ಡಿರೈವೆಟಿವ್ಸ್ ಅಂದರೆ ಏನು-ಎತ್ತ? ಮಾಹಿತಿಯತ್ತ ಇರಲಿ ಚಿತ್ತ! (ಹಣಕ್ಲಾಸು)

ಹಣಕ್ಲಾಸು-358ರಂಗಸ್ವಾಮಿ ಮೂನಕನಹಳ್ಳಿ
ಡಿರೈವೆಟಿವ್ಸ್
ಡಿರೈವೆಟಿವ್ಸ್
Updated on

ಡಿರೈವೆಟಿವ್ಸ್ ಎನ್ನುವುದು ಒಂದು ಒಪ್ಪಂದ. ಇಲ್ಲಿ ಈಕ್ವಿಟಿ, ಕರೆನ್ಸಿ ಅಥವಾ ಕಮಾಡಿಟಿ ಅಥವಾ ಬಡ್ಡಿದರವನ್ನ ಅಥವಾ ಇನ್ನಿತರೇ ಯಾವುದಾದರೂ ಫೈನಾನ್ಸಿಯಲ್ ಅಸೆಟ್ನನ್ನ ಆಧಾರವಾಗಿ ಇಡಲಾಗುತ್ತದೆ. ಇವುಗಳು ಮಾರುಕಟ್ಟೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದರ ಮೇಲೆ ಒಪ್ಪಂದ ಮೌಲ್ಯವನ್ನ ನಿರ್ಧಾರ ಮಾಡಲಾಗುತ್ತದೆ. 

ಅಂದರೆ ಗಮನಿಸಿ ಯಾವ ಅಸೆಟ್ನನ್ನ ಆಧಾರವಾಗಿ ಇಟ್ಟು ಕೊಂಡ ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ ಆ ಅಸೆಟ್ ಮಾರುಕಟ್ಟೆಯಲ್ಲಿ ಕುಸಿತ ಕಂಡರೆ ಒಪ್ಪಂದದ ಮೌಲ್ಯ ಕೂಡ ಕುಸಿಯುತ್ತದೆ, ಹಾಗೆಯೇ ಅದು ಚೆನ್ನಾಗಿ ಕಾರ್ಯನಿರ್ವಹಿಸಿದರೆ ಏರಿಕೆಯನ್ನ ಕಾಣುತ್ತದೆ. ಸರಳವಾಗಿ ಹೇಳಬೇಕೆಂದರೆ ಮಾರುಕಟ್ಟೆಯಲ್ಲಿ ಆಧಾರವಾಗಿಟ್ಟು ಕೊಂಡಿರುವ ಫೈನಾನ್ಸಿಯಲ್ ಅಸೆಟ್ ನಿರ್ವಹಣೆಗೆ ಅನುಗುಣವಾಗಿ ಒಪ್ಪಂದದ ಮೌಲ್ಯ ಕೂಡ ಬದಲಾವಣೆ ಕಾಣುತ್ತದೆ.

ಡಿರೈವೆಟಿವ್ಸ್ ಒಂದು ಫೈನಾನ್ಸಿಯಲ್ ಪ್ರಾಡಕ್ಟ್ ಆಗಿ ಮಾರುಕಟ್ಟೆಗೆ ಬಂದಾಗ ಇದು ಹೆಡ್ಜಿಂಗ್ ತರಹ ಬಳಸಲ್ಪಡುತ್ತಿತ್ತು. ಆದರೆ ಇವತ್ತಿಗೆ ಇದು ಸ್ಪೆಕ್ಯುಲೇಷನ್ ಅಥವಾ ಜೂಜಾಟ, ಊಹಾಪೋಹವಾಗಿ ಮಾರ್ಪಾಟಾಗಿದೆ. ಇಲ್ಲಿ ಹಣ ಹೂಡುವ ಮೊದಲಿಗೆ ಒಂದು ಎಚ್ಚರಿಕೆಯ ಮಾತನ್ನ ಹೇಳಬೇಕಾಗುತ್ತದೆ. ಇಲ್ಲಿನ ಹೂಡಿಕೆ ಅತ್ಯಂತ ಅಪಾಯಕಾರಿ. ಒಂದು ಸಣ್ಣ ತಪ್ಪು ಮೂಲಧನವನ್ನ ಮುಳುಗಿಸುವುದರ ಜೊತೆಗೆ ಇನ್ನಷ್ಟು ಹೆಚ್ಚಿನ ನಷ್ಟವನ್ನ ಕೂಡ ಉಂಟು ಮಾಡುವಂತಿರುತ್ತವೆ. ಹೀಗಾಗಿ ಇದರಲ್ಲಿನ ಪೂರ್ಣ ತಿಳುವಳಿಕೆ ಇಲ್ಲದೆ ಇಲ್ಲಿ ಹಣವನ್ನ ಹೂಡಬಾರದು. ಮುಂದಿನ ಪುಟಗಳಲ್ಲಿ ಈ ಮಾರುಕಟ್ಟೆಗೆ ಸಂಬಂಧಿಸಿದ ವಿಷಯಗಳನ್ನ ಹೇಳುವ ಪ್ರಯತ್ನವಿದೆ. ಆದರೆ ಅವುಗಳನ್ನ ಓದುವುದರಿಂದ ಈ  ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಜ್ಞಾನ ಬರುತ್ತದೆ ಎನ್ನುವಂತಿಲ್ಲ. ಇಲ್ಲಿನ ಹೂಡಿಕೆ ಎಲ್ಲರಿಗೂ ಅಲ್ಲ. ಕ್ಯಾಶ್ ಮಾರುಕಟ್ಟೆಯಲ್ಲಿನ ಹೂಡಿಕೆ ಇಲ್ಲಿನ ಹೂಡಿಕೆಗಿಂತ ಹೆಚ್ಚು ಸುರಕ್ಷಿತ.

ಇದು ಅಪಾಯಕಾರಿ ಹೌದು, ಆದರೆ ಈ ಮಾರುಕಟ್ಟೆಯಿಂದ ಕೂಡ ಒಂದಷ್ಟು ಪ್ರಯೋಜವಿದೆ

ಅಪಾಯದ ನಿರ್ವಹಣೆ: ಕೆಲವರಿಗೆ ಅಪಾಯ ತೆಗೆದುಕೊಳ್ಳುವ ಕ್ಷಮತೆ ಮತ್ತು ಇಚ್ಛೆ ಎರಡೂ ಇರುವುದಿಲ್ಲ, ಕೆಲವರಿಗೆ ಎರಡೂ ಇರುತ್ತದೆ. ಹೀಗಾಗಿ ಅಪಾಯ ಬೇಡದವರು, ಅಪಾಯ ತೆಗೆದುಕೊಳ್ಳುವ ಮನಸುಳ್ಳವರಿಗೆ ವರ್ಗಾವಣೆ ಮಾಡಲು ಇದು ಸಹಾಯಕವಾಗಿದೆ.

ಬೆಲೆ ಆವಿಷ್ಕಾರ: ಇಲ್ಲಿನ ಫ್ಯೂಚರ್ ಮಾರುಕಟ್ಟೆಯಲ್ಲಿ ನಿರ್ಧಾರವಾಗುವ ಬೆಲೆಗಳು ಹೆಚ್ಚು ಕಡಿಮೆ ನಿಖರವಾಗಿರುತ್ತದೆ. ಇದು ಸಂಸ್ಥೆಯ ಸೆಕ್ಯುರಿಟೀಸ್ ಬೆಲೆ ನಿರ್ಧಾರಕ್ಕೂ, ಇತರ ನಿರ್ಧಾರಗಳಿಗೂ ಬಳಸಿಕೊಳ್ಳಬಹುದು.

ಇತರೆ ಕಾರ್ಯಗಳ ಲಾಭ: ಡಿರೈವೆಟಿವ್ ಮಾರುಕಟ್ಟೆಯಿಂದ ಅಪರೇಷನಲ್ ಬೆನಿಫಿಟ್ ಗಳು ಸಿಗುತ್ತವೆ. ಬೇರೆ ಮಾರುಕಟ್ಟೆಯಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಲಿಕ್ವಿಡಿಟಿ ಇಲ್ಲಿ ಸಿಗುತ್ತದೆ. ಕಡಿಮೆ ಟ್ರಾನ್ಸಾಕ್ಷನ್ ಕಾಸ್ಟ್, ಶಾರ್ಟ್ ಸೆಲ್ಲಿಂಗ್ ಅವಕಾಶ ಕೂಡ ಇರುತ್ತದೆ.

ಮೇಲೆ ಹೇಳಿರುವ ಎಲ್ಲಾ ಲಾಭಗಳು, ಹಲವರಿಗೆ ನಷ್ಟವನ್ನ ಉಂಟು ಕೂಡ ಮಾಡಬಲ್ಲವು. ಇದನ್ನ ಹೂಡಿಕೆದಾರ ತನ್ನ ಉಪಯೋಗಕ್ಕೆ ಹೇಗೆ ಬಳಸಿಕೊಳ್ಳಬೇಕು ಎನ್ನುವ ವಿಷಯ ಜ್ಞಾನ ಇಲ್ಲಿ ಬಹಳ ಮುಖ್ಯವಾಗುತ್ತದೆ.

ಡಿರೈವೆಟಿವ್ಸ್ ನಲ್ಲಿ ಕೂಡ ಹಲವಾರು ವಿಧಗಳಿವೆ. ಅವುಗಳು ಹೀಗಿವೆ:

ಫಾರ್ವರ್ಡ್ಸ್: ಇದೊಂದು ಖಾಸಗಿ ಮತ್ತು ಕಸ್ಟಮೈಸ್ಡ್ ಒಪ್ಪಂದ. ಇಂತಹ ಒಪ್ಪಂದ ಎರಡು ಎಂಟಿಟಿಗಳ ನಡುವೆ ಆಗಿರುತ್ತದೆ, ಮತ್ತು ಇಂತಹ ಒಪ್ಪಂದದ ಸೆಟಲ್ಮೆಂಟ್ ಭವಿಷ್ಯದ ನಿಗದಿತ ದಿನದಲ್ಲಿ ಒಪ್ಪಂದದ ಸಮಯದಲ್ಲಿ ಸಮಯದಲ್ಲಿ ಒಪ್ಪಿಕೊಂಡ ಬೆಲೆಯ ಪ್ರಕಾರವಾಗುತ್ತದೆ.

ಫ್ಯೂಚರ್ಸ್: ಇದು ಕೂಡ ಮುಂದಿನ ದಿನಾಂಕದಲ್ಲಿ ಸೂಚಿತವಾಗಿರುವ ನಿಗದಿತ ಮೌಲ್ಯದ ಷೇರನ್ನ ಖರೀದಿಸುವ ಒಪ್ಪಂದ. ಹೀಗಾಗಿ ಇದು ಒಂದು ರೀತಿಯ ಫಾರ್ವರ್ಡ್ ಒಪ್ಪಂದ ಎನ್ನಬಹುದು. ಇದರಲ್ಲಿ ಕೂಡ ಖರೀದಿದಾರ ಷೇರಿನ ಮಾಲೀಕತ್ವ ಪಡೆಯುವುದಿಲ್ಲ. ಹೀಗಾಗಿ ಎಂದೆಂದಿಗೂ ಡಿವಿಡೆಂಡ್ ಸಿಗುವುದಿಲ್ಲ. ಇಲ್ಲಿ ಕನಿಷ್ಠ ಇಷ್ಟು ಎಂದು ಸಂಖ್ಯೆ ನಿಗದಿಯಾಗಿರುತ್ತದೆ. ಅದಕ್ಕೆ ಕಡಿಮೆ ಷೇರನ್ನ ಕೊಳ್ಳುವ ಹಾಗಿಲ್ಲ. ಮೂರು ತಿಂಗಳ ಒಳಗೆ ಒಪ್ಪಂದದ ಪ್ರಕಾರ ಕೊಳ್ಳುವ /ಮಾರುವ ಅಥವಾ ಅದನ್ನ ಮಾಡದೆ ನಷ್ಟ ಅಥವಾ ಲಾಭವನ್ನ ಮಾತ್ರ ಭರಿಸುವ ಅವಕಾಶವಿರುತ್ತದೆ.

ಆಪ್ಷನ್: ಇದು ಕೂಡ ಒಂದು ಒಪ್ಪಂದ. ಇದರ ಪ್ರಕಾರ ನಿಗದಿ ಪಡಿಸಿದ ಸಮಯದಲ್ಲಿ ಷೇರನ್ನ ಕೊಳ್ಳುವ ಅಥವಾ ಮಾರುವ ಅಧಿಕಾರವನ್ನ ನೀಡುತ್ತದೆ. ಆದರೆ ಕೊಳ್ಳಲೇ ಬೇಕು ಅಥವಾ ಮಾರಲೇಬೇಕು ಎನ್ನುವ ಬಾಧ್ಯತೆ ಇರುವುದಿಲ್ಲ. ಆದರೆ ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುವುದರ ಮೇಲೆ ಕೂಡ ಇದು ನಿರ್ಧಾರವಾಗುತ್ತದೆ. ಆಪ್ಷನ್ ಖರೀದಿ ಮಾಡುವ ದಿನದಂದು ನಿರ್ದಿಷ್ಟ ಮೊತ್ತವನ್ನ ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಸ್ಟ್ರೈಕ್ ರೇಟ್ ಎನ್ನುತ್ತಾರೆ. ನಿಗದಿತ ದಿನಾಂಕದ ದಿನ ಖರೀದಿದಾರ ನಿಜಕ್ಕೂ ಖರೀದಿ ಮಾಡಲು ಬಯಸಿದರೆ ಅದಕ್ಕೆ 'ಕಾಲ್ ಆಪ್ಷನ್ ' ಎನ್ನುತ್ತಾರೆ. ಅದೇ ಮಾರಟಗಾರ ಇದನ್ನ ಕೊಂಡು ಕೊಳ್ಳುವಂತೆ ಖರೀದಿದಾರನಿಗೆ ತಾಕೀತು ಮಾಡಿದರೆ ಅದನ್ನ 'ಪುಟ್ ಆಪ್ಷನ್ ' ಎನ್ನುತ್ತಾರೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಇಲ್ಲಿ ಷೇರಿನ ಮಾಲೀಕತ್ವ ಖರೀದಿದಾರನ ಬಳಿ ತಕ್ಷಣ ಇರುವುದಿಲ್ಲ. ನಿಗದಿತ ಸಮಯದ ನಂತರ ಕೂಡ ಮಾಲೀಕತ್ವ ಹೊಂದುವುದು ಅಥವಾ ಬಿಡುವುದು ಕೂಡ ಒಪ್ಪಂದದ ಮೇಲೆ ನಿಗದಿಯಾಗುತ್ತದೆ.

ಸ್ವಾಪ್ಸ್: ಇಲ್ಲಿನ ಒಪ್ಪಂದದಲ್ಲಿ ಇಬ್ಬರು ಅಥವಾ ಸಂಸ್ಥೆಗಳು ತಮ್ಮ ಕೊನೆಯ ಹಣಕಾಸು ಭಾದ್ಯತೆಗಳನ್ನ ಅದಲು ಬದಲು ಮಾಡಿಕೊಳ್ಳುತ್ತಾರೆ. ಹೀಗೆ ತಮ್ಮ ಫೈನಾನ್ಸಿಯಲ್ ಅಬ್ಲ್ಗೇಷನ್ ಎಕ್ಸ್ಚೇಂಜ್ ಮಾಡಿಕೊಳ್ಳುವುದಕ್ಕೆ ಸ್ವಾಪ್ ಎನ್ನಲಾಗುತ್ತದೆ. ಕ್ಯಾಶ್ ಫ್ಲೋ ಕಾಲ್ಪನಿಕ ಅಂದರೆ ನೋಷನಲ್ ಆಗಿರುತ್ತದೆ. ಇಬ್ಬರು ಪಾರ್ಟಿಗಳು ಒಂದು ಮೊತ್ತಕ್ಕೆ ಒಪ್ಪಿಗೆಯನ್ನ ಸೂಚಿಸುತ್ತಾರೆ , ಆದರೆ ಆ ಹಣ ನಿಜವಾಗಿ ವರ್ಗಾವಣೆ ಆಗಿರುವುದಿಲ್ಲ. ಈ ಮೊತ್ತ ನಿಗದಿಯಾಗಿರುತ್ತದೆ, ಆದರೆ ಮೊತ್ತದ ಮೇಲಿನ ಬಡ್ಡಿ ಮಾತ್ರ ಏರುಪೇರಾಗುತ್ತಾ ಇರುತ್ತದೆ. ಒಂದು ನಿಗದಿತ ಬಡ್ಡಿ ದರದ ಆಜುಬಾಜು ಈ ಬದಲಾವಣೆಗಳು ಆಗುತ್ತಿರುತ್ತವೆ. ಇಂಟರೆಸ್ಟ್ ರೇಟ್ ಸ್ವಾಪ್ ಗಳು ಅತಿ ಸಾಮಾನ್ಯ ಎನ್ನಬಹುದು. ಇದು ಮಾರುಕಟ್ಟೆಯಲ್ಲಿ ಟ್ರೇಡ್ ಆಗುವುದಿಲ್ಲ. ಇದೊಂದು ಓವರ್ ದಿ ಕೌಂಟರ್ ಒಪ್ಪಂದವಾಗಿದೆ.

ಭಾರತದಲ್ಲಿ ಡಿರೈವೆಟಿವ್ಸ್ ಮಾರುಕಟ್ಟೆ;

ಭಾರತದಲ್ಲಿ ಡಿರೈವೆಟಿವ್ಸ್ ಟ್ರೇಡಿಂಗ್ ಶುರುವಾಗಿದ್ದು ಜೂನ್ ೨೦೦೦ ನೇ ಇಸವಿಯಲ್ಲಿ. ಸೆಬಿ ಇಂಡೆಕ್ಸ್ ಫ್ಯೂಚರ್ ಕಾಂಟ್ರಾಕ್ಟ್ ಗಳಿಗೆ ಅನುಮತಿ ನೀಡುತ್ತದೆ, ಅದು ಸೆನ್ಸೆಕ್ಸ್ ಮತ್ತು ನಿಫ್ಟಿ ಆಧಾರದ ಮೇಲೆ, ಹೀಗಾಗಿ BSE ಮತ್ತು NSE ಈ ಪ್ರಾಡಕ್ಟ್ ಗಳನ್ನ ಶುರು ಮಾಡುತ್ತದೆ. ೨೦೦೧ ರಲ್ಲಿ ಇಂಡೆಕ್ಸ್ ಅಪ್ಷನ್ ಗೆ ಅನುಮತಿ ದೊರೆಯುತ್ತದೆ. ೨೦೦೧ ರ ನವೆಂಬರ್ ವೇಳೆಗೆ ಇಂಡಿವಿಜುಯಲ್ ಸ್ಟಾಕ್ ಫ್ಯೂಚರ್ ಗೆ ಕೂಡ ಅನುಮತಿ ಸಿಗುತ್ತದೆ. ಜಗತ್ತಿನ ಕೆಲವೇ ಕೆಲವು ಮಾರುಕಟ್ಟೆಯಲ್ಲಿ ಈ ಒಂದು ಆಯ್ಕೆಯಿದೆ. ಈ ನಿಟ್ಟಿನಲ್ಲಿ ಭಾರತ ಇಂಡಿವಿಜುಯಲ್ ಸ್ಟಾಕ್ ಫ್ಯೂಚರ್ ನಲ್ಲಿ ಟ್ರೇಡ್ ಮಾಡುತ್ತಿರುವ ಬೆರಳೆಣಿಕೆ ದೇಶಗಳಲ್ಲಿ ಒಂದು ಎನ್ನಬಹುದು.

ಜಗತ್ತಿನ ಎಲ್ಲಾ ಮಾರುಕಟ್ಟೆಯಂತೆ ಭಾರತದಲ್ಲಿ ಕೂಡ ಕ್ಯಾಶ್ ಮಾರುಕಟ್ಟೆ ಅಥವಾ ಈಕ್ವಿಟಿ ಮಾರುಕಟ್ಟೆಗಿಂತ ಅತಿ ಹೆಚ್ಚು ಟ್ರೇಡ್ ಆಗುವುದು ಡಿರೈವೆಟಿವ್ಸ್ ಸಿಗ್ಮೆಂಟ್ ನಲ್ಲಿ ಎನ್ನುವುದು ಅಂಕಿಅಂಶಗಳಿಂದ ಸಾಬೀತಾಗಿದೆ. ಈ ಮಾರುಕಟ್ಟೆ ಪೂರ್ಣ ಆಟೋಮೇಟೆಡ್ ಆಗಿ ರಚಿತವಾಗಿದೆ. ಆದೇಶಗಳು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಆಟೋಮೇಟೆಡ್ ಆರ್ಡರ್ ಗಳ ಮೂಲಕ ಕಾರ್ಯಗತಗೊಳ್ಳುತ್ತವೆ. ಕ್ಲಿಯರಿಂಗ್ ಮತ್ತು ಸೆಟಲ್ಮೆಂಟ್ ಗಳು ಕ್ಲಿಯರಿಂಗ್ ಹೌಸ್ ಅಥವಾ ಸ್ಟಾಕ್ ಎಕ್ಸ್ಚೇಂಜ್ ಮೂಲಕ ಆಗುತ್ತದೆ. ಸೆಬಿಯ ಅನುಮೋದನೆ, ನಿಗರಾಣಿಯ ಅಡಿಯಲ್ಲಿ ಇವೆಲ್ಲ ನಡೆಯುತ್ತವೆ.

ಭಾರತದಲ್ಲಿ ಫ್ಯೂಚರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಾಡಕ್ಟ್ ಗಳು ಹೀಗಿವೆ:

ಮಾರುಕಟ್ಟೆಯಲ್ಲಿನ ಏರುಪೇರುಗಳ ವಿರುದ್ಧ ಹೆಡ್ಜಿಂಗ್ ಅಥವಾ ಇನ್ಶೂರೆನ್ಸ್ ರೀತಿಯಲ್ಲಿ ಫ್ಯೂಚರ್ ಕಾಂಟ್ರಾಕ್ಟ್ ಗಳನ್ನ ಬಳಸಲಾಗುತ್ತದೆ. ಕೆಲವು ಮಧ್ಯವರ್ತಿಗಳು ಇದನ್ನ ಲಾಭಕ್ಕಾಗಿ ಸ್ಪೆಕ್ಯುಲೇಟ್ ಮಾಡುತ್ತಾರೆ. ಈ ರೀತಿಯ ಫ್ಯೂಚರ್ ಒಪ್ಪಂದಗಳಲ್ಲಿ ಕೂಡ ಹಲವು ರೀತಿಯಿದೆ.
ಫೈನಾನ್ಸಿಯಲ್ ಫ್ಯೂಚರ್ಸ್: ಇವುಗಳಲ್ಲಿ ಕೂಡ ಹಲವು ವಿಧಗಳಿವೆ :

  • ಸ್ಟಾಕ್ ಫ್ಯೂಚರ್ಸ್
  • ಇಂಡೆಕ್ಸ್ ಫ್ಯೂಚರ್ಸ್
  • ಕರೆನ್ಸಿ ಫ್ಯೂಚರ್ಸ್.
  • ಇಂಟರೆಸ್ಟ್ ಫ್ಯೂಚರ್ಸ್

ಕಮಾಡಿಟಿ ಫ್ಯೂಚರ್ಸ್: ಕಮಾಡಿಟಿ ಫ್ಯೂಚರ್ ಎನ್ನುವುದು ಕೂಡ ಒಂದು ಅಗ್ರಿಮೆಂಟ್, ಇಲ್ಲಿ ಭವಿಷ್ಯದ ಒಂದು ದಿನದವನ್ನ ನಿರ್ಧರಿಸಲಾಗುತ್ತದೆ, ಆ ದಿನ ಮೊದಲೇ ನಿರ್ಧಾರವಾಗಿರುವ ಕಮಾಡಿಟಿಯನ್ನ, ನಿರ್ಧಾರಿತ ಬೆಲೆಗೆ ಟ್ರೇಡ್ ಮಾಡಲಾಗುತ್ತದೆ. ವಸ್ತುಗಳ ಬೆಲೆಯಲ್ಲಿ ಏರುಪೇರಾಗುವುದು ಸಹಜ, ಹೀಗಾಗಿ ಒಂದು ಪದಾರ್ಥದ ಬೆಲೆಯನ್ನ ಭವಿಷ್ಯದಲ್ಲಿ ಹೆಚ್ಚಾಗಬಹುದಾದ ಸಂಭಾವ್ಯತೆ ಇದ್ದಾಗ ಅದನ್ನ ಇಂದಿನ ಬೆಲೆಗೆ ಕೊಳ್ಳುವ ಅಥವಾ ಮಾರುವ ಒಪ್ಪಂದಕ್ಕೆ ಕಮಾಡಿಟಿ ಫ್ಯೂಚರ್ ಎನ್ನಲಾಗುತ್ತದೆ. ವಸ್ತುಗಳ ಮೇಲಿನ ಫ್ಯೂಚರ್ ಕಾಂಟ್ರಾಕ್ ಗಳಲ್ಲಿ ಕೂಡ ಹಲವಾರು ಪದಾರ್ಥಗಳನ್ನ ಬಳಸಿಕೊಂಡು ಒಪ್ಪಂದ ಮಾಡಿಕೊಳ್ಳಬಹುದು, ಅವುಗಳು ಹೀಗಿವೆ:

  • ಕೃಷಿ ಉತ್ಪನ್ನಗಳು .
  • ಬಂಗಾರ - ಗೋಲ್ಡ್
  • ಎಣ್ಣೆ ಮತ್ತು ಎಣ್ಣೆ ಪದಾರ್ಥಗಳು, ಎಣ್ಣೆ ಬೀಜಗಳು
  • ಹತ್ತಿ - ಕಾಟನ್

 ಹೀಗೆ ಇನ್ನಷ್ಟು ಪದಾರ್ಥಗಳನ್ನ ಆಧಾರವಾಗಿಟ್ಟು ಕೊಂಡು ಒಪ್ಪಂದಗಳನ್ನ ಮಾಡಿಕೊಳ್ಳಲಾಗುತ್ತದೆ

ಕೊನೆಮಾತು: ಷೇರುಮಾರುಕಟ್ಟೆ ಎನ್ನುವುದು ಸಮುದ್ರವಿದ್ದಂತೆ, ಯಾವುದೋ ಒಂದು ಜಾಗದಲ್ಲಿ ಎರಡು ಸುತ್ತು ಈಜಾಡಿ ನನಗೆಲ್ಲಾ ಗೊತ್ತು ಎನ್ನುವಂತಿಲ್ಲ, ಆ ನಿಟ್ಟಿನಲ್ಲಿ ಇಲ್ಲಿ ನೀಡಿರುವ ಮಾಹಿತಿಯನ್ನ ಮೂಲವಾಗಿ ಇಟ್ಟು ಕೊಂಡು ಹೆಚ್ಚಿನ ಕಲಿಕೆ ಅವಶ್ಯಕವಾಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com