ಕೈಕೊಟ್ಟ ರಾಜಕೀಯ ಲೆಕ್ಕಾಚಾರ; ಗೊಂದಲದಲ್ಲಿ ಕುಮಾರಸ್ವಾಮಿ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಇದು ಹತಾಶೆಯ ಹೇಳಿಕೆಯಾ? ಅಥವಾ ಚುನಾವಣೆ ಕಾರ್ಯ ತಂತ್ರದ ಭಾಗವಾ? ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ಟೀಕಿಸುವ ನೆಪದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆಂದು ದೂಷಿಸಿ ರಾಜ್ಯದಲ್ಲಿ ಅಲ್ಲಲ್ಲಿ ಹೇಳಿಕೆಗಳ ಸಮರ ಆರಂಭವಾಗಿದೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಇದು ಹತಾಶೆಯ ಹೇಳಿಕೆಯಾ? ಅಥವಾ ಚುನಾವಣೆ ಕಾರ್ಯ ತಂತ್ರದ ಭಾಗವಾ? ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ಟೀಕಿಸುವ ನೆಪದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆಂದು ದೂಷಿಸಿ ರಾಜ್ಯದಲ್ಲಿ ಅಲ್ಲಲ್ಲಿ ಹೇಳಿಕೆಗಳ ಸಮರ ಆರಂಭವಾಗಿದೆ.

ಆಡಳಿತ ಬಿಜೆಪಿಯಂತೂ ಇದನ್ನು ದೊಡ್ಡ ಐತಿಹಾಸಿಕ ಪ್ರಮಾದವೇನೋ ಎಂಬಂತೆ ಬಿಂಬಿಸುತ್ತಿದೆ, ಪಟ್ಟು ಬಿಡದ ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತಂತೆ ಅವರ ಮತ್ತು ಬಿಜೆಪಿ ಮುಖಂಡರ ನಡುವಿನ ಮಾತಿನ ಸಮರ ನಿಂತಿಲ್ಲ. ನಿಲ್ಲುವುದು ಇಬ್ಬರಿಗೂ ಬೇಕಾಗಿಲ್ಲ. 

ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ ಪರಸ್ಪರ ಉಗ್ರ ಟೀಕೆಗಳು ವಿಶೇಷ ಸಂಗತಿ ಏನಲ್ಲ. ಆದರೆ ನೀತಿ, ಸಿದ್ಧಾಂತ, ಕಾರ್ಯಕ್ರಮಗಳ ಕುರಿತಾಗಿ ಇರಬೇಕಾದ ಟೀಕೆಗಳು ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಮಟ್ಟಕ್ಕೆ ಅದರಲ್ಲೂ ಜಾತಿಗಳನ್ನು ಎಳೆದು ತರುವ ಮಟ್ಟಕ್ಕೆ ಇಳಿದಿದೆ. 

ಇದಕ್ಕೆ ಕೇವಲ ಕುಮಾರಸ್ವಾಮಿ ಒಬ್ಬರೇ ಕಾರಣರಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಆಡಳಿತದ ವೈಫಲ್ಯಗಳು, ಹಗರಣಗಳು ಚುನಾವಣೆಯ ವಿಷಯವೇ ಆಗುತ್ತಿಲ್ಲ. ಬಿಜೆಪಿಗೂ ಅದೇ ಬೇಕಾಗಿದೆ. ತನ್ನ ಹಗರಣಗಳನ್ನು ಮುಚ್ಚಿಕೊಳ್ಳಲು, ಹಾಗೆಯೇ ಜನರ ಗಮನವನ್ನು ಇವೆಲ್ಲವುಗಳಿಂದ ಬೇರೆ ಕಡೆಗೆ ಸೆಳೆಯಲು ಕುಮಾರಸ್ವಾಮಿ ನೀಡಿದ ಹೇಳಿಕೆಯನ್ನೇ ದೊಡ್ಡದು ಮಾಡಿ ರಾಜಕೀಯ ಲಾಭ ಪಡೆಯಲು ಹೊರಟಿದೆ.

ಹಿನ್ನಲೆ ಇದು: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸಾರ್ವಜನಿಕವಾಗಿ ಜೆಡಿಎಸ್ ನ್ನು ನವಗ್ರಹಗಳಿಗೆ ಹೋಲಿಸಿದ್ದೇ ಕುಮಾರಸ್ವಾಮಿ ಆಕ್ರೋಶಕ್ಕೆ ಪ್ರೇರಣೆ. ಜನೋಪಯೋಗಿ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳ ಹೆಸರಲ್ಲಿ ಮತ ಯಾಚನೆ ಮಾಡಬೇಕಾದ ಬಿಜೆಪಿ ನಾಯಕರು ಅದನ್ನು ಬಿಟ್ಟು ರಾಜ್ಯದಲ್ಲಿ ಅಷ್ಟೇನೂ ಪ್ರಮುಖ ಎದುರಾಳಿ ಅಲ್ಲದ ಜೆಡಿಎಸ್ ಕುರಿತು ಹೇಳಿಕೆ ನೀಡುವ ಅಗತ್ಯವೇ ಇರಲಿಲ್ಲ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರ ಮುಂದಿಟ್ಟು ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಕೇಳುವ ಬದಲು ಜೆಡಿಎಸ್ ಅನ್ನೇ ಗುರಿಯಾಗಿಸಿಕೊಂಡಿದ್ದಕ್ಕೆ ಬೇರೆಯದೇ ಹಿನ್ನೆಲೆ ಇದೆ ಎನ್ನಲಾಗುತ್ತಿದೆ.

ಹಾಗೆ ನೋಡಿದರೆ ಕರ್ನಾಟಕದಲ್ಲಿ ಜೆಡಿಎಸ್ ಗಿಂತ ಬಿಜೆಪಿಗೆ ಕಾಂಗ್ರೆಸ್ಸೇ ನೇರ ಎದುರಾಳಿ. ಹೀಗಿರುವಾಗ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಜೆಡಿಎಸ್ ಅನ್ನು ಗುರಿಯಾಗಿಸಿ ಅವರು ಟೀಕೆ ಮಾಡಿದ್ದರ ಹಿಂದೆ ಬೇರೆಯದೇ ಕಾರಣಗಳಿವೆ ಎಂಬ ವಾದದಲ್ಲಿ ಅರ್ಥವಿಲ್ಲದೇ ಇಲ್ಲ.

ರಾಜ್ಯ ಬಿಜೆಪಿಯಲ್ಲಿನ ಬಹಳಷ್ಟು ನಾಯಕರಿಗೆ ಮೈತ್ರಿ ಸರ್ಕಾರದ ಪತನದ ನಂತರವೂ ಜೆಡಿಎಸ್ ಜತೆಗಿನ ಸಖ್ಯವನ್ನು ತೊರೆಯಲು ಆಗಿಲ್ಲ. ಹಿಂದಿನ ಚುನಾವಣೆಗಳ ಸಂದರ್ಭದಲ್ಲೂ ಈ ಗುಪ್ತ ಹೊಂದಾಣಿಕೆ ಎರಡೂ ಪಕ್ಷಗಳ ಕೆಲವು ಮುಖಂಡರಿಗೆ ಪರಸ್ಪರ ಹಲವು ರೀತಿಯ ಲಾಭ ಮಾಡಿಕೊಟ್ಟ ಪ್ರಸಂಗಗಳೂ ಇವೆ. ಇದು ಪ್ರಹ್ಲಾದ ಜೋಶಿಯವರಿಗೂ ಗೊತ್ತು. 

ವಿಧಾನಸಭೆಗೆ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲವೆಂಬ ಸಂಗತಿ ಇದುವರೆಗಿನ ವಿವಿಧ ಸಮೀಕ್ಷೆಗಳಿಂದ ವ್ಯಕ್ತವಾಗಿದೆ. ಇದು ಮತ್ತೆ ಅಧಿಕಾರದ ಸಿಂಹಾಸನ ಏರಲು ಸಿದ್ಧತೆ ನಡೆಸಿರುವ ಬಿಜೆಪಿಯನ್ನೂ ಆತಂಕಕ್ಕೆ ದೂಡಿದೆ.

ಮತ್ತೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಅನಿವಾರ್ಯವಾಗಿ ಅಧಿಕಾರಕ್ಕೆರಲು ಜೆಡಿಎಸ್ ಮೊರೆ ಹೋಗಬೇಕಾಗಬಹುದು ಎಂಬ ತಳಮಳವೇ ಜೋಶಿಯವರ ಟೀಕೆಗೆ ಕಾರಣ ಎನ್ನಲಾಗುತ್ತಿದೆ.

ರಾಜ್ಯ ಬಿಜೆಪಿಗೆ ಅನಂತಕುಮಾರ್ ನಿಧನದ ನಂತರ ದೆಹಲಿ ಮಟ್ಟದಲ್ಲಿ ಸಂಪರ್ಕದ ಕೊಂಡಿಯಾಗಿ ಇರುವ ಪ್ರಹ್ಲಾದ ಜೋಶಿ ಕೇಂದ್ರ ಸಚಿವರಾಗಿದ್ದರೂ ಮುಖ್ಯಮಂತ್ರಿ ಆಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ. ಈ ಹಿಂದೆ ಯಡಿಯೂರಪ್ಪಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಒಂದಷ್ಟು ಪ್ರಯತ್ನಗಳು ನಡೆದಿತ್ತಾದರೂ ಅವು ನಿರೀಕ್ಷಿತ ಫಲ ಕೊಡಲಿಲ್ಲ.

ಪಕ್ಷದಲ್ಲಿ ಅವರನ್ನು ನಾನಾ ಕಾರಣಗಳಿಗೆ ವಿರೋಧಿಸುವ ಪ್ರಮುಖರ ಗುಂಪೇ ಇದೆ. ದಿಲ್ಲಿ ಬಿಜೆಪಿ ನಾಯಕರಿಗೆ ಹತ್ತಿರವಾದ ನಂತರ ತಮ್ಮದೇ ಪಕ್ಷದ ಕೆಲವು ಹಿರಿಯ ನಾಯಕರನ್ನೇ ರಾಜಕೀಯವಾಗಿ ಮೂಲೆಗುಂಪು ಮಾಡುವ ಹಂತಕ್ಕೆ ಅವರು ಮುಟ್ಟಿದ್ದಾರೆ ಎಂಬ ಆರೋಪಗಳೂ ಇವೆ.  

ಇದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಜಗದೀಶ ಶೆಟ್ಟರ್ ಇತ್ತೀಚೆಗೆ ಪಕ್ಷದಲ್ಲಿ ಸ್ಥಳೀಯ ಮಟ್ಟದಲ್ಲಿ ತಮ್ಮನ್ನು ನಿರ್ಲಕ್ಷಿಸುವ ಪ್ರಯತ್ನಗಳ ವಿರುದ್ಧ ಸಿಡಿದೆದ್ದಿದ್ದೇ ನಿದರ್ಶನ. ಅವರ ಸಿಟ್ಟು ಜೋಶಿಯವರನ್ನು ಗುರಿಯಾಗಿಸಿಕೊಂಡಿದ್ದೇ ಆಗಿತ್ತು. ಸೌಮ್ಯ ಸಜ್ಜನಿಕೆಯ ನಾಯಕ ಎಂದೇ ಪಕ್ಷದಲ್ಲಿ ಗುರುತಿಸಲ್ಪಡುವ.ರಾಜಕೀಯ ಸೈದ್ಧಾಂತಿಕ ಭಿನ್ನಾಭಿಪ್ರಾಯ ಗಳನ್ನೂ ಮೀರಿ ಪ್ರತಿಪಕ್ಷಗಳ ನಾಯಕರ ವಿಶ್ವಾಸಕ್ಕೆ ಪಾತ್ರರಾಗಿರುವ ಶೆಟ್ಟರ್ ರಾಜಕೀಯವಾಗಿ ಪ್ರಬಲರಾದರೆ ಸ್ಥಳೀಯವಾಗಿ ತಮಗೆ ಸಮಸ್ಯೆ ಆಗಬಹುದು ಎಂಬ ಆತಂಕವೂ ಜೋಶಿ ಅವರಿಗಿದೆ.

ಜೋಶಿಯವರನ್ನು ವಿರೋಧಿಸುವವರ ಗುಂಪಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕಟ್ಟಾ ಬೆಂಬಲಿಗರೂ ಇದ್ದಾರೆ. ಚುನಾವಣೆ ನಂತರ ಅನಿವಾರ್ಯವಾಗಿ ಜೆಡಿಎಸ್ ಜತೆ ಸೇರಿ ಬಿಜೆಪಿ ಸರ್ಕಾರ ರಚಿಸುವ ಸಂದರ್ಭ ಎದುರಾದರೆ ಮುಖ್ಯಮಂತ್ರಿ ಪಟ್ಟಕ್ಕೇರುವ ತಮ್ಮ ಆಕಾಂಕ್ಷೆ ಭಗ್ನಗೊಳ್ಳುವುದು ಖಚಿತ ಎಂಬ ಮುಂದಾಲೋಚನೆಯೇ ಜೆಡಿಎಸ್ ನಾಯಕರ ವಿರುದ್ಧ  ಅವರು ವೈಯಕ್ತಿಕವಾಗಿ ಟೀಕೆಗಿಳಿಯಲು ನಿಜವಾದ ಕಾರಣ ಎಂಬುದು ಬಿಜೆಪಿಯ ಪ್ರಮುಖ ಮುಖಂಡರೊಬ್ಬರು ನೀಡುವ ವಿವರಣೆ. ಇದರಿಂದ ಮುಂದೆ ಸಂದರ್ಭದ ಲಾಭ ಪಡೆದು ಪಕ್ಷದೊಳಗಿನ ತಮ್ಮ ವಿರೋಧಿಗಳು ಅಧಿಕಾರಕ್ಕೆ ಏರುವ ಅವಕಾಶ ತಪ್ಪಿಸಿದಂತಾಗುತ್ತದೆ ಎಂಬ ಲೆಕ್ಕಾಚಾರವೂ ಅವರದ್ದು ಎಂದೂ ಹೇಳಲಾಗುತ್ತಿದೆ. ಒಂದಂತೂ ಸ್ಪಷ್ಟ. ಚುನಾವಣೆಗೆ ಮೊದಲೇ ಬಿಜೆಪಿಯ ಹಲವು ನಾಯಕರು ಮುಂದಿನ ಮುಖ್ಯಮಂತ್ರಿ ಸ್ಥಾನದ ಲೆಕ್ಕಾಚಾರ ಆರಂಭಿಸಿದ್ದಾರೆ.

ಬಿಎಸ್ ವೈ, ಶೆಟ್ಟರ್ ನಿಗೂಢ ಮೌನ: ಜೋಶಿಯವರ ವಿರುದ್ಧ ಟೀಕೆ ಮಾಡುವ ರಭಸದಲ್ಲಿ ಕುಮಾರಸ್ವಾಮಿ ಶತಮಾನಗಳ ಹಿಂದೆ ಶೃಂಗೇರಿ ಮಠದ ಮೇಲೆ ಮರಾಠರು ನಡೆಸಿದ ದಾಳಿಯನ್ನು ಪ್ರಸ್ತಾಪಿಸಿ ಹೀಗೆ ದಾಳಿ ನಡೆಸಿದ ಪೇಶ್ವೆಗಳ ವಂಶಕ್ಕೆ ಪ್ರಹ್ಲಾದ ಜೋಶಿ ಸೇರಿದವರು ಎಂದು ಟೀಕಿಸಿದ್ದಾರೆ. ತಮ್ಮ ವಾಗ್ದಾಳಿ ವೇಳೆ ದಕ್ಷಿಣ ಕರ್ನಾಟಕದ ಬ್ರಾಹ್ಮಣರನ್ನು ಕೊಂಡಾಡಿದ್ದಾರೆ. ನಂತರ ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ನಿರ್ಲಕ್ಷಿಸಲಾಗಿದೆ ಎಂದು ಹೊಸ ವರಸೆ ತೆಗೆದಿದ್ದಾರೆ.

ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ ಕುಮಾರಸ್ವಾಮಿ ವಾಕ್ಪ್ರಹಾರ ನಡೆಸುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಂಚೂಣಿಯ ನಾಯಕರಾದ ಜಗದೀಶ ಶೆಟ್ಟರ್, ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ಹಾಗೂ ಬಿಜೆಪಿಯ ಇನ್ನಿತರ ಯಾವುದೇ ಪ್ರಮುಖ ಲಿಂಗಾಯಿತ ನಾಯಕರು ಜೋಶಿಯವರ ನೆರವಿಗೆ ಬರಲಿಲ್ಲ ಎಂಬುದು. ತಡವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಿಲ್ಲ ಎಲ್ಲ ಸ್ಥಾನ ಮಾನಗಳು ಸಿಕ್ಕಿವೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ತನ್ನ ಗುರಿ ಎಂದಷ್ಟೇ ಹೇಳಿದ್ದಾರೆ. ಅಲ್ಲಿಗೆ ಕುಮಾರಸ್ವಾಮಿಯವರ ಲೆಕ್ಕಾಚಾರ ತಲೆ ಕೆಳಗಾಗಿದೆ.

ಗೊಂದಲ ಮೂಡಿಸಲು ಯತ್ನ: ಮುಖ್ಯವಾಗಿ ಪ್ರಹ್ಲಾದ ಜೋಶಿ ಯವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ಬಿಜೆಪಿ ಹೊರಟಿದೆ ಎಂದು ಹೇಳುವ ಮೂಲಕ ಬಿಜೆಪಿಯ ಬೆಂಬಲಕ್ಕಿರುವ ಲಿಂಗಾಯಿತರಲ್ಲಿ ಗೊಂದಲ ಮೂಡಿಸಲು ಕುಮಾರಸ್ವಾಮಿ ಹೊರಟಿದ್ದಾರೆ. ಈ ಹೇಳಿಕೆಯಿಂದ ಲಿಂಗಾಯಿತರಲ್ಲಿ ಸಂಶಯ ಹುಟ್ಟಿ ಆ ಪಕ್ಷದ ಜತೆಗಿನ ತಮ್ಮ ನಿಷ್ಠೆಯನ್ನು ಬದಲಿಸಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಆ ಸಮುದಾಯ ನಾನಾ ಕಾರಣಗಳಿಗಾಗಿ ಬಿಜೆಪಿ ಬಿಟ್ಟು ಜೆಡಿಎಸ್ ಪಕ್ಷದತ್ತ ಒಲವು ತೋರುವ ಸ್ಥಿತಿಯಲ್ಲಿ ಇಲ್ಲ. ಮತ್ತೊಂದು ಕಡೆ ಈ ಹೇಳಿಕೆಯಿಂದ ಬಿಜೆಪಿ ಮೇಲೆ ಅಸಮಾಧಾನಗೊಂಡು ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗ ಸಮುದಾಯ ತಮ್ಮನ್ನು ಬೆಂಬಲಿಸಬಹುದು ಎಂಬ ಅವರ ನಂಬಿಕೆಯೂ ಫಲ ಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಆ ಸಮುದಾಯ ತನ್ನ ನಿಷ್ಠೆಯನ್ನು ನಿಧಾನವಾಗಿ ಕಾಂಗ್ರೆಸ್ ಪಕ್ಷದತ್ತ ಬದಲಾಯಿಸುತ್ತಿದೆ ಎಂಬ ವಾತಾವರಣ ಇದೆ. 

ಜೆಡಿಎಸ್ ವರಿಷ್ಠ ದೇವೇಗೌಡರ ತವರಿನಿಂದಲೇ ಕಾಂಗ್ರೆಸ್ ತನ್ನ ಕಾರ್ಯಾಚರಣೆ ಆರಂಭಿಸಿದ್ದು ಜೆಡಿಎಸ್ ನ ಹಲವು ಪ್ರಮುಖ ನಾಯಕರು, ಪ್ರಭಾವಿ ಮುಖಂಡರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಒಂದು ಕಡೆ ಅತಿಯಾದ ಕುಟುಂಬ ರಾಜಕಾರಣ ಮತ್ತೊಂದು ಕಡೆ ಕುಟುಂಬದಲ್ಲೇ ಶುರುವಾಗಿರುವ ಅಸಮಾಧಾನ ಕುಮಾರಸ್ವಾಮಿ ಕಂಗೆಡುವಂತೆ ಮಾಡಿದೆ. ಅವರ ರಾಜಕೀಯ ಲೆಕ್ಕಾಚಾರಗಳು ಫಲ ಕೊಡುವ ನಿರೀಕ್ಷೆಗಳು ಸದ್ಯಕ್ಕೆ ಕಾಣುತ್ತಿಲ್ಲ. ಹೀಗಾಗಿ ಸಹಜವಾಗೇ ಗೊಂದಲಕ್ಕೊಳಗಾಗಿದ್ದಾರೆ. ಅವರ ಹೇಳಿಕೆಗಳನ್ನು ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com