಿ ಹೆಗಲು ಕೊಟ್ಟ ಹಿರಿಯ ಮುಖಂಡರನ್ನೂ ಬಿಡಲಾಗದ ಸಂದಿಗ್ಧ ಪರಿಸ್ಥಿತಿ. ಕುಮಾರಸ್ವಾಮಿ ಬಿಟ್ಟರೆ ಕುಟುಂಬದಲ್ಲಿ ಜನ ಮನ್ನಣೆ ಪಡೆಯಬಹುದಾದ ಇನ್ನೊಬ್ಬ ಸದಸ್ಯರು ಇಲ್ಲ. ಅಧಿಕಾರ ಪಡೆಯುವ ವಿಚಾರದಲ್ಲಿ ಹೊರಗಿನವರನ್ನು ನಂಬಿ ಕೂರುವ ಪರಿಸ್ಥಿತಿಯಲ್ಲಿ ದೇವೇಗೌಡರೂ ಇಲ್ಲ. ಹೀಗಾಗಿ ಚುನಾವಣೆ ಹತ್ತಿರ ಬರುತ್ತಿರುವ ಸನ್ನಿವೇಶದಲ್ಲಿ ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರೇ ಕಾರ್ಯಾಚರಣೆಗಿಳಿದಿದ್ದಾರೆ. ಆದರೆ ಇದು ಹಿಂದಿನಂತೆ ಚುನಾವಣೆಯಲ್ಲಿ ನಿರೀಕ್ಷಿತ ಫಲ ನೀಡುವುದೇ ಎಂಬುದನ್ನು ಸದ್ಯಕ್ಕೆ ಹೇಳುವಂತಿಲ್ಲ.

ಡಿ.ಕೆ.ಶಿ. ಸಾರಥ್ಯ:  ರಾಜ್ಯ ಕಾಂಗ್ರೆಸ್ ಗೆ ಡಿ.ಕೆ.ಶಿವಕುಮಾರ್ ಸಾರಥಿಯಾದ ನಂತರ ಬಹು ಮುಖ್ಯವಾಗಿ ಒಕ್ಕಲಿಗರ ಬೆಂಬಲವನ್ನು ಕ್ರೂಢೀಕರಿಸುವುದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಅವರೇ ರೂಪಿಸಿದ ಮೇಕೆದಾಟು ಪಾದಯಾತ್ರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾದ ಯಾತ್ರೆ, ಕಾಂಗ್ರೆಸ್ ಗೆ ಒಂದಷ್ಟು ಶಕ್ತಿ ತುಂಬಿದೆ. ಇದರ ಜತೆಗೇ ತಮ್ಮ ವಿರುದ್ಧ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಂದ ದಿನ ನಿತ್ಯ ನಡೆಯುತ್ತಿರುವ ವಿಚಾರಣೆ ಹೆಸರಿನ ಬಿಡುವಿಲ್ಲದ ಪ್ರಕ್ರಿಯೆಗಳ ರಾಜಕೀಯ ಲಾಭ ಪಡೆಯುವ ಪ್ರಯತ್ನದಲ್ಲೂ ಡಿಕೆಶಿ ಇದ್ದಾರೆ.

ಬಿಜೆಪಿ ಸರ್ಕಾರ ತನ್ನನ್ನು ಮಾತ್ರ ಗುರಿಯಾಗಿಸಿ ವಿಚಾರಣೆ ಹೆಸರಲ್ಲಿ ವಿನಾಕಾರಣ ಚಿತ್ರ ಹಿಂಸೆ ನೀಡುತ್ತಿದೆ ಇದು ಒಕ್ಕಲಿಗ ನಾಯಕತ್ವವನ್ನು ತುಳಿಯುವ ಪಿತೂರಿ ಎಂದು ಶಿವಕುಮಾರ್ ಬಿಂಬಿಸಿ ಸಮುದಾಯದ ಅನುಕಂಪ ಗಳಿಸುವ ಪ್ರಯತ್ನದಲ್ಲಿದ್ದಾರೆ. ಬಿಜೆಪಿ ಕೆಂಪೇಗೌಡರ ಪ್ರತಿಮೆ ರಾಜಕಾರಣ ನಡೆಸಿದೆ. ಅದು ಫಲ ಕೊಡುವ ಸಂಭವ ಇಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com