ಪ್ರೈಮರಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ? (ಹಣಕ್ಲಾಸು)

ಹಣಕ್ಲಾಸು-352ರಂಗಸ್ವಾಮಿ ಮೂನಕನಹಳ್ಳಿ
ಐಪಿಒ (ಸಾಂಕೇತಿಕ ಚಿತ್ರ)
ಐಪಿಒ (ಸಾಂಕೇತಿಕ ಚಿತ್ರ)

ಮಾರುಕಟ್ಟೆಯಲ್ಲಿ ಎರಡು ವಿಭಾಗವಿದೆ ಪ್ರೈಮರಿ ಮಾರುಕಟ್ಟೆ ಮತ್ತು ಸೆಕೆಂಡರಿ ಮಾರುಕಟ್ಟೆ, ಈ ಅಧ್ಯಯದಲ್ಲಿ ನಾವು ಪ್ರೈಮರಿ ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಎಲ್ಲಕ್ಕೂ ಮೊದಲು ಪ್ರೈಮರಿ ಮಾರ್ಕೆಟ್ ಎಂದರೇನು?

ಪ್ರೈಮರಿ ಎನ್ನುವುದಕ್ಕೆ ಕನ್ನಡದಲ್ಲಿ ಪ್ರಾಥಮಿಕ ಎನ್ನುವ ಅರ್ಥವಿದೆ. ಅಂದರೆ ಪ್ರಾರಂಭಿಕ ಹಂತ, ಹೊಸದಾಗಿ ಶುರುವಾಗುತ್ತಿರುವ ಎನ್ನುವ ಅರ್ಥವನ್ನ ಕೂಡ ನಾವು ಕಾಣಬಹುದು. ಈ ಮಾರುಕಟ್ಟೆಯಲ್ಲಿ ಕೂಡ ಇದು ಅದೇ ಅರ್ಥವನ್ನ ನೀಡುತ್ತದೆ. ಗಮನಿಸಿ ಇದು ಸೆಕ್ಯುರಿಟೀಸ್ ಗಳನ್ನ ಸೃಷ್ಟಿಸುವ ಜಾಗ. ಯಾವುದೇ ಸಂಸ್ಥೆ ತನಗೆ ಬೇಕಾದ ಬಂಡವಾಳವನ್ನ ಪ್ರಥಮ ಬಾರಿಗೆ ಪಡೆದುಕೊಳ್ಳುವ ಅಂದರೆ ಸ್ಟಾಕ್ಸ್, ಷೇರ್ಸ್ ಅಥವಾ ಬಾಂಡ್ ಗಳನ್ನ ಪ್ರಥಮ ಬಾರಿಗೆ ಮಾರುಕಟ್ಟೆಗೆ ಬಿಡುವ ಮೂಲಕ ಬಂಡವಾಳ ಸಂಗ್ರಹಣೆ ಮಾಡುತ್ತದೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಷೇರು, ಸ್ಟಾಕ್ಸ್, ಬಾಂಡ್ ಮತ್ತಿತರ ಎಲ್ಲಾ ರೀತಿಯ ಸೆಕ್ಯುರಿಟೀಸ್ ಇಲ್ಲಿ ಜನ್ಮ ಕಾಣುತ್ತವೆ, ನಂತರ ಇವುಗಳ ಜನರಲ್ ಪಬ್ಲಿಕ್ ಗೆ ಸೆಕೆಂಡರಿ ಮಾರ್ಕೆಟ್ ನಲ್ಲಿ ಸುಲಭವಾಗಿ ಟ್ರೇಡ್ ಮಾಡಲು ಸಿಗುತ್ತವೆ.

ಗಮನಿಸಿ ಈಗಾಗಲೇ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಂಡಿರುವ ಸಂಸ್ಥೆಗಳು ಕೂಡ ಈ ಮಾರುಕಟ್ಟೆಯಿಂದ ಬಂಡವಾಳವನ್ನ ಎತ್ತುತ್ತವೆ, ಹೊಸದಾಗಿ ಎಂದರೆ ಸಂಸ್ಥೆ ಹೊಸದಾಗಿರಬೇಕು ಎಂದಲ್ಲ, ಬಂಡವಾಳ ಎತ್ತಲು ವಿತರಿಸುವ ಸೆಕ್ಯುರಿಟೀಸ್ ಹೊಸದಾಗಿರಬೇಕು ಎನ್ನುವುದನ್ನ ಮನಗಾಣಬೇಕು. ಹೀಗಾಗಿ ನಮಗೆ ಸೆಕೆಂಡರಿ ಮಾರುಕಟ್ಟೆಯಲ್ಲಿ ಟ್ರೇಡ್ ಮಾಡಲು ಸಿಗುವ ಎಲ್ಲಾ ಸೆಕ್ಯುರಿಟೀಸ್ ಮೊದಲಿಗೆ ಇಲ್ಲಿ ಅಂದರೆ ಪ್ರೈಮರಿ ಮಾರುಕಟ್ಟೆಯಲ್ಲಿ ಟ್ರೇಡ್ ಆಗಿರುತ್ತವೆ. ಮಾರುಕಟ್ಟೆಯ ಡಿಮ್ಯಾಂಡ್, ಇನ್ನಿತರ ಯಾವುದೇ ಅಂಶಗಳನ್ನ ಪ್ರಭಾವಕ್ಕೆ ಒಳಪಡದ ಬೆಲೆಯಲ್ಲಿ ಇಲ್ಲಿ ಹೂಡಿಕೆ ಮಾಡಬಹುದು. ಹೀಗೆ ಇಲ್ಲಿ ಹೂಡಿಕೆ ಮಾಡಲು ಎಲ್ಲಕ್ಕೂ ಪ್ರಥಮವಾಗಿ ಡಿಮ್ಯಾಟ್ ಅಕೌಂಟ್ ಹೊಂದಿರಬೇಕು ಮತ್ತು ಟ್ರೇಡಿಂಗ್ ಅಕೌಂಟ್ ಹೊಂದಿರಬೇಕು. ನೀವು ಯಾವ ಸೇವೆ ನೀಡುವ ಸಂಸ್ಥೆಯ ಅಡಿಯಲ್ಲಿ ಡಿಮ್ಯಾಟ್ ಅಕೌಂಟ್ ತೆರೆದಿರುತ್ತೀರಿ ಅಲ್ಲಿ ಅವರು ನೀಡುವ ಸಾಫ್ಟ್ವೇರ್ ಮೂಲಕ ನಿಮಿಗಿಷ್ಟವಾದ ಸೆಕ್ಯುರಿಟೀಸ್ ಕೊಳ್ಳಬಹುದು, ಡಿಮ್ಯಾಟ್ ಖಾತೆಗೆ ನಿಮ್ಮ ಬ್ಯಾಂಕ್ ಖಾತೆಯನ್ನ ಲಿಂಕ್ ಮಾಡಿರಬೇಕಾಗುತ್ತದೆ ಮತ್ತು ಖಾತೆಯಲ್ಲಿ ನೀವು ಕೊಳ್ಳಬಯಸುವ ಸೆಕ್ಯುರಿಟೀಸ್ ಗೆ ಬೇಕಾಗುವ ಹಣವನ್ನ ಇಟ್ಟಿರಬೇಕಾಗುತ್ತದೆ. ಹೀಗೆ ತಾವೇ ಹೂಡಿಕೆ ಮಾಡಲು ತಂತ್ರಜ್ಞಾನದ ಕೊರತೆ ಇರುವವರು ಬ್ರೋಕರ್ ಅಥವಾ ಸಬ್ ಬ್ರೋಕರ್ಗಳ ಸಹಾಯವನ್ನ ಪಡೆಯಬಹುದು.

ಪ್ರೈಮರಿ ಮಾರುಕಟ್ಟೆಯಲ್ಲಿ ನಾವು ಎಷ್ಟು ಷೇರುಗಳು ಬೇಕು ಎನ್ನುತ್ತೇವೆ ಅಷ್ಟೇ ಸಿಗುತ್ತದೆ ಎಂದು ಹೇಳಲಾಗದು. ಇದು ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಣಿಸದಕ್ಕಿಂತ ಹೆಚ್ಚು ಸಬ್ಸ್ಕ್ರೈಬ್ ಆದರೆ ಅದನ್ನ ಓವರ್ ಸಬ್ಸ್ಕ್ರೈಬ್ ಎನ್ನಲಾಗುತ್ತದೆ. ಆಗ ನಾವು ಬಯಸಿದ್ದಷ್ಟು ಷೇರುಗಳು ದೊರೆಯದೆ ಹೋಗಬಹುದು. ಉಳಿದ ಸಮಯದಲ್ಲಿ ನಾವೆಷ್ಟು ಕೇಳಿರುತ್ತೇವೆ ಅಷ್ಟು ದೊರೆಯುತ್ತದೆ.

ಇಲ್ಲಿ ಇನ್ನೊಂದು ಪ್ರಮುಖ ಅಂಶವನ್ನ ಕೂಡ ನಾವು ಗಮನಿಸಬೇಕು: ಸಾಮಾನ್ಯವಾಗಿ ಇದರಲ್ಲಿ ಎಲ್ಲರೂ ಹೂಡಿಕೆ ಮಾಡಲು ಅರ್ಹರು ಆದರೆ ಸಾಮಾನ್ಯವಾಗಿ ಇದರ ಸಿಂಹಪಾಲು ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಪಾಲಾಗುತ್ತದೆ. ರಿಟೇಲ್ ಇನ್ವೆಸ್ಟರ್ಸ್ ಸಿಕ್ಕಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಇಲ್ಲಿನ ಸೆಕ್ಯುರಿಟೀಸ್ ಹೂಡಿಕೆದಾರರಿಗೆ:

  1. ಫೇಸ್ ವ್ಯಾಲ್ಯೂ ಅಥವಾ ಮುಖಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ: ಅಂದರೆ ಗಮನಿಸಿ ಈಕ್ವಿಟಿ ಷೇರುಗಳ ಮುಖಬೆಲೆ ನೋಂದಾಯಿಸುವಾಗ ಬಹಳ ಕಡಿಮೆ ಇಟ್ಟಿರುತ್ತಾರೆ, ಸಾಮಾನ್ಯವಾಗಿ ಇದು 1,5,10  ಅಥವಾ 100 ರೂಪಾಯಿ ಇರುತ್ತದೆ. ಮಾರುಕಟ್ಟೆಯ ವ್ಯಾಲ್ಯೂಗೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ವಿತರಣೆ ಮಾಡುವ ಸಂದರ್ಭದಲ್ಲಿ ಯಾವ ಬೆಲೆಗೆ ವಿತರಣೆ ಮಾಡಬೇಕು ಎನ್ನುವ ನಿರ್ಧಾರವನ್ನ ಸಂಸ್ಥೆ ಮಾಡುತ್ತದೆ.
  2. ಪ್ರೀಮಿಯಂ ಬೆಲೆಯಲ್ಲಿ ಕೂಡ ಮಾರಾಟ ಮಾಡಲಾಗುತ್ತದೆ: ಕೆಲವೊಮ್ಮೆ ಮುಖಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಹೂಡಿಕೆದಾರರಿಗೆ ಕೊಳ್ಳುವ ಆಫ಼ರ್ ನೀಡಲಾಗುತ್ತದೆ. ಹೀಗೆ ಫೇಸ್ ವ್ಯಾಲ್ಯೂ ಅಥವಾ ಮುಖಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದರೆ ಆಗ ಅದನ್ನ ಷೇರ್ಸ್ ಅಟ್ ಪ್ರೀಮಿಯಂ ಎನ್ನಲಾಗುತ್ತದೆ.
  3. ಮುಖಬೆಲೆಗಿಂತ ಕಡಿಮೆಗೂ ಮಾರಾಟವಾಗುತ್ತವೆ: ಮುಖಬೆಲೆ ಅಥವಾ ಫೇಸ್ ವ್ಯಾಲ್ಯೂ ಗಿಂತ ಕಡಿಮೆಗೆ ಮಾರುವ ನಿರ್ಧಾರಕ್ಕೆ ಷೇರ್ಸ್ ಅಟ್ ಡಿಸ್ಕೌಂಟ್ ಎನ್ನಲಾಗುತ್ತದೆ.

ಗಮನಿಸಿ: ಇಂದಿನ ದಿನಗಳಲ್ಲಿ ಬಹುತೇಕ ಸಂಸ್ಥೆಗಳು ಪ್ರೀಮಿಯಂ ನಲ್ಲಿ ಮಾರಾಟ ಮಾಡುತ್ತಿವೆ. ಫೇಸ್ ವ್ಯಾಲ್ಯೂ ಮತ್ತು ಡಿಸ್ಕೌಂಟ್ ವ್ಯಾಲ್ಯೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ.

ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಹಲವು ರೀತಿಯಲ್ಲಿ ಸಂಸ್ಥೆ ಸೆಕ್ಯುರಿಟೀಸ್ ಗಳನ್ನ ವಿತರಣೆ ಮಾಡುತ್ತದೆ. ಸಾಮಾನ್ಯವಾಗಿ ಸಂಸ್ಥೆಗಳು ಸಣ್ಣದಾಗಿ, ಖಾಸಗಿಯಾಗಿ ಆರಂಭಗೊಳ್ಳುತ್ತವೆ, ಪದಾರ್ಥ, ಪ್ರೊಮೋಟರ್ಸ್ ವಿಷನ್ ಭದ್ರವಾಗಿದ್ದಾಗ ತಾವು ಹೂಡಿದ್ದ ಮೂಲ ಬಂಡವಾಳ ಸಾಲದೇ ಇದ್ದಾಗ , ಬ್ಯಾಂಕ್ ಸಾಲಗಳು, ಇತರೆ ಮೂಲದಿಂದ ತಂದ ಬಂಡವಾಳ ದೀರ್ಘಾವಧಿಯಲ್ಲಿ ಸಾಲುವುದಿಲ್ಲ, ಅಲ್ಲದೆ ಒಂದು ಹಂತದ ನಂತರ ಸಂಸ್ಥೆಯ ಕನಸಿನ ಓಟಕ್ಕೆ ಇನ್ನಷ್ಟು ಬಂಡವಾಳ ಬೇಕಾಗುತ್ತದೆ. ಮೂಲ ಬಂಡವಾಳ ಹೂಡಿದ್ದ ವೆಂಚರ್ ಕ್ಯಾಪಿಟಲಿಸ್ಟ್, ಅರ್ಲಿ ಇನ್ವೆಸ್ಟರ್ಸ್ ಗಳಿಗೆ ಎಕ್ಸಿಟ್ ಅಪರ್ಚುನಿಟಿ ಕೂಡ ನೀಡಬೇಕಾಗುತ್ತದೆ. ಈ ಹಂತದಲ್ಲಿ ಸಂಸ್ಥೆ ಜನ ಸಾಮಾನ್ಯ ಹೂಡಿಕೆದಾರನ್ನ ದೊಡ್ಡ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಗಳನ್ನ ತಮ್ಮ ಸಂಸ್ಥೆಯ ಡೆಟ್ ಅಥವಾ ಈಕ್ವಿಟಿಯಲ್ಲಿ ಹೂಡಿಕೆ ಮಾಡುವಂತೆ ಕೇಳಿಕೊಳ್ಳುತ್ತದೆ. ಹೀಗೆ ಬಂಡವಾಳ ಸಂಗ್ರಹಣೆ ಹಲವು ರೀತಿಯ ವಿತರಣೆಯಿಂದ ಸಾಧ್ಯವಿದೆ. ಅವುಗಳು ಹೀಗಿವೆ:

  • ಇನಿಷಿಯಲ್ ಪಬ್ಲಿಕ್ ಆಫರ್ (IPO): ಐಪಿಒ ಎಂದರೆ ಇನಿಷಿಯಲ್ ಪಬ್ಲಿಕ್ ಆಫರ್ ಎಂದರ್ಥ. ಖಾಸಗಿ ಸಂಸ್ಥೆಗಳು ಸಾಮಾನ್ಯ ಜನರಿಗೆ ಷೇರುಗಳನ್ನ ಕೊಂಡುಕೊಳ್ಳಲು ನೀಡುವ ಆಹ್ವಾನ ಪ್ರಕ್ರಿಯೆಗೆ ಐಪಿಒ ಎನ್ನುತ್ತಾರೆ. ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ ಒಡ್ಡುವ ಹಲವಾರು ನಿಂಬಂಧನೆಗಳನ್ನ ಪಾಲಿಸಿದ ನಂತರ ಹೀಗೆ ಸಾಮಾನ್ಯ ಜನರಿಂದ ಮುಂದಿನ ವ್ಯಾಪಾರಕ್ಕೆ ಬೇಕಾಗುವ ಹಣವನ್ನ ಷೇರು ನೀಡುವ ಮೂಲಕ ಬಂಡವಾಳ ರೂಪದಲ್ಲಿ ಎತ್ತಬಹದುದಾಗಿದೆ. ಪ್ರೈಮರಿ ಮಾರುಕಟ್ಟೆಯಲ್ಲಿ ಕೊಳ್ಳಲು ಎರಡು  ದಾರಿಗಳಿವೆ. 1.ಆಫ್ ಲೈನ್ - ಅಂದರೆ ಬ್ರೋಕರ್ ಅಥವಾ ಸಬ್ ಬ್ರೋಕರ್ ಬಳಿ ಸಿಗುವ ಅಪ್ಲಿಕೇಶನ್ ಫಾರಂ ತುಂಬಿ , ಅವರ ಮೂಲಕ ಹೂಡಿಕೆಗೆ ಅಪ್ಪ್ಲೈ ಮಾಡುವುದು. 2.ಆನ್ಲೈನ್ ಮೂಲಕ ಹೂಡಿಕೆ ಮಾಡುವುದು- https://ipoforms.nseindia.com/issueforms/html/index.jsp ಈ ವೆಬ್ ಸೈಟಿಗೆ ಭೇಟಿ ನೀಡಿದರೆ ಅಲ್ಲಿ ಅಂದಿನ ದಿನದಲ್ಲಿ ಯಾವ ಯಾವ ಐಪಿಒ ಲಭ್ಯವಿರುತ್ತದೆ ಅವೆಲ್ಲವೂ ಕಾಣುತ್ತವೆ. ನಾವು ಯಾವ ಐಪಿಒ ದಲ್ಲಿ ಹೂಡಿಕೆ ಮಾಡಿಕೊಳ್ಳಬೇಕು ಆ ಅಪ್ಲಿಕೇಶನ್ ಭರ್ತಿ ಮಾಡಿ ಸಬ್ಮಿಟ್ ಮಾಡಬಹುದು. ಗಮನಿಸಿ ಆನ್ಲೈನ್ ಮೂಲಕ ಹೂಡಿಕೆ ಮಾಡುವುದು ಕೇವಲ ಐದು ನಿಮಿಷದಲ್ಲಿ ಮುಗಿದು ಹೋಗುತ್ತದೆ.ಈ ರೀತಿ ವಿತರಣೆಯಾದ ನಂತರ ಇದನ್ನ ಸೆಕೆಂಡರಿ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ. ಒಮ್ಮೆ ಲಿಸ್ಟ್ ಆದರೆ ಸಾಮಾನ್ಯ ಹೂಡಿಕೆದಾರರು ಕೂಡ ಇದನ್ನ ಸುಲಭವಾಗಿ ಕೊಳ್ಳಬಹುದು. 
  • ಫಾಲೋ ಆನ್ ಪಬ್ಲಿಕ್ ಆಫರ್: ಸೆಕೆಂಡರಿ ಮಾರುಕಟ್ಟೆಯಲ್ಲಿ ಆಗಲೇ ಲಿಸ್ಟ್ ಆಗಿರುವ ಸಂಸ್ಥೆ ಹೊಸದಾಗಿ ಅಥವಾ ಆಫರ್ ಡಾಕ್ಯುಮೆಂಟ್ ಮೂಲಕ ಸೆಕ್ಯುರಿಟೀಸ್ ವಿತರಣೆ ಪಬ್ಲಿಕ್ಕಿಗೆ ಮಾಡುವ ಮೂಲಕ ಬಂಡವಾಳವನ್ನ ಸಂಗ್ರಹಿಸುವ ಪ್ರಕ್ರಿಯೆಗೆ ಫಾಲೋ ಆನ್ ಪಬ್ಲಿಕ್ ಆಫರ್ ಎನ್ನಲಾಗುತ್ತದೆ. ಈ ರೀತಿಯ ಫಾಲೋ ಆನ್ ಪಬ್ಲಿಕ್ ಆಫರ್ ಹಲವು ಕಾರಣಗಳಿಗೆ ಮಾಡಲಾಗುತ್ತದೆ.

ಅವುಗಳಲ್ಲಿ ಪ್ರಮುಖವಾದವು ಹೀಗಿವೆ:

  1. ಹೆಚ್ಚಿನ ಬಂಡವಾಳ ಬೇಕಾಗಿದ್ದಲ್ಲಿ ಈ ರೀತಿಯ ಆಫರ್ ನೀಡಲಾಗುತ್ತದೆ.
  2. ಡೆಟ್ ತಿಳಿಗೊಳಿಸಿ ಆ ಜಾಗದಲ್ಲಿ ಈಕ್ವಿಟಿಯನ್ನ ತರುವ ಪ್ರಯತ್ನ ಮಾಡುವ ಸಮಯದಲ್ಲಿ ಕೂಡ ಹೀಗೆ ಮಾಡಲಾಗುತ್ತದೆ.
  3. ಐಪಿಒ ವಿತರಿಸುವ ಸಮಯದಲ್ಲಿ ಹಾಕಲಾಗಿದ್ದ ಸಮಯದ ನಿಬಂಧನೆ ಕಳೆದು ಕೆಲವು ಅಥವಾ ಎಲ್ಲಾ ಪ್ರೊಮೋಟರ್ಸ್ ತಮ್ಮ ಈಕ್ವಿಟಿಯನ್ನ ಡೈಲ್ಯೂಟ್ ಮಾಡುವ ಇಚ್ಚೆಯಲ್ಲಿದ್ದಾಗ ಕೂಡ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ .
  4. ಅರ್ಲಿ ಇನ್ವೆಸ್ಟರ್ಸ್ ಗಳಿಗೆ ಎಕ್ಸಿಟ್ ನೀಡುವ ಸಲುವಾಗಿ ಕೂಡ ಈ ರೀತಿಯ ಬಂಡವಾಳ ಸಂಗ್ರಹಣೆ ನಡೆಯುತ್ತದೆ.
  5. ಸೆಬಿ ನಿರ್ಧರಿಸಿರುವ ಪಬ್ಲಿಕ್ ಹೋಲ್ಡಿಂಗ್ ಮಟ್ಟವನ್ನ ಏರಿಸುವ ಸಲುವಾಗಿ ಕೂಡ ಈ ರೀತಿಯ ವಿತರಣೆಗಳು ನಡೆಯುತ್ತವೆ. 
  • ಪ್ರೈವೇಟ್ ಪ್ಲೇಸ್ಮೆಂಟ್ ಆಫ್ ಷೇರ್ಸ್: ಈ ರೀತಿಯ ವಿತರಣೆಯನ್ನ ಕೆಲವೇ ಕೆಲವು ಆಯ್ದ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಗಳಿಗೆ ನೀಡಲಾಗುತ್ತದೆ. ಇಲ್ಲಿ ಇದನ್ನ ಪಬ್ಲಿಕ್ಕಿಗೆ ಆಫರ್ ಮಾಡುವುದಿಲ್ಲ. ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಇದಕ್ಕೆ ಬಿಡ್ ಮಾಡಿ ಇದನ್ನ ಔಟರೈಟ್ ಖರೀದಿ ಮಾಡುತ್ತಾರೆ.
  • ಪ್ರಿಫರೆನ್ಶಿಯಲ್ ಇಶ್ಯೂ: ಕೆಲವೇ ಕೆಲವು ಇನ್ವೆಸ್ಟರ್ಸ್ ಗಳಿಗೆ ಪ್ರಿಫರೆನ್ಸಿಯಲ್ ಟರ್ಮ್ಸ್ ಮೂಲಕ ವಿತರಿಸುವ ಕ್ರಿಯೆಗೆ ಪ್ರಿಫರೆನ್ಶಿಯಲ್ ಇಶ್ಯೂ ಎನ್ನಲಾಗುತ್ತದೆ. ಉದಾಹರಣೆಗೆ ಪ್ರೊಮೋಟರ್ಸ್ ಸ್ಟ್ರಾಟರ್ಜಿಕ್ ಇನ್ವೆಸ್ಟರ್ಸ್ , ಆಯ್ದ ಕೆಲಸಗಾರರಿಗೆ ಅಥವಾ ಇನ್ನಿತರ ಆಯ್ದ ಆದ್ಯತೆ ನೀಡಿದ ಗುಂಪುಗಳಿಗೆ ಮಾರಾಟ ಮಾಡಿದಾಗ ಇದು ಪ್ರಿಫರೆನ್ಶಿಯಲ್ ಇಶ್ಯೂ ಎನ್ನಿಸಿಕೊಳ್ಳುತ್ತದೆ. ಇದು ವೇಗವಾಗಿ ಮತ್ತು ಸುಲಭವಾಗಿ ಬಂಡವಾಳವನ್ನ ಸಂಗ್ರಹಿಸುವ ದಾರಿಯಾಗಿದೆ.
  • ರೈಟ್ ಇಶ್ಯೂಸ್: ಪಬ್ಲಿಕ್ ಬಳಿ ಬಂಡವಾಳ ಎತ್ತುವ ಬದಲು ತಮ್ಮಲ್ಲಿ ಆಗಲೇ ಷೇರುದಾರರಾಗಿರುವವರಿಗೆ ತಮ್ಮ ಹಳೆಯ ಷೇರ್ ಹೋಲ್ಡಿಂಗ್ ಅನುಪಾತದಲ್ಲಿ ಹೊಸದಾಗಿ ಷೇರನ್ನ ಕೊಳ್ಳುವ ರೈಟ್ ನೀಡುತ್ತದೆ. ಇದು ಕಡ್ಡಾಯವಲ್ಲ. ಇಷ್ಟಪಟ್ಟ ಷೇರುದಾರರು ತಮಗೆ ಸಿಕ್ಕಿದ ಅವಕಾಶವನ್ನ ಬಳಸಿಕೊಳ್ಳಬಹುದು. ಈ ರೀತಿಯ ಬಂಡವಾಳ ಎತ್ತುವ ಪ್ರಕ್ರಿಯೆಗೆ ರೈಟ್ ಇಶ್ಯೂಸ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮಾರುಕಟ್ಟೆಯ ಬೆಲೆಗಿಂತ ರೈಟ್ ಇಶ್ಯೂ ಮೂಲಕ ನೀಡುವ ಆಫರ್ ಬೆಲೆ ಕಡಿಮೆಯಿರುತ್ತದೆ. ಹೀಗಾಗಿ ಹೆಚ್ಚಿನ ಷೇರುದಾರರು ಇದನ್ನ ಕೊಳ್ಳುತ್ತಾರೆ. ಹಾಗೊಮ್ಮೆ ಅವರಿಗೆ ಇಷ್ಟವಿಲ್ಲದ ಪಕ್ಷದಲ್ಲಿ ಇದನ್ನ ಬೇರೆಯವರಿಗೆ ವರ್ಗಾಯಿಸುವ ಅವಕಾಶ ಕೂಡ ಇರುತ್ತದೆ. ತಾವೂ ಕೊಳ್ಳದೆ , ಬೇರೆಯವರಿಗೂ ವರ್ಗಾಯಿಸದೆ ಸುಮ್ಮನೆ ತಟಸ್ಥವಾಗಿ ಉಳಿಯುವ ನಿರ್ಧಾರ ಕೂಡ ಷೇರುದಾರರಿಗೆ ಬಿಟ್ಟದ್ದು. ಹೀಗೆ ಮಾಡಬೇಕು ಎನ್ನುವ  ನಿಬಂಧನೆಗಳಿಲ್ಲ.

ಭಾರತೀಯ ಸಂಸ್ಥೆಗಳು ಕೇವಲ ಭಾರತದಲ್ಲಿ ಮಾತ್ರ ಬಂಡವಾಳವನ್ನ ಸಂಗ್ರಹಿಸಬೇಕು ಎನ್ನುವಂತಿಲ್ಲ , ಭಾರತೀಯ ಸಂಸ್ಥೆಗಳು ವಿದೇಶಿ ಹಣವನ್ನ ಕೂಡ ಬಂಡವಾಳದ ರೂಪದಲ್ಲಿ ಪಡೆದುಕೊಳ್ಳಬಹುದು. ಇಲ್ಲಿ ಕೂಡ ಈಕ್ವಿಟಿ ಮತ್ತು ಡೆಟ್ ಮೂಲಕ  ಬಂಡವಾಳ ಸಂಗ್ರಹಣೆ ಮಾಡಬಹುದು.

  1. ಈಕ್ವಿಟಿ: ಡೆಪಾಸಿಟರಿ ರಿಸಿಪ್ಟ್ಸ್ ಮೂಲಕ ಸಾಧಾರಣ ಷೇರುಗಳನ್ನ ವಿತರಣೆ ಮಾಡುವ ಮೂಲಕ ಬಂಡವಾಳ ಸಂಗ್ರಹಣೆ ಮಾಡಬಹುದು. ಸಾಮಾನ್ಯವಾಗಿ ಇದು ಡಾಲರ್ ಅಥವಾ ಯುರೋ ಹಣದಲ್ಲಿರುತ್ತದೆ. ಹೀಗಾಗಿ ಇದಕ್ಕೆ ಅಮೆರಿಕನ್ ಡೆಪಾಸಿಟರಿ ರಿಸಿಟ್ಸ್ (ADR) ಅಥವಾ ಗ್ಲೋಬಲ್ ಡೆಪಾಸಿಟರಿ ರಿಸೀಟ್ಸ್ (GDR) ಎನ್ನಲಾಗುತ್ತದೆ.
  2. ಫಾರಿನ್ ಕರೆನ್ಸಿ ಕನ್ವರ್ಟಿಬಲ್ ಬಾಂಡ್ಸ್ (FCCB): ಇದೊಂದು ಡೆಟ್ ಬಾಂಡ್, ಸಾಮಾನ್ಯವಾಗಿ ಯುರೋ ಅಥವಾ ಡಾಲರ್ನಲ್ಲಿರುತ್ತದೆ. ಇದನ್ನ ಮುಂದೊಂದು ದಿನ ಸಾಮಾನ್ಯ ಷೇರು ಅಥವಾ ಈಕ್ವಿಟಿಯನ್ನಾಗಿ ಪರಿವರ್ತಿಸುವ ಅವಕಾಶವಿರುತ್ತದೆ. ಇಲ್ಲಿನ ಬಡ್ಡಿಯನ್ನ ವಿದೇಶಿ ಹಣದಲ್ಲಿ ನೀಡಬೇಕಾಗುತ್ತದೆ.

ಕೊನೆಮಾತು: ಪ್ರೈಮರಿ ಮಾರುಕಟ್ಟೆಯಲ್ಲಿ ವಿತರಣೆ ಮಾಡುವ ಅದರಲ್ಲೂ ಪ್ರಥಮವಾಗಿ ವಿತರಣೆ ಮಾಡುವ ಸೆಕ್ಯುರಿಟೀಸ್ ಮೇಲಿನ ಹೂಡಿಕೆ ಹೆಚ್ಚು ಅಪಾಯಕಾರಿ , ಸಂಸ್ಥೆಯ ಸೆಕ್ಯುರಿಟೀಸ್ ಸೆಕೆಂಡರಿ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿ ಅಲ್ಲಿ ಅವುಗಳು ಹೇಗೆ ಟ್ರೇಡ್ ಆಗುತ್ತವೆ ಎನ್ನುವ ತನಕ ಅವುಗಳ ನಿಜವಾದ ಶಕ್ತಿ ತಿಳಿಯುವುದಿಲ್ಲ. ಅಲ್ಲದೆ ಇಲ್ಲಿ ರಿಟೇಲ್ ಇನ್ವೆಸ್ಟರ್ಸ್ ಗಿಂತ, ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಹೆಚ್ಚು ಭಾಗಿಗಳು. ಇಲ್ಲಿ ಹೂಡಿಕೆ ಮಾಡುವಾಗ ಇನ್ನಷ್ಟು ಹೆಚ್ಚಿನ ಅಧ್ಯಯನ ಬೇಕಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com