ಕಾಂಗ್ರೆಸ್ ನೂತನ ಸಾರಥಿ ಮುಂದೆ ಬೆಟ್ಟದಷ್ಟು ಸವಾಲು (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಅವರ ಮುಂದೆ ಸವಾಲುಗಳ ದೊಡ್ಡ ಬೆಟ್ಟವೇ ಇದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಅವರ ಮುಂದೆ ಸವಾಲುಗಳ ದೊಡ್ಡ ಬೆಟ್ಟವೇ ಇದೆ. ಅತ್ಯಂತ ಸಂಕಷ್ಟದ ಸಮಯದಲ್ಲಿ ಅಧ್ಯಕ್ಷ ಪದವಿ ವಹಿಸಿಕೊಂಡಿರುವ ಅವರು ರಾಷ್ಟ್ರದ ರಾಜಕಾರಣದ ಈಗಿನ ಸನ್ನಿವೇಶವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಅನುಭವದ ವಿಚಾರ ತೆಗೆದುಕೊಂಡರೆ ಅವರೊಬ್ಬ ಪರಿಪಕ್ವ ನಾಯಕ. ಐದು ದಶಕಗಳ ಸುದೀರ್ಘ ಅವಧಿಯಲ್ಲಿ ರಾಜಕಾರಣದಲ್ಲಿ ಹಂತ ಹಂತವಾಗಿ ನಾಯಕತ್ವದ ಪಟ್ಟಕ್ಕೆ ಏರಿದವರು. ವೈಯಕ್ತಿಕ ನೆಲೆಗಟ್ಟಿನಲ್ಲಿ ಅವರನ್ನು ವಿರೋಧಿಸುವವರು ಕಡಿಮೆ. ಸುದೀರ್ಘ ರಾಜಕಾರಣದ ಅವಧಿಯಲ್ಲಿ ಅವರು ಒಂದು ವರ್ಗಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಹೀಗಾಗೇ ಅವರು ಸರ್ವ ಸಮ್ಮತ ನಾಯಕರಾಗಿ ಈ ಹಂತಕ್ಕೆ ಮುಟ್ಟಿದ್ದಾರೆ. ಇದೇ ವೇಳೆ ಇಂದಿರಾ ಕುಟುಂಬದಂತೆ ಅವರು ಜನಪ್ರಿಯ ನಾಯಕರಲ್ಲ ಎಂಬ ವ್ಯಂಗ್ಯೋಕ್ತಿಗಳೂ ಕೇಳಿ ಬರುತ್ತಿವೆ. 

ಒಂದು ಕಾಲಕ್ಕೆ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಉತ್ತರದ ಛತ್ತೀಸ್ ಗಢ ಮತ್ತು ರಾಜಸ್ತಾನ ರಾಜ್ಯಗಳಿಗೆ ಸೀಮಿತವಾಗಿ ಅಧಿಕಾರ ಹಿಡಿದಿದೆ. ಕರ್ನಾಟಕವೂ ಸೇರಿದಂತೆ ದೇಶದ ಉಳಿದ ಕಡೆ ಪಕ್ಷಕ್ಕೆ ಪರಿಸ್ಥಿತಿ ಹೆಚ್ಚು ಆಶಾದಾಯಕವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಗೆ ಮತ್ತೆ ಅದರ ಗತ ವೈಭವವನ್ನು ಮರಳಿ ತರಲು ಖರ್ಗೆಯವರು ಅನುಸರಿಸ ಬಹುದಾದ ಕಾರ್ಯ ತಂತ್ರಗಳ ಬಗ್ಗೆ ಕುತೂಹಲವಿದೆ. ಈಗಾಗಲೇ ಹಿಮಾಚಲ ಪ್ರದೇಶ ರಾಜ್ಯದ ಚುನಾಣೆ ಘೋಷಣೆಯಾಗಿದೆ. ಗುಜರಾತ್ ನ ಚುನಾವಣೆಗೂ ಸದ್ಯದಲ್ಲೇ ಮುಹೂರ್ತ ನಿಗದಿಯಾಗಲಿದೆ.ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಅವರ ಮೇಲಿದೆ. 

2023ರಲ್ಲಿ ಕರ್ನಾಟಕವೂ ಸೇರಿದಂತೆ 9 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಇದಾದನಂತರ 2024ರಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಹೀಗಾಗಿ ಕಾಂಗ್ರೆಸ್ ನಾಯಕತ್ವಕ್ಕೆ ಇದೊಂದು ಸವಾಲೆ ಸರಿ. 

ಜನಪ್ರಿಯತೆ ದೃಷ್ಟಿಯಿಂದ ನೋಡಿದರೆ ಕಾಂಗ್ರೆಸ್ ನ ಯುವ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೋ ಪಾದಯಾತ್ರೆ ಆ ಪಕ್ಷದತ್ತ ಎಲ್ಲರೂ ತಿರುಗಿ ನೋಡುವಂತಾಗಿದೆ. ಮುಖ್ಯವಾಗಿ ತನ್ನ ಕುರಿತಾಗಿ ಕೇಳಿ ಬರುತ್ತಿದ್ದ ಅಪಹಾಸ್ಯದ ಮಾತುಗಳಿಗೆ ಈ ಪಾದಯಾತ್ರೆ ಮೂಲಕ ಉತ್ತರ ನೀಡಿದ್ದಾರೆ.ಈ ಪಾದಯಾತ್ರೆ ರಾಹುಲ್ ಗೆ ಒಬ್ಬ ಗಂಭಿರ ನಾಯಕ ಎಂಬ ಇಮೇಜ್ ಕೂಡಾ ನೀಡಿದೆ. ಕರ್ನಾಟಕದ ಮಟ್ಟಿಗೆ ಈ ಯಾತ್ರೆ ಕಾಂಗ್ರೆಸ್ ಗೆ ಹೊಸ ಚೈತನ್ಯ ತಂದುಕೊಟ್ಟಿದೆ ಎಂಬುದು ನಿಜವಾದರೂ ಸ್ಥಳೀಯವಾಗಿ ನಾಯಕರುಗಳ ನಡುವೆ ಇರುವ ಗುಂಪುಗಾರಿಕೆ,ಆಂತರಿಕ ತಿಕ್ಕಾಟ ಕೊನೆಗೊಂಡಿಲ್ಲ. ಕೊನೆಗೊಳ್ಳುವುದೂ ಇಲ್ಲ. ಮುಖ್ಯವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಸಮನ್ವಯತೆ ಸಾಧಿಸುವ ಪ್ರಯತ್ನವನ್ನು ರಾಹುಲ್ ಮಾಡಿದ್ದಾರೆ. ಇದರ ಫಲಿತಾಂಶಕ್ಕೆ ಚುನಾವಣೆ ಪ್ರಕ್ರಿಯೆ ತನಕ ಕಾಯಬೇಕು. 

ರಾಷ್ಟ್ರ ರಾಜಕಾರಣದ ಈಗಿನ ಸ್ಥಿತಿಯಲ್ಲಿ ಮತ್ತೆ ತೃತಿಯ ರಂಗಕ್ಕೆ ಚಾಲನೆ ನೀಡುವ ಪ್ರಯತ್ನಗಳು ಜೋರಾಗೇ ನಡೆದಿವೆ. ತೆಲಂಗಾಣದ ಮುಖ್ಯಮಂತ್ರಿ ಚಂದ್ರ ಶೇಖರ ರಾವ್ ಈ ಪ್ರಯತ್ನದ ಮುಂಚೂಣಿಯಲ್ಲಿದ್ದು ಈಗಾಗಲೇ ತಮ್ಮ ಟಿ.ಆರ್.ಎಸ್. ಪಕ್ಷದ ಹೆಸರನ್ನೂ ಬದಲಾಯಿಸಿದ್ದಾರೆ.ಇದೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲವಾಗಿವೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಬಿಹಾರದಲ್ಲಿ ನಿತೀಶ್ ಕುಮಾರ್, ಪಂಜಾಬ್ ಮತ್ತು ದೆಹಲಿಯಲ್ಲಿ ಕೇಜರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ, ಪ್ರಬಲವಾಗಿದೆ.ಇನ್ನು ದೇಶದ ರಾಜಕಾರಣದಲ್ಲಿ ಒಂದು ಕಾಲಕ್ಕೆ ಪಾರಮ್ಯ ಮೆರೆದಿದ್ದ ಕಮ್ಯೂನಿಸ್ಟ್ ಪಕ್ಷಗಳೂ ಈಗ ಮೊದಲಿದ್ದ ಸ್ಥಿತಿಯಲ್ಲಿ ಇಲ್ಲ. ಇಂತಹ ಸನ್ನಿವೇಶದಲ್ಲಿ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಅದರಿಂದ ಸಿಡಿದು ಹೋದ ನಾಯಕರನ್ನು ಮತ್ತೆ ಪಕ್ಷದ ತೆಕ್ಕೆಗೆ ತಂದು ಪಕ್ಷವನ್ನು ಬಲಿಷ್ಟಗೊಳಿಸಲು ಖರ್ಗೆಯವರು ಮುಂದಾಗಬೇಕಿದೆ. ಅದು ಅವರ ಪಾಲಿಗೆ ದೊಡ್ಡ ಸವಾಲೂ ಆಗಿದೆ. 

ಬಹು ಮುಖ್ಯವಾಗಿ ಬಿಜೆಪಿಯನ್ನು ವಿರೋಧಿಸಿ ತೃತೀಯ ರಂಗ ಕಟ್ಟಲು ಮುಂದಾಗಿರುವ ನಾಯಕರಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ.  ಇನ್ನು ಆಂಧ್ರದಲ್ಲಿ ವೈ.ಎಸ್.ಆರ್. ಪಕ್ಷದ ನಾಯಕತ್ವ ವಹಿಸಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇತ್ತೀಚೆಗೆ ಬಿಜೆಪಿಗೆ ಹತ್ತಿರ ವಾಗುವ ಪ್ರಯತ್ನದಲ್ಲಿದ್ದಾರೆ. ತಮಿಳುನಾಡಲ್ಲಿ ಡಿಎಂಕೆ ಮತ್ತೆ ಪ್ರಾಬಲ್ಯ ಸಾಧಿಸುವ ಪ್ರಯತ್ನದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯ ಬೇಕೆಂದರೆ ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ಜತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇದೆ. ರಾಜಕಾರಣದಲ್ಲಿ ಅಧಿಕಾರವೇ ಪ್ರಧಾನವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಈ ಪರಿಸ್ಥಿತಿಯನ್ನು ಸಂಧಾನದ ಮೂಲಕವೇ ಅತ್ಯಂತ ಜಾಣತನದಿಂದ  ಆ ಪಕ್ಷದ ನಾಯಕತ್ವ  ನಿರ್ವಹಿಸಬೇಕಿದೆ. 

ವ್ಯಕ್ತಿಗತವಾಗಿ ಖರ್ಗೆಯವರಿಗೆ ಈ ಸಾಮರ್ಥ್ಯ ಇದೆ ಎಂಬುದಕ್ಕೆ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂಬಂಧದ ತಿದ್ದುಪಡಿ ಗೆ ಸಂಸತ್ತಿನ ವಿವಿಧ ಪಕ್ಷಗಳ ನಾಯಕರ ಮನವೊಲಿಸುವಲ್ಲಿ  ಅವರು ಯಶಸ್ವಿಯಾಗಿದ್ದೇ ಉದಾಹರಣೆ. ಅನುಭವದಲ್ಲಿ ಹಿರಿಯರಾದ ಖರ್ಗೆ ಅಧ್ಯಕ್ಷರಾಗಿ ಕೆಲವೊಂದು ಸಂದರ್ಭಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವ ಸಂದರ್ಭ ಬಂದಾಗ ಸೋನಿಯಾ ಹಾಗೂ ರಾಹುಲ್ ಅವರ ಮರ್ಜಿಗೆ ಅನುಸಾರವಾಗಿ ನಡೆದುಕೊಳ್ಳುತ್ತಾರೆಯೆ ಅಥವಾ ಸ್ವತಂತ್ರ ನಿರ್ಣಯ ಕೈಗೊಳ್ಳುತ್ತಾರೆಯೆ? ಎಂಬುದು ಸದ್ಯದ ಪ್ರಶ್ನೆ. 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com