social_icon

ಜಾಗತಿಕ ವಿತ್ತ ಜಗತ್ತಿಗೆ ಟಾನಿಕ್ ಬೇಕಿದೆ; ಚೀನಾ ಅಖಾಡಕ್ಕಿಳಿಯಲಿದೆಯೇ? (ಹಣಕ್ಲಾಸು)

ಹಣಕ್ಲಾಸು-335

ರಂಗಸ್ವಾಮಿ ಮೂನಕನಹಳ್ಳಿ

Published: 24th November 2022 04:00 AM  |   Last Updated: 24th November 2022 01:46 PM   |  A+A-


China president with his close aide

ಆಪ್ತರೊಂದಿಗೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್

Posted By : srinivasrao
Source :

ಜಾಗತಿಕ ವಿತ್ತ ಲೋಕವನ್ನ ನಾವು ಒಂದು ದೊಡ್ಡ ವಿಮಾನ ಅಥವಾ ರೈಲಿಗೆ ಹೋಲಿಸಿದರೆ, ಆಗ ಅಮೇರಿಕಾ , ಚೀನಾ , ಜರ್ಮನಿ, ಭಾರತ ಮತ್ತು ರಷ್ಯಾ ದೇಶವನ್ನ ಇಂಜಿನ್ ಗೆ ಹೋಲಿಸಬಹುದು. ಜಗತ್ತನ್ನ ಮುನ್ನೆಡೆಸುವ ಅಥವಾ ಹಿಂದಕ್ಕೆಳೆಯುವ ಶಕ್ತಿ ಈ ದೇಶಗಳಿವೆ. ಈ ದೇಶಗಳ ಆರ್ಥಿಕತೆ, ರಾಜಕೀಯ ಸ್ಥಿರತೆ, ವಿದೇಶಿ ನೀತಿಗಳು ಜಗತ್ತಿನ ಇತರ ದೇಶಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ. ಅದರಲ್ಲೂ ಇವತ್ತಿನ ದಿನದಲ್ಲಿ ಚೀನಾ ಮತ್ತು ಅಮೇರಿಕಾ ಜಗತ್ತಿನ 40 ಪ್ರತಿಶತಕ್ಕೂ ಹೆಚ್ಚಿನ ಜಿಡಿಪಿ ಸೃಷ್ಟಿಕರ್ತರು ಎನ್ನುವುದು, ಈ ದೇಶಗಳು ಅದೆಷ್ಟು ಬಲಶಾಲಿಗಳು ಮತ್ತು ಈ ದೇಶಗಳಲ್ಲಿ ಆಗುವ ಸಣ್ಣಪುಟ್ಟ ಬದಲಾವಣೆ, ಜಗತ್ತಿನ ಕೆಲವು ಸಣ್ಣಪುಟ್ಟ ದೇಶಗಳ ಹಣೆಬರಹವನ್ನ ಬದಲಾಯಿಸುವ ತಾಕತ್ತು ಹೊಂದಿವೆ ಎನ್ನುವುದು ಕೂಡ ಜಿಯೋ ಪೊಲಿಟಿಕ್ಸ್ ಮತ್ತು ವಿತ್ತ ಜಗತ್ತನ್ನ ಗಮನಿಸುವರಿಗೆ ಹೊಸ ವಿಷಯವೇನೂ ಅಲ್ಲ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಮರಳುತ್ತಿದ್ದಾರೆ ಎಫ್ ಐಐ- Foreign Institutional Investors; ಕಾರಣ ಏನು ಅಂದರೆ...

ಜಗತ್ತಿನಲ್ಲಿ ಇಂದಿಗೆ ಮಾನ್ಯತೆ ಪಡೆದಿರುವ 196 ದೇಶಗಳಿವೆ, ಒಟ್ಟು ಜಾಗತಿಕ ಜಿಡಿಪಿ 104 ಟ್ರಿಲಿಯನ್, ಇದರಲ್ಲಿ ಕೇವಲ ಹತ್ತು ದೇಶಗಳು 65 ಪ್ರತಿಶತ ಜಿಡಿಪಿಯನ್ನ ಉತ್ಪಾದಿಸುತ್ತಿವೆ. ಈ ಸಂಖ್ಯೆಯನ್ನ ನಾವು ಪ್ರಥಮ 25 ದೇಶಗಳಿಗೆ ಏರಿಸಿದರೆ 85 ಪ್ರತಿಶತ ಜಿಡಿಪಿ ಸಿಗುತ್ತದೆ, ಅಂದರೆ ಗಮನಿಸಿ ಜಾಗತಿಕ ಮಟ್ಟದಲ್ಲಿ ದೇಶಗಳ ನಡುವೆ ಯಾವ ಮಟ್ಟದಲ್ಲಿ ಅಂತರವಿದೆ ಎನ್ನುವುದನ್ನ ತೋರಿಸುತ್ತದೆ. ಉಳಿದ 171 ದೇಶಗಳ ಒಟ್ಟು ಜಿಡಿಪಿ 15 ಪ್ರತಿಶತ ಎಂದರೆ ಅಂತರದ ಅರಿವಾಗುತ್ತದೆ. ಹೀಗಾಗಿ ಜಗತ್ತನ್ನ ಇವತ್ತು ಮುನ್ನೆಡಿಸುತ್ತಿರುವ ಪ್ರಥಮ ಐದು ದೇಶಗಳು ಕ್ರಮವಾಗಿ ಅಮೇರಿಕಾ, ಚೀನಾ, ಜಪಾನ್, ಜರ್ಮನಿ ಮತ್ತು ಭಾರತ.

ಇದನ್ನೂ ಓದಿ: ಕವಲು ದಾರಿಯಲ್ಲಿ ಚೀನಾದ ಸಾಫ್ಟ್ ಟಾರ್ಗೆಟ್ ಮಲೇಶಿಯಾ!

ಚೀನಾದಲ್ಲಿ ಆಗುವ ಬದಲಾವಣೆಗಳು ಸುಲಭವಾಗಿ ಜಗತ್ತಿನ ಮುಂದೆ ಬರುವುದಿಲ್ಲ, ತೀರಾ ಇತ್ತೀಚಿಗೆ ಅಂದರೆ ಅಕ್ಟೋಬರ್ 2022 ರಲ್ಲಿ ಚೀನಾದ ಪೊಲಿಟ್ ಬ್ಯುರೋ ದಲ್ಲಿನ ಸದಸ್ಯರ ಅಂದರೆ ಸ್ಟ್ಯಾಂಡಿಂಗ್ ಕಮಿಟಿ ಸದಸ್ಯರ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಮುಂದಿನ ಐದು ವರ್ಷ ಚೀನಾವನ್ನ ಮುನ್ನೆಡಿಸುವ ಜವಾಬ್ದಾರಿ ಇವರ ಹೆಗಲ ಮೇಲಿರಲಿದೆ. ಅಧ್ಯಕ್ಷ ಜಿನ್ ಪಿಂಗ್ ಈ ಕಮಿಟಿಗೆ ತನಗೆ ಯಾರೆಲ್ಲಾ ಆಪ್ತರು ಮತ್ತು ನಿಷ್ಠರು ಅವರನ್ನೇ ಆಯ್ದುಕೊಂಡಿದ್ದಾರೆ. ನೆನಪಿರಲಿ ಕೆಳಗೆ ಇರುವ ಹೆಸರುಗಳು ಚೀನಾದ ಅತಿ ಬಲಿಷ್ಠ ಕಾಮ್ರೆಡ್ಗಳದ್ದು, ಆಂತರಿಕ ಜಗಳ, ಬಿನ್ನಾಬಿಪ್ರಾಯಗಳನ್ನ ಮೆಟ್ಟಿ ಅವರ ಹಸರು ಸ್ಟ್ಯಾಂಡಿಂಗ್ ಕಮಿಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇವರುಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

  1. Li Qiang / ಲೀ ಕಿಯಾನ್ಗ್: ಅಧ್ಯಕ್ಷ ಜೀ ಪಿಂಗ್ ನಂತರ ಅವರ ಉತ್ತರಾಧಿಕಾರಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇವರು ಈ ಹಿಂದೆ ಅಧ್ಯಕ್ಷರ ಚೀಫ್ ಆಫ್ ಸ್ಟಾಫ್ ಆಗಿ ಕಾರ್ಯ ನಿರ್ವಹಿಸಿದ್ದರು. ಶಾಂಘೈ ನಗರದಲ್ಲಿ ಕೋವಿಡ್ ನಿರ್ವಹಣೆ ಸರಿಯಾಗಿ ಮಾಡಲಿಲ್ಲ ಎನ್ನುವ ಅಪವಾದ ಅಲ್ಲಿನ ಜನತೆ ಇವರ ಮೇಲೆ ಮಾಡಿತ್ತು. ಹೀಗಾಗಿ ಇವರ ಆಯ್ಕೆಯಾಗುವ ಬಗ್ಗೆ ಸಂದೇಹವಿತ್ತು. ಆದರೆ ಅಧ್ಯಕ್ಷರಿಗೆ ಬೇಕಾಗಿರುವುದು ನಿಷ್ಠೆ, ಅದಕ್ಕೆ ಅವರು ಮಣೆ ಹಾಕಿದ್ದಾರೆ. ಲೀ ಕಿಯಾನ್ಗ್ ಗೆ 63 ವರ್ಷ, ಚೀನಾ ದೇಶದ ಸೆಕೆಂಡ್ ಇನ್ ಕಮಾಂಡ್ ಪಟ್ಟಧಾರಿ.
  2. Zhao Leji / ಜ್ಹಾಯೋ ಲೀಜಿ: ಇವರು ಅತಿ ಸಣ್ಣ ವಯಸ್ಸಿನಲ್ಲಿ ಒಂದು ಪ್ರಾವಿನ್ಸ್ ನ ಗವರ್ನರ್ ಹುದ್ದೆಗೆ ಏರಿದವರು. ತಮ್ಮ 42 ನೇ ವಯಸ್ಸಿನಲ್ಲಿ ಈ ಹುದ್ದೆಗೆ ಈ ಹಿಂದೆ ಚೀನಾದಲ್ಲಿ ಯಾರೂ ಏರಿರಲಿಲ್ಲ. ಸದ್ಯಕ್ಕೆ ಡಿಸಿಪ್ಲಿನ್ ಮತ್ತು ಇನ್ಸ್ಪೆಕ್ಷನ್ ಕಮಿಷನ್ನ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಪಾರ್ಟಿಯಲ್ಲಿ ಶಿಸ್ತು ಕಾಪಾಡುವುದು ಇವರ ಕೆಲಸ. ನೂರಾರು ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವರದಿ ಸಲ್ಲಿಸಿದ ಕೀರ್ತಿ ಇವರದು. 65ರ ಹರಯದ ಇವರು ಸದ್ಯದ ಚೀನಾ ರಾಜಕೀಯ ವಲಯದಲ್ಲಿ ಮೂರನೇ ಅತ್ಯಂತ ಪ್ರಬಲ ವ್ಯಕ್ತಿಯಾಗಿದ್ದಾರೆ.
  3. Wang Huning / ವಾಂಗ್ ಹುನಿಂಗ್: ಕಮ್ಯುನಿಸ್ಟ್ ಪಾರ್ಟಿಯ ಕೆಲಸ ಕಾರ್ಯಗಳ ಮೆದುಳು ಇವರು, ಹಿಂದಿನ ಅಧ್ಯಕ್ಷರ ಸಲಹೆಗಾರರಾಗಿ ಕೆಲಸ ಮಾಡಿದ್ದವರು, ಇಂದಿನ ಅಧ್ಯಕ್ಷ ಜೀಪಿಂಗ್ ಅವರಿಗೂ ನಿಕಟರು. ಚೀನಾದ ಮಹತ್ವಾಕಾಂಕ್ಷಿ ಯೋಜನೆ ಬೆಲ್ಟ್ ಅಂಡ್ ರೋಡ್ ಹಿಂದಿನ ಚಿಂತಕ ಶಕ್ತಿ ಕೂಡ ಇವರದ್ದು! ಪಾರ್ಟಿ ಐಡಿಯಾಲಜಿ, ಕಾನ್ಸೆಪ್ಟ್, ಥಿಯರಿ ಸಿದ್ದಪಡಿಸುವುದು ಇವರ ಕೆಲಸ. ಸದ್ಯಕ್ಕೆ ಪಾರ್ಟಿ ಸೆಕ್ರೆಟೇರಿಯಟ್ ನ ಪ್ರಥಮ ಸೆಕ್ರೆಟರಿ ಹುದ್ದೆಯನ್ನ ಕೂಡ ಅಲಂಕರಿಸಿದ್ದಾರೆ. ಪಾರ್ಟಿಯ ಎಲ್ಲಾ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದು ಇವರ ಹೆಗ್ಗಳಿಕೆ. 67ರ ಹರಯದಲ್ಲೂ ಉತ್ಸಾಹ ಕಡಿಮೆಯಾಗಿಲ್ಲ ಎನ್ನುವುದು ಪಾರ್ಟಿಯ ಕಾರಿಡಾರಿನ ಮಾತು.
  4. Cai Qi / ಚೈಕ್ಯಿ: ಬೀಜಿಂಗ್ ನಗರದ ಮೇಯರ್ ಹುದ್ದೆಯಲ್ಲಿರುವ ಇವರಿಗೆ ಈಗ 66ರ ಪ್ರಾಯ. ಕೋವಿಡ್ ಕರಿಮೋಡದ ಮಧ್ಯೆ ನಗರದಲ್ಲಿ ಒಲಂಪಿಕ್ ಕ್ರೀಡೆಯನ್ನ ಸಮರ್ಪಕವಾಗಿ ನಡೆಸಿದ ಕೀರ್ತಿ ಇವರದ್ದು, ಜೀಪಿಂಗ್ ಗೆ ಅತ್ಯಾಪ್ತ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಬೀಜಿಂಗ್ ನಗರದ ಜನಸಂಖ್ಯೆ ಕಡಿಮೆ ಮಾಡಬೇಕು ಎನ್ನುವ ಹೇಳಿಕೆ ಬಡ ಮಧ್ಯಮವರ್ಗದ ಜನರಿಗೆ ರುಚಿಸಿರಲಿಲ್ಲ. ಸಾವಿರಾರು ಬಡ ಮಧ್ಯಮ ಕುಟುಂಬಗಳು ಬೀಜಿಂಗ್ ತೊರೆದು ಬೇರೆಡೆಗೆ ವಲಸೆ ಹೋಗಲು ಕಾರಣವಾಗಿದ್ದರು.
  5. Ding Xuexiang / ಡಿಂಗ್ ಜುಜಿಯಾಂಗ್: ಪ್ರೆಸಿಡೆಂಟ್ ಆಫೀಸ್ ನ ಡೈರೆಕ್ಟರ್ ಹುದ್ದೆಯಲ್ಲಿದ್ದಾರೆ, 2014 ರಿಂದ ಇಲ್ಲಿಯವರೆಗೆ ಜೀಪಿಂಗ್ ಅವರ ಚೀಫ್ ಆಫ್ ಸ್ಟಾಫ್ ಆಗಿ ಕಾರ್ಯ ಕೂಡ ನಿರ್ವಹಿಸುತ್ತಿದ್ದಾರೆ. ಅಧ್ಯಕ್ಷ ಜೀಪಿಂಗ್ ಅವರ ಜೊತೆಗೆ ಅತಿ ಹೆಚ್ಚು ಸಮಯ ಕಳೆದಿರುವ ವ್ಯಕ್ತಿಯಿವರು, ಹೀಗಾಗಿ ಸಹಜವಾಗೇ ಜೀಪಿಂಗ್ ಅವರಿಗೆ ಅತ್ಯಾಪ್ತ. ಜೀಪಿಂಗ್ ಚಿಂತನೆಗಳ ಬಲವಾದ ಪ್ರತಿಪಾದಕ ಎನ್ನುವ ಹೆಸರು ಇವರಿಗೆ ಅಂಟಿಕೊಂಡಿದೆ. ಜೀಪಿಂಗ್ ನಂಬುವ ಕೆಲವೇ ಕೆಲವು ಜನರ ಹೆಸರಲ್ಲಿ 60 ರ ಹರಯದ ಇವರ ಹೆಸರು ಕೂಡ ಬರುತ್ತದೆ.
  6. Li Xi / ಲೀ ಜೀ: ಗ್ವಾನಡುಂಗ್ ಪ್ರದೇಶದ ಪಾರ್ಟಿ ಸೆಕ್ರೆಟರಿ ಹುದ್ದೆಯಲ್ಲಿ ಸದ್ಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಗ್ವಾನಡುಂಗ್ ಪ್ರದೇಶದ ಸಮಗ್ರ ಅಭಿವೃದ್ಧಿಯ ಹರಿಕಾರ ಎನ್ನುವ ಹೆಗ್ಗಳಿಕೆ ಇವರಿಗೆ ಸೇರುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಮಾವೋ ಜೊತೆಗಿದ್ದು 7 ವರ್ಷಗಳ ಕಾಲ ಬಹಳ ಕಷ್ಟಗಳನ್ನ ದಾಟಿ ಬಂದವರಿವರು. 66  ರ ಹರಯದ ಇವರಿಗೆ ಕಮ್ಯುನಿಸ್ಟ್ ಪಾರ್ಟಿ ನಾಯಕರ ಮನೆತನದೊಂದಿಗೆ ಒಳ್ಳೆಯ ನಂಟಿದೆ.

ಮೇಲಿನ ಎಲ್ಲಾ ಹೆಸರುಗಳನ್ನ ಮತ್ತೊಮ್ಮೆ ಗಮನಿಸಿ, ಎಲ್ಲರೂ ಅಧ್ಯಕ್ಷ ಜೀಪಿಂಗ್ ಅವರ ಪರಮಾಪ್ತರು ಎನ್ನುವುದು ವೇದ್ಯ. ಚೀನಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗತ್ತಿಗೆ ಗೊತ್ತಾಗುತ್ತಿದೆ. ಚೀನಾದ ಆರ್ಥಿಕತೆ ಬಹಳಷ್ಟು ಮಂದಗತಿಯಲ್ಲಿ ಸಾಗುತ್ತಿದೆ. ಸದ್ಯಕ್ಕೆ ಚೀನಾ ದೇಶದ ಮುಂದಿರುವ ಬದಲಾಗುತ್ತಿರುವ ಡೆಮೋಗ್ರಫಿ ಬಹುದೊಡ್ಡ ಸಮಸ್ಯೆಯಾಗಿದೆ. ತನ್ನ ಓಟಕ್ಕೆ ಜೊತೆಯಾಗಿದ್ದ ಖನಿಜಗಳು, ಆಹಾರ ಪದಾರ್ಥ, ಕಚ್ಚಾತೈಲದ ಕೊರತೆಯನ್ನ ಕೂಡ ಚೀನಾ ಅನುಭವಿಸುತ್ತಿದೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕಟ್ಟಿದ ನಗರಗಳು ಘೋಸ್ಟ್ ಸಿಟಿಗಳಾಗಿ ಬದಲಾಗಿವೆ. ಮಿತಿ ಮೀರಿದ ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡಗಳು, ಅಮ್ಯೂಸ್ಮೆಂಟ್ ಪಾರ್ಕುಗಳು ಖಾಲಿ ಬಿದ್ದಿವೆ. ಮಾರಾಟವಾಗದೆ ಉಳಿದ ಕಟ್ಟಡಗಳ ಮೇಂಟೆನೆನ್ಸ್ ಕೂಡ ಸವಾಲಾಗಿದೆ.ರಿಯಲ್ ಎಸ್ಟೇಟ್ ಕುಸಿತ ಅಪರೋಕ್ಷವಾಗಿ ಬ್ಯಾಂಕಿಂಗ್ ಕುಸಿತಕ್ಕೂ ಕಾರಣವಾಗಿದೆ.  ಇದರ ಜೊತೆಗೆ ಕೋವಿಡ್ ಚೀನವನ್ನ ಪೂರ್ಣವಾಗಿ ಇನ್ನೂ ಬಿಟ್ಟಿಲ್ಲ. ಒಟ್ಟಾರೆ ಚೀನಾದ ಓಟಕ್ಕೆ ಕಡಿವಾಣ ಬಿದ್ದಿರುವುದು ಸುಳ್ಳಲ್ಲ . ಹಾಗೆಂದು ಇದು ಖುಷಿಪಡುವ ವಿಷಯವಂತೂ ಅಲ್ಲ. ನೆನಪಿರಲಿ ಇವತ್ತು ನಮ್ಮೆಲ್ಲರ ಅಂದರೆ ಜಗತ್ತಿನ ಎಕಾನಮಿ ಒಂದರಮೇಲೊಂದು ಅವಲಂಬಿತವಾಗಿದೆ. ಅಮೇರಿಕಾ ಅಥವಾ ಚೀನಾ ಕುಸಿದರೆ ಅದರ ನೋವು ಭಾರತಕ್ಕೆ ಕೂಡ ತಟ್ಟುತ್ತದೆ.

ಇದನ್ನೂ ಓದಿ: ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿದ ಭಾರತ: ನಿಜಕ್ಕೂ ಜಿಡಿಪಿ ನಮ್ಮ ಅಭಿವೃದ್ಧಿಯ ಮಾನದಂಡವೇ?

ಕೊನೆಮಾತು: ಕೋವಿಡ್ ನಂತರದ ಜಾಗತಿಕ ಆರ್ಥಿಕತೆ ಇನ್ನೂ ಪೂರ್ಣ ಪ್ರಮಾಣವಾಗಿ ಹಳಿಗೆ ಬಂದಿಲ್ಲ. ಜಾಗತಿಕವಾಗಿ ಹಣದುಬ್ಬರ ಎನ್ನುವ ಹೊಸ ವೈರಸ್ ಹರಡಿಕೊಂಡಿದೆ. ಅಮೇರಿಕಾ ಕಳೆದ ನಾಲ್ಕು ದಶಕದಲ್ಲಿ ಕಾಣದ ಹಣದುಬ್ಬರಕ್ಕೆ ಸಾಕ್ಷಿಯಾಗಿದೆ. ಯೂರೋಪು ಕೂಡ ಅದೇ ದಾರಿಯಲ್ಲಿದೆ. ಭಾರತದಲ್ಲಿ ಕೂಡ ಹಣದುಬ್ಬರ ಬಹಳವಾಗಿದೆ. ಮುಂದಿನ ಐದು ವರ್ಷ ಪೊಲಿಟ್ ಬ್ಯುರೋದ ಸ್ಟ್ಯಾಂಡಿಂಗ್ ಕಮಿಷನ್ ನ ಈ ಏಳು ಜನರ ನಿರ್ಧಾರಗಳು ಜಗತ್ತಿನ ದಿಸೆಯನ್ನ ಬದಲಾಯಿಸುವ ಶಕ್ತಿಯನ್ನ ಹೊಂದಿವೆ ಎನ್ನುವುದು ಸುಳ್ಳಲ್ಲ. ಭಾರತ ವೇಗವಾಗಿ ಜಾಗತಿಕ ವಿತ್ತ ಜಗತ್ತಿನ ಮೂರನೇ ಸ್ಥಾನಕ್ಕೆ ಏರುವತ್ತ ಸಾಗುತ್ತಿದೆ ಎನ್ನುವುದೊಂದು ಸಮಾಧಾನ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp