ಹೊಸ ವರ್ಷಕ್ಕೆ ಬೇಕಿದೆ ಸಪ್ತ ವಿತ್ತೀಯ ಸಂಕಲ್ಪಗಳು! (ಹಣಕ್ಲಾಸು)

ಹಣಕ್ಲಾಸು-341ರಂಗಸ್ವಾಮಿ ಮೂನಕನಹಳ್ಳಿ
ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ
ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ

ಇನ್ನೊಂದು ಹೊಸ ವರ್ಷಕ್ಕೆ ನಾವೆಲ್ಲಾ ಕಾಲಿಟ್ಟದ್ದೇವೆ,  ಕಳೆದ ವರ್ಷದಲ್ಲಿ ಆಂದುಕೊಂಡು ಮಾಡಲಾಗದ ಉಳಿತಾಯ, ಹೂಡಿಕೆಯಿಂದ ಪಾಠ ಕಲಿತು ಈ ವರ್ಷ ಹಾಗೆ ಆಗಬಾರದು ಎನ್ನುವ ಒಂದು ವರ್ಗದ ಜನರಿದ್ದೇವೆ, ಕೆಟ್ಟ ಹೂಡಿಕೆಗಳಲ್ಲಿ ಹಣ ತೊಡಗಿಸಿ ಕೈ ಸುಟ್ಟುಕೊಂಡು 'ಹೂಡಿಕೆಯ ಸಹವಾಸ ' ಬೇಡ ಎನ್ನುವ ನಿರ್ಧಾರಕ್ಕೆ ಬಂದವರ ಇನ್ನೊಂದು ವರ್ಗವಿದೆ. ತಿಂಗಳ ಸಂಬಳ ಎನ್ನುವುದು ಒಂದೆರೆಡು ದಿನದ ಸಂಗಾತಿ, ಅದು ಬಂದದ್ದು ಗೊತ್ತಾಗುವುದಕ್ಕೆ ಮುಂಚೆ ಕಂತು, ಖರ್ಚು ಎಂದು ಅದ್ಯಾವಾಗ ಹೊರಟು ಹೋಗಿರುತ್ತದೆ ಗೊತ್ತೇ ಆಗುವುದಿಲ್ಲ ಇದರ ಮಧ್ಯೆ ಎಲ್ಲಿಯ ಉಳಿಕೆ? ಎಲ್ಲಿಯ ಹೂಡಿಕೆ? ಎನ್ನುವ ಇನ್ನೊಂದು ದೊಡ್ಡ ವರ್ಗವಿದೆ. ಎಲ್ಲಾ ಸಾಧ್ಯ ಹೂಡಿಕೆಗಳನ್ನ ಮಾಡಿ, ಹೊಸತೇನಿದೆ ಎನ್ನುವ ಮಂದಿಗೂ ನಮ್ಮ ದೇಶದಲ್ಲಿ ಕಡಿಮೆಯಿಲ್ಲ. ಒಂದು ಭಾರತದಲ್ಲಿ ಹತ್ತು ವಿವಿಧ ಭಾರತವಿದೆ ಎನ್ನುವ ಮಾತುಗಳನ್ನ ಸುಮ್ಮನೆ ಹೇಳಿರಲಾರರು ಅಲ್ಲವೇ? ಇರಲಿ

ಹೊಸ ವರ್ಷಕ್ಕೆ ಹೊಸ ಸಂಕಲ್ಪಗಳು ಬಹುತೇಕರು ಮಾಡುವುದು ಗ್ಯಾರಂಟಿ. ಸಂಕಲ್ಪ ಅಂದ ಮಾತ್ರಕ್ಕೆ ಅದು ಯಾವಾಗಲೂ ಹಣಕಾಸಿಗೆ ಸಂಬಂಧ ಪಟ್ಟಿರಬೇಕು ಎಂದೇನಿಲ್ಲ , ಆದರೆ ಬದುಕಿಗೆ ವಿತ್ತೀಯ ಶಿಸ್ತು ಬಹಳ ಮುಖ್ಯ. ಒಂದು ರೂಪಾಯಿ ಉಳಿಸಿದರೆ ಅದು ಎರಡು ರೂಪಾಯಿ ಗಳಿಸಿದ್ದಕ್ಕೆ ಸಮ ಎನ್ನುವ ಬಹಳ ಹಳೆಯ ಮಾತೊಂದಿದೆ, ಇಂದಿನ ಕಾಲಘಟ್ಟದಲ್ಲಿ ಅದು ಕೂಡ ಬದಲಾಗಿ ಹೋಗಿದೆ. ಒಂದು ರೂಪಾಯಿ ಉಳಿಸಿದರೆ ಅದು ಹತ್ತು ರೂಪಾಯಿ ಗಳಿಸಿದಕ್ಕೆ ಸಮ ಎನ್ನುವುದು ಇಂದಿನ ಮಟ್ಟಿಗೆ ಸರಿಯಾಗುತ್ತದೆ. ಹಣ ಉಳಿಸುವುದು ಸುಲಭದ ಮಾತಲ್ಲ, ಉಳಿಸಿದ ಹಣವನ್ನ ಸರಿಯಾದ ಕಡೆಯಲ್ಲಿ ಹೂಡಿಕೆ ಮಾಡುವುದು ಇನ್ನೂ ದೊಡ್ಡ ಕಷ್ಟ. ಹೀಗಾಗಿ ಬದುಕಿಗೆ ನ್ಯಾಯಯುತ ಗಳಿಕೆ, ಉಳಿಕೆ ಮತ್ತು ಹೂಡಿಕೆ ಬಹಳ ಮುಖ್ಯ. ಇವೆಲ್ಲಕ್ಕಿಂತ ಇನ್ನೊಂದಷ್ಟು ಅಂಶಗಳು ಕೂಡ ಬಹಳ ಮುಖ್ಯವಾಗಿವೆ, ಅವೇನು ಎನ್ನುವುದನ್ನ ತಿಳಿದು ಕೊಳ್ಳುವ ಪ್ರಯತ್ನ ಮಾಡೋಣ. ಹೊಸ ವರ್ಷದಲ್ಲಿ ಇವುಗಳನ್ನ ಪಾಲಿಸುವುದು ಅಭ್ಯಾಸ ಮಾಡಿಕೊಂಡರೆ ಅದು ಕೆಡುಕನ್ನ ತಪ್ಪಿಸುತ್ತದೆ, ನಷ್ಟದಿಂದ ಲಾಭದ ಕಡೆಗೆ ಹೊರಳುವಂತೆ ಮಾಡುತ್ತದೆ.

  1. ಖರ್ಚಿನ ಮೇಲಿರಲಿ ನಿಗಾ: ಬಹಳಷ್ಟು ಜನ ಹೇಳುವುದು ' ದುಡಿದ ಹಣ ಎಲ್ಲೋಯ್ತು ಅಂತಲೇ ಗೊತ್ತಾಗುವುದಿಲ್ಲ ' ಎನ್ನುವುದು. ಇದರರ್ಥ ಬಹಳ ಸರಳ , ನಿಮ್ಮ ಖರ್ಚಿನ ಬಗ್ಗೆ ನಿಮಗೆ ನಿಖರವಾದ ಅರಿವಿಲ್ಲ ಎನ್ನುವುದು. ಇದಕ್ಕೊಂದು ಸರಳ ಮದ್ದಿದೆ. ಆದಾಯವೆಷ್ಟು ಎನ್ನುವುದನ್ನ ಒಂದೆಡೆ ಬರೆದುಕೊಳ್ಳುವುದು , ಅದರ ಮುಂದೆ ತಿಂಗಳ ಖರ್ಚೆಷ್ಟು ಎನ್ನುವುದನ್ನ ಕೂಡ ಬರೆದುಕೊಳ್ಳುವುದು. ಖರ್ಚಿನಲ್ಲಿ ಕೂಡ ಎರಡು ವಿಧವಿದೆ , ಒಂದು ಪ್ರತಿ ತಿಂಗಳೂ ಬದಲಾಗದೆ ಇರುವ ಖರ್ಚು ಮತ್ತು ಬದಲಾಗುವ ಖರ್ಚು, ಇದರ ಜೊತೆಗೆ ಕಂಡುಕೇಳರಿಯದ ತಕ್ಷಣ ಉತ್ಪತ್ತಿಯಾಗುವ ಖರ್ಚು. ಹೀಗೆ ನಮಗೆ ಗೊತ್ತಿಲ್ಲದೇ ಬಂದೆರಗುವ ಖರ್ಚಿಗೆ ಎಂದು ಒಂದಷ್ಟು ಹಣವನ್ನ ತೆಗೆದಿರಿಸ ಬೇಕಾಗುತ್ತದೆ. ಹೀಗೆ ಆದಾಯ ಮತ್ತು ವ್ಯಯದ ಒಂದು ಪುಟ್ಟ ಪಟ್ಟಿ ತಯಾರಿಸಿಕೊಳ್ಳಬೇಕು. ಆಗ ಒಂದು ಅಂದಾಜು ಲೆಕ್ಕ ಸಿಗುತ್ತದೆ. ಖರ್ಚು ಕಡಿಮೆ ಮಾಡಲು ಸಾಧ್ಯವಿಲ್ಲದಿದ್ದಾಗ ಆದಾಯವನ್ನ ಹೆಚ್ಚಿಸಿಕೊಳ್ಳುವ ಮಾರ್ಗವನ್ನ ಹುಡ್ಕಿಕೊಳ್ಳಬೇಕು . ಸಾಧ್ಯವಿದ್ದಲ್ಲಿ ಖರ್ಚು ಕೂಡ ಕಡಿಮೆ ಮಾಡಬೇಕು. ಮೊದಲಿಗೆ ತಿಂಗಳಿಗೊಂದು ಆದಾಯ ಮತ್ತು ವ್ಯಯದ ಒಂದು ಪಟ್ಟಿ ತಯಾರು ಮಾಡುವ ಸಂಕಲ್ಪ ಮಾಡಿ.
  2. ವೇತನದ 20/30 ಪ್ರತಿಶತ ತೆಗೆದಿರಿಸಿ: ಗಳಿಸಿದ ವೇತನದಲ್ಲಿ ಖರ್ಚು ಮಾಡಿ ಉಳಿದದ್ದು ಹೊದಿಕೆ ಮಾಡಿದರಾಯ್ತು ಎನ್ನುವ ಲೆಕ್ಕಾಚಾರದಲ್ಲಿ ಕೋಟ್ಯಂತರ ಜನರಿದ್ದಾರೆ. ಆದರೆ ಇದು ತಪ್ಪು. ಗಳಿಕೆಯ 20/30 ಪ್ರತಿಶತ ಹಣವನ್ನ ಮೊದಲಿಗೆ ನನ್ನದಲ್ಲ ಎಂದು ತೆಗೆದಿರಿಸಿ ಉಳಿದ ಹಣವನ್ನ ಖರ್ಚು ಮಾಡಬೇಕು. ಇದು ಸರಿ ವಿಧಾನ. ಆದರೆ ಬಹುತೇಕರಿಗೆ ಬಂದ ಹಣ ಹೇಗೆ ಖಾಲಿ ಆಯ್ತು , ಏತಕ್ಕೆ ಖರ್ಚು ಮಾಡಿದೆವು ಎನ್ನುವ ಲೆಕ್ಕವೇ ತಿಳಿಯುವುದಿಲ್ಲ , ಅಂತಹವರು ಮೊದಲಿಗೆ ಆಯಾ ವ್ಯಯ ಪಟ್ಟಿ ತಯಾರಿಸಿಕೊಳ್ಳಬೇಕು. ನಂತರ ಆದಾಯ ಹೆಚ್ಚಿಸಿಕೊಳ್ಳುವ ಅಥವಾ ಖರ್ಚು ಕಡಿಮೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಬೇಕು. ಒಟ್ಟಿನಲ್ಲಿ ಗಳಿಕೆಯ 20/30 ಪ್ರತಿಶತ ಬದಿಗಿರಿಸಿ ಉಳಿದ್ದದ್ದರಲ್ಲಿ ಬದುಕುವುದು ಕಲಿಯಬೇಕಿದೆ.
  3. ಹೆಚ್ಚಿನ ಬಡ್ಡಿಯ ಆಸೆಗೆ ಮರುಳಾಗಬೇಡಿ: ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿ ಏರುಗತಿಯಲ್ಲಿದೆ , ಆದರೂ ಅದು ನೀಡುವ ರಿಟರ್ನ್ಸ್ ಹಬ್ಬದುಬ್ಬರವನ್ನ ಮೀರಿ ಗಳಿಸುವಂತಿಲ್ಲ. ಹೀಗಾಗಿ ಬಹಳಷ್ಟು ಜನ ಇಂದಿನ ದಿನಗಳಲ್ಲಿ ಕೂಡ ಚೀಟಿ ಹಾಕುವುದು , ಹೆಚ್ಚಿನ ಬಡ್ಡಿ ಆಸೆಗೆ ಕಂಡು ಕೇಳಿರದ ಬ್ಯಾಂಕುಗಳಲ್ಲಿ , ಖಾಸಗಿ ವ್ಯಕ್ತಿಗಳ ಬಳಿ ಹೂಡಿಕೆ ಮಾಡುವುದು ಇಂತಹ ಕೆಳಗಳನ್ನ ಮಾಡುತ್ತಿದ್ದಾರೆ. ಇದು ತಪ್ಪು. ಒಂದೆರೆಡು ಪ್ರತಿಶತ ಕಡಿಮೆಯಾದರೂ ಬ್ಯಾಂಕಿನಲ್ಲಿ ಠೇವಣಿ ಇಡುವುದು ಬಹಳ ಸೇಫ್ , ಅದರಲ್ಲೂ ಹಿರಿಯ ನಾಗರಿಕರು ಇದನ್ನ ಓದುತ್ತಿದ್ದರೆ , ದಯವಿಟ್ಟು ಗಮನಿಸಿ , ನಿಮಗೆ ಸಿಕ್ಕುವ ಗಳಿಕೆ ಕಡಿಮೆಯಾದರೂ ಪರವಾಗಿಲ್ಲ , ಷೇರು ಮಾರುಕಟ್ಟೆ ಅಥವಾ ಇನ್ನಿತರ ಹೆಚ್ಚಿನ ರಿಟರ್ನ್ಸ್ ಆಸೆಗೆ ಬಲಿಯಾಗಬೇಡಿ. ಉಳಿದ ದಿನಗಳನ್ನ ಸಾರ್ಥಕ ಭಾವದಿಂದ ನೆಮ್ಮದಿಯಾಗಿ ಕಳೆಯುವುದಷ್ಟೆ ನಿಮ್ಮ ಗುರಿಯಾಗಿರಬೇಕು. ಉಳಿದವರಿಗೆ ಅಲ್ಪಸ್ವಲ್ಪ ರಿಸ್ಕ್ ತೆಗೆದು ಕೊಳ್ಳುವ ಅವಕಾಶವಿದೆ. ಆದರೆ ಖಾಸಗಿ ವ್ಯಕ್ತಿಗಳ ಬಳಿ , ಅದರಲ್ಲೂ ಮಾರುಕಟ್ಟೆಯಲ್ಲಿ ಲಭ್ಯವಿರುವ ರಿಟರ್ನ್ಸ್ ಗಿಂತ ಬಹಳ ಹೆಚ್ಚು ರಿಟರ್ನ್ಸ್ ನೀಡುವುದಾಗಿ ಯಾರಾದರೂ ಹೇಳಿದರೆ ಆಗ ಅದನ್ನ ಹೆಚ್ಚಿನ ಗಮನವಿಟ್ಟು ಗಮನಿಸಬೇಕಾಗುತ್ತದೆ. ಆತುರದ ನಿರ್ಧಾರಗಳು ಒಳ್ಳೆಯದಲ್ಲ.
  4. ಕ್ರಿಪ್ಟೋ ಹೂಡಿಕೆಯಿಂದ ದೂರವಿರಿ: 70ರ ದಶಕದಲ್ಲಿ ಜಗತ್ತಿನ ಒಂದು ವರ್ಗದ ಜನ ಪಾಪ್ ಸಂಗೀತಕ್ಕೆ ಯಾವ ಮಟ್ಟಿಗೆ ಮರುಳಾಗಿದ್ದರು ಎಂದರೆ ಅದೊಂದು ಸಮೂಹ ಸನ್ನಿ ಎನ್ನುವಂತೆ ಕಾಣುತ್ತಿತ್ತು. ಇಂದಿಗೆ ಆ ದಿನಗಳ ಪಾಪ್ ಕಲ್ಚರ್ ಮೀರಿಸಿ ಕ್ರಿಪ್ಟೋ ಕಲ್ಚರ್ ಅಥವಾ ಕ್ರಿಪ್ಟೋ ಜನರೇಷನ್ ಶುರುವಾಗಿದೆ. ಇದು ಯಾವ ಮಟ್ಟಿಗೆ ಎಂದರೆ ಮೊಬೈಲ್ ಫೋನ್ ನಲ್ಲಿ ಕ್ರಿಪ್ಟೋ ವಾಲೆಟ್ ಇಲ್ಲವೆಂದರೆ ' ಡೂಡ್ ಯು ಆರ್ ಮಿಸ್ಸಿಂಗ್ ದಿ ಟ್ರೆಂಡ್ ' ಎನ್ನುವಂತಾಗಿದೆ. ಒಂದಂಕಿ ಲಾಟರಿಗಿಂತ ಇದು ಭಯಾನಕ. ಇದು ಪೂರ್ಣ ಪ್ರಮಾಣದ ಜೂಜಾಟ. ಕ್ರಿಪ್ಟೋ ದಲ್ಲಿ ಹೂಡಿಕೆ ಮಾಡಿ ಹಣವನ್ನ ದುಪ್ಪಟ್ಟು ಮಾಡಿಕೊಂಡೆವು ಅದು ಕೂಡ ಬಹಳ ಕಡಿಮೆ ಸಮಯದಲ್ಲಿ ಎನ್ನುವ ಮಾತುಗಳಿಗೆ ಮರುಳಾಗಬೇಡಿ. ಗ್ರೇಟ್ , ಗುಡ್ ಫಾರ್ ಯು ಎನ್ನುವ ಸಂಯಮ ನಿಮ್ಮದಾಗಿರಲಿ. ಅಪ್ಪಿತಪ್ಪಿಯೂ ಇಲ್ಲಿ ನಯಾಪೈಸೆ ಹೂಡಿಕೆ ಮಾಡುವುದು ಬೇಡ. ಅಂದಹಾಗೆ ಕ್ರಿಪ್ಟೋ ನಲ್ಲಿ ಹೂಡಿಕೆ ಮಾಡಲು ನೀವೇನು ಕೋಟ್ಯಧಿಪತಿ ಆಗಿರಬೇಕಿಲ್ಲ , ನೂರು ರೂಪಾಯಿ ಕೂಡ ಹೂಡಿಕೆ ಮಾಡಬಹುದು. ಹೀಗಾಗಿ ಜನರು ಇದಕ್ಕೆ ದಾಸರಾಗುತ್ತಿದ್ದಾರೆ. ನೆನಪಿರಲಿ ಇದು ಜೂಜಾಟವಲ್ಲದೆ ಬೇರೇನೂ ಅಲ್ಲ.
  5. ವೆಲ್ತ್ ಕ್ರಿಯೇಷನ್ಗೆ ಷೇರು ಮಾರುಕಟ್ಟೆ ಪ್ರವೇಶಿಸದೆ ದಾರಿಯಿಲ್ಲ: ವೆಲ್ತ್ ಕ್ರಿಯೇಷನ್ ಹೆಚ್ಚು ಉಳ್ಳವರಿಗೆ ಹಲವು ರೀತಿಯಲ್ಲಿ ಸಾಧ್ಯ. ಆದರೆ ಹೆಚ್ಚಿನ ಹಣವಿಲ್ಲದ ಆದರೆ ವೆಲ್ತ್ ಕ್ರಿಯೇಷನ್ ಮಾಡಬೇಕು ಎನ್ನುವ ಹಂಬಲವಿದ್ದವರಿಗೆ ಷೇರು ಮಾರುಕಟ್ಟೆ ಪ್ರವೇಶಿಸದೆ ಹೆಚ್ಚಿನ ಆಯ್ಕೆಗಳು ಇಲ್ಲ. ಹೊಸದಾಗಿ ಪ್ರಾರಂಭಿಸುವವರಿಗೆ ಮ್ಯೂಚುವಲ್ ಫಂಡ್ ಗಳು ಬಹಳ ಉತ್ತಮ ಆಯ್ಕೆ. ಆದರೆ ಗಮನವಿರಲಿ ಇದರಲ್ಲಿ ಕೂಡ ಹಲವಾರು ವಿಧಗಳಿವೆ. ಅವುಗಳ ಬಗ್ಗೆಯ ಅಧ್ಯಯನವಿಲ್ಲದೆ ಹೂಡಿಕೆ ಮಾಡುವುದು ತಪ್ಪು. ಹೀಗಾಗಿ ವೆಲ್ತ್ ಕ್ರಿಯೇಟ್ ಮಾಡಬೇಕೆನ್ನುವ ಉತ್ಸಾಹಿಗಳು ಒಂದಷ್ಟು ಸ್ಕಿಲ್ ಡೆವಲಪ್ ಮಾಡಿಕೊಳ್ಳುವುದು, ಅಪ್ಡೇಟ್ ಆಗುವುದು ಬಹಳ ಮುಖ್ಯ.
  6. ಕೈಸಾಲ ಕೊಡುವುದು/ಮಾಡುವುದು ಎರಡೂ ಬೇಡ: ಸಾಲ ಎನ್ನುವುದು ವಿಧಿಯಲ್ಲದಾಗ ಬಳಸ ಬೇಕಾದ ಕೊನೆಯ ಅಸ್ತ್ರ. ಇದನ್ನ ಯಾವುದೇ ಕಾರಣಕ್ಕೂ ಬಳಸಬಾರದು. ಹಾಗೊಮ್ಮೆ ಸಾಲ ಮಾಡಲೇ ಬೇಕಾದ ಸಂದರ್ಭ ಬಂದರೆ ಸಂಸ್ಥೆಗಳ ಬಳಿ ಸಾಲ ಎತ್ತುವುದು ಒಳ್ಳೆಯದು. ಬಂಧು ಅಥವಾ ಮಿತ್ರರ ಬಳಿ ಹಣ ಕೇಳುವುದು ಉತ್ತಮ ಮಾರ್ಗವಲ್ಲ. ಇದರಿಂದ ಸಂಬಂಧವೂ ಹಾಳಾಗುತ್ತದೆ, ಹಣವೂ ಹಾಳಾಗುತ್ತದೆ. ಅಲ್ಲದೆ ಒಮ್ಮೆ ಸಾಲದ ವಿಷ ವರ್ತುಲದಲ್ಲಿ ಬಿದ್ದರೆ , ಆ ಸುಳಿಯಿಂದ ಹೊರಬರುವುದು ಬಹಳ ಕಷ್ಟ. ಪ್ರಥಮ ಮನೆ , ಸೈಟು ಗಳಿಗೆ ಸಾಲ ಮಾಡಿದರೆ ತೊಂದರೆಯಿಲ್ಲ , ಕಾರು ಕೊಳ್ಳಲು , ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು , ವಿದೇಶಿ ಪ್ರಯಾಣಕ್ಕೆ ಅಥವಾ ಮಕ್ಕಳನ್ನ ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಕಳಿಸಲು ಸಾಲ ಮಾಡುವುದು ಒಳ್ಳೆಯ ನಿರ್ಧಾರವಲ್ಲ.
  7. ಗಳಿಕೆ -ಉಳಿಕೆ -ಹೂಡಿಕೆ ಎನ್ನುವುದು ಮ್ಯಾರಥಾನ್ ಓಟ ಎನ್ನುವುದು ನೆನಪಿರಲಿ: ಗಳಿಕೆ -ಉಳಿಕೆ -ಹೂಡಿಕೆ ಒಂದೆರೆಡು ತಿಂಗಳು ಅಥವಾ ವರ್ಷದಲ್ಲಿ ಮುಗಿಯುವ ಕೆಲಸವಲ್ಲ. ಕನಿಷ್ಠ 3 ರಿಂದ 4 ದಶಕದ ಓಟ. ಹೀಗಾಗೇ ಮ್ಯಾರಥಾನ್ ಎಂದದ್ದು ! ಆ ನಂತರ ಅದು ಅಲ್ಲಿಗೂ ನಿಲ್ಲುವುದು ಅದು ರಿಲೇ ರೆಸ್ ಇದ್ದಂತೆ, ನಮ್ಮ ಮುಂದಿನ ಜನಾಂಗವನ್ನ ಕೂಡ ವಿತ್ತೀಯ ಸಾಕ್ಷರನ್ನಾಗಿ ಮಾಡಬೇಕು. ನಾವು ನಡೆದ ದಾರಿಯಲ್ಲೇ ಅವರು ಕೂಡ ನಡೆಯಬೇಕು ಅಂತೇನಿಲ್ಲ, ಆದರೆ ನಾವು ಮಾಡಿದ ತಪ್ಪು ಮಾಡುವುದು ಬೇಡ , ಆ ಮಟ್ಟಿಗಿನ ತಿಳುವಳಿಕೆ ಅವರದನ್ನಾಗಿಸಿದರೆ ಸಾಕು. ಆ ನಿಟ್ಟಿನಲ್ಲಿ ಮಕ್ಕಳಿಗೆ ಹಣಕಾಸು ಸಾಕ್ಷರತೆ ಬೆಳಸುವ ಸಂಕಲ್ಪ ಕೂಡ ಮಾಡಬೇಕಾಗುತ್ತದೆ.

ಕೊನೆಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಇಂದಿನ ಕಾಲಘಟ್ಟದಲ್ಲಿ ಗಳಿಕೆಗಿಂತ ಉಳಿಸುವುದು ಕಷ್ಟ , ಉಳಿಸಿದ ಹಣವನ್ನ ಹೂಡಿಕೆ ಮಾಡುವುದು ಅದರಲ್ಲೂ ಉತ್ತಮ ಹೂಡಿಕೆ ಮಾಡುವುದು ಇನ್ನೂ ಕಷ್ಟ. ಎಲ್ಲದಕ್ಕಿಂತ ಮಿಗಿಲಾಗಿ ಸಣ್ಣಪುಟ್ಟ ಹಣಕಾಸು ತಪ್ಪುಗಳು ಕೂಡ ಜೀವನದ ಐದಾರು ವರ್ಷವನ್ನ ನುಂಗಿ ಬಿಡುತ್ತದೆ. ಮಧ್ಯಮ ಅಥವಾ ದೊಡ್ಡ ಪ್ರಮಾಣದ ತಪ್ಪುಗಳು ಜೀವನವನ್ನ ಮರಳಿ ಟ್ರ್ಯಾಕ್ ಗೆ ತರಲಾಗದಷ್ಟು ಹದಗೆಡಿಸಿಬಿಡುತ್ತದೆ. ಇಲ್ಲಿ ಕರುಣೆ, ಮರುಕಕ್ಕೆ ಜಾಗವಿಲ್ಲ. ಹೀಗಾಗಿ ದಿಟ್ಟ, ನಿಖರ ಹೆಜ್ಜೆಗಳು ಹೊಸ ವರ್ಷದಲ್ಲಿ ಇಡುವಂತಾಗಲಿ. ವೆಲ್ತ್ ಕ್ರಿಯೇಷನ್ ಎನ್ನುವುದು ಗುರಿಯಾಗಿರದೆ ಅದು ಸಹಜ ಬದುಕಾಗಲಿ. ಅದರತ್ತ ಸಹಜ ಸರಳ ನಡಿಗೆಯಿರಲಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com