
ಅದೊಂದು ದಾಳಿ. ಇಡೀ ಬಿಜೆಪಿಯನ್ನೇ ಕಂಗಾಲಾಗಿಸಿದೆ... ಇಷ್ಟಕ್ಕೂ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿರುವುದು ಬಿಜೆಪಿ ಶಾಸಕರ ಪುತ್ರ. ಆತನ ಮನೆ, ಕಚೇರಿ ಸೇರಿ ಎಲ್ಲ ಕಡೆ ಸದ್ಯಕ್ಕೆ ಸಿಕ್ಕಿರುವುದು 8 ಕೋಟಿ ರೂ. ನಗದು ಹಣ.
ಮಾಡಾಳ್ ವಿರೂಪಾಕ್ಷಪ್ಪ. ವಿಧಾನಸಭೆಯಲ್ಲಿ ಚೆನ್ನಗಿರಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ. ಅವರ ಪುತ್ರ ಪ್ರಶಾಂತ್ ಮಾಡಾಳ್ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಆಸಾಮಿ, ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ಮುಖ್ಯ ಅಕೌಂಟೆಂಟ್ ಆಗಿರುವ ಅವರು ಟೆಂಡರ್ ಅನುಮೋದನೆ ಸಂಬಂಧ ಗುತ್ತಿಗೆದಾರರೊಬ್ಬರಿಂದ 40 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ. ಈ ಅಂಕಣ ಪ್ರಕಟಣೆಗೆ ಹೋಗುತ್ತಿರುವ ಹಂತದಲ್ಲಿ ಲೋಕಾಯುಕ್ತ ಅಧಿಕಾರಿಗಳು ಶಾಸಕರ ಮನೆ ಕಚೇರಿಯಲ್ಲಿ ಶೋಧನೆ ಮುಂದುವರಿಸಿದ್ದಾರೆ. ಪರಿಪೂರ್ಣವಾದ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಶಾಸಕ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಕಾರ್ಖಾನೆಯ (ಕೆಎಸ್ ಡಿಎಲ್) ಅಧ್ಯಕ್ಷರು. ಸಾಬೂನು ಕಾರ್ಖಾನೆಗೆ ರಾಸಾಯನಿಕ ಪೂರೈಕೆ ಸಂಬಂಧ ಟೆಂಡರ್ ಮಂಜೂರಾತಿ ಗೆ 80 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಈ ಪೈಕಿ 40 ಲಕ್ಷ ರೂ.ಗಳನ್ನು ಗುತ್ತಿಗೆದಾರರಿಂದ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದರು ಎಂಬುದು ಪ್ರಥಮ ಮಾಹಿತಿ. ಪ್ರಶಾಂತ್ ಮಾಡಾಳು ತಮ್ಮದೇ ಆದ ಖಾಸಗಿ ಕಚೇರಿಯೊಂದನ್ನು ಹೊಂದಿದ್ದು ಅಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಬಿಎಸ್ ವೈ ಉತ್ತರಾಧಿಕಾರಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಶೇ. 40 ರ ಲಂಚದ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಸಂದರ್ಭದಲ್ಲಿ ಪ್ರಮುಖ ಅಸ್ತ್ರವೊಂದು ಸಿಕ್ಕಂತಾಗಿದೆ. ರಾಜ್ಯದ ಲೋಕಾಯುಕ್ತ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ಹಣ ಸಿಕ್ಕಿದೆ.
ನಿಸ್ಸಂಶಯವಾಗಿ ಇದು ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ದೊಡ್ಡ ಆಘಾತ ತಂದಿದೆ.ತೀರಾ ಇತ್ತೀಚೆಗಷ್ಟೇ ದೆಹಲಿ ಸರ್ಕಾರದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ ಸಿಬಿಐ ದಾಳಿ ನಡೆದು ಅವರನ್ನು ಬಂಧಿಸಲಾಗಿದೆ. ಭ್ರಷ್ಟಾಚಾರದ ವಿರುದ್ಧ ಇದೊಂದು ಮಹತ್ವದ ದಾಳಿ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಬೆನ್ನು ತಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲೇ ಅವರದೇ ಪಕ್ಷದ ಶಾಸಕರೊಬ್ಬರ ಪುತ್ರ ಲೋಕಾಯುಕ್ತ ದಾಳಿಗೆ ಒಳಗಾಗಿ ಸಿಕ್ಕಿಬಿದ್ದಿರುವುದು ಮುಜುಗುರದ ಸಂಗತಿಯಾಗಿದೆ.ಬಹು ಮುಖ್ಯವಾಗಿ ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿಯ ಹಿರಿಯ ನಾಯಕರೊಬ್ಬರಿಗೆ ಆಪ್ತರು. ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಸರ್ಕಾರಿ ಅಧಿಕಾರಿಯೂ ಆಗಿರುವ ಶಾಸಕರ ಪುತ್ರ ಮನೆಯಲ್ಲಿ ಕಾನೂನು ಬಾಹಿರವಾಗಿ ಇಟ್ಟುಕೊಂಡಿದ್ದಾದರೂ ಹೇಗೆ? ಈ ಹಣ ನಿಜಕ್ಕೂ ಶಾಸಕರಿಗೆ ಸೇರಿದ್ದಾ? ಅಥವಾ ಬೇರೆ ಯಾರಿಗೆ ಸೇರಿದ್ದು ಅಥವಾ ಸೇರಬೇಕಾಗಿತ್ತು ?ಎಂಬುದು ತನಿಖೆ ನಂತರವಷ್ಟೇ ಗೊತ್ತಾಗಬೇಕಾಗಿದೆ.
ಇದೀಗ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಸಿಕ್ಕಿರುವ ಹಿನ್ನಲೆಯಲ್ಲಿ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಗೆ ಮುಂದಾಗುವ ಸಾಧ್ಯತೆಗಳು ಇವೆ.
ವಿಧಾನಸಭೆ ಚುನಾವಣೆಗೆ ಇನ್ನು ಎರಡೇ ತಿಂಗಳು ಬಾಕಿ ಇದೆ. ಅದಕ್ಕೆ ಮುನ್ನವೇ ಚುನಾವಣೆಗೆ ಸ್ಪರ್ಧಿಸಲಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ ಕುಕ್ಕರ್, ವಾಷಿಂಗ್ ಮಿಷನ್ ಸೇರಿದಂತೆ ಬೆಲೆ ಬಾಳುವ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮ ಕಡೆಗೆ ಸೆಳೆದುಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ಅಧಿಕೃತವಾಗಿ ಘೋಷಣೆ ಆಗದೇ ಈ ವಿಚಾರದಲ್ಲಿ ಚುನಾವಣಾ ಆಯೋಗವೂ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಹೀಗಾಗಿ ಕಾನೂನಿನ ಲಾಭ ಪಡೆದ ವಿವಿಧ ಪಕ್ಷಗಳ ಮುಖಂಡರು ಅಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನು ತಡೆಯಬೇಕಾದ ರಾಜ್ಯಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಸೇರಿದಂತೆ ಸಂಬಂಧ ಪಟ್ಟ ಇಲಾಖೆಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ.
ಬಿಜೆಪಿ ತಲ್ಲಣ: ಇದ್ದಕ್ಕಿದಂತೆ ಲೋಕಾಯುಕ್ತರು ಶಾಸಕ ವಿರೂಪಾಕ್ಷಪ್ಪ ಪುತ್ರನ ಕಚೇರಿ ಮೇಲೆ ನಡೆಸಿರುವ ದಾಳಿ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆಯಷ್ಟೇ ಅಲ್ಲ ಆತಂಕವನ್ನೂ ಉಂಟು ಮಾಡಿದೆ. ಭ್ರಷ್ಟಾಚಾರದ ವಿರುದ್ಧ ತಮ್ಮ ಪಕ್ಷದ ಸಮರ ಎಂದು ಬಹಿರಂಗವಾಗೇ ಬೀಗುತ್ತಿದ್ದ ಬಿಜೆಪಿ ರಾಷ್ಟ್ರೀಯನಾಯಕರಿಗೂ ಇದು ನುಂಗಲಾರದ ತುತ್ತಾಗಿದೆ.ಮತ್ತೊಂದು ಕಡೆ ಇಂಥದೊಂದು ದಾಳಿಯ ಸುಳಿವು ಉನ್ನತ ಅಧಿಕಾರ ಸ್ಥಾನದಲ್ಲಿರುವ ಬಿಜೆಪಿ ನಾಯಕರಿಗೆ ಇತ್ತೆ ಎಂಬ ಸಂಶಯವೂ ತಲೆ ಎತ್ತಿದೆ.
ರಾಜ್ಯ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಈಗಲೇ ಪೈಪೋಟಿ ಶುರವಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರಶಾಂತ್ ಮಾಡಾಳ್ ಅವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಯಿತೆ ಎಂಬ ಪ್ರಶ್ನೆಯೂ ತಲೆ ಎತ್ತಿದೆ.
ಕಾಂಗ್ರೆಸ್ ಕೈಗೆ ಹೊಸ ಅಸ್ತ್ರ: ಅದೇನೇ ಇರಲಿ ಬಿಜೆಪಿ ವಿರುದ್ಧ ಸರಣಿ ಹೋರಾಟ ಆರಂಭಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಹೊಸ ಅಸ್ತ್ರವೊಂದು ಸಿಕ್ಕಿದೆ.ಈ ಪ್ರಕರಣವನ್ನು ಬಳಸಿಕೊಂಡು ಕಾಂಗ್ರೆಸ್ ಇದೀಗ ಆಡಳಿತ ಪಕ್ಷದ ವಿರುದ್ಧ ಹೋರಾಟ ಆರಂಭಿಸಿದೆ. ಮುಂದೆ ಈ ಪ್ರಕರಣ ಯಾವ ತಿರುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ರಾಜ್ಯದಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರು ಚುನಾವಣೆಗಾಗಿ ಬಿರುಸಿನ ಪ್ರಚಾರ ನಡೆಸಿರುವ ಸಂದರ್ಭದಲ್ಲೇ ಅದೇ ಪಕ್ಷದ ಶಾಸಕರ ಪುತ್ರನ ಕಚೇರಿ, ಮನೆ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿರುವುದು ದಿಲ್ಲಿ ನಾಯಕತ್ವವನ್ನೂ ಇಕ್ಕಟ್ಟಿಗೆ ಸಿಕ್ಕಿಸಿದೆ.
ಇದನ್ನೂ ಓದಿ: ಕೈಕೊಟ್ಟ ರಾಜಕೀಯ ಲೆಕ್ಕಾಚಾರ; ಗೊಂದಲದಲ್ಲಿ ಕುಮಾರಸ್ವಾಮಿ
ಈ ಎಲ್ಲ ಬೆಳವಣಿಗೆಗಳು ಒಂದು ಕಡೆಯಾದರೆ, ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತೆ ಹಿರಿಯ ನಾಯಕ ಯಡಿಯೂರಪ್ಪ ಅವರ ಜಪ ರಂಬಿಸಿದ್ದಾರೆ. ಚುನಾವಣೆ ಗೆಲ್ಲಬೇಕಾದರೆ ಅವರ ನಾಯಕತ್ವ ಇಲ್ಲದೇ ಸಾದ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ರೀಯ ನಾಯಕರು ಇದೀಗ ಬೇರೆ ದಾರಿಯೇ ಇಲ್ಲದೇ ಯಡಿಯೂರಪ್ಪ ನಾಯಕತ್ವಕ್ಕೆ ಬಹುಪರಾಕ್ ಹೇಳಲು ಆರಂಭಿಸಿದ್ದಾರೆ.
ಪ್ರಚಾರ ಸಮಿತಿ ಹೊಣೆ: ಬಿಎಸ್ ವೈ ನಿರಾಸಕ್ತಿ: ಈಗಿನ ವರ್ತಮಾನಗಳ ಪ್ರಕಾರ ಪಕ್ಷದಲ್ಲಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ಯಡಿಯೂರಪ್ಪ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಆದರೆ ಭವಿಷ್ಯದ ರಾಜಕಾರಣದ ಲೆಕ್ಕಚಾರದ ದೂರ ದೃಷ್ಟಿ ಹೊಂದಿರುವ ಯಡಿಯೂರಪ್ಪ ಹುದ್ದೆಯನ್ನು ಒಪ್ಪಿಕೊಳ್ಳುತ್ತಾರಾ? ಎಂಬುದೇ ಸದ್ಯದ ಪ್ರಶ್ನೆ.
ಚುನಾವಣೆ ಸಂದರ್ಭ ಹೊರತು ಪಡಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಮಹತ್ವ ಇಲ್ಲ. ಇದಕ್ಕಿಂತ ಮೇಲಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಕೂತಿದ್ದಾರೆ. ಪಕ್ಷದ ನೀತಿ ನಿರೂಪಣೆಗಳನ್ನು ರೂಪಿಸುವುದರಲ್ಲಿ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನಿಲುವೂ ಹೆಚ್ಚು ಸಂದರ್ಭಗಳಲ್ಲಿ ಅಂತಿಮವಾಗುವ ಸಾಧ್ಯತೆಗಳು ಹೆಚ್ಚು .
ಇಂತಹ ಸನ್ನಿವೇಶದಲ್ಲಿ ಅಷ್ಟೇನೂ ಮಹತ್ವವಲ್ಲದ ಪ್ರಚಾರ ಸಮಿತಿ ಅಧ್ಯಕ್ಷರ ಸ್ಥಾನವನ್ನು ಯಡಿಯೂರಪ್ಪ ಒಪ್ಪಿಕೊಳ್ಳುತ್ತಾರೆಯೆ? ಎಂಬುದು ಸದ್ಯದ ಪ್ರಶ್ನೆ.
ಸದ್ಯದ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ತಮ್ಮ ಗುರಿ ಎಂದು ಹೇಳುತ್ತಿರುವ ಯಡಿಯೂರಪ್ಪ ಬಿಜೆಪಿಯಲ್ಲಿ ಪ್ರಬಲ ಮತ್ತು ಪ್ರಶ್ನಾತೀತ ನಾಯಕ ಎಂಬುದು ನಿಜ.
ಅವರಿಗೆ ಈಗಾಗಲೇ ಪಕ್ಷದ ಕೇಂದ್ರ ಮಟ್ಟದ ಎರಡು ಸಮಿತಿಗಳಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ.ಮತ್ತೆ ಅವರನ್ನು ರಾಜ್ಯಕ್ಕೆ ಕರೆತಂದು ಪ್ರಚಾರ ಸಮಿತಿ ಹೊಣೆಗಾರಿಕೆ ಒಪ್ಪಿಸುವುದು ಸದ್ಯಕ್ಕೆ ಅನುಮಾನ. ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ಮತ್ತೆ ರಾಜ್ಯಾಧ್ಯಕ್ಷ ಕಟೀಲು ಜತೆಗೂಡಿ ಮತ್ತೊಂದು ರಾಜ್ಯ ಮಟ್ಟದ ಸಮಿತಿ ಮುಖ್ಯಸ್ಥರಾಗುವು ದೆಂದರೆ ಅವರ ವ್ಯಕ್ತಿತ್ವ ಮತ್ತು ಹಿರಿತನಕ್ಕೆ ಸಲ್ಲದ ಸಂಗತಿ ಆದರೆ ವರಿಷ್ಠರು ಆದೇಶಿಸಿದರೆ ಅದನ್ನು ಅವರು ಪಾಲನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದೂ ಈ ಮುಖಂಡರು ಹೇಳುತ್ತಾರೆ.
ಪುತ್ರನ ಪರ ಒತ್ತಡ: ಪಕ್ಷದ ಮೂಲವೊಂದರ ಪ್ರಕಾರ ಅಷ್ಟೇನೂ ಮಹತ್ವವಲ್ಲದ ರಾಜ್ಯ ಸಮಿತಿ ಉಪಾಧ್ಯಕ್ಷನಾಗಿರುವ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಗೆ ಪಕ್ಷದಲ್ಲಿ ಪ್ರಮುಖ ಹಾಗೂ ಸ್ವತಂತ್ರ ಸ್ಥಾನ ದೊರಕಿಸಲು ಯಡಿಯೂರಪ್ಪ ಪ್ರಯತ್ನ ನಡೆಸಿದ್ದಾರೆ.
ರಾಜ್ಯವ್ಯಾಪಿ ವಿಜಯೇಂದ್ರ ಅವರನ್ನು ಇಷ್ಟ ಪಡುವ ಯುವ ಕಾರ್ಯಕರ್ತರ ದಂಡೇ ಇದೆ. ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಕೆಳ ಹಂತದಲ್ಲಿ ತಮ್ಮದೇ ಆದ ಕಾರ್ಯಕರ್ತರ ಪಡೆ ಕಟ್ಟುವ ನಿಟ್ಟಿನಲ್ಲಿ ಅವರು ಗಮನ ಹರಿಸಿದ್ದಾರೆ.
ಇದನ್ನೂ ಓದಿ: ಅತಂತ್ರ ಸ್ಥಿತಿಯಲ್ಲಿ ಬಿಜೆಪಿಯ ವಲಸಿಗ ಸಚಿವರು
ಮತ್ತೊಂದು ಕಡೆ ಟಿಪ್ಪು ಮತ್ತು ಸಾವರ್ಕರ್ ಹೆಸರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಯಡಿಯೂರಪ್ಪ ಬಹಿರಂಗವಾಗೇ ವಿರೋಧ ವ್ಯಕ್ತಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು, ಕಾರ್ಯಕ್ರಮಗಳ ಆಧಾರದ ಮೇಲೆ ಚುನಾವಣೆಗೆ ಮುಂದಾಗಬೇಕು ಎಂದೂ ಹೇಳಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ನಿದರ್ಶನವಾಗಿದೆ.
ಕಟೀಲು ಬದಲಾಗುತ್ತಾರಾ? ಈ ಎಲ್ಲ ಬೆಳವಣಿಗೆಯ ನಡುವೆ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಬದಲಾವಣೆ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಪರಿಣಾಮಕಾರಿ ಯುವಕರೊಬ್ಬರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತರಬೇಕು ಎಂಬ ಚರ್ಚೆಗೆ ಮತ್ತೆ ಜೀವ ಬಂದಿದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಅವರನ್ನು ದಿಲ್ಲಿಗೆ ಕರೆಸಿಕೊಂಡ ಪಕ್ಷದ ರಾಷ್ಟ್ರೀಯ ನಾಯಕರು ಇದೇ ವಿಚಾರ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂಬುದು ದಿಲ್ಲಿಯಿಂದ ಬಂದಿರುವ ಮಾಹಿತಿ.
ಯಗಟಿ ಮೋಹನ್
yagatimohan@gmail.com
Advertisement