
ಬಿಜೆಪಿ ಲೋಗೋ
ಮತ್ತೆ ಮೀಸಲಾತಿ ವಿವಾದ ಭುಗಿಲೆದ್ದಿದೆ. ಇದು ಬಿಜೆಪಿ ಸರ್ಕಾರಕ್ಕೆ ವರವಾಗುತ್ತಾ ಶಾಪವಾಗುತ್ತಾ? ಎಂಬುದೇ ಸದ್ಯದ ಪ್ರಶ್ನೆ. ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈಡೇರಿಸುವ ಮೂಲಕ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿದ್ದು ಈಗ ಕಾನೂನಾತ್ಮಕ ಹಾಗೂ ಸಾಂವಿಧಾನಾತ್ಮಕ ಸಮಸ್ಯೆಗಳನ್ನು ಹುಟ್ಟು ಹಾಕಿದೆ.
ಎಡವಿದ ಸರ್ಕಾರ: ಹೀಗೆ ಬೇಡಿಕೆಯನ್ನು ಪರಿಗಣಿಸುವ ಅವಸರದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ. 50 ನ್ನು ಮೀರಬಾರದೆಂಬ ಸುಪ್ರೀಂ ಕೋರ್ಟ್ ನ ಆದೇಶ ಮೂಲೆಗೊತ್ತಲಾಗಿದೆ.. ಇದು ವಿವೇಚನಾ ಪೂರ್ವಕವಾಗಿಯೇ ಎಸಗಿರುವ ಮತ್ತೊಂದು ಎಡವಟ್ಟು. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸ ಬೇಕೆಂದು ವಾಲ್ಮೀಕಿ ಪೀಠದ ಶ್ರೀಗಳು ಸುದೀರ್ಘ ಪ್ರತಿಭಟನೆ ಕೈಗೊಂಡಿದ್ದರು. ಅದು ವಿವಾದದ ಪರಾಕಾಷ್ಠೆ ಮುಟ್ಟಿತ್ತು. ಬಹು ಮುಖ್ಯವಾಗಿ ಸಚಿವ ಶ್ರೀರಾಮುಲು ಕೂಡಾ ಈ ವಿಚಾರದಲ್ಲಿ ಸರ್ಕಾರದ ವಿಳಂಬ ನೀತಿಯ ವಿರುದ್ಧ ಮುನಿಸಿಕೊಂಡಿದ್ದರು . ಸರ್ಕಾರ ಈ ಬೇಡಿಕೆಯನ್ನು ಈಡೇರಿಸಿದೆ. ಈ ವಿಚಾರದಲ್ಲಿ ಚರ್ಚೆ ಆಗುತ್ತಿರುವ ಅಂಶ ಎಂದರೆ ಅಗತ್ಯ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೇ ಸರ್ಕಾರ ಬರೀ ಕಣ್ಣೊರೆಸುವ ಕೆಲಸ ಮಾಡಿತೆ? ಎಂಬುದು.
ಚುನಾವಣಾ ತಂತ್ರ: ವಿಧಾನಸಭೆಗೆ ಚುನಾವಣೆ ನಡೆಯಲು ಇನ್ನು ಕೆಲವೇ ತಿಂಗಳು ಇರುವ ಸಂದರ್ಭದಲ್ಲಿ ಸರ್ಕಾರ ಮೀಸಲಾತಿ ಘೋಷಣೆ ಮಾಡುವ ಮೂಲಕ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿದೆ.
ಶ್ರೀರಾಮುಲು ಮುನ್ನೆಲೆಗೆ: ಮತ್ತೊಂದು ಕಡೆ ಬಿಜೆಪಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಷ್ಟೇನೂ ಪ್ರಾಮುಖ್ಯತೆ ಇಲ್ಲದೇ ನೇಪಥ್ಯಕ್ಕೆ ಸರಿದಿದ್ದ ಸಚಿವ ಶ್ರೀರಾಮುಲು ಈಗ ಸರ್ಕಾರ ಮೀಸಲಾತಿ ಘೋಷಣೆ ಮಾಡಿದನಂತರ ಅದರ ಯಶಸ್ಸಿನ ಫಲ ಪಡೆಯಲು ಮುಂದಾಗಿದ್ದಾರೆ. ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡು ಅವರನ್ನು ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ತಮ್ಮ ಪಕ್ಷದ ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಲು ಹೊರಟಿದೆ.
ಯಾವುದೇ ಒಂದು ರಾಜಕೀಯ ಪಕ್ಷ ಚುನಾವಣೆ ಸಮೀಪಿಸುತ್ತಿರುವ ಸನ್ನಿವೇಶದಲ್ಲಿ ಇಂತಹ ಕಾರ್ಯತಂತ್ರ ರೂಪಿಸುವುದು ಸಹಜ. ಆದರೆ ಈ ಮೀಸಲಾತಿ ಘೋಷಣೆಯನ್ನು ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಪರಿಣಾಮಗಳನ್ನು ಸಾಂವಿಧಾನಿಕ ನೆಲೆಯಲ್ಲಿ ನಿಂತು ಜಾರಿಗೊಳಿಸಿದ್ದಿದ್ದರೆ ಸರ್ಕಾರದ ತೀರ್ಮಾನ ನಿಜವಾಗಿ ತುಳಿತಕ್ಕೊಳಗಾದ ಸಮುದಾಯದ ಪರ ಆಗಿರುತ್ತಿತ್ತು.
ಆದರೆ ಆಳಕ್ಕಿಳಿದು ನೋಡಿದಾಗ ಸರ್ಕಾರದ ಸಾಮಾಜಿಕ ಬದ್ದತೆಯ ಕುರಿತಾದ ನೈಜತೆ ಬಗ್ಗೆಯೇ ಸಂಶಯಗಳು ಮೂಡುತ್ತವೆ. ಅಷ್ಟೇ ಅಲ್ಲ, ಇದರಲ್ಲಿ ಸಾಮಾಜಿಕ ಕಳಕಳಿಗಿಂತ ಕೇವಲ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಕೈಗೊಂಡಿರುವುದು ಸ್ಪಷ್ಟವಾಗುತ್ತದೆ. ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣ ಶೇ.50 ನ್ನು ಮೀರಬಾರದು ಎಂದು ತಾಕೀತು ಮಾಡಿರುವ ಸಂಗತಿ ಸರ್ಕಾರಕ್ಕೂ ಗೊತ್ತು, ಆದರೆ ವಾಸ್ತವ ಪರಿಣಾಮಗಳನ್ನು ಪರಿಶೀಲನೆ ಮಾಡದೇ ನಿರ್ಧಾರ ಕೈಗೊಂಡಿದ್ದು ನಿಜಕ್ಕೂ ಆಶ್ಚರ್ಯಕರ.
ಇದನ್ನೂ ಓದಿ: ಸೊರಗಿದ ಕಾಂಗ್ರೆಸ್ ಗೆ ಖರ್ಗೆ ಚೈತನ್ಯ ತುಂಬುವರೆ…? (ಸುದ್ದಿ ವಿಶ್ಲೇಷಣೆ)
ಎಡವಿದ ಮುಖ್ಯಮಂತ್ರಿ: ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಇದು ಗೊತ್ತಿಲ್ಲವೆಂದೇ ನಲ್ಲ.ಒಂದು ವೇಳೆ ಗೊತ್ತಿಲ್ಲದಿದ್ದರೆ ಆ ಕುರಿತಾದ ವಾಸ್ತವ ಸಂಗತಿಗಳನ್ನು ಮನವರಿಕೆ ಮಾಡಿಕೊಡುವ ಪರಿಣಿತ ಹಿರಿಯ ಅಧಿಕಾರಿಗಳ ವರ್ಗವೇ ಸರ್ಕಾರದ ಮಟ್ಟದಲ್ಲಿ ಇದೆ. ಹಾಗಿದ್ದರೂ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದೇಕೆ ? ಎಂಬುದೇ ಈಗ ಸದ್ಯದ ಪ್ರಶ್ನೆ.
ಹರಕೆಯ ಕುರಿ? ಹೊಸ ಮೀಸಲಾತಿ ಜಾರಿಯಾಗಲು ಅನೇಕ ತಾಂತ್ರಿಕ ವಿಚಾರಗಳು ಅಡ್ಡಿಯಾಗಿವೆ. ಮೊದಲನೆಯದಾಗಿ ಈಗ ಒಳ ಜಾತಿಗಳ ಮೀಸಲಾತಿಗಳ ಪ್ರಮಾಣವನ್ನು ಸರ್ಕಾರ ಹೇಗೆ ನಿಗದಿ ಪಡಿಸುತ್ತದೆ ಎಂಬುದು ಒಂದು ಪ್ರಶ್ನೆಯಾದರೆ, ಉದ್ದೇಶಿತ ಮೀಸಲಾತಿಯ ಪುನರ್ ಹಂಚಿಕೆಯ ಸಂದರ್ಭದಲ್ಲಿ ಸಮತೋಲನ ಕಾಯ್ದುಕೊಳ್ಳಲು ಈಗಾಗಲೇ ಪಟ್ಟಿಯಲ್ಲಿದ್ದು ಸೌಲಭ್ಯ ಅನುಭವಿಸುತ್ತಿರುವ ಮತ್ತೊಂದು ಸಮುದಾಯದ ಮೀಸಲಾತಿಯ ಪ್ರಮಾಣವನ್ನು ಕಡಿತಗೊಳಿಸಲು ಸರ್ಕಾರ ಮುಂದಾಗುತ್ತದೆಯೆ ಎಂಬುದು ಸ್ಪಷ್ಟವಾಗಬೇಕಿದೆ.
ಮರ್ಮ ಏನು? ಬಿಜೆಪಿ ಶಾಸಕರಾದ ಯತ್ನಾಳ್,ಅರವಿಂದ ಬೆಲ್ಲದ ಮೊದಲಾದವರು ಅಲ್ಪ ಸಂಖ್ಯಾತ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ಹಿಂತೆಗೆದುಕೊಂಡು ಅದನ್ನು ಪರಿಶಿಷ್ಟ ಜಾತಿ- ವರ್ಗಗಳಿಗೆ ಹಂಚಿಕೆ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ. ಹಾಗೊಂದು ವೇಳೆ ಆ ಕ್ರಮಕ್ಕೆ ಮುಂದಾದರೆ ಆ ಸಮುದಾಯ ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿ ತಡೆ ಆದೇಶ ತರಲು ಮುಂದಾಗುತ್ತದೆ. ಅಲ್ಲಿಗೆ ಈ ಎಲ್ಲ ಕಸರತ್ತುಗಳು ವಿಫಲವಾಗಲಿದೆ. ಇದೇ ವಾದ ರಾಜ್ಯದ ಹಿರಿಯ ಕಾನೂನು ಪಂಡಿತರದ್ದು. ಹೊಸ ಮೀಸಲಾತಿಗೆ ಕೇಂದ್ರದ ಅನುಮೋದನೆ ಬೇಕು. ಆದರೆ ಅಷ್ಟು ಸುಲಭವಾಗಿ ಮತ್ತು ಶೀಘ್ರವಾಗಿ ಸಿಗುತ್ತದೆಯೆ? ಎಂಬುದು ಸದ್ಯದ ಪ್ರಶ್ನೆ.
ನಾಯಕರಿಲ್ಲ: ರಾಜಕಾರಣದ ವಿಚಾರಕ್ಕೆ ಬಂದರೆ ಬಿಜೆಪಿಗೆ ಸಮರ್ಥ ಹಿಂದುಳಿದ ವರ್ಗದ ನಾಯಕನ ಕೊರತೆ ಇದೆ. ಪ್ರಬಲ ಸಮುದಾಯವಾದ ಲಿಂಗಾಯಿತರು ಆ ಪಕ್ಷವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಆಸರೆ ಬಿಟ್ಟರೆ ಪಕ್ಷಕ್ಕೆ ರಾಜ್ಯದಲ್ಲಿ ಅಸ್ತಿತ್ವವೇ ಇಲ್ಲ.
ಸೂತ್ರದ ಬೊಂಬೆಗಳು: ಇನ್ನು ಸಂಘ ಪರಿವಾರದ ಮೂಲದ ಈಶ್ವರಪ್ಪ, ಅರವಿಂದ ಲಿಂಬಾವಳಿ, ಜನತಾ ಪರಿವಾರದ ಮೂಲದ ರಮೇಶ್ ಜಿಗಜಿಣಗಿ, ಸಚಿವ ಗೋವಿಂದ
ಕಾರಜೋಳ ಆವರುಗಳಿಗೆ ಹಿರಿತನವಿದ್ದರೂ ಪ್ರಬಲ ಮತ್ತು ಪ್ರಶ್ನಾತೀತ ನಾಯಕರಾಗಿ ಬೆಳೆಯುವ ಅವಕಾಶವನ್ನು ಸಂಘ ಪರಿವಾರ ಹಾಗೂ ಬಿಜೆಪಿ ನೀಡಿಲ್ಲ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿ ಯಲ್ಲಿಟ್ಟುಕೊಂಡು ಸರ್ಕಾರ ಮೀಸಲಾತಿಯ ಹೊಸ ಕರತ್ತು ಆರಂಭಿಸಿದೆ ಎಂಬ ವಾದದಲ್ಲಿ ಅರ್ಥವಿದೆ. ಮತ್ತೊಂದು ಕಡೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿರುವ ವರದಿಯೂ ಶೈತ್ಯಾಗಾರ ದಲ್ಲೇ ಇದೆ. ಮೀಸಲಾತಿ ಘೋಷಣೆಯ ಹಿಂದೆ ಕಾಂಗ್ರೆಸ್ ನ ಮತ ಬ್ಯಾಂಕುಗಳನ್ನು ಒಡೆಯುವ ಬಿಜೆಪಿಯ ನಿಗೂಢ ಕಾರ್ಯತಂತ್ರ ಅಡಗಿದೆ ಎಂಬ ವಾದದಲ್ಲಿ ಸತ್ಯವಿದೆ. ಆ ಉದ್ದೇಶ ಸಫಲವಾದರೆ ಕಾಂಗ್ರೆಸ್ ಗೆ ಓಟ್ ಬ್ಯಾಂಕ್ ದುರ್ಬಲವಾಗಿ ಅದರ ಲಾಭ ಬಿಜೆಪಿಗೆ ಆಗಬಹುದು ಎಂಬುದು ಲೆಕ್ಕಾಚಾರ.
ಹರಕೆಯ ಕುರಿ?: ಅದರ ಭಾಗವಾಗಿಯೇ ಸಚಿವ ಶ್ರೀರಾಮುಲು ಅವರಿಗೆ ಬಿಜೆಪಿ ಹಿಂದೆಂದಿಗಿಂತ ಹೆಚ್ಚು ಪ್ರಾಮುಖ್ಯತೆ ನೀಡಿ ಅವರನ್ನು ಹಿಂದುಳಿದ ವರ್ಗದ ನಾಯಕ ಎಂದು ಬಿಂಬಿಸಲು ಹೊರಟಿದೆ. ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ್ನು ಎದುರಿಸಲು ಅವರನ್ನು ಬಳಸಿಕೊಳ್ಳಲಿದೆ. ಹಾಗೆಂದ ಮಾತ್ರಕ್ಕೆ ಅವರನ್ನು ಭವಿಷ್ಯದ ಮುಂಚೂಣಿಯ ನಾಯಕ ಎಂದು ಒಪ್ಪಿಕೊಳ್ಳಲು ಬಿಜೆಪಿ ಧೈರ್ಯ ಮಾಡುತ್ತಿಲ್ಲ.
ಯಗಟಿ ಮೋಹನ್
yagatimohan@gmail.com