
'ಇದು ಗಂಟಲಲ್ಲಿನ ಬಿಸಿ ತುಪ್ಪ, ಉಗಿಯುವಂತಿಲ್ಲ ನುಂಗುವಂತಿಲ್ಲ‘ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕುರಿತು ಪಕ್ಷದ ಪ್ರಮುಖ ನಾಯಕರೊಬ್ಬರು ಹೇಳಿದ ಮಾತು ಇದು. ಸದ್ಯದ ಮಟ್ಟಿಗೆ ಬಿಜೆಪಿ ನಾಯಕತ್ವ ಎದುರಿಸುತ್ತಿರುವ ಪರಿಸ್ಥಿತಿಯೂ ಇದೇ.
ಮೀಸಲಾತಿಗಿಂತ ಯತ್ನಾಳ್ ಗುರಿ ಯಡಿಯೂರಪ್ಪ:
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲೇ ಕೂಡಲ ಸಂಗಮ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿಗೆ ಆಗ್ರಹಿಸಿ ಆರಂಭವಾದ ಪಂಚಮಸಾಲಿ ಸಮುದಾಯದ ಹೊರಾಟದ ಬಿಸಿ ಈಗ ಬಿಜೆಪಿ ಸರ್ಕಾರದ ಬುಡವನ್ನೇ ಸುಡುಲು ಆರಂಭಿಸಿದೆ. ಇದಕ್ಕೆ ಕಾರಣ ಹೋರಾಟದ ಮುಂಚೂಣಿ ನಾಯತ್ವ ವಹಿಸಿರುವುದು ಆಡಳಿತ ಪಕ್ಷದವರೇ ಆದ ಬಸವನಗೌಡ ಪಾಟೀಲ ಯತ್ನಾಳ್. ಮೀಸಲಾತಿ ಹೋರಾಟದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಮುಖಂಡರು ಇದ್ದರೂ ಯತ್ನಾಳ್ ಅವರೊಬ್ಬರೇ ಸರ್ಕಾರದ, ಮುಖ್ಯಮಂತ್ರಿ ವಿರುದ್ಧ ಅಬ್ಬರಿಸುತ್ತಿದ್ದಾರೆ.
ಮುಖ್ಯವಾಗಿ ಅವರ ಹೋರಾಟ ಮೀಸಲಾತಿ ಬೇಡಿಕೆಗಿಂತ ಹೆಚ್ಚಾಗಿ ಪಕ್ಷದೊಳಗಿನ ತಮ್ಮ ವಿರೋಧಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಮತ್ತು ಕೈಗಾರಿಕಾ ಖಾತೆ ಸಚಿವ ಮುರುಗೇಶ ನಿರಾಣಿಯವರನ್ನು ಗುರಿಯಾಗಿಸಿಕೊಂಡಿದೆ. ಹೀಗಾಗಿ ಹೋರಾಟ ಮೀಸಲಾತಿಗಾಗೇ ಆದರೂ ಅದರ ಘನ ಉದ್ದೇಶ ಬೇರೆ ಎಂಬುದು ಕಂಡು ಬರುತ್ತಿರುವ ಅಂಶ. ಬೆಳಗಾವಿಯ ಸುವರ್ಣದ ಸೌಧದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಗಾರರು ಭಾರೀ ಸಂಖ್ಯೆಯಲ್ಲಿ ಸೇರಿ ಬೃಹತ್ ಸಮಾವೇಶ ನಡೆಸಿ ಸರ್ಕಾರದ ವಿರುದ್ಧ ಯುದ್ಧಕ್ಕೆ ಶಂಖನಾದ ಮಾಡಿದ್ದಾರೆ.
ಮೀಸಲಾತಿ ಈಗಿಂದೀಗಲೇ ಘೋಷಿಸದಿದ್ದರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ಕೊಡುವ ಹಂತಕ್ಕೂ ಮುಟ್ಟಿದ್ದಾರೆ. ಇವೇ ಮಾತುಗಳನ್ನು ಯತ್ನಾಳ್ ಹೇಳುತ್ತಿರುವುದು ಇಲ್ಲಿ ಮುಖ್ಯವಾದ ಅಂಶ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಸವರಾಜ ಬೊಮ್ಮಾಯಿ ಬಿಜೆಪಿಯ ಕಡೇ ಮುಖ್ಯಮಂತ್ರಿ ಆಗಬಹುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ರಾಜತಂತ್ರಕ್ಕೆ ಬೆಚ್ಚಿದ ಬಿಜೆಪಿ ಹೈಕಮಾಂಡ್
ಮತ್ತೊಂದು ಕಡೆ ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ತನ್ನ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದು ವಿವರವಾದ ಅಧ್ಯಯನ ಇನ್ನೂ ಸರ್ಕಾರದಿಂದ ಆಗಬೇಕಿದೆ. ಹೋರಾಟಗಾರರ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಒಂದು ವಾರದ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಸದ್ಯಕ್ಕೆ ಚಳವಳಿಯ ಕಾವು ತಣ್ಣಗಾಗ ಬಹುದಾದರೂ ಮುಂದೆ ಸರ್ಕಾರ ಕೈಗೊಳ್ಳುವ ತೀರ್ಮಾನದ ಅದರ ಫಲಿತಾಂಶ ನಿಂತಿದೆ.
ಕಗ್ಗಂಟಾದದ ಮೀಸಲಾತಿ!
ಈಗಾಗಲೇ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಆರ್ಥಿಕವಾಗಿ ದುರ್ಬಲಾರದ ಸಮುದಾಯಗಳಿಗೆ ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೂ ಪಾಲಿಸಬೇಕಾದ ಕಾನೂನಾತ್ಮಕ ಹೊಣೆಗಾರಿಕೆ ಅದರ ಮೇಲಿದೆ.
ಪಂಚಮಸಾಲಿ ಮೀಸಲಾತಿ ಬೇಡಿಕೆಯನ್ನು ಮುಖ್ಯಮಂತ್ರಿ ಹೇಗೆ ನಿಭಾಯಿಸುತ್ತಾರೆ ಎಂಬುದೇ ಈಗ ಯಕ್ಷ ಪ್ರಶ್ನೆ. ಸುಪ್ರೀಂಕೋರ್ಟೇ ಹಿಂದಿನ ಅನೇಕ ತೀರ್ಪುಗಳಲ್ಲಿ ಮೀಸಲಾತಿಯ ಪ್ರಮಾಣ ಶೇ. 50 ನ್ನು ಮೀರುವಂತಿಲ್ಲ ಎಂದು ಹೇಳಿದೆ. ಈ ಸನ್ನಿವೇಶದಲ್ಲಿ ಬೇಡಿಕೆಗೆ ಸರ್ಕಾರ ಒಪ್ಪಿದರೆ ಉಳಿದಂತೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸುತ್ತಿರುವ ಇತರೆ ಹಿಂದುಳಿದ ಸಮುದಾಯಗಳ ಬೇಡಿಕೆಯನ್ನೂ ಈಡೇರಿಸ ಬೇಕಾಗುತ್ತದೆ. ಹಾಗೆಂದು ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರಿಸುತ್ತಿರುವ ಇಕ್ಕಟ್ಟಿನ ಸ್ಥಿತಿ.
ಬಿಜೆಪಿ ನಾಯಕತ್ವದ ನಿಗೂಢ ಮೌನ
ಬಸವನ ಗೌಡ ಪಾಟೀಲ ಯತ್ನಾಳ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಪಕ್ಷದಲ್ಲೇ ಇರುವ ಹಿರಿಯ ನಾಯಕರೊಬ್ಬರ ವಿರೋಧ ಇದೆ ಎಂದೂ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರತ್ತ ಗುರಿ ಇಟ್ಟಿದ್ದಾರೆ. ಈ ಕುರಿತು ಸ್ಪಷ್ಟೀಕರಣ ನೀಡಿರುವ ಯಡಿಯೂರಪ್ಪ, ಪಂಚಮಸಾಲಿ ಸಮುದಾಯದ ಬೇಡಿಕೆ ನ್ಯಾಯಯುತವಾಗಿದ್ದು ಅದಕ್ಕೆ ತಮ್ಮದೇನೂ ವಿರೋಧ ಇಲ್ಲ ಎಂದಿದ್ದಾರೆ. ಮೀಸಲಾತಿ ವಿಚಾರವನ್ನು ಇಟ್ಟುಕೊಂಡು ಸರ್ಕಾರ, ಪಕ್ಷದ ಹಿರಿಯ ನಾಯಕರ ವಿರುದ್ಧ ಯತ್ನಾಳ್ ಗರ್ಜಿಸುತ್ತಿದ್ದರೂ ಪಕ್ಷದ ರಾಜ್ಯಾಧ್ಯಕ್ಷ ರಾಗಲೀ ಅಥವಾ ಕರ್ನಾಟಕದಲ್ಲಿ ಪಕ್ಷದ ಸಂಘಟನೆಯ ಉಸ್ತುವಾರಿ ಹೊತ್ತ ಹೈಕಮಾಂಡ್ ನ ಪ್ರತಿನಿಧಿಗಳಾಗಲೀ ಮಾತನಾಡುತ್ತಿಲ್ಲ.
ಉಳಿದವರು ಲೆಕ್ಕಕ್ಕಿಲ್ಲ?
ಇನ್ನೂ ಕುತೂಹಲಕಾರಿ ಸಂಗತಿ ಎಂದರೆ ಈ ಹೋರಾಟದಲ್ಲಿ ತೊಡಗಿಸಿ ಕೊಂಡಿರುವ ಕಾಂಗ್ರೆಸ್ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅಥವಾ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಬೇರೆ ಪಕ್ಷಗಳ ಮುಖಂಡರು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಬಹಿರಂಗ ಸಭೆಗಳಲ್ಲಿ ಬಸವನಗೌಡ ತಾನು ಮಂತ್ರಿ ಪದವಿ ಅಥವಾ ಇನ್ಯಾವುದೇ ಅಧಿಕಾರದ ಆಸೆಯಿಂದ ಹೋರಾಟ ಮಾಡುತ್ತಿಲ್ಲ ಸಮುದಾಯಕ್ಕೆ ಸೌಲಭ್ಯ ಸಿಗಲು ಚಳವಳಿಗೆ ಧುಮುಕಿದ್ದೇನೆ ಎನ್ನುತ್ತಿದ್ದಾರೆ. ಆದರೆ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರ ಮಾತು ಇದಕ್ಕಿಂತ ವಿಭಿನ್ನವಾಗಿದೆ. ಅಲ್ಲಿಗೆ ಈ ಹೋರಾಟದ ಹಿಂದೆ ಮೀಸಲಾತಿ ಪಡೆಯುವುದರ ಹೊರತಾಗಿಯೂ ಇನ್ನೊಂದು ಮುಖ್ಯ ಉದ್ದೇಶವಿದೆ. ಅದು ಎಂದರೆ ಅಧಿಕಾರ ಹಿಡಿಯುವುದು.
ಈ ಹೋರಾಟದ ಜತೆಗೆ ಯತ್ನಾಳ್ ಸರ್ಕಾರದ ಶೈಕ್ಷಣಿಕ ನೀತಿಯ ವಿರುದ್ಧವೂ ಸಿಡಿದೆದ್ದಿದಾರೆ. ಹೊಸ ವಿಶ್ವ ವಿದ್ಯಾನಿಲಯಗಳನ್ನು ಆರಂಭಿಸುವ ಸರ್ಕಾರದ ಕ್ರಮ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುವ ಹುನ್ನಾರ ಎಂಬುದು ಅವರ ಗಂಭಿರ ಆರೋಪ. ಜಿಲ್ಲೆಗೊಂದರಂತೆ ವಿಶ್ವವಿದ್ಯಾನಿಲಯ ಗಳನ್ನು ಸ್ಥಾಪಿಸುತ್ತಾ ಹೋದರೆ ವಿವಿಗಳ ಘನತೆ ಮತ್ತು ಮಹತ್ವ ಉಳಿಯುವುದಿಲ್ಲ ಎಂಬ ಅವರ ಹೇಳಿಕೆಯ ಹಿಂದೆ ಪ್ರಾಮಾಣಿಕ ಕಳಕಳಿ
ಇದೆ. ವಿವಿ ಕುಲಪತಿಗಳ ಹುದ್ದೆಯೂ ಭ್ರಷ್ಟಾಚಾರದ ಕೇಂದ್ರಗಳಾಗಿರುವುದರ ಬಗ್ಗೆಯೂ ಅವರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಸರ್ಕಾರ ಅದನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದು ಸದ್ಯದ ಪ್ರಶ್ನೆ.
ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆಯ ಬಗ್ಗೆ ಜಯ ಮೃತ್ಯುಂಜಯ ಸ್ವಾಮೀಜಿಯವರು ಹೊರತು ಪಡಿಸಿ ಜನಾಂಗದ ಉಳಿದ ಜಗದ್ಗುರುಗಳು ಮೌನ ವಹಿಸಿರುವುದು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ. ಇನ್ನು ಶಿಸ್ತಿನ ವಿಚಾರಕ್ಕೆ ಬಂದರೆ ಬಿಜೆಪಿಯಲ್ಲಿ ಆಂತರಿಕ ಶಿಸ್ತು ಕಣ್ಮರೆಯಾಗಿ ಬಹಳ ಕಾಲವೇ ಕಳೆದು ಹೋಗಿದೆ. ಬಹಳಷ್ಟು ಮುಖಂಡರು ಅದನ್ನು ಲೆಕ್ಕಕ್ಕೆ ಇಟ್ಟಂತಿಲ್ಲ. ರಾಜ್ಯದಲ್ಲಿ ಈ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಬೆಳೆ ಹಾನಿ, ನಷ್ಟಗಳ ಬಗ್ಗೆ ಧ್ವನಿ ಎತ್ತಿದ್ದ ಯತ್ನಾಳ್ ಪ್ರಧಾನಿ, ಕೇಂದ್ರ ಸಚಿವರ ವಿರುದ್ಧವೂ ಗುಡುಗಿದ್ದರು. ಆ ಸಂದರ್ಭದಲ್ಲಿ ಪಕ್ಷದ ಶಿಸ್ತು ಉಲ್ಲಂಘನೆ ಆಗಿದೆ ಎಂದು ಅವರಿಗೆ ನೋಟಿಸ್ ನೀಡಲಾಗಿತ್ತು. ನಂತರ ಕಾರ್ಯಕರ್ತರ ಸಭೆಯಲ್ಲೇ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಪಕ್ಷದಿಂದ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಈ ಯಾವ ಎಚ್ಚರಿಕೆಗಳಿಗೂ ಯತ್ನಾಳ್ ಸೊಪ್ಪು ಹಾಕಲಿಲ್ಲ. ಕಡೆಗೆ ಅರುಣ್ ಸಿಂಗ್ ಅವರೇ ರಾಜಿ ಸಂಧಾನಕ್ಕೆ ಮುಂದಾದರು. ಸ್ವಲ್ಪ ಕಾಲ ತನ್ಣಗಾಗಿದ್ದ ಯತ್ನಾಳ್ ಮತ್ತೆ ಸಿಡಿದು ನಿಂತಿದ್ದಾರೆ. ಅವರ ನೇರ ಗುರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಂಬುದು ನಿರ್ವಿವಾದ. ಚುನಾವಣೆ ಸಮಿಪಿಸುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ನಾಯಕತ್ವವೂ ಇಕ್ಕಟ್ಟಿಗೆ ಸಿಕ್ಕಿದೆ. ಶಿಸ್ತು ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಯಾಕೆಂದರೆ ಮೋದಿ ಆಡಳಿತವನ್ನು ಯತ್ನಾಳ್ ಕೊಂಡಾಡುತ್ತಿರು ವುದಷ್ಟೇ ಅಲ್ಲ ಕಟ್ಟರ್ ಹಿಂದುತ್ವ ವಾದಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಅವರ ವಿರುದ್ಧ ಈಗ ಶಿಸ್ತು ಕ್ರಮ ಕೈಗೊಂಡರೆ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಪಂಚಮಸಾಲಿ ಲಿಂಗಾಯಿತ ಸಮುದಾಯ ಬಿಜೆಪಿ ವಿರುದ್ಧ ಮುನಿಸಿಕೊಳ್ಳಬಹುದು. ಅಥವಾ ಯತ್ನಾಳ್ ಅವರೇ ಬಿಜೆಪಿಯ ಗೆಲುವಿನ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಬಹುದು. ಹಿಂದೊಮ್ಮೆ ಯಡಿಯೂರಪ್ಪ ಅವರು ಬಂಡಾಯ ಎದ್ದು ಬೇರೆ ಪಕ್ಷ ಸ್ಥಾಪಿಸಿದ ಸಂದರ್ಭದಲ್ಲಿ ಬಿಜೆಪಿಗೆ ಸಾಕಷ್ಟು ಹಾನಿ ಆಗಿತ್ತು. ಹೀಗಾಗಿ ಮತ್ತೆ ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳಲು ಬಿಜೆಪಿ ಹೈಕಮಾಂಡ್ ತಯಾರಿಲ್ಲ.. ಬರೇ ಹಿಂದುತ್ವದ ಅಜೆಂಡಾ ಆಧಾರದ ಮೇಲೆಯೇ ಅಧಿಕಾರಕ್ಕೆ ಬರಲು ಕರ್ನಾಟಕದಲ್ಲಿ ಸಾಧ್ಯವಿಲ್ಲ ಎಂಬ ವಾಸ್ತವ ಸಂಗತಿಯೂ ಮನವರಿಕೆ ಆಗಿದೆ.
ಏನಾದರೂ ಒಂದು ಸಂಧಾನದ ಸೂತ್ರ ರೂಪಿಸಲು ಸದ್ಯದ ಪರಿಸ್ಥಿತಿ ಅನುಕೂಲವಾಗಿಲ್ಲ. ಚುನಾವಣೆಗೆ ಇನ್ನು ನಾಲ್ಕು ತಿಂಗಳು ಇರುವ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಿಸಿದರೂ ವಿಸ್ತರಿಸದೇ ಇದ್ದರೂ ಪರಿಣಾಮವೇನೂ ಬದಲಾಗುವುದಿಲ್ಲ. ಹೊಸ ಸಚಿವರು ಹೊಣೆಗಾರಿಕೆ ವಹಿಸಿಕೊಳ್ಳುವ ವೇಳೆಗೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ. ಅಧಿಕಾರ ಇದ್ದರೂ ಪ್ರಯೋಜನಕ್ಕಿಲ್ಲ. ಆದರೂ ಸರಿ ನಮ್ಮನ್ನ ಹೇಗಾದರೂ ಮಂತ್ರಿ ಮಾಡಿ ಎಂಬ ಪಟ್ಟಿಯಲ್ಲಿ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತಿತರರಿದ್ದಾರೆ.
ಈಗಿನ ಮಂತ್ರಿ ಮಂಡಲದಲ್ಲಿ ಸಚಿವರಾಗುವ ಆಸಕ್ತಿ ಯತ್ನಾಳ್ ಅವರಿಗೂ ಇಲ್ಲ. ಇನ್ನುಳಿದಿರುವುದು ರಾಜ್ಯ ಸಭೆ ಸದಸ್ಯರಾಗಿ ಕೇಂದ್ರ ಮಂತ್ರಿ ಆಗುವುದು ಅದೂ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಈ ಎಲ್ಲದರ ಸುಳಿವರಿತೇ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.ಒಂದು ವೇಳೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸುವುದೇ ಆದರೆ ತನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಎಂಬುದು ಅವರ ಬೇಡಿಕೆ. ಚುನಾವಣೆ ಸಮಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆ ದೊರಕಿದರೆ ಮುಂದಿನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಅವಕಾಶ ಸಿಗಬಹದುದು ಎಂಬುದು ಲೆಕ್ಕಾಚಾರ.
ಆದರೆ ಅವರ ಸ್ವಭಾವ ಅರಿತಿರುವ ಬಿಜೆಪಿಯ ಅತಿರಥ ಮಹಾರಥರು ಇದಕ್ಕೆ ವಿರೋಧ ವ್ಯಕ್ತಪಡಿಸುವ ಸಂಭವವೇ ಜಾಸ್ತಿ. ನಳಿನ್ ಕುಮಾರ್ ಕಟೀಲ್ ಬೆಂಗಾವಲಿಗೆ ಸ್ವತಹಾ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೇ ನಿಂತಿದ್ದಾರೆ. ಹೀಗಾಗಿ ಅಧ್ಯಕ್ಷ ಹುದ್ದೆ ಖಾಲಿ ಆಗುವ ಸಾಧ್ಯತೆಗಳು ದೂರ. ಎಲ್ಲಕ್ಕೂ ಮಿಗಿಲಾಗಿ ಯಡಿಯೂರಪ್ಪ ಸೇರಿದಂತೆ ಅನೇಕ ಪ್ರಮುಖ ನಾಯಕರು ಈ ವಿಚಾರದಲ್ಲಿ ವಿರೋಧಿಸಲು ಒಂದಾಗಲೂ ಬಹುದು. ಬಿಜೆಪಿಯನ್ನು ಕಾಡುತ್ತಿರುವುದು ಇದೇ ಪ್ರಶ್ನೆ.
ಕಾಂಗ್ರೆಸ್ ನಾಯಕರ ಹಿಮ್ಮೇಳ
ಈ ಹಿಂದೆ ಕಾಂಗ್ರೆಸ್ ನ ಎಂ.ಬಿ.ಪಾಟೀಲ್ ನಡೆದಿದ್ದ ದಾರಿಯಲ್ಲೇ ಯತ್ನಾಳ್ ನಡೆಯುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಕಾಂಗ್ರೆಸ್ ನ ಪ್ರಮುಖ ನಾಯಕರೊಬ್ಬರಿಗೆ ಹತ್ತಿರವಾಗಿದ್ದಾರೆ. ಅವರ ನಿರ್ದೇಶನಕ್ಕೆ ಅನುಸಾರವಾಗೇ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಮಾತುಗಳೂ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಈ ಅನುಮಾನ ನಿಜವಾದರೆ ಅದರಿಂದ ಕಾಂಗ್ರೆಸ್ ಗೆ ಹೆಚ್ಚಿನ ಲಾಭ ಆಗುವುದು ಸತ್ಯ ಸದ್ಯಕ್ಕೆ ಯತ್ನಾಳ್ ಬಿಜೆಪಿಗೆ ಗಂಟಲಲ್ಲಿ ಸಿಕ್ಕಿರುವ ಬಿಸಿ ತುಪ್ಪ. ಈ ಇಕ್ಕಟ್ಟಿನ ಸ್ಥಿತಿಯಿಂದ ಪಾರಾಗುವ ದಾರಿ ಹೈಕಮಾಂಡ್ ನಾಯಕರಿಗೂ ಕಾಣುತ್ತಿಲ್ಲ.
ಯಗಟಿ ಮೋಹನ್
yagatimohan@gmail.com
Advertisement