
ಆರ್ಥಿಕ ಹಿಂಜರಿತ (ಸಾಂಕೇತಿಕ ಚಿತ್ರ)
ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅದರಲ್ಲೂ ವಿತ್ತ ಜಗತ್ತು ಕ್ಷಣದಿಂದ ಕ್ಷಣಕ್ಕೆ ಊಹಿಸಲೂ ಅಸಾಧ್ಯವಾದ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. 2023 ರಲ್ಲಿ ನಮ್ಮ ವಿತ್ತ ಜಗತ್ತಿಗೆ ಬೇಕಾದ ಕಾಯಕಲ್ಪವಾಗುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರ ನಿರಾಶಾದಾಯಕವಾಗಿದೆ. ಜಾಗತಿಕ ವಿತ್ತ ಜಗತ್ತು, ಕಣ್ಣಿಗೆ ಪಟ್ಟಿ ಕಟ್ಟಿ 5-6 ಬಾರಿ ಜೋರಾಗಿ ತಿರುಗಿಸಿ ಬಿಟ್ಟ ಮನುಷ್ಯನಂತೆ ವರ್ತಿಸುತ್ತಿದೆ.
ಎತ್ತ ಸಾಗಬೇಕು ಎನ್ನುವ ನಿಖರತೆಯ ಕೊರತೆ ಇಂದು ಬಹಳ ಹೆಚ್ಚಾಗಿದೆ. ರಿಸೆಶನ್ ಅಥವಾ ಅಥವಾ ಆರ್ಥಿಕ ಹಿಂಜರಿತ ಎನ್ನುವುದು ಶುರುವಾಗಿದೆ. ಅದು ಜಾಗತಿಕ ಮಟ್ಟದಲ್ಲಿ ತನ್ನ ಹಿಡಿತವನ್ನ ಬಿಗಿಗೊಳಿಸಲಿದೆ. ಇಂದು ಅಮೇರಿಕಾ ಮತ್ತು ಚೀನಾದಲ್ಲಿ ಆದದ್ದು ಕ್ಷಣ ಮಾತ್ರದಲ್ಲಿ ಜಗತ್ತಿಗೂ ತಲುಪುತ್ತದೆ. ಆ ಮಟ್ಟಿನ ಅವಲಂಬನೆ ಇಂದು ಸೃಷ್ಟಿಯಾಗಿದೆ.
ಎಲ್ಲಕ್ಕೂ ಪ್ರಥಮವಾಗಿ ಈ ರಿಸೆಶನ್ ಅಥವಾ ಆರ್ಥಿಕ ಹಿಂಜರಿತ ಏಕೆ ಉಂಟಾಗುತ್ತದೆ ಎನ್ನುವುದನ್ನ ತಿಳಿದುಕೊಳ್ಳೋಣ:
ಗಮನಿಸಿ ಆರ್ಥಿಕ ಹಿಂಜರಿತ ಉಂಟಾಗಲು ಪ್ರಮುಖ ಕಾರಣ...
1. ಸಪ್ಲೈ ಚೈನ್ ನಲ್ಲಿ ಕುಸಿತ ಉಂಟಾಗುವುದು
2. ಜಾಗತಿಕ ಮಟ್ಟದ ಯುದ್ಧ
3. ಹಣದುಬ್ಬರ
4. ಜಾಗತಿಕ ರೋಗ-ರುಜಿನಗಳು
2020 ರಿಂದ ನಾವು ಇವೆಲ್ಲವನ್ನೂ ಅನುಭವಿಸುತ್ತಾ ಬಂದಿದ್ದೇವೆ. ಸಪ್ಲೈ ಚೈನ್ ಕುಸಿತಕ್ಕೆ ನಾವು ಸಾಕ್ಷಿಯಾಗಿದ್ದೇವೆ, ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ಧ ಇನ್ನೂ ನಿಂತಿಲ್ಲ, ಇದರ ಕಾರಣ ಆದ ಬೆಲೆ ಹೆಚ್ಚಳ ಎಲ್ಲರನ್ನೂ ತಟ್ಟಿದೆ, ಪಾಂಡೆಮಿಕ್ ಕಾರಣ ಅಮೇರಿಕಾ ಮತ್ತಿತರ ದೇಶಗಳು ಹೊಸದಾಗಿ ಸೃಷ್ಟಿಸಿದ 13 ಟ್ರಿಲಿಯನ್ ಅಮೆರಿಕನ್ ಡಾಲರ್ ಸಾಲ ಜಗತ್ತಿನಾದ್ಯಂತ ಹಣದುಬ್ಬರದ ಏರಿಕೆಗೆ ಕಾರಣವಾಗಿದೆ. ಇವತ್ತಿನ ವಿತ್ತ ಜಗತ್ತು ರಿಸೆಶನ್ ಕಡೆಗೆ ಸಾಗಲು ಅತಿ ದೊಡ್ಡ ಪ್ರಮುಖ ಕಾರಣ ಹಣದುಬ್ಬರ ಎನ್ನುವುದು ಇಂದಿಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇನ್ನು 4 ನೇ ಕಾರಣವಾದ ರೋಗರುಜಿನಗಳು ಇನ್ನೂ ಮುಗಿದಿಲ್ಲ .
ಇದನ್ನೂ ಓದಿ: ಜಾಗತಿಕ ವಿತ್ತ ಜಗತ್ತಿಗೆ ಟಾನಿಕ್ ಬೇಕಿದೆ; ಚೀನಾ ಅಖಾಡಕ್ಕಿಳಿಯಲಿದೆಯೇ?
ಈ ಲೇಖನ ಬರೆಯುವ ವೇಳೆಯಲ್ಲಿ ಚೀನಾ ತನ್ನ ಜೀರೋ ಕೋವಿಡ್ ಪಾಲಿಸಿಯ ಅಡಿಯಲ್ಲಿ ಕೋಟ್ಯಂತರ ಜನರನ್ನ ಲಾಕ್ ಡೌನ್ ನಲ್ಲಿರಿಸಿದೆ. ಚೀನಾದಲ್ಲಿ ಕೋವಿಡ್ ಸೋಂಕು ಮತ್ತೆ ಏರುಗತಿಯಲ್ಲಿದೆ. ಚೀನಾದ ನಡೆ ನಿಗೂಢವಾಗಿದೆ. ಈ ಕಾರಣಗಳಿಂದ ಜನರಲ್ಲಿ ಭಯ ಆವರಿಸಿದೆ. ಖರ್ಚು ಮಾಡುವ ಮುನ್ನ ಯೋಚಿಸಲು ಶುರು ಮಾಡಿದ್ದಾರೆ, ಸರಕಾರಗಳು ಕೂಡ ತಮ್ಮ ಸ್ಪೆನ್ಡಿಂಗ್ ಕಡಿತಗೊಳಿಸುತ್ತವೆ. ಒಂದು ದೇಶ ಆರ್ಥಿಕ ಹಿಂಜರಿತ ಕಾಣಲು ಇನ್ನು ಹಲವು ಕಾರಣಗಳು ದೇಣಿಗೆ ನೀಡುತ್ತವೆ. ಜಾಗತಿಕ ವಿತ್ತ ಜಗತ್ತು ಹಿಂಜರಿಕೆಯ ಹಂತಕ್ಕೆ ಸಾಗಲು ಇಂದಿನ ದಿನದಲ್ಲಿ ಹಲವು ಕಾರಣಗಳಿವೆ, ಅವುಗಳಲ್ಲಿ ಮುಖ್ಯವಾದವುಗಳನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
- ಬಲಿಷ್ಠ ಅಮೆರಿಕನ್ ಡಾಲರ್: ಅಮೆರಿಕಾದ ಡಾಲರ್ 2 ದಶಕದಲ್ಲಿ ಕಾಣದ ಮಟ್ಟಿಗೆ ಬಲಿಷ್ಠವಾಗಿದೆ. ನೀವು ಗಮನಿಸಿ ನೋಡಿ ಅಮೇರಿಕಾ ದೇಶ ಆರ್ಥಿಕವಾಗಿ ಹಿಂಜರಿತ ಅನುಭವಿಸುತ್ತಿದೆ. ಡಾಲರ್ ಜಾಗತಿಕವಾಗಿ ಮೌಲ್ಯ ಕಳೆದುಕೊಳ್ಳಬೇಕು, ಆದರೆ ಅದಾಗುತ್ತಿಲ್ಲ, ಅದಕ್ಕೆ ವಿರುದ್ಧವಾಗಿ ಡಾಲರ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣ ಅಮೇರಿಕಾ ತನ್ನ ಫೆಡರಲ್ ಬಡ್ಡಿ ದರವನ್ನ ಒಂದೇ ಸಮನೆ ಹೆಚ್ಚಿಸುತ್ತಿರುವುದು. ಹೆಚ್ಚು ಹಣ ಸೃಷ್ಟಿಸಿದರ ಫಲವಾಗಿ ಹಣದುಬ್ಬರ ನಿಯಂತ್ರಣಕ್ಕೆ ಬಾರದ ಮಟ್ಟಿಗೆ ಏರಿಕೆ ಕಂಡಿತು. ಹಣದುಬ್ಬರವನ್ನ ನಿಯಂತ್ರಣಕ್ಕೆ ತರಲು ಅಮೇರಿಕಾ ತನ್ನ ಬಡ್ಡಿ ದರವನ್ನ ಹೆಚ್ಚಿಸಲು ಶುರು ಮಾಡಿತು. ರಷ್ಯಾ ಮತ್ತು ಉಕ್ರೈನ್ ನಡುವಿನ ತಿಕ್ಕಾಟ ಜಾಗತಿಕ ಮಟ್ಟದಲ್ಲಿ ಅಸ್ಥಿರತೆಯನ್ನ ಹೆಚ್ಚು ಮಾಡಿದೆ. ಇಂತಹ ಸಂದರ್ಭದಲ್ಲಿ ಹೂಡಿಕೆದಾರನಿಗೆ ಎರಡು ಕಾರಣಗಳು ಡಾಲರ್ ಹಿಂದೆ ಓಡಲು ಪ್ರೇರಣೆ ನೀಡಿವೆ, ಒಂದು ಹೆಚ್ಚಿದ ಬಡ್ಡಿದರ, ಎರಡು ಸೇಫ್ಟಿ. ಈ ಕಾರಣದಿಂದ ಮತ್ತು ಬೇರೆ ದೇಶಗಳು ಕೂಡ ತಮ್ಮ ಟ್ರೇಡ್ ಬ್ಯಾಲೆನ್ಸ್ ಉಳಿಸಿಕೊಳ್ಳುವ ಸಲುವಾಗಿ ಡಾಲರ್ಗೆ ತಕ್ಕಂತೆ ತಮ್ಮ ಹಣವನ್ನ ಹೊಂದಿಸಿಕೊಳ್ಳುವ ಕಾರ್ಯ ಮಾಡಿವೆ. ನೈಜವಾಗಿ ಕಾಣದ ಈ ಏರಿಕೆ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. 1 ಪ್ರತಿಶತ ಡಾಲರ್ ಮೌಲ್ಯ ಏರಿಕೆ 0.5 ಪ್ರತಿಶತ ಒಟ್ಟಾರೆ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ. ನೆನಪಿರಲಿ ಇವೆಲ್ಲಾ ಚೈನ್ ಲಿಂಕ್ಗಳು, ಒಂದು ಕುಸಿಯಲು ಶುರುವಾದರೆ, ಕುಸಿತದ ಪೆರೇಡ್ ಶುರುವಾಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಬಲಿಷ್ಠ ಡಾಲರ್ ಅಮೆರಿಕಕ್ಕೆ ಒಳಿತು, ಸದ್ಯದ ಮಟ್ಟದಲ್ಲಿ ಅದು ತಿರುಗುಬಾಣವಾಗಿದೆ. ಹೀಗಾಗಿ ಅಮೇರಿಕಾ ತನ್ನ ಭಾರಕ್ಕೆ ತಾನೇ ಕುಸಿದಿದೆ. ಅದು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಮುನ್ನುಡಿ ಬರೆದಿದೆ.
- ಕಾರ್ಪೊರೇಟ್ ಸಂಸ್ಥೆಗಳು ಚಿಪ್ಪಿನೊಳಗೆ ಹೋಗುತ್ತಿವೆ: ಯಾವುದೇ ವಾಣಿಜ್ಯ ಸಂಸ್ಥೆ ಸ್ಥಿರವಾಗಿ ನಿಲ್ಲಬೇಕಾದರೆ ಅದು ಲಾಭ ಮಾಡಲೇಬೇಕು. ಆರ್ಥಿಕ ಹಿಂಜರಿತದ ಸುಳಿವು ಸಿಕ್ಕ ಕೂಡಲೇ ಸಂಸ್ಥೆಗಳು ತಮ್ಮ ಖರ್ಚನ್ನ ಕಡಿಮೆ ಮಾಡಿಕೊಳ್ಳಲು ಶುರು ಮಾಡುತ್ತವೆ. ಎಲ್ಲಕ್ಕೂ ಮೊದಲು ಅವು ಹೊಸ ನೇಮಕಾತಿಗೆ ಕಡಿವಾಣ ಹಾಕುತ್ತವೆ. ಇದು ಮೊದಲ ಸುಳಿವು, ನಂತರದ್ದು ಇನ್ನೂ ದೊಡ್ಡದು, ತಮ್ಮ ವಾರ್ಷಿಕ ಉತ್ಪಾದನೆಯಲ್ಲಿ ಕಡಿತಗೊಳಿಸುವ ಹೇಳಿಕೆಯನ್ನ ನೀಡುತ್ತವೆ, ನಂತರದ್ದು ಕೆಲಸ ಕಡಿತ ಎನ್ನುವ ಕೂಗು. ಜಾಗತಿಕ ಮಟ್ಟದ ಸಂಸ್ಥೆಗಳು ತನ್ನ ಕೆಲಸಗಾರರನ್ನ ವಜಾ ಮಾಡುತ್ತಿರುವುದು ತಿಳಿದೆ ಇದೆ. ಇದು ಇನ್ನಷ್ಟು ಕಾವು ಪಡೆದುಕೊಳ್ಳಲಿದೆ. ಜಗತ್ತಿನ ಎಲ್ಲಾ ದೇಶದಲ್ಲೂ ಇರುವ ಫೆಡೆಕ್ಸ್ ಎನ್ನುವ ಸಂಸ್ಥೆ ವಾರ್ಷಿಕವಾಗಿ ಗಳಿಕೆಯಲ್ಲಿ 40 ಪ್ರತಿಶತ ಕಡಿಮೆಯಾಗಲಿದೆ ಎನ್ನುವ ಹೇಳಿಕೆಯನ್ನ ನೀಡಿದೆ. ಹೊಸ ಕೆಲಸದ ಸೃಷ್ಟಿ ಇರಲಿ, ಇರುವ ಕೆಲಸಗಳು ಹೋಗುತ್ತವೆ. ಸಹಜವಾಗೇ ಜನರ ಬಳಿ ಖರ್ಚು ಮಾಡಲು ಹಣವಿರುವುದಿಲ್ಲ, ಹೀಗಾಗಿ ಡಿಮ್ಯಾಂಡ್ ಕುಸಿತವಾಗುತ್ತದೆ. ಮಾರುಕಟ್ಟೆ ಕೊಳ್ಳುವರಿಲ್ಲದೆ ಭಣಗುಡಲು ಶುರುವಾಗುತ್ತದೆ. ಮತ್ತದೇ ಚೈನ್ ಲಿಂಕ್ ಇಲ್ಲೂ ಕೆಲಸ ಮಾಡುತ್ತದೆ. ಹೊಸ ಕುಸಿತಕ್ಕೆ ಕಾರಣವಾಗುತ್ತದೆ.
- ನಿಲ್ಲದ ರಷ್ಯಾ-ಉಕ್ರೈನ್ ಯುದ್ಧ: ಗಮನಿಸಿ, ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ಧ ಜಾಗತಿಕ ಅಸ್ಥಿರತೆಯನ್ನ ಸೃಷ್ಟಿ ಮಾಡಿದೆ. ಯಾವಾಗ ಮಾರುಕಟ್ಟೆಯಲ್ಲಿ ಸ್ಥಿರತೆ ಇರುವುದಿಲ್ಲ ಆಗ ಸಾಮಾನ್ಯ ಮನುಷ್ಯ ತನ್ನ ಎಂದಿನ ಜೀವನಶೈಲಿಯನ್ನ ಬದಲಾಯಿಸಿಕೊಂಡು ಬಿಡುತ್ತಾನೆ. ಹೀಗಾಗಿ ಎಲ್ಲವೂ ಹಾಗೆ ಇದ್ದರೂ ಕುಸಿತವಾಗುತ್ತದೆ. ಆದರೆ ಈ ಯುದ್ಧ ಜಾಗತಿಕ ಕಚ್ಚಾತೈಲ ಬೆಲೆ ಏರಿಕೆಗೆ ನೀಡಿರುವ ದೇಣಿಗೆಯನ್ನ ಮರೆಯುವಂತಿಲ್ಲ, ಅಸ್ಥಿರತೆ ಜೊತೆ ಜೊತೆಯಲ್ಲಿ ತೈಲ ಬೆಲೆಯೇರಿಕೆ ಜಾಗತಿಕ ಹಣದುಬ್ಬರಕ್ಕೂ ಕಾರಣವಾಗಿದೆ. ಇವತ್ತು ಕೊರೋನ ನಂತರ ಜಗತ್ತನ್ನ ಅತೀವವಾಗಿ ಕಾಡುತ್ತಿರುವ ಇನ್ನೊಂದು ವೈರಸ್ ಇದ್ದರೆ ಅದು ಹಣದುಬ್ಬರ ಎಂದು ನಿಸ್ಸಂಶವಾಗಿ ಹೇಳಬಹುದು.
- ಚೀನಾದ ಜೀರೋ ಕೋವಿಡ್ ಪಾಲಿಸಿ: ಚೀನಾ ದೇಶದ ದೀರ್ಘಾವಧಿ ಪ್ಲಾನ್ ಏನಿದೆ? ಎನ್ನುವುದು ತಿಳಿಯದಾಗಿದೆ. ತನ್ನ ದೇಶವನ್ನ ಇನ್ನಿಲ್ಲದ ಆರ್ಥಿಕ ಕುಸಿತಕ್ಕೆ ಅದೇ ತಳ್ಳಿಕೊಳ್ಳುತ್ತಿದೆ. ತನ್ನ ದೇಶದ ಅಭಿವೃದ್ಧಿ ಕುಸಿತ ಅದೇ ಏಕೆ ಮಾಡಿಕೊಳ್ಳುತ್ತಿರಬಹುದು? ಎನ್ನುವುದು ಮಾತ್ರ ತಿಳಿಯದ ವಿಷಯ. ಚೀನಾದ ನಡೆಗಳು ಎಂದಿಗೂ ನಿಗೂಢ. ಆದರೆ ನೆನಪಿರಲಿ ಚೀನಾ ಇಂದಿಗೂ ಜಗತ್ತಿನ ಕಾರ್ಖಾನೆ. ಅವರು ಜೀರೋ ಕೋವಿಡ್ ಪಾಲಿಸಿ ಅಡಿಯಲ್ಲಿ ತನ್ನ ಜನರನ್ನ ಮತ್ತೆ ಲಾಕ್ ಡೌನ್ ನಲ್ಲಿಡುತ್ತಿದೆ. ಉತ್ಪಾದನೆಯಲ್ಲಿ ಕುಸಿತವಾದರೆ ಅದು ಹೊಸ ಸಮಸ್ಯೆಯನ್ನ ಸೃಷ್ಟಿಸುತ್ತದೆ. ಕೆಲವೊಂದು ಪದಾರ್ಥಗಳ ಅಭಾವ ಬೇಡಿಕೆಯನ್ನ ಹೆಚ್ಚಿಸುತ್ತವೆ, ಅದು ಇನ್ನೊಂದು ಸುತ್ತು ಬೆಲೆಯೇರಿಕೆಗೆ ಕಾರಣವಾಗುತ್ತದೆ. ನೆನಪಿರಲಿ ಮತ್ತೆ ಪುನರುಚ್ಛರಿಸುತ್ತೇನೆ, ಇವೆಲ್ಲವೂ ಒಂದಕ್ಕೊಂದು ನೇರವಾಗಿ ಬೆಸೆದು ಕೊಂಡಿವೆ. ಒಂದು ಕೊಂಡಿ ಕಳಚಿಕೊಂಡರೆ ಅಥವಾ ಅದರಲ್ಲಿ ವ್ಯತ್ಯಾಸವಾದರೆ ಅದು ಪೂರ್ಣ ವ್ಯವಸ್ಥೆಯ ಕುಸಿತಕ್ಕೆ ದಾರಿಯಾಗುತ್ತದೆ.
- ಜಗತ್ತಿನಾದ್ಯಂತ ಷೇರು ಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಕ್ಕಿವೆ/ಸಿಗಲಿವೆ: ಷೇರುಮಾರುಕಟ್ಟೆ ಕುಸಿತಕ್ಕೆ ಕಾರಣ ಹುಡುಕುತ್ತಿರುತ್ತದೆ. ಕಾರಣ ಸಿಕ್ಕರೆ ಕೇಳುವುದಿನ್ನೇನು? ಮೇಲಿನ ಎಲ್ಲಾ ಕಾರಣಗಳು ಷೇರು ಮಾರುಕಟ್ಟೆಯಲ್ಲಿ ಸದಾ ಅಸ್ತಿತ್ವದಲ್ಲಿರುವ ತಲ್ಲಣಗಳಿಗೆ ಇನ್ನಷ್ಟು ಬೆಂಬಲ ನೀಡಿವೆ. ಅಮೆರಿಕಾದಲ್ಲಿನ ಮಾರುಕಟ್ಟೆ 2008 ರ ಮಹಾಕುಸಿತದ ಮಟ್ಟಕ್ಕೆ ಇಳಿದಿವೆ. ಗಮನಿಸಿ ಯಾವಾಗ ಬಡ್ಡಿ ದರಗಳು ಏರುಗತಿಯನ್ನ ಕಾಣುತ್ತವೆ, ಆಗೆಲ್ಲಾ ಷೇರು ಮಾರುಕಟ್ಟೆ ಕುಸಿತ ಕಾಣುವುದು ಸಹಜ. ಅಮೇರಿಕಾದಲ್ಲಿ ಒಂದೇ ಸಮನೆ ಏರುತ್ತಿರುವ ಬಡ್ಡಿ ದರ ಕೇವಲ ಅಮೆರಿಕಾದ ಆರ್ಥಿಕತೆ ಮಾತ್ರವಲ್ಲ ಜಾಗತಿಕ ಆರ್ಥಿಕತೆ ಕುಸಿತಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಕವಲು ದಾರಿಯಲ್ಲಿ ಚೀನಾದ ಸಾಫ್ಟ್ ಟಾರ್ಗೆಟ್ ಮಲೇಶಿಯಾ!
ಕೊನೆಮಾತು: ಜಾಗತಿಕ ಆರ್ಥಿಕತೆ ಹಿಂಜರಿತಕ್ಕೆ ಸಿಕ್ಕಿದೆ, ಇದು ಪೂರ್ಣಪ್ರಮಾಣವಾಗಿ ಸದ್ಯದ ಮಟ್ಟಿಗೆ ಗೋಚರವಾಗುತ್ತಿಲ್ಲ, ಆದರೆ ಇದು 2023 ರ ಏಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ಎಲ್ಲರಿಗೂ ತಿಳಿಯುವ ಮಟ್ಟಕ್ಕೆ ಅಫಿಷಿಯಲ್ ಆಗಿ ಜಾಗತಿಕ ಹಿನ್ನಡೆತ ಎನ್ನುವುದನ್ನ ಹೇಳಲಾಗುತ್ತದೆ. ಜಾಗತಿಕ ಆರ್ಥಿಕ ಹಿನ್ನೆಡೆಯಾಗುವುದು ತಪ್ಪಿಸಲಾಗುವುದಿಲ್ಲ, ಆದರೆ ನಾವು ಈ ರೀತಿಯ ಮತ್ತೊಂದು ಗ್ಲೋಬಲ್ ರಿಸೆಶನ್ಗೆ ತುತ್ತಾಗಿದ್ದೇವೆ ಎಂದು ಒಪ್ಪಿಕೊಂಡು ಅದನ್ನ ಯಾವತ್ತು ಘೋಷಿಸುತ್ತಾರೆ ಎನ್ನುವುದು ಮಾತ್ರ ನಿಖರವಾಗ ಬೇಕಿದೆ. ನಾವು ಮಾಡುತ್ತಿರುವ ವ್ಯಾಪಾರ, ವಹಿವಾಟು, ಬದುಕುವ ರೀತಿನೀತಿಗಳು ಎಲ್ಲವೂ ಮತ್ತೊಂದು ದೊಡ್ಡ ಬದಲಾವಣೆಗೆ ಸಜ್ಜಾಗುತ್ತಿವೆ. ಕೋವಿಡ್ ಪಾಂಡಮಿಕ್ ಗಿಂತ ಹಿಂದಿನ ಬದುಕು ಎಂದಿಗೂ ಮರಳಿ ಬರುವುದಿಲ್ಲ. ಬದಲಾವಣೆಗೆ ಸಜ್ಜಾಗುವುದು ಮತ್ತು ಆದಷ್ಟು ಬೇಗ ಅದಕ್ಕೆ ಒಗ್ಗಿಕೊಳ್ಳುವುದು ಮಾತ್ರ ನಮ್ಮ ಕೈಲಿದೆ. ಉಳಿದದ್ದು ಕಾರ್ಯರೂಪಕ್ಕೆ ಬರುವ ಸಮಯವನ್ನ ಮತ್ತು ಈ ಮಧ್ಯೆ ಆಗುವ ಬದಲಾವಣೆಯನ್ನ ಗಮನಿಸುವುದು ಕೂಡ ಮಾಡುತ್ತಿರಬೇಕು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com