ಷೇರು ಮಾರುಕಟ್ಟೆ: ಅಲ್ಗೊ ಟ್ರೇಡಿಂಗ್ ಎಂದರೇನು? ನೀವು ತಿಳಿಯಬೇಕಾದ ಅಂಶಗಳು...(ಹಣಕ್ಲಾಸು)

ಹಣಕ್ಲಾಸು-355ರಂಗಸ್ವಾಮಿ ಮೂನಕನಹಳ್ಳಿ
ಷೇರು ಮಾರುಕಟ್ಟೆ- ಆಗ್ಲೋ ಟ್ರೇಡಿಂಗ್ (ಸಾಂಕೇತಿಕ ಚಿತ್ರ)
ಷೇರು ಮಾರುಕಟ್ಟೆ- ಆಗ್ಲೋ ಟ್ರೇಡಿಂಗ್ (ಸಾಂಕೇತಿಕ ಚಿತ್ರ)

ಷೇರು ಮಾರುಕಟ್ಟೆಯನ್ನ ಪ್ರವೇಶಿಸದೆ ಹೆಚ್ಚು ಸಮಯ ಕಳೆಯುವುದು ಕೂಡ ಅವಕಾಶವನ್ನ ಕಳೆದುಕೊಂಡಂತೆ. ಅಂದ ಮಾತ್ರಕ್ಕೆ ಎಲ್ಲರೂ ಅಂದುಕೊಂಡ ತಕ್ಷಣ ಷೇರು ಮಾರುಕಟ್ಟೆ ಪ್ರವೇಶಿಸಬಾರದು ಕೂಡ, ಏಕೆಂದರೆ ಸಿದ್ಧತೆ ಇಲ್ಲದೆ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಹೆಚ್ಚಿನ ಗೆಲುವು ಅಥವಾ ಯಶಸ್ಸು ಕಾಣಲು ಖಂಡಿತ ಸಾಧ್ಯವಿಲ್ಲ. ಬಹಳಷ್ಟು ಜನರಿಗೆ ಷೇರು ಮಾರುಕಟ್ಟೆಯ ರೀತಿ ನೀತಿಗಳನ್ನ ಅರಿತುಕೊಳ್ಳುವ ವ್ಯವಧಾನ, ಸಮಯ ಎರಡೂ ಇರುವುದಿಲ್ಲ, ಕೆಲವರಿಗೆ ಸಮಯವಿದ್ದರೂ ಕೂಡ ಇಲ್ಲಿನ ಕಾರ್ಯ ವೈಖರಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಎಲ್ಲವನ್ನೂ ಎಲ್ಲರೂ ಮಾಡಲು ಸಾಧ್ಯವಿಲ್ಲ ಎನ್ನುವುದು ಸರ್ವ ವೇದ್ಯ. ಆ ನಿಟ್ಟಿನಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಬಹಳಷ್ಟು ಸೇವೆಗಳು ಲಭ್ಯವಿದೆ.

ಇವತ್ತು ತಂತ್ರಜ್ಞಾನ ಬಳಕೆ ಮಾಡಿಕೊಳ್ಳದೆ ಇರುವ ಕಾರ್ಯಕ್ಷೇತ್ರವೇ ಇಲ್ಲ ಎನ್ನುವ ಮಟ್ಟಿಗೆ ಅದು ಸರ್ವವ್ಯಾಪಿ. ಷೇರು ಮಾರುಕಟ್ಟೆ ಕೂಡ ತಂತ್ರಜ್ಞಾನವನ್ನ ಅಪ್ಪಿಕೊಂಡಿದೆ. ಹಿಂದೆಲ್ಲಾ ದಿನಗಟ್ಟಲೆ ತಗಲುತ್ತಿದ್ದ ಕೆಲಸಗಳು ಇಂದು ಕ್ಷಣಾರ್ಧದಲ್ಲಿ ಮುಗಿದು ಹೋಗುತ್ತದೆ. ಷೇರು ಮಾರುಕಟ್ಟೆ ಪ್ರವೇಶ ಬಯಸುವವರು ಮತ್ತು ಹೆಚ್ಚಿನ ಸಮಯ ಮತ್ತು ವಿಷಯ ಜ್ಞಾನವನ್ನ ಹೊಂದಿಲ್ಲದವರಿಗೆ ಇಂದು ಅನೇಕ ಆಯ್ಕೆಗಳಿವೆ. ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಕಾಂಬಿನೇಷನ್ ಸೇವೆಗಳನ್ನ ಬಳಸಿಕೊಳ್ಳಬಹುದು.

  • ಅಲ್ಗೊ ಟ್ರೇಡಿಂಗ್.
  • ರೋಬೊ ಅಡ್ವೈಸರಿ
  • ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್.
  • ರಿಜಿಸ್ಟ್ರೇಡ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್.
  • ಮಾರುಕಟ್ಟೆಯಲ್ಲಿ ಲಭ್ಯವಿರುವ ಸಲಹೆಗಾರರು.

ಮಾರುಕಟ್ಟೆಯಲ್ಲಿ ಲಭ್ಯವಿರುವ ಸೇವೆಗಳನ್ನ ಬಳಸಿಕೊಂಡು ಷೇರಿನ ಮೇಲಿನ ಹೂಡಿಕೆಯನ್ನ ಮಾಡಬಹುದು. ವಿಷಯದಲ್ಲಿ ಹೆಚ್ಚಿನ ಪರಿಣಿತಿ ಹೊಂದಿಲ್ಲದೆ ಇದ್ದರೂ, ಇವುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವ ಸಾಮಾನ್ಯ ಜ್ಞಾನ ಹೊಂದಿರುವ ಎಲ್ಲಾ ಸಂಭಾವ್ಯ ಹೂಡಿಕೆದಾರರೂ ಈ ಸೇವೆ ಗಳನ್ನ ಬಳಸಿಕೊಳ್ಳಬಹುದು. ಇವುಗಳನ್ನ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ .

ಅಲ್ಗೊ ಟ್ರೇಡಿಂಗ್ ಎಂದರೇನು? 

ಇದೊಂದು ಲಾಜಿಕಲ್ ಕೋಡ್, ತಂತ್ರಜ್ಞಾನದ ಸಹಾಯದಿಂದ ಹಳೆಯ ಫಲಿತಾಂಶಗಳು, ಡೇಟಾ, ಅದೇ ವಲಯದಲ್ಲಿ ಇರುವ ಪ್ಯಾಟ್ರನ್, ಮಾರುಕಟ್ಟೆಯ ಟ್ರೆಂಡ್ ಇವುಗಳ ಜೊತೆಗೆ ಹೂಡಿಕೆದಾರನ ಅಥವಾ ಅವರ ಹಣಕಾಸು ನಿರ್ವಹಣೆ ಮಾಡುವವರ ಇಚ್ಛೆಯ ಮೇರೆಗೆ ಸೆಟ್ ಮಾಡಿದ ಸೂಚನೆಗಳಿಗೆ ಅನುಗುಣವಾಗಿ ಮನುಷ್ಯನ ಹಸ್ತಕ್ಷೇಪ ಇಲ್ಲದೆ ಕೊಟ್ಟಿರುವ ಸೂಚನೆಗಳ ಪ್ರಕಾರ ಸಾಫ್ಟ್ವೇರ್ ಸಹಾಯದಿಂದ ಮಷೀನ್ ತಾನಾಗೇ ಟ್ರೇಡ್ ಮಾಡುವ ಕ್ರಿಯೆಗೆ ಅಲ್ಗೊ ಟ್ರೇಡಿಂಗ್, ಆಲ್ಗರಿದಮಿಕ್ ಟ್ರೇಡಿಂಗ್, ಆಟೋಮೇಟೆಡ್ ಟ್ರೇಡಿಂಗ್, ಬ್ಲಾಕ್ ಬಾಕ್ಸ್ ಟ್ರೇಡಿಂಗ್ ಎನ್ನುವ ಹೆಸರುಗಳಿಂದ ಕರೆಯಲಾಗುತ್ತದೆ.

ಷೇರು ಮಾರುಕಟ್ಟೆ ಹೈಸ್ಪೀಡ್ ನಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಬಹಳಷ್ಟು ವೇಳೆ ಮನುಷ್ಯ ಕೆಲವೊಂದು ಆದೇಶವನ್ನ ಪಾಲಿಸುವ ವೇಳೆಗೆ ಬೆಲೆ ಬದಲಾವಣೆ ಆಗಿರುವ ಸಾಧ್ಯತೆ ಬಹಳವಿರುತ್ತದೆ. ಹೀಗಾಗಿ ಸಾಫ್ಟ್ವೇರ್ ಸಹಾಯದಿಂದ ಪ್ರಿ ಪ್ರೋಗ್ರಾಮ್ಡ್ ಅಂದರೆ ಮೊದಲೇ ನಿಗದಿ ಪಡಿಸಿರುವ ಆದೇಶಗಳನ್ನ ಪಾಲಿಸುವ ಮೂಲಕ ಟ್ರೇಡ್ ಮಾಡಲಾಗುತ್ತದೆ. ಉದಾಹರಣೆಗೆ ಷೇರಿನ ಕೊಳ್ಳುವ ಅಥವಾ ಮಾರುವ ಬೆಲೆಯನ್ನ ನಾವು ಮೊದಲೇ ಫೀಡ್ ಮಾಡಿ ಇಟ್ಟಿರಬಹುದು, ಮಾರುವ ಅಥವಾ ಕೊಳ್ಳುವ ವೇಳೆಯನ್ನ ನಿಗದಿಪಡಿಸಿ ಇಟ್ಟಿರಬಹುದು, ಇದರ ಜೊತೆಗೆ ಎಷ್ಟು ಸಂಖ್ಯೆಯ ಷೇರುಗಳನ್ನ ಕೊಳ್ಳಬೇಕು ನಾವು ಫೀಡ್ ಮಾಡಬಹುದು. ಇಷ್ಟೇ ಅಲ್ಲದೆ ನಮ್ಮ ಅನುಕೂಲಕ್ಕೆ ತಕ್ಕಹಾಗೆ ಬೇಕಾದ ಸೂಚನೆಯನ್ನ ಪಾಲಿಸುವಂತೆ ಮೊದಲೇ ಪ್ರೋಗ್ರಾಮ್ ಮಾಡಿ ಇಡಬಹುದು, ಇವುಗಳಲ್ಲಿ ಒಂದು ಅಥವಾ ಎರಡು ಅಥವಾ ಹೇಗೆ ಫೀಡ್ ಮಾಡಿರುತ್ತೇವೆ ಅದರ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಬದಲಾವಣೆಯಾದ ತಕ್ಷಣ ಅದು ಟ್ರೇಡ್ ಆಗುತ್ತದೆ.

ಸಾಮಾನ್ಯವಾಗಿ ಇದನ್ನ ದೊಡ್ಡ ವಾಲ್ಯೂಮ್ ಗಳಲ್ಲಿ ಟ್ರೇಡ್ ಮಾಡುವವರು ಬಳಸುತ್ತಾರೆ. ಮ್ಯೂಚುಯಲ್ ಫಂಡ್, ಹೆಡ್ಜ್ ಫಂಡ್, ಇನ್ಶೂರೆನ್ಸ್ ಕಂಪನೀಸ್, ಬ್ಯಾಂಕ್ ಇತರೆ ದೊಡ್ಡ ಸಂಸ್ಥೆಗಳು ಇದನ್ನ ಬಳಸುತ್ತವೆ. ಇದಕ್ಕೆ ಪ್ರಮುಖ ಕಾರಣ ಮಾರುಕಟ್ಟೆಯ ವೇಗಕ್ಕೆ ಮನುಷ್ಯ ಸ್ಪಂದಿಸುವುದು ಬಹಳ ಕಷ್ಟವಾಗುತ್ತದೆ. ಹೀಗಾಗಿ ಇದು ಲೈಟ್ನಿಂಗ್ ಸ್ಪೀಡ್ ನಲ್ಲಿ ಮುಗಿದು ಹೋಗುತ್ತದೆ. ಮನುಷ್ಯನ ಹಸ್ತಕ್ಷೇಪದಲ್ಲಿ ಆಗುವ ನಿಧಾನ, ನಷ್ಟ ಇವುಗಳು ಇದರಿಂದ ತಪ್ಪುತ್ತದೆ.

ಅಲ್ಗೊ ಟ್ರೇಡಿಂಗ್ ಸೂಚನೆಗಳ ಕೆಲವು ಉದಾಹರಣೆ ನೋಡೋಣ:

  1. ABC ಸಂಸ್ಥೆಯ ಷೇರು ಮಧ್ಯಾಹ್ನ ಎರಡು ಗಂಟೆಯೊಳಗೆ  400 ರೂಪಾಯಿಗಿಂತ ಕಡಿಮೆಯಾದರೆ ಆಗ 500 ಷೇರನ್ನ ಖರೀದಿಸು ಎನ್ನುವ ಸೂಚನೆ ನೀಡಲಾಗಿದೆ ಎಂದುಕೊಂಡರೆ, ಆಗ ಆ ದಿನದಲ್ಲಿ ಮಧ್ಯಾಹ್ನ 2 ಗಂಟೆಯೊಳಗೆ ABC ಸಂಸ್ಥೆಯ ಷೇರು 400 ರೂಪಾಯಿಗಿಂತ ಕಡಿಮೆಯಾದರೆ, 500 ಷೇರು ಆಟೋಮ್ಯಾಟಿಕ್ ಖರೀದಿಯಾಗುತ್ತದೆ!. ಒಂದು ಪಕ್ಷ ನೀಡಿರುವ ಸೂಚನೆಯಲ್ಲಿ ಯಾವೊಂದು ಸೂಚನೆ ಸರಿ ಹೊಂದದೆ ಇದ್ದರೆ ಆಗ ಅದು ಷೇರನ್ನ ಕೊಳ್ಳುವುದಿಲ್ಲ. ಉದಾಹರಣೆಗೆ ABC ಸಂಸ್ಥೆಯ ಷೇರು 400 ರೂಪಾಯಿಗಿಂತ ಕಡಿಮೆಯೇನೂ ಆಯ್ತು, ಆದರೆ ಅದು ಆದದ್ದು ಎರಡು ಗಂಟೆ 10 ನಿಮಿಷಕ್ಕೆ ಎಂದುಕೊಳ್ಳಿ ಆಗ ಷೇರು ಖರೀದಿ ಆಗುವುದಿಲ್ಲ, ಏಕೆಂದರೆ ಸೂಚನೆಯಲ್ಲಿ ಹೇಳಿರುವುದು ಎರಡು ಗಂಟೆಯೊಳಗೆ ಎಂದು, ಹೀಗಾಗಿ ಒಂದು ನಿಮಿಷ ಅತ್ತಿತ್ತ ಆದರೂ ಅದು ಪಾಲನೆಯಾಗುವುದಿಲ್ಲ.
  2. ABC ಸಂಸ್ಥೆಯ 100 ಷೇರನ್ನ ದಿನದ ಕೊನೆಯೊಳಗೆ  20 ದಿನದ ಮೂವಿಂಗ್ ಅವೆರೆಜ್ 200ಕ್ಕಿಂತ ಕಡಿಮೆಯಾದರೆ ಮಾರುವ ಸೂಚನೆ. ಹೀಗೆ ನಮಗೆ ಬೇಕಾದ ಪ್ಯಾರಾಮೀಟರ್ ನಾವು ಸೆಟ್ ಮಾಡಬಹುದು. ಆದರೆ ನೆನಪಿರಲಿ ಪ್ಯಾರಾಮೀಟರ್ ಗೆ ಒಂದಿಂಚೂ ಕೂಡ ಇದು ಅತ್ತಿತ್ತ ಮಾಡುವುದಿಲ್ಲ. ಸೂಚನೆಯಲ್ಲಿರುವ ಆದೇಶಗಳು ಸರಿಯಾಗಿ ಹೊಂದಿದರೆ ಮಾತ್ರ ಅದು ಜಾರಿಯಾಗುತ್ತದೆ.

ಅಲ್ಗೊ ಟ್ರೇಡಿಂಗ್ನಲ್ಲಿ ಬಳಸುವ ತಂತ್ರಗಳು ಅಥವಾ ಸ್ಟ್ರಾಟರ್ಜಿ

  1. ಇಂಡೆಕ್ಸ್ ಫಂಡ್ ರಿಬ್ಯಾಲೆನ್ಸಿಂಗ್: ಮಾರುಕಟ್ಟೆಯ ಸೂಚ್ಯಂಕದ ಜೊತೆಗೆ ಸದಾ ಸಮಯಕ್ಕೆ ತಕ್ಕಂತೆ ಸೆಕ್ಯುರಿಟೀಸ್ಗಳ ವೆಯ್ಟ್ ಗಳನ್ನ ಹೊಂದಿಸುವುದಕ್ಕೆ ರಿಬ್ಯಾಲೆನ್ಸಿಂಗ್ ಎನ್ನಲಾಗುತ್ತದೆ. ಕೆಲವು ಬೇಸ್ ಪಾಯಿಂಟ್ಗಳಲ್ಲಿ ಆಗುವ ವ್ಯತ್ಯಾಸಗಳಲ್ಲಿ ಒಂದಷ್ಟು ಲಾಭ ಮಾಡಿಕೊಳ್ಳಲು ಅಲ್ಗೊ ಟ್ರೇಡರ್ ಗಳಿಗೆ ಇದು ಅವಕಾಶವನ್ನ ಮಾಡಿಕೊಡುತ್ತದೆ.
  2. ಟ್ರೆಂಡ್ಗಳ ಹಿಂದಿನ ಓಟ/ Trend following: ಇದು Algo Trader ಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಉಪಯೋಗಿಸುವ ಸ್ಟ್ರಾಟರ್ಜಿ. ಇದರಲ್ಲಿ moving average price movement, Channel Breakout ಗಳನ್ನ ಉಪಯೋಗಿಸಿಕೊಂಡು ಒಂದಷ್ಟು ಸೂಚನೆಗಳನ್ನ ತಯಾರು ಮಾಡಿ ಅದನ್ನ ಸಾಫ್ಟ್ವೇರ್ ನಲ್ಲಿ ತುಂಬಿಸಿ ಇಡಲಾಗುತ್ತದೆ. ಮಾರುಕಟ್ಟೆ ಟ್ರೆಂಡ್ ಶುರುವಾದ ತಕ್ಷಣ ಇಲ್ಲಿನ ಸೂಚನೆಗೆ ತಕ್ಕಂತೆ ಇದ್ದರೆ ಆಗ ತಕ್ಷಣ ಅದು ಕಾರ್ಯರೂಪಕ್ಕೆ ಬರುತ್ತದೆ.
  3. ಆರ್ಬಿಟ್ರೇಜ್ (arbitrage): ಬೆಲೆ ಕಡಿಮೆ ಇರುವ ಸ್ಟಾಕ್ಕನ್ನ ಒಂದು ಮಾರುಕಟ್ಟೆಯಿಂದ ಕೊಂಡು ಅದನ್ನ ಬೆಲೆ ಜಾಸ್ತಿ ಬೆಲೆಯಿರುವ ಇನ್ನೊಂದು ಮಾರುಕಟ್ಟೆಯಲ್ಲಿ ಮಾರುವುದು, ಅಲ್ಗೊ ಟ್ರೇಡಿಂಗ್ ಮಾಹಿತಿಗಳನ್ನ ಲಿವರೇಜ್ ಮಾಡುವ ಮೂಲಕ ಯಾವ ಮಾರುಕಟ್ಟೆಯಲ್ಲಿ ಕಡಿಮೆಯಿದೆ, ಯಾವ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ ಎನ್ನುವುದನ್ನ ಕಂಡುಕೊಂಡು ಅದನ್ನ ಹೆಚ್ಚು ಲಾಭಗಳಿಸಲು ಬಳಸುತ್ತಾರೆ.
  4. ಮ್ಯಾಥಮೆಟಿಕಲ್ ಮಾಡೆಲ್: ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತ ಅತಿ ಸಾಮಾನ್ಯ. ಈ ಬೆಲೆಗಳ ಏರಿಳಿತವನ್ನ ಕಂಡುಕೊಳ್ಳಲು ಈಗಾಗಲೇ ಸಿದ್ಧವಾಗಿರುವ ಗಣಿತದ ಲೆಕ್ಕಾಚಾರವನ್ನ ಬಳಸಿಕೊಂಡು ಅದನ್ನ ಟ್ರೇಡಿಂಗ್ ಗೆ ಬಳಸಿಕೊಳ್ಳಬಹುದು. ಅಲ್ಗೊ ಟ್ರೇಡಿಂಗ್ ಈ ಮಾಡೆಲ್ ಕೂಡ ಬಳಕೆ ಮಾಡಿಕೊಳ್ಳುತ್ತದೆ.
  5. ಮೀನ್ ರಿವರ್ಶನ್: ಕೊಳ್ಳಲು ಅಥವಾ ಮಾರಲು ಬಯಸಿದ asset ನ ತಾತ್ಕಾಲಿಕ ಬೆಲೆ ಏರಿಕೆ ಮತ್ತು ಇಳಿಕೆಯನ್ನ ಇದು ಪ್ರೋತ್ಸಾಹಿಸುತ್ತದೆ, ಯಾವ ಕ್ಷಣದಲ್ಲೂ ಅದು ಮೀನ್ ವ್ಯಾಲ್ಯೂ ಅಂದರೆ ಅವೆರೆಜ್ ವ್ಯಾಲ್ಯೂಗೆ ಬರಬಹುದು ಎನ್ನುವುದನ್ನ ಕೂಡ ಗಣನೆಗೆ ತೆಗೆದುಕೊಳ್ಳುತ್ತದೆ. ಹೂಡಿಕೆದಾರರು ಯಾವ ಬೆಲೆಗೆ ಕೊಳ್ಳಬೇಕು ಮತ್ತು ಮಾರಬೇಕು ಎನ್ನುವುದನ್ನ ಕೂಡ ನಿರ್ಧರಿಸುತ್ತಾರೆ ಮತ್ತು ಅದಕ್ಕಾಗಿ ಒಂದು ರೇಂಜ್ ಸಿದ್ಧಪಡಿಸುತ್ತಾರೆ. ಬೆಲೆ ರೇಂಜ್ ನ ರಡಾರ್ ನಲ್ಲಿ ಬಂದಾಗ ಅದು ಆಟೋಮ್ಯಾಟಿಕ್ ಟ್ರೇಡ್ ಆಗುತ್ತದೆ.
  6. ವೊಲ್ಯೂಮ್ ವೈಟೆಡ್ ಅವೆರೆಜ್ ಪ್ರೈಸ್: ಹೂಡಿಕೆದಾರರು ಹೆಚ್ಚಿನ ಲಾಭಗಳಿಸಲು ವಾಲ್ಯೂಮ್ ವೈಟೆಡ್ ಅವೆರೆಜ್ ಪ್ರೈಸ್ ಬಳಸುತ್ತಾರೆ. ಈ ಬೆಲೆ ಬಂದ ತಕ್ಷಣ ಟ್ರೇಡ್ ಆಗುತ್ತದೆ. ಆದರೆ ಅಲ್ಗೊ ಟ್ರೇಡಿಂಗ್ ಇನ್ನೊಂದು ಹಂತದ ತಂತ್ರವನ್ನ ಕೂಡ ಬಳಸುತ್ತದೆ. ಇದು ತನ್ನ ವಾಲ್ಯೂಮ್ನ್ನ ಸಣ್ಣ ಸಣ್ಣ ದಾಗಿ ವಿಭಜಿಸುತ್ತದೆ, ಒಟ್ಟಾರೆ ಫಲಿತಾಂಶ ವಾಲ್ಯೂಮ್ ವೈಟೆಡ್ ಅವೆರೆಜ್ ಪ್ರೈಸ್ ಗೆ ಹೊಂದಿಕೆಯಾಗುವಂತೆ ಕಾರ್ಯನಿರ್ವಹಿಸುತ್ತದೆ.
  7. ಟೈಮ್ ವೈಟೆಡ್ ಅವೆರೆಜ್ ಪ್ರೈಸ್: ಮಾರುಕಟ್ಟೆಯ ಏರಿಳಿತದ ಹೊಡೆತ ತಪ್ಪಿಸ್ಕೊಳ್ಳಲು ಆರ್ಡರ್ ಗಳನ್ನ ಸಣ್ಣ ಸಣ್ಣ ಚಂಕ್ ಗಳಾಗಿ ಪರಿವರ್ತಿಸುವುದರ ಜೊತೆಗೆ ಅದನ್ನ ದಿನದ ಪ್ರಾರಂಭ, ಅಂತ್ಯ ಹೀಗೆ ಟೈಮ್ ಸ್ಲಾಟ್ ಆಧಾರದ ಮೇಲೆ ಟ್ರೇಡ್ ಮಾಡುವ ತಂತ್ರವನ್ನ ಟೈಮ್ ವೈಟೆಡ್ ಅವೆರೆಜ್ ಪ್ರೈಸ್ ಎನ್ನಲಾಗುತ್ತದೆ. ಮಾರುಕಟ್ಟೆಯ ಹೊಡೆತದ ನಡುವೆಯೂ ಸೆಟ್ ಮಾಡಿದ ಗೋಲ್ ತಲುಪುವುದು ಮತ್ತು ಹೆಚ್ಚು ಲಾಭ ಮಾಡುವುದು ಅಥವಾ ನಷ್ಟವನ್ನ ಕಡಿಮೆ ಮಾಡುವುದು ಇದರ ಉದ್ದೇಶ.

ಅಲ್ಗೊ ಟ್ರೇಡಿಂಗ್ನ ಉಪಯೋಗ ಅಥವಾ ಲಾಭಗಳು:

  1. ಅಲ್ಗೊ ಟ್ರೇಡಿಂಗ್ನಲ್ಲಿ ಮನುಷ್ಯ ಒಮ್ಮೆ ಸೂಚನೆಗಳನ್ನ ನೀಡಿದ ಮೇಲೆ ಅಂದರೆ ನಮಗೇನು ಬೇಕು ಅದನ್ನ ಸಾಫ್ಟ್ವೇರ್ ನಲ್ಲಿ ಫೀಡ್ ಮಾಡಿದ ಮೇಲೆ ಅಲ್ಲಿ ಮತ್ತೆ ಹಸ್ತಕ್ಷೇಪ ಇರುವುದಿಲ್ಲ. ಹೀಗಾಗಿ ಪದೇಪದೇ ಮನುಷ್ಯನ ಹಸ್ತಕ್ಷೇಪದಿಂದ ಆಗುವ ತಪ್ಪುಗಳು ಇಲ್ಲಿ ಘಟಿಸುವುದಿಲ್ಲ.
  2. ದೊಡ್ಡ ದೊಡ್ಡ ಆರ್ಡರ್ ಗಳನ್ನ ಕಾರ್ಯರೂಪಕ್ಕೆ ತರುವಾಗ ತಗಲುವ ಸಮಯದಲ್ಲಿ ಭಾರಿ ಉಳಿತಾಯವಾಗುತ್ತದೆ.
  3. ಟ್ರಾನ್ಸಾಕ್ಷನ್ ಕಾಸ್ಟ್ ಕೂಡ ಕಡಿಮೆಯಾಗುತ್ತದೆ.
  4. ಇಲ್ಲಿ ಕಾರ್ಯ ಅತಿ ವೇಗದಲ್ಲಿ ಆಗುವುದರಿಂದ ಮನುಷ್ಯ ಎಕ್ಸಿಕ್ಯೂಟ್ ಮಾಡುವಾಗ ಆಗುವ ಬೆಲೆ ಬದಲಾವಣೆಯ ನಷ್ಟ ತಪ್ಪುತ್ತದೆ.
  5. ಮನುಷ್ಯನ ಹಸ್ತಕ್ಷೇಪ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಬೇಡದ , ಅವಶ್ಯಕವಲ್ಲದ ಭಾವನೆಗಳಿಗೆ ಇಲ್ಲಿ ಜಾಗವಿರುವುದಿಲ್ಲ. ಹೀಗಾಗಿ ಎಮೋಷನಲ್ ಎರರ್ಗಳು , ನಷ್ಟಗಳು ತಪ್ಪುತ್ತದೆ.
  6. ದೊಡ್ಡ ಮಟ್ಟದ ವೊಲ್ಯೂಮ್ ನಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಇದೊಂದು ವರದಾನ.
  7. ಬೇರೆ ಬೇರೆ ಮಾರುಕಟ್ಟೆಯಲ್ಲಿನ ಬೇರೆ ಬೇರೆ ಬೆಲೆಯ ಷೇರುಗಳ ತಪಾಸಣೆ , ಟ್ರೇಡ್ ಮಾಡುವುದು ಮತ್ತು ಲಾಭ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ.

ಅಲ್ಗೊ ಟ್ರೇಡಿಂಗ್ನ ಅತಿ ದೊಡ್ಡ ಅನನುಕೂಲತೆ ಎಂದರೆ ಇದರಲ್ಲಿ ಒಮ್ಮೆ ನಮಗೆ ಬೇಕಾದ ಸೂಚ್ಯಂಕ, ಪರಿಧಿಗಳನ್ನ ಫೀಡ್ ಮಾಡಿದ ನಂತರ ಇದನ್ನ ನಿಲ್ಲಿಸಲು ಬಾರದು, ಇದೊಂದು ರೀತಿ ರೂಥ್ಲೆಸ್ ಕೋಡ್, ಕೇವಲ ಅಣತಿಯನ್ನ ಪಾಲಿಸುವ ಸೈನಿಕನಂತೆ! ಕೊನೆಗಳಿಗೆಯಲ್ಲಿ ಅಯ್ಯೋ ನಷ್ಟವಾಗುತ್ತಿದೆ ಎಂದು ಕೊಂಡರೂ ಅದನ್ನ ಬದಲಾಯಿಸಲು ಸಾಧ್ಯವಿಲ್ಲ. ತನಗೆ ನೀಡಿರುವ ಆದೇಶಕ್ಕೆ ತಕ್ಕಂತೆ ಅದು ಕಾರ್ಯ ನಿರ್ವಹಿಸುತ್ತದೆ. ಇದು ಮಷೀನ್ ಆದ ಕಾರಣ ಅದಕ್ಕೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುವುದಿಲ್ಲ. ನಿರ್ದೇಶಿತ ಆಜ್ಞೆಗೆ ತಕ್ಕಂತೆ ಅದು ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಲಾಭವೇ ಆಗಲಿ ಅಥವಾ ನಷ್ಟ, ಇಲ್ಲಿ ಭಾವನೆ ಇಲ್ಲದ ಕಾರಣ, ಫೀಡ್ ಏನಾಗಿರುತ್ತದೆ ಅದಕ್ಕೆ ತಕ್ಕ ಸನ್ನಿವೇಶವಿದ್ದರೆ ಅದು ಲಾಗೂ ಆಗುತ್ತದೆ.

ಕೊನೆಯ ಮಾತು: ಅಲ್ಗೊ ಟ್ರೇಡಿಂಗ್ ಭಾರತದಲ್ಲಿ ಕಾನೂನು ಬದ್ಧ ಹೀಗಾಗಿ ಯಾವುದೇ ಭಯ, ಸಂಶಯ ಇಲ್ಲದೆ ಇಂತಹ ಸಾಫ್ಟ್ವೇರ್ ಬಳಸಿ ನೀವು ಟ್ರೇಡ್ ಮಾಡಬಹುದು. ಇವತ್ತಿನ ಯುವ ಜನತೆ ಇದನ್ನ ಹೆಚ್ಚು ಬಳಸುತ್ತಿದ್ದಾರೆ. ಸರಿಯಾದ ಸೂಚನೆಗಳನ್ನ ಕೊಟ್ಟಿದ್ದೆ ಆದರೆ ಇದು ಖಂಡಿತ ಲಾಭದಾಯಕ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com