ಇದು ಮನೆಯೊಳಗಿನ ಬೆಂಕಿ.! ರಾಜ್ಯ ಬಿಜೆಪಿಯಲ್ಲಿನ ಅಸಮಧಾನದ ಕಿಚ್ಚನ್ನು ಮನೆಯೊಳಗಿನ ಬೆಂಕಿಗೆ ಹೋಲಿಸಿದರೆ ಸರಿಯಾದೀತು.
ರಾಜಕೀಯ ಚಾಣಕ್ಯ ಎಂದೇ ಬಣ್ಣಿಸಲ್ಪಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸಿ ಪೂರ್ಣ ಪ್ರಮಾಣದ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೆ ತರುವುದು ಈ ಭೇಟಿಯ ಉದ್ದೇಶ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅವರ ಭೇಟಿ ಒಂದು ಸಾಧಾರಣ ಪ್ರಕ್ರಿಯೆ. ಆದರೆ ಕರ್ನಾಟಕದ ಮಟ್ಟಿಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಹೇಗೆ ನಿರ್ವಹಿಸುತ್ತದೆ ಎಂಬುದು ಸದ್ಯದ ಕುತೂಹಲ.
ಸಿಡಿದು ಜಗದೀಶ್ ಶೆಟ್ಟರ್: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಒಂದು ಕಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ. ಅವರದೇ ಮನೆಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇದೀಗ ತಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಸಿಡಿದೆದ್ದಿದ್ದಾರೆ.
ಪಕ್ಷದಲ್ಲಾಗಲೀ ಸರ್ಕಾರದಲ್ಲಾಗಲೀ ಅವರ ಮಾತು ನಡೆಯುತ್ತಿಲ್ಲ. ವರಿಷ್ಠರೂ ಅವರನ್ನು ಸಂತೈಸುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿ `ನನ್ನ ತಂಟೆಗೆ ಬಂದರೆ ಹುಷಾರ್’ ಎಂಬ ಸಂದೇಶವನ್ನು ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಹಾಗೂ ಹೈಕಮಾಂಡ್ ಗೆ ರವಾನಿಸಿದ್ದಾರೆ. ಇದು ಸಾಲದು ಎಂಬಂತೆ ಒಂದು ಕಾಲಕ್ಕೆ ಬಿಜೆಪಿಯಲ್ಲಿ ಎಲ್ಲವೂ ಆಗಿದ್ದ ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ತೊರೆದು ಹೊಸ ಪಕ್ಷ ಘೋಷಿಸಿದ್ದಾರೆ.
ಮೀಸಲಾತಿ ಘೋಷಣೆಯಎಡವಟ್ಟು: ಪಕ್ಷದೊಳಗೆ ಅಸಮಧಾನದ ಬೆಂಕಿ ಧಗಧಗಿಸುತ್ತಿರುವಾಗಲೇ ಮತ್ತೊಂದು ಕಡೆ ಲಿಂಗಾಯಿತ ಪಂಚಮಸಾಲಿಗಳ ಮೀಸಲಾತಿ ಬೇಡಿಕೆ ಈಡೇರಿಸಲು ಹೋಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಹೊಸ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿದೆ.
ಬಿಜೆಪಿಗೆ ಹೊಸ ತಲೆನೋವು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರನ್ನು ತೆಗೆದುಕೊಂಡು ರಾಜ್ಯ ಸಚಿವ ಸಂಪುಟ ವಿಸ್ತರಿಸುವ ಮುಖ್ಯಮಂತ್ರಿ ಬೊಮ್ಮಾಯಿ ಆಶಯಕ್ಕೆ ಪಕ್ಷದ ದಿಲ್ಲಿ ಧಣಿಗಳು ತಡೆ ಒಡ್ಡಿದ್ದಾರೆ. ಈಗ ಸಂಪುಟ ವಿಸ್ತರಿಸಿದರೆ ಸ್ಥಾನ ಸಿಗದವರು ಬಂಡಾಯ ಏಳಬಹುದು ಎಂಬ ಭಿತಿ ಇದಕ್ಕೆ ಕಾರಣ.
ರಾಜಕಾರಣದ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಮಿತ್ ಶಾ ರಾಜ್ಯಕ್ಕೆಬಂದಿರುವ ಅಮಿತ್ ಶಾ ಯಾವ ಪರಿಹಾರ ಸೂತ್ರ ಕಂಡು ಹಿಡಿಯುತ್ತಾರೆ ಎಂಬುದೇ ಈಗ ಸದ್ಯ ಪಕ್ಷದ ಮುಖಂಡರನ್ನು ಕಾಡುತ್ತಿರುವ ಪ್ರಶ್ನೆ. ಯಡಿಯೂರಪ್ಪ ಜತೆ ಅಂತರ ಕಾಪಾಡಿಕೊಂಡಿದ್ದ ಜಗದೀಶ ಶೆಟ್ಟರ್ ಈಗ ಮತ್ತೆ ಅವರ ಜತೆ ಕೈ ಜೋಡಿಸಿದ್ದಾರೆ. ಉತ್ತರ ಕರ್ನಾಟಕದ ಪ್ರಭಾವೀ ರಾಜಕೀಯ ನಾಯಕರಲ್ಲಿ ಒಬ್ಬರಾದ ಅವರು ಸ್ಥಳೀಯ ರಾಜಕಾರಣದಲ್ಲಿ ತಮ್ಮನ್ನು ಮೂಲೆಗೊತ್ತುವ ಕುತಂತ್ರಗಳ ವಿರುದ್ಧ ಸಿಡಿದೆದ್ದಾರೆ. ಯಡಿಯೂರಪ್ಪನವರಂತೆ ಶೆಟ್ಟರ್ ಆಕ್ರಮಣಕಾರಿ ಸ್ವಭಾವದ ನಾಯಕರಲ್ಲ. ಹಾಗೆಂದ ಮಾತ್ರಕ್ಕೆ ಅವರು ದುರ್ಬಲ ನಾಯಕರೂ ಅಲ್ಲ.
ಇದನ್ನೂ ಓದಿ: ಬಸವನಗೌಡ ಪಾಟೀಲ ಯತ್ನಾಳ್: ಬಿಜೆಪಿ ಪಾಲಿಗೆ ಬಿಸಿ ತುಪ್ಪ
ಅವರ ಸಿಟ್ಟು ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರ ಕಡೆ ತಿರುಗಿದೆ. ಸ್ಥಳೀಯ ರಾಜಕಾರಣದಲ್ಲಿ ಬಿಜೆಪಿಯ ಮತ್ತೊಬ್ಬ ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಪಕ್ಷದೊಳಗಿನ ತಮ್ಮ ವಿರೋಧಿಗಳ ಜತೆ ಸಚಿವ ಜೋಷಿ ಕೈಜೋಡಿಸುವ ಮೂಲಕ ತಮ್ಮನ್ನು ಮೂಲೆಗೊತ್ತಲು ಹುನ್ನಾರ ನಡೆಸಿದ್ದಾರೆಂಬುದು ಅವರ ಕೋಪಕ್ಕೆ ಕಾರಣ.
ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಬಳ್ಳಾರಿಯ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರನ್ನು ಎಲ್ಲ ರೀತಿಯಿಂದಲೂ ಬಳಸಿಕೊಂಡಿತು. ಬಳ್ಳಾರಿ ಸೇರಿದಂತೆ ರಾಜ್ಯದ ಸುಮಾರು 10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಬಳ್ಳಾರಿಯ ಗಣಿ ದುಡ್ಡೂ ಸಹಾಯ ಮಾಡಿತು ಎಂಬುದು ಬಹಿರಂಗ ಸತ್ಯ.
ಪಕ್ಷದಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಂದರ್ಭದಲ್ಲೆಲ್ಲ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿ ಆರೋಪಗಳಿಂದಾಗಿ ಜೈಲು ಪಾಲಾದಾಗ ಅವರಿಂದ ಎಲ್ಲ ರೀತಿಯ ನೆರವು ಪಡೆದ ಬಿಜೆಪಿಯ ಯಾವ ನಾಯಕರೂ ಬೆಂಬಲಕ್ಕೆ ನಿಲ್ಲಲಿಲ್ಲ . ರಾಜಕೀಯ ನೆಲೆ ಗಟ್ಟಿಗೊಳಿಸಿಕೊಳ್ಳಲು ರೆಡ್ಡಿಯವರ ಪ್ರಭಾವ, ದುಡ್ಡು ಎಲ್ಲವನ್ನೂ ಬಳಸಿಕೊಂಡ ಬಿಜೆಪಿ, ಅವರನ್ನು ಉಂಡ ಬಾಳೆ ಎಲೆಯಂತೆ ಪರಿಗಣಿಸಿತು. ಈಗ ಅದೇ ರೆಡ್ಡಿ ಬಿಜೆಪಿ ವಿರುದ್ಧ ಸಿಡಿದೆದ್ದು ಹೊಸ ಪಕ್ಷ ಘೋಷಿಸಲು ಕಾರಣ.
ಚುನಾವಣೆಯಲ್ಲಿ ಅವರಿಂದ ಬಿಜೆಪಿಗೆ ತೊಂದರೆಯಂತೂ ಖಚಿತ. ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರಾಜ್ಯದ ಗಡಿ ಭಾಗಗಳ ವಿಧಾನಸಭಾ ಕ್ಷೇತ್ರಗಳಲ್ಲಿನ ತನ್ನ ಪ್ರಭಾವ ಬಳಸಿಕೊಂಡು ಕನಿಷ್ಠ 10 ಮಂದಿಯನ್ನಾದರೂ ಗೆಲ್ಲಿಸಿ ತರುವ ಆಲೋಚನೆ ಅವರದ್ದು. ಇನ್ನುಳಿದಂತೆ ಒಂದಷ್ಟು ಕ್ಷೇತ್ರಗಳಲ್ಲಿ ಅವರು ಬಿಜೆಪಿಯ ಗೆಲುವಿಗೆ ಅಡ್ಡಗಾಲು ಆಗಬಹುದು. ಕಲಬುರ್ಗಿ ಜಿಲ್ಲೆಯ ಕೆಲವು ಭಾಗಗಳು, ಯಾದಗಿರಿ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಕೆಲವು ವಿಧಾನಸಭಾ ಕ್ಷೇತ್ರಗಳು ಅವಿಭಜಿತ ಬಳ್ಳಾರಿ ಜಿಲ್ಲೆ, ಚಿತ್ರದುರ್ಗ, ಗದಗ ಜಿಲ್ಲೆಯ ಭಾಗಗಳಲ್ಲಿ ಅವರ ಪ್ರಭಾವ ದಟ್ಟವಾಗಿದೆ.
ಇದನ್ನೂ ಓದಿ: ಯಡಿಯೂರಪ್ಪ ರಾಜತಂತ್ರಕ್ಕೆ ಬೆಚ್ಚಿದ ಬಿಜೆಪಿ ಹೈಕಮಾಂಡ್
ಆಂಧ್ರ- ತೆಲಂಗಾಣ ಸಿಎಂಗಳು ಅಖಾಡಕ್ಕೆ: ರೆಡ್ಡಿ ಬೆಂಬಲಕ್ಕೆ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ನಿಂತಿದ್ದಾರೆ. ಮತ್ತೊಂದು ಕಡೆ ತೆಲಂಗಾಣದ ಮುಖ್ಯಮಂತ್ರಿ ಚಂದ್ರ ಶೇಖರರಾವ್ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ನೆರೆಯ ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿ ಬಿಜೆಪಿ ವಿರುದ್ಧ ಪ್ರಚಾರದ ಅಖಾಡಕ್ಕಿಳಿಯಲಿದ್ದಾರೆ.
ಭಿನ್ನಮತ ಭುಗಿಲೆದ್ದಿರುವ ಸಂದರ್ಭದಲ್ಲೇ ಸರ್ಕಾರ ಲಿಂಗಾಯಿತರಿಗೆ ಮತ್ತು ಒಕ್ಕಲಿಗರಿಗೆ ಹೊಸ ಮೀಸಲಾತಿ ಸೂತ್ರವನ್ನು ಘೋಷಿಸಿದೆ. ಅದರ ವಿವರ ಅಸ್ಪಷ್ಟವಾಗಿದೆ. ಮಿಸಲಾತಿ ಘೋಷಣೆ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಮತ್ತೆ ಗೊಂದಲಗಳಿಗೆ ಕಾರಣರಾಗಿದ್ದಾರೆ.
ಒಕ್ಕಲಿಗರ ಓಲೈಕೆಗೆ ಪ್ರಯತ್ನ: ಉತ್ತರ ಕರ್ನಾಟಕದ ಭಾಗಗಳಲ್ಲಿ ಪಕ್ಷ ನೆಲೆ ಕಳೆದುಕೊಳ್ಳುವ ಆತಂಕ ಮೂಡಿದ್ದು, ದಕ್ಷಿಣದ ಭಾಗದಲ್ಲಿ ಒಕ್ಕಲಿಗರ ಓಲೈಕೆಗೆ ಬಿಜೆಪಿ ಮುಂದಾಗಿದೆ. ಲಿಂಗಾಯಿತರ ಜತೆಗೆ ಒಕ್ಕಲಿಗರ ಶಕ್ತಿಯೂ ದಕ್ಕಿದರೆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಸುಲಭ ಎಂಬುದು ಮತ್ತೊಂದು ಲೆಕ್ಕಾಚಾರ. ಮಂಡ್ಯದ ಸಮಾವೇಶಕ್ಕೆ ಅಮಿತ್ ಶಾ ಅವರನ್ನು ಕರೆಸಿರುವುದರ ಉದ್ದೇಶವೂ ಅದೇ ಆಗಿದೆ. ಒಕ್ಕಲಿಗರೇ ಪ್ರಬಲರಾಗಿರುವ ಜಿಲ್ಲೆಗಳಲ್ಲಿ ಈಗಲೂ ಮಾಜಿ ಪ್ರಧಾನಿ ದೇವೇಗೌಡರ ಹಿಡಿತ ಇದೆ. ಆ ಸಮುದಾಯ ಇಂದಿಗೂ ಗೌಡರ ಬಗ್ಗೆ ಆರಾಧನಾ ಭಾವನೆ ಇಟ್ಟುಕೊಂಡಿದೆ. 90 ರ ಇಳಿ ವಯಸ್ಸಿನಲ್ಲೂ ಅವರು ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಸಿದ್ದು ಹಣಿಯಲು ಮೂಲ ಕಾಂಗ್ರೆಸ್ಸಿಗರ ರಣ ತಂತ್ರ
ಸದ್ಯದ ಸ್ಥಿತಿಯಲ್ಲಿ ಅವರನ್ನು ಸರಿ ತೂಗಿಸುವ ಮತ್ತೊಬ್ಬ ಒಕ್ಕಲಿಗ ನಾಯಕ ಬಿಜೆಪಿಯಲ್ಲಿ ಇಲ್ಲ. ಸಚಿವರಾದ ಡಾ.ಅಶ್ವತ್ಥ ನಾರಾಯಣ, ಆರ್. ಅಶೋಕ್, ಇತ್ತೀಚೆಗೆ ಬಿಜೆಪಿಗೆ ಬಂದು ಸಚಿವರಾದ ಎಸ್.ಟಿ. ಸೋಮಶೇಖರ್, ಗೋಪಾಲಯ್ಯ ತಮ್ಮ ತಮ್ಮ ಕ್ಷೇತ್ರಗಳಿಗಷ್ಠೇ ಸೀಮಿತರು. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಹೆಚ್ಚು ಸಂಖ್ಯೆಯ ಕಾಂಗ್ರೆಸ್ ಶಾಸಕರನ್ನು ಈ ಭಾಗದಿಂದ ಆರಿಸಿ ತರುವ ಪ್ರಯತ್ನದಲ್ಲಿದ್ದಾರೆ.
ಸಮೀಕ್ಷೆ ತಂದ ಆತಂಕ: ಅಮಿತ್ ಶಾ ಕಾರ್ಯ ತಂತ್ರಗಳು ಇಲ್ಲಿ ಫಲ ಕೊಡುವುದು ಅನುಮಾನ ಎಂಬುದನ್ನು ಬಿಜೆಪಿಯ ಕೆಲ ಹಂತದ ಮುಖಂಡರುಗಳೇ ಒಪ್ಪುತ್ತಾರೆ. ಪಕ್ಷ ಇತ್ತೀಚೆಗೆ ನಡೆಸಿರುವ ಮೂರು ಸಮೀಕ್ಷೆಗಳಲ್ಲೂ ರಾಜ್ಯದಲ್ಲಿ ಬಿಜೆಪಿಯ ಪರ ಮತದಾರರಲ್ಲಿ ಅಂತಹ ಒಲವು ಇಲ್ಲ ಎಂಬುದು ವ್ಯಕ್ತವಾಗಿದೆ. ಇದು ದಿಲ್ಲಿ ನಾಯಕರನ್ನು ಕಂಗೆಡಿಸಿದೆ.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರದಿದ್ದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದು ಕಷ್ಟ ಎಂಬ ಬೀತಿಯೂ ಇದಕ್ಕೆ ಕಾರಣ. ಅದಕ್ಕಾಗಿಯೇ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ದಂಡಯಾತ್ರೆ ಕರ್ನಾಟಕದಲ್ಲಿ ಈಗ ಆರಂಭವಾಗಿದೆ.
ಯಗಟಿ ಮೋಹನ್
yagatimohan@gmail.com
Advertisement