social_icon

ಯಡಿಯೂರಪ್ಪ ರಾಜತಂತ್ರಕ್ಕೆ ಬೆಚ್ಚಿದ ಬಿಜೆಪಿ ಹೈಕಮಾಂಡ್ (ಸುದ್ದಿ ವಿಶ್ಲೇಷಣೆ)

ಅದೊಂದು ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ತಂದಿದೆ. ಮಾಜಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರ ಸರಿಯುವ ಘೋಷಣೆ ಮಾಡಿರುವುದು ಈ ತಲ್ಲಣಕ್ಕೆ ಕಾರಣ.

Published: 16th December 2022 12:06 AM  |   Last Updated: 16th December 2022 12:08 AM   |  A+A-


Yeddyurappa-Amit shah

ಯಡಿಯೂರಪ್ಪ- ಬಿಜೆಪಿ ವರಿಷ್ಠ ಅಮಿತ್ ಶಾ

Posted By : srinivasrao
Source :

ಅದೊಂದು ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ತಂದಿದೆ. ಮಾಜಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರ ಸರಿಯುವ ಘೋಷಣೆ ಮಾಡಿರುವುದು ಈ ತಲ್ಲಣಕ್ಕೆ ಕಾರಣ.

ಇಷ್ಟಕ್ಕೂ ಇದೇನು ದಿಢೀರ್ ನಿರ್ಧಾರವಲ್ಲ.  ಮುಖ್ಯಮಂತ್ರಿ ಪಟ್ಟದಿಂದಳಿದ ನಂತರ ( ಅಥವಾ ಇಳಿಸಿದ ಎಂದರೂ ತಪ್ಪಲ್ಲ)ಕಳೆದ ಜುಲೈನಲ್ಲೇ ಅವರು ``ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಶಿಕಾರಿಪುರ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಪಕ್ಷದ ಅಭ್ಯರ್ಥಿಯಾಗಿ  ವಿಧಾನಸಭೆಗೆ ಸ್ಪರ್ಧಿಸುತ್ತಾರೆ, ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಶ್ರಮಿಸುತ್ತೇನೆ, ಮನೆಯಲ್ಲಿ ಕೂರೋ ಮಾತೇ ಇಲ್ಲ” ಎಂದೂ ಘೋಷಿಸಿದ್ದರು.

ಇದು ಬಿಜೆಪಿಯಲ್ಲಿ ಎಂಥ ತಳಮಳಕ್ಕೆ ಕಾರಣವಾಯಿತೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ನಾಯಕರು, ಸಚಿವರು ಯಡಿಯೂರಪ್ಪ ನಿವಾಸಕ್ಕೆ ದೌಢಾಯಿಸಿ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಅವರಮನವೊಲಿಸುವ ಮಾತಾಡಿದ್ದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಯಡಿಯೂರಪ್ಪ ಒಂಟಿಯೇ? (ಸುದ್ದಿ ವಿಶ್ಲೇಷಣೆ)

ಆದರೆ ಯಡಿಯೂರಪ್ಪ ತಮ್ಮ ನಿಲುವಿಗೇ ಬಿಗಿಯಾಗಿ ಅಂಟಿಕೊಂಡಿದ್ದಾರೆ ಇದು ತಲ್ಲಣ ತಂದಿದೆ. ಬಿಜೆಪಿ ರಾಜ್ಯದಲ್ಲಿ  ಗಟ್ಟಿಯಾಗಿ ನೆಲೆಯೂರಲು  ಯಡಿಯೂರಪ್ಪ ನಡೆಸಿದ ಹೋರಾಟಗಳೇ ಕಾರಣ ಎಂಬುದು ನಿರ್ವಿವಾದ.

 ಪಕ್ಷ ಅಧಿಕಾರ ಹಿಡಿಯುವಂತಾಗಿದ್ದೂ ಅವರ ಕಾರ್ಯತಂತ್ರದಿಂದಾಗಿಯೆ. ಇಲ್ಲಿ ಪ್ರಮುಖವಾಗಿ ಗಮನಿಸಲೇ ಬೇಕಾದ ಅಂಶ. ಈ ಹೋರಾಟ, ಕಾರ್ಯತಂತ್ರದಿಂದಲೇ ಅವರು ಪ್ರಬಲ ಮತ್ತು ಪ್ರಶ್ನಾತೀತ ನಾಯಕನಾಗಿ ರೂಪುಗೊಂಡಿದ್ದಾರೆ.

 ತಮ್ಮ ನಾಲ್ಕು ದಶಕಗಳ ರಾಜಕಾರಣದಲ್ಲಿ ಮಧ್ಯೆ ಬಿಜೆಪಿಯಿಂದ ಮುನಿಸಿಕೊಂಡು ದೂರವಾಗಿ ಕೆಜೆಪಿ ಪಕ್ಷ ಕಟ್ಟಿದಾಗಲೂ ವಿಧಾನಸಭೆಗೆ ತಮ್ಮ ಪಕ್ಷದ ಎಂಟು ಶಾಸಕರು ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿ ಆಗಿದ್ದರು. ಕೆಜೆಪಿ ಸ್ಪರ್ಧೆಯಿಂದ ಬಿಜೆಪಿ ಮತಗಳು ಹಂಚಿ ಹೋಗಿ ಅಧಿಕಾರಕ್ಕೆ ಬರುವ ಅವಕಾಶ ಕೈ ತಪ್ಪಿತ್ತು. ನಂತರದ ದಿನಗಳಲ್ಲಿ ಯಡಿಯೂರಪ್ಪ  ಶಕ್ತಿಯನ್ನು ಮನಗಂಡ ಬಿಜೆಪಿ ಹೈಕಮಾಂಡ್ ಅವರನ್ನು ವಾಪಸು ಸೇರಿಸಿಕೊಂಡು ನಾಯಕತ್ವ ನೀಡಿತು. ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗಲು ಹಾಗಯೇ ಮೈತ್ರಿ ಪತನಗೊಂಡು ಮತ್ತಎ ಚುನಾವಣೆ ಎದುರಿಸಿ ಹೆಚ್ಚು ಸ್ಥಾನಗಳಿಸಿದ್ದೂ ಅವರ ಕಾರ್ಯ ತಂತ್ರದ ಒಂದು ಭಾಗ.

ಇದನ್ನೂ ಓದಿ: ಸಂದಿಗ್ಧದಲ್ಲಿ ದೇವೇಗೌಡ ಅಖಾಡಕ್ಕೆ; ಕಾರ್ಯತಂತ್ರ ಫಲ ಕೊಟ್ಟೀತೆ...? (ಸುದ್ದಿ ವಿಶ್ಲೇಷಣೆ)

ಕಾಂಗ್ರೆಸ್ ಜೆಡಿಎಸ್ 19 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿ ನಂತರ ಬಿಜೆಪಿ ಸರ್ಕಾರ ರಚನೆ ಆಗಲೂ ಯಡಿಯೂರಪ್ಪ  ಹೈಕಮಾಂಡ್ ಸೂಚನೆಯನ್ನೂ ಮೀರಿ ಅನುಸರಿಸಿದ ರಾಜಕೀಯ ನಡೆಯೇ ಕಾರಣ. ಅಪಸ್ವರ ಎತ್ತಿದ್ದ ಪಕ್ಷದ ವರಿಷ್ಟರು ಕಡೆಗೂ ಈ ರಾಜತಂತ್ರವನ್ನು ಒಪ್ಪಿಕೊಳ್ಳಬೇಕಾಯಿತು.

ಇದೆಲ್ಲ ಯಡಿಯೂರಪ್ಪ ರಾಜಕೀಯ ಕಾರ್ಯ ತಂತ್ರದಲ್ಲೂ ಎತ್ತಿದ ಕೈ ಎಂಬುದನ್ನು ಅವರು ಅಧಿಕಾರಕ್ಕೆ ಏರುವ ಸಂದರ್ಭದಲ್ಲಿ ನಡೆದ ಆಪರೇಷನ್ ಕಮಲ ಕಾರ್ಯಾರಚರಣೆಯೇ ದೃಢ ಪಡಿಸಿದೆ. ವಸ್ತು ಸ್ಥಿತಿ ಹೀಗಿರುವಾಗ ಚುನಾವಣೆ ಬಂದು ಮನೆ ಬಾಗಿಲು ಬಡಿಯುತ್ತಿರುವ ಹೊತ್ತಲ್ಲಿ  ಅವರು ನಿವೃತ್ತಿಯ ಮಾತು ಆಡಿರುವುದು ಸಹಜವಾಗೇ ಕಳವಳ ತಂದಿದೆ.

ಅವರ ಇಬ್ಬರು ಗಂಡು ಮಕ್ಕಳ ಪೈಕಿ  ಹಿರಿಯ ಪುತ್ರ ಬಿ.ವೈ. ರಾಘವೇಂದ್ರ ಚುನಾವಣಾ ರಾಜಕಾರಣಕ್ಕೆ ಮೊದಲೇ ಧುಮುಕಿದರೂ ಸಹೋದರ ವಿಜಯೇಂದ್ರ ನಂತೆ ರಾಜಕಾರಣದಲ್ಲಿ ಸದ್ದು ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ವಿಜಯೇಂದ್ರ ನಡೆಸಿದ ಕಾರ್ಯಾಚರಣೆಗಳು ಅವರನ್ನು ರಾಜಕಾರಣದ ಮುಖ್ಯವಾಹಿನಿಗೆ ತಂದು ನಿಲ್ಲಿಸಿವೆ. ಅಲ್ಲಿಂದಾಚೆ ಅವರು ರಾಜ್ಯ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದ ಯುವ ನೇತಾರ ಎಂದು ಗುರುತಿಸಲ್ಪಟ್ಟಿದ್ದಾರೆ.

ಇದೀಗ ಮುಂಬರುವ ವಿಧಾನಸಭೆ ಚುನಾವಣೆಗೆ ಮೈಸೂರಿನ ವರುಣಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುತ್ತಾರೆ ಎಂಬ ಗುಲ್ಲೆದ್ದಿದೆ.

ಇದನ್ನೂ ಓದಿ: ಸಿದ್ದು ಹಣಿಯಲು ಮೂಲ ಕಾಂಗ್ರೆಸ್ಸಿಗರ ರಣ ತಂತ್ರ (ಸುದ್ದಿ ವಿಶ್ಲೇಷಣೆ)

ಆದರೆ ವಸ್ತು ಸ್ಥಿತಿಯೇ ಬೇರೆ. ಯಡಿಯೂರಪ್ಪನವರ ರಾಜಕೀಯ ಉತ್ತರಾದಿಕಾರಿ ಎಂದೇ ಗುರುತಿಸಲ್ಪಡುವ ವಿಜಯೇಂದ್ರ ಈಗಾಗಲೇ ಶಿಕಾರಿ ಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ಪೂರ್ವ ತಯಾರಿ ಆರಂಭಿಸಿದ್ದಾರೆ. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಅವರ ಸಂಘಟನಾ ಕುಶಲತೆ ಹುಬ್ಬೇರುವಂತೆ ಮಾಡಿದೆ.

 ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿನ ಮತದಾರರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಕಾರ್ಯಾರಚರಣೆ ಫಲ ಕೊಟ್ಟಿದೆ. ಇತರ ಪಕ್ಷಗಳು ಅಭ್ಯರ್ಥಿಯನ್ನು ಘೋಷಿಸಿ ಪ್ರಚಾರಕ್ಕೆ ಇಳಿಯುವ ಮೊದಲೇ ವಿಜಯೇಂದ್ರ ಇಲ್ಲಿ ಮತದಾರರನ್ನು ಮುಟ್ಟಿದ್ದಾರೆ.

ಯಡಿಯೂರಪ್ಪನವರೊಂದಿಗೆ ದಶಕಗಳ ಕಾಲ ಚುನಾವಣೆಯಲ್ಲಿ ದುಡಿದು ಪಳಗಿದ ಗುರುಮೂರ್ತಿಯಂತಹ ಅನೇಕ ಪ್ರಮುಖ ಮುಖಂಡರ ಗುಂಪು ಅವರ ಬೆಂಬಲಕ್ಕೆ ನಿಂತಿದ್ದು ಉಸ್ತುವಾರಿ ವಹಿಸಿದೆ. ವಿಜಯೇಂದ್ರ ಶಿಕಾರಿಪುರದಿಂದಲೇ ವಿಧಾನಸಭೆಗೆ ಸ್ಪರ್ಧಿಸುತ್ತಾರೆ.

ಹಾಗಿದ್ದರೆ ವರುಣಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರ ಸ್ಪರ್ಧೆ ಕುರಿತಂತೆ ಕೇಳಿ ಬರುತ್ತಿರುವ ಸುದ್ದಿಗಳು ಪ್ರತಿಪಕ್ಷಗಳನ್ನು ದಿಕ್ಕು ತಪ್ಪಿಸುವ ತಂತ್ರ ಎಂಬುದನ್ನು ಬಿಜೆಪಿ ಮೂಲಗಳು ಒಪ್ಪಿಕೊಳ್ಳುತ್ತವೆ.

ಹಾಗಿದ್ದ ಮೇಲೆ ಯಡಿಯೂರಪ್ಪ ಹೇಳಿಕೆ ವಿಚಾರದಲ್ಲಿ ಬಿಜೆಪಿ ನಾಯಕತ್ವ ತಲ್ಲಣಗೊಂಡಿರುವುದು ಏಕೆ ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ  ಪಕ್ಷದಲ್ಲಿ ತಮ್ಮ ಬಿಗಿಯಾದ ಹಿಡಿತ ಹೊಂದುವ ಮೂಲಕ ತಾನೊಬ್ಬ ಪ್ರಶ್ನಾತೀತ ನಾಯಕ ಎಂಬ ವರ್ಚಸ್ಸು ಉಳಿಸಿಕೊಳ್ಳುವ ಉದ್ದೇಶ ಇರುವುದು ಗೊತ್ತಾಗುತ್ತದೆ.

ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಪಕ್ಷದ ಟಿಕೆಟ್ ಸಿಗುವಂತೆ ನೋಡಿಕೊಳ್ಳುವುದು ಹಾಗೆಯೇ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಟಿಕೆಟ್ ತಪ್ಪುವಂತೆ ಮಾಡುವುದೂ ಇದೆಲ್ಲದರ ಹೊರತಾಗಿಯೂ ಚುನಾವಣೆ ನಂತರ ಬಹುಮತ ಬಂದರೆ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ರಚನೆಯ ವಿಚಾರದಲ್ಲಿ ತಮ್ಮ ಮಾತೇ ಅಂತಿಮವಾಗುವಂತೆ ನೋಡಿಕೊಳ್ಳುವ ತಂತ್ರಗಾರಿಕೆಯೂ ಅಡಗಿದೆ.

ಈ ಮೂಲಕ ವಿಜಯೇಂದ್ರನನ್ನು ಅಧಿಕಾರದ ಪಟ್ಟಕ್ಕೆ ಕೂರಿಸುವುದು ಯಡಿಯೂರಪ್ಪ ನವರ ತಂತ್ರ. ಬಿಜೆಪಿ ಶಾಸಕ ಯತ್ನಾಳ್ ಬಹಿರಂಗವಾಗೇ ಬಿಎಸ್ ವೈ ವಿರುದ್ಧ ಯುದ್ಧಕ್ಕೆ ಇಳಿದಿದ್ದು ಪಕ್ಷದ ಕೆಲವು ಕೇಂದ್ರ ನಾಯಕರು ಹಾಗೂ ರಾಜ್ಯ ಘಟಕದ ಒಂದು ಗುಂಪು  ಮೌನವಾಗಿ ಅವರ ಬೆನ್ನಿಗೆ ನಿಂತಿದೆ.

ಈ ವಿಚಾರದಲ್ಲಿ ಯಡಿಯೂರಪ್ಪ ಪ್ರತಿಕ್ರಿಯಿಸುತ್ತಿಲ್ಲ. ಇದು ಜಾಣತನ.  ಅವರಿಗೆ ಸಮುದಾಯ, ಮಠಾಧೀಶರ ಬೆಂಬಲವೂ ಇದೆ.  ಬರೀ ಮೋದಿ ಹೆಸರಿನಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಏರುವುದು ಸಾಧ್ಯವಿಲ್ಲ. ಎಂಬ ಅಂಶ ಬಿಜೆಪಿಯೇ ನಡೆಸಿದ ಇತ್ತೀಚಿನ ಸಮೀಕ್ಷೆಗಳಿಂದ ವ್ಯಕ್ತವಾಗಿದೆ.

ಇಂತಹ ಸನ್ನಿವೇಶದಲ್ಲಿ  ತಮ್ಮ ರಾಜ ತಂತ್ರದ ಮೂಲಕ ಬಿಜೆಪಿ ಹೈಕಮಾಂಡ್ ನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಅವರ ತಂತ್ರ ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದೆ.

ಯಡಿಯೂರಪ್ಪ ಪ್ರಾಬಲ್ಯ ಮುಂದುವರಿದರೆ ತಮ್ಮ ಗತಿ..? ಎಂಬ ಆತಂಕ ಸಿಎಂ ಪಟ್ಟಕ್ಕೆ ಏರಲು  ರೇಸ್ ನಲ್ಲಿರುವ ಬಹಳಷ್ಟು ಪ್ರಮುಖರನ್ನು ಕಾಡುತ್ತಿದೆ. ಇದು ರಾಷ್ಟ್ರೀಯ ಪಕ್ಷವೊಂದರ ದುರ್ಗತಿಯೂ ಹೌದು!


 

ಯಗಟಿ ಮೋಹನ್
yagatimohan@gmail.com


Stay up to date on all the latest ಅಂಕಣಗಳು news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Sham

    Better to drop BSY & Co or else there is no future for Karnataka under any party, especially BJP
    9 months ago reply
flipboard facebook twitter whatsapp