ಸೊರಗಿದ ಕಾಂಗ್ರೆಸ್ ಗೆ ಖರ್ಗೆ ಚೈತನ್ಯ ತುಂಬುವರೆ…? (ಸುದ್ದಿ ವಿಶ್ಲೇಷಣೆ)

- ಯಗಟಿ ಮೋಹನ್ಇತಿಹಾಸ ಮತ್ತೆ ಮರುಕಳಿಸುವ ಸನ್ನಿವೇಶ ಎದುರಾಗಿದೆ. ಅದೂ 53 ವರ್ಷಗಳ ನಂತರ. ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಖಿಲಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಇತಿಹಾಸ ಮತ್ತೆ ಮರುಕಳಿಸುವ ಸನ್ನಿವೇಶ ಎದುರಾಗಿದೆ. ಅದೂ 53 ವರ್ಷಗಳ ನಂತರ. ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಖಿಲಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲಿದ್ದಾರೆ. ಅವರ ಆಯ್ಕೆ ಖಚಿತ ಎನ್ನುವ ವಾತಾವರಣವಿದೆ. ಕರ್ನಾಟಕದ ಮಟ್ಟಿಗೆ ಹಾಗೂ ಕಾಂಗ್ರೆಸ್ ಪಕ್ಷದ ಮಟ್ಟಿಗೆ ಇದೊಂದು ಹೆಮ್ಮೆ ತರುವ ವಿಚಾರ.

ಸರಿ ಸುಮಾರು ನಾಲ್ಕೂವರೆ ದಶಕಗಳ ನಂತರ ಕಾಂಗ್ರೆಸ್ ಪಕ್ಷ ಇಂದಿರಾಗಾಂಧಿ ಕುಟುಂಬದ ಹಿಡಿತದಿಂದ ಬಿಡುಗಡೆ ಹೊಂದುತ್ತಿದ್ದು ಹೊರಗಿನವರೊಬ್ಬರು ಅಧ್ಯಕ್ಷರಾಗುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ವಿಭಜನೆಯ ಪೂರ್ವದಲ್ಲಿ ಅಂದರೆ 1968 ರಲ್ಲಿ ಕನ್ನಡಿಗರೇ ಆದ ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪನವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಆದರೆ ಅವರು ಆ ಹುದ್ದೆಯಲ್ಲಿ ಇದ್ದುದು ಕೇವಲ ಒಂದೇ ವರ್ಷ. ಒಂದು ವರ್ಷದ ಅವಧಿ ಪೂರ್ಣಗೊಳಿಸುವ ಸಂಭ್ರಮದಲ್ಲಿರುವಾಗಲೇ ಇಂದಿರಾ ಗಾಂಧಿಯವರ ಜತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಪದವಿಯಿಂದ ಕೆಳಗಿಳಿದು ಕಾಂಗ್ರೆಸ್ ಕೂಡಾ ಇಬ್ಭಾಗವಾಯಿತು.

ಗೆಲುವು ನಿಶ್ಚಿತ: ಅಂದಿನಿಂದ ಹಲವು ಬಾರಿ ಇಬ್ಭಾಗವಾದರೂ ಇಂದಿರಾ ಗಾಂಧಿ ಕುಟುಂಬವೇ ಪಕ್ಷದ ಮೇಲೆ ಹಿಡಿತ ಸಾಧಿಸಿದೆಯಾದರೂ ಇಂದಿರಾ ಅವರ  ಅಕಾಲಿಕ ಮರಣದ ನಂತರ ಸಾಂಸ್ಥಿಕವಾಗಿ ಸೊರಗಿದೆ.   ಇಂತಹ ಹೊತ್ತಿನಲ್ಲೇ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಅವರ ಗೆಲುವೂ ನಿಶ್ಚಿತ. ಯಾಕೆಂದರೆ ಅವರ ಎದುರಾಳಿ ಅಭ್ಯರ್ಥಿ ಶಶಿ ತರೂರ್ ಕುರಿತು ಪಕ್ಷದೊಳಗೇ ಅಸಮಧಾನಗಳಿವೆ. ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಡಿದು ಭಿನ್ನಮತದ ಕೂಗೆಬ್ಬಿಸಿದ್ದ ಗುಂಪೂ ಈಗ ಖರ್ಗೆಯವರ ಬೆಂಬಲಕ್ಕೆ ನಿಂತಿದೆ. ಮುಂದಿನ ದಿನಗಳಲ್ಲಿ ಅವರನ್ನು ಬೆಂಬಲಿಸುವವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು.                                          

ನಿಷ್ಠೆ ಪ್ರಶ್ನಾತೀತ:  ಅನುಭವ ಮತ್ತು ನಿಷ್ಠೆಯ ವಿಚಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆಯವರ ಪಕ್ಷ ನಿಷ್ಠೆ ಪ್ರಶ್ನಾತೀತ. 70 ರ ದಶಕದಲ್ಲಿ ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರಿಂದ ಆರಿಸಲ್ಪಟ್ಟು ಹಂತ ಹಂತವಾಗಿ ರಾಜಕಾರಣದಲ್ಲಿ ಮೇಲೇರಿದ ಖರ್ಗೆಯವರು ಪಕ್ಷ ಹಾಗೂ ಇಂದಿರಾ ಕುಟುಂಬದ ಕುರಿತು ಇಟ್ಟಿರುವ ನಿಷ್ಠೆ ಅಪರಿಮಿತವಾದದು. ಬಿಕ್ಕಟ್ಟಿನ ಸಂದರ್ಭಗಳಲ್ಲೆಲ್ಲ ಅವರು ತಮ್ಮ ಗೆಳೆತನಕ್ಕೆ ಬದಲಾಗಿ ನಿಷ್ಠೆಯನ್ನೇ ಆರಿಸಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪರಿಸ್ಥಿತಿಯ ಪಿತೂರಿಯಿಂದ ಮುಖ್ಯಮಂತ್ರಿ ಪದವಿ ಸೇರಿದಂತೆ ರಾಜಕೀಯ ಅಧಿಕಾರಗಳು ಕೈ  ತಪ್ಪಿದರೂ ಅವರು ಸಿಡಿದೇಳದೇ ಮೌನಕ್ಕೆ ಶರಣಾಗಿದ್ದಾರೆ.

ದಕ್ಷ ನಾಯಕ: ಖರ್ಗೆಯವರು ಎಸ್.ಎಂ ಕೃಷ್ಣ ಅವರ ಬದಲಾಗಿ 99 ರಲ್ಲೇ ಮುಖ್ಯಮಂತ್ರಿ ಆಗಬೇಕಿತ್ತು. ಯಾಕೆಂದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದರು. ಅವರ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲವಾದರೂ ಹಿಂದಿನ ಹೀನಾಯ ಸ್ಥಿತಿಯಿಂದ ಚೇತರಿಸಿಕೊಂಡು ಸಂಘಟನಾತ್ಮಕವಾಗಿ ಬಲಯುತಗೊಂಡಿತು ಎಂಬುದು ನಿರ್ವಿವಾದ.

ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿಯೂ ಅವರ ಕಾರ್ಯಕ್ಷಮತೆ ಅತ್ಯಂತ ಪ್ರಶಂಸನೀಯ. ಪ್ರತಿಯೊಂದು ವಿಚಾರವನ್ನೂ ಸಮಗ್ರ ಅಧ್ಯಯನ ನಡೆಸಿ ಸರ್ಕಾವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಅವರ ಕಾರ್ಯ ವೈಖರಿ ಪಕ್ಷಾತೀತವಾಗಿ ಪ್ರಶಂಸೆಗೆ ಪಾತ್ರವಾಗಿದೆ.

ಖರ್ಗೆ ಗಂಭೀರ ಸ್ವಭಾವದ ನಾಯಕ. ಉಳಿದವರಂತೆ ಅತಿ ವಾಚಾಳಿಯಲ್ಲ. ಆದರೆ ರಾಜಕಾರಣದ  ಐದು ದಶಕಗಳ ಅವಧಿಯಲ್ಲಿ ಅವರು ಮುಖ್ಯಮಂತ್ರಿ ಪದವಿ ಬಿಟ್ಟರೆ ಉಳಿದಂತೆ ಎಲ್ಲ ಪ್ರಮುಖ ಅಧಿಕಾರದ ಸ್ಥಾನಗಳಲ್ಲಿ ವಿರಾಜಿಸಿದ್ದಾರೆ. ಐದು ದಶಕಗಳ ರಾಜಕೀಯದ ಅನುಭವ ಅವರಿಗಿದೆ. ಕಾಂಗ್ರೆಸ್ ಪಕ್ಷದ ರಾಷ್ಡ್ರೀಯ ಸಮಿತಿಯ ಅಧ್ಯಕ್ಷರಾಗಿ ಪಕ್ಷಕ್ಕೆ ಯಾವರೀತಿ ಚೈತನ್ಯ ತುಂಬುತ್ತಾರೆ ಎಂಬುದೇ ಈಗ ಕುತೂಹಲ.

ಮತ್ತೆ ಗತ ವೈಭವದತ್ತ ಕಾಂಗ್ರೆಸ್?: ಕಾಂಗ್ರೆಸ್ ಪಕ್ಷಕ್ಕೆ ಅದರ ಗತ ವೈಭವವನ್ನು ಮರಳಿ ತರಲು ಬಹಳಷ್ಟು ಪರಿಶ್ರಮ ಹಾಕಬೇಕಾಗಿದೆ. ದೇಶದ ಸದ್ಯದ ರಾಜಕೀಯ ಸನ್ನಿವೇಶವನ್ನು ಮೋದಿ ಪ್ರಣೀತ ರಾಜಕಾರಣವೇ ಆವರಿಸಿಕೊಂಡಿದೆ. ಒಂದು ರೀತಿಯಲ್ಲಿ 70-80 ರ ದಶಕದಲ್ಲಿ ಇಂದಿರಾಗಾಂಧಿಯವರು ದೇಶದ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಇಂಥದೇ ವಾತಾವರಣ ಇತ್ತು. ಇಂಡಿಯಾ ಈಸ್ ಇಂದಿರಾ… ಇಂದಿರಾ ಈಸ್ ಇಂಡಿಯಾ ಎಂಬ ಭಟ್ಟಂಗಿತನದ ಘೋಷಣೆ ಆಗಿನ ಸಂದರ್ಭದಲ್ಲಿ ಚಾಲ್ತಿಯಲ್ಲಿತ್ತು. 

ಮೋದಿ ಭಜನೆ ತಂದ ಮುಜುಗರ:  ಅದೇ ಸನ್ನಿವೇಶ ಮತ್ತೆ ಮರುಕಳಿಸಿದೆ. ಪ್ರಧಾನಿ ಹುದ್ದೆಯಲ್ಲಿ  ಈಗ ಮೋದಿ ವಿಜೃಂಭಿಸುತ್ತಿದ್ದಾರೆ. ಬಿಜೆಪಿಯಲ್ಲಿ ಮೋದಿ ಭಜನೆ ಈಗ ವ್ಯಾಪವಾಗಿದೆ. ಎಲ್ಲೆಲ್ಲೂ ಮೋದಿ ಬ್ರಾಂಡ್  ಮಾರುಕಟ್ಟೆಯ ಜನಪ್ರಿಯ ಸರಕಾಗಿದೆ. ಒಂದರ್ಥದಲ್ಲಿ ವ್ಯಕ್ತಿ ಪೂಜೆಯನ್ನು ಕಟುವಾಗಿ ವಿರೋಧಿಸುತ್ತಿದ್ದ ಸಂಘ ಪರಿವಾರ ಮತ್ತು ಬಿಜೆಪಿ ಈಗ ಅದನ್ನೇ ಒಪ್ಪಿಕೊಳ್ಳುವ ಅಸಹಾಯಕತನಕ್ಕೆ ಸಿಲುಕಿದೆ,

ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಸಮೀಕರಣವೇ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ಈಗಿನ ಸನ್ನಿವೇಶದಲ್ಲಿ ರಾಜ್ಯ- ರಾಷ್ಟ್ರ ರಾಜಕಾರಣದ ಮೇಲೂ ಇದು ಪ್ರಭಾವ ಬೀರುತ್ತದೆ ಎಂಬುದು ನಿರ್ವಿವಾದ. ರಾಜ್ಯ ವಿಧಾನಸಭೆಗೆ ಮುಂದಿನ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್ಯದಲ್ಲಿ ತಮ್ಮದೇ ಪಕ್ಷವನ್ನು ಅಧಿಕಾರಕ್ಕೆ ತರಲು ಖರ್ಗೆಯವ ಅನುಸರಿಸುವ ಕಾರ್ಯತಂತ್ರಗಳೂ ಪ್ರಮುಖವಾಗುತ್ತವೆ.

ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮುಖ್ಯಸ್ಥರಾಗಿ ಕೆಲವೊಂದು ನಿಷ್ಠುರ ನಿರ್ಧಾರಗಳನ್ನು ಕೈಗೊಳ್ಳಲೇ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಉಳಿದ ಪ್ರಮುಖ ನಾಯಕರ ವಿರೋಧವನ್ನು ಅವರು ಎದುರಿಸಬೇಕಾಗುತ್ತದೆ. ಇಂತಹ ಸಂಭವನೀಯ ಅಪಾಯಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಸಂಶಯಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.

ರಾಜ್ಯದಲ್ಲಿನ ಪರಿಸ್ಥಿತಿ ಕಾಂಗ್ರೆಸ್ ಗೆ ಕೊಂಚ ಅನುಕೂಲವಾಗಿದೆ.ಸಹಜವಾಗೇ ಆಡಳಿತ ಬಿಜೆಪಿ ಇದರಿಂದ ಕಂಗೆಟ್ಟಿದೆ. ಸರ್ಕಾರದ ವಿರುದ್ಧದ ಜನಾಭಿಪ್ರಾಯ ನಿಧಾನವಾಗಿ ಗಟ್ಟಿಗೊಳ್ಳುತ್ತಿದೆ. ಮತ್ತೊಂದು ಕಡೆ ಜೆಡಿಎಸ್ ಕೂಡಾ ತನ್ನ ಸಾಂಪ್ರದಾಯಿಕ ಮತಗಳನ್ನು ಗಟ್ಟಿಗೊಳಿಸಿಕೊಳ್ಳುವತ್ತ ಗಮನ ಹರಿಸಿದೆ.  ಸ್ವತಹಾ ಮಾಜಿ ಪ್ರಧಾನಿ ದೇವೇಗೌಡರೇ ಅದರತ್ತ ಗಮನ ಹರಿಸಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಖರ್ಗೆಯವರ ನಾಯಕತ್ವವನ್ನು ಎಲ್ಲರೂ ಒಪ್ಪುತ್ತಾರೆ ಎಂದೇನೂ ಇಲ್ಲ.  ಪಕ್ಷದ ಸಾಂಪ್ರದಾಯಿಕ ಮತಗಳು ಇದ್ದುದರಲ್ಲಿ ಒಂದಷ್ಟು ಗಟ್ಟಿ ಆಗಬಹುದು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಅದರಿಂದ ಲಾಭ ನಿರೀಕ್ಷಿಸುವುದು ಕಷ್ಟ.

ಕುತೂಹಲ: ಪ್ರಬಲ ಜಾತಿ- ಸಮುದಾಯಗಳೇ  ರಾಜ್ಯದಲ್ಲಿ ಅಧಿಕಾರ ರಾಜಕಾರಣದ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಈಗಾಗಲೇ ಇತಿಹಾಸದ ಬೆಳವಣಿಗೆಗಳಿಂದ ಋಜುವಾತಾಗಿದೆ. ಇಂತಹ ಸನ್ನಿವೇಶದಲ್ಲಿ ಆ ಸಮುದಾಯಗಳು ಖರ್ಗೆಯವರ ನಾಯಕತ್ವವನ್ನು ಯಾವ ರೀತಿ ಸ್ವೀಕರಿಸುತ್ತವೆ ಎಂಬ ಪ್ರಶ್ನೆಯೂ ತಲೆ ಎತ್ತಿದೆ.  ಮುಂದೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಮುಖ್ಯಮಂತ್ರಿ ಆಗಬೇಕೆಂಬ ಮಹದಾಸೆ ಖರ್ಗೆಯವರಿಗೂ ಇದೆ. ಇಷ್ಟು ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಅವರನ್ನು  ಇಷ್ಟಪಡುವ  ಎಲ್ಲ ಸಮುದಾಯಗಳ ಸ್ನೇಹಿತರ ದೊಡ್ಡ ಬಳಗವೇ ಇದೆ ಎಂಬುದು ನಿಜ.

ಆದರೆ ಅಧಿಕಾರದ ರಾಜಕಾರಣದ ಪ್ರಶ್ನೆ ಬಂದಾಗ ವ್ಯವಸ್ಥೆಯಲ್ಲಿನ ಕಾಣದ ಕೈಗಳು ಕೆಲಸ ಮಾಡುತ್ತವೆ. ಈ ಕಾರಣದಿಂದಲೇ ಅವರಿಗೆ ಸಿಗಬೇಕಾದ ಕೆಲವು ಅಧಿಕಾರ ಸ್ಥಾನಗಳು ಅರ್ಹತೆಯಿದ್ದರೂ ತಪ್ಪಿ ಹೋಗಿವೆ. ಈ ಸತ್ಯ ಅವರಿಗೂ ಗೊತ್ತು. ಐದು ದಶಕಗಳ ಪರಿ ಪಕ್ವವಾದ ರಾಜಕೀಯ ಅನುಭವ ಅವರದ್ದು.

ವಯಸ್ಸಿನದೇ ಪ್ರಶ್ನೆ: ಅವರಿಗೆ ಈಗ 80 ವರ್ಷ. ಇತ್ತೀಚೆಗೆ ಕೆಲವು ತಿಂಗಳ ಹಿಂದಷ್ಟೇ ಒಂದು ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದರೆ ದೇಶದಾದ್ಯಂತ  ಸಂಘಟನೆಗೆ ನಿರಂತರ ಪ್ರವಾಸ ಕೈಗೊಳ್ಳಬೇಕು.ಅದು ಪರಿಶ್ರಮದ ಕೆಲಸ. ಹೊಸ ಹೊಣೆಗಾರಿಕೆ ವಹಿಸಿಕೊಳ್ಳಲು ಸಿದ್ಧವಾಗಿರುವ ಅವರತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ.  

ಭಾಷೆಯ ದೃಷ್ಟಿಯಿಂದ ನೋಡುವುದಾದರೆ ಅವರಿಗೆ ಇಂಗ್ಲಿಷ್ ಹಿಂದಿ, ಉರ್ದು ಭಾಷೆಗಳು ಕರಗತವಾಗಿವೆ, ರಾಷ್ಟ್ರ ಮಟ್ಟದಲ್ಲಿ ಸಂವಹನಕ್ಕೆ ಇಷ್ಟು ಸಾಕು. ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ನೋಡಿದರೆ ಈಗಿನ ಪರಿಸ್ಥಿತಿಯಲ್ಲಿ  ಅಧ್ಯಕ್ಷ ಸ್ಥಾನಕ್ಕೆ  ಅವರೆ ಉತ್ತಮ ಆಯ್ಕೆ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com