social_icon

ಸೋಮಣ್ಣ ಬಂಡಾಯಕ್ಕೆ ಸೂತ್ರಧಾರರು ಯಾರು? (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್

ಯಡಿಯೂರಪ್ಪ ವಿರುದ್ಧ ಸಿಟ್ಟಿಗೆದ್ದ ವಸತಿ ಸಚಿವ ಸೋಮಣ್ಣ ಮೊಳಗಿಸಿರುವ ಬಂಡಾಯದ ಕಹಳೆ ಹಿನ್ನಲೆಯನ್ನು ಅದರಿಡೀ ಪ್ರಕರಣದ ತೆರೆಯಲ್ಲಿ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ.

Published: 17th March 2023 12:50 AM  |   Last Updated: 20th March 2023 08:06 PM   |  A+A-


Former Minister V Somanna-Yeddiyurappa

ಸಚಿವ ವಿ ಸೋಮಣ್ಣ-ಮಾಜಿ ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)

Posted By : Srinivas Rao BV
Source :

ಬೂದಿ ಮುಚ್ಚಿದ ಕೆಂಡ .ಇದು ಹಾಗೆಯೇ ಆರಿ ತಣ್ಣಗಾಗುತ್ತಾ?.... ಅಥವಾ ಮತ್ತೆ ಕೆದರಿ  ಉರಿಯುತ್ತಾ….?  ಬಿಜೆಪಿಯಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ  ಸಿಟ್ಟಿಗೆದ್ದ ವಸತಿ ಸಚಿವ ಸೋಮಣ್ಣ ಮೊಳಗಿಸಿರುವ ಬಂಡಾಯದ ಕಹಳೆ ಹಿನ್ನಲೆಯನ್ನು ಇಡೀ ಪ್ರಕರಣದ ತೆರೆಯಲ್ಲಿ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ. ಹಾಗೆ ನೋಡಿದರೆ ಇದಕ್ಕೊಂದು ಸುದೀರ್ಘ ಹಿನ್ನೆಲೆ ಇದೆ. ಈ ಬಂಡಾಯ ಇದ್ದಕ್ಕಿದ್ದಂತೆ ಆರಂಭವಾಗಿದ್ದಲ್ಲ. ಹಾಗೆಯೇ ಇದರ ಹಿಂದೆ ಬಿಜೆಪಿಯ ಕೆಲವು ಪ್ರಮುಖರೇ ತೆರೆಯ ಹಿಂದೆ ನಿಂತು ಬಂಡಾಯಕ್ಕೆ ಸೂತ್ರಧಾರಿಗಳಾಗಿದ್ದಾರೆ ಎಂಬ ಸಂಶಯವೂ ಈಗ ಪಕ್ಷದೊಳಗೇ ಮೂಡಿದೆ. ಇತ್ತೀಚೆಗಷ್ಟೇ ಬಿಜೆಪಿಯ ಮತ್ತೊಬ್ಬ ಶಾಸಕ ಬಸವನಗೌಡ ಪಾಟೀಲ್  ಯತ್ನಾಳ್ ಯಡಿಯೂರಪ್ಪ ವಿರುದ್ಧ ಸಮರಕ್ಕೆ ಇಳಿದು ಕಡೆಗೆ ಅದು ದಿಲ್ಲಿ ವರಿಷ್ಠರ ಮಧ್ಯ ಪ್ರವೇಶದಿಂದ ತಣ್ಣಗಾಗಿದ್ದು ಹಳೆಯ ವಿಚಾರ. 

ಈಗ ಈ ಪಟ್ಟಿಗೆ ಸಚಿವ ಸೋಮಣ್ಣ  ಸೇರಿದ್ದಾರೆ. ತನ್ನನ್ನು ಸರ್ಕಾರ ರಚನೆ ಸಂದರ್ಭದಲ್ಲಿ ಯಡಿಯೂರಪ್ಪನವರು ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ಯತ್ನಾಳ್ ಸಿಟ್ಟಿಗೆ ಮೂಲ ಕಾರಣವಾಗಿ ಅದು ಕಡೆಗೆ ಬೇರೆಯದೇ ಬಂಡಾಯದ ಸ್ವರೂಪ ಹಿಡಿಯಿತು. ವಿವಾದದ ಪರಾಕಾಷ್ಠೆ ಮುಟ್ಟುವವರೆಗೂ ತಣ್ಣಗೆ ಕುಳಿತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ದಿಲ್ಲಿಯ ವರಿಷ್ಠರು ಕಡೆಗೆ ಇದು ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆಂಬ ಪರಿಸ್ಥಿತಿ ತಲೆದೋರಿದಾಗ ಮಧ್ಯೆ ಪ್ರವೇಶಿಸಿ ಯತ್ನಾಳ್ ಬಂಡಾಯವನ್ನು ತಣ್ಣಗಾಗಿಸಿದ್ದರು.

ಇದೀಗ ಒಂದು ಕಾಲಕ್ಕೆ ಯಡಿಯೂರಪ್ಪ ಆಪ್ತರೇ ಆಗಿದ್ದ, ಅವರಿಂದಲೇ ರಾಜಕೀಯ ಪುನರ್ಜನ್ಮ ಪಡೆದ ವಸತಿ ಸಚಿವ ಸೋಮಣ್ಣ  ವಿರೋಧಿಗಳ  ಪಟ್ಟಿಗೆ ಇನ್ನೊಂದು ಸೇರ್ಪಡೆ. ತಮ್ಮ ಪುತ್ರನಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ  ಹಾಗೂ ಪಕ್ಷದಲ್ಲಿ ತಮಗೆ ಪ್ರಾಮುಖ್ಯತೆ ಸಿಗದೇ ಇರಲು ಯಡಿಯೂರಪ್ಪನವರೇ ಕಾರಣರಾಗಿದ್ದಾರೆ ಎಂಬ ಅಸಮಧಾನ ಅವರ ಆಕ್ರೋಶಕ್ಕೆ ಕಾರಣ. ಕಾಕ ತಾಳೀಯ ಎಂಬಂತೆ ಬಿಎಸ್ ವೈ ಪುತ್ರ  ವಿಜಯೇಂದ್ರ ಪಕ್ಷದಲ್ಲಿ ನಿಧಾನವಾಗಿ  ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿ ಅವರ ಕಾರ್ಯ ನಿರ್ವಹಣೆ ವರಿಷ್ಠರ ಗಮನ ಸೆಳೆದಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಚುನಾವಣಾ ಸಮಾವೇಶಗಳಿಗೆ ಯುವ ಮೋರ್ಚಾವನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನೂ ಅವರ ಹೆಗಲಿಗೆ ಹಾಕಲಾಗಿದ್ದು ಅದನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. 

ಇದನ್ನೂ ಓದಿ: ಕವಲು ದಾರಿಯಲ್ಲಿ ರಾಜ್ಯ ರಾಜಕಾರಣ (ಸುದ್ದಿ ವಿಶ್ಲೇಷಣೆ)

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಪಕ್ಷದ ಸಮಾವೇಶವೊಂದರಲ್ಲಿ ವಿಜಯೇಂದ್ರ ಪ್ರಮುಖ ಆಕರ್ಷಣೆಯಾಗಿದ್ದರು. ಅಲ್ಲಿ ನೆರೆದಿದ್ದ ಒಂದಷ್ಟು ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಘೋಷಣೆಯನ್ನೂ ಕೂಗಿದ್ದರು. ಇದು ಸಹಜವಾಗೇ ಬಿಜೆಪಿಯಲ್ಲಿ ಒಂದು ಗುಂಪನ್ನು ಕೆರಳಿಸಿದೆ. ಮುಖ್ಯಮಂತ್ರಿ ಹುದ್ದೆಗೆ ಏರುವ ಹಂಬಲ ಹೊಂದಿರುವ ಪಕ್ಷದಲ್ಲಿರುವ  ಕೆಲವು ಎರಡನೇ ಹಂತದ ನಾಯಕರುಗಳನ್ನು ಈ ಘೋಷಣೆ, ಸಮಾವೇಶದ ಯಶಸ್ಸು ಆತಂಕಕ್ಕೊಳಗಾಗುವಂತೆ ಮಾಡಿದೆ. ಇವರಷ್ಟೇ ಅಲ್ಲ, ದಿಲ್ಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ಕೆಲವು ರಾಜ್ಯ ಬಿಜೆಪಿ ನಾಯಕರಿಗೂ ಈ ಜನಪ್ರಿಯತೆ ನುಂಗಲಾರದ ತುತ್ತಾಗಿದೆ. ಸಮಸ್ಯೆ ಶುರುವಾಗಿರುವುದೇ ಇಲ್ಲಿಂದ.

ಸೋಮಣ್ಣ ತಮ್ಮ ಪುತ್ರ ಅರುಣ್ ರನ್ನು ವಿಧಾನಸಭೆಗೆ ತರುವ ಪ್ರಯತ್ನದಲ್ಲಿದ್ದಾರೆ. ಈ ಮೊದಲು ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಿಂದ ಅವರನ್ನು ಸ್ಪರ್ಧೇಗಿಳಿಸಲಾಗುವುದು ಎಂಬ ಮಾತು ಕೇಳಿ ಬಂದಿತ್ತು. ಅದು ಸರುಕ್ಷಿತವಲ್ಲ ಎಂಬ ಕಾರಣಕ್ಕೆ ಚಾಮರಾಜ ನಗರ ಜಿಲ್ಲೆಯ ಹನೂರು ಕ್ಷೇತ್ರದತ್ತ ದೃಷ್ಠಿ ಹೊರಳಿತು.ಯಾವಾಗ ಕುಟುಂಬದವರಿಗೇ ಟಿಕೆಟ್ ಕೊಡುವುದಿಲ್ಲ ಎಂಬ ನಿರ್ಧಾರ ಹೈಕಮಾಂಡ್ ತಾಳಿತೋ ಆಗಿನಿಂದಲೇ ಸೋಮಣ್ಣ ಕಾಂಗ್ರೆಸ್ ನಾಯಕರ ಜತೆ ತಮ್ಮ ಹಳೆಯ ಸಂಬಂಧ ಕುದುರಿಸಲಾರಂಭಿಸಿದರು. ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ಕುರಿತ ಪ್ರಯತ್ನಗಳನ್ನು ಆರಂಭಿಸಿದರು ಮತ್ತು ಅದು ಮಾಧ್ಯಮಗಳಲ್ಲಿ ಸುದ್ದಿಯಾಗಿ ವರಿಷ್ಠರ ಕಿವಿ ತಲಪುವಂತೆ ನೋಡಿಕೊಂಡರು.  

ಸ್ವಂತ ಬಲದ ವಿಜಯೇಂದ್ರ; ಅಪ್ಪನ ಆಶ್ರಯದಲ್ಲೇ ಅರುಣ್
ಅರುಣ್ ಸೋಮಣ್ಣ ಹಾಗೂ ವಿಜಯೇಂದ್ರ ಅನುಭವದ ಕುರಿತು ವಿಶ್ಲೇಷಿಸುವುದಾದರೆ. ಇಬ್ಬರ ನಡುವೆ ಭಾರೀ ಅಂತರವಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಡೆದ ಕೆಲವು ಉಪ ಚುನಾವಣೆಗಳ  ಸ್ವತಂತ್ರ ಉಸ್ತುವಾರಿ ವಹಿಸಿಕೊಂಡ ವಿಜಯೇಂದ್ರ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಪಕ್ಷಾತೀತವಾಗಿ ಅನೇಕ ಮುಖಂಡರ ಮೆಚ್ಚುಗೆಗೆ ಪಾತ್ರವಾದರು. ಇದಾದ ನಂತರವೂ ತಂದೆಯ ನೆರಳನ್ನು ಬಿಟ್ಟು ಸ್ವತಂತ್ರವಾಗಿ ಪಕ್ಷದಲ್ಲಿ ಅವರು ವೇಗವಾಗಿ ಬೆಳೆಯುತ್ತಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಬೇರೆ ಬೇರೆ ಪಕ್ಷಗಳ ಹಿರಿಯ ನಾಯಕರುಗಳೊಂದಿಗೆ ಅವರ ಸಂವಹನ ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ. ದಿಲ್ಲಿ ಮಟ್ಟದಲ್ಲೂ ಮಧ್ಯವರ್ತಿಗಳ ನೆರವಿಲ್ಲದೇ ಪಕ್ಷದ  ಹಿರಿಯ ನಾಯಕರನ್ನು ಅವರು ಭೇಟಿ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಶಾಸಕರ ಪುತ್ರನ ಲಂಚಾಯಣ: ಕಾಂಗ್ರೆಸ್ ಗೆ ಹೊಸ ಅಸ್ತ್ರ..., ಬಿಜೆಪಿ ಕಂಗಾಲು (ಸುದ್ದಿ ವಿಶ್ಲೇಷಣೆ)

ಅಪ್ಪನ ನೆರಳೇ  ಅರುಣ್ ಗೆ ಆಸರೆ 
ಸಚಿವ ಸೋಮಣ್ಣ ಗೆ ತಮ್ಮ ಪುತ್ರನಿಗೆ ರಾಜಕೀಯವಾಗಿ ಒಂದು ನೆಲೆ ಕಲ್ಪಿಸುವ ಆಸೆ ಇದೆ.ಇದನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಬಾರಿ ಅವಸರಕ್ಕೆ ಬಿದ್ದು ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಅನುಭವಿ ರಾಜಕಾರಣಿಯಾದ ಅವರ ರಾಜಕೀಯ ನಡೆ ಅನೇಕ ಬಾರಿ ವಿಡಂಬನೆಗೂ ತುತ್ತಾಗಿದೆ. ವಿಜಯೇಂದ್ರಗೆ ಹೋಲಿಸಿದರೆ ಅರುಣ್ ತಂದೆಯ ನೆರಳಿನಿಂದ ಹೊರ ಬಂದು ಸ್ವತಂತ್ರ ಅಸ್ತಿತ್ವ ರೂಪಿಸಿಕೊಂಡಿಲ್ಲ. ರಾಜಕೀಯದ ಗಟ್ಟಿ ಅನುಭವ ಇಲ್ಲ.  ಸೋಮಣ್ಣಗಾದರೋ ನಾಲ್ಕು ದಶಕಗಳ ರಾಜಕೀಯ ಅನುಭವ ಇದೆ. ದೇವೇಗೌಡರು, ಜೆ.ಎಚ್.ಪಟೇಲ್, ಯಡಿಯೂರಪ್ಪ ನವರಂತಹ ದಿಗ್ಗಜರ ಜತೆ ಕೆಲಸ ಮಾಡಿದ್ದಾರೆ. ಆದರೆ ಅರುಣ್ ಗೆ ಅಂತಹ ಯಾವುದೇ ಅನುಭವ ಇಲ್ಲ. ವ್ಯಾಮೋಹ ಬಿಟ್ಟು ಪುತ್ರನಿಗೆ ಸೋಮಣ್ಣ ರಾಜಕಾರಣದ ವಸ್ತು ಸ್ಥಿತಿಗಳ ತಿಳಿವಳಿಕೆ ನೀಡಬೇಕು ಎನ್ನುವುದು ಬೆಂಬಲಿಗರ ಅಭಿಪ್ರಾಯ.

ಡಿಕೆಶಿ – ಸೋಮಣ್ಣ ಈಗ ಹತ್ತಿರ ಹತ್ತಿರ:   
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಆಸೆ ಹೊತ್ತಿದ್ದಾರೆ. ಆದರೆ ಅವರ ಹಂಬಲಕ್ಕೆ ಪಕ್ಷದಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕ ಜಮೀರ್ ಅಹಮದ್ ಅಡ್ಡಿಯಾಗಿದ್ದಾರೆ. ಈ ಇಬ್ಬರು ಪ್ರಮುಖ ಮುಖಂಡರೂ ಸಿದ್ದರಾಮಯ್ಯನವರಿಗೆ ಪರಮಾಪ್ತರು. ಹಾಗೆಯೇ ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವವರ ಪಟ್ಟಿಯಲ್ಲಿರುವ ಪ್ರಮುಖರು. ಹೀಗಾಗಿ ಶಿವಕುಮಾರ್ ಗೆ ತಮ್ಮ ಜತೆ ಗಟ್ಟಿಯಾಗಿ ನಿಲ್ಲಬಲ್ಲ ಸಂಘಟನಾ ಚತುರ, ಪ್ರಭಾವೀ ಲಿಂಗಾಯಿತ ನಾಯಕನೊಬ್ಬನ ಅಗತ್ಯತೆ ಇದೆ. ಸೋಮಣ್ಣ ಆ ಅಗತ್ಯತೆಗಳಿಗೆ ಹೊಂದಿಕೆ ಆಗುತ್ತಾರೆ.ಇಬ್ಬರೂ ಮುಖಂಡರ ನಡುವೆ ರಾಜಕೀಯ ಮೀರಿದ ಸ್ನೇಹ ಸಂಬಂಧ ಇದೆ. ಈ ಲೆಕ್ಕಾಚಾರದ ಅಡಿಯಲ್ಲೇ  ಸೋಮಣ್ಣ  ಕಳೆದ ಒಂದೂವರೆ ವರುಷದಿಂದಲೂ  ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಗೆ ಹತ್ತಿರವಾಗಿದ್ದಾರೆ. ಇದಕ್ಕೆ ಇತ್ತೀಚಿನ ಅವರ ರಾಮನಗರ ಜಿಲ್ಲಾ ಭೇಟಿಯೂ ಉದಾಹರಣೆ. 

ಸಿ.ಟಿ.ರವಿ ಸಿಡಿಮಿಡಿ ಏಕೆ?: ಯಡಿಯೂರಪ್ಪನವರನ್ನು ಪರೋಕ್ಷವಾಗಿ ವಿರೋಧಿಸುತ್ತಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ,  ಶಾಸಕ ಸಿ.ಟಿ.ರವಿ ಮೊನ್ನೆ ಪಕ್ಷದ ಟಿಕೆಟ್ ಯಡಿಯೂರಪ್ಪನವರ ಮನೆಯ ಅಡುಗೆ ಮನೆಯಲ್ಲಿ ತೀರ್ಮಾನಾಗುವುದಿಲ್ಲ ಎಂದು ಆಕ್ರೋಶದ ಪ್ರತಿಕ್ರಿಯೆ ನೀಡುವ ಮೂಲಕ ಬಹಿರಂಗ ಯುದ್ಧಕ್ಕೆ ಇಳಿದಿದ್ದಾರೆ. 

ಅವರ ಸಿಟ್ಟಿಗೆ ಕಾರಣ ಸ್ವ ಕ್ಷೇತ್ರ  ಚಿಕ್ಕಮಗಳೂರಿನಲ್ಲಿ ಈ ವರೆವಿಗೆ ಬೆಂಬಲಿಸುತ್ತಿದ್ದ ಲಿಂಗಾಯಿತರು ಏಕಾಏಕಿ ತಿರುಗಿಬಿದ್ದು ಕಾಂಗ್ರೆಸ್ ನತ್ತ ಒಲವು ತೋರುತ್ತಿರುವುದು, ಹಿಂದೆ ಜತೆಗಿದ್ದ  ಪರಮಾಪ್ತ ಲಿಂಗಾಯಿತ ಮುಖಂಡರೇ ಈಗ ವಿರೋಧಿಗಳಾಗಿ ಕಾಂಗ್ರೆಸ್ ಸೇರಿ ಪ್ರತಿಸ್ಪರ್ಧಿಗಳಾಗುವ ಹಂತಕ್ಕೆ ಮುಟ್ಟಿರುವುದು ಅವರನ್ನು ಸ್ವಲ್ಪ ಮಟ್ಟಿಗೆ ತಲ್ಲಣಗೊಳ್ಳುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ಭಾರೀ ವಿರೋಧ ಎದುರಿಸುತ್ತಿದ್ದಾರೆ. ತಮ್ಮ ವಿರೋಧಿಗಳಿಗೆ ಯಡಿಯೂರಪ್ಪ, ವಿಜಯೇಂದ್ರ ಕುಮ್ಮಕ್ಕಿದೆ ಎಂಬುದು ಅವರ ನಂಬಿಕೆ. ಈ ಹತಾಶೆ ಹೇಳಿಕೆಯಾಗಿ ಹೊರ ಬಂದಿದೆ. ಇದಕ್ಕೆ ವಿಜಯೇಂದ್ರ ಕೂಡಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬಿಎಸ್ ವೈ ಉತ್ತರಾಧಿಕಾರಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು (ಸುದ್ದಿ ವಿಶ್ಲೇಷಣೆ)

ಶಿವಮೊಗ್ಗದಲ್ಲಿ ನಡೆದ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪನವರಿಗೆ ನೀಡಿದ ವಿಶೇಷ ಗೌರವ, ಪ್ರಾಮುಖ್ಯತೆ, ಭಾಷಣದಲ್ಲಿ ಅವರನ್ನು ಕೊಂಡಾಡಿದ್ದು ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದ್ದು ನಂತರದ ದಿನಗಳಲ್ಲಿ ಯಡಿಯೂರಪ್ಪ ರಾಜ್ಯ ವ್ಯಾಪಿ ಪ್ರವಾಸ ಕೈಗೊಂಡಿದ್ದು ಪಕ್ಷದಲ್ಲಿನ ಅವರ ವಿರೋಧಿಗಳಲ್ಲಿ ಕಳವಳ ಮೂಡಿಸಿದೆ. ಮತ್ತೆ  ಯಡಿಯೂರಪ್ಪ ಪ್ರಬಲರಾದರೆ ಪಕ್ಷದಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಬಹುದು ಎಂಬ ಆತಂಕವೂ ಅವರಿಗಿದೆ.  ಪರಿಸ್ಥಿತಿ ಹೀಗಿರುವಾಗಲೇ ಸಚವಿ ಸೋಮಣ್ಣ ಮುನಿಸು ಈ ಗುಂಪಿನ ಪ್ರಮುಖರಿಗೆ ವರವಾಗಿ ಪರಿಣಮಿಸಿದೆ ಎಂಬುದನ್ನು ಬಿಜೆಪಿ ಮೂಲಗಳೇ ಒಪ್ಪಿಕೊಳ್ಳುತ್ತವೆ.

ಅತಿ ವೇಗವಾಗಿ  ಹಾರಿಸಿದ್ದ  ತಮ್ಮ ಬಂಡಾಯದ ಬಾವುಟವನ್ನು  ಸೋಮಣ್ಣ ಅಷ್ಟೇ ವೇಗವಾಗಿ ಕೆಳಗಿಳಿಸಿ ಪಕ್ಷ ತೊರೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಕೋಪದಿಂದ ಧಗಧಗಿಸುತ್ತಿದ್ದ ಅವರನ್ನು ದಿಲ್ಲಿಗೆ ಕರೆಸಿಕೊಂಡ ಕೇಂದ್ರ ಸಚಿವ ಪ್ರಲ್ಹಾದ ಜೋಷಿ  ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ , ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳಿ ಕರೆದೊಯ್ದು  ತಣ್ಣಗಾಗಿಸಿದ್ದಾರೆ.

ಅಮಿತ್ ಶಾ ಕೊಟ್ಟ ಭರವಸೆಯಿಂದ ವಿಜಯದೆ ನಗೆ ಬೀರಿದ ಸೋಮಣ್ಣ ಬೆಂಗಳೂರಿಗೆ ವಾಪಸಾಗಿದ್ದಾರೆ. ಸೋಮಣ್ಣ ಅವರು ಇತ್ತೀಚನ ದಿನಗಳಲ್ಲಿ  ಬಿ.ಎಲ್. ಸಂತೋಷ್ ಮತ್ತು ಕೇಂದ್ರ ಸಚಿವ ಜೋಶಿಯವರಿಗೆ ಪರಮಾಪ್ತರಾಗಿದ್ದು ಅವರೊಂದಿಗೆ ನಿರಂತರ ಸಬೆಗಳನ್ನು ನಡೆಸುತ್ತಿದ್ದಾರೆ. ಆದರೆ ಸಭೆಯ ಚರ್ಚೆಗಳು ಗುಟ್ಟಾಗಿ ಉಳಿದಿಲ್ಲ. ವ್ಯವಸ್ಥಿತವಾಗಿ ಯಡಿಯೂರಪ್ಪ ಕಿವಿಗೆ ತಲುಪುತ್ತಿವೆ ಅಥವಾ ತಲಪುವಂತೆ ನೋಡಿಕೊಳ್ಳಲಾಗುತ್ತಿದೆ.  ಈ ಎಲ್ಲ ವಿದ್ಯಮಾನಗಳ ನಂತರ ತೆರೆ ಮರೆಯಲ್ಲಿದ್ದುಕೊಂಡು ಸಂತೋಷ್, ಜೋಶಿ, ನಳಿನ್ ಕುಮಾರ್ ಕಟೀಲು, ಸಿ.ಟಿ.ರವಿ ಸೇರಿದಂತೆ ಕೆಲವರು ತಮ್ಮ ವಿರುದ್ಧ ನಡೆಸುತ್ತಿರುವ ಚಟುವಟಿಕೆಗಳನ್ನು ಕಂಡು ಕುದ್ದು ಹೋಗಿದ್ದಾರೆ. ಅವರು ಅದುಮಿಟ್ಟುಕೊಂಡಿರುವ ಕೋಪ ಸಿಡಿಯುತ್ತದೆಯಾ ಕಾದು ನೋಡ ಬೇಕು. 

ಇದನ್ನೂ ಓದಿ: ಕೈಕೊಟ್ಟ ರಾಜಕೀಯ ಲೆಕ್ಕಾಚಾರ; ಗೊಂದಲದಲ್ಲಿ ಕುಮಾರಸ್ವಾಮಿ (ಸುದ್ದಿ ವಿಶ್ಲೇಷಣೆ)

ಅಂದ ಹಾಗೆ ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂದು ಬಲವಾಗಿ ನಂಬಿಕೊಂಡಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಗತಿ ಏನು? ಎಂಬ ಪ್ರಶ್ನೆಯೂ ಈಗ ತಲೆ ಎತ್ತಿದೆ. ದಿಲ್ಲಿಗೆ ಸೋಮಣ್ಣ ತೆರಳುವ ಕೆಲವು ದಿನಗಳ ಮೊದಲು ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾಂಗ್ರೆಸ್ ನ ಮಾಜಿ ಸಚಿವ ಕೆ.ಜೆ. ಜಾರ್ಜ್ ಸೋಮಣ್ಣ  ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಅದಾದ ನಂತರ ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಸೋದರ, ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಕೂಡಾ ಸೋಮಣ್ಣ ಜತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. 

ಇತ್ತೀಚೆಗೆ ನಡೆದ ಬಿಜೆಪಿಯ ಸಮಾವೇಶವೊಂದರಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ ಯಡಿಯೂರಪ್ಪನವರು ಸುಮ್ಮನಿದ್ದಾರೆ ಎಂದರೆ ಅದು ಅವರ ದೌರ್ಬಲ್ಯ ಎಂದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿರುವುದು, ಸೋಮಣ್ಣ ಪುತ್ರ ಅರುಣ್ ಅವರು ವಿಜಯೇಂದ್ರ ಕುರಿತು ಪರೋಕ್ಷವಾಗಿ ವಾಗ್ದಾಳಿ ನಡೆಸಿರುವುದರ ಹಿಂದಿನ ಪ್ರಚೋದಕ ಶಕ್ತಿ ಯಾವುದು ಎಂಬುದೇ ಈಗ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್ ನಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಬಳಸಿ ಬಿಸಾಡುತ್ತಿದೆ ಎಂದೂ ವ್ಯಂಗ್ಯವಾಡಿದೆ.  ಬಿಜೆಪಿಯಲ್ಲಿ ಆರಂಭವಾಗಿರುವ ಬೆಳವಣಿಗೆಗಳನ್ನು ನೋಡಿದರೆ ಇದರ ಹಿಂದೆ ಸತ್ಯ ಇದೆ ಎನಿಸುತ್ತದೆ.



ಯಗಟಿ ಮೋಹನ್
yagatimohan@gmail.com


Stay up to date on all the latest ಅಂಕಣಗಳು news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp