ಯತ್ನಾಳ್-ನಿರಾಣಿ ಜಟಾಪಟಿ ಬಿಜೆಪಿಗೆ ಇಕ್ಕಟ್ಟು; ಲಿಂಗಾಯಿತ ನಾಯಕರ ಒಡಕಿನ ಲಾಭ ಯಾರಿಗೆ? (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಬಿಜೆಪಿಯ ಆಂತರಿಕ ಬೆಳವಣಿಗೆಯ ಒಳ ಹೊಕ್ಕು ನೋಡಿದರೆ  ಸ್ವ-ಪಕ್ಷೀಯ ನಾಯಕರ ವಿರುದ್ಧ ಯುದ್ಧ ಘೋಷಿಸಿರುವ ಯತ್ನಾಳ್ ಬೆನ್ನಿಗೆ ಪಕ್ಷದ ಮುಖಂಡರೇ ನಿಂತಿರುವುದು ಗೋಚರವಾಗುತ್ತದೆ.
ಯತ್ನಾಳ್- ನಿರಾಣಿ (ಸಂಗ್ರಹ ಚಿತ್ರ)
ಯತ್ನಾಳ್- ನಿರಾಣಿ (ಸಂಗ್ರಹ ಚಿತ್ರ)

"ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು"

ಮಾತು ಹೇಗಿರಬೇಕು ಎಂಬುದನ್ನು ದಾರ್ಶನಿಕ ಬಸವಣ್ಣನವರು ಹೇಳಿದ್ದಾರೆ. ಅತ್ಯಂತ ಸರಳವಾದ ಈ ವಚನದ ಸಾರ ಜವಾಬ್ದಾರಿಯುತ ಸ್ಥಾನದಲ್ಲಿರುವ ನಮ್ಮ ಜನ ಪ್ರತಿನಿಧಿಗಳಿಗೆ ಅರ್ಥವಾಗಿಲ್ಲ. ಇಂತಹವರು ನಮ್ಮ ಪ್ರತಿನಿಧಿಗಳೆ? ಎಂಬ ಸಂದೇಹ ಜನ ಸಾಮಾನ್ಯರನ್ನೂ ಕಾಡಿದ್ದರೆ ಅದು ಸಹಜ.

ಕಳೆದ ಕೆಲವು ದಿನಗಳಿಂದ ಬಿಜೆಪಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಈ ಅಂಶವನ್ನು ಉಲ್ಲೇಖಿಸಲೇಬೇಕಿದೆ. ಇದಕ್ಕೆ ಪೂರಕವಾಗಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಕೂಡಾ ಬಿಜೆಪಿಗೆ ಕಾಂಗ್ರೆಸ್ ನಿಂದ ವಲಸೆ ಬಂದು ಸಚಿವರಾದವರನ್ನು ಟೀಕಿಸುವ ಅವಸರದಲ್ಲಿ ಸಭ್ಯತೆಯ ಎಲ್ಲೆ ದಾಟಿರುವುದು, ಜನತೆ ರಾಜಕಾರಣಿಗಳ ಭಾಷೆಯ ಬಗ್ಗೆ ಜಿಗುಪ್ಸೆಗೊಳ್ಳುವಂತೆ ಮಾಡಿದೆ. ಅನುಭವಿ ರಾಜಕಾರಣಿಯಾದ ಅವರಿಂದ ಜನತೆ ಇಂತಹ ಹೇಳಿಕೆ ನಿರೀಕ್ಷಿಸರಲಿಲ್ಲ. 

ಸಜ್ಜನಿಕೆ ಮರೆತ ಟೀಕೆ: ವಿಷಯಾಧಾರಿತ ಆಗಿರಬೇಕಾದ ಟೀಕೆಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿರುವುದು, ಸಹಜ ಸಜ್ಜನಿಕೆಯನ್ನೂ ಮರೆತ ಈ ಮಾತುಗಳ ಬಗ್ಗೆ ಆಯಾ ಪಕ್ಷಗಳ ನೇತಾರರೂ ಮೌನ ವಹಿಸಿದ್ದಾರೆ. ಅಸಹ್ಯ ಪಡುವಷ್ಟರ ಮಟ್ಟಿಗೆ ಪದ ಪುಂಜಗಳು ಬಳಕೆಯಾಗುತ್ತಿದ್ದರೂ ಅದನ್ನು ತಡೆದು ತಿಳಿ ಹೇಳುವ ಪ್ರಯತ್ನಗಳನ್ನು ಈ ಪಕ್ಷಗಳ ಹಿರಿಯ ನಾಯಕರೂ ಮಾಡುತ್ತಿಲ್ಲ. ಒಟ್ಟಾರೆ ರಾಜಕಾರಣದಲ್ಲಿ ನೈತಿಕತೆಯೆ ದಿವಾಳಿಯ ಅಂಚಿಗೆ ಬಂದು ನಿಂತಿದೆ. 

ಲಿಂಗಾಯಿತ ಸಮುದಾಯದ ಪಂಚಮ ಸಾಲಿ ವರ್ಗಕ್ಕೆ ಪ್ರತ್ಯೇಕ ಮೀಸಲಾತಿ ಜಾರಿಗೊಳಿಸಬೇಕೆಂಬ ಬೇಡಿಕೆಗೆ ಆಗ್ರಹಿಸಿ ಕೂಡಲ ಸಂಗಮ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದ ಹೋರಾಟ ಸರ್ಕಾರದ ಸಂಧಾನದ ನಂತರವೂ ನಿಂತಿಲ್ಲ. ಮೀಸಲಾತಿಯ ಸರ್ಕಾರದ ಹೊಸ ಸೂತ್ರವನ್ನು ಸಮುದಾಯ ತಿರಸ್ಕರಿಸಿದೆ. ಹೋರಾಟದ ಕಿಚ್ಚು ಸರ್ಕಾರದ ವಿರುದ್ಧ ಬಲ ಪ್ರದರ್ಶನದ ಹಂತಕ್ಕೆ ಬಂದು ಮುಟ್ಟಿದೆ. 

ಸಭ್ಯತೆ ಗಡಿ ದಾಟಿದ ಯತ್ನಾಳ್: ಹೋರಾಟದ ಮುಂಚೂಣಿಯಲ್ಲಿರುವ ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಾಲಿ ವಿಜಾಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಪಕ್ಷದ ನಾಯಕರುಗಳ ವಿರುದ್ಧ ವೈಯಕ್ತಿಕ ನಿಂದನೆಗೂ ಇಳಿದಿದ್ದಾರೆ. ಈಗ ಅದೂ ಸಭ್ಯತೆಯ ಗಡಿ ದಾಟಿದೆ. ಎಡವಟ್ಟಾಗಿರುವುದೇ ಇಲ್ಲಿ. ಪಕ್ಷದೊಳಗಿನ ತಮ್ಮ ವಿರೋಧಿಗಳನ್ನು ಟೀಕಿಸುವ ಭರದಲ್ಲಿ  ಅವರು ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಹರಿ ಹಾಯ್ದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಪಕ್ಷದ ಸರ್ಕಾರದ ಸಚಿವ ಮುರುಗೇಶ್ ನಿರಾಣಿಯವರನ್ನು ಸಲ್ಲದ ಶಬ್ದ ಬಳಸಿ ನಿಂದಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ನಿರಾಣಿ ನಾಲಿಗೆ ಕತ್ತರಿಸಿ ಬಿಡ್ತಿನಿ ಎಂದೂ ಎಚ್ಚರಿಸಿದ್ದಾರೆ. ಈ ಮಾತಿನ ಸಮರ ನಿಲ್ಲುವ ಲಕ್ಷಣಗಳೂ ಇಲ್ಲ. 

ಸಚಿವ ಸ್ಥಾನದ ಲಕ್ಷ್ಮಣ ರೇಖೆಯನ್ನೂ ಮೀರಿ ಮುರುಗೇಶ್ ನಿರಾಣಿ ಶಾಸಕ ಯತ್ನಾಳ್ ಅವರ ಕಾರು ಚಾಲಕನ ಕೊಲೆ ಪ್ರಕರಣವನ್ನು ಹೊಸದಾಗಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ  ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಯಾವತ್ತೋ ನಡೆದಿದೆ ಎಂದು ಆರೋಪಿಸಲ್ಪಡುತ್ತಿರುವ ಪ್ರಕರಣದ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಲು ಅವಕಾಶ ಇದ್ದರೂ ಸಚಿವರಾಗಿ ನಿರಾಣಿ ಇಷ್ಟು ದಿನ ಸುಮ್ಮನಿದ್ದುದು ಏಕೆ? ಹಾಗಾದರೆ ಅವರಿಗೆ ಈ ಪ್ರಕರಣದ ಮಾಹಿತಿ ಮೊದಲೇ ಗೊತ್ತಿತ್ತೆ? ಗೊತ್ತಿದ್ದರೂ ಅದನ್ನು ಇಷ್ಟು ಸುದೀರ್ಘ ಕಾಲ ಮುಚ್ಚಿಟ್ಟಿದ್ದು ಏಕೆ? ಎಂಬ ಪ್ರಶ್ನೆಗಳು ಮೂಡುವುದು ಸಹಜ.

ಸಂಘ- ಪಕ್ಷ ದ ನಿಗೂಢ ಮೌನ?: ಈ ರಂಪಾಟಗಳು ಸುದೀರ್ಘವಾಗಿ ನಡೆಯುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಲೀ, ಅಥವಾ ಆ ಪಕ್ಷದ ಪೋಷಕ ಸಂಸ್ಥೆಯಾದ ಸಂಘ ಪರಿವಾರದ ಪ್ರಮುಖರಾಗಲೀ ಈ ಅಸಹ್ಯಕರ ಪ್ರಲಾಪಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನ ಮಾಡಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಇದು ಇನ್ನೊಂದು ದುರಂತ. ಯತ್ನಾಳ್ ಮತ್ತು ನಿರಾಣಿ ನಡುವೆ ಪಂಚಮಸಾಲಿ ಗುರು ಪೀಠದ ಕುರಿತು ಆರಂಭವಾದ ವಿವಾದ ಈಗ ವೈಯಕ್ತಿಕ ಮಟ್ಟಕ್ಕೆ ಬಂದು ನಿಂತಿದೆ. 

ಸಂಘ ಪರಿವಾರದ ಸಿದ್ಧಾಂತ ಮತ್ತು ಸಂಸ್ಕೃತಿಯ ಪ್ರತಿಪಾದಕರೆಂದೇ ತನ್ನನ್ನು ಗುರುತಿಸಿಕೊಂಡಿರುವ ಯತ್ನಾಳ್, ವಿರೋಧಿಗಳ ವಿರುದ್ಧ ಟೀಕೆಗಳನ್ನು ವಿಷಯಕ್ಕೆ ಸೀಮಿತಗೊಳಿಸುವ ಬದಲಾಗಿ ಸಜ್ಜನಿಕೆಯ ಮಿತಿಯನ್ನೂ ದಾಟಿ ನಿಂದನೆಯ ಮಟ್ಟಕ್ಕೆ ಇಳಿದಿದ್ದಾರೆ. ಈ ಬಹಿರಂಗ ರಂಪಾಟ ಬಿಜೆಪಿಯ ದಿಲ್ಲಿ ದೊರೆಗಳಿಗೆ ಗೊತ್ತಿಲ್ಲವೆಂದೇನಲ್ಲ. ಹಾಗೆ ನೋಡಿದರೆ ರಾಷ್ಟ್ರೀಯ ಸಮಿತಿಯಲ್ಲಿ ಕರ್ನಾಟಕವನ್ನೇ ಪ್ರತಿನಿಧಿಸುವ ಹಾಗೂ ವರಿಷ್ಠರಿಗೆ ತುಂಬಾ ಆತ್ಮೀಯರೂ ಆಗಿರುವ ಪ್ರಮುಖರೂ ಸಂಘಟನೆಯ ಆಯಕಟ್ಟಿನ ಸ್ಥಾನದಲ್ಲಿದ್ದಾರೆ. 

ಚುನಾವಣೆ ಸಮೀಪಿಸುತ್ತಿರುವ ಈಗಿನ ಸನ್ನಿವೇಶದಲ್ಲಿ ಇಷ್ಟೆಲ್ಲ ರಾದ್ಧಾಂತಗಳಿಗೆ ಅವರು ತಡೆಯೊಡ್ಡಬಹುದಿತ್ತು.ಆದರೆ ಅದೂ ಆಗಿಲ್ಲ. ಅದಕ್ಕೆ ಕಾರಣಗಳೂ ಇವೆ. ಮುರುಗೇಶ ನಿರಾಣಿ ಮತ್ತು ಯತ್ನಾಳ್ ಒಂದೇ ಸಮುದಾಯದ, ಒಂದೇ ಉಪ ಪಂಗಡಕ್ಕೆ ಸೇರಿದವರು. ನಿರಾಣಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾಗಿದ್ದರೆ, ಯತ್ನಾಳ್ ವಿರೋಧಿ ಗುಂಪಿನಲ್ಲಿದ್ದಾರೆ. ಯಡಿಯೂರಪ್ಪ ಅವರು ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಸಂಪುಟಕ್ಕೆ ತನ್ನನ್ನು ಸೇರಿಸಿಕೊಳ್ಳಲಿಲ್ಲ ಎಂಬ ಅತೃಪ್ತಿ ಇದೀಗ ವೈಯಕ್ತಿಕ ನಿಂದನೆಯ ಹಂತಕ್ಕೆ ಬಂದು ಮುಟ್ಟಿದೆ.

ಕಿತ್ತಾಟದ ಲಾಭ ಯಾರಿಗೆ? ಬಿಜೆಪಿಯ ಆಂತರಿಕ ಬೆಳವಣಿಗೆಯ ಒಳ ಹೊಕ್ಕು ನೋಡಿದರೆ  ಸ್ವ-ಪಕ್ಷೀಯ ನಾಯಕರ ವಿರುದ್ಧ ಯುದ್ಧ ಘೋಷಿಸಿರುವ ಯತ್ನಾಳ್ ಬೆನ್ನಿಗೆ ಪಕ್ಷದ ಮುಖಂಡರೇ ನಿಂತಿರುವುದು ಗೋಚರವಾಗುತ್ತದೆ. ಈ ಮೂಲಕ ವಿವಾದದ ಲಾಭ ಪಡೆಯುವ ಪ್ರಯತ್ನವೂ ನಡೆದಿದೆ. ಒಂದೇ ಸಮುದಾಯದ ಇಬ್ಬರು ನಾಯಕರು ಕಿತ್ತಾಡಿದರೆ ಅದರ ರಾಜಕೀಯ ಲಾಭ ತನಗಾಗಬಹುದು ಎಂಬುದು ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಪಕ್ಷದ ಆಯಕಟ್ಟಿನ ಹುದ್ದೆಯಲ್ಲಿರುವ ನಾಯಕರೊಬ್ಬರ ಸಂಘಟನಾತ್ಮಕ ತಂತ್ರ ಎಂಬುದನ್ನು ಬಿಜೆಪಿ ಮೂಲಗಳೇ ಒಪ್ಪಿಕೊಳ್ಳುತ್ತವೆ.

ಯಡಿಯೂರಪ್ಪ ಬಿಜೆಪಿಯಲ್ಲಿ ಪ್ರಬಲ ನಾಯಕರು. ಇತ್ತೀಚಿನ ಕೆಲವೊಂದು ಬೆಳವಣಿಗೆಗಳು ಅವರು ಮೂಲೆಗುಂಪಾಗುತ್ತಿದ್ದಾರೆ ಎಂಬ ಭಾವನೆಗಳನ್ನು ಹುಟ್ಟುಹಾಕಿವೆ. ಒಂದು ರೀತಿಯಲ್ಲಿ ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿದ್ದಾರೆ ಎಂಬ ವಾತಾವರಣ ಸೃಷ್ಟಿಯಾಗಲೂ ಇದೇ ಪ್ರಮುಖ ನಾಯಕರು ಕಾರಣ ಎನ್ನಲಾಗುತ್ತಿದೆ. 

ಮೋದಿಗೆ ಬಿಎಸ್ ವೈ ಹೇಳಿದ್ದೇನು?: ಇತ್ತಿಚೆಗೆ ದಿಲ್ಲಿಯಲ್ಲಿ ಪ್ರಧಾನಿ ಮೋದಿಯವರೊಂದಿಗೆ 15 ನಿಮಿಷಗಳ ಕಾಲ ಮಾತನಾಡಿದ ಯಡಿಯೂರಪ್ಪ, ಹಿಂದುತ್ವದ ಅಜೆಂಡಾ, ಯತ್ನಾಳ್ ಹೇಳಿಕೆಯಿಂದ ಪಕ್ಷದ ಸಂಘಟನೆ ಮೇಲೆ ಆಗುತ್ತಿರುವ ಪರಿಣಾಮಗಳು, ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅವರ ದುರ್ಬಲ ನಾಯಕತ್ವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ದುರ್ಬಲ ಆಡಳಿತ ವೈಖರಿ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಬರೀ ಹಿಂದುತ್ವದ ಅಜೆಂಡಾ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬ ಅಂಶವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದ್ಯದ ಪರಿಸ್ಥಿತಿಯಲ್ಲಿ ಹಗುರವಾಗಿ ಪರಿಗಣಿಸುವಂತೆ ಇಲ್ಲ ಎಂಬುದನ್ನೂ ಅವರು ವಿವರಿಸಿದ್ದಾರೆ. ಈ ನಿಷ್ಠುರ ವಿಶ್ಲೇ಼ಷಣೆಯಿಂದ ಚಿಂತೆಗೆ ಬಿದ್ದ ಮೋದಿ ಪಕ್ಷದ ಕೇಂದ್ರ ಮಟ್ಟದ ಕೆಲವು ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದು ಅದರ ಫಲವೆಂಬಂತೆ ಮುಸ್ಲಿಮರನ್ನು ಟೀಕಿಸಬೇಡಿ ಎಂಬ ಫರ್ಮಾನು ರಾಜ್ಯದ ಮುಖಂಡರಿಗೆ ರವಾನೆ ಆಗಿದೆ.  

ಯಡಿಯೂರಪ್ಪನವರನ್ನು ನಿರ್ಲಕ್ಷ್ಯಿಸಿದರೆ ಚುನಾವಣೆಯಲ್ಲಿ ಪಕ್ಷದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಈ ನಾಯಕರು ಪ್ರಧಾನಿಗೆ ವಿವರಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದರು. ಕರ್ನಾಟಕದಲ್ಲಿ ಸ್ವತಃ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳಿಗೆ ಅವರಿಗೆ ಆಹ್ವಾನ ನೀಡದೇ ಕಡೆಗಣಿಸಿದ್ದರಿಂದ ಅಸಮಧಾನಗೊಂಡು ಕಾರ್ಯಕ್ರಮಗಳಿಗೆ ಗೈರು ಹಾಜರಾದರು. ಇದೆಲ್ಲದರ ಪರಿಣಾಮಗಳು, ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಬಗ್ಗೆ ಕೇಂದ್ರದ ಮುಖಂಡರು ಪ್ರಧಾನಿಗೆ ವಿವರಿಸಿದ್ದಾರೆ. 

ಯತ್ನಾಳ್ ಬೆನ್ನ ಹಿಂದೆ ಯಾರು?: ಈ ಮಾಹಿತಿ ಪಡೆದ ಪ್ರಧಾನಿ, ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವಾಗ ಯಡಿಯೂರಪ್ಪನವರ ಅಭಿಪ್ರಾಯಗಳನ್ನೂ ಪರಿಗಣಿಸಬೆಕೆಂದು ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಇದಾದ ನಂತರವೂ ಯತ್ನಾಳ್ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಮಗುವನ್ನೂ ಚುವುಟಿ ತೊಟ್ಟಿಲನ್ನೂ ತೂಗುವ ಕೆಲಸವನ್ನು ಬಿಜೆಪಿಯಲ್ಲಿನ ಪ್ರಮುಖರು ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಪಕ್ಷದ ಮುಖಂಡರಿಂದಲೇ ವ್ಯಕ್ತವಾಗುತ್ತಿದೆ.

ಲಿಂಗಾಯಿತರು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಅನ್ಯ ಪಕ್ಷಗಳಿಗೆ ಮತ ಹಾಕುವುದಿಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿಯ ರೇಸ್ ನಲ್ಲಿದ್ದಾರೆ. 

ಲಿಂಗಾಯಿತರ ನಾಯಕರಾಗುವ ನಿರೀಕ್ಷೆ ಇದ್ದ ಎಂ.ಬಿ.ಪಾಟೀಲ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕ ನಂತರವೂ ನಿಷ್ಕ್ರಿಯರಾಗಿದ್ದಾರೆ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಬಿಟ್ಟು ಬೇರೆಯವರು ಸಿಎಂ ಪದವಿಯ ಬಗ್ಗೆ ಕನಸು ಕಾಣುವುದೂ ಸಾಧ್ಯವಿಲ್ಲ. ಹೀಗಾಗಿ ಪ್ರಬಲ ಲಿಂಗಾಯಿತ ಸಮಾಜಕ್ಕೆ ಯಡಿಯೂರಪ್ಪ ನಾಯಕತ್ವ ಇರಲಿ – ಇಲ್ಲದಿರಲಿ ಬಿಜೆಪಿಯನ್ನೇ ಅಪ್ಪಿಕೊಳ್ಳುವುದು ಅನಿವಾರ್ಯ, ಇಡುಗಂಟಾಗಿ ಆ ಮತಗಳು ಬಿಜೆಪಿಗೆ ಬರುವುದು ಖಚಿತ ಎಂಬ ಲೆಕ್ಕಾಚಾರ ಪಕ್ಷದ ಇನ್ನೊಂದು ಬಣದ್ದು. ಈ ಅಂಶವನ್ನು ಅರಿತೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿಜೆಪಿಗೆ ತಾನು ಅಥವಾ ಯಡಿಯೂರಪ್ಪ ಅನಿವಾರ್ಯವಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಚುನಾವಣೆ ಹತ್ತಿರವಾಗುತ್ತಿರವ  ಹಂತದಲ್ಲಿ ರಾಜ್ಯ ರಾಜಕಾರಣ ವಿಷಯಕ್ಕಿಂತ ಹೆಚ್ಚಾಗಿ ವೈಯಕ್ತಿಕ ನಿಂದನೆಗಳತ್ತ ಹೊರಳುತ್ತಿದೆ. ಭವಿಷ್ಯದ ದೃಷ್ಟಿಯಿಂದ ಇದು ಖಂಡಿತಾ ಅಪಾಯಕಾರಿ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com