social_icon

ಸಾಲ ಮತ್ತು ಬಡ್ಡಿ ಉಗಮಕ್ಕೆ ಮುಂಚೆ ಸಾಲ ಮತ್ತು ಬಡ್ಡಿ ಇರಲಿಲ್ಲವೇ?! (ಹಣಕ್ಲಾಸು)

ಹಣಕ್ಲಾಸು-329

-ರಂಗಸ್ವಾಮಿ ಮೂಕನಹಳ್ಳಿ

Published: 06th October 2022 01:36 AM  |   Last Updated: 06th October 2022 02:26 PM   |  A+A-


Debt (file pic)

ಸಾಲ (ಸಂಗ್ರಹ ಚಿತ್ರ)

Posted By : srinivasrao
Source :

ಸಾಲ ಎನ್ನುವ ಪದಕ್ಕೆ ಹಿಂದೆ ಇದ್ದ ಅರ್ಥಕ್ಕೂ ಇಂದು ಇರುವ ಅರ್ಥಕ್ಕೂ ಬಹಳ ಬದಲಾವಣೆಯಾಗಿದೆ. ಹಿಂದೆಲ್ಲಾ ಅವಶ್ಯಕವಾಗಿ ಬೇಕಾದ ವಸ್ತುವನ್ನ ಪಡೆದುಕೊಳ್ಳುವುದು ಸಾಲದ ವ್ಯಾಖ್ಯೆಯಲ್ಲಿ ಬರುತ್ತಿತ್ತು. 

ಇಂದೇನಾಗಿದೆ ಮುಂದಿನ ಹತ್ತಾರು ವರ್ಷ ದುಡಿಯಬಹುದಾದ ಅಥವಾ ಗಳಿಸಬಹುದಾದ ಸಂಭಾವ್ಯ ಹಣವನ್ನ ಮುಂಗಡ ಪಡೆಯುವುದನ್ನ ಸಾಲ ಎನ್ನಲಾಗುತ್ತಿದೆ. ಅವಶ್ಯಕತೆ ಇದೆಯೇ ಅಥವಾ ಇಲ್ಲವೇ ಎನ್ನುವುದು ಬೇರೆಯ ಮಾತು ! ಇಂದಿನ ಲೇಖನದಲ್ಲಿ ಸಾಲ(ಡೆಟ್) ಎಂದರೇನು? ನಾವು ಇಂದು ನೋಡುತ್ತಿರುವ ಹಣದ ಉಗಮಕ್ಕೆ ಮುಂಚೆ ಸಾಲ ಇತ್ತೇ? ಬಡ್ಡಿ ಎಂದರೇನು? ಅದರ ಉಗಮ ಎಷ್ಟು ಹಳೆಯದು ಇದರ ಬಗ್ಗೆ ತಿಳಿದುಕೊಳ್ಳುವ ಪುಟ್ಟ ಪ್ರಯತ್ನ ಮಾಡೋಣ.

ಮನುಷ್ಯ ಸಹಜ ಗುಣ ತನ್ನ ಬಳಿ ಇಲ್ಲದೆ ಇರುವ ವಸ್ತುವನ್ನು ಬೇರೆಯವರಿಂದ ಕೇಳಿ ಪಡೆಯುವುದು ಮತ್ತು ಅದನ್ನ ಉಪಭೋಗಿಸುವುದು. ಆ ಅರ್ಥದಲ್ಲಿ ನೋಡಿದರೆ ಬಾರ್ಟರ್ ಎಕ್ಸ್ಚೇಂಜ್ (ವಸ್ತು ವಿನಿಮಯ) ಗೂ ಮುಂಚೆಯೇ ಸಾಲ ಇತ್ತು. ಹಣಕಾಸು ವ್ಯವಹಾರ ಇಂದಿನ ಮಟ್ಟ ಮುಟ್ಟುವುದಕ್ಕೂ ಮುಂಚೆಯೇ ತನಗೆ ಬೇಕಾದ ವಸ್ತುವನ್ನು ತನ್ನ ನೆರೆಹೊರೆಯವರನ್ನು ಕೇಳಿ ಪಡೆಯುವುದು ಅತ್ಯಂತ ಸಹಜ ಕ್ರಿಯೆಯಾಗಿತ್ತು. ಹಾಗೆ ಪಡೆದ ವಸ್ತುವನ್ನು ಒಂದಷ್ಟು ಸಮಯದ ನಂತರ ಮರಳಿ ಕೊಡುವುದೂ ಕೂಡ ಅಷ್ಟೇ ಸಹಜ ಕ್ರಿಯೆಯಾಗಿತ್ತು. ಆ ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಯ ನಡುವಿನ ನಂಬಿಕೆ, ಗೌರವಗಳೇ ವಿನಿಮಯದ ಆಧಾರವಾಗಿತ್ತು. ಕೊಟ್ಟದ್ದಕ್ಕೆ ಮತ್ತು ಪಡೆದದಕ್ಕೆ ಯಾವುದೇ ತೆರೆನಾದ ಪತ್ರ ಅಥವಾ ದಾಖಲೆ ಇರುತ್ತಿರಲಿಲ್ಲ. ದಿನಕಳೆದಂತೆ ಮನುಷ್ಯನ ಇನ್ನೊಂದು ಸಹಜ ಗುಣವಾದ ಆಸೆ ಬುರುಕುತನ ವ್ಯಕ್ತಿಗಳ ನಡುವಿನ ನಂಬಿಕೆಯನ್ನು ನುಂಗಿಹಾಕುತ್ತದೆ. ನಿಧಾನವಾಗಿ ಕೊಟ್ಟದ್ದಕ್ಕೆ – ಪಡೆದದಕ್ಕೆ ಲೆಕ್ಕ ಇಡಲು ಶುರು ಮಾಡುತ್ತಾರೆ.

ಇದನ್ನೂ ಓದಿ: ಭಾರತದ ಆರ್ಥಿಕತೆ ಕೂಡ ಕುಸಿತ ಕಾಣಲಿದೆಯೆ?

‘ನಾನು ನಿನಗೆ ಬೇಕಾದಾಗ ನೀನು ಕೇಳಿದ ವಸ್ತುವ ಕೊಟ್ಟೆ. ನಂತರ ಒಂದಷ್ಟು ಸಮಯದ ನಂತರ ನೀನು ನನಗೆ ತಿರುಗಿ ಕೊಟ್ಟೆ ಆದರೆ ಅದರಿಂದ ನನಗೇನು ಲಾಭ? ನೀನು ಆ ವಸ್ತುವನ್ನು ಉಪಭೋಗಿಸಿದಷ್ಟು’ ಸಮಯ’ ನಾನು ಅದರಿಂದ ವಂಚಿತನಾದೆ. ಅದಕ್ಕೆ ಪರಿಹಾರವೇನು?‘ ಎನ್ನುವ ನಾಗರಿಕ ಸಮಾಜದ ಪ್ರಶ್ನೆ ‘ಬಡ್ಡಿ’ ಯನ್ನು ಹುಟ್ಟಿಹಾಕಿತು.

ಹಾಗೆ ನೋಡಲು ಹೋದರೆ ‘ಸಾಲ’ ಮತ್ತು ‘ಬಡ್ಡಿ’ ಎರಡರ ಉಗಮದ ನಡುವೆ ಹೆಚ್ಚು ಅಂತರವಿಲ್ಲ. ಸಮಾಜದಲ್ಲಿ ಹೀಗೆ ಒಂದು ವಸ್ತುವನ್ನು ಬೇರೆಯವರಿಂದ ಪಡೆಯುವ ಕ್ರಿಯೆಗೆ ಸಾಲ ಎನ್ನುತ್ತಾರೆ ಎನ್ನುವ ಅರಿವು ಕೂಡ ಇರಲಿಲ್ಲ. ಆದರೆ ಅದು ಚಾಲನೆಯಲ್ಲಿತ್ತು. ಬಡ್ಡಿಯ ವಿಷಯದಲ್ಲೂ ಈ ಮಾತು ಸತ್ಯ. ಹಾಗಾದರೆ ಈ ಸಾಲ ಮತ್ತು ಬಡ್ಡಿ ಎಷ್ಟು ಹಳೆಯದಿರಬಹುದು? ಮನಷ್ಯನ ಗುಣಗಳನ್ನು ಅಳೆತೆಗೋಲನ್ನಾಗಿ ಇಟ್ಟುಕೊಂಡು ನೋಡುವುದಾದರೆ ನಾಗರೀಕತೆ ಹುಟ್ಟಿನಿಂದ ಎಂದು ಹೇಳಿ ಬಿಡಬಹುದು. ನಮಗೆ ಬಂದ ಈ ಪ್ರಶ್ನೆಗೆ David Graeber ಎನ್ನುವ ಇಂಗ್ಲೆಂಡ್ ನ ಮಾನವ ಶಾಸ್ತ್ರಜ್ಞ ತನ್ನ ಪುಸ್ತಕ ‘ಸಾಲದ ಪ್ರಥಮ ಐದು ಸಾವಿರ ವರ್ಷಗಳು’ ದಲ್ಲಿ ವಿವರಿಸಿದ್ದಾನೆ. 2011ರಲ್ಲಿ ಹೊರಬಂದ ಈ ಪುಸ್ತಕದ ಪ್ರಕಾರ ಸಾಲ ಮತ್ತು ಬಡ್ಡಿ ಉಗಮವಾದದ್ದು ಸರಿಸುಮಾರು ಕ್ರಿ.ಪೂ 3,500 ಸಮಯದಲ್ಲಿ. ಹಣದ ಉಗಮಕ್ಕೂ ಮುಂಚೆ ‘ಡೆಟ್ ಇಸ್ ದ ಮನಿ’ ಎನ್ನುವಂತಿತ್ತು. ಕೊಟ್ಟ ಸಾಲ ವಾಪಸ್ಸು ಕೊಡದೆ ಹೋದದ್ದು ಮಾನವ ಇತಿಹಾಸದಲ್ಲಿ ಹಲವು ಕದನಗಳಿಗೆ ನಾಂದಿ ಹಾಡಿದೆ. ಇದರಿಂದ ಆದ ತೊಂದರೆಗಳನ್ನು ಕಂಡ ಮತ್ತಷ್ಟು ನಾಗರೀಕತೆ ಕಲಿತ ಸಮಾಜ ಡೆಟ್ (ಸಾಲ) ಸಹವಾಸವೇ ಬೇಡ, ‘ನಿನಗೆ ಬೇಕಾದ ವಸ್ತುವ ಪಡಿ ಬದಲಿಗೆ ನಿನಗೆ ಅವಶ್ಯಕತೆ ಇರದ ವಸ್ತುವ ಕೊಡು’ ಎನ್ನುವ ತತ್ವಕ್ಕೆ ಜೋತು ಬೀಳುತ್ತಾರೆ. ಇದು ವಸ್ತು ವಿನಿಮಯ ಬಾರ್ಟರ್ ಎಕ್ಸ್ಚೇಂಜ್ ಗೆ ದಾರಿ ಮಾಡಿಕೊಡುತ್ತದೆ. ನಂತರದ ಹಣದ ಪರಿಕಲ್ಪನೆ ಹೇಗಾಯ್ತು ಎನ್ನುವುದು ನಮಗೆ ತಿಳಿದಿದೆ.

ಇದನ್ನೂ ಓದಿ: ಆರ್ ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್; ಇಲ್ಲಿದೆ ನಿಮಗೆ ಬೇಕಾದ ಮಾಹಿತಿ!

ಸಾಲ ಪಡೆದವರು ಅದನ್ನು ತೀರಿಸಲು ಆಗದೆ ತಮ್ಮ ಮನೆ ಆಸ್ತಿಯ ಜೊತೆಗೆ ಹೆಂಡತಿ ಮಕ್ಕಳನ್ನು ಕೂಡ ಜೀತಕ್ಕೆ ತಳ್ಳಿದ ಉದಾಹರಣೆ ನಮಗೆ ಸಿಗುತ್ತದೆ. ಹಾಗೆ ನೋಡಿದರೆ ‘ಫ್ರೀಡಂ’ ಎನ್ನುವ ಪದ  ‘ಡೆಟ್ ಫ್ರೀಡಂ’ ಎನ್ನುವುದಕ್ಕೆ ಸಮಾನಾರ್ಥಕ ಪದವಾಗಿತ್ತು ಎಂದರೆ ಆಶ್ಚರ್ಯ ಎನ್ನಿಸಬಹುದು ಆದರೆ ಇದು ನಿಜ. ಫ್ರೀಡಂ ಎಂದರೆ ‘ಮರಳಿ ತಾಯಿಗೆ ಹಿಂದಿರುಗಿಸು’ ಎನ್ನುವ ಅರ್ಥ ಕೊಡುತ್ತದೆ. ಹಿಂದೆ ಕೊಟ್ಟ ಸಾಲ ವಾಪಸ್ಸು ಬರದಿದ್ದಾಗ ಒತ್ತೆಗಾಗಿ ಮಕ್ಕಳನ್ನು ಸಾಲಕೊಟ್ಟವರು ಕರೆದೊಯ್ಯುವುದು ಸಾಮಾನ್ಯವಾಗಿತ್ತು. ಸಾಲ ವಾಪಸ್ಸು ಕೊಟ್ಟ ಮೇಲೆ ಅಥವಾ ಕೆಲವೊಮ್ಮೆ ಸಾಲ ಮನ್ನಾ ಮಾಡಿದಾಗ ಮಕ್ಕಳನ್ನು ತಿರುಗಿ ತಾಯಿಗೆ ಕೊಡುವುದಕ್ಕೆ ಫ್ರೀಡಂ ಎನ್ನುವ ಶಬ್ದ ಬಳಸುತ್ತಿದ್ದರು.

ಹೀಗೆ ಒಂದು ಸಾಮಾನ್ಯ ಸಾಲ ಎನ್ನುವುದು ಇಂದು ಅತ್ಯಂತ ವ್ಯವಸ್ಥಿತವಾಗಿ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು ನೀಡುವ ಸೇವೆಯಾಗಿ ಮಾರ್ಪಟ್ಟಿದೆ . ಸಾಲ ಎನ್ನುವ ಒಂದು ಪದ ಇಂದು ಅನೇಕ ಸಾಲವಾಗಿದೆ ಉದಾಹರಣೆ ನೋಡೋಣ.

ಸುರಕ್ಷಿತ ಸಾಲ (Secured debt): ಬ್ಯಾಂಕ್ ಅಥವಾ ಇನ್ನಿತರ ಹಣಕಾಸು ಸಂಸ್ಥೆ ಮನೆಯನ್ನು, ಬಂಗಾರವನ್ನು ಅಥವಾ ಇನ್ನ್ಯಾವುದೇ ಬೆಲೆಬಾಳುವ ವಸ್ತುವನ್ನು ತಮ್ಮ ಬಳಿ ಅಡ ಇಟ್ಟುಕೊಂಡು ಸಾಲ ನೀಡುತ್ತಾರೆ. ಒಂದು ವೇಳೆ ಸಾಲ ತೆಗೆದು ಕೊಂಡವನು ವಾಪಸ್ಸು ಕೊಡಲು ತಕರಾರು ಮಾಡಿದರೆ ಬ್ಯಾಂಕಿಗೆ ನಷ್ಟವೇನೂ ಇಲ್ಲ. ತನ್ನ ಬಳಿ ಇರುವ ಬೆಲೆಬಾಳುವ ವಸ್ತುವನ್ನು ಹರಾಜು ಮೂಲಕ ಮಾರಿ ತಮ್ಮ ಸಾಲವನ್ನು ತುಂಬಿಕೊಳ್ಳುತ್ತಾರೆ. ಹೀಗಾಗಿ ಇದಕ್ಕೆ ಸುರಕ್ಷಿತ ಸಾಲ ಎಂದು ಕರೆಯಲಾಗುತ್ತದೆ.

ಅಸುರಕ್ಷಿತ ಸಾಲ (Unsecured debt): ಇದು ಸುರಕ್ಷಿತ ಸಾಲಕ್ಕೆ ಪೂರ್ಣ ವಿರುದ್ಧ. ಸಾಲ ಪಡೆದವನು ಹಿಂತಿರುಗಿಸದೆ ಹೋದರೆ ಹಣಕಾಸು ಸಂಸ್ಥೆ ಹಣವನ್ನು ಮರಳಿ ಪಡೆಯಲು ಹೆಣಗಬೇಕಾಗುತ್ತದೆ. ಹೀಗಾಗಿ ಇದಕ್ಕೆ ಅಸುರಕ್ಷಿತ ಸಾಲ ಎನ್ನಲಾಗುತ್ತದೆ. ನಿಗದಿತ ಬಡ್ಡಿ ದರದ ಸಾಲ (Fixed interest rate debt): ಸಾಲದ ಮೇಲಿನ ಬಡ್ಡಿಯ ಮೊತ್ತವನ್ನು ನಿಗದಿತ ಸಮಯಕ್ಕೆ ನಿಗದಿ ಪಡಿಸಲಾಗುತ್ತದೆ ಹಾಗಾಗಿ ಇದಕ್ಕೆ ನಿಗದಿತ ಬಡ್ಡಿ ದರದ ಸಾಲ ಎಂದು ಕರೆಯಲಾಗುತ್ತದೆ.

ಬದಲಾಗುವ ಬಡ್ಡಿ ದರದ ಸಾಲ (Variable interest rate debt):  ಸಾಲದ ಮೇಲಿನ ಬಡ್ಡಿ ಮಾರುಕಟ್ಟೆಯಲ್ಲಿ ಬಡ್ಡಿ ಏರಿಳತದ ಮೇಲೆ ಬದಲಾವಣೆ ಕಾಣುತ್ತದೆ. ಇಂತಹ ಸಾಲವನ್ನು ಬದಲಾಗುವ ಬಡ್ಡಿ ದರದ ಸಾಲ ಎನ್ನಲಾಗುತ್ತದೆ. ನಿಗದಿತ ಸಮಯದ ಸಾಲ (Term loan): ನಿಗದಿತ ಸಮಯದ ಸಾಲವನ್ನು ಟರ್ಮ್ ಲೋನ್ ಎನ್ನುತ್ತಾರೆ. ಉದಾಹರಣೆಗೆ 5 ವರ್ಷದಲ್ಲಿ ಪಡೆದ ಸಾಲವನ್ನು ಬಡ್ಡಿ ಸಮೇತ ವಾಪಸ್ಸು ಕೊಡಬೇಕು ಎನ್ನುವುದು ಈ ವರ್ಗಿಕರಣಕ್ಕೆ ಬರುತ್ತದೆ.

ಇಷ್ಟಲ್ಲದೆ ಪೆಟ್ರೋಲ್ ಹಾಕಿಸಿಕೊಳ್ಳಲು ಕಾರ್ಡ್, ತರಕಾರಿ ಕೊಳ್ಳಲು ಸಾಲದ ಕಾರ್ಡಗಳನ್ನು (ಕ್ರೆಡಿಟ್ ಕಾರ್ಡ್) ತನ್ನ ಗ್ರಾಹಕರಿಗೆ ಕೊಡಲು ಬ್ಯಾಂಕುಗಳ ನಡುವೆ ಪೈಪೋಟಿಯೇ ಇದೆ. ಹಣವನ್ನು ಗಳಿಸುವ ಮೊದಲೇ ಪಡೆದು ಉಪಯೋಗಿಸುವ ಮಾರುಕಟ್ಟೆ ಸೃಷ್ಟಿಸಿ, ಸಾಲವನ್ನು ಇನ್ನಷ್ಟು ಆಕರ್ಷಕವನ್ನಾಗಿ ಮಾಡಿ ‘ಡೆಟ್ ಇಸ್ ನ್ಯೂ ಮನಿ’ ಎನ್ನುವ ಮಟ್ಟಕ್ಕೆ ತಂದಿದ್ದೇವೆ. ಕ್ರಿ.ಪೂ 3,500 ಇಸವಿಯಲ್ಲಿ ಹಣವೇ ಇರಲಿಲ್ಲ! ಡೆಟ್ ಅರ್ಥಾತ್ ಸಾಲವೇ ಹಣ, ಸಾಲವೇ ವಿನಿಮಯ ಮಾಧ್ಯಮವಾಗಿತ್ತು! ಇಷ್ಟೂ ವರ್ಷ ನಾಗರಿಕತೆಯ ಮತ್ತು ಅಭಿವೃದ್ಧಿಯ ಹೆಸರಲ್ಲಿ ಸುತ್ತಿದಷ್ಟೇ ಲಾಭ ಮತ್ತೆ ‘ಬ್ಯಾಕ್ ಟು ಸ್ಕ್ವೇರ್ ಒನ್’ ಎನ್ನುವಂತೆ ಮರಳಿ ಡೆಟ್ ಇಸ್ ದಿ ಮನಿ ಎನ್ನುವ ಹಂತಕ್ಕೆ ಬಂದಿದ್ದೇವೆ. ನಿಜವಾಗಿ ವಿಶ್ಲೇಶಿಸಿ ನೋಡಿದರೆ ಹಣ, ಸಾಲವನ್ನು, ಬಡ್ಡಿಯನ್ನು ಅಳೆಯುವ ಮತ್ತು ನಿಖರವಾಗಿ ಲೆಕ್ಕ ಇಡುವ ಮಾಪಕವೇ ಹೊರತು ಇನ್ನೇನೂ ಅಲ್ಲ. ಸಾಲ ಅಂದಿಗೂ , ಇಂದಿಗೂ ಎಂದೆಂದಿಗೂ ನಿಜವಾದ ಹಣ.

ಕೊನೆಮಾತು: ನಾವು ಯಾವುದೇ ವಿಷಯದಲ್ಲಿ ಇದನ್ನ ಕೊನೆ ಎಂದು ಗೆರೆ ಹಾಕಿದರೆ ಅದು ನಮ್ಮ ಅರಿವಿನ ಕೊನೆ ಅಲ್ಲವೇ ? ಗೆರೆಯ ನಂತರ ಬೇರೇನೋ ಇರಬೇಕಲ್ಲವೇ ? ಇಡೆಡ್ ಇರುತ್ತದೆ ಅಲ್ಲವೇ ? ಹಾಗಾದರೆ ಕೊನೆ ಎನ್ನುವ ಪದಕ್ಕೆ ಅರ್ಥವುಂಟೆ ? ಹಾಗೆಯೇ ಇಲ್ಲಿ ಕೂಡ ಹಣ ಎನ್ನುವುದು ಸಂಪನ್ಮೂಲವನ್ನ ಅಳೆಯಲು ಇರುವ ಒಂದು ಸಾಧನ , ಹೀಗಾಗಿ ಹಣಕ್ಕೆ ಮೌಲ್ಯವಿಲ್ಲ. ಸಾಲವೇ ಹಣ , ಪರಸ್ಪರ ಕೂಡುಕೊಳ್ಳುವಿಕೆಯೇ ಹಣ . ಈ ನಿಜ ಅರ್ಥವಾಗುವವರೆಗೆ ಹಣವೇ ಸಾರ್ವಭೌಮ. 


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


    Stay up to date on all the latest ಅಂಕಣಗಳು news
    Poll
    N R narayana Murty

    ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


    Result
    ಸರಿ
    ತಪ್ಪು

    Comments

    Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

    The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

    flipboard facebook twitter whatsapp