ಸಿಎಂ ಅಭ್ಯರ್ಥಿ ಘೋಷಣೆಗೆ ಲಿಂಗಾಯಿತರ ಪಟ್ಟು; ಬಿಜೆಪಿಗೆ ಇಕ್ಕಟ್ಟು (ಸುದ್ದಿ ವಿಶ್ಲೇಷಣೆ)

ಲಿಂಗಾಯಿತ ಮತಗಳು ಈ ಬಾರಿ ಕೈ ಹಿಡಿಯುತ್ತಾ…? ಅಥವಾ ತಪ್ಪಿ ಹೋಗುತ್ತಾ? ಚುನಾವಣೆಗೆ ಅಭ್ಯರ್ಥಿಗಳ ಘೊಷಣೆ ಬೆನ್ನಲ್ಲೇ ಪಕ್ಷದೊಳಗೆ ಎದ್ದಿರುವ ಬಂಡಾಯ ಬಿಜೆಪಿ ಕೇಂದ್ರ ನಾಯಕರನ್ನು ಚಿಂತೆಗೀಡು ಮಾಡಿರುವ ಸಂಗತಿ ಇದು.
ಸಿಎಂ ಅಭ್ಯರ್ಥಿ- ಬಿಜೆಪಿ
ಸಿಎಂ ಅಭ್ಯರ್ಥಿ- ಬಿಜೆಪಿ

ಲಿಂಗಾಯಿತ ಮತಗಳು ಈ ಬಾರಿ ಕೈ ಹಿಡಿಯುತ್ತಾ…? ಅಥವಾ ತಪ್ಪಿ ಹೋಗುತ್ತಾ? ಚುನಾವಣೆಗೆ ಅಭ್ಯರ್ಥಿಗಳ ಘೊಷಣೆ ಬೆನ್ನಲ್ಲೇ ಪಕ್ಷದೊಳಗೆ ಎದ್ದಿರುವ ಬಂಡಾಯ ಬಿಜೆಪಿ ಕೇಂದ್ರ ನಾಯಕರನ್ನು ಚಿಂತೆಗೀಡು ಮಾಡಿರುವ ಸಂಗತಿ ಇದು.

ಪಕ್ಷವನ್ನು ಇಲ್ಲಿಯವರೆಗೆ ಸಾರಾಸಗಟಾಗಿ ಬೆಂಬಲಿಸಿದ್ದ ಲಿಂಗಾಯಿತ ಸಮುದಾಯದ ಮತಗಳು ಈ ಬಾರಿ ಹಲವು ಪ್ರಮುಖ ನಾಯಕರ ಬಂಡಾಯದಿಂದಾಗಿ ಕೈ ತಪ್ಪುವ ಭೀತಿ ಎದುರಾಗಿದೆ. ಮತ್ತೊಂದು ಕಡೆ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯೂ ಪ್ರಬಲವಾಗಿದೆ. ಇಂತಹ ಸನ್ನಿವೇಶದಲ್ಲಿ ಟಿಕೆಟ್ ವಂಚಿತರ ಪೈಕಿ ಹೆಚ್ಚಿನವರು ಕಾಂಗ್ರೆಸ್ ಸೇರಿದ್ದಾರೆ. ಆ ಪೈಕಿ ಹಲವು ಪ್ರಮುಖರು ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಈ ಬಂಡಾಯ ನಂತರದ ಪಕ್ಷಾಂತರದ ಪರಿಣಾಮದ ಕುರಿತು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಏನೇ ಆತ್ಮ ವಿಶ್ವಾಸದ ಮಾತುಗಳನ್ನಾಡಿದರೂ ಆಂತರ್ಯದಲ್ಲಿ ಕಾಡುತ್ತಿರುವ ಭಯದಿಂದ ಮುಕ್ತರಾಗಿಲ್ಲ.

ಇಂತಹ ಇಕ್ಕಟ್ಟಿನ ಸನ್ನಿವೇಶದಿಂದ ಪಾರಾಗಲು ಬೇರೆ ದಾರಿಯೇ ಇಲ್ಲದೇ ಮತ್ತೆ ಬಿಜೆಪಿ ಹೈಕಮಾಂಡ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊರೆ ಹೋಗಿದೆ. ವರಿಷ್ಠರ ಮಾತಿಗೆ ಕಟ್ಟು ಬಿದ್ದು ಯಡಿಯೂರಪ್ಪ ಕೂಡಾ ಪಕ್ಷದ ಪ್ರಮುಖ ಲಿಂಗಾಯಿತ ನಾಯಕರ ಸಭೆ ನಡೆಸಿದ್ದು ಸಂಭವನೀಯ ನಷ್ಟವನ್ನು ತಡೆಲು ಅಖಾಡಕ್ಕೆ ಇಳಿದಿದ್ದಾರೆ. ಅದರ ಫಲಿತಾಂಶ ಕಾದು ನೋಡಬೇಕಿದೆ. ಹೀಗೆ ಒಂದು ಕಡೆ ಸಂಧಾನ ಸಭೆಗಳನ್ನು ನಡೆಸುತ್ತಿದ್ದರೆ ಮತ್ತೊಂದು ಕಡೆ ಬಿಜೆಪಿಯ ಟಿಕೆಟ್ ವಂಚಿತರು ಮತ್ತು ಅತೃಪ್ತರಿಗೆ ಕಾಂಗ್ರೆಸ್ ಗಾಳ ಹಾಕಿ ತನ್ನ ಅಭ್ಯರ್ಥಿಗಳಾಗಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದೆ. ರಾಜಕಾರಣದಲ್ಲಿ ಇಂತಹ ತಂತ್ರಗಳು ಪ್ರತಿ ತಂತ್ರಗಳು ಹೊಸದೇನಲ್ಲ. ಇತಿಹಾಸವನ್ನು ಗಮನಿಸಿದರೆ ಅವು ಅಸಹಜವೂ ಅಲ್ಲ.

ಆದರೆ ಇಂಥದೊಂದು ಸ್ವಯಂ ಅಪಘಾತದ ಸ್ಥಿತಿ ತಂದುಕೊಳ್ಳುವುದು ಬಿಜೆಪಿಗೆ ಬೇಕಾಗಿತ್ತೆ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಚುನಾವಣೆಯಲ್ಲಿ ಗೆದ್ದು ಬಹುಮತ ಗಳಿಸುವ ಮುನ್ನವೇ ಪಕ್ಷದೊಳಗೆ ಮುಂದೆ ಮುಖ್ಯಮಂತ್ರಿ ಗಾದಿಗೆ ನಡೆಯುತ್ತಿರುವ ಪೈಪೋಟಿ ಅದಕ್ಕೆ ಸ್ಪರ್ಧಿಗಳಾಗುತ್ತಾರೆಂದೇ ಹೇಳಲಾಗುತ್ತಿರುವ ಒಬ್ಬೊಬ್ಬರೇ ಪ್ರಮುಖ ಲಿಂಗಾಯಿತ ಮುಖಂಡರನ್ನು ಸದ್ದಿಲ್ಲದೇ ತಮ್ಮ ದಾರಿಯಿಂದಲೇ ಪಕ್ಕಕ್ಕೆ ಸರಿಸುವ ಕೆಲಸ ನಡೆಯುತ್ತಿರುವುದು  ಕಾಣ ಬರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ, ಚುನಾವಣಾ ರಾಜಕಾರಣದಿಂದಲೇ ನಿವೃತ್ತಿಯಾಗುವುದಾಗಿ ಯಡಿಯೂರಪ್ಪನವರು ಘೋಷಿಸಿದಾಗಲೇ ಬಿಜೆಪಿ ಒಂದು ರೀತಿಯ ತಲ್ಲಣಕ್ಕೆ ಸಿಕ್ಕಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಂಗಾಯಿತರೇ ಆದರೂ ಅವರು ಮೂಲ ಬಿಜೆಪಿಯವರಲ್ಲ. ಯಡಿಯೂರಪ್ಪನವರ ರಾಜೀನಾಮೆ ನಂತರ ಸಂದರ್ಭದ ಶಿಶುವಾಗಿ ಅವರು ಆ ಪಟ್ಟಕ್ಕೆ ಏರಿದರು ಎಂಬುದನ್ನು ಬಿಟ್ಟರೆ ಇಂದಿಗೂ ಸಂಘ ಪರಿವಾರದ ಮೂಲದ ಬಿಜೆಪಿ ನಾಯಕರು ಅವರನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಒಂದು ರೀತಿಯ ಅತೃಪ್ತಿ ಹಾಗೇ ಉಳಿದಿದೆ. ಹೀಗಾಗಿ ಸಂಘ ಪರಿವಾರದ ಹಿನ್ನಲೆಯ  ನಾಯಕನೊಬ್ಬನನ್ನು ಮುಂದೆ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಲು ಬಿಜೆಪಿ ಮುಂದಾಗಿದೆ. ಆದರೆ ಇಲ್ಲೂ ಎಡವಿರುವುದು ಸ್ಪಷ್ಡವಾಗಿದೆ. 

ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಿಸಿತ್ತು. ಆದರೆ ಈ ಬಾರಿ ಅಂತಹ ಧೈರ್ಯದ ಪ್ರದರ್ಶನ ಆಗುತ್ತಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸುವ ಸ್ಥಿತಿಯಲ್ಲಿ ಪಕ್ಷದ ನಾಯಕರು ಇಲ್ಲ. ಹಾಗಂತ ಚುನಾವಣೆಯನ್ನು ಕೈಬಿಡುವ ಪರಿಸ್ಥಿತಿಯಲ್ಲೂ ಇಲ್ಲ. ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿಗೆ ಅಸ್ತಿತ್ವ ಇದೆ. ಶತಾಯ ಗತಾಯ ಕರ್ನಾಟಕದಲ್ಲಿ ಮತ್ತೆ ತನ್ನದೇ ಸರ್ಕಾರವನ್ನು ಮರು ಸ್ಥಾಪಿಸಬೇಕಾದ ಅನಿವಾರ್ಯತೆಗೆ ಪಕ್ಷದ ನಾಯಕತ್ವ ಸಿಲುಕಿದೆ. 

ಈ ಬಾರಿಯ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ 75 ಮಂದಿ ಹೊಸಬರನ್ನು ಕಣಕ್ಕಿಳಿಸಿದೆಯಾದರೂ ಹಳಬರು ಮತ್ತು ಹಿರಿಯರನ್ನು ಕೈಬಿಟ್ಟಿದ್ದಕ್ಕೆ ಆ ಪಕ್ಷದ ನಾಯಕರ ಬಳಿ ಸಮರ್ಪಕ ಕಾರಣವೇ ಇಲ್ಲ. ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಅಂಗಾರ ರಂತಹ ಪ್ರಮುಖರಿಗೆ ಈ ಬಾರಿ ಟಿಕೆಟ್ ತಪ್ಪಿಸಲಾಗಿದೆ. ಈ ಪೈಕಿ ಸವದಿ ಮತ್ತು ಜಗದೀಶ ಶೆಟ್ಟರ್ ಸಿಡಿದೆದ್ದು ಕಾಂಗ್ರೆಸ್ ಸೇರಿ ಅಭ್ಯರ್ಥಿಗಳಾಗಿದ್ದಾರೆ. ಈ ಇಬ್ಬರು ನಾಯಕರೂ ಪ್ರಬಲ ಲಿಂಗಾಯಿತ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕರು ಎಂಬುದು ಇಲ್ಲಿ ಗಮನಿಸೇಕಾದ ಅಂಶ. ವಯಸ್ಸು ಸೇರಿದಂತೆ ಬಿಜೆಪಿಯ ಯಾವುದೇ ಮಾನದಂಡಗಳನ್ನು ಗಮನಿಸಿದರೂ ಈ ಇಬ್ಬರು ನಾಯಕರಿಗೆ ಟಿಕೆಟ್ ತಪ್ಪಿಸುವ ಅವಕಾಶಗಳೇ ಇರಲಿಲ್ಲ. ಹಾಗಿದ್ದರೂ ತಪ್ಪಿದ್ದರ ಹಿಂದೆ ಪಕ್ಷದೊಳಗಿನ ಅಂತರಿಕ ಕಿತ್ತಾಟ, ಇಬ್ಬರು ಪ್ರಮುಖ ಮುಖಂಡರ ಅಧಿಕಾರ ಲಾಲಸೆ ಇರುವುದು ಗೋಚರವಾಗುತ್ತದೆ. ಶೆಟ್ಟರ್ ಮತ್ತು ಸವದಿ ಉತ್ತರ ಕರ್ನಾಟಕದ ಪ್ರಭಾವೀ ನಾಯಕರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು ಹಾಗಿದ್ದೂ ಯಾವುದೇ ಸಕಾರಣ ಕೊಡದೇ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ.

ಬಹು ಮುಖ್ಯವಾಗಿ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಪಟ್ಟಕ್ಕೆ ತೀವ್ರ ಪೈಪೋಟಿ ನಡೆಯುತ್ತಿರುವುದು ಸುಳ್ಳೇನಲ್ಲ. ಮೊದಲನೆ ಮತ್ತು ಎರಡನೇ ಹಂತದ ಹಲವು ನಾಯಕರು ಈ ಸ್ಪರ್ಧೆಯಲ್ಲಿದ್ದಾರೆ. ಚುನಾವಣಾ ರಾಜಕಾರಣದಿಂದ ಮೊದಲೇ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅಧಿಕಾರ ರಾಜಕಾರಣದಿಂದ ದೂರ ಉಳಿದಿದ್ದಾರೆ.  ಅವರಿಗೀಗ ತಮ್ಮ ಇನ್ನೊಬ್ಬ ಪುತ್ರ ವಿಜಯೇಂದ್ರ ನ ರಾಜಕೀಯ ಭವಿಷ್ಯಮುಖ್ಯವಾಗಿದೆ . ಹೀಗಾಗಿ ಅವರು ಮತ್ತೆ ಮುಖ್ಯಮಂತ್ರಿ ಪದವಿಗೆ ಆಕಾಂಕ್ಷಿಯಲ್ಲ.ಅಭ್ಯರ್ಥಿಗಳ ಆಯ್ಕೆಯೂ ಸೇರಿದಂತೆ ಬಿಜೆಪಿಯಲ್ಲಿ ಉದ್ಭವಿಸಿರುವ ಸಮಸ್ಯೆಗೆ ಇದೇ ಮೂಲ ಕಾರಣ.

ಬಹು ಮುಖ್ಯವಾಗಿ ಪಕ್ಷದಲ್ಲಿ ಈಗ ಉಂಟಾಗಿರುವ ಸಮಸ್ಯೆಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೇ ಕಾರಣ ಎಂಬ ಆರೋಪಗಳು ಪಕ್ಷ ಬಿಟ್ಟವರಿಂದ ಮತ್ತು ಪಕ್ಷದೊಳಗೇ ಇರುವ ಅತೃಪ್ತರಿಂದ ಕೇಳಿ ಬರುತ್ತಿದೆ. ಈ ಪೈಕಿ ಬಿ.ಎಲ್ ಸಂತೋಷ್ ಪಕ್ಷದ ಆಯಕಟ್ಟಿನ ಹುದ್ದೆಯಲ್ಲಿದ್ದರೂ ಈವರೆಗೆ ಚುನಾವಣಾ ರಾಜಕಾರಣದಲ್ಲಿ ತನ್ನನ್ನು ಗುರುತಿಸಿಕೊಂಡವರಲ್ಲ. ಅವರದೇನಿದ್ದರೂ ತೆರೆ ಮರೆಯ ರಾಜಕಾರಣ. ಈ ವರೆಗೆ ಒಂದೇ ಒಂದು ಚುನಾವಣೆಯನ್ನೂ ಎದುರಿಸಿ ಅನುಭವ ಇಲ್ಲದಿದ್ದರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಸಂದರ್ಭ ಒದಗಿ ಬಂದರೆ ಪಕ್ಷ ತನ್ನನ್ನು ಆ ಹುದ್ದೆಗೆ ಸೂಚಿಸಬಹುದು ಎಂಬುದು ಅವರ ದೂರಗಾಮಿ ಆಲೋಚನೆ ಎಂಬುದನ್ನು ಬಿಜೆಪಿಯ ಕೆಲವು ಮುಖಂಡರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.

ಸಂತೋಷ್ ಹೊರತು ಪಡಿಸಿದರೆ ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಯಾಗಿರುವುದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ರಾಜ್ಯದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆದು ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಅವರು ಉತ್ತರ ಕರ್ನಾಟಕ ಬಾಗದ ಆಯ್ದ ಸಚಿವರು ಶಾಸಕರ ಜತೆ ಅಲ್ಲಲ್ಲಿ ಗುಟ್ಟಾಗಿ ಸಭೆಗಳನ್ನು ನಡೆಸಿರುವುದು ರಹಸ್ಯವೇನಲ್ಲ. ಯಡಿಯೂರಪ್ಪ ರಾಜೀನಾಮೆ ನಂತರ ಜೋಶಿ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರಾದರೂ ಈ ಸುಳಿವು ಅರಿತ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿಯವರನ್ನು ಕೂರಿಸುವಲ್ಲಿ ಯಶಸ್ವಿಯಾದ್ದರಿಂದ ಪ್ರಯತ್ನ ಫಲಕಾರಿ ಆಗಲಿಲ್ಲ. 

ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮ ಮಾತೂ ನಡೆಯುವಂತೆ ನೋಡಿಕೊಂಡಿರುವ ಅವರು ತಮ್ಮ ಆಕಾಂಕ್ಷೆಗೆ ಅಡ್ಡಿಯಾಗಿದ್ದ ತಮ್ಮದೇ ಭಾಗದ ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಯವರಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ತಂತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಲ್. ಸಂತೋಷ್ ಕೈಜೋಡಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಒಂದು ಹಂತದಲ್ಲಿ ಇದೇ ರೀತಿಯ ಪ್ರಯೋಗವನ್ನು ಯಡಿಯೂರಪ್ಪ ಅವರ ವಿಚಾರದಲ್ಲಿ ಮಾಡಲು ನಡೆಸಿದರಾದರೂ ಅದು ಫಲ ನೀಡಲಿಲ್ಲ. ಯಾಕೆಂದರೆ ಯಡಿಯೂರಪ್ಪ ಅವರನ್ನು ಸಾರಾಸಗಟಾಗಿ ಎದುರು ಹಾಕಿಕೊಂಡು ಚುನಾವಣೆ ನಡೆಸುವ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕತ್ವವೂ ಇಲ್ಲ. 

ಈ ಎಲ್ಲ ತಂತ್ರಗಳ ಪರಿಣಾಮವಾಗಿ ಬಿಜೆಪಿಯ ಜತೆಗೆ ದಶಕಗಳಿಂದ ಗುರುತಿಸಿಕೊಂಡಿದ್ದ ಲಿಂಗಾಯಿತ ಸಮುದಾಯದ ಇತರೆ ನಾಯಕರಾದ ಆಯನೂರು ಮಂಜುನಾಥ್, ಯು.ಬಿ.ಬಣಕಾರ್, ಮೋಹನ್ ಲಿಂಬಿಕಾಯಿ ಮತ್ತಿತರ ಪ್ರಮುಖರು ಪಕ್ಷ ತೊರೆದಿದ್ದಾರೆ. ಇದು ರಾಜ್ಯ ಮಟ್ಟದಲ್ಲಿ ಬಿಜೆಪಿಗೆ ದೊಡ್ಡ ಪ್ರತಿಕೂಲ ಪರಿಣಾಮ ಬೀರದಿದ್ದರೂ ಸ್ಥಳೀಯವಾಗಿ ಒಂದಷ್ಟರ ಮಟ್ಟಿಗೆ ತೊಂದರೆ ಆಗಲಿದೆ. ಈಗಿರುವ ಪರಿಸ್ಥಿತಿಯ ಲಾಭ ಪಡೆದು 80 ರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮ ಕೃಷ್ಣ ಹೆಗಡೆಯವರಂತೆ ತಾನೂ ಪ್ರಶ್ನಾತೀತ ಲಿಂಗಾಯಿತ ನಾಯಕನಾಗಿ ಹೊರ ಹೊಮ್ಮುವ ನಿರೀಕ್ಷೆಯನ್ನು ಸಚಿವ ಜೋಶಿ ಹೊಂದಿದ್ದಾರಾದರೂ ಮತ್ತೆ ಅವರ ಆಸೆಗೆ ಯಡಿಯೂರಪ್ಪ ಅಡ್ಡಿಯಾಗಿದ್ದಾರೆ. ಸಂದರ್ಭ ಎದುರಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಅವರನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ.

ಈಗ ಈ ಎಲ್ಲ ಅನಾಹುತಗಳ ನಂತರ ಎಚ್ಚೆತ್ತಿರುವ ಬಿಜೆಪಿ ಹೈಕಮಾಂಡ್ ಲಿಂಗಾಯಿತ ನಾಯಕರ ಬಂಡಾಯದಿಂದ ಮುಂದಾಗಬಹುದಾದ ದುಷ್ಪರಿಣಾಮಗಳನ್ನು ತಡೆಯಲು ಯಡಿಯೂರಪ್ಪ ಅವರ ಮೊರೆ ಹೋಗಿದೆ. ಈಗಾಗಲೇ ಸಮುದಾಯದ ನಾಯಕರ ಸಭೆ ನಡೆಸಿರುವ ಯಡಿಯೂರಪ್ಪ ಚುನಾವಣೆಯಲ್ಲಿ ಲಿಂಗಾಯಿತ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವಂತೆ  ಬೆಂಬಲಿಗರ ಮೂಲಕ ಹೈಕಮಾಂಡ್ ಗೆ ಸಂದೇಶ ಮುಟ್ಟಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಇದರಿಂದ ಪೇಚಿಗೆ ಸಿಕ್ಕಿದ್ದಾರೆ. ಒಂದು ವೇಳೆ ಲಿಂಗಾಯಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವ ಘೋಷಣೆ ಮಾಡಿದರೆ ಒಕ್ಕಲಿಗರೂ ಸೇರಿದಂತೆ ಉಳಿದ ಸಮುದಾಯಗಳ ಮತ ಕೈ ತಪ್ಪಿ ಹೋಗುವುದು ಖಚಿತ. ಪರಿಸ್ಥಿತಿಯ ಲಾಭ ಪ್ರತಿಪಕ್ಷಗಳು ಪಡೆಯಬಹುದು. ಅದರಿಂದ ನಷ್ಟವೇ ಜಾಸ್ತಿ. ಈ ಎಲ್ಲ ಕಾರಣಕ್ಕೆ ಬಿಜೆಪಿ ಈಗ ಇಕ್ಕಟ್ಟಿಗೆ ಸಿಕ್ಕಿದೆ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com