ಸೆಕ್ಯುರಿಟೀಸ್ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಮತ್ತು ಷೇರುದಾರನ ಹಕ್ಕುಗಳ ಬಗ್ಗೆ ತಿಳಿದಿರಬೇಕಾದ ಅಂಶಗಳು... (ಹಣಕ್ಲಾಸು)

ಹಣಕ್ಲಾಸು-351ರಂಗಸ್ವಾಮಿ ಮೂನಕನಹಳ್ಳಿ
ಷೇರುದಾರನ ಹಕ್ಕುಗಳು (ಸಾಂಕೇತಿಕ ಚಿತ್ರ)
ಷೇರುದಾರನ ಹಕ್ಕುಗಳು (ಸಾಂಕೇತಿಕ ಚಿತ್ರ)

ಒಂದು ಸಂಸ್ಥೆಯ ಈಕ್ವಿಟಿ ಷೇರುದಾರ ಆ ಸಂಸ್ಥೆಯ ನಿಜವಾದ ಮಾಲೀಕ. ತನ್ನ ಬಳಿ ಇರುವ ಒಟ್ಟು ಷೇರಿನ ಮೌಲ್ಯವನ್ನ ಸಂಸ್ಥೆಯ ಒಟ್ಟು ಮೌಲ್ಯದ ಜೊತೆಗೆ ಲೆಕ್ಕಾಚಾರ ಮಾಡಿದಾಗ ಎಷ್ಟು ಪ್ರತಿಶತ ಬರುತ್ತದೆಯೂ ಅಷ್ಟು ಪ್ರತಿಶತದ ಪಾಲುದಾರ. ಸಂಸ್ಥೆಯ ನಿಜವಾದ ಲಾಭ ನಷ್ಟದಲ್ಲಿ ಪಾಲ್ಗೊಳ್ಳುವ ನಿಜವಾದ ಹೂಡಿಕೆದಾರ. ಇದೆ ಮಾತನ್ನ ನಾವು ಬೇರೆ ಯಾವುದೇ ರೂಪದಲ್ಲಿ ಹಣ ಹೂಡಿದವರ ಬಗ್ಗೆ ಹೇಳಲು ಬಾರದು. ಏಕೆಂದರೆ ಅವರೆಲ್ಲಾ ಸಂಸ್ಥೆ ಲಾಭ ಮಾಡಲಿ ಅಥವಾ ನಷ್ಟ ಮಾಡಿಕೊಳ್ಳಲಿ ಅದರ ಜೊತೆಗೆ ಕೊನೆಯ ತನಕ ಹೆಜ್ಜೆ ಹಾಕುತ್ತೇವೆ ಎಂದು ಬಂದವರಲ್ಲ. ಈಕ್ವಿಟಿ ಷೇರುದಾರರು ಮಾತ್ರ ಅಪಾಯಕ್ಕೆ ಮುಖವೊಡ್ಡಿ ನಿಂತವರು, ಸಹಜವಾಗೇ ಇವರಿಗೆ ಬೇರೆಯವರಿಗಿಂತ ಒಂದಷ್ಟು ಹೆಚ್ಚಿನ ಹಕ್ಕುಗಳು ಇರುತ್ತವೆ. ಹೂಡಿಕೆ ಮಾಡುವ ಮುನ್ನ ಇವುಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವುದು ಉತ್ತಮ.

  1. ಎಲ್ಲಕ್ಕೂ ಮೊದಲು ತನ್ನ ಹೂಡಿಕೆಯ ಮೊತ್ತ ಎಷ್ಟಿದೆ ಅಷ್ಟರ ಮಟ್ಟಿಗೆ ಆ ಸಂಸ್ಥೆಯ ಮಾಲೀಕತ್ವ ಈತನದಾಗಿರುತ್ತದೆ.
  2. ಒಮ್ಮೆ ಶೇರನ್ನ ಖರೀದಿಸಿದ ನಂತರ ಯಾವುದೇ ಹಂತದಲ್ಲಿ ಈ ಮಾಲೀಕತ್ವವನ್ನ ವರ್ಗಾವಣೆ ಮಾಡುವ ಹಕ್ಕು ಈತನಿಗಿರುತ್ತದೆ. ಅಂದರೆ ಇದನ್ನ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶವಿರುತ್ತದೆ.
  3. ಇವರಿಗೆ ಮತದಾನ ಮಾಡುವ ಹಕ್ಕಿರುತ್ತದೆ. ವಾರ್ಷಿಕ ಜನರಲ್ ಬಾಡಿ ಮೀಟಿಂಗ್ ನಲ್ಲಿ ಮತದಾನ ಮಾಡುವ ಹಕ್ಕು ಇರುತ್ತದೆ.
  4. ಸಂಸ್ಥೆಗೆ ನಿರ್ದೇಶಕರನ್ನ ನೇಮಿಸಲು, ಆಡಿಟರ್ ನೇಮಿಸಲು ಹೀಗೆ ಒಂದು ಕಾರ್ಪೊರೇಟ್ ಸಂಸ್ಥೆಯಲ್ಲಿ ಉದ್ಭವವಾಗುವ ಎಲ್ಲಾ ನೇಮಕಾತಿಗಳಲ್ಲಿ ಕೂಡ ವೋಟ್ ಮಾಡುವ , ಅವರ ನೇಮಕದಲ್ಲಿ ಪಾಲ್ಗೊಳ್ಳುವ ಹಕ್ಕು ಕೂಡ ಈಕ್ವಿಟಿ ಷೇರುದಾರರಿಗಿರುತ್ತದೆ.
  5. ಸಂಸ್ಥೆಯ ಲಾಭದಲ್ಲಿ ಪಾಲು ಪಡೆದುಕೊಳ್ಳುವ ಹಕ್ಕನ್ನ ಕೂಡ ಇವರು ಪಡೆದುಕೊಂಡಿರುತ್ತಾರೆ. ಹೀಗೆ ಲಾಭಂಶ ನೀಡುವಿಕೆಗೆ ಡಿವಿಡೆಂಡ್ ಎನ್ನಲಾಗುತ್ತದೆ.
  6. ಈಕ್ವಿಟಿ ಷೇರುದಾರರು ಸಂಸ್ಥೆಯ ಫೈನಾಸಿಯಲ್ಸ್ ಗಳನ್ನ ಪರಿಶೀಲಿಸುವ ಹಕ್ಕನ್ನ, ಅವುಗಳ ಒಂದು ನಕಲು ಪಡೆದುಕೊಳ್ಳುವ ಹಕ್ಕನ್ನ ಕೂಡ ಪಡೆದುಕೊಂಡಿರುತ್ತಾರೆ .
  7. ಸಂಸ್ಥೆ ಪಬ್ಲಿಕ್ ಗೆ ಎಂದು ಹೊರಡಿಸುವ ಷೇರನ್ನ ಕೊಳ್ಳುವ ಹಕ್ಕು ಕೂಡ ಪಡೆದುಕೊಂಡಿರುತ್ತಾರೆ.
  8. ಸಂಸ್ಥೆ ಹೊರಡಿಸುವ ರೈಟ್ ಇಶ್ಯೂಸ್ , ಬೋನಸ್ ಶೇರ್ಸ್ ಜೊತೆಗೆ ಪಬ್ಲಿಕ್ ಗೆ ಹೋಗುವ ಮುಂಚೆಯೇ ಒಂದಷ್ಟು ಷೆರಿನಲ್ಲಿ ಹೂಡಿಕೆ ಮಾಡುವ ಹಕ್ಕನ್ನ ಪಡೆದುಕೊಂಡಿರುತ್ತಾರೆ.
  9. ತಮ್ಮ ಹಕ್ಕಿಗೆ ಚ್ಯುತಿ ಬಂದಿದೆ ಎನ್ನಿಸಿದರೆ ಸಂಸ್ಥೆಯ ವಿರುದ್ಧ  ಕಾನೂನು ರೀತಿ ಮೊಕದ್ದಮೆ ಹೂಡಬಹುದು.
  10. ಈಕ್ವಿಟಿ ಷೇರುದಾರರು ಜನರಲ್ ಬಾಡಿ ಮೀಟಿಂಗ್ ಅಥವಾ ಎಕ್ಸ್ಟ್ರಾ ಆರ್ಡಿನರಿ ಜನರಲ್ ಬಾಡಿ ಮೀಟಿಂಗ್ ಕರೆಯುವ ಹಕ್ಕನ್ನ ಹೊಂದಿರುತ್ತಾರೆ.
  11. ಸಂಸ್ಥೆ ದಿವಾಳಿಯಾದರೆ ಎಲ್ಲರಿಗೂ ಅವರ ಪಾಲಿನ ಹಣವನ್ನ ನೀಡಿದ ನಂತರ ಉಳಿದ ಹಣವನ್ನ ಪಡೆದುಕೊಳ್ಳುವ ಹಕ್ಕನ್ನ ಕೂಡ ಪಡೆದುಕೊಂಡಿದ್ದಾರೆ.

ಇದರ ಜೊತೆಗೆ ಸಮಯದಿಂದ ಸಮಯಕ್ಕೆ ಸಂಸ್ಥೆ ಮಾಡಿಕೊಳ್ಳುವ ಯಾವುದೇ ಚಿಕ್ಕ ಪುಟ್ಟ ಬದಲಾವಣೆಯ ಮಾಹಿತಿಯನ್ನ ಕೂಡ ಇವರು ಕೇಳಿ ಪಡೆದುಕೊಳ್ಳಬಹುದು. ಕೆಲವೊಮ್ಮೆ ಸಂಸ್ಥೆ ಇದನ್ನ ಎಲ್ಲರಿಗೂ ಹಂಚುತ್ತದೆ. ಕೆಲವೊಮ್ಮೆ ಇದರ ಅವಶ್ಯಕತೆ ಇಲ್ಲ ಎನ್ನಿಸಿದರೆ ಅದು ಹಂಚುವ ಕೆಲಸಕ್ಕೆ ಹೋಗುವುದಿಲ್ಲ. ಆದರೆ ಇದನ್ನ ಕೂಡ ಕೇಳಿ ಪಡೆದುಕೊಳ್ಳುವ ಹಕ್ಕು ಕೂಡ ಈಕ್ವಿಟಿ ಷೇರುದಾರನಿಗೆ ಇರುತ್ತದೆ.
 
ಸೆಕ್ಯುರಿಟಿ ಮಾರುಕಟ್ಟೆಯ ನಿಯಂತ್ರಣ:

ಮಾರುಕಟ್ಟೆ ಯಾವುದೇ ಇರಲಿ ಅದು ಸೆಕ್ಯುರಿಟೀಸ್ ಮಾರುಕಟ್ಟೆಯೇ ಆಗಬೇಕಿಲ್ಲ, ಅಲ್ಲಿ ಆಗುವ ಆಗುಹೋಗುಗಳನ್ನ ನಿಯಂತ್ರಣ ಮಾಡಲು ಒಂದು ಸಂಸ್ಥೆ ಬೇಕಾಗುತ್ತದೆ. ವಹಿವಾಟು ಹೆಚ್ಚುತ್ತಾ ಹೋದಂತೆ ನಿಯಂತ್ರಣ, ನಿಬಂಧನೆಗಳು ಬೇಕಾಗುತ್ತವೆ. ಸೆಕ್ಯುರಿಟೀಸ್ ಮಾರುಕಟ್ಟೆಯನ್ನ ನಿಯಂತ್ರಿಸಲು ಪ್ರಮುಖವಾಗಿ ನಾಲ್ಕು ಸಂಸ್ಥೆಗಳಿವೆ:

  1. ಸೆಬಿ -SEBI ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ.
  2. RBI - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
  3. DEA - ಡಿಪಾರ್ಟ್ಮೆಂಟ್ ಆಫ್ ಎಕನಾಮಿಕ್ ಅಫ್ಫೇರ್ಸ್
  4. MCA - ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫ್ಫೇರ್ಸ್.  

ಇವುಗಳಲ್ಲಿ ಸೆಬಿ ಮುಖ್ಯ ನಿಯಂತ್ರಕನ ಪಾತ್ರ ವಹಿಸುತ್ತದೆ. ಚೀಫ್ ರೆಗ್ಯುಲೇಟರ್ ಪಟ್ಟ ಸೆಬಿಯದ್ದು. ಉಳಿದ ಮೂರು ಸಂಸ್ಥೆಗಳು ಇಲ್ಲಿನ ವಹಿವಾಟಿನ ಮೇಲೆ ನಿಗಾ ಇಟ್ಟಿರುತ್ತವೆ. ತೀರಾ ಅವಶ್ಯಕ ಎನ್ನಿಸಿದ ಹೊರತು ಈ ಸಂಸ್ಥೆಗಳು ಇಲ್ಲಿನ ವಹಿವಾಟಿನಲ್ಲಿ ಮೂಗು ತೋರಿಸುವುದಿಲ್ಲ.

ಸೆಬಿ -SEBI ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ:
ಪಾರ್ಲಿಮೆಂಟ್ ಅನುಮೋದನೆಯೊಂದಿಗೆ ನೇಮಿಸಲ್ಪಟ್ಟ ಸ್ಟಾಟ್ಯೂಟರಿ ಸಂಸ್ಥೆಯಿದು. ಸೆಬಿ ಆಕ್ಟ್ ೧೯೯೨ ರ ಪ್ರಕಾರ ಇದು ಮಿನಿಸ್ಟ್ರಿ ಆಫ್ ಫೈನಾನ್ಸ್ ಅಡಿಯಲ್ಲಿ ಕೆಲಸ ಮಾಡುತ್ತದೆ. ಸೆಬಿ ಮಾರುಕಟ್ಟೆಯನ್ನ ಹದ್ದಿನ ಕಣ್ಣಿನಿಂದ ಕಾಯುವ ಕೆಲಸವನ್ನ ಮಾಡುತ್ತದೆ . ಮಾರುಕಟ್ಟೆ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಮಾಡುವುದು ಇದರ ಪ್ರಮುಖ ಉದ್ದೇಶ.

ಸೆಬಿಯ ಪ್ರಮುಖ ಕಾರ್ಯ / ಉದ್ದೇಶಗಳು ಹೀಗಿವೆ:

  1. ಹೂಡಿಕೆದಾರರ ಹಿತವನ್ನ ಕಾಪಾಡುವುದು. ಅಂದರೆ ಹೂಡಿಕೆಯ ಹಣವನ್ನ ಸಂಸ್ಥೆಗಳು ತಮ್ಮಿಚ್ಚೆಗೆ ತಕ್ಕಂತೆ, ಬೇಕಾಬಿಟ್ಟಿ ಖರ್ಚು ಮಾಡದಂತೆ ಮತ್ತು ಯಾವ ಉದ್ದೇಶಕ್ಕೆ ತೆಗೆದುಕೊಂಡಿದ್ದಾರೆ ಅದಕ್ಕೆ ಬಳಸುವಂತೆ ನೋಡಿಕೊಳ್ಳುವುದು. ಹೂಡಿಕೆದಾರನ ಹಣ ದುರುಪಯೋಗವಾಗದಂತೆ ಕಾಯುವುದು.
  2. ಸೆಕ್ಯುರಿಟಿ ಮರುಕಟ್ಟೆಯ ಹಿತರಕ್ಷಣೆ ಜೊತೆಗೆ ಮಾರುಕಟ್ಟೆಯ ಬೆಳವಣಿಗೆ ಕಡೆಗೆ ಗಮನ ನೀಡುವುದು.
  3. ಮಾರುಕಟ್ಟೆಯ ನಿಯಂತ್ರಿಸುವುದು.
  4. ಮಧ್ಯವರ್ತಿಗಳ ಮೇಲೆ ನಿಗಾ ಇರಿಸುವುದು ಅವರನ್ನ ನಿಯಂತ್ರಿಸುವುದು .
  5. ಹೂಡಿಕೆದಾರಲ್ಲಿ ಹೆಚ್ಚಿನ ಜ್ಞಾನ ಮತ್ತು ವಿಶ್ವಾಸ ತುಂಬುವುದು
  6. ಇನ್ಸೈಡರ್ ಟ್ರೇಡಿಂಗ್ಗಳು ಆಗದಂತೆ ಎಚ್ಚರಿಕೆವಹಿಸುವುದು.
  7. ಪ್ರೈಮರಿ ಮಾರುಕಟ್ಟೆಯಲ್ಲಿ ಆಗಬಹುದಾದ ಸಂಭವನೀಯ ಫ್ರಾಡ್ ಗಳನ್ನ ತಡೆಗಟ್ಟುವುದು
  8. ಹೆಚ್ಚು ಖರೀದಿ ಅಥವಾ ಸಂಸ್ಥೆಯನ್ನ ಖರೀದಿ ಮಾಡುವಾಗ ಏಕಸ್ವಾಮ್ಯವಾಗದಂತೆ ನೋಡಿಕೊಳ್ಳುವುದು.
  9. ಹೆಚ್ಚಿನ ಮಾರುಕಟ್ಟೆ ಅಧ್ಯನಕ್ಕೆ ಒತ್ತು ನೀಡುವುದು.
  10. ಮಾರುಕಟ್ಟೆಯನ್ನ ಸುಲಲಿತವಾಗಿ ನಡೆಸಲು ಬೇಕಾಗುವ ಇನ್ನಿತರೇ ಎಲ್ಲಾ ಕಾರ್ಯಗಳನ್ನ ಮಾಡುವುದು.

ಕೊನೆ ಮಾತು: ಮೊದಲೇ ಹೇಳಿದಂತೆ ಈಕ್ವಿಟಿ ಷೇರುದಾರ ಸಂಸ್ಥೆಯ ನಿಜವಾದ ಮಾಲೀಕ. ಹೀಗಾಗಿ ಸಂಸ್ಥೆಯ ಆಗುಹೋಗುಗಳ ಪೂರ್ಣ ಮಾಹಿತಿಯನ್ನ ಪಡೆದುಕೊಳ್ಳುವ ಹಕ್ಕು ಆತನಿಗಿರುತ್ತದೆ. ಸಂಸ್ಥೆಯ ಕಾರ್ಯಕಲಾಪದಲ್ಲಿ ಅತಿ ಸಾಮಾನ್ಯ ಈಕ್ವಿಟಿ ಷೇರುದಾರ ಪಾಲ್ಗೊಳ್ಳಲು ಸಾಧ್ಯವಿಲ್ಲ, ಆದರೆ ಹೆಚ್ಚಿನ ಮೊತ್ತದ ಷೇರನ್ನ ಹೊಂದಿದವರು ದಿನ ನಿತ್ಯದ ಕಾರ್ಯಕಲಾಪದಲ್ಲಿ, ಸಂಸ್ಥೆಯ ಚಿಕ್ಕಪುಟ್ಟ ಬದಲಾವಣೆಗಳಲ್ಲಿ ಕೂಡ ಪಾಲ್ಗೊಳ್ಳುವ ಅವಕಾಶವಿರುತ್ತದೆ. ನೆನಪಿರಲಿ ಹೆಚ್ಚಿನ ಹಕ್ಕು ಹೆಚ್ಚಿನ ಭಾದ್ಯತೆಯನ್ನ, ಅಪಾಯವನ್ನ ಕೂಡ ಹೊತ್ತು ತರುತ್ತದೆ. ಹೆಚ್ಚಿನ ಅಪಾಯಕ್ಕೆ ಸಿದ್ಧವಿರುವ ಹೂಡಿಕೆದಾರರಿಗೆ ಹೆಚ್ಚಿನ ಹಕ್ಕು ಕೂಡ ಸಿಗುತ್ತದೆ. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com