ಜಾಗತಿಕ ವಿತ್ತ ಜಗತ್ತಿನ 2023ರ ಮುನ್ನೋಟ ಇಲ್ಲಿದೆ... (ಹಣಕ್ಲಾಸು)

ಹಣಕ್ಲಾಸು-340ರಂಗಸ್ವಾಮಿ ಮೂನಕನಹಳ್ಳಿ
ಭಾರತದ ಆರ್ಥಿಕತೆ (ಸಾಂಕೇತಿಕ ಚಿತ್ರ)
ಭಾರತದ ಆರ್ಥಿಕತೆ (ಸಾಂಕೇತಿಕ ಚಿತ್ರ)

ಇನ್ನೇನು 2022 ಮುಕ್ತಾಯಕ್ಕೆ ಒಂದೆರೆಡು ದಿನಗಳು ಬಾಕಿಯಿವೆ. ಜಾಗತಿಕ ವಿತ್ತ ಜಗತ್ತು 2022 ರಲ್ಲಿ ಕೂಡ ಅಸ್ಥಿರತೆಯಲ್ಲಿ ಕಳೆಯಿತು. ಕಳೆದ ಎರಡು ವರ್ಷದ ಕೊರೋನ ಆರ್ಥಿಕ ಸಮಯದಲ್ಲಿನ ನಷ್ಟವನ್ನ ತುಂಬಿಕೊಂಡು ಮುಂದಕ್ಕೆ ಅಡಿಯಿಟ್ಟದ್ದು 2022 ರಲ್ಲಿನ ಅತಿ ದೊಡ್ಡ ಸಾಧನೆ ಎನ್ನಬಹುದು. ಆದರೂ ಜಾಗತಿಕ ಮಟ್ಟದಲ್ಲಿ ಒಂದೇ ಸಮನೆ ಏರಿದ ಬಡ್ಡಿ ದರಗಳು ಹಣದುಬ್ಬರದ ಏರಿಕೆಗೆ ತಮ್ಮದೇ ಆದ ಕಾಣಿಕೆಯನ್ನ ನೀಡಿತು. 

ಸಣ್ಣ ಪುಟ್ಟ ದೇಶಗಳ ಆರ್ಥಿಕತೆಯಂತೂ ಬಹಳ ಕುಸಿತವನ್ನ ಕಂಡವು. ಶ್ರೀಲಂಕಾ ಸಹಿತ ಅನೇಕ ದೇಶಗಳಲ್ಲಿನ ಹಣದುಬ್ಬರ ಗಗನವನ್ನ ಮೀರಿ ಏರಿ ಕುಳಿತಿವೆ. ಭಾರತದಲ್ಲಿ ಕೂಡ ಆಹಾರ ಪದಾರ್ಥಗಳ ಬೆಲೆಯಲ್ಲಿ ಹತ್ತಿರತ್ತಿರ 80 ಪ್ರತಿಶತ ಏರಿಕೆಯನ್ನ ಕಂಡಿರುವುದು ಸುಳ್ಳಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಪ್ರಗತಿ ಅಂದರೆ ಗ್ರೋಥ್ ರೇಟ್ ಮತ್ತು ಜಿಡಿಪಿ ಬಹಳ ಚನ್ನಾಗಿದೆ. ಜಾಗತಿಕ ಮಟ್ಟದಲ್ಲಿನ ಹೂಡಿಕೆದಾರರಿಗೆ ಭಾರತ ಬೆಳ್ಳಿ ಗೆರೆಯಂತೆ ಕಂಡರೆ ಅದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಈ ಲೇಖನವನ್ನ ಬರೆಯುವ ವೇಳೆಯಲ್ಲಿ ಚೀನಾದ ಹೊಸತಳಿ ಒಮ್ರಿಕಾನ್ ಬೆಂಗಳೂರಿಗೆ ಕಾಲಿಟ್ಟಿದೆ. ಚೀನಾ ದೇಶದಲ್ಲಿ ಕೊರೋನ ಅವಾಂತರ ಬಹಳವಾಗಿದೆ, ಕಳೆದೆರೆಡು ಮೂರು ತಿಂಗಳಿಂದ ಬಹಳ ರಿಸ್ಟ್ರಿಕ್ಷನ್ ನಲ್ಲಿ ಬದುಕಿದ್ದ ಚೀನಾ ಜನತೆ ಸಿಡಿದೆದ್ದುದರ ಪರಿಣಾಮ ನಿಯಮಾವಳಿಗಳಲ್ಲಿ ಸಡಿಲ ಮಾಡಲಾಗಿದೆ. ಅದು ಸೋಂಕು ಹರಡಲು ಕಾರಣವಾಗಿದೆ. 2023ರಲ್ಲಿ ಏನಾಗಬಹುದು? ಇದೆ ಅಸ್ಥಿರತೆ ಮುಂದುವರಿಯಲಿದೆಯಾ? ವಿಶ್ವದ ಆರ್ಥಿಕತೆ ಗತಿಯೇನು? ಏಷ್ಯಾ ಜಾಗತಿಕ ಆರ್ಥಿಕತೆಯನ್ನ ಡ್ರೈವ್ ಮಾಡುವ ಎಂಜಿನ್ ಆಗಲಿದೆಯೇ? ಯೂರೋಪಿನ ಕಥೆಯೇನು? ಜಪಾನ್ ಜೋಪಾನವಾಗಿದೆಯೇ? ಎನ್ನುವ ಒಂದಷ್ಟು ಅಂಶಗಳನ್ನ ತಿಳಿದುಕೊಳ್ಳುವ ಪ್ರಯತ್ನ ಇಲ್ಲಿದೆ.

ಅಮೆರಿಕಾ ಆರ್ಥಿಕತೆ ಚೇತರಿಕೆ ಕಾಣಲಿದೆಯೆ?

ಮಾರ್ಗನ್ ಸ್ಟಾನ್ಲಿ ಪ್ರತಿ ವರ್ಷ ಜಗತ್ತಿನ ಪ್ರಮುಖ ದೇಶಗಳ ಆರ್ಥಿಕತೆಯನ್ನ ಅಂದಾಜು ಮಾಡುತ್ತದೆ. ಅದರ ಪ್ರಕಾರ ಅಮೆರಿಕಾ ಜಿಡಿಪಿ 2023ರಲ್ಲಿ 0.5 ಪ್ರತಿಶತ ಏರಿಕೆಯನ್ನ ಕಾಣಲಿದೆ. ಇದು 2022ರಲ್ಲಿ ಹತ್ತಿರತ್ತಿರ 2 ಪ್ರತಿಶತವಿತ್ತು. ಅಂದರೆ ಅಮೇರಿಕಾ ಮಾರುಕಟ್ಟೆ ಬೆಳವಣಿಗೆಯಲ್ಲಿ 2022 ಕ್ಕೆ ಹೋಲಿಸಿದರೆ ಕುಸಿತ ಉಂಟಾಗುವುದು ಸರಳ ಸತ್ಯವಾಗಿ ಕಾಣುತ್ತಿದೆ. ಪುಣ್ಯ ಅಮೇರಿಕಾ ರಿಸೆಷನ್ ಎನ್ನುವ ಕಪಿಮುಷ್ಟಿಗೆ ಸಿಲುಕದೆ ಸ್ವಲ್ಪದರಲ್ಲಿ ಬಚಾವಾಗಿದೆ ಎನ್ನುವ ಮಾತುಗಳು ಆರ್ಥಿಕ ವಲಯದಲ್ಲಿ ಕೇಳಿ ಬರುತ್ತಿದೆ. ಯಾವ ಲೆಕ್ಕಾಚಾರ ಹೇಗೆ ಇರಲಿ ಅಮೇರಿಕಾ ಇಂದಿಗೂ ದೊಡ್ಡಣ್ಣ, ಡಾಲರ್ ಇಂದಿಗೂ ಜಾಗತಿಕ ಕರೆನ್ಸಿ ಎನ್ನುವುದು ಕೂಡ ಅಷ್ಟೇ ಸತ್ಯ. ಹೀಗಾಗಿ ಕಡಿಮೆ ಗ್ರೋಥ್, ಹಣದುಬ್ಬರದ ಹೆಚ್ಚಳ, ಇವೆಲ್ಲದರ ನಡುವೆ ಅಮೇರಿಕಾ 2023 ರಲ್ಲಿ ಕೂಡ ತನ್ನ ಪ್ರಥಮ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರೆಯುತ್ತದೆ. 2024ರ ಡಿಸೆಂಬರ್ ವೇಳೆಗೆ ಅಮೇರಿಕಾ ಆರ್ಥಿಕತೆ ಮತ್ತೆ ತನ್ನ ಹಳೆಯ ಲಯವನ್ನ ಕಂಡುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.

ಕೊರೋನ ಹಾವಳಿಯ ನಡುವೆಯೂ ಚೀನಾ ಅಭಿವೃದ್ಧಿಯತ್ತ ಸಾಗಲಿದೆಯೇ?

ತನ್ನ ಹೊಸ ವರ್ಷದ ಆಚರಣೆಯ ನಂತರ ಚೀನಾ ಮತ್ತೆ ಮರಳಿ ತನ್ನ ಉತ್ಪತ್ತಿಯ ಕಡೆಗೆ ಗಮನ ಹರಿಸಲಿದೆ. ಜೀರೋ ಕೋವಿಡ್ ಪಾಲಿಸಿಯ ವತಿಯಿಂದ ಚೀನಾದಲ್ಲಿನ ಅಭಿವೃದ್ಧಿ 2022ರಲ್ಲಿ ಕುಂಠಿತವಾಗಿದ್ದು ಎಲ್ಲರಿಗೂ ಗೊತ್ತಿರುವ ಅಂಶವಾಗಿದೆ. 3.2ರ ಜಿಡಿಪಿಯನ್ನ ಚೀನಾ 2022ರಲ್ಲಿ ದಾಖಲಾಗಿಸಿದೆ. 2023ರಲ್ಲಿ ಇದು 5 ಪ್ರತಿಶತವಾಗಲಿದೆ ಎನ್ನುವ ಅಂದಾಜು ಮಾಡಲಾಗಿದೆ. ಮಾರ್ಚ್ ಅಥವಾ ಏಪ್ರಿಲ್  2023ರ ವೇಳೆಗೆ ಚೀನಾ ತನ್ನ ಹೊಸತಳಿ ಕೊರೋನವನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಜಾಗತಿಕ ಮಟ್ಟದಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲವಾಗುತ್ತದೆ.

ಜಪಾನ್ ಆರ್ಥಿಕತೆ ಕಥೆಯೇನು?

ನಿಮಗೆಲ್ಲರಿಗೂ ಗೊತ್ತಿರುವಂತೆ ಜಪಾನ್ ಪೂರ್ಣ ಅಭಿವೃದ್ಧಿ ಹೊಂದಿದ ದೇಶ. ವಯಸಾಗುತ್ತಿರುವ ತನ್ನ ನಾಗರೀಕರಿಂದ ಹೆಚ್ಚಿನ ಬಳಕೆಯನ್ನ (ಕನ್ಸಂಶನ್ ) ನಿರೀಕ್ಷಿಸುವ ಹಾಗಿಲ್ಲ ಪ್ರತಿ ಮನೆಯಲ್ಲೂ , ಪ್ರತಿ ನಾಗರಿಕರ ಬಳಿಯೂ ಅವಶ್ಯಕತೆಗಿಂತ ಹೆಚ್ಚಿನ ಹಣವಿದೆ. ಅದನ್ನ ಸರಿಯಾದ ರೀತಿಯಲ್ಲಿ ದುಡಿಸಿಕೊಂಡರೆ ಜಪಾನ್ ಮತ್ತೆ ಏಷ್ಯಾದ ನಂಬರ್ ಒನ್ ಎನ್ನಿಸಿಕೊಳ್ಳಬಹುದು. ಜಪಾನ್ ದೇಶದಲ್ಲಿ ಕುಸಿಯುತ್ತಿರುವ  ವರ್ಕ್ ಫೋರ್ಸ್ ಮತ್ತು ನಿವೃತ್ತಿ ಹೊಂದುತ್ತಿರುವವರ ಹೆಚ್ಚಿನ ಸಂಖ್ಯೆ ತಲೆನೋವಾಗಿ ಪರಿಣಮಿಸಿದೆ ,ಇದರ ಮಧ್ಯೆ ಕೂಡ 1.2 ಪ್ರತಿಶತ ಜಿಡಿಪಿ ಯನ್ನ ಜಪಾನ್ 2023 ರಲ್ಲಿ ದಾಖಲಿಸಲಿದೆ ಎನ್ನುವ ಅಂದಾಜು ಮಾಡಲಾಗಿದೆ.

ಯುರೋ ಜೋನ್ ಕುಸಿತ ಕಾಣಲಿದೆಯೇ?

ಮಾರ್ಗನ್ ಸ್ಟಾನ್ಲಿ ಸಂಸ್ಥೆ ಮಾಡುವ ಅಂದಾಜಿನ ಪ್ರಕಾರ ಯುರೋ ಜೋನ್ 2023ರಲ್ಲಿ - 0.2 ಪ್ರತಿಶತ ಕುಸಿತವನ್ನ ಕಾಣಲಿದೆ. ಗಮನಿಸಿ 2022ರಲ್ಲಿ 3 ಪ್ರತಿಶತಕ್ಕಿಂತ ಹೆಚ್ಚಿನ ಜಿಡಿಪಿಯನ್ನ ಸಾಧಿಸಿದ್ದ ಯುರೋ ಜೋನ್ ನೆಗಟಿವ್ ಗ್ರೋಥ್ ಅಥವಾ ಇಳಿಕೆಯನ್ನ ಕಾಣಲಿದೆ. ಒಂದೇ ಸಮನೆ ಏರುತ್ತಿರುವ ಬೆಲೆಗೆಳು ಮತ್ತು ಬಡ್ಡಿದರ, ಕುಸಿದ ಎಂಪ್ಲಾಯ್ಮೆಂಟ್ ರೇಟ್, ಜಾಗತಿಕ ಕುಸಿತದ ಕಾರಣ ಕುಸಿತ ಕಂಡಿರುವ ಟೂರಿಸಂ ಇತ್ಯಾದಿಗಳು ಯುರೋ ಜೋನ್ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಹೆಚ್ಚಿದ ಎನರ್ಜಿ ಕ್ರೈಸಿಸ್ ಕೂಡ ಇಳಿಕೆಗೆ ಕಾರಣವಾಗಿದೆ. ಯೂರೋಪು ದಶಕಗಳಲ್ಲಿ ಕಾಣದ ಬೆಲೆಯೇರಿಕೆಗೆ ತುತ್ತಾಗಿದೆ. ಆಹಾರ ಪದಾರ್ಥಗಳಿಂದ ಹಿಡಿದು ಎಲ್ಲವೂ ದುಬಾರಿಯಾಗಿದೆ. ದುಬಾರಿ ಎಂದರೆ ಆಲ್ಮೋಸ್ಟ್ ಎಲ್ಲವೂ ದ್ವಿಗುಣಗೊಂಡಿದೆ. ವೇತನ ಮಾತ್ರ ಮೇಲೇಳುವ ಮಾತನಾಡುತ್ತಿಲ್ಲ. ಇದು ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನ ಕಸಿದಿದೆ. ಡಿಮ್ಯಾಂಡ್ ಇಲ್ಲದ ಮೇಲೆ ಕುಸಿತ ಕಟ್ಟಿಟ್ಟ ಬುತ್ತಿ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅತಿ ಹೆಚ್ಚು ಕುಸಿತ ಕಂಡಿರುವುದು ಇಂಗ್ಲೆಂಡ್.

ಇಂಗ್ಲೆಂಡ್ ದೇಶದಲ್ಲಿನ ಹಣದುಬ್ಬರ ಮತ್ತು ಎನರ್ಜಿ ಕ್ರೈಸಿಸ್ ಇಂದಿಗೆ ಜಗತ್ತಿಗೆ ತಿಳಿದ ವಿಷಯ, ಹೀಗಾಗಿ 2023ರಲ್ಲಿ 1.5 ಪ್ರತಿಶತ ನೆಗಟಿವ್ ಜಿಡಿಪಿ ಅಥವಾ ಕುಸಿತವನ್ನ ಕಾಣಲಿದೆ. ಇದು ಯುರೋ ಜೋನ್ ಮತ್ತು ಜಗತ್ತಿನ ಮುಂದುವರೆದ ದೇಶಗಳಲ್ಲಿ ಅತಿ ಹೆಚ್ಚು ಕುಸಿತಕ್ಕೆ ತುತ್ತಾಗಿರುವುದನ್ನ ತೋರಿಸುತ್ತದೆ. ಇಂಗ್ಲಂಡ್ನಲ್ಲಿ ಸದ್ಯದ ಮಟ್ಟಿಗೆ ಯಾವುದೂ ಸರಿಯಾಗಿ ಸಾಗುತ್ತಿಲ್ಲ. ಇಂಗ್ಲೆಂಡ್ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಅಥವಾ ಆ ದೇಶಕ್ಕೆ ವಲಸೆ ಹೋಗುವವರು ಬಹಳಷ್ಟು ಯೋಚಿಸಿ ಮುಂದಡಿ ಇಡಬೇಕಾಗುತ್ತದೆ. ಇಂಗ್ಲೆಂಡ್ ಮರಳಿ ಟ್ರಾಕ್ಗೆ ಬರಲು ಸಮಯ ಹಿಡಿಯುತ್ತದೆ.

ಜಾಗತಿಕ ವಿಶ್ವ ಜಗತ್ತಿಗೆ 2023ರಲ್ಲಿ ಭಾರತವೆ ಬೆಳ್ಳಿಯ ಗೆರೆ!

ಜಗತ್ತಿನ ಯಾವ ದೇಶವೂ ದಾಖಲಿಸಲಾಗದ ಜಿಡಿಪಿ ಭಾರತ 2023ರಲ್ಲಿ ದಾಖಲಿಸಲಿದೆ. ಹಲವು ಹತ್ತು ಸಂಸ್ಥೆಗಳು ನಡೆಸುವ ಅಧ್ಯಯನದ ಆಧಾರದ ಮೇಲೆ ಭಾರತ 2023ರಲ್ಲಿ 7 ಪ್ರತಿಶತ ಜಿಡಿಪಿಯನ್ನ ದಾಖಲಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಮಾರ್ಗನ್ ಸ್ಟಾನ್ಲಿ ಮಾಡಿರುವ ಅಂದಾಜಿನ ಪ್ರಕಾರ ಇದು 6.2 ಪ್ರತಿಶತ, ಇವುಗಳನ್ನ ಕೂಡಿ ಭಾಗಿಸಿ ಅವರೇಜ್ ತೆಗೆದುಕೊಂಡರೂ ಕೂಡ ಭಾರತದ ಜಿಡಿಪಿ 6.5 ಪ್ರತಿಶತಕ್ಕಿಂತ ಹೆಚ್ಚಿನ ಜಿಡಿಪಿಯನ್ನ ದಾಖಲಿಸುವುದು ಖಂಡಿತ. ಭಾರತ ಜಾಗತಿಕ  ಕಣ್ಣಿಗೆ ಬೆಳ್ಳಿಯ ಗೆರೆಯಾಗಿದೆ. ವಿಶ್ವದಲ್ಲಿ ಸದ್ಯಕ್ಕೆ ಗ್ರೋಥ್ ಕಾಣುತ್ತಿರುವ ದೇಶ ಭಾರತ ಮಾತ್ರ, ಅದೂ ಸ್ಥಿರತೆ ಮತ್ತು ಗಟ್ಟಿ ಭದ್ರತೆಯ ಜೊತೆಗೆ ಇರುವುದರಿಂದ ಜಾಗತಿಕ ಹೂಡಿಕೆದಾರರು ಭಾರತದಲ್ಲಿ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಭಾರತ 2027ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನ ಹಿಂದಿಕ್ಕಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮುಂಚೂಣಿಗೆ ಬರಲಿದೆ. ಇದೆ ಸಮಯದಲ್ಲಿ ಜಾಗತಿಕ ರಫ್ತು ಉದ್ದಿಮೆಯನ್ನ ಕೂಡ ದ್ವಿಗುಣ ಮಾಡಿಕೊಳ್ಳಲಿದೆ ತನ್ಮೂಲಕ ಭಾರತದ ಮೇಲೆ ಜಗತ್ತಿನ ಅವಲಂಬನೆ ಹೆಚ್ಚಾಗಲಿದೆ.

'ಜಗತ್ತು ಇಂದು ಅಭಿವೃದ್ಧಿಗೆ ಹಸಿದಿದ್ದರೆ ಅದಕ್ಕೆ ಊಟ ಸಿಕ್ಕುವುದು ಭಾರತದಲ್ಲಿ ಮಾತ್ರ, ಈ ಸತ್ಯ ಜಾಗತಿಕ ಹೂಡಿಕೆದಾರರಿಗೆ ಗೊತ್ತಿದೆ' ಎನ್ನುವ ಮಾತನ್ನ ಮಾರ್ಗನ್ ಸ್ಟಾನ್ಲಿ ಏಷ್ಯಾ ಚೀಫ್ ಎಕಾನಾಮಿಸ್ಟ್ ಚೇತನ್ ಅಹ್ಯ ಆಡಿದ್ದಾರೆ. ಇದರಲ್ಲಿ ಉತ್ಪ್ರಕ್ಷೆ ಇಲ್ಲವೇ ಇಲ್ಲ ಮುಂದಿನ ಒಂದು ದಶಕ ಭಾರತದ ಓಟಕ್ಕೆ ಕಡಿವಾಣ ಹಾಕುವುದು ಕಷ್ಟ. ಜಾಗತಿಕವಾಗಿ ಭಾರತ ಬಹಳ ಬಲಿಷ್ಠವಾಗಲಿದೆ.

ಇದನ್ನ ಪುಷ್ಟಿಕರಿಸಲು ಭಾರತಕ್ಕೆ ವರದಾನವಾಗಿರುವ ಮೂರು ಅಂಶಗಳು ಹೀಗಿವೆ:

  1. ಜಗತ್ತಿಗೆ ಬ್ಯಾಕ್ ಆಫೀಸ್ ಆಗಲಿದೆ ಭಾರತ: ಇಂಟರ್ನೆಟ್ ಸೃಷ್ಟಿಯಾದ ದಿನದಿಂದ ಭಾರತಕ್ಕೆ ಪಾಶ್ಚಾತ್ಯ ದೇಶಗಳಿಂದ ಬಹಳಷ್ಟು ಕೆಲಸ ಔಟ್ಸೋರ್ಸ್ ಆಗಿದ್ದು, ಭಾರತ ಸಾಫ್ಟ್ವೇರ್ ಉದ್ದಿಮೆಯಲ್ಲಿ ಶಕ್ತಿಶಾಲಿಯಾಗಿ ಬೆಳೆದದ್ದು ಇಂದಿಗೆ ಇತಿಹಾಸ. ಇದರ ಜೊತೆ ಜೊತೆಗೆ ದೇಶದ ಕೆಲಸವನ್ನ ಹೊರಗುತ್ತಿಗೆ ನೀಡಬಾರದು ಎನ್ನುವ ನಿಲುವನ್ನ ಹಲವು ದೇಶಗಳು ತಳೆದವು, ಹೀಗಾಗಿ ಭಾರತಕ್ಕೆ ಒಂದಷ್ಟು ಸೆಟ್ಬ್ಯಾಕ್ ಆಗಿದ್ದು ಕೂಡ ನಿಜ. ಆದರೆ ಇಂದಿಗೆ ಕೊರೋನ ಎಲ್ಲಾ ಸೆಟ್ ಫಾರ್ಮುಲಾಗಳನ್ನ ಹೊಡೆದು ಹಾಕಿಬಿಟ್ಟಿದೆ. ಮನೆಯಿಂದ ಅಂದರೆ ಜಗತ್ತಿನ ಯಾವುದೇ ಮೂಲೆಯಿಂದ ಬೇಕಾದರೂ ಕುಳಿತು ಕೆಲಸ ಮಾಡುವ ಮಟ್ಟಕ್ಕೆ ವರ್ಕ್ ಫೋರ್ಸ್ ಮನಸ್ಥಿತಿ ಬದಲಾಯಿಸಿ ಬಿಟ್ಟಿದೆ. ಇದೀಗ ಯಾವ ಲೆಕ್ಕಾಚಾರ, ನಿಯಮಗಳು ಕೂಡ ಲೆಕ್ಕಕ್ಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಭಾರತದ ಬಾಗಿಲಿಗೆ ಅದಾಗಲೇ ಹೊಸ ಹೊಸ ಅವಕಾಶಗಳು ಬಂದು ನಿಂತಿದೆ. ಮುಂಬರುವ ವರ್ಷಗಳಲ್ಲಿ ಭಾರತ ಜಗತ್ತಿನ ವರ್ಕ್ಫೊರ್ಸ್ ನಿರ್ದೇಶಿಸುವ ಮಟ್ಟಕ್ಕೆ ಬೆಳೆದು ನಿಲ್ಲಲಿದೆ.
  2. ಡಿಜಿಟಲೀಸಷನ್ ಮತ್ತು ಏರುತ್ತಿರುವ ಮಧ್ಯಮ ವರ್ಗ: ಭಾರತ ಅತಿ ವೇಗದಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಅಮೇರಿಕಾ ಮತ್ತು ಚೀನಾ ನಂತರದ ಸ್ಥಾನವನ್ನ ಭಾರತ ಪಡೆದುಕೊಳ್ಳಲಿದೆ. ಭಾರತ ವೇಗವಾಗಿ ಎಲ್ಲವನ್ನೂ ಡಿಜಿಟಲೀಕರಣಗೊಳಿಸುತ್ತಿದೆ ಆದ ಕಾರಣ ಸಹಜವಾಗೇ ಎಲ್ಲವೂ ಲೆಕ್ಕಕ್ಕೆ ಸಿಕ್ಕಲಿದೆ ಹೀಗಾಗಿ ಭಾರತದ ಜಿಡಿಪಿ ಮೂರು ವರ್ಷದಲ್ಲಿ ದ್ವಿಗುಣವಾಗಲಿದೆ. ಭಾರತದಲ್ಲಿನ ಕೊಳ್ಳುವ ಶಕ್ತಿಯಿರುವ ಮಧ್ಯಮವರ್ಗದ ಸಂಖ್ಯೆ ಹತ್ತಾರು ದೇಶಗಳ ಸಂಖ್ಯೆಗೆ ಸಮವಾಗಿದೆ. ಹೀಗಾಗಿ ಭಾರತದ ಡೊಮೆಸ್ಟಿಕ್ ಮಾರುಕಟ್ಟೆ ಕೂಡ ಅತ್ಯಂತ ಪ್ರಬಲವಾಗಿ ಬೆಳವಣಿಗೆಯನ್ನ ಕಾಣಲಿದೆ.
  3. ಭಾರತದಲ್ಲಿ ಹೆಚ್ಚಾಗಲಿರುವ ಎನರ್ಜಿ ಬಳಕೆ: ಯಾವುದೇ ದೇಶದ ಅಭಿವೃದ್ಧಿಗೆ ಎನರ್ಜಿ ಬೇಕೇಬೇಕು. ಸದ್ಯದ ಮಟ್ಟಿಗೆ ಭಾರತದಲ್ಲಿ ಜಗತ್ತಿನ 20 ಕುಲಷಿತ ನಗರದಲ್ಲಿ 14 ಹೊಂದಿದೆ. ಮುಂಬರುವ ದಿನಗಳಲ್ಲಿ ಈ ವಲಯದಲ್ಲಿ ಅತಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದೆ, ಮುಂದಿನ ಒಂದು ದಶಕದಲ್ಲಿ ಭಾರತದ ಇಂದಿನ ಏನರ್ಜಿ ಬಳಕೆಯ 60ಪ್ರತಿಶತ ಹೆಚ್ಚಳವನ್ನ ಕಾಣಲಿದ್ದೇವೆ. ಭಾರತದ ಅಭಿವೃದ್ಧಿ ವೇಗಕ್ಕೆ ಬೇಕಾಗುವ ಫಾಸಿಲ್ ಫ್ಯುಯೆಲ್ ಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ.

ಕೊನೆಮಾತು: ಮುಂದಿನ ಒಂದು ದಶಕ ಭಾರತದ ಅಭಿವೃದ್ಧಿಯ ಓಟಕ್ಕೆ ಜಗತ್ತಿನ ಯಾವ ದೇಶಗಳೂ ಸಮವಾಗಲಾರದು. ಕಳೆದ ಎರಡು ದಶಕ ಚೀನಾದ ಓಟಕ್ಕೆ ಜಗತ್ತು ಸಾಕ್ಷಿಯಾಗಿತ್ತು. ಮುಂದಿನ ದಶಕ ಭಾರತಕ್ಕೆ ಸೇರಿದ್ದು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಭಾರತದಲ್ಲಿ ಕೂಡ ಹಣದುಬ್ಬರ ಹೆಚ್ಚಾಗಿದೆ, ಇಲ್ಲಿನ ಸ್ಮಾಲ್ ಅಂಡ್ ಮೀಡಿಯಂ ಸ್ಕೇಲ್ ಉದ್ದಿಮೆಗಳಿಗೆ ಸಿಗಬೇಕಾದ ಸವಲತ್ತು, ಬೆಂಬಲ ಯಾವುದೂ ಸಿಗುತ್ತಿಲ್ಲ. ಬ್ಯಾಂಕುಗಳಲ್ಲಿ ಸರಕಾರ ನೀಡಿ ಎಂದು ಹೇಳುವ ಯಾವ ಸಾಲಗಳೂ ಗ್ರಾಹಕರಿಗೆ ತಲುಪುತ್ತಿಲ್ಲ, ಇದೆ ಸಮಯದಲ್ಲಿ ಸರಕಾರಕ್ಕೆ ಬರಬೇಕಾದ ತೆರಿಗೆಯನ್ನ ಮಾತ್ರ ಅರೆಗಳಿಗೆ ತಡಮಾಡದೆ ಕಟ್ಟಿಸಿಕೊಳ್ಳಲಾಗುತ್ತಿದೆ. ವ್ಯಾಪಾರ ವಹಿವಾಟುಗಳಿಗೆ ಬೇಕಾದ ಕ್ಲಿಯರೆನ್ಸ್ ಸುಲಭವಾಗಿ ಸಿಗುತ್ತಿಲ್ಲ. ಸಮಸ್ಯೆಗಳು ಸಾವಿರವಿದೆ, ಆದರೆ ಜಾಗತಿಕ ಮಟ್ಟದಲ್ಲಿ ಅನಾಯಾಸವಾಗಿ ನಮ್ಮ ಬಳಿಗೆ ಒಲಿದು ಬರುತ್ತಿರುವ ಅವಕಾಶ ನಾವು ಬಿಡುವಂತಿಲ್ಲ. ಕೇಂದ್ರ ಸರಕಾರಕ್ಕೆ ಇದು ತಿಳಿಯದ ವಿಷಯವಲ್ಲ, ಆದರೆ ಅನುಷ್ಠಾನಕ್ಕೆ ಹೇಗೆ ತರುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com