ಸಪ್ತ ಋಷಿ ಸೂತ್ರ ಎನ್ನುವ ಗಾಳಿಮಾತು; ವಿದೇಶಿ ವಿತ್ತ ನೀತಿಯ ಚಾಟಿ ಏಟು! (ಹಣಕ್ಲಾಸು)

ಹಣಕ್ಲಾಸು-345ರಂಗಸ್ವಾಮಿ ಮೂನಕನಹಳ್ಳಿ
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಇನ್ನೊಂದು ಬಜೆಟ್ ಮಂಡನೆಯಾಗಿದೆ. ಪ್ರತಿ ಬಜೆಟ್ ಮಂಡನೆಯಾದ ನಂತರ ಆಡಳಿತ ಪಕ್ಷದ ವಕ್ತಾರರು ಅದನ್ನ ಹಾಡಿ ಹೊಗಳುವುದು ಸಾಮಾನ್ಯ, ಅಂತೆಯೇ ವಿರೋಧ ಪಕ್ಷದ ವಕ್ತಾರರು, ನೇತಾರರು ಇದೊಂದು ಕೆಟ್ಟ ಬಜೆಟ್ ಎನ್ನುವುದು ಕೂಡ ಮಾಮೂಲಾಗಿ ಬಿಟ್ಟಿದೆ. ಜನ ಸಾಮಾನ್ಯ, ಮಧ್ಯಮವರ್ಗದ ಜನ 'ಆಡಳಿತದಲ್ಲಿ ಯಾವುದೇ ಪಕ್ಷವಿರಲಿ ನಮಗೇನೂ ಲಾಭವಿಲ್ಲ, ಸರಕಾರ ಎಂದಿಗೂ ನಮ್ಮನ್ನ ಪರಿಗಣಿಸುವುದಿಲ್ಲ' ಎನ್ನುವ ಮಾತನ್ನ ಆಡುತ್ತಾರೆ. ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಗಲೇ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಬಜೆಟ್ನಲ್ಲಿ ಹತ್ತಾರು ವಲಯಗಳಲ್ಲಿ ಹಣವನ್ನ ಹೇಗೆ ಖರ್ಚು ಮಾಡುತ್ತೇವೆ?, ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನ ನೀಡಲಾಗಿದೆ...? ಹೀಗೆ ಒಂದಲ್ಲ ಹತ್ತಾರು ವಿಷಯಗಳಿರುತ್ತವೆ. ಪ್ರತಿ ವಲಯದ್ದೂ ಒಂದೊಂದು ಕಥೆ. ಕೆಲವು ವಲಯಗಳಲ್ಲಿ ನಿರೀಕ್ಷೆ ನಿಜವಾದದ್ದು ಖುಷಿ ತಂದಿದೆ. ಹಲವು ವಲಯಗಳು ನಮ್ಮನ್ನ ನಿರ್ಲಕ್ಷಿಸಲಾಗಿದೆ ಎನ್ನುವ ಕೂಗು ಕೂಡ ಕೇಳಿಬರುತ್ತಿದೆ. ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಎಲ್ಲರೂ ಒಪ್ಪುವ ಬಜೆಟ್ ಮಂಡಿಸಲು ಸಾಕ್ಷಾತ್ ಪರಬ್ರಹ್ಮನಿಂದಲೂ ಸಾಧ್ಯವಾಗದ ಮಾತು ಎನ್ನುವುದು ವೇದ್ಯ. ಬಜೆಟ್ ಎನ್ನುವುದು ಕೇಂದ್ರ ಸರಕಾರದ ಮನಸ್ಥಿತಿಯ ದ್ಯೋತಕ. ದೇಶವನ್ನ ಯಾವ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗುವ ಉದ್ದೇಶವಿದೆ ಎನ್ನುವುದನ್ನ ಗಮನಿಸಿ ನೋಡಿದಾಗ ತಿಳಿಯುತ್ತದೆ. ಆ ನಿಟ್ಟಿನಲ್ಲಿ ನಿನ್ನೆಯ ಬಜೆಟ್ ಎರಡು ಆಯಾಮವನ್ನ ನಮ್ಮ ಮುಂದೆ ತೆರೆದಿಟ್ಟಿದೆ. ವಲಯವಾರು ಬಜೆಟ್ ವಿಶ್ಲೇಷಣೆಯನ್ನ ಮುಂದಿನ ಲೇಖನಗಳಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಇಂದಿನ ಲೇಖನವನ್ನ ಜನ ಸಾಮಾನ್ಯ ಮತ್ತು ಮಧ್ಯಮವರ್ಗ, ಹಿರಿಯನಾಗರೀಕರ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಎಲ್ಲಕ್ಕೂ ಮೊದಲಿಗೆ ಭಾರತದ ಬೆನ್ನೆಲುಬು ಸಣ್ಣ ಉಳಿತಾಯ. ನಮ್ಮದು ಮೂಲತಃ ಉಳಿತಾಯದ ಮನೋಭಾವ ಹೊಂದಿರುವ ಸಮಾಜ. ಆ ಸಮಾಜವನ್ನ ನಿಧಾನವಾಗಿ ಮತ್ತು ಪೂರ್ಣವಾಗಿ ಬಳಕೆಯೇ ಮೂಲವಾಗಿರುವ ಸಮಾಜವನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಪಾಶ್ಚಾತ್ಯ ದೇಶಗಳ ಆರ್ಥಿಕತೆಯ ಅಂಧಾನುಕರಣೆ ಈ ಬಜೆಟ್ನಲ್ಲೂ ಎದ್ದು ಕಾಣುತ್ತಿದೆ. ಹಳೆ ಟ್ಯಾಕ್ಸ್ ನೀತಿಯನ್ನ ಅಪ್ಪಿಕೊಂಡವರು ಉಳಿತಾಯವನ್ನ ನಂಬಿಕೊಂಡವರು. ಎಲ್ಲಾದರೂ ಹೂಡಿಕೆ ಮಾಡಿದರೆ ಒಂದಷ್ಟು ತೆರಿಗೆ ವಿನಾಯತಿ ಸಿಗುತ್ತದೆ, ಒಂದಷ್ಟು ವರ್ಷದ ನಂತರ ಹೂಡಿಕೆ ಮಾಡಿದ ಹಣವೂ ದಕ್ಕುತ್ತದೆ ಎನ್ನುವ ಮನೋಭಾವದವರು. ಅವರಿಗೆ ಈ ಬಜೆಟ್ನಲ್ಲಿ ಏನೇನೂ ಇಲ್ಲ. ಇದರ ಅರ್ಥ ಬಹಳ ಸರಳ, ಕೇಂದ್ರ ಸರಕಾರ ಈ ರೀತಿಯ ತೆರಿಗೆಯನ್ನ ಉಳಿಸಲು ಹೂಡಿಕೆ ಮಾಡುವುದರ ಪರವಾಗಿಲ್ಲ. ಇದರ ಜೊತೆಗೆ ಎಲ್ಲರೂ ಇಂದಲ್ಲ ನಾಳೆ ಹೊಸ ತೆರಿಗೆ ನೀತಿಯನ್ನ ವಿಧಿಯಿಲ್ಲದೇ ತಮ್ಮದಾಗಿಸಿಕೊಳ್ಳಬೇಕು, ತಮ್ಮದಾಗಿಸಿಕೊಳ್ಳುತ್ತಾರೆ ಎನ್ನುವ ಭಾವನೆ ಕೂಡ ಸ್ಪಷ್ಟವಾಗಿದೆ. ಹೊಸ ಟ್ಯಾಕ್ಸ್ ರಿಜಿಮ್ ನಲ್ಲಿ 5 ಲಕ್ಷದವರೆಗೆ ಆದಾಯ ತೆರಿಗೆಯನ್ನ ಕಟ್ಟುವಂತಿರಲಿಲ್ಲ ಅದನ್ನ ಈಗ 7 ಲಕ್ಷಕ್ಕೆ ಏರಿಸಲಾಗಿದೆ. ನೇರವಾಗಿ 2 ಲಕ್ಷ ಹಣ ತೆರಿಗೆದಾರನ ಬಳಿ ಉಳಿಯುತ್ತದೆ. ಅಂದರೆ ಗಮನಿಸಿ ಈ ಹಣವನ್ನ ಆತ ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು, ಹಳೆ ತೆರಿಗೆ ಪದ್ಧತಿಯಲ್ಲಿರುವವರು ತೆರಿಗೆ ಉಳಿಸಲು ಇರುವ ಹೂಡಿಕೆ ಮಾರ್ಗವನ್ನೇ ಬಳಸಬೇಕಾಗುತ್ತದೆ, ಆದರೆ ಹೊಸ ತೆರಿಗೆ ನೀತಿಯನ್ನ ಅಪ್ಪಿಕೊಂಡವರು ಈ ಹಣವನ್ನ ಎಲ್ಲಿ ಬೇಕಾದರೂ ತೊಡಗಿಸಬಹುದು. ಮುಕ್ಕಾಲು ಪಾಲು ಜನ ಈ ಹಣವನ್ನ ಷೇರುಮಾರುಕಟ್ಟೆಯಲ್ಲಿ ತೊಡಗಿಸುತ್ತಾರೆ, ಇಲ್ಲವೇ ಖರ್ಚು ಮಾಡುತ್ತಾರೆ. ಎರಡೂ ಸಾಂಪ್ರದಾಯಿಕ ಉಳಿಕೆ ಪದ್ಧತಿಯನ್ನ ಮಕಾಡೆ ಮಲಗಿಸಲು ಶಕ್ತವಾಗಿವೆ. ಕೇಂದ್ರ ಸರಕಾರ ಸಾಂಪ್ರದಾಯಿಕ ಉಳಿತಾಯ ಪದ್ಧತಿಯನ್ನ ಬೆಂಬಲಿಸುವ ಯಾವ ಕಾರ್ಯವನ್ನ ಕೂಡ ಮಾಡುತ್ತಿಲ್ಲ.

ಇಲ್ಲಿ ನಾನು ಹೊಸ ತೆರಿಗೆ ನೀತಿಯಲ್ಲಿ ಬದಲಾಗಿರುವ ಟ್ಯಾಕ್ಸ್ ಸ್ಲ್ಯಾಬ್ಗಳನ್ನ ನೀಡಲು ಹೋಗುವುದಿಲ್ಲ. ಈ ವೇಳೆಗೆ ಅದೆಲ್ಲ ಎಲ್ಲರಿಗೂ ಬಾಯಿಪಾಠವಾಗಿರುತ್ತದೆ.  15 ಲಕ್ಷ ರೂಪಾಯಿ ನಂತರ 30 ಪ್ರತಿಶತ ತೆರಿಗೆಯನ್ನ ನೀಡಬೇಕಾಗುತ್ತದೆ. ಭಾರತ ಸೇವಿಂಗ್ ಎಕಾನಮಿ ಎನ್ನುವ ಹಣೆಪಟ್ಟಿಯನ್ನ ಕಳಚಿ ಇದೂ ಕೂಡ ಕನ್ಸೂಮರಿಸ್ಟಿಕ್ ಎಕಾನಮಿ ಅಥವಾ ಸೊಸೈಟಿ ಎನ್ನುವುದನ್ನ ಸಾರುವುದು ಮತ್ತು ಅದನ್ನ ಕಾರ್ಯಗತಗೊಳಿಸುವುದು ಕೇಂದ್ರ ಸರಕಾರದ ಉದ್ದೇಶ ಎನ್ನುವುದು ಸ್ಪಷ್ಟ. ಇಂದಲ್ಲ ನಾಳೆ ಎಲ್ಲರೂ ಹೊಸ ಟ್ಯಾಕ್ಸ್ ರಿಜಿಮ್ ಗೆ ಹೊರಳುವುದು ಕೂಡ ಸತ್ಯ. ಭಾರತೀಯತೆ, ಸನಾತನತೆಗಳ ಬಗ್ಗೆ ಮಾತನಾಡುವ ಕೇಂದ್ರ ಸರಕಾರದ ವಿತ್ತೀಯ ನೀತಿಗಳು ಮಾತ್ರ ಅಪ್ಪಟ ವಿದೇಶಿ.

ಹೊಸ ಮತ್ತು ಹಳೆಯ ಟ್ಯಾಕ್ಸ್ ರಿಜಿಮ್ಗಳಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆಯನ್ನ ಕೇಳುವವರಿಗೆ ಮೇಲ್ನೋಟದಲ್ಲಿ ಹೊಸ ಟ್ಯಾಕ್ಸ್ ರಿಜಿಮ್ ಬೆಸ್ಟ್ ಎನ್ನಿಸುತ್ತದೆ. ಏಕೆಂದರೆ ಇಲ್ಲಿ ತೆರಿಗೆ ಉಳಿಸಲು ಯಾವುದೇ ಹೂಡಿಕೆ ಮಾಡಬೇಕಾದ ಅವಶ್ಯಕತೆಯಿಲ್ಲ. ಹಳೆ ಪದ್ಧತಿಯಲ್ಲಿ ತೆರಿಗೆ ಉಳಿಸಬೇಕಿದ್ದರೆ ಹೂಡಿಕೆ ಮಾಡಬೇಕಿತ್ತು. ಸರಕಾರಕ್ಕೆ ಜನರು ಕಿಸಾನ್ ವಿಕಾಸ್ ಪತ್ರ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಇತ್ಯಾದಿಗಳ ಮೇಲೆ ಹೂಡಿಕೆ ಮಾಡುವುದು ಬೇಕಿಲ್ಲ. ಇವುಗಳು ಅಪಾಯವಿಲ್ಲದ ಸುರಕ್ಷಿತ ಹೂಡಿಕೆಯ ಮಾರ್ಗವಾಗಿತ್ತು. ಕೆಳಗಿನ ಚಿತ್ರದಲ್ಲಿ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ಎಷ್ಟೊಂದು ಹಣ ಉಳಿತಾಯವಾಗುತ್ತಿದೆ, ಸರಕಾರ ಒಳಿತು ಮಾಡಿದೆ ಎನ್ನುವ ಮನೋಭಾವ ಉಂಟಾಗುತ್ತದೆ. ಆದರೆ ಗಮನಿಸಿ ನೋಡಿದಾಗ, ಉಳಿತಾಯ, ಸುಭದ್ರ ಹೂಡಿಕೆಯಿಂದ ಜನರನ್ನ ವಿಮುಖರನಾಗಿ ಮಾಡಿದೆ.

ಇದ್ದುದರಲ್ಲಿ ನೆಮ್ಮದಿ ತರುವ ವಿಷಯವೆಂದರೆ ಹಿರಿಯ ನಾಗರಿಕರು ಮಾಡಬಹುದಾದ ಸುರಕ್ಷಿತ ಹೂಡಿಕೆಯ ಮೊತ್ತವನ್ನ ಹೆಚ್ಚಳ ಮಾಡಿರುವುದು. ಈ ಹಿಂದೆ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಮೂಲಕ 15 ಲಕ್ಷ ರೂಪಾಯಿ ಹೂಡಿಕೆಯನ್ನ ಮಾಡಬಹುದಿತ್ತು, ಈಗ ಅದನ್ನ 30 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಹಾಗೆಯೇ ಪೋಸ್ಟ್ ಆಫೀಸ್ ಹೂಡಿಕೆ ವ್ಯಕ್ತಿಗೆ 4.5 ಲಕ್ಷವಿತ್ತು ಅದನ್ನ 9 ಲಕ್ಷ ರುಪಾಯಿಗೆ ಏರಿಸಲಾಗಿದೆ. ಜಂಟಿ ಖಾತೆಗೆ 9 ಲಕ್ಷವಿತ್ತು ಅದನ್ನ 15 ಲಕ್ಷಕ್ಕೆ ಏರಿಸಲಾಗಿದೆ. ಒಟ್ಟಾರೆ ಒಬ್ಬ ಹಿರಿಯ ನಾಗರಿಕರು ತಮ್ಮ ಬಳಿ ಇರುವ ನಿವೃತ್ತಿ ಫಂಡ್ ನಲ್ಲಿ 39 ಲಕ್ಷದ ವರೆಗೆ ಯಾವುದೇ ಚಿಂತೆಯಿಲ್ಲದೆ ಹೂಡಿಕೆ ಮಾಡಬಹುದಾಗಿದೆ. ಇದು ಈ ಬಜೆಟ್ನ ಅತಿ ದೊಡ್ಡ ಉಪಲಬ್ಧ. ಏಕೆಂದರೆ ಈ ಮುಂಚೆ 19.5 ಲಕ್ಷದವರೆಗೆ ಮಾತ್ರ ಇಲ್ಲಿ ಹೂಡಿಕೆ ಮಾಡಬಹುದಿತ್ತು. ಹಿರಿಯ ನಾಗರೀಕರನ್ನ ಬದಲಾಗುತ್ತಿರುವ ಭಾರತದ ವೇಗ ಮತ್ತು ಆವೇಗದಿಂದ ರಕ್ಷಿಸಿಸುವ ಕೆಲಸ ಕೇಂದ್ರ ಸರಕಾರ ಮಾಡಿದೆ, ಹತ್ತಿರತ್ತಿರ 12 ಕೋಟಿ ಇರುವ ಹಿರಿಯ ನಾಗರಿಕರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿರುತ್ತಾರೆ.

ಭಾರತದಲ್ಲಿ ನೇರ ತೆರಿಗೆಯ ಪರಿಧಿಯಲ್ಲಿ ಬರುವ 7 ಕೋಟಿ ಜನರಿದ್ದಾರೆ ಮತ್ತು 12 ಕೋಟಿ ಹಿರಿಯ ನಾಗರೀಕರಿದ್ದಾರೆ. ಹಿರಿಯ ನಾಗರಿಕರಲ್ಲಿ ಕೂಡ ಹಲವಾರು ತೆರಿಗೆ ಪರಿಧಿಯಲ್ಲಿ ಬರುತ್ತಾರೆ. ಈ ಎಲ್ಲಾ ಲೆಕ್ಕಾಚಾರ ಮಾಡಿ ನೋಡಿದರೆ 18.5 ಕೋಟಿ ಜನರಿಗೆ ಇಂದಿನ ಬಜೆಟ್ ನೇರವಾಗಿ ಅನುಕೊಲ ಮಾಡಿಕೊಟ್ಟಿದೆ. ಮೊದಲ ಸಾಲುಗಳಲ್ಲಿ ಹೇಳಿದ ಉಳಿತಾಯಕ್ಕೆ ಬೆಂಬಲ ನೀಡಿದ ಹೊಸ ತೆರಿಗೆ ನೀತಿಯನ್ನ ಇನ್ನೊಂದು ಆಯಾಮದಲ್ಲಿ ಕೂಡ ವಿಶ್ಲೇಷಣೆ ಮಾಡಬಹುದು.

ಮುಂಬರುವ ಎರಡು ದಶಕ ಭಾರತಕ್ಕೆ ಸೇರಿದ್ದು, ಜಗತ್ತು ಚೀನಾವನ್ನ ಬದಿಗಿರಿಸಿ ಇಂದು ಭಾರತದತ್ತ ಮುಖ ಮಾಡುತ್ತಿದೆ. ಇಂತಹ ಸಮಯದಲ್ಲಿ ಭಾರತದ ಸಮಾಜ ಕೂಡ ಮಗ್ಗುಲು ಬದಲಾಯಿಯಬೇಕಾದ ಸನ್ನಿವೇಶದಲ್ಲಿದೆ. ಹೀಗಾಗಿ ಇಂದು ಸಮಾಜ ಒಂದು ರೀತಿಯ ಟ್ರಾನ್ಸಿಷನ್ ಹಂತದಲ್ಲಿದೆ. ಉಳಿತಾಯ ಎನ್ನುವ ಮಹಾಮಂತ್ರದಿಂದ ಸಮಾಜವನ್ನ ಖರೀದಿ, ಖರ್ಚು ಮಾಡುವ ಸಮಾಜವಾಗಿ ಬದಲಾಗುತ್ತಿದೆ. ಹಣವನ್ನ ಉಳಿತಾಯ ಮಾಡಿದರೆ ಅದು ಜಿಡಿಪಿ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಇಂದಿನ ಸರಕಾರ ಉದ್ದೇಶ ಹಣ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿರಬೇಕು, ಅದು ಎಂದಿಗೂ ಬ್ಯಾಂಕಿನಲ್ಲಿ ಕೂರಲು ಬಿಡಬಾರದು ಎನ್ನುವುದಾಗಿದೆ. ಈ ನಿಟ್ಟಿನಲ್ಲಿ ನೋಡಿದರೆ ಮುಂಬರುವ ಎರಡು ದಶಕ ನಮ್ಮ ಹೆಸರಿಗೆ ಬರೆದುಕೊಳ್ಳಲು ಇದು ಅವಶ್ಯಕ ಕೂಡ ಎನ್ನಿಸುತ್ತದೆ. ಆದರೆ ಕೊರೋನ ತರಹದ ಪಾಂಡಮಿಕ್ ಮುಂದೆ ಬರುವುದಿಲ್ಲ ಎನ್ನುವುದು ಹೇಗೆ ಅಥವಾ ಇಂದು ಊಹಿಸಲಾಗದ ಸನ್ನಿವೇಶ ಎದುರಾದರೆ ಅದನ್ನ ಎದುರಿಸಿ ನಿಲ್ಲಲು ಬೇಕಾಗುವ ಬ್ಯಾಕಪ್ ನಮ್ಮ ಬಳಿ ಇರುವುದಿಲ್ಲ. ಇಂದಿನ ಹೊಸ ಸಮಾಜ, ಹೊಸ ತಲೆಮಾರಿನ ಹುಡುಗರು ಉಳಿತಾಯ ಎಂದರೆ ನಗುವಂತಾಗಿದೆ. ಅವರದೇನಿದ್ದರೂ ಇಂದು ಎಷ್ಟು ಸಾಧ್ಯವೋ ಅಷ್ಟು ಅನುಭವ ಪಡೆದುಕೊಳ್ಳುವುದು, ಖರ್ಚು ಮಾಡುವುದೇ ಬದುಕು ಎಂದುಕೊಂಡಿದ್ದಾರೆ. ಇಂತಹ ಮನೋಭಾವದ ಹೊಸ ತಲೆಮಾರಿಗೆ, "ಮುಂಬರುವ ದಿನಕ್ಕೆ ಉಳಿಸಬೇಕು" ಎನ್ನುವ ಬದಲು "ನೀವು ಮಾಡಿದ್ದು ಸರಿಯಿದೆ ಇನ್ನಷ್ಟು ರಿಬೇಟ್ ತೆಗೆದುಕೊಳ್ಳಿ" ಎನ್ನುವ ಸರಕಾರದ ನೀತಿ ಮುಂದಿನ ದಿನದಲ್ಲಿ ಮಾರಕವಾಗದಿದ್ದರೆ ಸಾಕು.

ಕೊನೆಮಾತು: ನೀವು ಜಗತ್ತನ್ನ ಒಮ್ಮೆ ಕೂಲಂಕುಷವಾಗಿ ಗಮನಿಸಿ ನೋಡಿ, ಅಲ್ಲಿನ ಬಹುತೇಕ ದೇಶಗಳಲ್ಲಿ ಉಳಿಸುವವರಿಗೆ ಯಾವುದೇ ಬೆನಿಫಿಟ್ ಇಲ್ಲ. ಉಳಿಸುವವರನ್ನ ಹಳೆಯ ತಲೆಮಾರಿನ, ಜಡ್ಡು ಹಿಡಿದ ಹಳೆಯ ಚಿಂತನೆಗಳನ್ನ ರೂಢಿಸಿಕೊಂಡಿರುವ, ಬದಲಾವಣೆಗೆ ಒಗ್ಗಿಕೊಳ್ಳದ ಪ್ರಾಣಿ ಎನ್ನುವಂತೆ ನೋಡಲಾಗುತ್ತದೆ. ಉಳಿಸಿದ ಹಣ ಮತ್ತು ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಹಣವನ್ನ ತೊಡಗಿಸಿದರೆ ಆ ಹಣ ಆದಷ್ಟೂ ಬೇಗ ಕರಗಿ ಹೋಗುತ್ತದೆ, ಹಣವನ್ನ ಉಳಿಸಿ ಪ್ರಯೋಜನವಿಲ್ಲ, ಈ ಹಣವನ್ನ ನೀವು ಖರ್ಚು ಮಾಡಬೇಕು ಇಲ್ಲವೇ ಅದನ್ನ ಅಸಂಪ್ರದಾಯಿಕ ಹೂಡಿಕೆಗಳಲ್ಲಿ ತೊಡಗಿಸಬೇಕು. ಎರಡೂ ಮಾರ್ಗದಲ್ಲೂ ಹಣವಂತೂ ನಿಮ್ಮಿಂದ ದೊರಾಗುತ್ತದೆ. ಖರ್ಚು ಮಾಡಿದ ಹಣ ಎಂದಿಗೂ ಮರಳಿ ಬರುವುದಿಲ್ಲ, ಇನ್ನು ತಿಳಿಯದ ಹೂಡಿಕೆ ಕೂಡ ಕನ್ನಡಿಯೊಳಗಿನ ಗಂಟು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಭಾರತದಂತಹ ದೊಡ್ಡ ದೇಶದಲ್ಲಿ ಜನರನ್ನ ಈ ರೀತಿಯ ಆಯ್ಕೆಯಿಲ್ಲದ ಸ್ಥಿತಿಗೆ ದೂಡುವುದು ಒಳ್ಳೆಯದಲ್ಲ. ಪಾಶ್ಚಾತ್ಯ ದೇಶದಲ್ಲಿ ಸೋಶಿಯಲ್ ಸೆಕ್ಯುರಿಟಿ ಭದ್ರವಾಗಿದೆ. ನಮ್ಮಲ್ಲಿ? ಅಡಿಪಾಯ ಭದ್ರವಿಲ್ಲದೆ ಮನೆ ಕಟ್ಟುವ ಕೆಲಸ ಮಾಡಬಾರದು. ಇಂದಿನ ಬೈನರಿ ಬದುಕಿನಲ್ಲಿ ಇದಕ್ಕಿಂತ ಹೆಚ್ಚಿನದು ಹೇಳಲಾಗುವುದಿಲ್ಲ. ಉಳಿಸುವ ಮುನ್ನ, ಅದನ್ನ ಹೂಡಿಕೆ ಮಾಡುವ ಮುನ್ನ ಇನ್ನಷ್ಟು ಎಚ್ಚರಿಕೆ ನಿಮ್ಮದಾಗಿರಲಿ. ನೆನೆಪಿರಲಿ; ನಾಳೆ ಊಹಿಸಲಾಗದ ಸನ್ನಿವೇಶ ಎದುರಾದರೆ ನಮ್ಮ ಬೆನ್ನಿಗೆ ನಿಲ್ಲುವವರು ಯಾರೂ ಇರುವುದಿಲ್ಲ. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com