ಡಾ. ಅಶ್ವತ್ಥ ನಾರಾಯಣ ಹೇಳಿಕೆ: ಸಿದ್ದರಾಮಯ್ಯ ತೋಡಿದ ಹಳ್ಳಕ್ಕೆ ಬಿದ್ದ ಬಿಜೆಪಿ! (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್'ಇದು ತಲೆ ಗಟ್ಟಿ ಇದೆ ಎಂದುಕೊಂಡು ಬಂಡೆಗೆ ಡಿಕ್ಕಿ ಹೊಡೆದವರ ಕತೆ'
ಮಾಜಿ ಸಿಎಂ ಸಿದ್ದರಾಮಯ್ಯ- ಸಚಿವ ಅಶ್ವತ್ಥನಾರಾಯಣ
ಮಾಜಿ ಸಿಎಂ ಸಿದ್ದರಾಮಯ್ಯ- ಸಚಿವ ಅಶ್ವತ್ಥನಾರಾಯಣ

ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಆಡಿರುವ ಮಾತುಗಳು ರಾಜಕಾರಣದ ವಲಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಇದೇ ಈಗ ಬಿಜೆಪಿ ವಿರುದ್ಧದ ಸೆಣಸಾಟಕ್ಕೆ ಕಾಂಗ್ರೆಸ್ ಗೆ ಪ್ರಮುಖ ಅಸ್ತ್ರ.

ಇದು ಚುನಾವಣೆ ಕಾಲ. ಆಡಳಿತ ಪಕ್ಷದ ವೈಫಲ್ಯಗಳ ಕುರಿತು ಪ್ರತಿಪಕ್ಷಗಳು, ಅದರ ನಾಯಕರು ಬಿರುಸಾದ ಮಾತುಗಳ ಪ್ರಯೋಗ ಮಾಡುವುದು, ಆ ಮೂಲಕ ಜನರ ಮನ್ನಣೆ ಗಳಿಸುವುದು (ಜನ ಮನ್ನಣೆ ಸಿಕ್ಕಿತೆಂದು ಭಾವಿಸುವುದು ಅಂದರೆ ಸರಿಯಾದೀತು) ಸಾಮಾನ್ಯ ಸಂಗತಿ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಈಗ ಜನರೂ ಬದಲಾಗುತ್ತಿದ್ದಾರೆ. ರಾಜಕೀಯ ಪಕ್ಷಗಳ ನಾಯರು ಬಹಿರಂಗ ಸಭೆಗಳಲ್ಲಿ ಮಾಡುವ ಭಾಷಣಗಳು ಜನರಿಗೆ ಮನರಂಜನೆಯ ಸರಕಾಗಿರುವುದರಿಂದ ಅವರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಆದರೆ ಎದುರಾಳಿ ಪಕ್ಷದ ನಾಯಕರನ್ನು ಟೀಕಿಸುವವವರಿಗೆ ತಮ್ಮ ಮಾತಿನಲ್ಲಿ ಸಂಯಮ, ವಿವೇಚನೆ ಇರದೇ ಇದ್ದರೆ ಆಡುವ ಮಾತು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ನೇರ ಉದಾಹರಣೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮೊನ್ನೆ ಮಂಡ್ಯದಲ್ಲಿ ಬಿಜೆಪಿ ಏಪಡಿಸಿದ್ದ ಸಭೆಯಲ್ಲಿ ಮಾತನಾಡುವಾಗ ಟಿಪ್ಪು ಸುಲ್ತಾನ್ ರಿತಿಯಲ್ಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರನ್ನೂ ಹೊಡೆದು ಹಾಕಿಬಿಡಿ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಕ್ಕಿದ್ದಾರೆ. ಅವರ ಮಾತಿಗೆ ಎಲ್ಲ ಕಡೆಗಳಿಂದ ಖಂಡನೆಗಳು ವ್ಯಕ್ತವಾಗಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯದ ವಿವಿದ ಕಡೆ ಅವರ ಈ ಪ್ರಚೋದನಕಾರಿ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ.

ಡಾ. ಅಶ್ವತ್ಥನಾರಾಯಣ ಹೇಳಿಕೆಗೆ ಶಾಂತವಾಗೇ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ 'ಬನ್ನಿ ಹೊಡೆದು ಹಾಕಿ' ಎಂದು ಹೇಳುತ್ತಲೇ ಸಚಿವರ  ಹೇಳಿಕೆಯ ಪರಾಮರ್ಶೆಯನ್ನು ಜನತೆಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಟ್ಟಿದ್ದಾರೆ. ಇದು ಅವರಿಗಿರುವ ದಶಕಗಳ ರಾಜಕಾರಣದ ಅನುಭವಕ್ಕೆ ತಾಜಾ ಉದಾಹರಣೆ. ಅಶ್ವತ್ಥನಾರಾಯಣ ಅವರಂತೆ ಸಿದ್ದರಾಮಯ್ಯ ವಿವೇಕ ಕಳೆದುಕೊಂಡಿಲ್ಲ. ಅವರ ತಣ್ಣನೆಯ ಪ್ರತಿಕ್ರಿಯೆಯ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಇವೆ. ಆ ಮಟ್ಟಿಗೆ ಅವರು ಜನರ ಅನುಕಂಪ ಗಿಟ್ಟಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ತಮ್ಮದೇ ಪಕ್ಷದ ಸಚಿವರ ಹೇಳಿಕೆಯಿಂದ ಫಜೀತಿಗೆ ಸಿಕ್ಕಿರುವುದು ಮಾತ್ರ ಬಿಜೆಪಿಯ ನಾಯಕರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಇತರ ಸಚಿವ ಸಹೋದ್ಯೋಗಿಗಳು ಅವರನ್ನು ಸಮರ್ಥಿಸಿಕೊಳ್ಳುವ ಸಾಹಸಕ್ಕೆ ಇಳಿದಿಲ್ಲ. ಬದಲಾಗಿ ಅಂತರ ಕಾಯ್ದುಕೊಂಡಿದ್ದಾರೆ. ಅದೆಲ್ಲ ಏನೇ ಇರಲಿ ತಾನು ಆಡದ ಮಾತಿಗೆ ಅಶ್ವತ್ಥ ನಾರಾಯಣ ಬೇಕೋ ಬೇಡವೋ ಎಂಬಂತೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲೂ ತಾನೇನೂ ತಪ್ಪುಮಾಡಿಲ್ಲ ಎಂಬ ಭಾವವೇ ಅಡಗಿದೆ. ಹೀಗಾಗಿ ಪ್ರಕರಣ ಇಷ್ಟಕ್ಕೇ ಮುಗಿಯುವಂತೆ ಕಾಣುತ್ತಿಲ್ಲ.

ಚುನಾವಣೆಯ ಸಮಯದಲ್ಲಿ ಸರ್ಕಾರದ ಕಾರ್ಯಕ್ರಮಗಳು, ಸಾಧನೆ, ಜನಪ್ರಿಯತೆ ಆಡಳಿತ ಪಕ್ಷಕ್ಕೆ ಪ್ರಚಾರದ ವಿಷಯವಾಗಬೇಕು. ಪ್ರತಿಪಕ್ಷಗಳ ಸಿದ್ಧಾಂತ, ದೌರ್ಬಲ್ಯಗಳ ಮೇಲೆ ರಾಜಕೀಯ ಕಾರ್ಯತಂತ್ರ ರಚನೆ ಆಗಬೇಕು. ಆದರೆ ಚುನಾವಣೆ ಹತ್ತಿರವಾಗುತ್ತಿರುವ ಈ ದಿನಗಳಲ್ಲಿ ಅವೆಲ್ಲವನ್ನೂ ಬಿಟ್ಟು ಜನರ ಮನಸ್ಸನ್ನು ಕೆರಳಿಸಿ ಅದರ ಲಾಭ ಮಾಡಿಕೊಳ್ಳಲು ಆಡಳಿತ ಪಕ್ಷ ಬಿಜೆಪಿ ಹೊರಟಿರುವುದೇ ರಾದ್ದಾಂತಕ್ಕೆ ಕಾರಣ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಹಗರಣಗಳು ಸದ್ದು ಮಾಡತೊಡಗಿವೆ. ಅದರಲ್ಲೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರದ ಆಡಳಿತದ ವೈಖರಿಯೇ ದಿಕ್ಕು ತಪ್ಪಿದೆ ಎಂಬ ಟೀಕೆಗಳು ಆಡಳಿತ ಪಕ್ಷದ ಪಡಸಾಲೆಗಳಲ್ಲೇ ಕೇಳಿ ಬರುತ್ತಿದೆ. ಸಚಿವ ಸಹೋದ್ಯೋಗಿಗಳ ಮೇಲೆ ಮುಖ್ಯಮಂತ್ರಿಗೆ ಹಿಡಿತವೇ ಇಲ್ಲ. ಮುಖ್ಯಮಂತ್ರಿಯದ್ದೇ ಒಂದು ದಾರಿಯಾದರೆ ಸಚಿವರದ್ದೇ ಇನ್ನೊಂದು ದಾರಿ ಎಂಬಂತೆ ಆಡಳಿತ ನಡೆಯುತ್ತಿದೆ ಎಂಬ ಟೀಕೆಗಳನ್ನು ಸಮರ್ಥಿಸುವ ರೀತಿಯಲ್ಲಿ ಹಗರಣಗಳು ಸದ್ದು ಮಾಡುತ್ತಿವೆ. ಪಕ್ಷ ಮತ್ತು ಸರ್ಕಾರದ ನಡುವೆಯೂ ಸಮನ್ವಯತೆ ಕಾಣುತ್ತಿಲ್ಲ ಮುಖ್ಯಮಂತ್ರಿ ಒಂದು ಮಾತು ಹೇಳಿದರೆ ಪಕ್ಷದ ರಾಜ್ಯಾಧ್ಯಕ್ಷರು ಬೇರೆಯದೇ ಮಾತು ಆಡುತ್ತಾರೆ. ಇದು ಸರ್ಕಾರ ಮತ್ತು ಪಕ್ಷ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದಕ್ಕೆ ನೇರ ಉದಾಹರಣೆ.

ತೀರಾ ಇತ್ತೀಚೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಮಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯೊಂದರಲ್ಲಿ ಮಾತನಾಡುತ್ತ  'ರಸ್ತೆಗಳು, ಮತ್ತಿತರ ಅಭಿವೃದ್ಧಿ ವಿಚಾರಗಳ ಬಗ್ಗೆ ಕೇಳಬೇಡಿ. ಲವ್ ಜಿಹಾದ್ ನಡೆಯದಂತೆ ಕಟ್ಟೆಚ್ಚರ ವಹಿಸಿ ತಡೆಯಿರಿ' ಎಂದು ಹೇಳಿದ್ದರು. ಇದು ಇನ್ನೂ ಮುಂದೆ ಹೋಗಿ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ಬೇಕೋ ಸಾವರ್ಕರ್ ಬೇಕೋ ಎಂಬ ವಿಚಾರವೇ ಪ್ರಧಾನವಾಗಲಿದೆ ಎಂದೂ ಹೇಳಿದ್ದಾರೆ. ಹೇಳಿಕೆಗಳಿಗೆ ಸಹಜವಾಗೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದಾರೆ. ಅದು ಪ್ರತಿಪಕ್ಷದ ನಾಯಕರಾಗಿ ಅವರದ್ದು ಸಹಜ ಪ್ರತಿಕ್ರಿಯೆ.

ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಧರ್ಮ-ಧರ್ಮಗಳ ನಡುವೆ ಧ್ವೇಷ ಬಿತ್ತಿ ರಾಜಕೀಯ ಲಾಭ ಪಡೆಯುವ ಬಿಜೆಪಿಯ ರಾಜಕೀಯ ಕಾರ್ಯತಂತ್ರ  ಹೊಸದೇನಲ್ಲ. ಆದರೆ ಅಧಿಕಾರಕ್ಕೆ ಬಂದ ನಂತರವೂ ಅದೇ ಜಪವನ್ನು ಮುಂದುವರಿಸಿದೆ. ವ್ಯತ್ಯಾಸ ಎಂದರೆ ತನ್ನ ಹಗರಣಗಳನ್ನು ಮುಚ್ಚಿಕೊಳ್ಳಲು ಆ ಮೂಲಕ ಜನರ ಗಮನ ಬೇರೆ ಕಡೆ ಸೆಳೆದು ರಾಜಕೀಯ ಲಾಭ ಪಡೆಯುವ ಹುನ್ನಾರ ಈ ಕಾರ್ಯ ತಂತ್ರದ ಒಂದು ಭಾಗ ಎಂಬುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ.

ಇಗ ಇದರ ಮುಂದುವರಿದ ಭಾಗ ಬಂತೆ ಸಚಿವ ಡಾ.ಅಶ್ವತ್ಥನಾರಾಯಣ ಟಿಪ್ಪೂ ರೀತಿಯಲ್ಲೇ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಒಬ್ಬ ವ್ಯಕ್ತಿಯನ್ನು ಸೈದ್ಧಾಂತಿಕವಾಗಿ ಎದುರಿಸಿ ಗೆಲ್ಲಲು ಸಾಮರ್ಥ್ಯ ಇಲ್ಲದೇ ಹೋದಾಗ ಇಂತಹ ವಿಕೃತಿಗಳು ಮಾತುಗಳಾಗಿ ಹೊರ ಬರುತ್ತವೆ ಎಂಬುದಕ್ಕೆ ಸಚಿವರ ಹೇಳಿಕೆಯೇ ಸಾಕ್ಷಿ. ಡಾ. ಅಶ್ವತ್ಥ ನಾರಾಯಣ ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರಾಗಿ ಬೆಳೆಯುವ ಹುಮ್ಮಸ್ಸಿನಲ್ಲಿದ್ದಾರೆ. ಆ ಹುಮ್ಮಸ್ಸು ಆಗಾಗ  ಅವರು ಸಾರ್ವಜನಿಕ ಸಭೆಗಳಲ್ಲಿ ಅದೂ ಮುಖ್ಯಮಂತ್ರಿ ಎದುರೇ ಗಂಡಸ್ತನ ಪ್ರದರ್ಶನದ ಮಾತುಗಳನ್ನು ಆಡಿಸುತ್ತದೆ. ಸರ್ಕಾರಿ ಕಾರ್ಯಕ್ರಮದಲ್ಲೇ ಅವರು ಜನರು ಇದ್ದಾರೆ ಎಂಬುದನ್ನೇ ಮರೆತು ಎದುರಾಳಿ ಪಕ್ಷದ ಜನಪ್ರತಿನಿಧಿಗಳ ಮೇಲೆ ತೋಳೇರಿಸಿ, ಎದೆಯುಬ್ಬಿಸಿ ಪರಾಕ್ರಮ ಪ್ರದರ್ಶನಕ್ಕೆ ಮುಂದಾಗುತ್ತಾರೆ. ನಂತರ ತಮ್ಮ ವರ್ತನೆ ಬಗ್ಗೆ ಸಾರ್ವತ್ರಿಕವಾಗಿ ಆಕ್ಷೇಪಗಳು, ಟೀಕೆಗಳು ತೀವ್ರವಾಗ ತೊಡಗಿದಾಗ ವಿಷಾದ ವ್ಯಕ್ತಪಡಿಸುತ್ತಾರೆ. ಅವರ ವರ್ತನೆ ಒಂದು ರೀತಿಯಲ್ಲಿ ರಾಜ್ಯದ ಜನಕ್ಕೆ ಮನರಂಜನೆಯ ವಸ್ತುವಾಗಿ ಬಿಟ್ಟಿದೆ. ಇದು ಅವರು ಪ್ರತಿನಿಧಿಸುವ ರಾಜಕೀಯ ಪಕ್ಷದ, ಅವರನ್ನು ಬೆಳೆಸಿದ ಸಂಘಟನೆಯ ದುರಂತವೂ ಹೌದು.

ಸಿದ್ದರಾಮಯ್ಯ ಸುದೀರ್ಘ ಅವಧಿಯಿಂದ ರಾಜ್ಯ ರಾಜಕಾರಣದಲ್ಲಿದ್ದಾರೆ. ವಿವಿಧ ಖಾತೆಗಳ ಸಚಿವರಾಗಿ, ಸುದೀರ್ಘ ಅವಧಿಗೆ ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷ ರಾಜಕಾರಣದ ಹೊರತಾಗಿಯೂ ರಾಜ್ಯದಲ್ಲಿ ಅವರಿಗೆ ಒಂದು ಪ್ರಬಲವಾದ ವೈಯಕ್ತಿಕ ರಾಜಕೀಯ ಅಸ್ತಿತ್ವ ಇದೆ ಎಂಬುದನ್ನು ಅವರನ್ನು ರಾಜಕೀಯವಾಗಿ ವಿರೋಧಿಸುವವರೂ ಒಪ್ಪಿಕೊಳ್ಳುತ್ತಾರೆ. ಇಂತಹ ಸನ್ನಿವೇಶದಲ್ಲಿ ಪ್ರತಿ ಪಕ್ಷದ ನಾಯಕನನ್ನು ಟೀಕಿಸುವಾಗ ಸಂಯಮ ಪ್ರದರ್ಶಿಸಬೇಕಾದ ಮಂತ್ರಿಯೇ ದಾರಿ ತಪ್ಪಿ ಎದುರಾಳಿಯ ನಿರ್ಮೂಲನಕ್ಕೆ ರೌಡಿಗಳಿಗೆ ಸುಪಾರಿ ನೀಡುವವರಂತೆ ಮಾತನಾಡಿದ್ದು ಸರಿಯೆ? ಎಂಬುದನ್ನು ಅನೇಕ  ಹಿರಿಯ ಮುತ್ಸದ್ದಿ ನಾಯಕರ ಜತೆ ಕೆಲಸ ಮಾಡಿ ಅನುಭವ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಹೇಳ ಬೇಕು. ಈ ವಿಚಾರದಲ್ಲಿ ಅವರು ನಿಗೂಢ ಮೌನಕ್ಕೆ ಶರಣಾಗಿರುವುದು ರಾಜಕೀಯ ವಲಯಗಳಲ್ಲಿ ಮತ್ತು ರಾಜ್ಯದ ಜನತೆಯಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.

ಸಚಿವ ಸ್ಥಾನದ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸಚಿವನಾಗುವ ವ್ಯಕ್ತಿ ತಾನು ಸಚಿವನಾಗಿ ದೇಶದ ಸಂವಿಧಾನ, ಸಾರ್ವ ಭೌಮತೆಯನ್ನು ಎತ್ತಿ ಹಿಡಿಯುತ್ತೇನೆಂದೂ, ರಾಗ ದ್ವೇಷ ಅಥವಾ ಪಕ್ಷಪಾತವಿಲ್ಲದೇ ಜನರಿಗೆ ನ್ಯಾಯ ಒದಗಿಸುತ್ತೆನೆಂದೂ ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾನೆ. ನಮ್ಮಲ್ಲಿ ಸಚಿವರಾಗುವ ಅನೇಕರಿಗೆ ಈ ಪ್ರಮಾಣ ವಚನದ ಅರ್ಥವೇ ಗೊತ್ತಿರುವುದಿಲ್ಲ. ಅವರನ್ನು ಸೃಷ್ಟಿಸುವ ರಾಜಕೀಯ ಪಕ್ಷಗಳೂ ಈ ವಿಚಾರದಲ್ಲಿ ಅವರನ್ನು ತರಬೇತುಗೊಳಿಸುವ ಅಥವಾ ತಿಳಿವಳಿಕೆ ಮೂಡಿಸುವ ಪ್ರಯತ್ನವನ್ನು ಮಾಡುವುದಿಲ್ಲ. ಇದಕ್ಕೆ ಸಚಿವ ಡಾ. ಅಶ್ವತ್ಥನಾರಾಯಣ ವರ್ತನೆಗಳೇ ಸಾಕ್ಷಿ.

ಈಗ ಅವರ ವಿರುದ್ಧ ನೀಡಿರುವ ದೂರುಗಳ ಬಗ್ಗೆ ರಾಜ್ಯದ ಪೊಲಿಸರು ಪ್ರಕರಣ ದಾಖಲಿಸುವ ಧೈರ್ಯ ಪ್ರದರ್ಶಿಸುತ್ತಾರೆಯೆ? ಎಂಬುದು ಉಳಿದಿರುವ ಪ್ರಶ್ನೆ.

ಈ ಸಂದರ್ಭದಲ್ಲಿ ಒಂದು ಪ್ರಸಂಗವನ್ನು ಉಲ್ಲೇಖಿಸಲೇ ಬೇಕು. ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ಸಂಪುದ ಸಚಿವರಾಗಿದ್ದ ಟಿ.ಜಾನ್ ವಿರುದ್ಧ ಅಧಿಕಾರ ದುರುಪಯೋಗದಂತಹ ತೀವ್ರ ತರವಾದ ಆರೋಪಗಳನ್ನು ಅಂದು ಪ್ರತಿಪಕ್ಷವಾಗಿದ್ದ ಬಿಜೆಪಿ ಮಾಡಿತ್ತು. ಇದು ಸಾಕಷ್ಟು ವಿವಾದಗಳಿಗೂ ಕಾರಣವಾಗಿತ್ತು. ಇಂಥದೇ ಸಂದರ್ಭದಲ್ಲಿ ಗುಜರಾತ್ ನಲ್ಲಿ ನಡೆದ ಭೂಕಂಪದಲ್ಲಿ ನಡೆದ ಸಾವು ನೋವುಗಳಿಗೆ ಸಂಬಂಧಿಸಿದಂತೆ ಸಚಿವ ಜಾನ್ ಅವರು ನೀಡಿದ್ದ ಹೇಳಿಕೆಯೊಂದು ವಿವಾದದ ಸ್ವರೂಪ ಪಡೆದು ಕಡೆಗೆ ಅಂದು ಪ್ರತಿಪಕ್ಷವಾಗಿದ್ದ ಬಿಜೆಪಿ ದೊಡ್ಡ ಹೊರಾಟವನ್ನೇ ಮಾಡಿತ್ತಲ್ಲದೇ ಸಚಿವರಾಗಿ ಜಾನ್ ಮಾನವೀಯತೆ ಮರೆತು ವರ್ತಿಸಿದ್ದಾರೆ, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದಿತ್ತು. ವಿವಾದ ದೊಡ್ಡದಾಗಿ ಆವರಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವವರು ಜಾನ್ ಅವರಿಂದ ಅನಿವಾರ್ಯವಾಗಿ ರಾಜೀನಾಮೆ ಪಡೆದರು. ಅಲ್ಲಿಗೆ ವಿವಾದ ತಣ್ಣಗಾಯಿತು. ಈಗ ಅಂಥದೇ ಪರಿಸ್ಥಿತಿ ಎದುರಾಗಿದೆ. ಸಚಿವ ಪದವಿಯಲ್ಲಿದ್ದುಕೊಂಡು ಡಾ. ಅಶ್ವತ್ಥನಾರಾಯಣ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಕರೆ ನಿಡಿದ್ದಾರೆ. ಇದೂ ಈಗ ವಿವಾದವಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಈ ಸಹೋದ್ಯೊಗಿಯ ರಾಜೀನಾಮೆ ಪಡೆಯುವ ಧೈರ್ಯ ಪ್ರದರ್ಶಿಸುತ್ತಾರಾ ಕಾದು ನೋಡಬೇಕು.

ಒಂದಂತೂ ಸ್ಪಷ್ಟ.ಸಚಿವರಈ ಹೇಳಿಕೆಯೇ ಕಾಂಗ್ರೆಸ್ ಗೆ ಪ್ರಚಾರದ ವಸ್ತುವಾಗಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಪ್ರಚಂಡ ಆತ್ಮವಿಶ್ವಾಸ ಹಾಗೂ ಹುಮ್ಮಸ್ಸಿನಲ್ಲಿ ಬಿಜೆಪಿ ಇರುವ ಸಂದರ್ಭದಲ್ಲೇ ಅದೇ ಪಕ್ಷದ ಸಚಿವರು ಕಾಂಗ್ರೆಸ್ ಪಕ್ಷಕ್ಕೆ, ಪ್ರಬಲ ಅಸ್ತ್ರವನ್ನು ನೀಡಿದ್ದಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಿದ್ದರಾಮಯ್ಯ ಅವರಿಗೆ ಲಾಭವಾದರೆ ಆಶ್ಚರ್ಯ ಪಡಬೇಕಿಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com