social_icon

ಜಗತ್ತಿನಲ್ಲಿ ಕುಟುಂಬ ವ್ಯಾಪಾರದ್ದೇ ಕಾರುಬಾರು! (ಹಣಕ್ಲಾಸು)

ಹಣಕ್ಲಾಸು-342

ರಂಗಸ್ವಾಮಿ ಮೂನಕನಹಳ್ಳಿ

Published: 12th January 2023 11:28 AM  |   Last Updated: 12th January 2023 04:50 PM   |  A+A-


Family Business (file pic)

ಕುಟುಂಬ ವ್ಯಾಪಾರದ್ದೇ ಕಾರುಬಾರು (ಸಾಂಕೇತಿಕ ಚಿತ್ರ)

Posted By : Srinivas Rao BV
Source :

ವ್ಯಾಪಾರ ಮಾಡಬೇಕು, ತಮ್ಮ ಬಲದ ಮೇಲೆ ಉದ್ದಿಮೆದಾರನಾಗಬೇಕು ಎನ್ನುವ ಕನಸು ಬಹಳಷ್ಟು ಜನರಿಗೆ ಇರುವುದು ಕೂಡ ಸಹಜ. ಆದರೆ ವ್ಯಾಪಾರ ಎನ್ನುವುದು ಅಷ್ಟು ಸುಲಭವಲ್ಲ. ಉದ್ದಿಮೆದಾರನಾಗಲು ಬೇಕಾಗುವ ಮನಸ್ಥಿತಿ ಬೆಳಸಿಕೊಳ್ಳಬೇಕು. ಇದೇನಿದು ಮನಸ್ಥಿತಿ?

ಗಮನಿಸಿ ನೋಡಿ ಒಬ್ಬ ವೇತನಕ್ಕೆ ದುಡಿಯುವ ವ್ಯಕ್ತಿಯ ಮನಸ್ಥಿತಿ ಭದ್ರತೆಯನ್ನ ಹೆಚ್ಚು ಇಷ್ಟಪಡುತ್ತದೆ. ಅದೇ ಉದ್ದಿಮೆದಾರನ ಮನಸ್ಥಿತಿ ನಾಳಿನ ಅಸ್ಥಿರತೆಯನ್ನ ತಡೆದುಕೊಂಡು, ಎಲ್ಲಾ ಅಪಾಯ ಮತ್ತು ಬದಲಾವಣೆಗಳನ್ನ ಮೆಟ್ಟಿನಿಂತು ಬೇರೆಯವರಿಗೆ, ಸಮಾಜಕ್ಕೆ ಭದ್ರತೆಯನ್ನ ನೀಡುವ ಕೆಲಸವನ್ನ ಮಾಡುತ್ತಾರೆ. ಇದು ಸರಿ, ಇದು ತಪ್ಪು ಎನ್ನುವುದನ್ನ ಹೇಳುವುದು ಈ ಬರಹದ ಉದ್ದೇಶವಲ್ಲ. ಮನಸ್ಥಿತಿ ಎನ್ನುವುದು ಆಯಾ ವ್ಯಕ್ತಿಯನ್ನ ಅವಲಂಬಿಸಿದೆ. ಕೆಲವರು ಬೇರೆ ದಾರಿಯಿಲ್ಲದೆ ಉದ್ದಿಮೆದಾರರಾಗಿದ್ದರೆ, ಕೆಲವರು ಉದ್ದಿಮೆದಾರರಾಗಬೇಕು ಎನ್ನುವ ಆಶಯ, ಮನೋಬಲದಿಂದ ಉದ್ದಿಮೆದಾರರಾಗಿದ್ದರೆ. ಜಗತ್ತಿನ ಬಹುತೇಕರು ವೇತನಕ್ಕೆ ಕೆಲಸ ಮಾಡುತ್ತಾರೆ. ಮೊದಲೇ ಹೇಳಿದಂತೆ ಉದ್ದಿಮೆದಾರರಾಗುವುದು ಸುಲಭದ ಮಾತಲ್ಲ. ಆಂತರಿಕ ಶಕ್ತಿಯ ಜೊತೆಗೆ ಹೊರ ಜಗತ್ತಿನ ಬದಲಾವಣೆಗಳನ್ನ, ಅಸ್ಥಿರತೆಯ ಜೊತೆಗೆ ಯಾವಾಗ ಬೇಕಾದರೂ ಕುಸಿತ ಕಾಣಬಹುದಾದ ಸಂಭಾವ್ಯತೆಯನ್ನ ಮೆಟ್ಟಿ ನಿಲ್ಲುವ ಮನೋಬಲ ಇದ್ದವರಿಗೆ ಮಾತ್ರ ಉದ್ದಿಮೆ ಕಟ್ಟಲು ಸಾಧ್ಯ.

ಇದನ್ನೂ ಓದಿ: ನಾವು ಅಪ್ಡೇಟ್ ಆಗುವುದು ಎಲ್ಲಾ ಹೂಡಿಕೆಗಿಂತ ಮೊದಲು ಮಾಡಬೇಕಾದ ಹೂಡಿಕೆ!

ಕುಟುಂಬ ಕಟ್ಟಿದ ವ್ಯಾಪಾರವನ್ನ ಮುಂದುವರಿಸುವರ ಸಂಖ್ಯೆ ಮೂರನೇ ತಲೆಮಾರಿನ ವೇಳೆಗೆ ಕುಸಿತ ಕಾಣುತ್ತದೆ ಎನ್ನುತ್ತದೆ ಅಂಕಿ-ಅಂಶ. ಹಾಗೆಯೇ ಬಹುತೇಕ ಯಾವುದೇ ವಲಯದಲ್ಲಿ ಪ್ರಾರಂಭ ಮಾಡಿದ 90 ಪ್ರತಿಶತಕ್ಕೂ ಹೆಚ್ಚು ಉದ್ದಿಮೆಗಳು ವರ್ಷ ಪೂರ್ಣಗೊಳಿಸುವುದರಲ್ಲಿ ಮುಚ್ಚಿ ಹೋಗುತ್ತವೆ ಎನ್ನುವುದು ಕೂಡ ಸತ್ಯ. ಕುಟುಂಬ ಪ್ರಾರಂಭ ಮಾಡಿದ ಉದ್ದಿಮೆಗಳು ಜಗತ್ತಿನ ತುಂಬಾ ತುಂಬಿಕೊಂಡಿವೆ. ಏಳೂವರೆ ಬಿಲಿಯನ್ ಜನಸಂಖ್ಯೆಯ ಈ ಜಗತ್ತಿನಲ್ಲಿ ಕುಟುಂಬದ ಹಿಡಿತದಲ್ಲಿರುವ 500 ಉದ್ದಿಮೆಗಳು ಜಗತ್ತನ್ನ ಆಳುತ್ತಿವೆ. ಸಮಾನತೆ, ಸ್ವಂತಂತ್ರ್ಯ ಇತ್ಯಾದಿಗಳ ಪಾಠ ಹೇಳುವ ದೊಡ್ಡಣ್ಣ ಅಮೇರಿಕಾದಿಂದ, ಜರ್ಮನಿ, ಫ್ರಾನ್ಸ್, ನೆದರ್ಲ್ಯಾಂಡ್, ಸೌತ್ ಕೊರಿಯಾ, ಭಾರತ, ಸ್ವಿಸ್, ಕೆನಡಾ, ಚೀನಾ ಇತ್ಯಾದಿ ದೇಶಗಳಲ್ಲಿ ವ್ಯಾಪಾರದ ಮೇಲಿನ ಹಿಡಿತವನ್ನ ಹೊಂದಿವೆ.

ಭಾರತ ದೇಶದ ಒಟ್ಟು ಜಿಡಿಪಿಯ 79 ಪ್ರತಿಶತ ಕುಟುಂಬದ ಆಡಳಿತದಲ್ಲಿರುವ ಸಂಸ್ಥೆಗಳಿಂದ ಬರುತ್ತಿದೆ ಎಂದರೆ ಅದೆಷ್ಟು ದೊಡ್ಡದು ಎನ್ನುವುದರ ಅರಿವು ನಿಮ್ಮದಾಗುತ್ತದೆ. ಜಗತ್ತಿನ ಅತ್ಯಂತ ಮುಂದುವರಿದ ದೇಶ ಎನ್ನುವ ಹೆಗ್ಗಳಿಕೆ ಹೊಂದಿರುವ ಜರ್ಮನಿಯ 90 ಪ್ರತಿಶತ ವ್ಯಾಪಾರ, ವಹಿವಾಟು ಕುಟುಂಬದ ಆಡಳಿತದಲ್ಲಿದೆ! ಹಾಗೆಯೇ ಜಗತ್ತಿನ 500 ಬಲಿಷ್ಠ ಕುಟುಂಬದ ಆಡಳಿತ ಹೊಂದಿರುವ ಸಂಸ್ಥೆಗಳಲ್ಲಿ 119 ಅಮೇರಿಕಾ ದೇಶದಲ್ಲಿದೆ, ನಿಮಗೆ ತಿಳಿದಿರಲಿ ಅಮೇರಿಕಾ ದೇಶದ 81 ಪ್ರತಿಶತ ಆದಾಯವನ್ನ ಈ 117 ಸಂಸ್ಥೆಗಳು ನೀಡುತ್ತಿವೆ.

ಇನ್ನು ಚೀನಾ ದೇಶದಲ್ಲಿ ಕಮ್ಯುನಿಸಂ ಇದ್ದೂ ಕೂಡ ಪರಿಸ್ಥಿತಿ ವಿಭಿನ್ನವಾಗಿಲ್ಲ, ಅಲ್ಲಿಯೂ ಕುಟುಂಬ, ಮನೆತನಗಳ ದರ್ಬಾರು ಅಭಾದಿತ. ಸೌತ್ ಕೊರಿಯಾ 14 ಕುಟುಂಬಗಳು ನಡೆಸುವ ಸಂಸ್ಥೆಗಳ ದೇಶ ಎಂದು ಧಾರಾಳವಾಗಿ ಹೇಳಬಹುದು. ಜಗತ್ತಿನ ಯಾವುದೇ ದೇಶವನ್ನ ನೀವು ಗಮನಿಸಿ, ಎಲ್ಲೆಡೆಯೂ ನಿಮಗೆ ಇದೆ ಅಂಕಿಅಂಶಗಳು ಸಿಗುತ್ತವೆ. ಸ್ವಭಾವತಃ ಮನುಷ್ಯನ ಸ್ವಭಾವ ಒಂದೇ, ಹಿಂದೆಲ್ಲ ರಾಜ ಮನೆತನಗಳು ಆಳುತ್ತಿದ್ದರು, ಇಂದಿಗೆ ಅವರ ಜಾಗವನ್ನ ವ್ಯಾಪಾರಸ್ಥ ಕುಟುಂಬಗಳು ಬದಲಿಸಿವೆ. ಹೇಗೆ ಮುಂದಿನ ತಲೆಮಾರಿನಲ್ಲಿ ಉತ್ತಮ ರಾಜ ಸಿಗದ ಕಾರಣ ಕೆಲವು ರಾಜ ಮನೆತನೆಗಳು ಅಳಿದವು, ಥೇಟ್ ಹಾಗೆಯೇ ವ್ಯಾಪಾರಸ್ಥ ಕುಟುಂಬಗಳು ಕೂಡ ಅವನತಿ ಕಾಣುತ್ತವೆ, ಅವುಗಳ ಜಾಗದಲ್ಲಿ ಹೊಸ ಮನೆತನ, ಕುಟುಂಬ ಬರುತ್ತದೆ. ಜಗತ್ತಿನಾದ್ಯಂತ ಇದೇ ಕಥೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಬೇಕಿದೆ ಸಪ್ತ ವಿತ್ತೀಯ ಸಂಕಲ್ಪಗಳು!

ಕುಟುಂಬ ನಿಯಂತ್ರಣದ ವ್ಯಾಪಾರದಲ್ಲಿ ಜಪಾನ್ ವಿಶಿಷ್ಟವಾಗಿ ನಿಲ್ಲುತ್ತದೆ. ಜಾಗತಿಕವಾಗಿ ಕೇವಲ 30 ಪ್ರತಿಶತ ಕುಟುಂಬ ನಿಯಂತ್ರಣದಲ್ಲಿರುವ ಸಂಸ್ಥೆಗಳು ಮುಂದಿನ ತಲೆಮಾರಿನ ಒಡೆತನಕ್ಕೆ ಸಿಗುತ್ತವೆ. ಉಳಿದರ 70 ಪ್ರತಿಶತ ಕುಟುಂಬ ಹೊರತುಪಡಿಸಿದ ನಾಯಕನನ್ನ ಹುಡುಕಿಕೊಳ್ಳುತ್ತವೆ. ಮೂರು ಮತ್ತು ನಾಲ್ಕನೇ ತಲೆಮಾರಿಗೆ ಅದೇ ಕುಟುಂಬದ ನಾಯಕತ್ವ ಹೊಂದಿರುವ ಸಂಸ್ಥೆಗಳು ಕೇವಲ 3/4 ಪ್ರತಿಶತ ಎನ್ನುವುದು ಅಚ್ಚರಿಯ ವಿಷಯವಲ್ಲ. ಜಪಾನ್ ವಿಶಿಷ್ಟವಾಗಿ ನಿಲ್ಲುವುದು ಈ ವಿಷಯದಲ್ಲಿ!

ಜಪಾನಿನಲ್ಲಿರುವ ಹೋಷಿ ರ್ಯೋಕನ್ ( Hoshi Ryokan ) ಎನ್ನುವ ಹೋಟೆಲ್ 718 ನೇ ಇಸವಿಯಿಂದ ಅದೇ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ. ಇವತ್ತಿನ ಆಡಳಿತ ಮಂಡಳಿ 46ನೇ ತಲೆಮಾರು !! ಜಾಗತಿಕವಾಗಿ ಕುಟುಂಬ ನಡೆಸಿಕೊಂಡು ಬಂದಿರುವ ಮತ್ತು 200 ವರ್ಷಕ್ಕೂ ಹೆಚ್ಚು ಕಾಲ ತಮ್ಮ ಅಸ್ಥಿತ್ವ ಉಳಿಸಿಕೊಂಡಿರುವ ಸಂಸ್ಥೆಗಳ ಸಂಖ್ಯೆ ಐದು ಸಾವಿರ, ಇದರಲ್ಲಿ 60 ಪ್ರತಿಶತ ಅಂದರೆ 3 ಸಾವಿರ ಸಂಸ್ಥೆಗಳು ಜಪಾನ್ ದೇಶದಲ್ಲಿದೆ. 
 
ಉದ್ದಿಮೆ ಕಟ್ಟಲು ಮತ್ತು ಅದನ್ನ ಸುಸ್ಥಿರವಾಗಿ ನಡೆಸಿಕೊಂಡು ಹೋಗಲು ಜಪಾನೀಯರ ಬಳಿ ಮಂತ್ರ ದಂಡವಿಲ್ಲ , ಆದರೆ ಕೆಲವು ಸರಳ, ಅತಿ ಸರಳ ಸೂತ್ರಗಳಿವೆ ಅವುಗಳನ್ನ ಅಳವಡಿಸಿಕೊಂಡರೆ ಯಶಸ್ಸಿನ ಸಂಭಾವ್ಯತೆ ಹೆಚ್ಚಾಗುತ್ತದೆ. ಅಂದಹಾಗೆ ಈ ಸೂತ್ರವನ್ನ ಕೇವಲ ಕುಟುಂಬ ಪ್ರಾರಂಭಿಸುವ ಉದ್ದಿಮೆಗಳು ಮಾತ್ರ ಪಾಲಿಸಬೇಕೆಂದಿಲ್ಲ , ನಮ್ಮ ಇಂದಿನ ದಿನದ ನವೋದ್ದಿಮೆಗಳು ಕೂಡ ಇದನ್ನ ಅಳವಡಿಸಿಕೊಳ್ಳಬಹುದು. ಸಂಸ್ಥೆ ಹಳೆಯದೋ , ಹೊಸತೋ, ಯಾವ ವಲಯದ್ದು ಇತ್ಯಾದಿ ಯಾವ ಅಂಶಗಳು ಕೂಡ ಇಲ್ಲಿ ಗಣನೆಗೆ ಬರುವುದಿಲ್ಲ, ಅಂದರೆ ಇದನ್ನ ಯಾವ ಸಂಸ್ಥೆ ಬೇಕಾದರೂ ಯಾವುದೇ ಹಂತದಲ್ಲಿದ್ದರೂ ತಮ್ಮದಾಗಿಸಿಕೊಳ್ಳಬಹುದು. ಇದರಿಂದ ಮೊದಲೇ ಹೇಳಿದಂತೆ ಗೆಲ್ಲುವ ಸಂಭಾವ್ಯತೆ ಹೆಚ್ಚಾಗುತ್ತದೆ .

ಇದನ್ನೂ ಓದಿ: ಜಾಗತಿಕ ವಿತ್ತ ಜಗತ್ತಿನ 2023ರ ಮುನ್ನೋಟ ಇಲ್ಲಿದೆ...

  1. ನಂಬಿಕೆಯೇ ಎಲ್ಲಕ್ಕಿಂತ ದೊಡ್ಡ ಬಂಡವಾಳ: ಜಪಾನ್ ದೇಶದ ಅತಿ ದೊಡ್ಡ ಶಕ್ತಿ ನಂಬಿಕೆ. ತಮ್ಮ ಗ್ರಾಹಕರ ಮೇಲೆ, ಉದ್ಯೋಗಿಗಳ ಮೇಲೆ, ಕುಟುಂಬದ ಸದಸ್ಯರ ನಡುವೆ ಇರುವ ಅತೀವ ನಂಬಿಕೆ ಅವರ ದೇಶವನ್ನ, ಅವರ ಉದ್ದಿಮೆಗಳನ್ನ ಆ ಮಟ್ಟಕ್ಕೆ ಬೆಳಸಿದೆ. ನಮ್ಮ ದೇಶದ, ನಮ್ಮ ಸನ್ನಿವೇಶಗಳಿಗೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆ ಅವಶ್ಯಕತೆ ಇದ್ದೆ ಇರುತ್ತದೆ. ಕಣ್ಣು ಮುಚ್ಚಿ ಎಲ್ಲವನ್ನೂ, ಎಲ್ಲರನ್ನೂ ನಂಬಲು ಸಾಧ್ಯವಿಲ್ಲದ ಮಾತು, ಆದರೆ ಕುಟುಂಬದ ಸದಸ್ಯರ ನಡುವೆ, ವ್ಯಾಪಾರ ಶುರು ಮಾಡಿರುವ ಸ್ನೇಹಿತರ, ಪಾರ್ಟ್ನರ್ ನಡುವೆ ನಂಬಿಕೆ ಅತಿ ಮುಖ್ಯ. ಜೊತೆಗೆ ವ್ಯಾಪಾರಕ್ಕೆ ಮುಖ್ಯವಾಗಿ ಬೇಕಾಗಿರುವ ಟ್ಯಾಲೆಂಟೆಡ್ ಸಿಬ್ಬಂದಿ ವರ್ಗದ ಜೊತೆಗೆ ಕೂಡ ಆರೋಗ್ಯಕರ ನಂಬಿಕೆ ಬೆಳಸಿಕೊಳ್ಳುವುದು ಪ್ರಮುಖವಾಗುತ್ತದೆ. ನೆನಪಿರಲಿ ಎಷ್ಟೇ ದೊಡ್ಡ ಮಟ್ಟದ ಹಣ, ಕನಸು ಯಾವುದೋ ಕೂಡ ಉತ್ತಮ ಸಿಬ್ಬಂದಿ ವರ್ಗವಿಲ್ಲದೆ ಇಂಚೂ ಮುಂದೆ ಸಾಗುವುದಿಲ್ಲ. ಜಪಾನೀಯರು ಗ್ರಾಹಕರೊಂದಿಗೆ ಪ್ರಥಮ ವರ್ಷಗಳಲ್ಲಿ ನಂಬಿಕೆಗಳಿಸಲು ಹೆಚ್ಚು ಆದ್ಯತೆಯನ್ನ ನೀಡುತ್ತಾರೆ.
  2. ನೇರ ಸಂವಹನ ಮತ್ತು ಪ್ರಾಮಾಣಿಕ ಸಂವಹನ: ಮಾತಿಗೂ ಮತ್ತು ಕೃತಿಗೂ  ವ್ಯತ್ಯಾಸ ಇರಬಾರದು. ಯಾವಾಗ ಆಡಳಿತ ಮಂಡಳಿ ತನ್ನ ಕೆಲಸಗಾರರೊಡನೆ ನೇರವಾಗಿ ಸಂವಹನ ನಡೆಸುತ್ತದೆ ಮತ್ತು ಪ್ರಾಮಾಣಿಕವಾಗಿರುತ್ತದೆ, ಆಗ ಹೆಚ್ಚಿನ ಯಶಸ್ಸು ಖಂಡಿತ ಸಿಗುತ್ತದೆ. ಕೇವಲ ತನ್ನ ಆಂತರಿಕ ವಲಯದಲ್ಲಿರುವ ಜೊತೆಯಲ್ಲದೆ ಎಲ್ಲಾ ಕೆಲಸಗಾರರ ಜೊತೆಗೂ ಸಂವಹನದಲ್ಲಿ ಪ್ರಾಮಾಣಿಕತೆ ಇರಬೇಕು. ಗ್ರಾಹಕರ ಜೊತೆಗೂ ನೇರವಾದ ಮತ್ತು ಪ್ರಾಮಾಣಿಕವಾದ ಸಂವಹನ ಅತ್ಯಗತ್ಯ.
  3. ಒಂದು ಕುಟುಂಬ, ನಾವೆಲ್ಲಾ ಒಂದು ಎನ್ನುವ ಭಾವನೆ: ನಾವು ಇಂತಹ ಸಮೂಹ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದೇವೆ ಎನ್ನುವ ಭಾವನೆ, ನಾವು ಒಂದು ಕುಟುಂಬಕ್ಕೆ ಸೇರಿದವರು ಎನ್ನುವ ಭಾವನೆ ಬರುವಂತಹ ವಾತಾವರಣ ನಿರ್ಮಾಣವಾದರೆ ಆಗ ಕೆಲಸ ಬಿಟ್ಟು ಹೋಗುವವರ ಸಂಖ್ಯೆ ಕಡಿಮೆಯಾಗುತ್ತದೆ. ನೆನಪಿರಲಿ ಇಂದು ಸಂಸ್ಥೆಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ, ಉತ್ತಮ ಗುಣಮಟ್ಟದ ಕೆಲಸಗಾರರನ್ನ ಉಳಿಸಿಕೊಳ್ಳುವುದು. ದೊಡ್ಡ ಸಂಸ್ಥೆಗಳು ರಿಟೆನ್ಷನ್ ಬೋನಸ್ ಎನ್ನುವ ಹೆಸರಿನಲ್ಲಿ ವೇತನದ 20/30 ಪ್ರತಿಶತ ಹಣವನ್ನ ವರ್ಷಕ್ಕೊಮ್ಮೆ ನೀಡಿ, ಟ್ಯಾಲೆಂಟೆಡ್ ಕೆಲಸಗಾರರನ್ನ ಉಳಿಸಿಕೊಳ್ಳುತ್ತದೆ. ಹಣ ಒಂದು ಹಂತದವರೆಗೆ ಮಾತ್ರ ಕೆಲಸ ಮಾಡುತ್ತದೆ. ಹಣ ಮಾಡಲಾಗದ ಕೆಲಸವನ್ನ ಪ್ರೀತಿ, ವಿಶ್ವಾಸ, ನನ್ನದೆನ್ನುವ ಭಾವಗಳು ಸುಲಭವಾಗಿ ಮಾಡುತ್ತವೆ.
  4. ಲಾಭದಲ್ಲೂ ನೀಡಬೇಕಿದೆ ಪಾಲು: ಎಲ್ಲಾ ಕೆಲಸಗಾರರು ವೇತನ ಮತ್ತು ರಿಟೆನ್ಷನ್ ಬೋನಸ್ನಲ್ಲಿ ತೃಪ್ತಿ ಹೊಂದುವುದಿಲ್ಲ, ಸಂಸ್ಥೆ ನಡೆಯಬೇಕು ಎಂದರೆ ಕುಟುಂಬದ ಸದಸ್ಯರು ಮಾತ್ರ ತೀರ್ಮಾನ ಕೈಗೊಳ್ಳುವುದರಲ್ಲಿ , ಲಾಭದಲ್ಲಿ ಭಾಗಿಯಾದರೆ ಸಾಲದು. ಸಂಸ್ಥೆಯ ಬೆಳವಣಿಗೆ ಮತ್ತು ಅದರ ಉಳಿವಿಗೆ ಹೊರಗಿನ ಟ್ಯಾಲೆಂಟ್ ಕೂಡ ಮುಖ್ಯವಾಗುತ್ತದೆ. ಅಂತಹ ಜನರನ್ನ ಗುರುತಿಸಿ ಅವರನ್ನ ಸಂಸ್ಥೆಯ ಪಾಲುದಾರರನ್ನಾಗಿ, ಲಾಭದಲ್ಲಿ ಇಂತಿಷ್ಟು ಅಂಶ ಎನ್ನುವುದನ್ನ ಕೂಡ ನಿಗದಿಪಡಿಸಬೇಕಾಗುತ್ತದೆ.
  5. ಸಾಮಾಜಿಕ ಸಮಸ್ಯೆಗಳಿಗೂ ಕಿವಿಯಾಗಬೇಕು: ಗಳಿಸಿದ ಹಣವನ್ನೆಲ್ಲಾ ತಮ್ಮ ಜೋಳಿಗೆಗೆ ಹಾಕಿಕೊಳ್ಳುವುದು ಕೂಡ ಸಂಸ್ಥೆಯ ದೀರ್ಘಕಾಲದ ಉಳಿವಿಗೆ ಒಳಿತಲ್ಲ. ತನ್ನ ಸುತ್ತಮುತ್ತ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದು, ಸಾಧ್ಯವಾದಷ್ಟೂ ಪರಿಸರ ಹಾನಿಯಾಗದಂತೆ ಕಾಯುವುದು, ಹೀಗೆ ಬಹಳಷ್ಟು ಕೆಲಸಗಳಿಗೆ ಸಂಸ್ಥೆ ಮುಖ ಮಾಡಬೇಕು. ಸಂಸ್ಥೆ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಷ್ಟೂ ಸಮಾಜದಲ್ಲಿ ವಿಶ್ವಾಸ ಮತ್ತು ನಂಬಿಕೆ ಹೆಚ್ಚಾಗುತ್ತದೆ.

ಕೊನೆಮಾತು: ಮೇಲಿನ ಅಂಶಗಳು ಕೇವಲ ಜಪಾನಿ ಸಂಸ್ಥೆಗಳಿಗೆ ಸೀಮಿತವಲ್ಲ. ದೀರ್ಘಕಾಲದಲ್ಲಿ ಇವೆಲ್ಲವೂ ಹೆಚ್ಚಿನ ಲಾಭವನ್ನೆ ತಂದುಕೊಡುತ್ತವೆ. ಹೀಗಾಗಿ ಯಾವುದೇ ಸಂಸ್ಥೆ ಯಾವುದೇ ಹಂತದಲ್ಲಿ ಇವುಗಳನ್ನ ಅಳವಡಿಸಿಕೊಳ್ಳಬಹುದು. ಇದರೊಂದಿಗೆ ಅವಶ್ಯಕವಾಗಿ ಪಾಲಿಸಬೇಕಾದ ಹಣಕಾಸು ಸೂತ್ರಗಳು ಬೇರೆಯಿವೆ, ಅವುಗಳನ್ನ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಕುಟುಂಬ ನಿಯಂತ್ರಣದಲ್ಲಿರುವ ಸಂಸ್ಥೆಗಳು ಜಗತ್ತಿನಾದ್ಯಂತ ಹಬ್ಬಿವೆ, ಅಲ್ಲದೆ ಅವುಗಳ ಕೊಡುಗೆ ಕೂಡ ಹುಬ್ಬೇರಿಸುವಂತಿದೆ. ಸಂಸ್ಥೆ ಯಾರದೇ ಆಡಳಿತದಲ್ಲಿರಲಿ ಅದು ಸಮಾಜದ ಒಳಿತನ್ನ , ತನ್ನ ನೌಕರರ ಒಳಿತನ್ನ ಮರೆಯಬಾರದು.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp