social_icon

ಆತ್ಮವಿಶ್ವಾಸದ ನಡುವೆಯೂ ಬಿಜೆಪಿಗೆ ಒಳಗೊಳಗೇ ತಳಮಳ... (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್

ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ  ನಡ್ಡಾ ಸೇರಿದಂತೆ ಇಡೀ ಬಿಜೆಪಿ ಮಹಾನ್ ದಂಡ ನಾಯಕರ ಪಡೆಯೇ ಕರ್ನಾಟಕಕ್ಕೆ ದಾಳಿ ಇಟ್ಟಿದ್ದು ಪಕ್ಷದ ಕಾರ್ಯಕರ್ತರನ್ನು ಸಮರಕ್ಕೆ ಸಜ್ಜುಗೊಳಿಸುತ್ತಿದೆಯಾದರೂ ಆಂತರ್ಯದಲ್ಲಿ ಅಂತಹ ಆತ್ಮ ವಿಶ್ವಾಸ ಕಾಣುತ್ತಿಲ್ಲ.

Published: 05th May 2023 12:47 PM  |   Last Updated: 05th May 2023 08:47 PM   |  A+A-


bjp manifesto

ಪ್ರಣಾಳಿಯೊಂದಿಗೆ ಬಿಜೆಪಿ ನಾಯಕರು.

Posted By : Srinivas Rao BV
Source :

ಮತದಾನಕ್ಕೆ ಇರುವುದು ಇನ್ನು  ಐದೇ ದಿನ. ಆದರೂ ಆಡಳಿತ ಪಕ್ಷ ಬಿಜೆಪಿಯಲ್ಲಿ ಮತ್ತೆ ಗೆದ್ದು ಅಧಿಕಾರ  ಹಿಡಿಯುವ ರಣೊತ್ಸಾಹ ಕಾಣುತ್ತಿಲ್ಲ.  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ  ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇಡೀ ಬಿಜೆಪಿ ಮಹಾನ್ ದಂಡ ನಾಯಕರ ಪಡೆಯೇ ಕರ್ನಾಟಕಕ್ಕೆ ದಾಳಿ ಇಟ್ಟಿದ್ದು ಸರಣಿ ಬಹಿರಂಗ ಸಭೆಗಳ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಮರಕ್ಕೆ ಸಜ್ಜುಗೊಳಿಸುತ್ತಿದೆಯಾದರೂ ಆಂತರ್ಯದಲ್ಲಿ ಅಂತಹ ಆತ್ಮ ವಿಶ್ವಾಸ ಕಾಣುತ್ತಿಲ್ಲ.

ಚುನಾವಣೆಗೆ ಸ್ಪರ್ಧಿಸಿರುವ ಘಟಾನುಘಟಿ ನಾಯಕರುಗಳಲ್ಲೇ ಸೋಲುವ ಭೀತಿ ಕಾಣುತ್ತಿದೆ. ಒಂದು ರೀತಿಯಲ್ಲಿ ಗೊಂದಲ ಆವರಿಸಿದೆ.ಈ ಕಾರಣಕ್ಕಾಗೇ ರಾಷ್ಟ್ರೀಯ ನಾಯಕರು ಮೇಲಿಂದ ಮೇಲೆ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಪ್ರಧಾನಿಯೊಬ್ಬರು ವಿಧಾನಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಮೇಲಿಂದ ಮೇಲೆ ಕರ್ನಾಟಕಕ್ಕೆ ಭೇಟಿ ನೀಡಿ  ಸುಮಾರು 20 ಕ್ಕೂ ಹೆಚ್ಚು ಬಹಿರಂಗ ಸಭೆಗಳನ್ನು ನಡೆಸಿದ ಉದಾಹರಣೆ ಇದ್ದರೆ ಅದು ಪ್ರಧಾನಿ ಮೋದಿಯವರ ವಿಷಯದಲ್ಲಿ ಮಾತ್ರ.

ಶತಾಯ ಗತಾಯ ಕರ್ನಾಟಕದ ಚುನಾವಣೆಯನ್ನು ಗೆದ್ದು ಮತ್ತೆ ತಮ್ಮದೇ ಪಕ್ಷದ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆಂಬ ಹೆಬ್ಬಯಕೆಯ ಈಡೇರಿಕೆಗೆ ದಾರಿ ಸುಗಮವಾಗಿಲ್ಲ. ಪಕ್ಷದೊಳಗಿನ ಭಿನ್ನಮತ, ನಾಯಕರ ನಡುವಿನ ಆಂತರಿಕ ಜಗಳ, ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ನಾಯಕರ ಪೈಕಿ ಕೆಲವರನ್ನು ಕಾಲೆಳೆದು ಬೀಳಿಸುವ ರಹಸ್ಯ ಪ್ರಯತ್ನಗಳು ಮುಂದುವರಿದೇ ಇದೆ. ಹೀಗಾಗಿ ಡಜನ್ ಗೂ ಹೆಚ್ಚು ಮೊದಲ ಸಾಲಿನ ನಾಯಕರಿಗೆ ಸೋಲಿನ ಬೀತಿ ಕಾಡುತ್ತಿದೆ. ಇಂತಹ ಸನ್ನಿವೇಶದ ನಡುವೆಯೇ ಹೇಗಾದರೂ ಮಾಡಿ ಕರ್ನಾಟಕವನ್ನು ಗೆಲ್ಲಲೇ ಬೆಕೆಂಬ ಹಟಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ಬಿದ್ದಿದ್ದಾರೆ. ಆದರೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಜಾತಿ ಸಮೀಕರಣಗಳು ಬಿಜೆಪಿ ಪರವಾಗಿಲ್ಲ. ಹೀಗಾಗಿ ರಾಷ್ಟ್ರೀಯ ನಾಯಕರು ಎಣಿಸಿದಂತೆ ಪ್ರಚಂಡ ಬಹುಮತ ಗಳಿಸಿ ಅಧಿಕಾರಕ್ಕೇರುವ ಲೆಕ್ಕಾಚಾರ ಸುಲಭವಾಗಿ ಕೈಗೂಡುವ ಸಾಧ್ಯತೆಗಳಿಲ್ಲ.

ಇದನ್ನೂ ಓದಿ: ​ಚುನಾವಣೆ ಗೆಲ್ಲಲು ಪ್ರತಿಷ್ಠೆ ಪಣಕ್ಕಿಟ್ಟ ತ್ರಿಮೂರ್ತಿಗಳು

ಚುನಾವಣೆಗೆ ಮತದಾನದ ದಿನ ಹತ್ತಿರ ವಾಗುತ್ತಿರುವ ಈ ಸನ್ನಿವೇಶದಲ್ಲಿ ಪ್ರಕಟವಾಗಿರುವ ಸಮೀಕ್ಷೆಗಳ ಪೈಕಿ ಹೆಚ್ಚು ಪಾಲು ಫಲಿತಾಂಶಗಳು ಬಿಜೆಪಿಗೆ ವಿರುದ್ಧವಾಗೇ ಇವೆ. ಖಾಸಗಿ ಏಜೆನ್ಸಿಗಳು ನಡೆಸಿರುವ ಸಮೀಕ್ಷೆಗಳನ್ನು ಗಮನಿಸಿದರೆ ಬಿಜೆಪಿಯ ಸ್ಥಿತಿ ಉತ್ತಮವಾಗಿಲ್ಲ. ಆಡಳಿತ ವಿರೋಧಿ ಅಲೆ ಎದ್ದಿರುವುದು ಗೊತ್ತಾಗುತ್ತಿದೆ. ಇಂತಹ ಸನ್ನಿವೇಶದ ನಡುವೆಯೂ  

ಬಿಜೆಪಿಗೆ ಆಶಾಕಿರಣವಾಗಿ ಗೋಚರವಾಗುತ್ತಿರುವುದು ಮೋದಿ ಜನಪ್ರಿಯತೆ. ಪ್ರಧಾನಿ ಸಭೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. (ಅಥವಾ ಸೇರಿಸಲಾಗುತ್ತಿದೆ) ಆದರೆ ಇವೆಲ್ಲ ಮತಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಲು ಸಾಧ್ಯವಿಲ್ಲ.  ಇನ್ನೊಂದು ಕಡೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಗುಪ್ತಚರ ಪಡೆ ನಡೆಸಿರುವ ಸಮೀಕ್ಷೆಯಲ್ಲೂ ಬಿಜೆಪಿ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಇದರಿಂದ ಹೆಚ್ಚು ಚಿಂತೆಗೊಳಗಾಗಿರುವ ಕೇಂದ್ರದ ನಾಯಕರು ತಮ್ಮ ಇಡೀ ಶಕ್ತಿ ಮತ್ತು ಸಂಪನ್ಮೂಲವನ್ನು ಈ ಚುನಾವಣೆಯ ಮೇಲೆಯೇ ಕೇಂದ್ರೀಕರಿಸಿದ್ದಾರೆ. ದಕ್ಷಿಣದ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅತಿ ತುರ್ತಾಗಿ ಬೇಕಾಗಿದೆ. ಆ ಕಾರಣಕ್ಕಾಗೇ ತನ್ನ ಇಡೀ ಶಕ್ತಿ ಸಾಮರ್ಥ್ಯವನ್ನು ಪಕ್ಷದ ನಾಯಕತ್ವ ಇಲ್ಲಿ ಪಣಕ್ಕಿಟ್ಟಿದೆ. ಮತದಾನಕ್ಕೆ ದಿನ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಮುಂದಿನ ಮುಖ್ಯಮಂತ್ರಿಯಾಗಿ ಮತ್ತೆ ಬಸವರಾಜ ಬೊಮ್ಮಾಯಿಯವರನ್ನೇ ಪಕ್ಷ ಘೋಷಿಸಿದೆ.  

ಪಕ್ಷದ ಜತೆಗಿರುವ ಲಿಂಗಾಯಿತ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಇದಾಗಿದೆಯಾದರೂ ವರ್ಚಸ್ಸು ಮತ್ತು ಜನಪ್ರಿಯತೆ, ನಾಯಕತ್ವದ ದೃಷ್ಟಿಯಿಂದ ನೋಡಿದರೆ ಸಮುದಾಯ ಅವರನ್ನು ಒಪ್ಪಿಕೊಂಡು ಬೆಂಬಲಿಸುವ ಸಾಧ್ಯತೆಗಳು ತೀರಾ ಕಡಿಮೆ. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೂ ಬಿಜೆಪಿಗೆ ಸರ್ಕಾರ ರಚಿಸುವಷ್ಟು ಅಗತ್ಯ ಸಂಖ್ಯೆಯ ಬಹುಮತ ಬರಲಿಲ್ಲ. ಕಡೆಗೂ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕವೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾಯಿತು. ಯಡಿಯೂರಪ್ಪನವರಮತೆ ಬಸವರಾಜ ಬೊಮ್ಮಾಯಿ ವರ್ಚಸ್ವಿ ನಾಯಕರಲ್ಲ.  ತಮ್ಮದೇ ಸಮುದಾಯದಲ್ಲಿ ಪ್ರಭಾವಿ ಅಲ್ಲ. ಯಡಿಯೂರಪ್ಪನವರಂತೆ ಒಂದಷ್ಟು ಶಾಸಕರನ್ನು  ಸ್ವಂತ ವರ್ಚಸ್ಸು ಪ್ರಭಾವದ ಮೇಲೆ ಸ್ವತಂತ್ರವಾಗಿ ಗೆಲ್ಲಿಸಿಕೊಂಡು ಬರಬಲ್ಲ ರಾಜಕೀಯ ನಾಯಕತ್ವವೂ ಅವರದ್ದಲ್ಲ. 

ಹಾಗಿದ್ದೂ ಅವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವ ಪಕ್ಷದ ನಾಯಕತ್ವದ ನಿರ್ಧಾರದ ಹಿಂದೆ ಲಿಂಗಾಯಿತ ಮತಗಳನ್ನು ಸೆಳೆಯುವುದಷ್ಟೇ ಅಲ್ಲದೇ ತಮ್ಮ ಆಜ್ಞಾಪಾಲಕನಾಗಿ ಕೆಲಸ ಮಾಡುವ ಮುಖ್ಯಮಂತ್ರಿ ಆಗಬಲ್ಲರು ಎಂಬ ಲೆಕ್ಕಚಾರವಿದೆ. ಹಿಂದೆ ಕಾಂಗ್ರೆಸ್ ಆಡಳಿತ ಕಾಲದಲ್ಲೂ ಇದೇ ವ್ಯವಸ್ಥೆ ಇತ್ತು. ಅಂದು ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ ಆಳ್ವಿಕೆಯಲ್ಲೂ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಇಂಥದೇ ವಿಧೇಯ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದರು. ಈಗ ಇಂದಿರಾ ಗಾಂಧಿಯವರು ಕೂತಿದ್ದ ಕುರ್ಚಿಯಲ್ಲಿ ನರೇಂದ್ರ ಮೋದಿ ಕುಳಿತು ರಾಜ್ಯಭಾರ ನಡೆಸಿದ್ದಾರೆ. ಆದರೆ ರಾಜಕೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳೇನೂ ಆಗಿಲ್ಲ. ಶಿಗ್ಗಾವಿಯಿಂದ ಚುನಾವಣಾ ಕಣಕ್ಕಿಳಿದಿರುವ ಬೊಮ್ಮಾಯಿ ಗೆಲುವಿನ ದಾರಿ ಈ ಬಾರಿ ಸುಗಮವಾಗಿಲ್ಲ. ಪಕ್ಷದೊಳಗೇ ಇದ್ದು ಅವರ ನಾಯಕತ್ವವನ್ನು ಒಪ್ಪಿಕೊಳ್ಳದ ಅನೇಕ ಪ್ರಮುಖರಿಗೆ ಅವರು ಇಷ್ಟವಾಗದೆ ಅಡುಗೆ. ಇದಕ್ಕಿಂತ ಹೆಚ್ಚಾಗಿ ಹಿರಿಯ ನಾಯಕ ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಪಕ್ಷದ ಹುಬ್ಬಳ್ಳಿಯಿಂದ ಸ್ಪರ್ಧಿಸಿದ್ದಾರೆ.

ಮೊದಲಿನಿಂದಲೂ ಅವರಿಂದ ಅಂತರ ಕಾಪಾಡಿಕೊಂಡೇ ಬಂದ ಶೆಟ್ಟರ್ ಈ ಬಾರಿ ಶಿಗ್ಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಶತಾಯ ಗತಾಯ ಪ್ರಯತ್ನ ಹಾಕಲಿದ್ದಾರೆ.   ಇವೆಲ್ಲವನ್ನೂ ಮೆಟ್ಟಿನಿಂತು ಬೊಮ್ಮಾಯಿ ಗೆದ್ದು ಪಕ್ಷಕ್ಕೂ ಬಹುಮತ ಬಂದರೆ ಅವರೇ ಮುಖ್ಯಮಂತ್ರಿ ಇಲ್ಲವಾದರೆ ಇಲ್ಲ. ಇನ್ನುಳಿದಂತೆ ಸಚಿವ ಸೋಮಣ್ಣ ಮೈಸೂರಿನ ವರುಣ ಮತ್ತು ಚಾಮರಾಜ ನಗರ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ. ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರಿಸಿ ಗೆಲ್ಲಬೇಕಾಗಿದೆ. ದಕ್ಷಿಣ ಕರ್ನಾಟಕದಲ್ಲಿ  ತಾನೊಬ್ಬ ಪ್ರಭಾವೀ ಲಿಂಗಾಯಿತ ನಾಯಕನಾಗಿ ಹೊರ ಹೊಮ್ಮುವ ಉತ್ಸಾಹದಲ್ಲಿರುವ ಅವರನ್ನು ಗೆಲ್ಲಿಸಲು  ಬಿ.ಎಲ್ ಸಂತೋಷ್ ಸೇರಿದಂತೆ ಹೈಕಮಾಂಡ್ ನ ನಾಯಕರೇ ರಂಗಕ್ಕಿಳಿದಿದ್ದಾರೆ. ಆದರೆ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಹೊಂದಿರುವ ಪ್ರಭಾವ, ಮತ್ತು ಅವರ ಪರವಾಗಿ ಮೂಡಿರುವ ಅನುಕಂಪ ಮತ್ತು ಜನಪ್ರಿಯತೆ ಸೋಮಣ್ಣ  ಅವರಿಗೆ ತೊಡರುಗಾಲಾಗಿದೆ. ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೋಮಣ್ಣ ಕೂಡಾ ಇದ್ದಾರೆ. ಇದು ಇದೇ ಪಟ್ಟಕ್ಕೆ ಆಸೆ ಹೊತ್ತಿರುವ ಪಕ್ಷದೊಳಗಿನ ಇತರ ಪ್ರಮುಖರಿಗೂ ಸಮಸ್ಯೆಯಾಗಿದೆ. ಒಳ ರಾಜಕೀಯ, ಬಣ ರಾಜಕೀಯ ಸಿದ್ದರಾಮಯ್ಯ ಅವರಿಗೆ ವರವಾಗುವ ಎಲ್ಲ ಲಕ್ಷಣಗಳೂ ಇಲ್ಲಿವೆ.

ಇದನ್ನೂ ಓದಿ: ಸಿಎಂ ಅಭ್ಯರ್ಥಿ ಘೋಷಣೆಗೆ ಲಿಂಗಾಯಿತರ ಪಟ್ಟು; ಬಿಜೆಪಿಗೆ ಇಕ್ಕಟ್ಟು

ಇನ್ನು ಚಾಮರಾಜನಗರದಲ್ಲೂ ಸೋಮಣ್ಣಗೆ ಪರಿಸ್ಥಿತಿ ಹೆಚ್ಚು ಅನುಕೂಲಕರವಾಗೇನೂ ಇಲ್ಲ. ಅಲ್ಲೂ ಬಿಜೆಪಿಯ ಒಳ ಜಗಳ ಅವರಿಗೆ ಸಮಸ್ಯೆಯಾಗಿ ಕಾಡಲಿದೆ. ಇನ್ನು ಮುಖ್ಯಮಂತ್ರಿ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಕಂದಾಯ ಸಚಿವ ಆರ್. ಅಶೋಕ್ ಪದ್ಮನಾಭ ನಗರದ ಜತೆ ಒಲ್ಲದ ಮನಸ್ಸಿನಿಂದ ಕನಕಪುರ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದಾರೆ. ಅಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರು ಸೆಣಸಬೇಕಿದೆ.  ಕನಕಪುರದ ಮಟ್ಟಿಗೆ ಅಶೋಕ್ ಗೆ ಪಕ್ಷದ ಅತಿರಥರ ಬೆಂಬಲವೇ ಇದೆ. ಚುನಾವಣಾ ತಂತ್ರಗಳಲ್ಲಿ ಪಳಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಗೆದ್ದರೆ ಅದೊಂದು ಮಹತ್ವದ ದಿಗ್ವಿಜಯ ಆಗುತ್ತದೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಕಾಣುತ್ತಿಲ್ಲ.

ಇಡೀ ರಾಜ್ಯದಲ್ಲಿ ಬಿಜೆಪಿಗೆ ನಿಚ್ಚಳ ಬೆಂಬಲ ಸಿಕ್ಕೇ ಬಿಡುತ್ತದೆ ಎಂಬ ಪರಿಸ್ಥಿತಿ ಏನಿಲ್ಲ.ಸಿದ್ದರಾಮಯ್ಯ ವರ್ಚಸ್ಸು ರಾಜ್ಯದ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬಲ ತಂದು ಕೊಡಲಿದೆ. ಜತೆಗೇ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಹೋರಾಟಗಳೂ ನೆರವು ನೀಡಲಿದೆ. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿ ಇದೇ 18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎಂದೂ ಭವಿಷ್ಯ ನುಡಿದಿದ್ದಾರೆ.  ಚುನಾವಣೆ ನಂತರ ಅತಂತ್ರ ವಿಧಾನಸಭೆ ರಚನೆ ಆದರೆ ಉಳಿದ ಎರಡೂ ರಾಷ್ಟ್ರೀಯ ಪಕ್ಷಗಳು ಬೆಂಬಲಕ್ಕಾಗಿ ತಮ್ಮ ಬಳಿ ಬರುವುದು ಖಚಿತ ಎಂಬುದು ಅವರ ನಂಬಿಕೆ. ಮತದಾನಕ್ಕೆ ಮುನ್ನ 48 ಗಂಟೆ ಅವಧಿಯಲ್ಲಿ ನಡೆಯುವ ನಿಗೂಢ ಕಾರ್ಯಾಚರಣೆಗಳು ಚುನಾವಣೆ ಫಲಿತಾಂಶವನ್ನು ನಿರ್ಣಯಿಸಲಿವೆ. ಮೇಲ್ನೋಟಕ್ಕೆ ಬಿಜೆಪಿ ನಾಯಕರಲ್ಲಿ ಕಾಣುತ್ತಿರುವ ಆತ್ಮ ವಿಶ್ವಾಸ ಆಂತರ್ಯದಲ್ಲಿ ಕಾಣುತ್ತಿಲ್ಲ ಅದೇ ವಿಶೇಷ.


ಯಗಟಿ ಮೋಹನ್
yagatimohan@gmail.com
 


    Stay up to date on all the latest ಅಂಕಣಗಳು news
    Poll
    K Annamalai

    ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


    Result
    ಹೌದು
    ಇಲ್ಲ

    Comments

    Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

    The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

    flipboard facebook twitter whatsapp