ಚುನಾವಣೆ ಗೆಲ್ಲಲು ಪ್ರತಿಷ್ಠೆ ಪಣಕ್ಕಿಟ್ಟ ತ್ರಿಮೂರ್ತಿಗಳು (ಸುದ್ದಿ ವಿಶ್ಲೇಷಣೆ)

ಮೂವರು ನಾಯಕರಿಗೂ ಇದು ಅಸ್ತಿತ್ವದ ಹೋರಾಟ. ಇಲ್ಲಿ ಗೆಲ್ಲುವವರಾರು? ಗೆಲ್ಲದೇ ಇದ್ದರೆ ರಾಜಕೀಯವಾಗಿ ನಾಯಕತ್ವದ ಅಸ್ತಿತ್ವವೇ ಕಳೆದು ಕೊಳ್ಳುವ ಭೀತಿ.
ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ
ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ

ಮೂವರು ನಾಯಕರಿಗೂ ಇದು ಅಸ್ತಿತ್ವದ ಹೋರಾಟ. ಇಲ್ಲಿ ಗೆಲ್ಲುವವರಾರು? ಗೆಲ್ಲದೇ ಇದ್ದರೆ ರಾಜಕೀಯವಾಗಿ ನಾಯಕತ್ವದ ಅಸ್ತಿತ್ವವೇ ಕಳೆದು ಕೊಳ್ಳುವ ಭೀತಿ.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಜಿದ್ದಾ ಜಿದ್ದಿ ಹೋರಾಟ, ರಾಜಕೀಯ ಪಕ್ಷಗಳ ನಾಯಕರ ನಡುವಿನ ವಾಕ್ಸಮರ , ಪರಸ್ಪರರ ವಾಗ್ದಾಳಿ ನಡೆದಿರುವ ಸಂದರ್ಭದಲ್ಲೇ ಮತ್ತೊಂದು ಪ್ರಶ್ನೆ ಎದುರಾಗಿದೆ. ಈ ಬಾರಿಯ ಸಮರದಲ್ಲಿ ಗೆದ್ದು ಅಸ್ತಿತ್ವ ಉಳಿಸಿಕೊಳ್ಳುವವರು ಯಾರು? ಎಂಬುದು

ಮತದಾನಕ್ಕೆ ಇನ್ನೂ ಎರಡು ವಾರಗಳಿವೆ. ಬಹಿರಂಗ ಸಭೆಗಳ ಭರಾಟೆ ನಡುವೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಬಿರುಸು ಮಾತುಗಳ ವಿನಿಮಯವೂ ಆರಂಭವಾಗಿದೆ. ಇದೇ ಸನ್ನಿವೇಶದಲ್ಲಿ ಈ ಚುನಾವಣೆಯಲ್ಲಿ ಗಮನ  ಸೆಳೆದಿರುವ ಬಹುಮುಖ್ಯ ಅಂಶ ಎಂದರೆ ಈ ಸಮರದಲ್ಲಿ ಗೆಲವು ಯಾರಿಗೆ? ಎಂಬ ಕುತೂಹಲ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರ ಇಡೀ ಸೇನಾ ಪಡೆಯೇ ರಾಜ್ಯಕ್ಕೆ ದಾಳಿ ಇಟ್ಟು ಚುನಾವಣಾ ಕಾರ್ಯ ತಂತ್ರಗಳನ್ನು ರೂಪಿಸುತ್ತಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿಗೆ ರಾಜ್ಯದ 28 ಲೋಕಸಭಾ ಸ್ಥಾನಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವಸರವಾದರೆ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಕಾಡುತ್ತಿದೆ. ಒಂದು ಕಾಲಕ್ಕೆ ಇಡೀ ದೇಶದಾಧ್ಯಂತ ಸಾರ್ವಭೌಮತೆ ಮೆರೆದಿದ್ದ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಸಮರ್ಥ ನಾಯಕತ್ವದ ಕೊರತೆಯ ಕಾರಣಕ್ಕಾಗಿ ತನ್ನ ಅಸ್ತಿತ್ವ ಕಳೆದುಕೊಂಡು ಪ್ರಾದೇಶಿಕ ಪಕ್ಷದ ಮಟ್ಟಕ್ಕೆ ಕುಸಿದಿದ್ದು ಈಗೀಗ ಅದು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮತ್ತೊಂದು ಕಡೆ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವ ಜೆಡಿಎಸ್ ಗೆ ಈ ವಿಧಾನಸಭಾ ಚುನಾವಣೆ ಅಳಿವು ಉಳಿವಿನ ಪ್ರಶ್ನೆ.  ತನ್ನ ಸಾಂಪ್ರದಾಯಿಕ ಮತಗಳನ್ನು ಗಟ್ಟಿ ಮಾಡಿಕೊಳ್ಳುವುದರ ಜತೆಗೇ ರಾಜ್ಯದಲ್ಲಿ ಬಹುಮತ ಬರಲಿ, ಬಾರದಿರಲಿ ಶತಾಯ ಗತಾಯ ಸರ್ಕಾರ ರಚಿಸುವ, ಆ ಮೂಲಕ ಕುಸಿಯುತ್ತಿರುವ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿದೆ.

ಬಿಜೆಪಿಯ ಪ್ರಚಾರದ ಮುಂಚೂಣಿಗೆ ಸ್ವತಹಾ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರ ದಂಡೇ ರಾಜ್ಯಕ್ಕೆ ಧಾಂಗುಡಿ ಇಟ್ಟಿದೆ. ಕರ್ನಾಟಕದಲ್ಲಿ ಈ ಬಾರಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರದ ಗದ್ದುಗೆಯನ್ನು ಮರಳಿ ದಕ್ಕಿಸಿಕೊಳ್ಳುವುದು ಆ ಪಕ್ಷದ ಗುರಿ. ಅದೇ ಕಾರಣಕ್ಕೆ ಇಡೀ ಚುನಾವಣೆಯ ಕಾರ್ಯ ತಂತ್ರದ ಸೂತ್ರವನ್ನು ರಾಷ್ಟ್ರೀಯ ನಾಯಕತ್ವ ತನ್ನ ಕೈಗೇ ತೆಗೆದುಕೊಂಡಿದ್ದು ಪಕ್ಷದ ರಾಜ್ಯ ಘಟಕದಲ್ಲಿರುವ ನಾಯಕರುಗಳನ್ನೇ ಪೂರ್ತಿಯಾಗಿ ನಂಬಿ ಕೂತಿಲ್ಲ. ಉಳಿದ ರಾಜಕೀಯ ಪಕ್ಷಗಳಂತೆ ಬಿಜೆಪಿಯ ರಾಜ್ಯ ಘಟಕದಲ್ಲೂ ನಾಯಕರುಗಳ ನಡುವೆ ತೀವ್ರ ಸ್ವರೂಪದ ಭಿನ್ನಮತ ಇರುವುದಲ್ಲದೇ ಪ್ರತ್ಯೇಕ ಗುಂಪುಗಳೂ ಇವೆ. ಚುನಾವಣೆಯಲ್ಲಿ ಈ ಗುಂಪುಗಾರಿಕೆಯೇ  ದೊಡ್ಡ ಸಮಸ್ಯೆಯಾಗಿ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಆತಂಕಕ್ಕೆ ಒಳಗಾಗಿರುವ ಪಕ್ಷದ ರಾಷ್ಟ್ರೀಯ ನಾಯಕತ್ವ, ಇಡೀ ಚುನಾವಣಾ ಪ್ರಕ್ರಿಯೆಯನ್ನೇ ತನ್ನ ಕೈಗೆ ತೆಗೆದುಕೊಂಡು ಮುನ್ನಡೆಸಿದೆ.

ಇಲ್ಲಿ ರಾಜ್ಯ ಘಟಕದ ನಾಯಕರು ಕೇವಲ ರಾಷ್ಟ್ರೀಯ ನಾಯಕರ ಆಜ್ಞಾಪಾಲಕರೇ ಹೊರತೂ ಹಿಂದಿನ ದಿನಗಳಂತೆ ಸ್ವತಂತ್ರ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ನೀಡಿಲ್ಲ. ಪಕ್ಷದಲ್ಲಿ ಇಲ್ಲಿಯವರೆಗೆ ನಡೆದಿರುವ ವಿದ್ಯಮಾನಗಳನ್ನು ಗಮನಿಸಿರುವ ಹೈಕಮಾಂಡ್ ಇಡೀ ಪಕ್ಷದ ವಿದ್ಯಮಾನಗಳನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಭವಿಷ್ಯದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭ ಎದುರಾದರೆ ಮುಖ್ಯಮಂತ್ರಿ ಸೇರಿದಂತೆ ಇಡೀ ಮಂತ್ರಿ ಮಂಡಲದ ರಚನೆಯ ಸ್ವಾತಂತ್ರ್ಯ ಮತ್ತು ಅಧಿಕಾರವನ್ನು ತಾನೇ ಇಟ್ಟುಕೊಂಡು ಆಡಳಿತಕ್ಕೆ ಮುಗುದಾರ ಹಾಕುವ ಹುನ್ನಾರ ರಾಷ್ಟ್ರೀಯ ನಾಯಕತ್ವದ್ದು ಹೀಗಾಗಿ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಪಕ್ಷದ ರಾಷ್ಟ್ರೀಯ ನಾಯಕರ ಮರ್ಜಿ ಅನುಸರಿಸಿಯೇ ಎಲ್ಲ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಅಂದರೆ ಹೆಸರಿಗೆ ಮಾತ್ರ ಕರ್ನಾಟಕದಲ್ಲಿ ಸರ್ಕಾರ ಇರುತ್ತದೆ ನಿರ್ಧಾರಗಳು ದಿಲ್ಲಿಯಲ್ಲಿ ಆಗುತ್ತವೆ. ಹೈಕಮಾಮಡ್ ಆದೇಶಗಳನ್ನು ಪಾಲಿಸುವುದಷ್ಠೆ ಇಲ್ಲಿ ಸರ್ಕಾರ ನಡೆಸುವವರ ಕರ್ತವ್ಯವಾಗಿರುತ್ತದೆ ಅದು ಹೊರತು ಪಡಿಸಿದರೆ ಸ್ವತಂತ್ರವಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಬರಲಿರುವ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ.

ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದ ಅವಧಿಯಲ್ಲೆಲ್ಲ ಹಗರಣಗಳು ನಡೆದಿದ್ದು ಅದರಿಂದ ಪಕ್ಷಕ್ಕೂ ಮುಜುಗುರವಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರದ ಸೂತ್ರವನ್ನೇ ಕೈಗೆ ತೆಗೆದುಕೊಂಡರೆ ಆಗ ಪ್ರತಿಯೊಂದು ತೀರ್ಮಾನಗಳಲ್ಲೂ ತನ್ನ ಅಭಿಪ್ರಾಯವೇ ಅಂತಿಮವಾಗುವ ಮತ್ತು ಅದು ಜಾರಿ ಆಗುವಂತೆ ನೋಡಿಕೊಳ್ಳುವ ಸರ್ಕಾರ ರಚಿಸುವುದು ಬಿಜೆಪಿ ರಾಷ್ಟ್ರೀಯ ನಾಯಕತ್ವದ ಯೋಜನೆ ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕ ಬಿಟ್ಟರೆ ಉಳಿದ ಕಡೆಗಳಲ್ಲಿ ಬಿಜೆಪಿಗೆ ಅಸ್ತಿತ್ವತ್ವವೇ ಇಲ್ಲ. ಹೀಗಾಗಿ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಕರ್ನಾಟಕದಲ್ಲಿ ಸರ್ಕಾರವನ್ನು ಮರು ಸ್ಥಾಪಿಸುವುದು ಬಿಜೆಪಿ ರಾಷ್ಟ್ರೀಯ ನಾಯಕರ ಗುರಿ.

ಹಾಗಾಗೇ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗುಜರಾತ್ ಮಾದರಿ ಪ್ರಯೋಗ ನಡೆಸುವ ಮೂಲಕ ಸುಮಾರು 70ಕ್ಕೂ ಹೆಚ್ಚು ಮಂದಿ ಹೊಸಬರಿಗೆ ಟಿಕೆಟ್ ನೀಡಿದ್ದು ಅದೃಷ್ಠ ಪರೀಕ್ಷೆಗೆ ಇಳಿದಿದೆ. ಮತ್ತು ಇದೇ ಕಾರಣಕ್ಕೆ ಪಕ್ಷದಲ್ಲಿನ ಹಿರಿಯ ಮುಖಂಡರಿಗೆ ಟಿಕೆಟ್ ನೀಡದೇ ಅವರನ್ನು ಬದಿಗೆ ಸರಿಸಿದೆ.  ಆದರೆ ಈ ಎಲ್ಲ ಪ್ರಯೋಗಗಳು ಬಿಜೆಪಿಗೆ ಹೆಚ್ಚಿನ ಲಾಭ ತಂದುಕೊಡುವ ಪರಿಸ್ಥಿತಿ ಸದ್ಯಕ್ಕೆ ಕಾಣುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಹಿರಿಯ ನಾಯಕ ಲಕ್ಷ್ಮಣ ಸವದಿ ಸೇರಿದಂತೆ ಕೆಲವು ಪ್ರಮುಖ ನಾಯಕರು ಬಿಜೆಪಿ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದಾರೆ. ಕೆಲವರು ಜೆಡಿಎಸ್ ಪಕ್ಷಕ್ಕೂ ಸೇರ್ಪಡೆಯಾಗಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಪ್ರಮುಖವಾಗಿ ಈ ಇಬ್ಬರು ನಾಯಕರ ಬಂಡಾಯ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಬಿಜೆಪಿಯ ನಾಗಲೋಟಕ್ಕೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆಗಳು ಇವೆ. ಇದನ್ನು ಮನಗಂಡೇ ಪ್ರಧಾನಿ ಸೇರಿದಂತೆ ರಾಷ್ಟ್ರೀಯ ನಾಯಕರ ಇಡೀ ತಂಡ ಆ ಭಾಗದತ್ತ ತನ್ನ ಇಡೀ ಗಮನವನ್ನು ಕೇಂದ್ರೀಕರಿಸಿದೆ. ಈ ಬಂಡಾಯದ ಲಾಭ ಕಾಂಗ್ರೆಸ್ ಪಡೆದು ಗೆದ್ದು ಬೀಗಿದರೆ ಭವಿಷ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ತನ್ನ ಅಸ್ತಿತ್ವಕ್ಕೇ ದೊಡ್ಡ ಪೆಟ್ಟು ಬೀಳುವುದಷ್ಟೇ ಅಲ್ಲ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಈಗಿರುವ ಸ್ಥಾನಗಳನ್ನೂ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕ ಬಿಜೆಪಿ ನಾಯಕರಿಗೆ ಇದೆ. ಆ ಕಾರಣಕ್ಕೆ ತಮ್ಮ ಇಡೀ ಗಮನವನ್ನು ಉತ್ತರ ಕರ್ನಾಟಕದತ್ತ ಹರಿಸಿದ್ದಾರೆ. 

ಪಾರಂಪರಿಕವಾಗಿ ಬೆಂಬಲಿಸಿಕೊಂಡು ಬಂದ ಲಿಂಗಾಯಿತ ಮತಗಳು ಕೈ ತಪ್ಪಿ ಹೋಗುವ ಆತಂಕಕ್ಕಿಡಾಗಿರುವ ಪಕ್ಷದ ರಾಷ್ಟ್ರೀಯ ನಾಯಕರು ಇದೀಗ ಮತ್ತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶರಣಾಗಿದ್ದಾರೆ.ರಾಜ್ಯ ರಾಜಕಾರಣದಲ್ಲಿ ಅವರನ್ನು ಬದಿಗೊತ್ತಿದರೆ ಪಕ್ಷದ ಭವಿಷ್ಯವೇ ಮಸುಕಾದೀತು ಎಂಬ ವಾಸ್ತವವನ್ನು ಕಡೆಗೂ ಅರಿತಿರುವ ರಾಷ್ಟ್ರೀಯ ನಾಯಕತ್ವ ಲಿಂಗಾಯಿತ ಮತಗಳು ಕೈ ತಪ್ಪಿ ಹೊಗದಂತೆ ಕಾರ್ಯತಂತ್ರ ರೂಪಿಸುವ ಹೊಣೆಗಾರಿಕೆಯನ್ನು ಯಡಿಯೂರಪ್ಪನವರ ಹೆಗಲಮೇಲೆ ಹಾಕಿದೆ.

ಇದರ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದಿರುವ ಯಡಿಯೂರಪ್ಪ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದಾಧ್ಯಂತ ಬಿರುಸಿನ ಪ್ರವಾಸ ಕೈಗೊಂಡು ಲಿಂಗಾಯಿತ ಮುಖಂಡರ ಸರಣಿ ಸಭೆಗಳನ್ನು ನಡೆಸುವ ಮೂಲಕ ಸಮುದಾಯದ ಮನವೊಲಿಕೆಗೆ ಮುಂದಾಗಿದ್ದಾರೆ. ತಮ್ಮ ವಯಸ್ಸನ್ನೂ ಲೆಕ್ಕಿಸದೇ ಅವರು ಪ್ರವಾಸ ಕೈಗೊಂಡು ನಿರಂತರ ಸಬೆಗಳನ್ನು ನಡೆಸುತ್ತಿರುವುದಲ್ಲದೇ ಪಕ್ಷದೊಳಗೇ ಇದ್ದು ಈವರೆವಿಗೆ ತನ್ನನ್ನು ವಿರೋಧಿಸುತ್ತಿದ್ದ ಬಸವನಗೌಡ ಪಾಟೀಲ ಯತ್ನಾಳ್, ಸೋಮಣ್ನ ಮೊದಲಾದ ಪ್ರಮುಖ ಮುಖಂಡರ ಜತೆಗೆ ಹಳೆಯ ಕಹಿಯನ್ನು ಮರೆತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದು ಹಾಗೇಯೇ ಈ ಇಬ್ಬರೂ ನಾಯಕರು ಯಡಿಯೂರಪ್ಪ ಜತೆಗಿನ ತಮ್ಮ ಹಳೆಯ ಕಹಿಯನ್ನು ಮರೆತು ಕೈಜೋಡಿಸಿರುವುದು ರಾಜಕಾರಣದ ಮಟ್ಟಿಗೆ ಪ್ರಮುಖ ಬೆಳವಣಿಗೆ. 

ಇಲ್ಲೂ ಯಡಿಯೂರಪ್ಪ ದುರ ದೃಷ್ಟಿ ಮೆರೆದಿದ್ದಾರೆ. ಭವಿಷ್ಯದಲ್ಲಿ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರಾಗಿ ತಾವೇ ಉಳಿಯುವುದು ಆ ಮೂಲಕ ರಾಜ್ಯ ರಾಜಕಾರಣದ ಮೇಲೆ ಎಂದೂ ಹಿಡಿತ ತಮ್ಮ ಕೈ ತಪ್ಪಿ ಹೋಗದಂತೆ ನೊಡಿಕೊಳ್ಳುವ ತಂತ್ರಗಾರಿಕೆಯೂ ಇದರ ಹಿಂದಿದೆ. 

ಬಿಜೆಪಿಯ ಹಿರಿಯ ನಾಯಕೊರಬ್ಬರು ಹೇಳುವ ಪ್ರಕಾರ ರಾಜ್ಯದಲ್ಲಿ ಚುನಾವಣೆಯ ನಂತರ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ . ಹಾಗೆಯೇ ಯಡಿಯೂರಪ್ಪ ಇಚ್ಛೆಗೆ ಅನುಗುಣವಾಗಿ ಪೂರ್ಣ ಮಂತ್ರಿ ಮಂಡಲ ರಚನೆ ಆಗುತ್ತದೆ. ರಾಷ್ಟ್ರೀಯ ನಾಯಕತ್ವ ಅವರನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ. ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡ ನಂತರ ಸ್ವಂತ ರಾಜ್ಯದಲ್ಲಿ ನಡೆಯುತ್ತಿರುವ ಪ್ರಥಮ ಚುನಾವಣೆ ಇದು. ಕಾಂಗ್ರೆಸ್ ಇಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಅದರ ಯಶಸ್ಸಿನ ಹೆಚ್ಚು ಪಾಲು ಅವರದೇ ಆಗುತ್ತದೆ. ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಅವರಿಗೆ ವಿಶಿಷ್ಟ ಗೌರವ ಸಿಕ್ಕಂತಾಗುತ್ತದೆ. ಈ ಕಾರಣಕ್ಕಾಗೇ ರಾಜ್ಯ ಘಟಕದ ನಾಯಕರ ಗುಂಪುಗಾರಿಕೆ ಚಟುಟಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ್ದಲ್ಲದೇ ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ಪಕ್ಷಕ್ಕೆ ಚೈತನ್ಯ ತುಂಬಿದ್ದಾರೆ. ಫಲಿತಾಂಶ ಕಾದು ನೋಡಬೇಕು.

ಚುನಾವಣೆ ಹೊತ್ತಿನಲ್ಲೇ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರೆ ಚುನಾವಣಾ ಪ್ರಚಾರದ ಚುಕ್ಕಾಣಿಯನ್ನು ಮಾಜಿ ಪ್ರಧಾನಿ ದೇವೇಗೌಡರೇ ಹಿಡಿದಿದ್ದಾರೆ 90 ರ ಇಳಿ ವಯಸ್ಸಿನಲ್ಲಿ ವಯೋ ಸಹಜ ಅನಾರೋಗ್ಯದ ನಡುವೆಯೂ ಅವರು ಪ್ರಚಾರದ ಕಣಕ್ಕೆ ಧುಮುಕಿರುವುದು ಜೆಡಿಎಸ್ ಸಂಘಟನೆಗೆ ಹೊಸ ಸ್ಫೂರ್ತಿ ಸಿಕ್ಕಂತಾಗಿದೆ. ಗೌಡರಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ.

ಯಗಟಿ ಮೋಹನ್
yagatimohan@gmail.com
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com