ಕೊರೋನೋತ್ತರ ಹಣದುಬ್ಬರ: ಜಗತ್ತಿಗೆ ಜಗತ್ತೇ ತತ್ತರ! (ಹಣಕ್ಲಾಸು)

ಹಣಕ್ಲಾಸು-360ರಂಗಸ್ವಾಮಿ ಮೂನಕನಹಳ್ಳಿ
ಯುರೋಪ್ ನಲ್ಲಿ ಹಣದುಬ್ಬರದ ಪರಿಣಾಮ ಹೆಚ್ಚಾಗಿರುವ ಬಡತನ (ಸಾಂಕೇತಿಕ ಚಿತ್ರ)
ಯುರೋಪ್ ನಲ್ಲಿ ಹಣದುಬ್ಬರದ ಪರಿಣಾಮ ಹೆಚ್ಚಾಗಿರುವ ಬಡತನ (ಸಾಂಕೇತಿಕ ಚಿತ್ರ)

ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರುಗತಿಯಲ್ಲಿರುವುದು ಇಂದಿಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ಭಾರತದಲ್ಲಿ ಕೂಡ ಹಣದುಬ್ಬರ ಹೆಚ್ಚಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಮಕ್ಕಳು 16,18,20 ವರ್ಷಕ್ಕೆ ಕಾಲಿರಿಸುತ್ತಿದ್ದಂತೆ ಹೆತ್ತವರ ತೊರೆದು ತಮ್ಮ ಜೀವನ ಕಟ್ಟಿಕೊಳ್ಳುವುದು ಕಾಣುತ್ತೇವೆ . ಭಾರತದಲ್ಲಿ ಇನ್ನೊಂದೈದು ವರ್ಷ ಅಂದರೆ 25 ರ ನಂತರ ಈ ಕ್ರಿಯೆಯನ್ನ ನಾವು ಕಾಣಬಹುದು.

ಪಾಶ್ಚಾತ್ಯ ದೇಶಗಳಲ್ಲಿ ಈ ಕ್ರಿಯೆಗೆ ಇದೀಗ ಹಣದುಬ್ಬರ ಪೆಟ್ಟು ಕೊಟ್ಟಿದೆ. ಯುವಕ/ಯುವತಿಯರು ತಮ್ಮ ಹೆತ್ತವರನ್ನ ಬಿಟ್ಟು ಹೋಗುವ ಕ್ರಿಯೆ ನಿಧಾನವಾಗಿದೆ. ಹೊರ ಹೋದವರಲ್ಲಿ ಕೂಡ ಬಹುತೇಕರು ಮತ್ತೆ ಮರಳಿ ತಮ್ಮ ಹೆತ್ತವರ ಗೂಡನ್ನ ಸೇರಿಕೊಳ್ಳುತ್ತಿದ್ದಾರೆ. ಮದುವೆಯಾಗದ ಯುವ ಜನತೆ ತಮ್ಮ ಹೆತ್ತವರ ಜೊತೆಯಲ್ಲಿದ್ದು ಹೊರಗಡೆ ತಮ್ಮ ಸಂಗಾತಿಯನ್ನ ಭೇಟಿ ಮಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಹೀಗೆ ಅವರು ಮರಳಿ ಹೆತ್ತವರ ಮೇಲಿನ ಪ್ರೀತಿಯಿಂದ ಹೋದದ್ದಲ್ಲ! ಇಂದಿಗೆ ಅವರು ಗಳಿಸುತ್ತಿರುವ ಆದಾಯದಲ್ಲಿ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ ಎನ್ನುವುದು ತಿಳಿದು ಬರುತ್ತಿರುವ ವಿಷಯ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಕೆಲಸದ ದಿನಗಳಲ್ಲಿ ರೆಸ್ಟುರೆಂಟ್ನಲ್ಲಿ ಸೇವಿಸುತ್ತಿದ್ದ ಜನರು ಇದೀಗ ಎಲ್ಲವನ್ನೂ ಮನೆಯಲ್ಲಿ ತಯಾರಿಸಿ ತಿನ್ನುವುದು ಮತ್ತು ಕೆಲಸದ ಜಾಗಕ್ಕೆ ಬುತ್ತಿ ಕಟ್ಟಿಕೊಂಡು ಹೋಗುವ ಹಳೆಯ ಸಂಪ್ರದಾಯಕ್ಕೆ ಮರಳುತ್ತಿದ್ದಾರೆ. ಇದು ಕೂಡ ಇಷ್ಟಪಟ್ಟು ಆದ ಬದಲಾವಣೆಯಲ್ಲ!! ಖರ್ಚನ್ನ ಕಡಿಮೆ ಮಾಡಿಕೊಳ್ಳಲು ಬೇರೆ ದಾರಿಯಿಲ್ಲ.

ದುಡಿಯಲು ಶುರು ಮಾಡಿದ ತಕ್ಷಣ ಒಂದಷ್ಟು ಹಣಕಾಸು ನಿಯಮಗಳನ್ನ ಪಾಲಿಸಿದಿದ್ದರೆ ಯೂರೋಪಿನ ಮತ್ತು ಅಮೆರಿಕಾದ ಯುವ ಜನತೆ ಇಂದಿನ ದಿನವನ್ನ ಕಾಣುತ್ತಿರಲಿಲ್ಲ. ಮುಂದಿನ ಹತ್ತಾರು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನ ಊಹಿಸಿಕೊಂಡು ಅದನ್ನ ಇಂದು ಖರ್ಚು ಮಾಡುವುದು ಜಾಗತಿಕ ಅರ್ಥ ವ್ಯವಸ್ಥೆ ಕುಸಿಯಲು ಅತಿ ದೊಡ್ಡ ಕಾರಣ. ಇಂದಿಗೆ ಅಮೆರಿಕಾ ದೇಶವೂ ಅತ್ಯಂತ ಜಟಿಲವಾದ ಆರ್ಥಿಕ ಸಂಕಷ್ಟದಲ್ಲಿದೆ. ಇದು ಕೇವಲ ಆರಂಭ ಮಾತ್ರ. ಮುಂಬರುವ ದಿನಗಳಲ್ಲಿ ಅಮೆರಿಕಾದ ಕುಸಿತವನ್ನ ತಡೆಯುವುದು ಅಸಾಧ್ಯ. ಯೂರೋಪಿನ ಅರ್ಥ ವ್ಯವಸ್ಥೆ ಕೂಡ ಅಮೆರಿಕಾ ದೇಶದ ನಕಲು. ಹೀಗಾಗಿ ಅವುಗಳ ಕುಸಿತವನ್ನ ಕೂಡ ತಡೆಯುವುದು ಅಸಾಧ್ಯ. ಒಂದಷ್ಟು ದಿನ ಕುಸಿತವನ್ನ ಮುಂದೂಡಬಹುದು ಹೊರತು ಕುಸಿತವನ್ನು ತಡೆಯಲು ಸಾಧ್ಯವಿಲ್ಲ. 

ಭಾರತದಲ್ಲಿ ಯುವ ಜನರ ಸಂಖ್ಯೆ ಬಹಳವಿದೆ. ಈ ನಿಟ್ಟಿನಲ್ಲಿ ಯುವ ಜನತೆ ಪಾಲಿಸಬೇಕಾದ ಹಣಕಾಸು ನಿಯಮಗಳನ್ನ ವಿವರಿಸುವ ಪ್ರಯತ್ನ ಮಾಡುವೆ.

  1. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಬೇಕು: ಅಮೇರಿಕಾ ಮತ್ತು ಯೂರೋಪಿನಲ್ಲಿ ಇಲ್ಲದ ಹಣವನ್ನ ಸೃಷ್ಟಿಸಲಾಯಿತು ಅಂದರೆ ಮುಂದೆ ಹತ್ತು ಅಥವಾ ಇಪ್ಪತ್ತು ವರ್ಷದಲ್ಲಿ ದುಡಿಯುವ ಹಣವನ್ನ ಇಂದೇ ಖಾತೆಗೆ ಹಾಕಿ ಅದರಿಂದ ಬೇಕಾದ ಮನೆ ಕಾರು ಕೊಳ್ಳಿ ಎಂದು ಹುರಿದುಂಬಿಸಲಾಯಿತು. ಹಣವಿದ್ದ ಜನ ಕಡಿಮೆ ಬೆಲೆಯಲ್ಲಿ ಜಾಗ ಕೊಂಡು ಅಲ್ಲಿ ಕಟ್ಟಿದ ಮನೆಯನ್ನ ಹೀಗೆ ಸಾಲ ಪಡೆದವರ ತಲೆಗೆ ಕಟ್ಟಲು ಶುರುಮಾಡಿದರು. ಯಾವಾಗ ಇಂತಹ ಕ್ರಿಯೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತೋ ಇಂತಹ ದಳ್ಳಾಲಿಗಳಿಗೆ ಹೆಚ್ಚಿನ ಉತ್ಸಾಹ ಬಂದಿತು. ನಿನ್ನೆಗಿಂತ ಇಂದಿನ ಬೆಲೆ ಹೆಚ್ಚು ಎನ್ನ ತೊಡಗಿದರು. ಜನ ನಾಳೆ ಇನ್ನು ಹೆಚ್ಚಾಗುತ್ತದೆ ಎನ್ನುವ ಭರವಸೆಯಲ್ಲಿ ಬ್ಯಾಂಕಿನಿಂದ ಸ್ವ-ಇಚ್ಛೆಯಿಂದ ಸಾಲ ಪಡೆದು ದಲ್ಲಾಳಿಗಳ ಕಿಸೆಯನ್ನ ತುಂಬತೊಡಗಿದರು. ಬ್ಯಾಂಕ್ಗಳು, ಸರಕಾರ ಎಲ್ಲವೂ ಇಂತಹ ಒಂದು ವ್ಯವಸ್ಥಿತ ವಂಚನೆಯ ಜಾಲದ ಸದಸ್ಯರು. ಬ್ಯಾಂಕು ನಿನ್ನ ದುಡಿಮೆಗೆ ಇಷ್ಟು ಹಣ ಸಾಲ ನೀಡಲು ಬರುವುದಿಲ್ಲ ಎಂದಿದ್ದರೆ ಇಂತಹ ಹುಚ್ಚಾಟಕ್ಕೆ ಒಂದಷ್ಟು ಕಡಿವಾಣವಾದರೂ ಬೀಳುತಿತ್ತು. ಬ್ಯಾಂಕ್ ಸಾಲ ಕೇಳಿ ಬಂದವರಿಗೆಲ್ಲ ಅವರ ಹಣಕಾಸು ಸ್ಥಿತಿಗತಿ ನೋಡದೆ ಹಣವನ್ನ ನೀಡಿತು. ಇದೆ ತಪ್ಪನ್ನ ಭಾರತೀಯ ಬ್ಯಾಂಕುಗಳು ಕೂಡ ಮಾಡಿವೆ/ ಮಾಡುತ್ತಿವೆ. ಅವಶ್ಯಕತೆ ಇಲ್ಲದೆ ಸಾಲ ಮಾಡಿ ಮನೆ ಕಾರು ಕೊಳ್ಳುವ ಕ್ರಿಯೆಗೆ ಮುಂದಾಗಬಾರದು.
  2. 50, 30, 20  ರೂಲ್ಸ್ ಎಂದಿಗೂ ಮರೆಯಬಾರದು: ಒಟ್ಟು ಆದಾಯದ 50 ಪ್ರತಿಶತ ಮಾತ್ರ ಮೂಲಭೂತ ಖರ್ಚುಗಳಿಗೆ ಮೀಸಲಿಡಬೇಕು. ಉಳಿದ 30 ಪ್ರತಿಶತ ಹಣವನ್ನ ಸನ್ನಿವೇಶ ಆಧಾರಿತ ಖರ್ಚಿಗೆ ಎಂದು ಮೀಸಲಿಡಬೇಕು. ಅಂದರೆ ಹೇಳದೆ ಕೇಳದೆ ಬರುವ ಅನಾರೋಗ್ಯ, ಮನಸ್ಸಿಗೆ ಮುದನೀಡಲು ಹೋಗಬೇಕಾದ ಟ್ರಿಪ್, ಹೋಟೆಲ್ ಊಟ, ಇಷ್ಟವಾದ ಬಟ್ಟೆ ಇತ್ಯಾದಿ. ಯಾವುದು ಎಷ್ಟೇ ಇರಲಿ 20  ಪ್ರತಿಶತ ಉಳಿತಾಯ ಮಾತ್ರ ಕಡ್ಡಾಯ. ಅದರಲ್ಲಿ ಯಾವುದೇ ಹೊಂದಾವಣಿಕೆ ಮಾಡಿಕೊಳ್ಳುವಂತಿಲ್ಲ. ಉಳಿಸಿದ ಹಣವನ್ನ ಸರಿಯಾಗಿ ಹೂಡಿಕೆ ಮಾಡುವುದನ್ನ ಕೂಡ ಕಲಿಯಬೇಕು.
  3. ಸರಳವಾದ ಜೀವನಶೈಲಿ ಇಂದಿನ ಅತ್ಯಂತ ದೊಡ್ಡ ಅವಶ್ಯಕತೆ: ಯುವ ಜನತೆಯಲ್ಲಿ ಒಂದು ರೀತಿಯ ಯೋಚನೆ ಮನೆ ಮಾಡಿದೆ ನಾಳೆ ಕಂಡವರಾರು? ಇಂದಿಗೆ ಬದುಕಬೇಕು ಎನ್ನುವುದು ಆ ಯೋಚನೆ. ಇದು ಜಗತ್ತಿನಾದ್ಯಂತ ಎಲ್ಲಾ ಯುವ ಜನತೆಯಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಗುಣ. ಇದು ತಪ್ಪು ಎಂದಲ್ಲ, ಆದರೆ ನಾಳಿನ ಚಿಂತೆ ಮರೆತು ಇಂದು ಬದುಕುವಷ್ಟು ಹಣವನ್ನ ಸಂಪಾದಿಸಿದ್ದರೆ ಆಗ ಸರಿ, ಇಂದಿನ ಮಳೆ, ಇಂದಿನ ಗಾಳಿಯಲ್ಲಿ ಬದುಕುವ ಕೋಟ್ಯಂತರ ಯುವಕ/ಯುವತಿಯರು ಕೂಡ ಇದೆ ದಾರಿಯನ್ನ ಅನುಸರಿಸುವುದು ಮಹಾತಪ್ಪು. ತಾವು ಬಯಸುವ ಬದುಕನ್ನ ಬದುಕಲು ಬೇಕಾಗುವಷ್ಟು ಮೂಲಧನವನ್ನ ಸಂಪಾದಿಸುವ ಕಡೆಗೆ ಹೆಚ್ಚು ಲಕ್ಷ್ಯ ನೀಡಬೇಕು. ಇದು ಐಷಾರಾಮಿ ಬದುಕಿನಿಂದ ಸಾಧ್ಯವಿಲ್ಲ. ಸರಳವಾದ ಬದುಕು ಸ್ಥಿರವಾದ ಬದುಕಿಗೆ ಅಡಿಪಾಯ.
  4. ಅಸ್ಥಿರ ಸಮಾಜದಲ್ಲಿ ಒಂದು ಆದಾಯದ ಮೂಲ ನಂಬಿಕೊಂಡು ಬದುಕುವುದು ಅಪರಾಧ: ನಿಮಗೆಲ್ಲಾ ಗೊತ್ತಿರುವಂತೆ ಟೆಕ್ನಾಲಜಿ ಎನ್ನುವುದು ಮನುಷ್ಯನ ಕೆಲಸವನ್ನ ಸುಲಭ ಮಾಡುತ್ತಿದೆ. ಎಷ್ಟೋ ಕೆಲಸಕ್ಕೆ ಮನುಷ್ಯನ ಅವಶ್ಯಕತೆ ಇಲ್ಲ ಎನ್ನುವಂತಾಗಿದೆ. ಚಾಟ್ ಜಿಪಿಟಿ ಸೃಷ್ಟಿಸುತ್ತಿರುವ ಅವಾಂತರ, ಸಾವಿರಾರು ಕೆಲಸಗಳು ಇಲ್ಲವಾಗುತ್ತಿರುವುದು ಎಲ್ಲವೂ ಕಿವಿಗೆ ಬಿದ್ದೆ ಇರುತ್ತದೆ. ನಾಳೆ ಚಾಟ್ ಜಿಪಿಟಿ ಗಿಂತ ದೊಡ್ಡದಾದ ಇನ್ನೊಂದು ತಂತ್ರಜ್ಞಾನ ಬರುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇಲ್ಲ. ಹೀಗಾಗಿ ಮೂಲ ಕೆಲಸದ ಜೊತೆಗೆ ಇಷ್ಟವಾದ ಪ್ರವೃತ್ತಿಯನ್ನ ರೋಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ. ಒಂದಕ್ಕಿಂತ ಹೆಚ್ಚು ಆದಾಯದ ಮೂಲವನ್ನ ಕಂಡುಕೊಳ್ಳಬೇಕಾದ ಅವಶ್ಯಕತೆ ಹೆಚ್ಚಾಗಿದೆ.
  5. ಕಾಣದ ನಾಳಿನ ಬದುಕಿಗೆ ಬೇಕಾಗುವ ಖರ್ಚಿಗೆ ಹಣ ಹೊಂದಿಸಿಕೊಳ್ಳಿ: ಇಂದಿನ ಜೀವನವನ್ನ ಆರಾಮದಾಯಕವಾಗಿ ಕಳೆಯಬೇಕು, ಅದು ಮುಖ್ಯ. ಕಾಣದ ನಾಳೆಗಾಗಿ ಕೈಲಿರುವ ಇಂದಿನ ದಿನವನ್ನ ಬಲಿಕೊಡುವ ಅವಶ್ಯಕತೆ ಖಂಡಿತ ಇಲ್ಲ. ಆದರೆ ಹಾಗೆಂದು ನಾಳೆಯ ಬಗ್ಗೆ ಚಿಂತೆಯಿಲ್ಲದೆ ಇಂದು ಬದುಕಲು ಕೂಡ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಸ್ತುಸ್ಥಿತಿ ಹೀಗಿರುವಾಗ ನಾಳೆಗಾಗಿ ಒಂದಷ್ಟು ಸಂಪತ್ತು ಕ್ರೋಡೀಕರಿಸಿಡುವ ಜವಾಬ್ದಾರಿ ಕೂಡ ಪ್ರಾರಂಭದ ಹಂತದಲ್ಲೇ ಮಾಡುತ್ತಾ ಹೋದರೆ ಅದು ಹೊರೆ ಎನ್ನಿಸುವುದಿಲ್ಲ.

ಹೀಗೆ ಇನ್ನು ಹಲವಾರು ಸಣ್ಣಪುಟ್ಟ ಕಾರಣಗಳು ಜೊತೆಗೆ ಮನುಷ್ಯನ ಭಾವನೆಗಳು ತಾನೇ ಕಟ್ಟಿದ ನಂಬಿದ ವ್ಯವಸ್ಥೆಯನ್ನ ಕುಸಿಯುವಂತೆ ಮಾಡುತ್ತದೆ. ಇದರಿಂದ ಯೂರೋಪಿನ ಸಮಾಜದಲ್ಲಿ ಅನೇಕ ಬದಲಾವಣೆಗಾಳಿವೆ. ಕೆಲವು ಒಳ್ಳೆಯದು ಎನ್ನಿಸಬಹುದು ಕೆಲವು ಕೆಟ್ಟವು ಅನ್ನಿಸಬಹುದು. ಒಟ್ಟಿನಲ್ಲಿ ಆರ್ಥಿಕ ಕುಸಿತ ಅಲ್ಲಿನ ಸಮಾಜದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ತಂದಿರುವುದಂತೂ ದಿಟ. ಅವೇನು ಎನ್ನುವುದನ್ನ ನೋಡೋಣ.

  • ನಿರುದ್ಯೋಗ ಅಥವಾ ಅರೆಕಾಲಿಕ ಉದ್ಯೋಗದಿಂದ ಜನರ ಸಂಪಾದನೆಯಲ್ಲಿ ಕುಸಿತ ಕಂಡಿದೆ. ಇಲ್ಲಿನ ಸಮಾಜ ಭಾರತೀಯ ಸಮಾಜದಂತಲ್ಲ. ಇಲ್ಲಿ ಎಲ್ಲರೂ ಪ್ರತ್ಯೇಕ ಬದುಕಲು ಇಷ್ಟಪಡುತ್ತಾರೆ . ಆದರೆ ನಿರುದ್ಯೋಗ ಮತ್ತು ಸಂಪಾದನೆಯಲ್ಲಿ ಕುಸಿತ ಒಂದು ಪೀಳಿಗೆಯನ್ನ ಇನ್ನೊಂದು ಪೀಳಿಗೆಯೊಂದಿಗೆ ಇಷ್ಟವಿರಲಿ ಬಿಡಲಿ ಹೊಂದಿಕೊಂಡು ಬಾಳಲು ಒತ್ತಾಯ ಮಾಡಿದೆ. ಅಂದರೆ ಯುವ ಜನತೆ ಸ್ವತಃ ಬದುಕಲು, ಬಾಡಿಗೆ ಕಟ್ಟಲು ಸಾಧ್ಯವಿಲ್ಲದೆ ಹೆತ್ತವರ ಜೊತೆಯಲ್ಲಿ ಬದುಕಲು ಶುರುಮಾಡಿದ್ದಾರೆ.
  • 2005 ರಿಂದ 2009 ರಲ್ಲಿ ಪದವಿ ಪಡೆದು ಹೊರಬಂದ ಒಂದು ಪೀಳಿಗೆ ತಮ್ಮ ಓದಿಗೆ ತಕ್ಕ ಉದ್ಯೋಗ ಸಿಗದೇ ದಿನದೂಡಲು ಸಿಕ್ಕ ಉದ್ಯೋಗವನ್ನ ಮಾಡಿಕೊಂಡು ಕಾಲ ತಳ್ಳುತ್ತಿದೆ. ಅನಂತರದ ವರ್ಷಗಳು ಕೂಡ ಏರುಗತಿಯನ್ನ ಕಾಣಲಿಲ್ಲ. ಅಚಾನಕ್ಕಾಗಿ ಎದುರಾದ ಕೊರೋನ ಜಗತ್ತನ್ನ ಬದಲಿಸಿಬಿಟ್ಟಿತು. ಗಮನಿಸಿ ಅಂದು (2005-2009) 25ರ ತರುಣ ಅಥವಾ ತರುಣಿ ಇಂದಿಗೆ ನಲವತ್ತರ ಹತ್ತಿರಕ್ಕೆ ಬಂದಿರುತ್ತಾರೆ. ಕಾರ್ಪೊರೇಟ್ ವಲಯದಲ್ಲಿ ಈ ವಯೋಮಾನಕ್ಕೆ ತಕ್ಕ ಅನುಭವಿರದಿದ್ದರೆ ಪ್ರವೇಶ ಹೇಗೆ ಸಿಕ್ಕೀತು? ಅಮೇರಿಕಾ, ಇಂಗ್ಲೆಂಡ್, ಸ್ಪೇನ್, ಗ್ರೀಸ್, ಪೋರ್ಚುಗೀಸ್, ಇಟಲಿ ಜೊತೆಗೆ ಇನ್ನು ಹಲವಾರು ದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯ ಈ ಸಮಯದಲ್ಲಿನ ಯುವ ಜನತೆ ಸಂಪಾದನೆಯಿಲ್ಲದೆ ತಮ್ಮ ಹಿರಿಯರು ಬದುಕಿದ ರೀತಿ ಬಾಳಲು ಆಗದೆ ಉನ್ನತಿಯನ್ನ ಕಾಣದೆ ಜೀವನವನ್ನ ಕಳೆದಿದ್ದಾರೆ.
  • ಹತ್ತು ವರ್ಷ ಹಿಂದೆ ಈ ದೇಶಗಳಲ್ಲಿ ಇದ್ದ ಮಧ್ಯವರ್ಗದ ಸಂಖ್ಯೆ ತೀವ್ರ ಕುಸಿತ ಕಂಡು. ಶ್ರೀಮಂತ ಮತ್ತು ಬಡವ ಎನ್ನುವ ಪ್ರಭೇದ ಹೆಚ್ಚಾಗುತ್ತಿದೆ. ಇವೆರೆಡರ ಮಧ್ಯದಲ್ಲಿದ್ದ ಜನ ನಿಧಾನವಾಗಿ ಬಡತನದ ಬಾಹುವಿಗೆ ಸಿಲುಕಿದ್ದಾರೆ.
  • ಗಮನಿಸಿ ಇವೆಲ್ಲಾ ಚಳಿ ದೇಶಗಳು. ಬೇಸಿಗೆಯ ಒಂದಷ್ಟು ತಿಂಗಳು ಬಿಟ್ಟರೆ ಮುಕ್ಕಾಲು ಪಾಲು ಚಳಿ! ಚಳಿಯಿಂದ ಬಚಾವಾಗಲು ಹೀಟರ್ ಗಳ ಅವಶ್ಯಕೆತೆ ಇರುತ್ತದೆ. ಹೀಗೆ ರಾತ್ರಿಯೆಲ್ಲ ಹೀಟರ್ ಬಳಸಿದರೆ ಹೆಚ್ಚಾಗುವ ವಿದ್ಯುತ್ ಬಿಲ್ ಕಟ್ಟುವರಾರು? ಹೀಗಾಗಿ ಚಳಿಯಿಂದ ಸಾವು ನೋವುಗಳ ಸುದ್ದಿಯೂ ಹೆಚ್ಚಾಗುತ್ತಿದೆ. ಇಂಗ್ಲೆಂಡ್ನಲ್ಲಿ ಎಲೆಕ್ಟ್ರಿಸಿಟಿ ಬಿಲ್ ಕಟ್ಟಲಾಗದವರ ಸಂಖ್ಯೆ ಬಹಳವಿದೆ.
  • ಹಿರಿಯ ನಾಗರಿಕರು ಕಸದ ಡಬ್ಬದಲ್ಲಿ ತಿಂದು ಬಿಟ್ಟಿರುವ ತಿನ್ನುವ ಪದಾರ್ಥಗಳು ಏನಾದರೂ ಸಿಗುತ್ತದೆಯೇ? ಎಂದು ಹುಡಕುವುದು ಕೂಡ ಸಾಮಾನ್ಯ ದೃಶ್ಯ .
  • ಮನೆಯಿಲ್ಲದವರು ಅಥವಾ ಹೋಂ ಲೆಸ್ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಯಲ್ಲಿ , ಪಾರ್ಕ್ಗಳಲ್ಲಿ ಮತ್ತು ಬ್ಯಾಂಕಿನ ಎಟಿಎಂ ಗಳಲ್ಲಿ ಮುದುಡಿ ಮಲಗುವರ ಸಂಖ್ಯೆ ಕೂಡ ಹೆಚ್ಚಾಗಿದೆ. ಮೆಟ್ರೋ, ರೈಲು ಮತ್ತು ಪ್ರವಾಸಿ ತಾಣಗಳ ಬಳಿ ಭಿಕ್ಷೆ ಬೇಡುವರ ಸಂಖ್ಯೆ ಹೆಚ್ಚಾಗಿದೆ.
  • ಪಿಕ್ ಪ್ಯಾಕೆಟ್ ನಿಂದ ಹಿಡಿದು ಇತರ ಕಳ್ಳತನಗಳು ಹೆಚ್ಚಾಗಿವೆ. ಸುಖ ಶಾಂತಿಯಿಂದ ಇದ್ದ ಸಮಾಜದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದೆ .
  • ನಾಳಿನ ಬಗ್ಗೆಯ ಭರವಸೆ ಇಲ್ಲದೆ ಯುವಜನತೆ ಇಂದಿಗೂ ಕಾಲ ಕಳೆಯಲು ಏನೋ ಒಂದು ಕೆಲಸ ಎನ್ನುವಂತೆ ಇದ್ದಾರೆ. ಇದು ಅವರನ್ನ ಸಿಗರೇಟು, ಮಾದಕ ದ್ರವ್ಯಗಳ ವ್ಯಸನಕ್ಕೆ ದೂಡುತ್ತಿವೆ.

ಕೊನೆಮಾತು: ಅಸ್ಥಿರತೆಯೊಂದೇ ಇಂದಿನ ದಿನದಲ್ಲಿ ಸ್ಥಿರವಾಗಿರುವುದು ಎನ್ನುವ ಕಾಲಘಟ್ಟವನ್ನ ನಾವು ಪ್ರವೇಶಿದ್ದೇವೆ. ಜಾಣ್ಮೆ, ತಾಳ್ಮೆ, ನಿರಂತರ ಕಲಿಕೆ, ಹೊಂದಾವಣಿಕೆ ನಮ್ಮ ಮಂತ್ರವಾಗಿದ್ದರೆ ಉಳಿವು-ಗೆಲುವು ನಮ್ಮದಾಗಿರುತ್ತದೆ.  

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com