ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಲಿದೆಯೆ….?
ತತ್ ಕ್ಷಣಕ್ಕೆ ಅದರ ಸುಳಿವು ಇಲ್ಲವಾದರೂ ಚುನಾವಣೆ ನಂತರ ಸರ್ಕಾರ ರಚನೆಗೆ ಅಗತ್ಯವಾದಷ್ಟು ಸಂಖ್ಯಾಬಲ ಸಿಕ್ಕದಿದ್ದರೆ ಅಂತಹ ಕಾರ್ಯಾರಚಣೆಗೆ ಬಿಜೆಪಿ ಮುಂದಾಗುವ ಸಾಧ್ಯತೆಗಳು ಇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಮೊದಲ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಅಖಾಡಕ್ಕೆ ಧುಮುಕಿವೆ. ಆದರೆ ಬಿಜೆಪಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ.
ಸದ್ಯದ ಮಾಹಿತಿ ಪ್ರಕಾರ ಇನ್ನೂ ಒಂದು ವಾರ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಿವೆ. ಪಕ್ಷದ ಟಿಕೆಟ್ ಕೈ ತಪ್ಪುವ ಸೂಚನೆ ದೊರೆತಿರುವ ಸುಮಾರು 30 ಹಾಲಿ ಶಾಸಕರು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಮತ್ತೊಂದು ಕಡೆ ಈ ಅತೃಪ್ತರ ಬರುವಿಕೆಯ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಅವರನ್ನೇ ತನ್ನ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ತಯಾರಿ ನಡೆಸಿದೆ. ಚುನಾವಣೆ ನಂತರ ಬಿಜೆಪಿಗೆ ಪೂರ್ಣ ಬಹುಮತ ಸಿಗುವುದು ಅನುಮಾನ ಎಂಬ ವಾತಾವರಣ ಇದೆ. ಹೈಕಮಾಂಡ್ ಈವರೆಗೆ ನಡೆಸಿರುವ ಸಮೀಕ್ಷೆಗಳಲ್ಲಿ ಯಾವುದರಲ್ಲೂ ಪಕ್ಷ ಬಹುಮತ ಗಳಿಸುವ ಸೂಚನೆಗಳು ಕಂಡು ಬಂದಿಲ್ಲ. ಬದಲಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಕಂಡು ಬಂದಿದೆ.
ಈ ಮುನ್ಸೂಚನೆ ಅರಿತ ಪಕ್ಷದ ರಾಷ್ಟ್ರೀಯ ನಾಯಕರು ಶತಾಯ ಗತಾಯ ಅಧಿಕಾರ ಹಿಡಿಯಲು ಎಲ್ಲ ರಾಜಕೀಯ ತಂತ್ರಗಳ ಮೊರೆ ಹೋಗುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಸಾಧಕ ಬಾಧಕಗಳ ಬಗ್ಗೆಯೂ ಚರ್ಚೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಾವುದೇ ಕಾರ್ಯ ತಂತ್ರಕ್ಕೂ ಸಿದ್ಧರಾಗಿರಬೇಕೆಂದು ಪಕ್ಷದ ಮುಖಂಡರಿಗೆ ಸೂಚನೆ ಕೊಟ್ಟಿರುವುದರ ಅರ್ಥವೂ ಇದೇ ಎಂಬುದನ್ನು ಬಿಜೆಪಿ ಮೂಲಗಳೇ ಒಪ್ಪಿಕೊಳ್ಳುತ್ತವೆ. ಬಹು ಮುಖ್ಯವಾಗಿ ಕರ್ನಾಟಕ ಬಿಟ್ಟರೆ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಕಳೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಅಧಿಕಾರಕ್ಕೆ ಏರಲು ಆಪರೇಷನ್ ಕಮಲ ಕಾರ್ಯಾಚರಣೆಯ ಮೊರೆ ಹೋಗಬೇಕಾಯಿತು.
ಈ ಬಾರಿ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಿದೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಕಾಂಗ್ರೆಸ್ ಪ್ರಬಲವಾಗಿದ್ದು ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನ ಗಳಿಸುತ್ತದೆ ಎಂಬ ಸಮೀಕ್ಷಾ ವರದಿಗಳು ಬಿಜೆಪಿಯ ನಾಯಕತ್ವವನ್ನು ಕಂಗೆಡಿಸಿದೆ. ಇದಕ್ಕಾಗೇ ಕಾಂಗ್ರೆಸ್ ನ್ನು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಬಿಡಬಾರದು ಎಂಬ ಸಂದೇಶ ರಾಷ್ಟ್ರೀಯ ನಾಯಕರಿಂದ ಬಂದಿದೆ. ಚುನಾವಣೆ ಅಧಿಕೃತವಾಗಿ ಘೋಷಣೆಗೆ ಮುನ್ನವೇ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ನೆಪದಲ್ಲಿ ರಾಜ್ಯದಲ್ಲಿ ಸಮಾವೇಶಗಳನ್ನು ನಡೆಸಿರುವ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಗಣ್ಯರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದರೆ ರಾಜ್ಯದಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸುವುದು ಕಷ್ಟ ಎಂಬ ಸಂಗತಿ ಮನವರಿಕೆ ಆಗಿದೆ.
ಜತೆಗೇ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅದೇ ಸಮುದಾಯದ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದರೂ ಅದರಿಂದ ಲಿಂಗಾಯಿತ ಸಮುದಾಯದ ಒಲವು ಗಳಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಯಡಿಯೂರಪ್ಪ ಪದಚ್ಯುತಿಯಿಂದ ಸಮುದಾಯಕ್ಕೆ ಉಂಟಾಗಿರುವ ಅಸಮಾಧಾನದ ಲಾಭವನ್ನು ಕಾಂಗ್ರೆಸ್ ಪಡೆಯುವ ಮುನ್ನವೇ ಸಂಭವನೀಯ ನಷ್ಟವನ್ನು ತಡೆಗಟ್ಟಲು ಮಂದಾಗಿದ್ದಾರೆ.
ಇದರ ಜತೆಗೇ ಪಾರಂಪರಿಕ ಲಿಂಗಾಯಿತ ಮತಗಳು ಚೆದುರಿ ಹೋಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ವಸತಿ ಸಚಿವ ವಿ.ಸೋಮಣ್ಣ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೊದಲಾದ ಎರಡನೇ ಹಂತದ ಲಿಂಗಾಯಿತ ಮುಖಂಡರ ಹೆಗಲಿಗೂ ಪ್ರಾಂತ್ಯಾವಾರು ಚುನಾವಣಾ ಜವಾಬ್ದಾರಿಯನ್ನು ವಹಿಸಲು ಪಕ್ಷ ನಿರ್ಧರಿಸಿದೆ.
ಅಸಮಾಧಾನಿತ ಲಿಂಗಾಯಿತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರ. ಈ ತಂತ್ರದ ಮುಂದುವರಿದ ಭಾಗವೇ ಯಡಿಯೂರಪ್ಪ ಮನೆಯಲ್ಲಿ ಅಮಿತ್ ಶಾ ನಡೆಸಿದ ಉಪಹಾರ ಸಭೆಯ ರಾಜಕಾರಣ. ಇದೇ ಸಂದರ್ಭದಲ್ಲಿ ಬಿಎಸ್ ವೈ ಪುತ್ರ ವಿಜಯೇಂದ್ರ ಅವರಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅದು ರಾಜ್ಯವ್ಯಾಪಿ ಸುದ್ದಿ ಆಗುವಂತೆ ನೋಡಿಕೊಂಡಿದ್ದು ರಾಜತಂತ್ರದ ಇನ್ನೊಂದು ಭಾಗ.
ಅತ್ಯಲ್ಪ ಅವಧಿಯಲ್ಲೇ ವಿಜಯೇಂದ್ರ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದ್ದು ಪಕ್ಷದ ಯುವ ಕಾರ್ಯಕರ್ತರ ವಲಯಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಅದರಲ್ಲೂ ಮಂಡ್ಯ ಸೇರಿದಂತೆ ಒಕ್ಕಲಿಗರ ಪ್ರಾಬಲ್ಯದ ಕೆಲವು ಜಿಲ್ಲೆಗಳಲ್ಲೂ ಅವರ ಪ್ರಭಾವ ನಿಧಾನವಾಗಿ ಹೆಚ್ಚುತ್ತಿರುವುದು ಹೈಕಮಾಂಡ್ ಗಮನ ಸೆಳೆದಿದೆ. ಹೀಗಿರುವಾಗ ಯಡಿಯೂರಪ್ಪ ಅವರ ಪ್ರಭಾವವನ್ನೂ ಬಳಸಿಕೊಂಡು ಅಧಿಕಾರಕ್ಕೆ ಬರುವ ತಂತ್ರ ಬಿಜೆಪಿ ವರಿಷ್ಠರದ್ದು.
ಒಳಜಗಳವೇ ಸಮಸ್ಯೆ: ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದೇನೂ ಅಲ್ಲ. ಸೋಮಣ್ಣ, ಯತ್ನಾಳ್ ಸೇರಿದಂತೆ ಕೆಲವು ಆಯ್ದ ಲಿಂಗಾಯಿತ ನಾಯಕರು ಬಹಿರಂಗವಾಗೇ ಯಡಿಯೂರಪ್ಪ ನಾಯಕತ್ವವನ್ನು ವಿರೋಧಿಸುತ್ತಿರುವುದು ಒಂದು ಸಮಸ್ಯೆಯಾದರೆ. ಮತ್ತೊಂದು ಕಡೆ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಬೆಂಬಲಿಸುವ ಕಾರ್ಯಕರ್ತರ ಪಡೆ ಈ ಮುಖಂಡರ ವಿರುದ್ಧ ತಿರುಗಿ ಬಿದ್ದಿದೆ. ಈಗಾಗಲೇ ಚಾಮರಾಜನಗರ ಜಿಲ್ಲಾ ಬಿಜೆಪಿಯಲ್ಲಿ ಸಚಿವ ಸೋಮಣ್ಣ ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗ ಸಮರ ಆರಂಭಿಸಿದ್ದಾರೆ. ಇದು ಸಂಕಷ್ಟ ತಂದೊಡ್ಡಿದೆಯಷ್ಟೇ ಅಲ್ಲ. ಸುಸೂತ್ರವಾಗಿ ಬಗೆಹರಿಯುವ ಲಕ್ಷಣಗಳು ಸದ್ಯಕ್ಕಂತೂ ಇಲ್ಲ.
ಇನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಮುಖ ನಾಯಕ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಹಿರಂಗ ಸಮರ ಸಾರಿದ್ದಾರೆ. ಈ ಚುನಾವಣೆಯಲ್ಲಿ ಈಶ್ವರಪ್ಪ ಅಥವಾ ಅವರ ಪುತ್ರನಿಗೆ ಯಾವುದೇ ಕಾರಣಕ್ಕೂ ಪಕ್ಷದ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದು ಶಿವಮೊಗ್ಗದಿಂದ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ.
ಕಾರ್ಮಿಕ ಸಂಘಟನೆಯ ಮೂಲಕ ಪಕ್ಷದಲ್ಲಿ ಗುರುತಿಸಿಕೊಂಡಿರುವ ಆಯನೂರು ವಿಧಾನಸಭೆ, ಸಂಸತ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಮಂಜುನಾಥ್ ಹಾಕಿರುವ ಬಿತ್ತಿ ಪತ್ರಗಳನ್ನು ಗಮನಿಸಿದರೆ ಅವರ ನೇರ ಗುರಿ ಈಶ್ವರಪ್ಪ ಎಂಬುದು ಅರಿವಾಗುತ್ತದೆ. ಈ ಬೆಳವಣಿಗೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂದರ್ಭ ಎದುರಾದರೆ ಆಯನೂರು ಅವರನ್ನು ಪಕ್ಷಕ್ಕೆ ಸೆಳೆದು ಶಿವಮೊಗ್ಗದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಚಿಂತನೆಯಲ್ಲಿದ್ದು ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೂ ಸೂಚನೆ ನೀಡಿದ್ದಾರೆ.
ಮತ್ತೊಂದು ಕಡೆ ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ನಡುವೆ ಕಿತ್ತಾಟ ಜೋರಾಗಿದ್ದು ಪರಸ್ಪರರು ತಮ್ಮ ರಾಜಕೀಯ ಶಕ್ತಿ ಪ್ರದರ್ಶನದ ಹಂತಕ್ಕೆ ಬಂದು ಮುಟ್ಟಿದೆ. ಸವದಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಗಮನಾರ್ಹ. ಅವರ ಜತೆಗೆ ಬಿಜೆಪಿಯ ಪ್ರಬಲ ಮುಖಂಡರ ಗುಂಪು ನಿಂತಿದೆ. ಬೆಳಗಾವಿ ಜಿಲ್ಲೆಯ ಮಟ್ಟಿಗೆ ಜಾರಕಿಹೊಳಿ ಮತ್ತು ಸವದಿ ಇಬ್ಬರನ್ನೂ ನಿರ್ಲಕ್ಷಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಈ ಎಲ್ಲ ಕಾರಣಗಳ ಹಿನ್ನಲೆಯಲ್ಲಿ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಬೇರೆ ದಾರಿಯೇ ಇಲ್ಲದೇ ಬಿಜೆಪಿ ನಾಯಕತ್ವ ಯಡಿಯೂರಪ್ಪ ಅವರ ಮೊರೆ ಹೋಗಿದೆ.
ವಿಜಯೇಂದ್ರ ಸ್ಪರ್ಧೆ ಮೂಡಿಸಿದ ಕುತೂಹಲ: ಈ ಬೆಳವಣಿಗೆಗಳು ಒಂದು ಕಡೆಯಾದರೆ, ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದು ಕೋಲಾರದಿಂದಲೂ ಸ್ಪರ್ಧೆಗೆ ಮತ್ತೆ ಆಸಕ್ತಿ ತೋರಿದ್ದಾರೆ. ವರುಣಾದಲ್ಲಿ ಅವರ ವಿರುದ್ಧ ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಯಡಿಯೂರಪ್ಪ ಆಪ್ತರು ಇದನ್ನು ನಿರಾಕರಿಸಿದ್ದಾರೆ. ಈಗಾಗಲೇ ಶಿಕಾರಿಪುರದಲ್ಲಿ ವಿಜಯೇಂದ್ರ ಚುನಾವಣಾ ಸಿದ್ಧತೆಗಳನ್ನುಮಾಡಿಕೊಂಡು ಪ್ರಚಾರ ಆರಂಭಿಸಿದ್ದಾರೆ ಈಗ ದಿಢೀರನೆ ಅವರನ್ನು ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಆಗುವುದಿಲ್ಲ. ಎಂಬ ನಿಲುವು ಅವರ ಬೆಂಬಲಿಗರದ್ದು. ಸಿದ್ದರಾಮಯ್ಯ ಅವರನ್ನು ತವರಿನಲ್ಲೇ ಕಟ್ಟಿಹಾಕುವ ಚಿಂತನೆ ನಡೆಸಿರುವ ಬಿಜೆಪಿ ವಸತಿ ಸಚಿವ ಸೋಮಣ್ಣ ಅವರನ್ನೇ ಕಣಕ್ಕಿಳಿಸುವ ಚಿಂತನೆಯೂ ನಡೆಸಿದೆ.
ಈ ಕ್ಷೇತ್ರದಲ್ಲಿ ಲಿಂಗಾಯಿತ ಮತಗಳು ಹೆಚ್ಚಿರುವ ಜತೆಗೇ ಸೋಮಣ್ಣ ಮಠಾಧೀಶರುಗಳ ವಲಯದಲ್ಲೂ ಜನಪ್ರಿಯರಾಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಅವರೇ ಸೂಕ್ತ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಕೋಲಾರದಿಂದಲೂ ಅಭ್ಯರ್ಥಿ ಆಗಲು ಹೊರಟಿರುವ ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ತಡೆ ಗೋಡೆ ಆಗಿದ್ದಾರೆ. ಅಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಯಾರಿ ಅವರದ್ದು. ಹೀಗಾಗಿ ಕೋಲಾರದಲ್ಲಿ ಸಿದ್ದು ಸ್ಪರ್ಧೆ ವಿಚಾರ ಸುಲಭವಾಗಿ ಇತ್ಯರ್ಥಗೊಳ್ಳುವ ಸೂಚನೆಗಳಿಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳೇ ಸಿಗುತ್ತಿಲ್ಲ.
ಗೌಡರ ಕುಟುಂಬದಲ್ಲಿ ಬಿರುಕು: ಇನ್ನು ಹಾಸನದ ಜೆಡಿಎಸ್ ಅಭ್ಯರ್ಥಿ ಆಯ್ಕೆವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲೇ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ಧ ಅವರ ಸೋದರ ಎಚ್.ಡಿ.ರೇವಣ್ಣ ಬಹಿರಂಗ ಸಮರಕ್ಕಿಳಿದಿದ್ದಾರೆ. ಇದರ ಪರಿಣಾಮ ಕಾದು ನೋಡಬೇಕು. ಈಗಿನ ರಾಜಕೀಯ ಸನ್ನಿವೇಶವನ್ನು ಗಮನಿಸಿದರೆ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದೇ ಈಗ ಕಾಂಗ್ರೆಸ್, ಬಿಜೆಪಿ ಪಾಲಿಗೆ ತಲೆನೋವಿನ ವಿಚಾರವಾಗಿದೆ.
ಯಗಟಿ ಮೋಹನ್
yagatimohan@gmail.com
Advertisement