ಸಂಕ್ರಾಂತಿಗೆ ಮುನ್ನ ಹೊಸ ರಾಜಕೀಯ ಕ್ರಾಂತಿ! (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ಸಂಭವಿಸಲಿವೆ.
ಕರ್ನಾಟಕ ರಾಜಕಾರಣ (ಸಂಗ್ರಹ ಚಿತ್ರ)
ಕರ್ನಾಟಕ ರಾಜಕಾರಣ (ಸಂಗ್ರಹ ಚಿತ್ರ)

ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ಸಂಭವಿಸಲಿವೆ.

ರಾಜ್ಯ ವಿಧಾನಸಭೆಗೆ ಮಾರ್ಚ್ ಮಧ್ಯಭಾಗದಲ್ಲಿ ಚುನಾವಣೆಎ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳು ಇವೆ. ಇದೇ ವೇಳೆ ಮುಂದಿನ ತಿಂಗಳು ಹಣಕಾಸು ಖಾತೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಮುಂಗಡ ಪತ್ರ ಮಂಡಿಸಲಿದ್ದಾರೆ. ಬರಲಿರುವ ವಿಧಾನ ಮಂಡಲದ ಅಧಿವೇಶನ ಮುಖ್ಯಮಂತ್ರಿಯಾಗಿ ಅವರ ಪಾಲಿಗೆ ಈ ಅವಧಿಯ ಕೊನೆಯ ಅಧಿವೇಶನ ಆಗಲಿದೆ. ಅಧಿವೇಶನದ ನಂತರ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿವೆ. 

ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಬಿಜೆಪಿಯ ರಾಷ್ಟ್ರೀಯ ಮುಖಂಡರ ದಂಡು ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಸಮುದಾಯಗಳ ಮಠಾಧೀಶರು, ಮತ್ತಿತರ ಗಣ್ಯರ ಭೇಟಿ ಮಾಡುತ್ತಿರುವುದಲ್ಲದೇ, ಬೃಹತ್ ಸಭೆಗಳನ್ನು ನಡೆಸುತ್ತಿದ್ದು ಕೆಳ ಹಂತದಿಂದ  ಚುನಾವಣಾ ಸಿದ್ಧತಾ ಚಟುವಟಿಕೆಗಳಿಗೆ ಚಾಲನೆ ನಿಡಿದೆ.

ಕಾಂಗ್ರೆಸ್ ಮೊದಲ ಪಟ್ಟಿ: ಇದೇ ಹೊತ್ತಿನಲ್ಲಿ ಚುನಾವಣೆಗೆ 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು  ರಾಜ್ಯ ಕಾಂಗ್ರೆಸ್ ಸಿದ್ಧಪಡಿಸಿದ್ದು ಪಕ್ಷದ ರಾಷ್ಟ್ರೀಯ ಸಮಿತಿಯ ಅನುಮೋದನೆ ಪಡೆದ ನಂತರ ಹೊರ ಬೀಳಲಿದೆ. ಆದಷ್ಟು ಬೇಗ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ತವಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರದ್ದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಬಹುತೇಕ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಅವರು ಅಂತಿಮಗೊಳಿಸಿದ್ದಾರೆಎಂದು ಹೇಳಲಾಗುತ್ತಿದೆಯಾದರೂ ಅಲ್ಲಿನ್ನೂ ಕಾಂಗ್ರೆಸ್ ನಲ್ಲಿನ ಭಿನ್ನಮತ ಶಮನವಾಗಿಲ್ಲ.  

224 ಕ್ಷೇತ್ರಗಳ ಪಟ್ಟಿಯ ಪೈಕಿ ಒಂದಷ್ಟನ್ನು ಚುನಾವಣೆ ನಾಮಪತ್ರ ವಾಪಸು ಪಡೆಯಲು ಅಂತಿಮ ಗಡುವಿನವರೆಗೆ ಕಾದು ನಂತರ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಬಿಡುಗಡೆ ಮಾಡುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ. ಡಿಕೆಶಿ ಆಹ್ವಾನ ತಂದ ತಳಮಳ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ನಾನಾ ಕಾರಣಗಳಿಗಾಗಿ ಪಕ್ಷ ತೊರೆದವರು ಪುನಃ ಮರಳಲು ವೇದಿಕೆ ಸಿದ್ಧವಾಗಿದೆ ಎಂದು ಹೇಳುವ ಮೂಲಕ ಆಹ್ವಾನ ನೀಡಿದ್ದಾರೆ. ಅವರ ಹೇಳಿಕೆ ಹೊಸತೊಂದು ರಾಜಕೀಯ ಬೆಳವಣಿಗೆಯ ಸಂದೇಶವನ್ನು ರವಾನಿಸಿದೆ. ಅದರಲ್ಲೂ ಬಿಜೆಪಿಯಲ್ಲಿ ಹೊಸ ತಳಮಳಕ್ಕೆ ಕಾರಣವಾಗಿದೆ. ಈ ಹಿಂದೆ ಸರ್ಕಾರ ರಚನೆ ಸಂದರ್ಭದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಂದ ಶಾಸಕರನ್ನು ಆ ಪಕ್ಷ  ಸೆಳೆದಿತ್ತು. ಆ ಪೈಕಿ ಬಿಜೆಪಿ ಸೇರಿ ಮಂತ್ರಿಗಳಾದವರ ಪೈಕಿ ಒಬ್ಬಿಬ್ಬರನ್ನು ಬಿಟ್ಟರೆ ಉಳಿದಂತೆ ಹಲವರು ಇದ್ದೂ ಇಲ್ಲದಂತೆ ಪಕ್ಷದೊಳಗೆ ಇದ್ದಾರೆ.ವಲಸಿಗ ಶಾಸಕರು ಮಂತ್ರಿಗಳ ಪೈಕಿ ಕೆಲವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಅದರ ಸುಳಿವು ಅರಿತಿರುವ ಕೆಲವರು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೆ ಸಮಾಲೋಚನೆ ನಡೆಸಿದ್ದಾರೆ.

ಸೋಮಣ್ಣ ಪುತ್ರನಿಗಿಲ್ಲ ಟಿಕೆಟ್: ಬೆಂಗಳೂರು ನಗರ ಪ್ರತಿನಿಧಿಸುತ್ತಿರುವ  ವಸತಿ ಸಚಿವ ಸೋಮಣ್ಣ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸಿ ಗುಬ್ಬಿ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಇರಾದೆಯಲ್ಲಿದ್ದಾರೆ. ಆದರೆ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ತನ್ನ ನಿಲುವಿಗೆ ಬಿಜೆಪಿ ಬದ್ಧವಾದರೆ ಅವರ ಪುತ್ರನಿಗೆ ಬಿಜೆಪಿಟಿಕೆಟ್ ಸಿಗುವ ಸಾಧ್ಯತೆಗಳು ಇರುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಸದ್ಯಕ್ಕೆ ನಿಗೂಢ. 

ಬರೀ ಬೆಂಗಳೂರು ನಗರದ  ಸಚಿವರೊಬ್ಬರಷ್ಟೇ ಅಲ್ಲ,  ಬೇರೆ ಪಕ್ಷಗಳಿಂದ ಬಂದು ಬಿಜೆಪಿಯಲ್ಲಿರುವ ಬಹಳಷ್ಟು ಶಾಸಕರು-ಹಾಗೂ ಸಚಿವರಾಗಿರುವವರಿಗೆ ಆ ಪಕ್ಷದೊಳಗೆ ಇದ್ದು ರಾಜಕಾರಣ ಮುಂದುವರಿಸುವ ಆಸಕ್ತಿ ಇದ್ದಂತಿಲ್ಲ.

ಯಾಕೆಂದರೆ ಬಿಜೆಪಿ ಏನೇ ಕಸರತ್ತು ನಡೆಸಿದರೂ ಅಧಿಕಾರಕ್ಕೆ ಅಗತ್ಯವಾದಷ್ಟು ಬಹುಮತ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ ಇದಕ್ಕೆ ಕಾರಣ. ಹಾಗೆಂದು ಕಾಂಗ್ರೆಸ್ ಸೇರಿ ಚುನಾವಣೆ ಎದುರಿಸಿ ಒಂದು ವೇಳೆ ಗೆದ್ದು ಬಂದರೆ ಸಚಿವ ಪದವಿ ಬಗ್ಗೆ ಖಾತರಿ ಸಿಗುತ್ತಿಲ್ಲ. ತನ್ನನ್ನು ಸಂಪರ್ಕಿಸಿದ ಬಿಜೆಪಿ – ಜೆಡಿಎಸ್ ನ ಬಹಳಷ್ಟು ಅತೃಪ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಚಿವ ಸ್ಥಾನದ ಬಗ್ಗೆ ಯಾವುದೇ ನಿಖರ ಭರವಸೆ ನೀಡಿಲ್ಲ. ಆದರೆ ನಂಬಿ ಬಂದರೆ ಚುನಾವಣೆಯಲ್ಲಿ ಗೆಲುವಿಗೆ ಎಲ್ಲ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂಬುದು ಅವರ ಪ್ತ ಮೂಲಗಳು ನೀಡುವ ಸ್ಪಷ್ಟನೆ.

ಕಾಂಗ್ರೆಸ್ ನಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಹೈಕಮಾಂಡ್ ಎಚ್ಚರಿಕೆ ನಂತರವೂ ಅಂತ್ಯಗೊಂಡಿಲ್ಲ. ತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಈ ಇಬ್ಬರೂ ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಒಟ್ಟಾಗಿ ಹೋಗುವಂತೆ ನಿಡಿರುವ ಎಚ್ಚರಿಕೆಯೂ ಫಲ ಕೊಟ್ಟಿಲ್ಲ. ಪಕ್ಷ,, ರಾಜ್ಯ ರಾಜಕಾರಣದೊಳಗೆ ತಮ್ಮದೇ ಆದ ಪ್ರಬಲ ಸ್ವತಂತ್ರ ಅಸ್ತಿತ್ವ ಸ್ಥಾಪಿಸಲು ಈ ಇಬ್ಬರೂ ನಾಯಕರು ಜಿದ್ದಾ ಜಿದ್ದಿ ನಡೆಸಿದ್ದರೆ ಉಳಿದವರು ಇದನ್ನು ಮೌನವಾಗಿ ಗಮನಿಸುತ್ತಿದ್ದಾರೆ. ಕೆಲವು ಹಿರಿಯ ನಾಯಕರು ಇಬ್ಬರ ಜಗಳ ತಮಗೇನಾದರೂ ಲಾಭವಾದೀತೆಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ .ಹೀಗಾಗಿ ಕಾಂಗ್ರೆಸ್ ಗೊಂದಲಗಳಿಂದ ಮುಕ್ತವಾಗಿಲ್ಲ. 

ಸಿಡಿದು ನಿಂತ ಯತ್ನಾಳ್: ರಾಜ್ಯ ಬಿಜೆಪಿಗೆ ಮೀಸಲಾತಿ ವಿಚಾರವೇ ದೊಡ್ಡ ತಲೆ ನೋವಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿವೆ. ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾದ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೆ ಪಕ್ಷದ ರಾಜ್ಯ ನಾಯಕರ ವಿರುದ್ಧ ಸಿಡಿದು ನಿಂತಿದ್ದಾರೆ. ಇದಕ್ಕೆ ಕಾರಣ ಪಂಚಮಸಾಲಿ ಲಿಂಗಾಯಿತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಹೊಸ ಮೀಸಲಾತಿ ಸೂತ್ರ ಅತೃಪ್ತಿ ತಂದಿರುವುದು ಮತ್ತು ಇಡೀ ಹೊಸ ಮೀಸಲಾತಿ ಸೂತ್ರವೇ ಗೊಂದಲಗಳನ್ನು ಹುಟ್ಟು ಹಾಕಿರುವುದು ಆ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಇದೀಗ ನೇರ ಯುದ್ಧ ಘೋಷಿಸಿರುವ ಯತ್ನಾಳ್ ಇದೀಗ ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ.

ಪಕ್ಷ ತನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೂ ಹೆದರುವುದಿಲ್ಲ ಎಂಬ ನೇರ ಸಂದೇಶ ರವಾನಿಸುವ ಮೂಲಕ ಸಮುದಾಯದ ಮೀಸಲಾತಿ ಹೋರಾಟದ ಕಿಚ್ಚಿಗೆ ಎಣ್ಣೆ ಸುರಿದಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿದ ಹೊಸ ಮೀಲಾತಿ ಸೂತ್ರವನ್ನು ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ತಿರಸ್ಕರಿಸಿದ್ದು ಒಂದು ವಾರದ ಗಡುವಿನೊಳಗೆ ಈ ಸಮಸ್ಯೆ ಬಗೆ ಹರಿಸಿ ತಮ್ಮ ಬೇಡಿಕೆ ಈಡೇರಿಸ ಬೇಕೆಂದೂ ಎಚ್ಚರಿಸಿದ್ದಾರೆ. ಇದು ರಾಜ್ಯ ಸರ್ಕಾರವನ್ನು ಫಜೀತಿಗೆ ಸಿಕ್ಕಿಸಿದೆ. 

ಬ್ರಾಹ್ಮಣರ ಬಂಡಾಯ: ಈಗ ಇದರ ಜತೆಗೇ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಕೇಂದ್ರ ಸರ್ಕಾರ ನಿಗದಿಗೊಳಿಸಿದ್ದ ಮತ್ತು ಸುಪ್ರೀಂ ಕೋರ್ಟ್ ನಿಂದಲೂ ಸೂಚಿಸಲ್ಪಟ್ಟಿದ್ದ ಶೇ.10 ರ ಮೀಸಲಾತಿಯನ್ನು ಜಾರಿಗೊಳಿಸದೇ ವಿಳಂಬ ಮಾಡುತ್ತಿರುವ ಮುಖ್ಯಮಂತ್ರಿ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಇದೇ ಮೊದಲಬಾರಿಗೆ ಸಿಡಿದು ನಿಂತಿದ್ದು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಿ ನಂತರ ರಾಜ್ಯ ಮಟ್ಟದಲ್ಲಿ ಬೃಹತ್ ಸಮಾವೇಶವೊಂದನ್ನು ಹಮ್ಮಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಮಹಾಸಭೆ ಅಧ್ಯಕ್ಷ ಅಶೋಕ್ ಹಾರನ ಹಳ್ಳಿ ಸರ್ಕಾರದ ವಿರುದ್ಧ ಅಸಮಧಾನದ ಮಾತುಗಳನ್ನು ಆಡಿದ್ದಾರೆ. ಈ ಬೇಡಿಕೆಯೂ ಚುನಾವಣೆಗೆ ಮುನ್ನ ಪರಿಹಾರ ಕಾಣದಿದ್ದರೆ ಬ್ರಾಹ್ಮಣರ ಮತಗಳ ಪೈಕಿ ಒಂದಷ್ಟು ಬಿಜೆಪಿಯ ಕೈತಪ್ಪವುದು ಖಿಚಿತವಾಗಲಿದೆ. ಹೀಗೆ ತನ್ನ ಮೂಲ ಓಟ್ ಬ್ಯಾಂಕೇ ಬಿರುಕು ಬಿಟ್ಟರೆ ಅದರ ನೇರ ಬಿಸಿ ಚುನಾವಣೆಯಲ್ಲಿ ಬಿಜೆಪಿಗೆ ನಷ್ಟವಾಗಲಿದೆ .ಹಿಗಾಗಿ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸ್ಥಿತಿ ಅನುಭವಿಸುತ್ತಿದ್ದಾರೆ.
 
ಹಳಬರಿಗೆ ಟಿಕೆಟ್ ಇಲ್ಲ: ಕನಿಷ್ಠ ಮೂರು ಮತ್ತು ಅದಕ್ಕಿಂತ ಜಾಸ್ತಿ ಅವಧಿಗೆ ಒಂದೇ ಕ್ಷೇತ್ರದಿಂದ ಗೆದ್ದು ಶಾಸಕರಾದವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವುದು ಅನುಮಾನ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಟಿಕೆಟ್ ಕೊಡುವುದಾದರೂ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸುವ ಸಾಧ್ಯತೆಗಳೂ ಇವೆ ಎಂದೂ ಹೇಳಲಾಗುತ್ತಿದೆ.

ಹಾಗೇನಾದರೂ ಆ ತತ್ವಕ್ಕೆ ಬಿಜೆಪಿ ಹೈಕಮಾಂಡ್ ಬಿಗಿ ಪಟ್ಟು ಹಿಡಿದು ನಿಂತರೆ ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಕೆಲವು ಸಚಿವರು,ಹಾಗೂ ಶಾಸಕರು ಬೇರೆ ಕ್ಷೇತ್ರ ನೋಡಿಕೊಳ್ಳ ಬೇಕಾಗು ತ್ತದೆ. ಈ ಸೂತ್ರ ರಾಜ್ಯದ ಇತರ ಕ್ಷೇತ್ರಗಳಿಗೂ ಅನ್ವಯವಾಗುವ ಸಾಧ್ಯತೆಗಳೂ ಇವೆ ಎಂಬುದು ಬಿಜೆಪಿಯ ಉನ್ನತ ಮೂಲಗಳು ನೀಡಿರುವ ಮಾಹಿತಿ. ಇತ್ತೀಚೆಗೆ ರಾಜ್ಯಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ  ಪಕ್ಷದ ಕೆಲವು ಮುಖಂಡರಿಗೆ ನಾಟುವಂತೆ ಒಳ ಒಪ್ಪಂದದ ರಾಜಕಾರಣ ಬಿಟ್ಟು ಬಿಡಿ ಅವೆಲ್ಲ ನಡೆಯುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿರುವುದರ ಮುನ್ಸೂಚನೆಯೂ ಇದೇ ಎಂಬುದನ್ನು ಹೆಸರು ಬಹಿರಂಗಪಡಿಸಲು ಒಪ್ಪದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ. ಹೀಗಾಗಿ ಬಿಜೆಪಿಯಲ್ಲಿ ಅಮಿತ್ ಷಾ ಬಂದು ಹೋದ ನಂತರ ಕೆಲವು ಮಂತ್ರಿಗಳು, ಶಾಸಕರು, ಪದಾಧಿಕಾರಿಗಳಲ್ಲಿ ತಳಮಳ ಆರಂಭವಾಗಿದೆ. 

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com