ಬಿಜೆಪಿಯಲ್ಲಿ ಯಡಿಯೂರಪ್ಪ ಒಂಟಿಯೇ? (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ತಾವೇ ಕಟ್ಟಿದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಒಂಟಿಯಾಗಿದ್ದಾರೆಯೆ ಎಂಬ ಪ್ರಶ್ನೆ ಮೂಡಿದೆ.
ಯಡಿಯೂರಪ್ಪ
ಯಡಿಯೂರಪ್ಪ

ತಾವೇ ಕಟ್ಟಿದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಒಂಟಿಯಾಗಿದ್ದಾರೆಯೆ ಎಂಬ ಪ್ರಶ್ನೆ ಮೂಡಿದೆ. 

ಒಂದು ಕಾಲಕ್ಕೆ ಪ್ರಶ್ನಾತೀತ ನಾಯಕರಾಗಿ, ಬೆಂಬಲಿಗರು, ಅಧಿಕಾರದ ಹುದ್ದೆಗಳ ಆಕಾಂಕ್ಷಿಗಳ ನಡುವೆ ಪರಾಕ್ರಮಿಯಂತೆ ಬೀಗುತ್ತಿದ್ದ, ಪಕ್ಷದ ದಿಲ್ಲಿ ದೊರೆಗಳೂ ನಡು ಬಗ್ಗಿಸುವಂತೆ ಮಾಡಿದ್ದ ಅವರೀಗ ಯಾರಿಗೂ ಬೇಡವಾಗುತ್ತಿದ್ದಾರೆ.

ಒಂದು ಕಾಲಕ್ಕೆ ಅವರನ್ನೇ ಆರಾಧಿಸುತ್ತಿದ್ದ ಮುಖಂಡರು, ಕೇವಲ ತೋರಿಕೆಯ, ನಿಷ್ಠೆ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿಯ ವಿದ್ಯಮಾನಗಳ ಆಳಕ್ಕಿಳಿದು ಶೋಧಿಸಿದರೆ ಅಲ್ಲಿ ಬೇರೆಯದೇ ಕಾರ್ಯ ತಂತ್ರಗಳು ನಡೆಯುತ್ತಿವೆ. ಆದರ ಒಟ್ಟು ತಾತ್ಪರ್ಯ ಅಂದರೆ ಯಡಿಯೂರಪ್ಪ ಹೊರತು ಪಡಿಸಿ ಬಿಜೆಪಿ ಸಂಘಟನೆಯನ್ನು ರಾಜ್ಯದಲ್ಲಿ ಭದ್ರ ಮಾಡಿಕೊಳ್ಳುವುದು, ಆ ಮೂಲಕ ಪಕ್ಷಕ್ಕೆ ಅವರ ನಾಯಕತ್ವ ಅನಿವಾರ್ಯವಲ್ಲ ಎಂಬ ಸಂದೇಶವನ್ನು ಹಂತ ಹಂತವಾಗಿ ರವಾನಿಸುವುದು.

ಯಡಿಯೂರಪ್ಪ ಇತ್ತೀಚೆಗಷ್ಠೆ ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಹೈಕಮಾಂಡ್ ಅವರ ನಾಯಕತ್ವದ ಅನಿವಾರ್ಯತೆ ಇನ್ನೂ ಪಕ್ಷಕ್ಕಿದೆ ಎಂಬ ಸಂದೇಶವನ್ನು ಹೊರ ಜಗತ್ತಿಗೆ ಸಾರಿದೆ. ಪ್ರಾರಂಭದ ದಿನಗಳಲ್ಲಿ ಬೆಂಬಲಿಗರು ಈ ಬೆಳವಣಿಗೆಯಿಂದ ಸಂತೋಷ ಪಟ್ಟಿದ್ದರೆ ಪಕ್ಷದೊಳಗಿನ ಅವರ ವಿರೋಧಿಗಳು ಆತಂಕಕ್ಕೆ ಒಳಗಾಗಿದ್ದೂ ನಿಜ. 

ಆದರೆ ವಸ್ತು ಸ್ಥಿತಿಯೇ ಬೇರೆ. ಮೇಲ್ನೋಟಕ್ಕೆ ಪಕ್ಷದಲ್ಲಿ ಯಜಮಾನಿಕೆ ಸಿಕ್ಕಿದ್ದರೂ ಅದರ ಬೀಗದ ಕೈ ಕೇಂದ್ರದ ನಾಯಕರ ಬಳಿಯೇ ಇದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿ ಬಿಜೆಪಿ ಹೈಕಮಾಂಡ್ ಅವರನ್ನು ನಡೆಸಿಕೊಳ್ಳುತ್ತಿದೆ. 

ತೀರಾ ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಂಡರೆ ಪಕ್ಷದ ಎಲ್ಲ ಪ್ರಮುಖ ನಿರ್ಧಾರಗಳೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಬಿಜೆಪಿ ಅದ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಇಚ್ಛೆಗನುಸಾರವಾಗಿಯೇ ಆಗುತ್ತಿದೆ. ಇಲ್ಲಿ ಯಡಿಯೂರಪ್ಪ ಅಭಿಪ್ರಾಯಕ್ಕೆ ಯಾವುದೇ ಮನ್ನಣೆ ಇಲ್ಲ. ಕೇಂದ್ರ ಸಮಿತಿಗಳಲ್ಲಿ ಅಧಿಕಾರ ಸಿಕ್ಕ ಹುರುಪಿನಲ್ಲಿ ಹಾಗೂ ಅದಕ್ಕೂ ಮೊದಲು ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವುದಾಗಿ ಯಡಿಯೂರಪ್ಪ ಘೋಷಿಸಿ ಅದಕ್ಕೆ ತಯಾರಾಗಿದ್ದರು. ಆದರೆ ಕೇಂದ್ರದ ವರಿಷ್ಠರು ``ನಾವು ಹೇಳುವವರೆಗೂ ನೀವು ಪ್ರವಾಸ ಕೈಗೊಳ್ಳುವ ಅವಶ್ಯಕತೆಯಿಲ್ಲ” ಎಂದು ಕಡ್ಡಿ ಮುರಿದಂತೆ ಅವರ ಉತ್ಸಾಹವನ್ನು ಚಿವುಟಿ ಹಾಕಿದರು. 

ಬಿಜೆಪಿಯ ಶಾಸಕ, ಬಸವನಗೌಡ ಪಾಟೀಲ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಬಹಿರಂಗ ಯುದ್ಧ ಘೋಷಿಸಿ ,ಹೋದಲ್ಲಿ ಬಂದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಕೇಂದ್ರದ ಬಿಜೆಪಿ ನಾಯಕರಿಗೂ ಗೊತ್ತು. ವಿಚಿತ್ರ ಎಂದರೆ ದಿಲ್ಲಿಯ ಬಿಜೆಪಿ ನಾಯಕರಿಗೆ ಹಾಗೂ ಪಕ್ಷದ ರಾಜ್ಯಾದ್ಯಕ್ಷರಿಗೆ ಇದು ಅಶಿಸ್ತು ಎಂದೇ ಅನ್ನಿಸಿಲ್ಲ. ಯತ್ನಾಳ್ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿಲ್ಲ.ಒಂದು ರೀತಿಯಲ್ಲಿ ಇದು ಬಿಜೆಪಿ ಹೈಕಮಾಂಡೇ ರಚಿಸಿ ನಿರ್ದೇಶಿಸುತ್ತಿರುವ ನಾಟಕ. ಯಡಿಯೂರಪ್ಪ ಒಬ್ಬರೇ ನಾಯಕರಲ್ಲ ಎಂದು ಬಿಂಬಿಸುವ ಹುನ್ನಾರವೂ ಇದರ ಹಿಂದಿದೆ. 

ಸೊರಗಿದ್ದ  ಬಿಜೆಪಿಯನ್ನು ಜನ ಪರ ಪಕ್ಷವಾಗಿ ಸಂಘಟಿಸಿ, ರಾಜ್ಯದಲ್ಲಿ ಭದ್ರ ಬುನಾದಿ ಕಲ್ಪಿಸಿದ್ದು ಯಡಿಯೂರಪ್ಪ ಎಂಬುದು ನಿರ್ವಿವಾದ. ರೈತರು ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಅವರು ನಡೆಸಿದ ಹೋರಾಟವೇ ಜನ ಅವರತ್ತ ತಿರುಗಿ ನೋಡುವಂತಾಯಿತು.. 

ಇವತ್ತಿಗೂ ರಾಜ್ಯದಲ್ಲಿ ಅವರನ್ನು ಬೆಂಬಲಿಸುವ ಕಾರ್ಯಕರ್ತರ ಪಡೆ ಇದೆ.ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಯಲ್ಲಿ ಅವರು ಕೈಗೊಂಡಿರುವ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಸಿಕ್ಕುತ್ತಿರುವ ಪ್ರತಿಕ್ರಿಯೆಯೇ ಸಾಕ್ಷಿ. 

ಪಕ್ಷದಲ್ಲಿರುವ  ಅವರ ವಿರೋಧಿಗಳಿಗೆ ಈ ಜನಪ್ರಿಯತೆ ಆತಂಕ ತಂದಿದೆ.ಬಿಎಸ್ ವೈ ಮತ್ತೆ ಬಲಿಷ್ಠರಾದರೆ ಮುಂದೆ ತಮ್ಮ ಮಾತು ನಡೆಯುವುದಿಲ್ಲ ಎಂಬ ನಿಲುವು ಅವರೆಲ್ಲರದ್ದು.  ಇನ್ನು ಯಡಿಯೂರಪ್ಪ ಅವರೇ ರಾಜಕೀಯ ಬೆಳೆಸಿ ಅಧಿಕಾರಕ್ಕೆ ತಂದ ಮುಖಂಡರೂ ಈಗ ಅವರ ಪರವಾಗಿಲ್ಲ. 

ಈ ಪರಿಸ್ಥಿತಿಗೆ ಒಂದು ರೀತಿಯಲ್ಲಿ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೈಗೊಂಡ ಕೆಲವು ತೀರ್ಮಾನಗಳೂ ಕಾರಣ. ಅದರಿಂದಾಗೇ ಅವರೀಗ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗಿ ಬಂದಿದೆ. ಒಂದು ಕಾಲಕ್ಕೆ ಅವರಿಂದ ಎಲ್ಲ ರೀತಿಯ ಲಾಭ ಪಡೆದ ಬಿಜೆಪಿ ಹೈಕಮಾಂಡ್ ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪರೋಕ್ಷವಾಗಿ ಬೆದರಿಸುತ್ತಿದೆ, ಹೀಗಾಗಿ ಅವರು ಅಸಹಾಯಕರಾಗಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬೆಂಬಲಿಗರನೇಕರಿಗೆ ಪಕ್ಷದ ಟಿಕೆಟ್ ಸಿಗುವುದು ಅನುಮಾನ. ಇಂತಹ ಸನ್ನಿವೇಶದಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಯಡಿಯೂರಪ್ಪ ಏನು ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ. ಚುನಾವಣೆಯಲ್ಲಿ ಪುತ್ರ ವಿಜಯೇಂದ್ರನಿಗೆ ಪಕ್ಷದ ಟಿಕೆಟ್ ಸಿಕ್ಕರೆ ಸಾಕು ಎಂಬ ನಿಲುವಿಗೆ ಮಾತ್ರ ಅವರು ಸೀಮಿತಗೊಳ್ಳುತ್ತಾರಾ? ಅಥವಾ ಕಾರ್ಯತಂತ್ರಕ್ಕೆ ಶರಣಾಗುತ್ತಾರಾ ಕಾದು ನೋಡಬೇಕು. 

ಯಾಕೆಂದರೆ ಅವಮಾನ, ನೋವು ನುಂಗಿಕೊಂಡು ಸುಮ್ಮನೆ ಕೂರುವುದು ಯಡಿಯೂರಪ್ಪನವರ ಸ್ವಭಾವವೇ ಅಲ್ಲ. ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ತನ್ನ ಹಳೆಯ ಹಿಂದುತ್ವದ ಅಜೆಂಡಾದ ಪ್ರಯೋಗಕ್ಕೆ ಮುಂದಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳೇ ಇದಕ್ಕೆ ಸಾಕ್ಷಿ.

ಬಿಜೆಪಿಗೆ ಈಗ ಯಡಿಯೂರಪ್ಪ ಬೇಡ ಆದರೆ ಬ್ಯಾನರ್, ಪೊಸ್ಟರ್ ಗಳಲ್ಲಿ ಅವರ ಹೆಸರು, ಅವರ ಫೋಟೋ, ಬೇಕು, ಪಕ್ಷದ ಸಭೆಗಳಿಗೆ ಅವರ ಉಪಸ್ಥಿತಿ ಮಾತ್ರ ಬೇಕು.  ಅದೇನೇ ಇರಲಿ ಯಡಿಯೂರಪ್ಪ ಇದನ್ನೆಲ್ಲ ಸಹಿಸಿ ಕೂರುತ್ತಾರಾ? ಅಥವಾ ಸಿಡಿದೇಳುತ್ತಾರಾ? ..... ಕಾದು ನೋಡಬೇಕು.. 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com