ಅರ್ಜೆಂಟಿನಾ ಎಂದ ತಕ್ಷಣ ಅವರ ಫುಟ್ಬಾಲ್ ಬಗೆಗಿನ ಪ್ರೀತಿ ಮಸ್ತಕದಲ್ಲಿ ಹಾದು ಹೋದರೆ ಅದು ಸಾಮಾನ್ಯ. ಅರ್ಜೆಂಟಿನಿಯನ್ನರು ಫುಟ್ಬಾಲ್ ಕ್ರೀಡೆಯನ್ನ ಆ ಮಟ್ಟಿಗೆ ಪ್ರೀತಿಸುತ್ತಾರೆ. ಅದೇ ಪ್ರೀತಿ, ಅದೇ ಡೆಡಿಕೇಷನ್ ಆರ್ಥಿಕತೆಯನ್ನ ನಿರ್ವಹಿಸುವುದರಲ್ಲಿ ಇದಿದ್ದಿದ್ದರೆ ಈ ಸಾಲುಗಳನ್ನ ಬರೆಯುವ ಪ್ರಮೇಯ ಬರುತ್ತಿರಲಿಲ್ಲ. ಅರ್ಜೆಂಟಿನಾ ಇಂದಿಗೆ 104 ಪ್ರತಿಶತ ಹಣದುಬ್ಬರವನ್ನ ಎದುರಿಸುತ್ತಿದೆ!!. ಅಂದರೆ ವರ್ಷದಲ್ಲಿ ಸರುಕು ಮತ್ತು ಸೇವೆಯ ಬೆಲೆ 100 ಪೆಸೊ ಇದದ್ದು 200 ದಾಟಿರುತ್ತದೆ. ಮುಂದಿನ ವರ್ಷ 200 ಪೆಸೊ 400ಕ್ಕೂ ಮೇಲೇರಿರುತ್ತದೆ. ಅಂದರೆ ವರ್ಷದಿಂದ ವರ್ಷಕ್ಕೆ ಹೊಸ ಬೆಲೆಯ ಮೇಲೆ 104 ಪ್ರತಿಶತ ಹೆಚ್ಚಳ ಕಾಣುತ್ತಾ ಹೋಗುತ್ತಿದೆ. ಅರ್ಜೆಂಟಿನಾ ಈ ರೀತಿಯ ಹಣಕಾಸು ನಿರ್ವಹಣೆಯಲ್ಲಿ ಲೆಕ್ಕ ತಪ್ಪುತ್ತಿರುವುದು ಮೊದಲೇನಲ್ಲ, ಅಲ್ಲಿನ ಹಣಕಾಸು ನಿರ್ವಹಣೆ ಹದಗೆಟ್ಟು ಜನ ಬೀದಿಗಿಳಿದು ಪ್ರತಿಭಟಿಸಿದ್ದನ್ನ ಕಂಡ ಅನುಭವ ನನ್ನದು. ಇದೀಗ 2023 ರಲ್ಲಿ ಕೂಡ ಜನ ಮತ್ತೆ ಬೀದಿಗಿಳಿದಿದ್ದಾರೆ. ಈ ಬಾರಿ ಸಂಘರ್ಷ ಸ್ವಲ್ಪ ಜೋರಾಗೆ ಇದೆ. ಅದು ಹಿಂಸೆಗೂ ಕೂಡ ತಿರುಗುತ್ತಿದೆ ಎನ್ನುವುದು ಮಾತ್ರ ಖೇದಕರ. ಈ ಮಟ್ಟದ ಹಣದುಬ್ಬರಕ್ಕೆ ಪ್ರಮುಖ ಕಾರಣಗಳೇನು? ಎನ್ನುವುದನ್ನ ಒಂದಷ್ಟು ಅರಿತುಕೊಳ್ಳುವ ಪ್ರಯತ್ನಮಾಡೋಣ.
ಇದನ್ನೂ ಓದಿ: ಕೊರೋನೋತ್ತರ ಹಣದುಬ್ಬರ: ಜಗತ್ತಿಗೆ ಜಗತ್ತೇ ತತ್ತರ!
ಸಬ್ಸಿಡಿಗಳ ಭರಾಟೆಯಲ್ಲಿ ಖಜಾನೆ ಖಾಲಿಯಾಗಿ ಹೋಯ್ತು: ಅರ್ಜೆಂಟೀನಾದಲ್ಲಿ ಇರುವುದು ಎಡಪಂಥೀಯ ಸೋಷಿಯಲಿಸ್ಟ್ ಸರಕಾರ. ಅದೂ ಪೂರ್ಣ ಬಹುಮತವಿಲ್ಲದ ಹೊಂದಾಣಿಕೆ ಸರಕಾರ. ಈ ದೇಶದಲ್ಲಿ ಯೂನಿವೆರ್ಸಿಟಿ ಓದು, ಸಾರಿಗೆ ವ್ಯವಸ್ಥೆ, ಹೆಲ್ಥ್ ಕೇರ್, ಮತ್ತು ಎನೆರ್ಜಿ ಅಂದರೆ ವಿದ್ಯುತ್, ಗ್ಯಾಸ್, ಪೆಟ್ರೋಲಿಯಂ ಪದಾರ್ಥಗಳ ಮೇಲೆ ಬಹಳಷ್ಟು ಸಬ್ಸಿಡಿಯನ್ನ ನೀಡಲಾಗಿದೆ. ಜನರು ಈ ಸೌಕರ್ಯಗಳಿಗೆ ನೀಡುವ ಹಣ ಇಲ್ಲವೆನ್ನುವಷ್ಟು ಕಡಿಮೆ. ಹೀಗಾಗಿ ಸರಕಾರಕ್ಕೆ ಆದಾಯದ ಮೂಲದಲ್ಲಿ ಕೊಡಲಿ ಪೆಟ್ಟು ಬಿದ್ದಿದೆ. ಸರಕಾರದ ಬಳಿ ಹಣವಿಲ್ಲದ ಕಾರಣ ಅದು ಡೆಟ್ ಬಾಂಡ್ಗಳನ್ನ ಹೊರಡಿಸಿ ಹಣವನ್ನ ಮಾರುಕಟ್ಟೆಯಿಂದ ಪಡೆದುಕೊಂಡಿತು. ಸಾಲ 2018 ರಿಂದ ಹೆಚ್ಚುತ್ತಾ ಹೋಯ್ತು.
ಎಲ್ಲವೂ ಪುಕ್ಕಟೆ ಅಥವಾ ಸಬ್ಸಿಡಿಯಲ್ಲಿ ಸಿಕ್ಕಾಗ ಇದು ಬೇಡ, ಸೇವೆಗೆ ತಕ್ಕ ಬೆಲೆಯನ್ನ ತೆಗೆದುಕೊಳ್ಳಿ ಎಂದು ಯಾವೊಂದು ನಾಗರೀಕ ಸಂಸ್ಥೆಯೂ ಮುಂದೆ ಬರಲಿಲ್ಲ. ಸಿಕ್ಕದ್ದನ್ನ ತಿಂದುಂಡು ಸುಖವಾಗಿದ್ದು, ಇದೀಗ ಅದಕ್ಕೆ ಬೆಲೆ ತೆರುವ ಕಾಲದಲ್ಲಿ ರಾಜಕಾರಿಗಳನ್ನ, ರಾಜಕೀಯ ಪಕ್ಷವನ್ನ ಪೂರ್ಣವಾಗಿ ಹೊಣೆ ಮಾಡುವುದು ಕೂಡ ಸರಿಯಲ್ಲ. ಹಿಂದೆ ಯಥಾ ರಾಜ, ತಥಾ ಪ್ರಜಾ ಎನ್ನುವ ಮಾತಿತ್ತು. ಇಂದು ಅದು ಬದಲಾಗಿದೆ ಯಥಾ ಪ್ರಜಾ, ತಥಾ ರಾಜ ಎನ್ನುವಂತಾಗಿದೆ. ಗಮನಿಸಿ ನೋ , ಮೇಲಿನ ಅಂಶಗಳನ್ನ ಲಿಂಕ್ ಮಾಡಿ ನೋಡಿ, ಅವೆಲ್ಲವೂ ಒಂದಕ್ಕೊಂದು ಪೂರಕವಾಗಿದೆ, ಎಲ್ಲವೂ ಶುರುವಾಗಿದ್ದು ಸಬ್ಸಿಡಿ ನೀಡುವುದರಿಂದ ಎನ್ನುವುದು ವೇದ್ಯ.
ಇದನ್ನೂ ಓದಿ: ಯೂರೋಪು ವಲಸೆ: ಭಾರತೀಯರ ಮುಂದಿದೆ ಸವಾಲು-ಅವಕಾಶ!
ಪ್ರಜೆಗಳಾಗಿ ನಾವು ಒಂದು ಪ್ರಶ್ನೆಯನ್ನ ನಾವು ಕೇಳಿಕೊಳ್ಳಬೇಕು. ನಮ್ಮ ಮನೆಗೆ ಆದಾಯವಿಲ್ಲದಿದ್ದರೆ ಮನೆ ನಡೆಸಲು ಹೇಗೆ ಸಾಧ್ಯ? ಸುಮ್ಮನೆ ಊಹಿಸಿಕೊಂಡು ನೋಡಿ. ಯಾವುದೇ ಆದಾಯವಿಲ್ಲದೆ ಎಷ್ಟು ದಿನ, ತಿಂಗಳು, ವರ್ಷ ನೀವು ಮನೆಯನ್ನ ನಡೆಸಬಲ್ಲಿರಿ? ಈಗ ಇದೆ ಪ್ರಶ್ನೆಯನ್ನ ರಾಜ್ಯಕ್ಕೂ, ದೇಶಕ್ಕೂ ವಿಸ್ತರಿಸಿಕೊಳ್ಳಿ. ಉತ್ತರ ನಿಮಗೆ ಸಿಗುತ್ತದೆ. ಸರಕಾರ ನಡೆಸಲು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು, ಸಮಾಜದ ಅಭಿವೃದ್ಧಿಗೆ ಎಲ್ಲಕ್ಕೂ ಹಣ ಬೇಕು. ಸರಕಾರ ನಡೆಸುವುದು ಎಂದರೆ ಅದು ಸುಲಭದ ಮಾತಲ್ಲ. ಅದು ಎರಡು ಅಲುಗಿನ ಕತ್ತಿ. ಎಲ್ಲವನ್ನೂ ಎಲ್ಲರಿಗೂ ಪುಕ್ಕಟೆ ಕೊಡದಿದ್ದರೂ, ಸಬ್ಸಿಡಿ, ಅಂದರೆ ಕಡಿಮೆ ಬೆಲೆಯಲ್ಲಿ, ಡಿಸ್ಕೌಂಟ್ ಬೆಲೆಯಲ್ಲಿ ಕೊಡುವುದು ಕೂಡ ಸಾಧ್ಯವಿಲ್ಲದ ಮಾತು ಎನ್ನುವುದನ್ನ ಅರ್ಜೆಂಟಿನಾ ಸಾಬೀತು ಮಾಡಿದೆ. ವೆನಿಜುವೆಲಾ ಎನ್ನುವ ಇನ್ನೊಂದು ದೇಶದ ಆರ್ಥಿಕ ಪರಿಸ್ಥಿತಿ ವಿವರಿಸಲು ಕೂಡ ಆಗದಷ್ಟು ಹಾಳಾಗಿದೆ. ಅಲ್ಲಿಯ ಕಥೆಯು ಸೇಮ್. ಪುಕ್ಕಟೆ ಕೊಟ್ಟಾಗ ಹುಗೊ ಚಾವೇಸ್ ಎನ್ನುವ ನಾಯಕನನ್ನ ದೇವರು ಎಂದಿದ್ದ ಜನತೆ ಇಂದಿಗೆ ಶಪಿಸುತ್ತಿದ್ದಾರೆ.
ಕೊನೆಮಾತು: ಅರ್ಜೆಂಟಿನಾ ಇಂದಿಗೆ ದಿವಾಳಿಯತ್ತ ಸಾಗಿದೆ.ಅಂದರೆ ದೇಶದಲ್ಲಿ ಹಣವಿರುವುದಿಲ್ಲ, ಅಂದರೆ ಮೌಲ್ಯವಿರುವುದಿಲ್ಲ. ಜಾಗತಿಕ ಮಟ್ಟದಲ್ಲಿ ಇದನ್ನ ರನ್ನಿಂಗ್ ಔಟ್ ಆಫ್ ಮನಿ ಎನ್ನಲಾಗುತ್ತದೆ. ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಉಳಿದಿವೆ. ಈ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಆರ್ಥಿಕವಾಗಿ ಬಸವಳಿದಿರುವ ಅಮೆರಿಕಾ ಹಸಿದ ಮುದಿ ಸಿಂಹದಂತೆ ಸಿಕ್ಕದ್ದು ತಿಂದು ಜೀವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ. ಅರ್ಜೆಂಟಿನಾ ಅಮೆರಿಕಾ ಎನ್ನುವ ರಾವಣನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆಯಾಗಲಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement