ಸಿದ್ದರಾಮಯ್ಯ ಸೋಲಿಸಲು ಬಿಜೆಪಿ- ಜೆಡಿಎಸ್ ಜಂಟಿ ಸಮರಾಬ್ಯಾಸ! (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಕಾಂಗ್ರೆಸ್ ನ ಕೆಲವು ನಾಯಕರ ವಿರುದ್ಧ ರಣ ಕಹಳೆ ಮೊಳಗಿಸಿದ್ದ ಮಾಜಿ ಕೇಂದ್ರ ಸಚಿವ, ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕ,ಕೆ.ಎಚ್. ಮುನಿಯಪ್ಪ ತಮ್ಮ ಬಂಡಾಯದ ಬಾವುಟವನ್ನು ಸದ್ಯಕ್ಕೆ ಕೆಳಗಿಳಿಸಿದ್ದಾರೆ.
ಬಿಜೆಪಿ-ಸಿದ್ದರಾಮಯ್ಯ-ಜೆಡಿಎಸ್
ಬಿಜೆಪಿ-ಸಿದ್ದರಾಮಯ್ಯ-ಜೆಡಿಎಸ್

ಕಾಂಗ್ರೆಸ್ ನ ಕೆಲವು ನಾಯಕರ ವಿರುದ್ಧ ರಣ ಕಹಳೆ ಮೊಳಗಿಸಿದ್ದ ಮಾಜಿ ಕೇಂದ್ರ ಸಚಿವ, ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕ, ಕೆ.ಎಚ್. ಮುನಿಯಪ್ಪ ತಮ್ಮ ಬಂಡಾಯದ ಬಾವುಟವನ್ನು ಸದ್ಯಕ್ಕೆ ಕೆಳಗಿಳಿಸಿದ್ದಾರೆ. ಇದು ಕೋಲಾರದಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಂಚ ನೆಮ್ಮದಿ ತಂದಿದೆ.

ಬೇಗುದಿ ತಣ್ಣಗಾದ ಸಂಭ್ರಮದಲ್ಲಿ ಅವರು ಪಕ್ಷದ ಪ್ರಜಾ ಧ್ವನಿ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗಿನ ಅವರ ಭಿನ್ನಾಭಿಪ್ರಾಯ ಇತ್ಯರ್ಥಗೊಂಡಿಲ್ಲ. 

ಸಿದ್ದರಾಮಯ್ಯ ಕೋಲಾರದಿಂದಲೇ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನಿಯಮದಂತೆ ಮೊದಲು ರಾಜ್ಯ ಸಮಿತಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿ ದಿಲ್ಲಿ ವರಿಷ್ಠರ ಪರಿಶೀಲನೆಗೆ ಕಳಿಸಿದ ನಂತರ ರಾಷ್ಟ್ರೀಯ ಅಧ್ಯಕ್ಷರ ಸಮ್ಮತಿಯ ಮುದ್ರೆ ದೊರಕಿದ ನಂತರವೇ ಅದಕ್ಕೆ ಅಧಿಕೃತ ಮಾನ್ಯತೆ ದೊರೆಯುತ್ತದೆ. ಅನೇಕ ಸಂದರ್ಭಗಳಲ್ಲಿ ಚುನಾವಣೆಯಲ್ಲಿ ನಾಮ ಪತ್ರ ವಾಪಸು ಪಡೆಯುವ ಅಂತಿಮ ದಿನದಂದು ಅಭ್ಯರ್ಥಿಗಳು ಬದಲಾದ ಉದಾಹರಣೆಯೂ ಇದೆ.

ಸಿದ್ದು ಹೇಳಿದ್ದೇನು?: ಕೋಲಾರದಿಂದ ಸ್ಪರ್ಧೆಯ ಘೋಷಣೆ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಅನುಮೋದನೆ ನೀಡಿದರೆ ಮಾತ್ರ ಎಂಬ ಅಂಶವನ್ನೂ ಅತ್ಯಂತ ಜಾಣತನದಿಂದ ಸೇರಿಸಿದ್ದಾರೆ.

ಮುಗಿಯದ ವೈಮನಸ್ಯ: ಸಭೆಗೆ ಹೋಗುವ ಮುನ್ನ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅವರ ಮುನಿಸು ಶಮನ ಮಾಡಿದ ನಂತರವೇ ಜೊತೆಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಆ ನಂತರವೂ ಮುನಿಯಪ್ಪ ಮತ್ತು ರಮೇಶ್ ಕುಮಾರ್ ನಡುವೆ ರಾಜಿ ಆಗಿಲ್ಲ. ಅವರ ಜತೆಗಿನ ವೈಮನಸ್ಯ ದೂರವಾಗಿಲ್ಲ. ಕೋಲಾರ ಲೋಕಸಭಾ ಕ್ಷೇತ್ರವನ್ನು ಏಳು ಬಾರಿ ಪ್ರತಿನಿಧಿಸಿದ್ದ ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಸ್ವಪಕ್ಷೀಯರ ತಂತ್ರದಿಂದ ಸೋತ ನಂತರವೂ ಕ್ಷೇತ್ರದ ಜನರು ಬೆಂಬಲಿಗರ ಜತೆ ನಿಕಟ ಸಂಪರ್ಕದಲ್ಲೇ ಇದ್ದು ತಮ್ಮ ಪ್ರಭಾವ ಉಳಿಸಿಕೊಂಡಿದ್ದಾರೆ. ರಾಜಕೀಯವಾಗಿ ಅವರು ದೊಡ್ಡ ಶಕ್ತಿ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. 

ಈ ಎಲ್ಲ ಅಂಶಗಳ ಆಧಾರದ ಮೇಲೆ ಸಿದ್ದರಾಮಯ್ಯ ಸಂಧಾನ ಯಶಸ್ಸು ಕಂಡರೂ ಮುಂದಿನ ದಿನಗಳಲ್ಲಿ ಸ್ಥಳೀಯವಾದ ನಾಯಕರ ವೈಮನಸ್ಯ, ಗುಂಪುಗಾರಿಕೆ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳು ಇವೆ. 

ಸಿದ್ದರಾಮಯ್ಯ ನಿರ್ಧರಿಸುವ ಕ್ಷೇತ್ರದಲ್ಲಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರ ತಕರಾರೇನೂ ಇಲ್ಲ. ಆದರೆ ಅದರ ಮುಂದಿನ ಫಲಿತಾಂಶ ಮತ್ತು ಪರಿಣಾಮಗಳ ಹೊಣೆಗಾರಿಕೆ ಅವರದ್ದೇ ಆಗಿರುತ್ತದೆ. ಹೀಗಾಗಿ ಫಲಿತಾಂಶ ಯಾವುದೇ ಆದರೂ ಅವರೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆ. ಈ ಎಲ್ಲ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿಯೇ ನಿರ್ಧಾರ ಕೈಗೊಂಡಿದ್ದಾರೆ. 

ಮತ್ತೊಂದು ಕ್ಷೇತ್ರದಿಂದಲೂ ಸ್ಪರ್ಧೆ?: ಇದೇ ವೇಳೆ ಕೋಲಾರದ ಜತೆಗೆ ಕಳೆದ ವಿಧಾನಸಭಾ ಚುನಾವಣೆಯಂತೆ ಮತ್ತೆ ಬಾದಾಮಿ ಅಥವಾ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವ ಕುರಿತೂ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಅವರ ಆಪ್ತ ವಲಯಗಳಿಂದಲೇ ಬಂದಿದೆ. 

ಕೋಲಾರದಲ್ಲಿ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳ ಮತದಾರರು ಅಧಿಕ ಸಂಖ್ಯೆಯಲ್ಲಿದ್ದರೂ ಅಷ್ಟೂ ಮತಗಳು ಇಡುಗಂಟಾಗಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತವೆ ಎಂದೇನಿಲ್ಲ. ಸಿದ್ದರಾಮಯ್ಯ ಸ್ಪರ್ಧೆಯನ್ನು ಆಡಳಿತ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಅವರ ವಿರುದ್ಧ ಅದೇ ಸಮುದಾಯದ ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಮಾಹಿತಿ ಸದ್ಯಕ್ಕಿದೆ. 

ಇನ್ನು 2024ರ ಲೋಕಸಭಾ ಚುನಾವಣೆ ಯಲ್ಲೂ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಗುರಿಯನ್ನೂ ಬಿಜೆಪಿ ಹೊಂದಿದೆ. 

ಬಿಜೆಪಿ- ಜೆಡಿಎಸ್ ಜಂಟಿ ಕಾರ್ಯತಂತ್ರ?: ಬಿಜೆಪಿಗೆ ಈ ಕ್ಷೇತ್ರ ಗೆಲ್ಲುವುದು ಪ್ರಮುಖ ಸವಾಲು. ಜೆ.ಡಿ.ಎಸ್ ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ಸೋಲುವುದು ಪ್ರತಿಷ್ಠೆಯ ಸಂಗತಿ. ಶತ್ರವಿನ ಶತ್ರು ನನ್ನ ಮಿತ್ರ ಎಂಬಂತೆ ಚುನಾವಣಾ ತಂತ್ರಗಾರಿಕೆಯಲ್ಲಿ ಎರಡೂ ಪಕ್ಷಗಳೂ ಆಂತರಿಕವಾಗಿ ಒಮ್ಮತಕ್ಕೆ ಬಂದರೂ ಆಶ್ಚರ್ಯವೇನೂ ಇಲ್ಲ. ಏಕೆಂದರೆ ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. 

ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ತಿಕ್ಕಾಟ ಸದ್ಯಕ್ಕೆ ತಣ್ಣಗಾಗಿರುವಂತೆ ಕಂಡರೂ ಮುಂದಿನ ದಿನಗಳಲ್ಲಿ ಅದು ಬೇರೆಯದೇ ಸ್ವರೂಪ ಪಡೆಯುವ ಸಾಧ್ಯತೆಗಳೂ ಇವೆ. ಸಿದ್ದರಾಮಯ್ಯ ಹೋದ ಕಡೆಯಲ್ಲೆಲ್ಲ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಕೋಲಾರದಲ್ಲೂ ಅದು ಪುನರಾವರ್ತನೆಗೊಂಡಿದೆ. ಪಕ್ಷದ ಹಿರಿಯ ಮುಖಂಡ ಆದ ರಮೇಶ್ ಕುಮಾರ್ ಅವರೇ ಪಕ್ಷದ ಸೂಚನೆ ಕಟ್ಟುಪಾಡುಗಳನ್ನು ಮೀರಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗೇ ಘೋಷಿಸಿರುವುದು ಪಕ್ಷದ ಇತರ ನಾಯಕರ ಅಸಮಧಾನಕ್ಕೆ ಕಾರಣವಾಗಿದೆ.

ಮೊದಲೇ ಸಿದ್ದರಾಮಯ್ಯ ವಿರುದ್ಧ ಒಳಗೊಳಗೇ ಭುಸುಗುಡುತ್ತಿರುವ ಮೂಲ ಕಾಂಗ್ರೆಸ್ಸಿಗರ ಅಸಮಧಾನದ ಬೆಂಕಿಗೆ ರಮೇಶ್ ಕುಮಾರ್ ತುಪ್ಪ ಸುರಿದಿದ್ದಾರೆ. ಇದೂ ಚುನಾವಣೆ ವೇಳೆ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಪ್ರಮುಖವಾಗಿ ಒಂದು ಕಾಲದಲ್ಲಿ ಸಿದ್ದರಾಮಯ್ಯ ಶಿಷ್ಯರಾಗಿದ್ದು ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಡಾ.ಸುಧಾಕರ್, ಎಂ ಟಿ.ಬಿ.ನಾಗರಾಜ್, ಬೈರತಿ ಬಸವರಾಜ್ ಅವರ ಹೆಗಲಿಗೆ ಕೋಲಾರ ಚುನಾವಣೆಯ ಪ್ರಮುಖ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಹೊರಿಸುವುದು ಖಚಿತ. ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತರೆ ಬಿಜೆಪಿಯಲ್ಲಿ ಈ ಪ್ರಮುಖರ ರಾಜಕೀಯ ಭವಿಷ್ಯದ ಹಾದಿ ಸುಗಮವಾಗಿರಲಿದೆ. ಈ ಸಚಿವರು ತಾವು ಪ್ರತಿನಿಧಿಸುವ ಕ್ಷೇತ್ರಗಳನ್ನೂ ಗೆಲ್ಲುವುದರ ಜತೆಗೇ ಕೋಲಾರದ ಉಸ್ತುವಾರಿಯನ್ನೂ ಹೊರಬೇಕಾಗಿ ಬರಲಿದೆ. 

ಈಗಾಗಲೇ ಬಿಜೆಪಿಯಲ್ಲಿ ಕೋಲಾರಕ್ಕೆ ಸೀಮಿತವಾಗಿ ಒಂದು ಸ್ಪಷ್ಟ ನೀಲ ನಕ್ಷೆ ತಯಾರಾಗಿದೆ. ಬಿಜೆಪಿಗೂ ಇದು ಪ್ರತಿಷ್ಠೆಯ ಪ್ರಶ್ನೆ ಆಗಿರುವುದರಿಂದ ಆ ಪಕ್ಷ ತನ್ನ ಎಲ್ಲ ರೀತಿಯ ಬಲವನ್ನು ಇಲ್ಲಿ ಪ್ರಯೋಗಿಸಲಿದೆ.

ಶ್ರೀನಿವಾಸ ಗೌಡ ಪ್ರಭಾವಿ ನಾಯಕ: ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವದ ಕುರಿತಾಗೇ ಪ್ರಶ್ನೆ ಎದ್ದಿದೆ. ಆ ಪಕ್ಷದ ಶಾಸಕ ಶ್ರೀನಿವಾಸಗೌಡ ಇದೀಗ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಕೋಲಾರದಲ್ಲಿ ಅವರೊಬ್ಬ ಪ್ರಭಾವಿ ನಾಯಕ. ಆದರೆ ಚುನಾವಣೆಯಲ್ಲಿ ಜಾತಿ,ಪಕ್ಷ ನಾಯಕತ್ವ,ಅಭ್ಯರ್ಥಿ ಸೇರಿದಂತೆ ಇತರ ವಿಚಾರಗಳೂ ಪ್ರಮುಖವಾಗುತ್ತವೆ. 

ಒಕ್ಕಲಿಗ ಸಮದಾಯಕ್ಕೆ ಸೇರಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಮುಖ್ಯಮಂತ್ರಿ ಪದವಿಯ ರೇಸ್ ನಲ್ಲಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ನಾಯಕತ್ವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಳಿಯೇ ಇದೆ. ಬಿಜೆಪಿಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಸೋಲುವುದು ಗೌಡರ ಕುಟುಂಬಕ್ಕೆ  ಬೇಕಾಗಿದೆ.

ಚಾಮುಂಡೇಶ್ವರಿ ಉಪ ಚುನಾವಣೆ ನೆನಪು: ಈ ಹಿನ್ನಲೆಯಲ್ಲಿ ಶತಾಯ ಗತಾಯ ಅವರನ್ನು ಸೋಲಿಸಲು  ಜಾತಿಯೂ ಸೇರಿದಂತೆ ಗೌಡರ ಇಡೀ ಶಕ್ತಿಯೇ ಇಲ್ಲಿ ಬಳಕೆ ಆಗಲಿದೆ. ಸಿದ್ದರಾಮಯ್ಯ 2006 ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾಗ ಜೆಡಿಎಸ್ ತನ್ನೆಲ್ಲ ಶಕ್ತಿ ಸಾಮರ್ಥ್ಯವನ್ನು ಅವರ ವಿರುದ್ಧ ಬಳಸಿತ್ತು. ಈ ಉಪ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಇನ್ನಿಲ್ಲದ ಪರಿಶ್ರಮ ಪಡಬೇಕಾಯಿತು. 

ಆಗಲೂ ಅವರ ವಿರುದ್ಧ ಪ್ರಬಲ ಜಾತಿಗಳು ಒಂದಾಗಿ ಜೆಡಿಎಸ್ ಅಭ್ಯರ್ಥಿ ಶಿವ ಬಸಪ್ಪ ಅವರನ್ನು ಬೆಂಬಲಿಸಿದ್ದವು. ಆ ಉಪ ಚುನಾವಣೆ ಒಂದು ಮಹಾ ರಾಜಕೀಯ ಸಮರವಾಗಿತ್ತು. ಕಡೆಗೂ ಸಿದ್ದರಾಮಯ್ಯ 257 ಮತಗಳ ಅಂತರದಿಂದ ಗೆದ್ದರು. ಅಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. 

2018 ರ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ  ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಎದುರು ಸೋತರೂ ಬಾದಾಮಿ ಕ್ಷೇತ್ರದಿಂದ ಗೆದ್ದರು. ಆಗಲೂ ಕಾಂಗ್ರೆಸ್ ನ ದು ಗುಂಪು ಅವರ ವಿರುದ್ಧ ಪಿತೂರಿ ನಡೆಸಿದ್ದೇ ಸೋಲಿಗೆ ಕಾರಣ ಎಂಬ ಮಾತು ಕೇಳಿ ಬಂದಿತ್ತು. 

ಡಾ. ಸುಧಾಕರ್ ಗೆ ಚುನಾವಣೆ ಜವಾಬ್ದಾರಿ: ಈಗ ಕೋಲಾರದಲ್ಲೂ ಅದೇ ವಾತಾವರಣ ಇದೆ. ಈ ಮೊದಲು ಕಾಂಗ್ರೆಸ್ ನಲ್ಲಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಸುಧಾಕರ್ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಬಿಜೆಪಿಗೆ ಬಂದು ನಂತರ ಮತ್ತೆ ಉಪ ಚುನಾವಣೆಯಲ್ಲಿ ಗೆದ್ದರು. ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದರು. ಈಗ ಬಿಜೆಪಿಯ ಹೈಕಮಾಂಡ್ ಎಂದೇ ಗುರುತಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅವರ ಪುತ್ರನ ಜತೆಗೆ ರಾಜಕೀಯವನ್ನೂ ಮೀರಿದ ಬಾಂಧವ್ಯ ಹೊಂದಿದ್ದಾರೆ. ಪಕ್ಷದಲ್ಲಿ ಪ್ರಮುಖ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಳ್ಳುವ ತವಕದಲ್ಲೂ ಅವರಿದ್ದಾರೆ. ಈ ಚುನಾವಣೆ ಅವರ ಆಕಾಂಕ್ಷೆ ಈಡೇರಿಸಿಕೊಳ್ಳುವ ಅಗ್ನಿ ಪರೀಕ್ಷೆಯಾಗುವ ಸಂಭವವಿದೆ.
 
ಈ ಎಲ್ಲ ಸೂಕ್ಷ್ಮತೆಗಳನ್ನು ಅರಿತೇ ಸಿದ್ದರಾಮಯ್ಯ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಅದಕ್ಕೆ ಪಕ್ಷದ ಹೈಕಮಾಂಡ್ ಒಪ್ಪುವ ಸಾಧ್ಯತೆಗಳು ಇಲ್ಲ. 
 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com