ಕವಲು ದಾರಿಯಲ್ಲಿ ಚೀನಾದ ಸಾಫ್ಟ್ ಟಾರ್ಗೆಟ್ ಮಲೇಶಿಯಾ! (ಹಣಕ್ಲಾಸು)

ಹಣಕ್ಲಾಸು-329-ರಂಗಸ್ವಾಮಿ ಮೂಕನಹಳ್ಳಿ
ಚೀನಾ
ಚೀನಾ

ನೆಲಕ್ಕಾಗಿ ಹೊಡೆದಾಡುವುದು ನಮಗೆಲ್ಲಾ ಗೊತ್ತಿರುವ ಸಂಗತಿ. ಜೊತೆಗೆ ಸರಹದ್ದು ಕಾದಾಟ ಕೂಡ ಸಾಮಾನ್ಯ ಅಲ್ಲವೇ? ಆದರೆ ನೀರಿನಲ್ಲಿ ಕೂಡ ಸರಹದ್ದು ಉಂಟೆ? ಹೌದು, ಉಂಟು! ಯಾವ ದೇಶದಲ್ಲಿ ಸಮುದ್ರ ಇರುತ್ತದೆ ಅಲ್ಲಿ ಒಂದಷ್ಟು ಭಾಗ ಆಯಾ ದೇಶಕ್ಕೆ ಸೇರುತ್ತದೆ. ಉಳಿದಂತೆ ಅದು ವ್ಯಾಪಾರ ವಹಿವಾಟು ನಡೆಸಲು ಹಡಗುಗಳು ಓಡಾಡಲು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಎಲ್ಲರೂ ಬಳಸಿಕೊಳ್ಳಬಹುದು. ಸೌತ್ ಚೀನಾ ಭಾಗದಲ್ಲಿನ ಸಮುದ್ರದ ಎಲ್ಲವೂ ನನಗೆ ಸೇರಬೇಕು ಎನ್ನುವುದು ಚೀನಾದ ವರಾತ. ಇದಕ್ಕೆ ಪ್ರಮುಖ ಕಾರಣವೇನು ಗೊತ್ತೇ? ಎಲ್ಲದಕ್ಕೂ ಮೊದಲನೆಯದಾಗಿ ಈ ಸಮುದ್ರ ಮಾರ್ಗವಾಗಿ ಹಾದು ಹೋಗಿರುವ ಹಡಗುಗಳು ವಾರ್ಷಿಕ ನಡೆಸುವ ವಹಿವಾಟು ನಾಲ್ಕು ಟ್ರಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಮೀರಿಸುತ್ತದೆ. ಎರಡನೆಯದಾಗಿ 40 ಕ್ಕೂ ಹೆಚ್ಚು ಪ್ರತಿಶತ ಲಿಕ್ವಿಡ್ ರೂಪದ ಗ್ಯಾಸ್ ಈ ಹಾದಿಯ ಮೂಲಕ ಮಾರಾಟವಾಗಿದೆ. ಮೂರನೆಯದಾಗಿ ಈ ಸಮುದ್ರದ ಅಡಿಯಲ್ಲಿ 11 ಬಿಲಿಯನ್ ಬ್ಯಾರೆಲ್ ತೈಲ ಸಂಪತ್ತನ್ನ ಹೊಂದಿದೆ. ನಾಲ್ಕನೆಯದಾಗಿ 190 ಟ್ರಿಲಿಯನ್ ಕ್ಯೂಬಿಕ್ ನ್ಯಾಚುರಲ್ ಗ್ಯಾಸ್ ಕೂಡ ಇರುವುದಾಗಿ ಪತ್ತೆಯಾಗಿದೆ. ಈ ನೀರಿನ ಮೇಲೆ ಚೀನಾ 1970ಕ್ಕಿಂತ ಮುಂಚೆಯೇ ತನ್ನ ಅಧಿಪತ್ಯವನ್ನ ಸ್ಥಾಪಿಸಲು ಶುರು ಮಾಡಿತ್ತು. ಅವತ್ತಿನಿಂದ ಇವತ್ತಿನ ವರೆಗೆ ಚೀನಾದ ವಿರುದ್ಧ ಈ ನೀರಿನ ಭಾಗದ ಅಧಿಪತ್ಯದ ವಿರುದ್ಧ ಧ್ವನಿ ಎತ್ತಿದ್ದು  ಸುಲ್ತಾನೇಟ್ ಆಫ್ ಬುರ್ನೆಯ್, ಮಲೇಶಿಯಾ, ಫಿಲಿಫೈನ್ಸ್, ಇಂಡೋನೇಷ್ಯಾ, ತೈವಾನ್ ಮತ್ತು ವಿಯೆಟ್ನಾಂ. 

ಈ ದೇಶಗಳನ್ನ ಬಡಿದು ಕೂಡಿಸುವುದು ಚೀನಾಗೆ ಯಾವ ದೊಡ್ಡ ಕೆಲಸ? ಅಂತರರಾಷ್ಟ್ರೀಯ ವಲಯದಲ್ಲಿ ಈ ಸಣ್ಣ ಪುಟ್ಟ ರಾಷ್ಟ್ರಗಳ ಕೂಗಿಗೆ ಅಷ್ಟೊಂದು ಕಿಮ್ಮತ್ತು ಸಿಕ್ಕಲಿಲ್ಲ. ಆದರೆ ಗಮನಿಸಿ ಅಂತರರಾಷ್ಟ್ರೀಯ ಕಾನೂನು ಅಥವಾ ನಿಬಂಧನೆಗಳ ಪ್ರಕಾರ ಸೌತ್ ಚೀನಾದಲ್ಲಿರುವ ಈ ಸಮುದ್ರ ಭಾಗ ಅಂತರರಾಷ್ತ್ರೀಯ ವಲಯ ಉಪಯೋಗಿಸಿಕೊಳ್ಳಬಹುದು. ಇದು ಚೀನಾ ನನ್ನದು ಎಂದು ಗೆರೆ ಎಳೆದು ಕೂರುವಂತಿಲ್ಲ . ಆದರೆ ಚೀನಾ 2012 ರಿಂದ ಈಚೆಗೆ ಸಮುದ್ರರಲ್ಲಿ 3,200 ಎಕರೆಯಷ್ಟು ಹೊಸ ಭೂಭಾಗವನ್ನ ಸೃಷ್ಟಿಸಿಕೊಂಡಿದೆ. ಸೌತ್ ಚೀನಾ ಸಮುದ್ರದ 90 ಪ್ರತಿಶತ ನೀರಿನ ಭಾಗವನ್ನ ತನ್ನದು ಎಂದು ಹೇಳಿಕೊಂಡಿದೆ. ಅಂತಾರಾಷ್ಟ್ರೀಯ ಕಾನೂನಿಗೆ ಚೀನಾ ಕಾವಡೆ ಕಾಸಿನ ಬೆಲೆಯನ್ನ ಕೂಡ ನೀಡಿಲ್ಲ.

ಹಾಗೊಮ್ಮೆ , ಹೀಗೊಮ್ಮೆ ಅಮೇರಿಕಾ ಇಲ್ಲಿ ತನ್ನ ಬಲವನ್ನ ಪ್ರದರ್ಶಿಸಲು ಬಂದದ್ದು ಬಿಟ್ಟರೆ,  ಚೀನಾದ ಈ ಓಟವನ್ನ ಪ್ರಶ್ನಿಸುವರು ಯಾರೂ ಇರಲಿಲ್ಲ. ಮಾರ್ಚ್ 3 ಮತ್ತು 4, 2021 ರಂದು ಜರ್ಮನಿ ತನ್ನ ವಾರ್ ಶಿಪ್ನನ್ನು ಸೌತ್ ಚೀನಾದ ನೀರಿನೆಡೆಗೆ ಕಳುಹಿಸಿತ್ತು. ಅದು ಚೀನಾದ ಅಧಿಕೃತ ಬಾರ್ಡರಿಗಿಂತ ಬಹಳ ದೂರದಲ್ಲಿದೆ . ಆದರೆ ಚೀನಾದ ಪ್ರಕಾರ ಆ ಭಾಗದ ಎಲ್ಲಾ ಜಾಗವು ಅದಕ್ಕೆ ಸೇರಬೇಕು. ಹೀಗಾಗಿ ಅದರ ಪ್ರಕಾರ ಜರ್ಮನಿ ಉಲ್ಲಂಘನೆ ಮಾಡಿ ಅದರ ಜಾಗದಲ್ಲಿ ತನ್ನ ಯುದ್ಧ ನೌಕೆಯನ್ನ ತಂದು ನಿಲ್ಲಿಸಿದೆ. ಈ ಘಟನೆಗೆ ಸ್ವಲ್ಪ ತಿಂಗಳು ಮುಂಚೆ  ಫ್ರಾನ್ಸ್ ತನ್ನ ಅಣು ಕ್ಷಿಪಣಿ ಹೊತ್ತ ಯುದ್ಧ ನೌಕೆಯನ್ನ ಕೂಡ ಈ ಭಾಗದಲ್ಲಿ ತಂದು ನಿಲ್ಲಿಸಿತ್ತು. ಈಗ ಜರ್ಮನಿ ಎರಡು ದಶಕದ ನಂತರ ಪ್ರಥಮ ಬಾರಿಗೆ ಇಂತಹ ಸಾಹಸವನ್ನ ಮಾಡಿತ್ತು.

ಗಮನಿಸಿ ನೋಡಿ , ದೈತ್ಯ ಚೀನಾಗೆ ಸೆಡ್ಡು ಹೊಡೆಯಲು ಇಂತಹ ಸಾಂಘಿಕ ಪ್ರಯತ್ನಗಳು ಬಹಳ ಪ್ರಮುಖವಾಗಿವೆ. ಯೂರೋಪ್ನಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಬಹಳ ಶಕ್ತಿಶಾಲಿ ಮತ್ತು ಪ್ರಭಾವಿ ದೇಶಗಳು. ಇವೆರೆಡು ಜೊತೆಗೆ ಇಂಗ್ಲೆಂಡ್ ಕೂಡ ಚೀನಾದ ವಿರುದ್ಧ ನಿಂತಿರುವುದು ಅಮೇರಿಕಾ ದೇಶಕ್ಕೆ ಆನೆಬಲ ಬಂದಂತಾಗಿದೆ. ಇವೆಲ್ಲವುಗಳ ಮಧ್ಯೆ ಕೂಡ ಚೀನಾ ತನ್ನ ಹಣ ಬಲದಿಂದ ಈಸ್ಟ್ ಯೂರೋಪಿನ ದೇಶಗಳನ್ನ ತನ್ನತ್ತ ತಿರಿಗಿಸಿಕೊಳ್ಳುವ ಪ್ರಯತ್ನದಲ್ಲಿದೆ. ನಿಮಗೆ ನೆನಪಿರಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಯೂರೋಪು ಇಬ್ಬಾಗವಾಗಿತ್ತು. ಚೀನಾ ಇತಿಹಾಸವನ್ನ ಮರುಕಳಿಸುವ ಹುನ್ನಾರದಲ್ಲಿದೆ. ಆದರೆ ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ಯೂರೋಪಿನ ಎಲ್ಲಾ ದೇಶಗಳನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ತಾಕತ್ತು ಹೊಂದಿವೆ.

ಚೀನಾ ಇಂದಿಗೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ  ಸ್ಥಿತಿಯಲ್ಲಿದೆ. ನಿಧಾನವಾಗಿ ಅಧ್ಯಕ್ಷ ಜಿನ್ ಪಿಂಗ್ ಬಗ್ಗೆ ಅಸಮಾಧಾನ ಶುರುವಾಗಿದೆ. ಇದಕ್ಕೆ ಕಾರಣ ಬಹಳ ಸರಳ , ಎಲ್ಲಿಯವರೆಗೆ ನೀವು ತೆಗೆದುಕೊಂಡ ನಿರ್ಧಾರ ಯಶಸ್ಸು ಕಾಣುತ್ತಿರುತ್ತದೆ ಅಲ್ಲಿಯವರೆಗೆ ಎಲ್ಲವೂ ಓಕೆ . ಒಮ್ಮೆ ಕುಸಿತ ಕಂಡರೆ ಆಗ ಎಲ್ಲರೂ ವಿರುದ್ದದ ಧ್ವನಿ ಎತ್ತಲು ಶುರು ಮಾಡುತ್ತಾರೆ.  ನಿಮಗೆ ಗೊತ್ತಿರಲಿ ಚೀನಾದ ಮಹತ್ವಾಕಾಂಕ್ಷೆ ಪ್ರಾಜೆಕ್ಟ್  ' ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ' (BRI ) ಅಡಿಯಲ್ಲಿ ಸರಿಸುಮಾರು 130 ದೇಶಗಳನ್ನ ಒಪ್ಪಿಸಿ ಸಹಿ ಹಾಕಿಸಿಕೊಳ್ಳಲಾಗಿದೆ. ಚೀನಾ ಈ ಎಲ್ಲಾ ದೇಶಗಳನ್ನ ಒಂದಲ್ಲ ಒಂದು ರೀತಿಯಲ್ಲಿ ತನ್ನ ದಾರಿಗೆ ತಂದುಕೊಂಡಿದೆ. ಈ ಎಲ್ಲಾ 130 ದೇಶಗಳ ಕಥೆಯಲ್ಲಿ ಮಲೇಶಿಯಾ ಕಥೆ ವಿಭಿನ್ನವಾಗಿ ನಿಲ್ಲುತ್ತದೆ. ನಿಮಗೆ ತಿಳಿದಿರಲಿ ಮಲೇಶಿಯಾ ಭ್ರಷ್ಟಾಚಾರದಲ್ಲಿ ಭಾರತದ ಅಪ್ಪ , 31 ಆಗಸ್ಟ್ 1957 ರಲ್ಲಿ ಬ್ರಿಟಿಷರಿಂದ ಸ್ವಂತಂತ್ರ್ಯ ಪಡೆದ ಈ ದೇಶದ ರಸ್ತೆ ಬದಿಯಲ್ಲಿ ಥೇಟ್ ನಮ್ಮ ದೇಶದಲ್ಲಿ ಬಿದ್ದಿರುವಂತೆ ಕಸ ರಾಶಿ ರಾಶಿ ಬಿದ್ದಿರುತಿತ್ತು. ನಿಧಾನವಾಗಿ ಮೈ ಕೊಡವಿಕೊಂಡು ಎದ್ದು ನಿಂತಿರುವ ಮಲೇಷ್ಯಾ ಅಂದಿನಿಂದ ಮಹತ್ತರವಾದ ಹೊರಗಿನ ಹೂಡಿಕೆಯನ್ನ ಪಡೆದುಕೊಂಡಿರಲಿಲ್ಲ. ಯಾವಾಗ ಚೀನಾ ತನ್ನ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ ಶುರು ಮಾಡಿಕೊಂಡಿತು ಆಗ ಚೀನಾದ ಅಧ್ಯಕ್ಷ 2013 ರಲ್ಲಿ ಮಲೇಷ್ಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. 2013 ರಿಂದ 2018ರಲ್ಲಿ ಸೌತ್ ಈಸ್ಟ್ ಏಷ್ಯಾ ದೇಶಗಳಲ್ಲಿ ಮಲೇಷ್ಯಾ ಅತಿ ಹೆಚ್ಚು ಹೂಡಿಕೆಯನ್ನ ಪಡೆದುಕೊಳ್ಳುತ್ತದೆ , 35 ಬಿಲಿಯನ್ ಡಾಲರ್ ಹಣ ಹೀಗೆ ಚೀನಾ ದೇಶದಿಂದ ಮಲೇಷ್ಯಾ ದೇಶಕ್ಕೆ ಬರುತ್ತದೆ. ಎಲ್ಲವೂ ಚೀನಾದ ಅಣತಿಯಂತೆ ನಡೆದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ , ಕೋವಿಡ್ ಎಲ್ಲವನ್ನೂ ಧೋಳಿಪಟ ಮಾಡಿದೆ. ಚೀನಾದ ಹಣದಲ್ಲಿ ಕಟ್ಟಿ ನಿಲ್ಲಿಸಿರುವ ಕಟ್ಟಡಗಳು ಖಾಲಿ ಹೊಡೆಯುತ್ತಿವೆ. ಮಲೇಷ್ಯಾ ಆರ್ಥಿಕವಾಗಿ ಜರ್ಜರಿತವಾಗಿದೆ.

ಮಲೇಷ್ಯಾ ಕೇವಲ ಒಂದು ಉದಾಹರಣೆ ಮಾತ್ರ , ಬಹುತೇಕ ಪುಟ್ಟ ದೇಶಗಳು ಕೋವಿಡ್ ನಿಂದ ಆರ್ಥಿಕವಾಗಿ ಜರ್ಜರಿತಗೊಂಡಿವೆ. ಚೀನಾದ ಹೂಡಿಕೆ ಪಸಲು ನೀಡುವ ಸಮಯದಲ್ಲಿ ಮುಳುಗಿ ಹೋಗಿದೆ. ಇನ್ನು ಆಫ್ರಿಕಾ ದೇಶಗಳು ಬಡ್ಡಿ ಕೂಡ ನೀಡಲು ಹಣವಿಲ್ಲ , ಇನ್ನಷ್ಟು ಸಾಲ ನೀಡಿ ಬಲಿಷ್ಠವಾದ ನಂತರ ಎಲ್ಲವನ್ನೂ ವಾಪಸ್ಸು ನೀಡುತ್ತೇವೆ ಎನ್ನುವ ಮಟ್ಟಕ್ಕೆ ಬಂದು  ನಿಂತಿವೆ. ಚೀನಾ ಅಧ್ಯಕ್ಷ ಜಿನ್ ಪಿಂಗ್ ವೇಗ ಮತ್ತು ಅತಿಯಾದ ಆತ್ಮವಿಶ್ವಾಸ ಅವರಿಗೆ ಮುಳುವಾಗಿದೆ.

10 ದಿನ ಮಲೇಷ್ಯಾ ದೇಶದ ನಾಲ್ಕೈದು ರಾಜ್ಯಗಳನ್ನ ಭೇಟಿ ಮಾಡುವ ಅವಕಾಶ ನನ್ನದಾಗಿತ್ತು. ಆಗೆಲ್ಲಾ ಸಿಕ್ಕ ಸ್ಥಳಿಯರೊಂದಿಗಿನ ಮಾತುಕತೆಯಲ್ಲಿ ಒಂದು ಸಾಮಾನ್ಯ ಅಂಶ ಈಗ ಅಧಿಕಾರದಲ್ಲಿರುವ ಸರಕಾರದ ವಿರುದ್ದ ಅವರಿಗಿರುವ ಅಸಮಾಧಾನ. ಚೀನಿ ಮೂಲದವರು , ಮಲಯ್ಗಳು , ಭಾರತೀಯ ಮೂಲದವರು ಎಲ್ಲರದೂ ಒಂದೇ ಧ್ವನಿ , ಈ ಸರಕಾರ ಆದಷ್ಟು ಬೇಗ ತೊಲಗಬೇಕು. ಸೆಪ್ಟೆಂಬರ್ 2023 ರ ತನಕ ಚುನಾವಣೆ ಇಲ್ಲ, ಆದರೆ ಜನರಲ್ಲಿರುವ ಆಕ್ರೋಶ ನೋಡಿದರೆ ಬೇಗ ಅಂದರೆ ಈ ವರ್ಷದ ಕೊನೆಗೆ ಅಥವಾ 2023ರ ಜನವರಿಯಲ್ಲಿ ಚುನಾವಣೆ ನಡೆಯುವ ಸಂಭಾವ್ಯತೆ ಬಹಳ ಹೆಚ್ಚು. ಭ್ರಷ್ಟಾಚಾರ ಹೊಸ ಎತ್ತರವನ್ನ ತಲುಪಿದೆ. ಕೋವಿಡ್ ಎಲ್ಲಾ ಪ್ಲಾನ್ಗಳನ್ನ ಚೌಪಾಟು ಮಾಡಿದೆ. ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿಗಳು ಹೇಳುವ ಕಥೆ ಸಿದ್ದವಾಗಿ ಖಾಲಿ ಬಿದ್ದಿರುವ ಕಟ್ಟಡಗಳಿಗಿಂತ ದಾರುಣವಾಗಿದೆ.

ನಮ್ಮಲ್ಲಿ ಒಂದು ಆಡುಮಾತಿದೆ ' ಕೆಡಿಸಬೇಡ ಕೆಟ್ಟಿಯೇ ' ಎನ್ನುತ್ತದೆ ಆ ಮಾತು. ಇತರರನ್ನ ಕೆಡಿಸಿಯಾದರೂ ಸರಿಯೇ ನಾವು ಉದ್ದಾರವಾಗಬೇಕು ಎನ್ನುವ ಮನಸ್ಥಿತಿಗೆ ಸೋಲಾಗುತ್ತದೆ ಎನ್ನುವುದನ್ನ ಸೂಚ್ಯವಾಗಿ ಹೇಳುವ ಮಾತಿದು. ಜಗತ್ತಿನ ಒಡೆತನ ಪಡೆಯಬೇಕು ಎನ್ನುವ ಚೀನಾದ ನಿಯತ್ತು ಸರಿಯಿಲ್ಲದ ಕಾರಣ, ಅದರ ಪ್ಲಾನ್ ಅದಕ್ಕೆ ಮುಳುವಾಗಿದೆ. ಚೀನಾದ ಅಧ್ಯಕ್ಷನಿಗೆ ಆತನದೇ ದೇಶದಲ್ಲಿ ವಿರುದ್ದದ ಧ್ವನಿ ಶುರುವಾಗಿದೆ. ವರ್ಷದ ಹಿಂದೆಯೇ ಅಲ್ಲಿನ ಉದ್ಯಮಿ ಜಾಕ್ ಮಾ, ಜಿನ್ ಪಿಂಗ್ ವಿರುದ್ಧ ಮಾತನಾಡಿದ ಕಾರಣ ಮಾಯವಾಗಿದ್ದ , ಈಗ ಅಲ್ಲಿ ಅಧ್ಯಕ್ಷನ ವಿರುದ್ದದ ಧ್ವನಿ ಜೋರಾಗಿದೆ. ಇದಕ್ಕೆ ಕಾರಣ ಚೀನಾದ ಹಣ ಖಾಲಿಯಾಗಿದೆ, ಚೀನಾ ಆಂತರಿಕವಾಗಿ ಆರ್ಥಿಕವಾಗಿ ಮುಗ್ಗಟ್ಟಿಗೆ ಒಳಗಾಗಿದೆ. ಅತಿಯಾದ ವಿಶ್ವಾಸ ಮತ್ತು ಅತಿ ವೇಗ ಎರಡೂ ಅದಕ್ಕೆ ಶಾಪವಾಗಿದೆ.

7/8 ನೇ ತಲೆಮಾರಿನ ಮಲೇಷಿಯನ್ ಚೀನಿಗಳು ತಮ್ಮನ್ನ ತಾವು ಮಲಯ್ ಗಳು ಎಂದುಕೊಂಡು ಬದುಕುತ್ತಿದ್ದರು , ಈಗಲೂ ಮೆಜಾರಿಟಿ ಹಾಗೆ ಇದ್ದಾರೆ, ಚೀನಾದ ಹೂಡಿಕೆ ಒಂದು ವರ್ಗವನ್ನ ತಾವು ಚೀನಿಯರು ಎನ್ನುವಂತೆ ಮಾಡಿದೆ. ಡಿವೈಡ್ ಅಂಡ್ ರೂಲ್ ಬ್ರಿಟಿಷ್ ತಂತ್ರಗಾರಿಕೆ, ಅದನ್ನ ಅಮೇರಿಕಾ ನಂತರ ಚೀನಾ ವ್ಯವಸ್ಥಿತವಾಗಿ ಬಳಸಿಕೊಂಡಿತ್ತು. ಮಲೇಷ್ಯಾ ಭಾರತೀಯರದು ತ್ರಿಶಂಕು ಸ್ವರ್ಗ. ಅಲ್ಲೂ ಇಲ್ಲದ, ಇಲ್ಲೂ ಸಲ್ಲದ ಪರಿಸ್ಥಿತಿ ಅವರದು.

ಕೊನೆಮಾತು: ಸದ್ಯಕ್ಕೆ ಚೀನಾ ತನ್ನ ಆಂತರಿಕ ನೋವುಗಳನ್ನ ಶಮನ ಮಾಡಿಕೊಳ್ಳಬೇಕಿದೆ. ಏಕೆಂದರೆ ಅದು ಅಷ್ಟು ಸುಲಭವಾಗಿ ತಮಣೆಗೆ ಬರುವ ವಿಷಯವಲ್ಲ. ಚೀನಾ ದೇಶದ ಜೊತೆಗೆ ತಮ್ಮ ಕನಸುಗಳನ್ನ ಬೆಸೆದುಕೊಂಡ ಪುಟಾಣಿ ದೇಶಗಳಾದ ಶ್ರೀಲಂಕಾ ಅದಾಗಲೆ ತುರ್ತು ಪರಿಸ್ಥಿತಿ ಘೋಷಿಸಿಕೊಂಡಿದೆ. ಮಲೇಷ್ಯಾದಲ್ಲಿ ಸದ್ಯದ ಮಟ್ಟಿಗೆ ಅಂತಹ ಸ್ಥಿತಿ ಕಾಣದಿದ್ದರೂ , ಹಣದುಬ್ಬರ ಮತ್ತು ಭ್ರಷ್ಟಾಚಾರ ವೇಗ ಪಡೆದುಕೊಂಡಿವೆ. ಈ ಎರೆಡು ರೋಗವನ್ನ ನಿಯಂತ್ರಣಕ್ಕೆ ತರದಿದ್ದರೆ ಅದು ಕೋವಿಡ್ಗಿಂತ ಘಾತಕವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com