ಜಗತ್ತು ಎಲೆಕ್ಟ್ರಿಕ್ ವೆಹಿಕಲ್ ಕಡೆಗೆ ವಾಲುತ್ತಿದೆ ಎನ್ನುವುದು ಇಂದಿಗೆ ಹೊಸ ವಿಷಯವಲ್ಲ. ಭಾರತವೂ ಕೂಡ ಅತಿ ವೇಗವಾಗಿ ಎಲೆಕ್ಟ್ರಿಕ್ ವೆಹಿಕಲ್ಗಳನ್ನ ಅಪ್ಪಿಕೊಳ್ಳುತ್ತಿದೆ. ನಿಮಗೆಲ್ಲಾ ಗೊತ್ತಿರಲಿ , ಭಾರತ ಅಮೆರಿಕವನ್ನ ಕೂಡ ಹಿಂದಿಕ್ಕಿ ಜಗತ್ತಿನ ಅತಿ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಬೇಡಿಕೆಯನ್ನ ಮುಂದಿಡುವ ದೇಶವಾಗಿ ಇನ್ನೈದು ವರ್ಷದಲ್ಲಿ ಬದಲಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ವರ್ಷದ ಬಜೆಟ್ನಲ್ಲಿ ಬ್ಯಾಟರಿ ಮೇಲಿನ ಸಬ್ಸಿಡಿಯನ್ನ ಮುಂದುವರಿಸಿದೆ ಜೊತೆಗೆ ಲಿಥಿಯಂ ಸೆಲ್ಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನ ಕಡಿಮೆ ಮಾಡುವ ಮೂಲಕ ಈ ವಲಯದಲ್ಲಿ ಹೆಚ್ಚಿನ ಬೇಡಿಕೆಯನ್ನ ಸೃಷ್ಟಿ ಮಾಡುವಲ್ಲಿ ಸಹಾಯ ಹಸ್ತ ನೀಡಿದೆ. ಇದಕ್ಕೆ ಪ್ರಕೃತಿಯೂ ಕೂಡ ಜೊತೆಯಾಗಿದೆ ಎನ್ನುವಂತ ತೀರಾ ಇತ್ತೀಚಿಗೆ ಕಾಶ್ಮೀರದಲ್ಲಿ ಹತ್ತಿರತ್ತಿರ ೬ ಮಿಲಿಯನ್ ಟನ್ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಒಟ್ಟಿನಲ್ಲಿ ಎಲ್ಲವೂ EV ಮಾರುಕಟ್ಟೆ ಅತ್ಯಂತ ಭದ್ರವಾಗಿ ಮತ್ತು ಸಮೃದ್ಧವಾಗಿ ಬೆಳೆಯಲು ಸಹಕಾರ ನೀಡುವ ಅಂಶಗಳಾಗಿವೆ. ಇದರಿಂದ ಏನಾಗಬಹುದು ಎನ್ನುವ ಊಹೆ ನಿಮಗಿದೆಯೇ? ಡಿಸೆಂಬರ್ ೨೦೨೫ ರ ಅಂತ್ಯದ ವೇಳೆಗೆ ಹತ್ತಿರತ್ತಿರ ೪೦ ವಿವಿಧ ಮಾಡೆಲ್ ಎಲೆಕ್ಟ್ರಿಕ್ ವೆಹಿಕಲ್ಗಳು ಮಾರುಕಟ್ಟೆಗೆ ದಾಂಗುಡಿ ಇಡಲು ಸಿದ್ಧವಾಗುತ್ತಿವೆ.
ಬಹಳಷ್ಟು ಜನರು ಈ ವೆಹಿಕಲ್ ಕೊಳ್ಳಲು ಇನ್ನೂ ಮೀನಮೇಷ ಎಣಿಸುತ್ತಿರುವುದು ಕೂಡ ಸುಳ್ಳಲ್ಲ ಅದಕ್ಕೆ ಕಾರಣಗಳು ಅನೇಕ, ಹೀಗೆ ನಮ್ಮ ಡೀಸೆಲ್ ಅಥವಾ ಪೆಟ್ರೋಲ್ ಕಾರುಗಳನ್ನ ಕೊಳ್ಳುವ ಬದಲು ಎಲೆಕ್ಟ್ರಿಕ್ ವೆಹಿಕಲ್ ಕೊಳ್ಳುವ ಅನೇಕರ ಆಸೆಗೆ ತಣ್ಣೀರು ಎರಚುವ ಕಾರಣಗಳಲ್ಲಿ ಪ್ರಮುಖ ಕಾರಣಗಳನ್ನ ಹೀಗೆ ಪಟ್ಟಿ ಮಾಡಬಹುದು:
೧) ಬ್ಯಾಟರಿ ಆಯಸ್ಸು ಕಡಿಮೆ:
ಎಲ್ಲಕ್ಕೂ ಮೊದಲಿಗೆ ಈ ಎಲೆಕ್ಟ್ರಿಕ್ ಕಾರುಗಳು ನಡೆಯುವುದು ಲಿಥಿಯಂ ಎನ್ನುವ ಬ್ಯಾಟರಿ ಸಹಾಯದಿಂದ ಇವುಗಳ ಆಯಸ್ಸು ಐದರಿಂದ ಏಳು ವರ್ಷ. ಆನಂತರ ಈ ಬ್ಯಾಟರಿಗಳನ್ನ ಏನು ಮಾಡುವುದು ? ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಉಳಿಸಿದ ಹಣವನ್ನ ಹೊಸ ಬ್ಯಾಟರಿ ಕೊಳ್ಳಲು ಬಳಸಿದರೆ ಗ್ರಾಹಕನಿಗೆ ಉಳಿತಾಯವೆಲ್ಲಿ ಆಯ್ತು ? ಜಗತ್ತು ಈಗಾಗಲೇ ಹಳೆಯ ಮೊಬೈಲ್, ಕಂಪ್ಯೂಟರ್ ಇತ್ಯಾದಿ ಈ -ವೇಸ್ಟ್ ಗಳನ್ನ ಏನು ಮಾಡುವುದು ಎಂದು ತಿಳಿಯದೆ ಕಂಗಾಲಾಗಿದೆ.
೨) ಪರಿಸರ ಸ್ನೇಹಿ ಎನ್ನುವ ಸುಳ್ಳು ಮಾರಾಟದ ಅಂಶ:
ಮೊದಲೇ ಹೇಳಿದಂತೆ ಈ ಬ್ಯಾಟರಿಗಳು ಲಿಥಿಯಂ ನಿಂದ ತಯಾರಾಗುತ್ತವೆ. ಕಾರು ಎಷ್ಟು ದೊಡ್ಡದು ಎನ್ನುವುದರ ಮೇಲೆ ಬ್ಯಾಟರಿಯ ಗಾತ್ರ ಕೂಡ ನಿರ್ಧರಿತವಾಗುತ್ತದೆ. ಬಹಳಷ್ಟು ಅಧ್ಯಯನಗಳ ಪ್ರಕಾರ ಇಂತಹ ಬ್ಯಾಟರಿಗಳ ತಯಾರಿಕೆಯಲ್ಲಿ ಸಾಮಾನ್ಯಕ್ಕಿಂತ ದುಪ್ಪಟ್ಟು ಕಾರ್ಬನ್ ಬಿಡುಗಡೆಯಾಗುತ್ತದೆ. ಹೌದು ಸಾಮಾನ್ಯ ಕಾರಿನಂತೆ ಇದು ಹೊಗೆಯನ್ನ ಉಗುಳುವುದಿಲ್ಲ, ಆದರೆ ಬ್ಯಾಟರಿ ತಯಾರಿಕೆಯ ವೇಳೆಯಲ್ಲಿ ಇದು ಸಾಮಾನ್ಯ ಕಾರಿನ ದುಪ್ಪಟ್ಟು ಕಾರ್ಬನ್ ಬಿಡುಗಡೆ ಮಾಡಿರುತ್ತದೆ, ಹೀಗಾಗಿ ಖಂಡಿತ ಇದು ಪರಿಸರ ಸ್ನೇಹಿ ಅಲ್ಲ .
೩) ಸಾಮಾನ್ಯ ಕಾರುಗಳಿಗಿಂತ ಇದರ ಬೆಲೆ ಬಹಳ ಹೆಚ್ಚಾಗಿರುತ್ತದೆ:
ಪರಿಸರ ಸ್ನೇಹಿ ಕಾರುಗಳು ಎನ್ನುವ ಬುರುಡೆಯನ್ನ ಆಗಲೇ ಜನರು ನಂಬಿದ್ದಾರೆ. ಹೀಗಾಗಿ ಹಳೆಯ ಕಾರಿನ ಬದಲಿಗೆ ಇಂತಹ ಕಾರುಗಳನ್ನ ಕೊಂಡರೆ ಒಂದಷ್ಟು ಡಿಸ್ಕೌಂಟ್ ಕೊಡುತ್ತೇವೆ ಎನ್ನುತ್ತಾರೆ. ಸರಕಾರ ಅನುದಾನ ನೀಡುತ್ತದೆ. ಸದ್ದಿಲ್ಲದೇ ಕೋಟ್ಯಂತರ ರೂಪಾಯಿ ತೆರಿಗೆದಾರನ ಹಣ ಕರಗಿಹೋಗುತ್ತದೆ. ಇವೆಲ್ಲವುಗಳ ನಡುವೆ ನಮ್ಮ ಟ್ರಡಿಷನಲ್ ಕಾರುಗಳಿಗಿಂತ ೩೦ ರಿಂದ ೪೦ ಪ್ರತಿಶತ ಹೆಚ್ಚಿನ ಹಣವನ್ನ ಇಂದಿಗೆ ಈ ಕಾರುಗಳನ್ನ ಕೊಳ್ಳಲು ನೀಡಬೇಕಾಗಿದೆ. ಇದು ಗ್ರಾಹಕನ ಜೋಬಿಗೆ ಹೊರೆಯಾಗಿದೆ. ಎಲೆಕ್ಟ್ರಿಕ್ ವೆಹಿಕಲ್ಗಳ ಬೆಲೆ ಸಾಮಾನ್ಯ ಗ್ರಾಹಕನ ಕೈಗೆಟಕುವಂತೆ ಆದರೆ ಈ ಮಾರುಕಟ್ಟೆ ಇನ್ನಷ್ಟು ನಾಗಾಲೋಟದಿಂದ ಅಭಿವೃದ್ಧಿ ಕಾಣುವುದರಲ್ಲಿ ಸಂಶಯವಿಲ್ಲ.
೪) ಮುಂದಿನ ದಿನಗಳಲ್ಲಿ ಇಂತಹ ವೇಸ್ಟ್ ಗಳನ್ನ ತಂದು ಸುರಿಯುವ ಸ್ಥಾನವಾಗಿ ಭಾರತ ಬದಲಾಗುವ ಸಾಧ್ಯತೆಯನ್ನ ಕೂಡ ತಳ್ಳಿಹಾಕುವಂತಿಲ್ಲ:
ಬೆಂಗಳೂರಿನ ಕಸವೆಲ್ಲಾ ಪಕ್ಕದಲ್ಲಿರುವ ಊರಿನಲ್ಲಿ ಸುರಿಯುತ್ತಾರೆ. ಆ ಊರಿನ ಜನರ ಕಥೆ ಕೇಳಲಾಗದು. ಅಂತೆಯೇ ಮುಂದೊಂದು ದಿನ ಜಗತ್ತಿನ ಎಲ್ಲೆಡೆ ಕಸವಾಗಿ ಮಾರ್ಪಟ್ಟ ಬ್ಯಾಟರಿಗಳನ್ನ ತಂದು ಭಾರತದಲ್ಲಿ ಸುರಿಯುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು ? ಅದಕ್ಕೆ ಒಪ್ಪಂದವಾಗಿದೆಯೇ? ಈ ಹಿಂದೆ ಕಂಟೈನರ್ ಗಟ್ಟಲೆ ಈ -ವೇಸ್ಟ್ ಅನ್ನು ಭಾರತದಲ್ಲಿ ತಂದು ಸುರಿದಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಹೀಗಾಗಿ ಭಾರತ ಜಗತ್ತಿನ ಬಳಸಿ ಉಳಿದ ಬ್ಯಾಟರಿಗಳನ್ನ ಸುರಿಸಿಕೊಳ್ಳುವ ತಿಪ್ಪೆಯಾಗಿ ಮಾರ್ಪಾಟಾಗದಂತೆ ಎಚ್ಚರವಹಿಸಬೇಕಾಗಿದೆ.
೫) ರೇಂಜ್ ಎನ್ನುವ ಭೂತಪ್ಪ:
ಇದು ಸಮಸ್ಯೆಯಲ್ಲ ಆದರೆ ನಮ್ಮ ಜನ ಇದನ್ನ ದೊಡ್ಡ ಭೂತಪ್ಪನನ್ನಾಗಿ ಪರಿವರ್ತಿಸಿ ಕೂಡಿಸಿದ್ದಾರೆ. ಸಾಮಾನ್ಯವಾಗಿ ಇಂದಿಗೆ ೨೫೦/೩೫೦ ಕಿಲೋಮೀಟರ್ ಚಲಿಸುವ ಕಾರುಗಳು ಲಭ್ಯವಿವೆ. ನಂತರದ ಪ್ರಯಾಣಕ್ಕೆ ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಕೂಡ ಹೀಗೆ ಅಲ್ಲವೇ? ಆದರೆ ಚಾರ್ಜಿಂಗ್ಗೆ ಸ್ವಲ್ಪ ಸಮಯವಿಡಿಯುತ್ತದೆ. ಫಾಸ್ಟ್ ಚಾರ್ಜಿನ್ಗ್ ಎನ್ನುವ ಆಯ್ಕೆಯಿದೆ. ಆದರೂ ಕನಿಷ್ಠ ಅರ್ಧ ಗಂಟೆಯಿಲ್ಲದೆ ಚಾರ್ಜ್ ಮಾಡುವುದು ಸಾಧ್ಯವಿಲ್ಲದ ಕೆಲಸ. ಹೀಗಾಗಿ ದೂರದೂರಿಗೆ ಹೋಗುವವರು ಇದನ್ನ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಇನ್ನೂ ಸ್ಥಿರತೆ ಕಾಣದ ಬ್ಯಾಟರಿ ಕ್ಷಮತೆ ಕೂಡ ಸಮಸ್ಯೆಯಾಗಿದೆ. ಪೂರ್ಣ ಚಾರ್ಜ್ ಎಂದು ತೂರಿಸಿದ ಬ್ಯಾಟರಿಗಳು ಐವತ್ತು ಕಿಲೋಮೀಟರ್ ಚಲಿಸಿ ಉಸ್ಸಪ್ಪಾ ಎಂದು ಕುಳಿತ ಉದಾಹರಣೆಗಳು ಕೂಡ ಕಣ್ಣ ಮುಂದಿದೆ.
ಮೇಲೆ ವಿವರಿಸಿದ ಸಮಸ್ಯೆಗಳು ಗ್ರಾಹಕನ ಮುಂದೆ ಮತ್ತು EV ತಯಾರಕರ ಮುಂದೆ ಇದ್ದೂ ಕೂಡ ಈ ವಲಯ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕೂಡ ಕಾರಣಗಳನ್ನ ಪಟ್ಟಿ ಮಾಡಬಹದು:
೧) ಜಗತ್ತಿಗೆ ಜಗತ್ತೇ ಎಲೆಕ್ಟ್ರಿಕ್ ವೆಹಿಕಲ್ಗಳನ್ನ ಅಪ್ಪಿಕೊಳ್ಳುತ್ತಿದೆ:
ಜಗತ್ತು ಯಾವಾಗಲೂ ಒಂದು ಟ್ರೆಂಡ್ ಅಥವಾ ಪ್ಯಾಟ್ರನ್ ಅನುಸರಿಸುತ್ತದೆ. ಇಂದಿನ ಟ್ರೆಂಡ್ ಎಲೆಕ್ಟ್ರಿಕ್ ವೆಹಿಕಲ್ ಆಗಿದೆ. ಚೀನಾ , ಅಮೇರಿಕಾ ಮತ್ತು ಯೂರೋಪಿನ ಕಾರು ಮಾರಾಟದಲ್ಲಿ ಎರಡು ಅಂಕೆಯ ಮಾರಾಟ ಎಲೆಕ್ಟ್ರಿಕ್ ವೆಹಿಕಲ್ಗಳು ಬರೆದುಕೊಳ್ಳುತ್ತಿವೆ. ೬, ೭, ೯ ಪ್ರತಿಶತವಿದ್ದ ಮಾರಾಟದ ಸಂಖ್ಯೆ ೨೦೨೨ ರಲ್ಲಿ ೧೩ ಪ್ರತಿಶತಕ್ಕೆ ತಲುಪಿದೆ. ಅಂದರೆ ಪ್ರತಿ ನೂರು ಕಾರು ಮಾರಾಟದಲ್ಲಿ ೧೩ ಎಲೆಕ್ಟ್ರಿಕ್ ವೆಹಿಕಲ್ ಎನ್ನುವ ಮಟ್ಟಕ್ಕೆ ಜಗತ್ತು ಬದಲಾಗಿದೆ. ಟೊಯೋಟಾ ಸಂಸ್ಥೆ ೨೦೩೦ ರ ವೇಳೆಗೆ ೩.೫ ಮಿಲಿಯನ್ ವಾರ್ಷಿಕ ಮಾರಾಟವನ್ನ ಗುರಿಯನ್ನಾಗಿಸಿಕೊಂಡಿದೆ. ವೊಲ್ಸ್ವಾಗನ್ ಸಂಸ್ಥೆ ತನ್ನ ಉತ್ಪಾದನೆಯ ೭೦ ಪ್ರತಿಶತ ೨೦೩೦ ರ ವೇಳೆಗೆ ಎಲೆಕ್ಟ್ರಿಕ್ ಆಗಿರಲಿದೆ ಎನ್ನುವ ಮಾತನ್ನ ಆಡುತ್ತಿದೆ.
ಇದನ್ನೂ ಓದಿ: ಹೂಡಿಕೆ ಮಾಡಬೇಕಾದ ಅವಶ್ಯಕತೆ ಏಕೆ ಬಂತು?
೨) ಎಲ್ಲೆಡೆ ಕಾಣುತ್ತಿರುವ ಎಲೆಕ್ಟ್ರಿಕ್ ಚಾರ್ಜಿಂಗ್ ಸೆಂಟರ್ಗಳು:
ನಿಮಗೆಲ್ಲಾ ಗೊತ್ತಿರುವಂತೆ ೨೦೩೦ ರ ನಂತರ ಭಾರತದಲ್ಲಿ EV ಅಂದರೆ ಎಲೆಕ್ಟ್ರಿಕಲ್ ವೆಹಿಕಲ್ಸ್ ನ ಭರಾಟೆ ಹೆಚ್ಚಾಗಲಿದೆ. ನಿಧಾನವಾಗಿಯಾದರೂ ಸರಿಯೇ ಪೆಟ್ರೋಲ್ ಬಂಕ್ ಗಳು ನೇಪಥ್ಯವನ್ನ ಸೇರಲಿವೆ. ಆ ಜಾಗವನ್ನ ನಿಧಾನವಾಗಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಗಳು ಆಕ್ರಮಿಸುತ್ತವೆ.
೩) ರೇಂಜ್ ತಿಕ್ಕಾಟಕ್ಕೂ ಕೊನೆ ಬೀಳಲಿದೆ:
ಹೆಚ್ಚಾಗುತ್ತಿರುವ ಚಾರ್ಜಿಂಗ್ ಸೆಂಟರ್ಗಳ ಜೊತೆಗೆ ಬ್ಯಾಟರಿ ರೇಂಜ್ ಕೂಡ ಬಹಳಷ್ಟು ಹೆಚ್ಚಾಗುತ್ತಿದೆ. ಈಗಾಗಲೇ ೪೫೦ ಕಿಲೋಮೀಟರಿಗೂ ಹೆಚ್ಚು ಒಂದು ಚಾರ್ಜ್ ನಲ್ಲಿ ಪಡೆಯಬಹುದಾದ ವೆಹಿಕಲ್ಗಳು ಮಾರುಕಟ್ಟೆಗೆ ಬಂದಿವೆ. ಮುಂಬರುವ ದಿನಗಳಲ್ಲಿ ಇದು ಒಂದು ಸಮಸ್ಯೆ ಅಲ್ಲವೇ ಅಲ್ಲ ಎನ್ನುವ ಮಟ್ಟಕ್ಕೆ ಬದಲಾವಣೆ ಹೊಂದಲಿದೆ. ಮನೆಯಿಂದ ಚಾರ್ಜ್ ಮಾಡಿಕೊಂಡು ಹೊರಟು ಮತ್ತೆ ಮನೆಯಲ್ಲೇ ಚಾರ್ಜ್ ಮಾಡಿಕೊಳ್ಳಬಹುದಾದ ರೇಂಜ್ ಇರುವ ಕಾರುಗಳು ಬರಲಿವೆ.
೪) ಎಕಾನಮಿ ಆಫ್ ಲಾರ್ಜ್ ಸ್ಕೇಲ್:
ಯಾವಾಗ ಎಲ್ಲರೂ ಈ ಕಾರುಗಳನ್ನ ಉಪಯೋಗಿಸಲು ಶುರು ಮಾಡುತ್ತಾರೆ ಆಗ ಸಹಜವಾಗೇ ಇವುಗಳ ಬೆಲೆಯಲ್ಲಿ ಇಳಿಕೆಯಾಗುತ್ತದೆ. ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್ ವೆಹಿಕಲ್ಗಳು ಹೆಚ್ಚಿನ ಬೆಲೆಯನ್ನ ಹೊಂದಿವೆ. ಕಾಲ ಕ್ರಮೇಣ ಇವುಗಳ ಬೆಲೆ ಕೂಡ ಸಾಮಾನ್ಯ ಕಾರಿನ ಬೆಲೆಯ ಮಟ್ಟಕ್ಕೆ ಸಿಗಲಿವೆ. ಜಿಎಸ್ಟಿ ೧೨ ರಿಂದ ೫ ಕ್ಕೆ ೨೦೨೩ ರಲ್ಲಿ ಇಳಿಕೆಯಾಗಿದೆ.
೫) ೨೦೩೦ ರ ವೇಳೆಗೆ ತೈಲಾಧಾರಿತ ಎಕಾನಮಿಯಿಂದ ಹೊರಬರಬೇಕು ಎನ್ನುವ ಅಲಿಖಿತ ಒಪ್ಪಂದವಾಗಿದೆ:
ಜಗತ್ತನ್ನ ತಮ್ಮಿಚ್ಚೆಗೆ ತಕ್ಕಂತೆ ನಡೆಸುವುದು ಕೇವಲ ೧೦/೧೨ ಮನೆತನೆಗಳು. ಅವರಿಗೆ ನಮ್ಮ ಸಮಾಜ , ಆರ್ಥಿಕತೆ ತೈಲದ ಮೇಲೆ ಆಧಾರವಾಗಿ ನಿಂತಿರುವುದು ಬೇಕಿಲ್ಲ. ಹೀಗಾಗಿ ಆಟದಲ್ಲಿ ಬದಲಾವಣೆ ತರುತ್ತಿದ್ದಾರೆ. ನಮ್ಮ ಅನುಮತಿ ಇಲ್ಲಿ ಬೇಕಿಲ್ಲ. ದೊಡ್ಡ ಆಟದ ನಿಯಮಗಳನ್ನ ಪಾಲಿಸುವುದು , ಇಷ್ಟವಿರಲಿ ಅಥವಾ ಬಿಡಲಿ ಅದರಲ್ಲಿ ಪಾಲ್ಗೊಳ್ಳುವುದು ಮಾತ್ರ ಜನತೆಯ ಕೆಲಸ.
ಕೊನೆ ಮಾತು: ಮುಖ್ಯವಾಗಿ ಇದು ಪರಿಸರ ಪ್ರೇಮಿ ಕಾರು ಎನ್ನುವುದು ಶುದ್ಧ ಸುಳ್ಳು. ನಿಮಗೆ ಒಂದು ವಿಷಯ ತಿಳಿದಿರಲಿ , ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಆವಿಷ್ಕಾರವಾದ ಹೊಸತರಲ್ಲಿ ಇದರ ಬಗೆ ಬಗೆಯ ಉಪಯೋಗದ ಬಗ್ಗೆ ಎಲ್ಲರೂ ಹೊಗಳಿ ಬರೆದದ್ದೇ ಬರೆದದ್ದು, ಇದು ಬಹು ಉಪಯೋಗಿ ಸಾಧನ, ಶತಮಾನದ ಅತ್ಯುತ್ತಮ ಆವಿಷ್ಕಾರ ಎಂದೆಲ್ಲಾ ಹಾಡಿ ಹೊಗಳಿದ ನಾಯಕರ ಸಂಖ್ಯೆ ಲೆಕ್ಕಕಿಲ್ಲ. ಅಂದಿಗೆ ಇದರ ಜನಕರಿಗೆ ಇದರಿಂದ ಆಗುವ ತೊಂದರೆಯೇ ಅರಿವಿರಲಿಲ್ಲವೇ? ಖಂಡಿತ ಇತ್ತು. ಆದರೆ ಸದ್ಯದ ಮಟ್ಟಿನ ಜಯ , ಜನಪ್ರಿಯತೆ , ಕಿಸೆ ತುಂಬಾ ಕಾಂಚಾಣ ಸಿಕ್ಕರೆ ಯಾರು ಬೇಡವೆನ್ನುತ್ತಾರೆ ಹೇಳಿ? ಇವತ್ತಿಗೆ ವಾಹ್ ಎನ್ನಿಸುವ ಈ ಎಲೆಕ್ಟ್ರಿಕ್ ಕಾರಿನ ಅವಾಂತರ ಎರಡು ದಶಕದ ನಂತರ ಜಗತ್ತಿಗೆ ತಿಳಿಯುತ್ತದೆ.ಮುಂದಿನ ದಿನದ ಬಗ್ಗೆ ಯೋಚಿಸುವ ಸಮಯ ಯಾರಿಗಿದೆ. ಮುಂದಿನ ದಶಕ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆ ಹವಾ ಜೋರಾಗಿರುತ್ತದೆ. ಈ ವಲಯದಲ್ಲಿ ಹೂಡಿಕೆ ಮಾಡಿ ಪಸಲು ತೆಗೆದುಕೊಳ್ಳುವ ಜಾಣತನ ನಿಮ್ಮದಾಗಿರಲಿ. ನೀವು ಬೇಡವೆಂದು ಬಿಟ್ಟರೆ ಬೇರೆಯವರು ಹೂಡಿಕೆ ಮಾಡುವುದನ್ನ ತಪ್ಪಿಸಲಾಗುವುದಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement