social_icon

ಅತಂತ್ರ ಸ್ಥಿತಿಯಲ್ಲಿ ಬಿಜೆಪಿಯ ವಲಸಿಗ ಸಚಿವರು (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್

`ಇಲ್ಲಿರಲಾರೆ ….ಅಲ್ಲಿಗೂ ಹೋಗಲಾರೆ ‘… ಇದು ರಾಜ್ಯ ಬಿಜೆಪಿಯಲ್ಲಿನ ಕೆಲವು ಸಚಿವರೂ ಸೇರಿದಂತೆ 20 ಕ್ಕೂ ಹೆಚ್ಚು ಶಾಸಕರನ್ನು ಕಾಡುತ್ತಿರುವ ಸಮಸ್ಯೆ.

Published: 27th January 2023 11:46 AM  |   Last Updated: 28th January 2023 03:39 PM   |  A+A-


BJPs-migrant-minister

ಅತಂತ್ರ ಸ್ಥಿತಿಯಲ್ಲಿ ಬಿಜೆಪಿಯ ವಲಸಿಗ ಸಚಿವರು

'ಇಲ್ಲಿರಲಾರೆ…. ಅಲ್ಲಿಗೂ ಹೋಗಲಾರೆ'… ಇದು ರಾಜ್ಯ ಬಿಜೆಪಿಯಲ್ಲಿನ ಕೆಲವು ಸಚಿವರೂ ಸೇರಿದಂತೆ 20 ಕ್ಕೂ ಹೆಚ್ಚು ಶಾಸಕರನ್ನು ಕಾಡುತ್ತಿರುವ ಸಮಸ್ಯೆ.

ನಾನಾ ಕಾರಣಗಳಿಗಾಗಿ ಬಿಜೆಪಿಯಲ್ಲಿ ಇರಲು ಬಹಳಷ್ಟು ಶಾಸಕರಿಗೆ ಆಗುತ್ತಿಲ್ಲ. ಕೆಲವರಿಗೆ ತಮ್ಮ ರಾಜಕೀಯ ಭವಿಷ್ಯದ ಚಿಂತೆ ಉಳಿದವರಿಗೆ ಈ ಬಾರಿ ಸ್ಪರ್ಧೆಗೆ ಪಕ್ಷದ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಅನುಮಾನ. ಹೀಗಾಗಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರನ್ನು ಕೈಬಿಟ್ಟು ಗೆಲ್ಲುವ ಸಾಧ್ಯತೆ ಇರುವ ಒಂದಷ್ಟು ಹೊಸ ಮುಖಗಳಿಗೆ ಟಿಕೆಟ್ ಕೊಡುವ ನಿರೀಕ್ಷೆಯಿದೆ. ಇನ್ನುಳಿದಂತೆ ಸತತವಾಗಿ ಮೂರಕ್ಕೂ ಹೆಚ್ಚುಬಾರಿ ಒಂದೇ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿರುವವರ ಪೈಕಿ ಕೆಲವರನ್ನು ಬೇರೆ ಕ್ಷೆತ್ರಗಳಿಂದ ಸ್ಪರ್ಧಿಸುವಂತೆ ಸೂಚಿಸುವ ಸಂಭವವಿದೆ. ಈ ಪಟ್ಟಿಯಲ್ಲಿ ಕೆಲವು ಮಂತ್ರಿಗಳೂ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಸಂಬಂಧ ಕೆಲವರಿಗೆ ಪಕ್ಷದ ಹೈಕಮಾಂಡ್ ನಿಂದ ಸೂಚನೆಯೂ ಬಂದಿದೆ ಎಂದೂ ಗೊತ್ತಾಗಿದೆ. ಇದು ಅನೇಕರಲ್ಲಿ ಕಳವಳಕ್ಕೆ ಕಾರಣವಾಗಿದೆ.

ಈಗಿರುವ ಸುರಕ್ಷಿತ ಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರದಿಂದ ಚುನಾವನೆಗೆ ಸ್ಪರ್ಧಿಸುವುದೆಂದರೆ ಅದು ಈಗಿನ ಸನ್ನಿವೇಶದಲ್ಲಿ ಸಾಧ್ಯವಿಲ್ಲದ ಮಾತು. ಹಾಗೆಂದು ಪಕ್ಷದ ವರಿಷ್ಠರ ಸೂಚನೆಯನ್ನು ಪಾಲಿಸದೇ ಇದ್ದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲೂ ಪಕ್ಷದ ಟಿಕೆಟ್ ಸಿಗುವುದಿಲ್ಲ , ಮತ್ತೆ ಅಧಿಕಾರ ಪಡೆಯುವ ಆಸೆ ದೂರವೇ ಉಳಿದಂತಾಗುತ್ತದೆ. ಹಾಗೊಂದು ವೇಳೆ ಪಕ್ಷದ ವರಿಷ್ಠರ ಆದೇಶ ಪಾಲಿಸಿದಲ್ಲಿ ಹೊಸ ಕ್ಷೇತ್ರದಲ್ಲಿ ಬರೀ ಬಿಜೆಪಿ ಅಲೆಯನ್ನೇ ನಂಬಿಕೊಂಡು ಗೆಲ್ಲುವುದು ಸಾಧ್ಯ ಇಲ್ಲದ ಮಾತು ಎಂಬ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಯತ್ನಾಳ್-ನಿರಾಣಿ ಜಟಾಪಟಿ ಬಿಜೆಪಿಗೆ ಇಕ್ಕಟ್ಟು; ಲಿಂಗಾಯಿತ ನಾಯಕರ ಒಡಕಿನ ಲಾಭ ಯಾರಿಗೆ?

ಮೂಲ ಬಿಜೆಪಿಯವರಲ್ಲದ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ  ಬಿಜೆಪಿಗೆ ಬಂದು ಶಾಸಕರು, ಸಚಿವರಾದ ಇನ್ನುಳಿದ ಕೆಲವರಿಗೆ ವಾಪಸು ಕಾಂಗ್ರೆಸ್ ಗೆ ಹೋಗುವ ಆಸೆ ಇದೆ. ಈ ಪೈಕಿ ಕೆಲವರಿಗೆ ಕಾಂಗ್ರೆಸ್ ಪಕ್ಷದಿಂದ ಮುಕ್ತ ಆಹ್ವಾನವೂ ಬಂದಿದೆ. ಆದರೆ ಕಾಂಗ್ರೆಸ್ ಪಕ್ಷದ ಸ್ಥಿತಿಯೇ ಸರಿ ಇಲ್ಲ. ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಎಲ್ಲವೂ ಸರಿ ಇಲ್ಲ. ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿರುವ ಇಬ್ಬರು ನಾಯಕರೂ ಚುನಾವಣೆ ಸಂದರ್ಭದಲ್ಲಿ ತಮ್ಮ ತಮ್ಮ ಬಲಾಬಲಗಳನ್ನು ಬಳಸಿಕೊಂಡು ಪರಸ್ಪರರ ಕಾಲೆಳೆಯುವ ತಂತ್ರ ಅನುಸರಿಸಲು ಮುಂದಾಗಬಹುದೆಂಬ ವದಂತಿಗಳೂ ರಾಜಕಾರಣದ ಪಡಸಾಲೆಗಳಲ್ಲಿ ಹಬ್ಬಿವೆ. ಈ ಪರಿಸ್ಥಿತಿಯಲ್ಲಿ ಚುನಾವಣೆ ಸಮೀಪಿಸಿರುವಂತೆ ರಾಜ್ಯ ರಾಜಕಾರಣ ಹೊಸ ಕವಲುಗಳನ್ನು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರದ ಮಾಜಿ ಸಚಿವ ಹಾಲಿ ವಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಡುವೆ ನಡೆಯುತ್ತಿದ್ದ ಸಂಘರ್ಷಕ್ಕೆ ಪಕ್ಷದ ವರಿಷ್ಠರು ಮದ್ದೆರೆದಿದ್ದಾರೆ. ಇನ್ನು ಮುಂದೆ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲವೆಂದು ಯತ್ನಾಳ್ ಸ್ಪಷ್ಠನೆ ನೀಡಿದ್ದಾರೆ. ಅಲ್ಲಿಗೆ ತಾರಕಕ್ಕೆ ಏರಬಹುದಾಗಿದ್ದ  ಮುಖಂಡರ ನಡುವಿನ ಸಮರಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಆದರೆ ಬಿಜೆಪಿ ನಾಯಕರುಗಳು ಹೇಳುವಂತೆ ಇದು ಪೂರ್ಣವಾಗಿ ಇತ್ಯರ್ಥಗೊಂಡಿಲ್ಲ ಸದ್ಯಕ್ಕೆ ಅದು ಬೂದಿ ಮುಚ್ಚಿದೆ ಕೆಂಡ. ಬಿಜೆಪಿ ವರಿಷ್ಠರಿಗೆ ಅದು ಸದ್ಯಕ್ಕೆ ಬೇಕಿಲ್ಲ. ಈಗ ಬರಲಿರುವ ಚುನಾವಣೆಯಲ್ಲಿ ಈ ಇಬ್ಬರ ಕಿತ್ತಾಟದಿಂದ ಪಕ್ಷದ ಲಿಂಗಾಯಿತ ಮತ ಬ್ಯಾಂಕ್ ಛಿದ್ರಗೊಂಡರೆ ಅದರಿಂದ ಬಹುಮತ ಗಳಿಸುವುದಿರಲಿ, ಮೂಲ ಮತಗಳೇ ಕೈ ತಪ್ಪಿ ಹೋಗಿ ಮತ್ತೆ ಅಧಿಕಾರಕ್ಕೆ ಬರುವ ಆಸೆ ಕನಸಾಗಿ ಉಳಿಯಬಹುದು ಎಂಬ ಆತಂಕ ಇದಕ್ಕೆ ಕಾರಣ. ಯಡಿಯೂರಪ್ಪ ಬೆಂಬಲಕ್ಕೆ ಅಧಿಕ ಸಂಖ್ಯೆಯ ಲಿಂಗಾಯಿತ ಸಮುದಾಯ ನಿಂತಿದೆ. ಚುನಾವಣೆಯ ಸಂದರ್ಭದಲ್ಲಿ ಅವರನ್ನು ನಿರ್ಲಕ್ಷಿಸಿದ್ದೇ ಆದರೆ ಅದರಿಂದ ಆಗಬಹುದಾದ ಸಂಭವನೀಯ ಅಪಾಯಗಳ ಬಗ್ಗೆ ಅರಿತಿರುವ ಬಿಜೆಪಿ ವರಿಷ್ಠರು ಸದ್ಯಕ್ಕೆ ಮೌನ ವಹಿಸುವಂತೆ ಯತ್ನಾಳ್ ಗೆ ಸೂಚಿಸಿದ್ದಾರೆ. ಆದರೆ ಈ ತೇಪೆ ರಾಜಕಾರಣದ ಸೂತ್ರದಿಂದ ಯಡಿಯೂರಪ್ಪ ತಣ್ಣಗಾಗುವ ಸಾಧ್ಯತೆಗಳು ಕಡಿಮೆ. ಯತ್ನಾಳ್ ವಿರುದ್ಧ ಕಟ್ಟು ನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ. ಅದು ಈಡೇರಿಲ್ಲ.

ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಬಿಜೆಪಿ- ಜೆಡಿಎಸ್ ಜಂಟಿ ಸಮರಾಬ್ಯಾಸ!

ಈಗಿನ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೇ ನಡೆಸಿರುವ ಎರಡು ಸಮೀಕ್ಷೆಗಳಲ್ಲಿ ಪಕ್ಷಕ್ಕೆ ಬಹುಮತ ಸಿಗುವುದು ಕಷ್ಟ ಎಂಬ ಅಂಶ ಗೋಚರವಾಗಿದೆ. ಈಗಾಗಲೇ ಈ ಸಮೀಕ್ಷೆಯ ಅಂಶಗಳು ಬಹಿರಂಗವಾಗಿದ್ದು ಅಧಿಕಾರದ ಆಸೆಯಲ್ಲಿರುವ ಅನೇಕರಿಗೆ ಆತಂಕ ತಂದೊಡ್ಡಿದೆ. ಇದೇ ವೇಳೆ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಿ ಅಧಿಕಾರಕ್ಕೆ ಬರುವ ಆಲೋಚನೆ ಹೊಂದಿರುವ ಕಾಂಗ್ರೆಸ್ ಇದೀಗ ಈ ಹಿಂದೆ ನಾನಾ ಕಾರಣಗಳಿಗೆ ಪಕ್ಷ ತೊರೆದವರಿಗೆ ಮರಳಿ ವಾಪಸಾಗುವಂತೆ ಆಹ್ವಾನ ನೀಡಿರುವುದು ಬಿಜೆಪಿಯಲ್ಲಿದ್ದು ತಳಮಳ ಅನುಭವಿಸುತ್ತಿರುವ ಬಹಳಷ್ಟು ವಲಸಿಗ ಸಚಿವರು, ಶಾಸಕರನ್ನು ಅತ್ತ ನೋಡುವಂತೆ ಪ್ರೇರೇಪಿಸಿದೆ.

ಆದರೆ ಬಹಳಷ್ಟು ಶಾಸಕರು, ಸಚಿವರನ್ನು ಕಾಡುತ್ತಿರುವ ಭಯ ಎಂದರೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರಿದರೆ ಅದಕ್ಕೆ ಕೇಂದ್ರದಲ್ಲಿರುವ ತನ್ನ ಅಧಿಕಾರವನ್ನು ಬಿಜೆಪಿ ಬಳಸಿಕೊಂಡು ತಮ್ಮ ವಿರುದ್ಧ ಆದಾಯ ತೆರಿಗೆ ದಾಳಿ ನಡೆಸಬಹುದು ಆಗ ಚುನಾವಣೆ ಎದುರಿಸುವುದಕ್ಕಿಂತ ಹೆಚ್ಚಾಗಿ ಆದಾಯ ತೆರಿಗೆ ದಾಳಿಯಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ಎದುರಿಸಲು ಸಮಯ ವ್ಯರ್ಥವಾಗುತ್ತದೆ ಹೀಗಾಗಿ ಸದ್ಯಕ್ಕೆ ಬಿಜೆಪಿಯಲ್ಲೇ ಇದ್ದು ಟಿಕೆಟ್ ಪಡೆದು ಚುನಾವಣೆ ಗೆಲ್ಲುವುದು ಚುನಾವಣೆ ಫಲಿತಾಂಶದ ನಂತರ ಉದ್ಬವಿಸುವ ರಾಜಕೀಯ ಪರಿಸ್ಥಿತಿಯನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬೆಂಗಳೂರು ರಾಜಕಾರಣದ ಮೇಲೆ ತನ್ನ ಸಂಪೂರ್ಣ ಹಿಡಿತ ಸಾಧಿಸಲು ಪ್ರಯತ್ನ ನಡೆಸಿರುವ ಸಚಿವರೊಬ್ಬರು ಈಗಾಗಲೇ ಕಾಂಗ್ರೆಸ್ ನಾಯಕರ ಜತೆ ಎರಡು ಸುತ್ತು ಮಾತುಕತೆ ಮುಗಿಸಿದ್ದಾರೆ. ಪುತ್ರನ ರಾಜಕೀಯ ಭವಿಷ್ಯದ ವಿಚಾರವೂ ಅವರನ್ನು ಕಾಡುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಜತೆ ಅವರಿಗೆ ಮೊದಲಿದ್ದ ಮಧುರ ಸಂಬಂಧ ಮುರಿದು ಬಿದ್ದಿದೆ. ಪಕ್ಷದಲ್ಲಿ ಪ್ರಶ್ನಾತೀತ ಲಿಂಗಾಯಿತ ನಾಯಕನಾಗುವ ಆಸೆ ಇದೆಯಾದರೂ ಅಲ್ಲಿ ಅವರ ದಾರಿಗೆ ಯಡಿಯೂರಪ್ಪ ಸೇರಿದಂತೆ ಸಚಿವ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ಅಡ್ಡಿಯಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಈ ಸಮಸ್ಯೆ ಇಲ್ಲ. ಅಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕರೂ ಎಂ.ಬಿ.ಪಾಟೀಲ್ ನೇಪಥ್ಯಕ್ಕೆ ಸರಿದಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೆ ಈ ಸಚಿವರ ಸಂಬಂಧ ಅತ್ಯುತ್ತಮವಾಗಿದೆ. ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇವರೂ ಸೇರಿದಂತೆ ಬಿಜೆಪಿಯಲ್ಲಿದ್ದೂ ಕಾಂಗ್ರೆಸ್ ಕಡೆ ನೋಡುತ್ತಿರುವ ಶಾಸಕರು ಇನ್ನೂ ಖಚಿತ ನಿರ್ಧಾರಕ್ಕೆ ಬಂದಿಲ್ಲ.

ಇದನ್ನೂ ಓದಿ: ಬಿಜೆಪಿಯಲ್ಲಿ ತಣ್ಣಗಾಗದ ಭಿನ್ನಮತದ ಬೆಂಕಿ!

ಈ ಎಲ್ಲ ಬೆಳವವಣಿಗೆಗಳು ಒಂದು ಕಡೆಯಾದರೆ ಮಾಜಿ ಸಚಿವ ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆಯೊಂದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಬರಲಿರುವ ಚುನಾವಣೆಯಲ್ಲಿ ಮತದಾರರಿಗೆ ತಲಾ ಆರು ಸಾವಿರ ರೂ. ಹಣ ಆಮಿಷ ನೀಡುವ ಅರ್ಥದಲ್ಲಿ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಗೆ ಬಿಜೆಪಿ ವಿರುದ್ಧ ಪ್ರಮುಖ ಅಸ್ತ್ರವೊಂದು ಸಿಕ್ಕಂತಾಗಿದ್ದು ಈಗಾಗಲೇ ಪೊಲೀಸರಿಗೂ ಆ ಪಕ್ಷದ ಪ್ರಮುಖರು ದೂರು ನೀಡಿದ್ದಾರೆ. ಆದರೆ ಬಿಜೆಪಿ ಜಾರಕಿಹೊಳಿಯವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರೇ ಚುನಾವಣೆಯಲ್ಲಿ ಮತದಾರರ ಒಲವು ಗಳಿಸಲು ಗೃಹೋಪಯೋಗಿ ವಸ್ತುಗಳನ್ನು ಈಗಿನಿಂದಲೇ ಹಂಚುತ್ತಿರುವುದೂ ಸುದ್ದಿಯಾಗಿದೆ. 

ಈಗಾಗಲೇ ಮತದಾರರಿಗೆ ಹಂಚಲೆಂದೇ ತಂದಿದ್ದ ಇಂತಹ ಕೆಲವು ವಸ್ತುಗಳನ್ನು ಕುಣಿಗಲ್ ನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ ಗೋದಾಮಿನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಗಂಭೀರ ಪ್ರಕರಣವಾಗುತ್ತದೆ ಎಂಬುದು ಅನುಮಾನ. ಹೀಗೆ ವಶಪಡಿಸಿಕೊಂಡ ವಸ್ತುಗಳಿಗೆ ತೆರಿಗೆ ಪಾವತಿಸಲಾಗಿದೆಯೆ? ಇಲ್ಲವೆ? ಎಂಬೆಲ್ಲ ವಿವರ ಇನ್ನೂ ತನಿಖೆಯಿಂದ ತಿಳಿದು ಬಂದಿಲ್ಲ. ಹಾಗೊಂದು ವೇಳೆ ತೆರಿಗೆ ಪಾವತಿಸಿಲ್ಲವಾದರೆ ಕಾನೂನು ರೀತ್ಯ ದಂಡ ಸಹಿತೆ ತೆರಿಗೆ ವಸೂಲು ಮಾಡಲು ವಾಣೀಜ್ಯ ತೆರಿಗೆ ಇಲಾಖೆಗೆ ಅವಕಾಶವಿದೆ. ಆದರೆ ಇದೇ ಪ್ರಕರಣವನ್ನು ಬಳಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇಲ್ಲ ಎಂಬ ಮಾಹಿತಿಯೂ ಇದೆ. ಚುನಾವಣಾ ನೀತಿ ಸಂಹಿತೆ ಚುನಾವಣೆ ಅಧಿಸೂಚನೆ ಘೋಷಣೆಯಾದ ದಿನದಿಂದ ಜಾರಿಗೆ ಬರುತ್ತದೆ. ಅಲ್ಲಿಯವರೆಗೆ ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳಡಿ ಪ್ರಕರಣ ದಾಖಲಿಸಲು ಅವಕಾಶ ಇಲ್ಲ. ಕಾನೂನಿನ ಒಳ ಸುಳಿಗಳನ್ನು ಅರಿತಿರುವ ಬಹಳಷ್ಟು ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘನೆ ಅಸ್ತ್ರದಿಂದ ಪಾರಾಗಲು ಈಗಿನಿಂದಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.

ಇದನ್ನೂ ಓದಿ: ಬಸವನಗೌಡ ಪಾಟೀಲ ಯತ್ನಾಳ್: ಬಿಜೆಪಿ ಪಾಲಿಗೆ ಬಿಸಿ ತುಪ್ಪ
 
ಚುನಾವಣಾ ಆಯೋಗದ ವ್ಯವಸ್ಥೆಯಡಿ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜ್ಯ ಸರ್ಕಾರದ ಅಧೀನಕ್ಕೇ ಒಳಪಡಲಿರುವುದರಿಂದ ಅವರು ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ರಾಜಕೀಯ ನಾಯಕರುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬುದು ಊಹೆಗೂ ನಿಲುಕದ ಸಂಗತಿ.

ಈ ಬಾರಿಯ ಚುನಾವಣೆಯಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡಲಿದೆ. ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಲ್ಲ ಎಂಬುದೇ ವಿಶೇಷ. 


ಯಗಟಿ ಮೋಹನ್
yagatimohan@gmail.com


Stay up to date on all the latest ಅಂಕಣಗಳು news
Poll
Dk shivakumar

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಗಳ ಗಡಿ ದಾಟುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.


Result
ಒಪ್ಪುತ್ತೇನೆ
ಒಪ್ಪುವುದಿಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp