ಜಾಗತಿಕ ವಿತ್ತ ಜಗತ್ತಿನಲ್ಲಿ ಭದ್ರ ಹೆಜ್ಜೆ ಊರುತ್ತಿದೆ ರೂಪಾಯಿ!

ಹಣಕ್ಲಾಸು-343ರಂಗಸ್ವಾಮಿ ಮೂನಕನಹಳ್ಳಿ
ರೂಪಾಯಿ
ರೂಪಾಯಿ

ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ವರ್ಚಸ್ಸು ವ್ಯಾಪಾರ ಮತ್ತು ವಹಿವಾಟಿನ ಮೇಲೂ ಪ್ರಭಾವ ಬೀರುತ್ತಿವೆ. ಭಾರತೀಯ ರೂಪಾಯಿಯನ್ನ ವಹಿವಾಟಿಗೆ ಅಂದರೆ ಸೆಟಲ್ಮೆಂಟ್ ಗೆ ಬಳಸಲು ಭಾರತದ ಸರಕಾರ ಮುಂದಾಗಿದೆ. ಜುಲೈ 2022 ರಲ್ಲಿ ಇದರ ಬಗ್ಗೆ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಮುಚ್ಚಳಿಕೆಯನ್ನ ಹೊರಡಿಸಿದ್ದವು. ಅವುಗಳು ಇದೀಗ ಫಲವನ್ನ ನೀಡಲು ಪ್ರಾರಂಭಿಸಿವೆ. ರಷ್ಯಾ ದೇಶದ 9 ಬ್ಯಾಂಕುಗಳು ಭಾರತದಲ್ಲಿ ವೊಸ್ಟ್ರೋ ಖಾತೆಯನ್ನ ಭಾರತೀಯ ರಿಸರ್ವ್ ಬ್ಯಾಂಕಿನ ಅನುಮತಿಯೊಂದಿಗೆ ತೆರೆದಿದೆ. ನಿಮಗೆಲ್ಲಾ ತಿಳಿದಿರಲಿ ಇಲ್ಲಿಯವರೆಗೆ ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ಡಾಲರ್ನಲ್ಲಿ ಅಥವಾ ಯೂರೋನಲ್ಲಿ ನಡೆಯುತ್ತಿತ್ತು. ಈ ಎರಡು ದೇಶಗಳ ನಡುವಿನ ವ್ಯಾಪಾರದ ಲಾಭ ನಷ್ಟಗಳ ಕಥೆ ಬೇರೆಯದು, ಆದರೆ ಏನೂ ಮಾಡದೆ ತಮ್ಮ ಹಣವನ್ನ ವಿನಿಮಯವನ್ನಾಗಿ ಬಳಸಿದ ಕಾರಣ ವಿಶ್ವದ ದೊಡ್ಡಣ್ಣ ಒಂದಷ್ಟು ಪಾಲು ತನ್ನದಾಗಿಸಿಕೊಂಡು ಬಿಡುತ್ತಿತ್ತು. ಹಿಂದಿನ ಕಾಲದಲ್ಲಿ ಚಕ್ರಾಧಿಪತಿಗೆ ಸಾಮಂತರು ಕಪ್ಪ ನೀಡುವ ಕ್ರಿಯೆಯನ್ನ ನೆನಪಿಸಿಕೊಳ್ಳಿ, ಇದು ಹೆಚ್ಚು ಕಡಿಮೆ ಅದೇ ಸಾಲಿಗೆ ಸೇರಿದ್ದು.

ಆಮದು ಮತ್ತು ರಫ್ತು (ಇಂಪೋರ್ಟ್ ಅಂಡ್ ಎಕ್ಸ್ಪೋರ್ಟ್) ಎರಡೂ ವ್ಯಾಪಾರದಲ್ಲೂ ಇನ್ವಾಯ್ಸ್ (ಬಿಲ್, ಸರಕುಪಟ್ಟಿ) ರೂಪಾಯಿಯಲ್ಲಿ ಇರಬೇಕು ಎನ್ನುವುದು ಕಡ್ಡಾಯ. ವಿನಿಮಯ ದರವನ್ನ ಎರಡೂ ದೇಶಗಳು ಅಂದಿನ ಮಾರುಕಟ್ಟೆ ಬೆಲೆಗೆ ತಕ್ಕಂತೆ ನಿರ್ಧರಿಸಬೇಕಾಗುತ್ತದೆ. ಹೀಗೆ ಒಪ್ಪಿಕೊಂಡ ವಿನಿಮಯದ ಸೆಟಲ್ಮೆಂಟ್ ಮಾತ್ರ ಯಾವಾಗಲೂ ರೂಪಾಯಿಯಲ್ಲಿ ಆಗುತ್ತದೆ. ಹೀಗೆ ಎಲ್ಲವೂ ಆಗಬೇಕಾದರೆ ಯಾವ ದೇಶ ಭಾರತದ ರೂಪಾಯಿಯಲ್ಲಿ ವಹಿವಾಟು ನಡೆಸಲು ಸಿದ್ಧವಿರುತ್ತದೆ, ಆ ದೇಶ ಭಾರತೀಯ ರಿಸೆರ್ವ್ ಬ್ಯಾಂಕ್ ಅನುಮತಿ ಪಡೆದು ವೊಸ್ಟ್ರೋ ಖಾತೆಯನ್ನ ತೆರೆಯಬೇಕಾಗುತ್ತದೆ. ಪ್ರಸ್ತುತ ರಷ್ಯಾ ದೇಶದ 9 ಬ್ಯಾಂಕ್ಗಳು ಇಂತಹ ಖಾತೆಯನ್ನ ಭಾರತದಲ್ಲಿ ತೆರೆದಿವೆ.

ಏನಿದು ವೊಸ್ಟ್ರೋ ಅಕೌಂಟ್?

ಬೇರೆ ದೇಶದ ಬ್ಯಾಂಕುಗಳು ಭಾರತದಲ್ಲಿ ತಮ್ಮ ಶಾಖೆಯನ್ನ ಹೊಂದಿದ್ದು, ವಾಣಿಜ್ಯ ವಹಿವಾಟುಗಳಿಗೆ ರೂಪಾಯಿಯಲ್ಲಿ ಸೆಟಲ್ಮೆಂಟ್ ಮಾಡಿಕೊಳ್ಳಲು ತೆಗೆಯುವ ಖಾತೆಗೆ ವೊಸ್ಟ್ರೋ ಅಕೌಂಟ್ ಎನ್ನಲಾಗುತ್ತದೆ. ಉದಾಹರಣೆಗೆ ರಷ್ಯಾದ sberbank ಮತ್ತು VTB ಬ್ಯಾಂಕ್ ಎನ್ನುವ ಬ್ಯಾಂಕುಗಳು ಕ್ರಮವಾಗಿ ರಷ್ಯಾದ ಅತಿ ದೊಡ್ಡ ಪ್ರಥಮ ಮತ್ತು ದ್ವಿತೀಯ ಬ್ಯಾಂಕುಗಳು ಎನ್ನಿಸಿಕೊಂಡಿವೆ , ಅವುಗಳು ತಮ್ಮ ಶಾಖೆಯನ್ನ ಭಾರತದಲ್ಲಿ ಹೊಂದಿವೆ. ಆದರೆ ಅವೆಲ್ಲವೂ ಡಾಲರ್ ನಲ್ಲಿರುತ್ತವೆ. ಭಾರತೀಯ ರೂಪಾಯಿಯಲ್ಲಿ ಸೆಟಲ್ ಮಾಡಲು ಹೊಸದಾಗಿ ತೆಗೆಯುವ ಖಾತೆಗೆ ವೊಸ್ಟ್ರೋ ಅಕೌಂಟ್ ಎನ್ನಲಾಗುತ್ತದೆ. ರಷ್ಯಾದ ವ್ಯಾಪಾರಿಯಿಂದ ಲಕ್ಷ ರೂಪಾಯಿ ಸರಕು ಕೊಂಡು ಆ ಹಣವನ್ನ ಭಾರತೀಯ ವ್ಯಾಪಾರಿ ಈ ವೊಸ್ಟ್ರೋ ಅಕೌಂಟಿಗೆ ಹಾಕಿದರೆ ಸಾಕು, ಆ ನಂತರ ಆ ಹಣವನ್ನ ಆ ವ್ಯಾಪಾರಿಯ ರಷ್ಯಾದ ಖಾತೆಗೆ ವರ್ಗಾವಣೆ ಮಾಡುವ ಕೆಲಸವನ್ನ ರಷ್ಯನ್ ಬ್ಯಾಂಕ್ ಮಾಡುತ್ತದೆ.

ನೋಸ್ಟ್ರೋ ಅಕೌಂಟ್ ಎಂದರೇನು?

ಬೇರೆ ದೇಶದ ಬ್ಯಾಂಕುಗಳು ಭಾರತದಲ್ಲಿ ತಮ್ಮ ಶಾಖೆಯನ್ನ ಹೊಂದಿಲ್ಲದೆ ಇದ್ದ ಸಮಯದಲ್ಲಿ ಭಾರತೀಯ ಬ್ಯಾಂಕಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಯೊಂದಿಗೆ ರೂಪಾಯಿಯಲ್ಲಿ ಸೆಟಲ್ಮೆಂಟ್ ಮಾಡಲು ತೆಗೆಯುವ ಖಾತೆಗೆ ನೋಸ್ಟ್ರೋ ಅಕೌಂಟ್ ಎನ್ನಲಾಗುತ್ತದೆ. ಇಲ್ಲಿನ ಎಲ್ಲಾ ಕೆಲಸಗಳು ವೊಸ್ಟ್ರೋ ಅಕೌಂಟಿನಲ್ಲಿ ನಡೆದಂತೆ ನಡೆಯುತ್ತದೆ. ಹೀಗಾಗಿ ನೋಸ್ಟ್ರೋ ಅಕೌಂಟ್ ನ್ನು ಇನ್ನೊಂದು ವೊಸ್ಟ್ರೋ ಅಕೌಂಟ್ ಎನ್ನಬಹುದು. ಉದಾಹರಣೆ ನೋಡೋಣ.

ರಷ್ಯಾ ದೇಶದ 9 ಬ್ಯಾಂಕುಗಳು ಭಾರತದಲ್ಲಿ ವೊಸ್ಟ್ರೋ ಖಾತೆ ತೆರೆದವು ಎನ್ನುವುದನ್ನ ಮೇಲಿನ ಸಾಲಿನಲ್ಲಿ ಹೇಳಲಾಗಿದೆ ಅಲ್ಲವೇ? ಅದರಲ್ಲಿ gazprom ಎನ್ನುವ ರಷ್ಯಾದ ಬ್ಯಾಂಕ್ ಭಾರತದಲ್ಲಿ ತನ್ನ ಶಾಖೆಯನ್ನ ಹೊಂದಿಲ್ಲದ ಕಾರಣ ಭಾರತದ uco ಬ್ಯಾಂಕಿನಲ್ಲಿ ತನ್ನ ಖಾತೆಯನ್ನ ಅನುಮತಿ ಪಡೆದು ತೆರೆದಿದೆ. ಇದು ವೊಸ್ಟ್ರೋ ಖಾತೆ, ಆದರೆ ಒಂದು ಬ್ಯಾಂಕು ತನ್ನದಲ್ಲದ ಇನ್ನೊಂದು ಬ್ಯಾಂಕಿನಲ್ಲಿ ಖಾತೆಯನ್ನ ಹೊಂದಿರುವುದರಿಂದ ಇದನ್ನ ನೋಸ್ಟ್ರೋ ಖಾತೆ ಎನ್ನಲಾಗುತ್ತದೆ. ಇದೆ ರೀತಿ ರಷ್ಯಾದ ಉಳಿದ 6 ಬ್ಯಾಂಕುಗಳು ಭಾರತದ ಇಂಡಸ್ ಇಂಡ್ ಬ್ಯಾಂಕಿನಲ್ಲಿ ಖಾತೆಯನ್ನ ತೆರೆದಿವೆ.

ಸರಳವಾಗಿ ಹೇಳಬೇಕೆಂದರೆ ಯಾವುದೇ ದೇಶದ ಬ್ಯಾಂಕು ಭಾರತದಲ್ಲಿ ತನ್ನ ಶಾಖೆ ಹೊಂದಿದ್ದು ಅಲ್ಲಿ ರೂಪಾಯಿ ಖಾತೆಯನ್ನ ತೆರೆದೆರೆ ಅದನ್ನ ವೊಸ್ಟ್ರೋ ಖಾತೆ ಎನ್ನಲಾಗುತ್ತದೆ. ಭಾರತದಲ್ಲಿ ಶಾಖೆ ಇರದ ವಿದೇಶಿ ಬ್ಯಾಂಕು ಭಾರತೀಯ ಬ್ಯಾಂಕಿನಲ್ಲಿ ರೂಪಾಯಿ ಖಾತೆಯನ್ನ ತೆರೆದರೆ ಅದನ್ನ ನೋಸ್ಟ್ರೋ ಖಾತೆ ಎನ್ನಲಾಗುತ್ತದೆ. ಆದರೆ ಎರಡೂ ಖಾತೆಗಳ ಕೆಲಸ, ಸೇವೆ ಮಾತ್ರ ಅದೇ ಇರುತ್ತದೆ. ಭಾರತೀಯ ರೂಪಾಯಿಯಲ್ಲಿ ಸೆಟಲ್ ಆಗಿ ಡೆಪಾಸಿಟ್ ಆದ ಹಣವನ್ನ ತನ್ನ ದೇಶದ ವರ್ತಕರ ಖಾತೆಗೆ ತಪುಪಿಸುವುದು ಇವುಗಳ ಮೂಲ ಉದ್ದೇಶ.

ಯುಎಇ, ಸೌದಿ, ರಷ್ಯಾ, ಶ್ರೀಲಂಕಾ, ನೇಪಾಳ, ಬಾಂಗ್ಲಾ ದೇಶದ ಜೊತೆಗೆ ಸ್ಕ್ಯಾಂಡಿನೇವಿಯನ್ ದೇಶಗಳು ಮತ್ತು ಆಫ್ರಿಕಾದ ಹಲವು ದೇಶಗಳು ಸೇರಿ ಒಟ್ಟು 35ಕ್ಕೂ ಅಧಿಕ ದೇಶಗಳು ಭಾರತೀಯ ರೂಪಾಯಿಯಲ್ಲಿ ಟ್ರೇಡ್ ಮಾಡಲು ಆಸಕ್ತಿಯನ್ನ ತೋರಿವೆ. ಇದರ ಮುಂದುವರಿದ ಭಾಗವಾಗಿ ಕಳೆದ ಎರಡು ಮೂರು ತಿಂಗಳಿಂದ ವೊಸ್ಟ್ರೋ ಖಾತೆಗಳನ್ನ ತೆರೆಯಲಾಗುತ್ತಿದೆ. ರಷ್ಯಾ ಇದರಲ್ಲಿ ಅತಿ ದೊಡ್ಡ ಪಾಲುದಾರ ದೇಶ. ರಷ್ಯಾದ 9 ಬ್ಯಾಂಕುಗಳು ಇಲ್ಲಿ ತಮ್ಮ ವೊಸ್ಟ್ರೋ ಖಾತೆಯನ್ನ ತೆರೆದಿವೆ. ಇದು ಭಾರತಕ್ಕೆ ಸಿಕ್ಕ ಜಯ. ಭಾರತ ದೇಶದ ರೂಪಾಯಿ ಜಾಗತಿಕ ಮಟ್ಟದಲ್ಲಿ ತನ್ನ ಹೆಸರನ್ನ ನೋಂದಾಯಿಸಿಕೊಳ್ಳುವತ್ತ ಇದು ಪ್ರಥಮ ದಿಟ್ಟ ಹೆಜ್ಜೆ ಎನ್ನಬಹುದು.

ಈ ವೇಳೆಗೆ ನಿಮ್ಮ ಮನಸ್ಸಿನಲ್ಲಿ, ಭಾರತದ ಟ್ರೇಡ್ ಯೂರೋನಲ್ಲಿ ಆಗಲಿ, ಡಾಲರ್ನಲ್ಲಾಗಲಿ ಅಥವಾ ರೂಪಾಯಿಯಲ್ಲಿ ಇದರಿಂದ ನಮಗೇನು? ಇದಕ್ಕೇಕೆ ಇಷ್ಟು ಮಹತ್ವ ಎನ್ನುವ ಪ್ರಶ್ನೆ ಉದ್ಭವಾಗಿರಬಹುದು. ರೂಪಾಯಿಯಲ್ಲಿ ಟ್ರೇಡ್ ಆಗುವುದರಿಂದ ಆಗುವ ಲಾಭವನ್ನ ತಿಳಿದುಕೊಂಡರೆ ಇದರ ಮಹತ್ವದ ಅರಿವು ಕೂಡ ನಿಮ್ಮದಾಗುತ್ತದೆ.

  1. DCP ಅಂದರೆ ಡಾಮಿನೆಂಟ್ ಕರೆನ್ಸಿ ಪರಡಿಗ್ಮ್ ಗೆ ಕಡಿವಾಣ ಬೀಳಲಿದೆ: ನಿಮಗೆಲ್ಲಾ ತಿಳಿದಿರಲಿ ಇಂದಿಗೂ ಜಾಗತಿಕ ವಹಿವಾಟಿನ 60 ಪ್ರತಿಶತ ರಫ್ತು ವ್ಯವಹಾರ, ಮತ್ತು 86 ಪ್ರತಿಶತ ಆಮದು ವ್ಯವಹಾರ ನಡೆಯುತ್ತಿರುವುದು ಡಾಲರ್ನಲ್ಲಿ! ಹೀಗಾಗಿ ಡಾಲರ್ ಜಾಗತಿಕ ಕರೆನ್ಸಿ ಅಥವಾ ಡಾಮಿನೆಂಟ್ ಕರೆನ್ಸಿ ಎನ್ನಿಸಿಕೊಂಡಿದೆ. ತೈಲ ಬೆಲೆ, ಚಿನ್ನದ ಬೆಲೆ ಎಲ್ಲವನ್ನೂ ಅಳೆಯುವುದು ಡಾಲರ್ ಮೂಲಕ, ಹೀಗಾಗಿ ಅಮೆರಿಕನ್ ಎಕಾನಮಿ ಗಟ್ಟಿಯಾಗಿರಲಿ ಅಥವಾ ಟೊಳ್ಳು ಆಗಿರಲಿ, ಪ್ರಪಂಚದ ಇತರ ದೇಶಗಳು ತಮ್ಮ ಕರೆನ್ಸಿಯನ್ನ ಡಾಲರ್ ಜೊತೆಗೆ ಹೆಚ್ಚು ಅಥವಾ ಕಡಿಮೆ ಮಾಡಿಕೊಂಡು ಹೊಂದಿಸಿಕೊಳ್ಳುವ ಕಸರತ್ತು ನಡೆಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ವ್ಯಾವಹಾರಿಕವಾಗಿ ಅಮೇರಿಕಾ ಭಾರಿ ಕುಸಿತ ಕಂಡಿದ್ದರೂ ಡಾಲರ್ ಬೆಲೆ ಕುಸಿಯದೆ ಇರಲು ಇದು ಬಹಳ ಮುಖ್ಯ ಕಾರಣ. ಡಾಲರ್ ಕುಸಿದರೆ ಜಗತ್ತಿನ ಬಹುತೇಕ ಕರೆನ್ಸಿ, ಆರ್ಥಿಕತೆ ಕೂಡ ಕುಸಿತ ಕಾಣುತ್ತದೆ. ಚೀನಾ ದೇಶದ ಮೇಲಿನ ಹೆಚ್ಚಿನ ಅವಲಂಬನೆ ಜಗತ್ತನ್ನ ಯಾವ ಮಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುವುದು ನಮಗೆಲ್ಲಾ ತಿಳಿದಿದೆ. ಅದೇ ರೀತಿ ಡಾಲರ್ ಮೇಲಿನ ಅತಿ ಹೆಚ್ಚಿನ ಅವಲಂಬನೆ ಕೂಡ ಜಾಗತಿಕ ವಿತ್ತ ಜಗತ್ತಿಗೆ ಒಳ್ಳೆಯದಲ್ಲ. ಆ ನಿಟ್ಟಿನಲ್ಲಿ ಭಾರತದ ಈ ಹೆಜ್ಜೆ ಡಾಲರ್ ಡಾಮಿನೇನ್ಸ್ಗೆ ಕಡಿವಾಣ ಹಾಕಲಿದೆ.
  2. ಜಾಗತಿಕ ಮಟ್ಟದಲ್ಲಿ ಹೆಚ್ಚುವ ಭಾರತದ ತಾಕತ್ತು: ಜಾಗತಿಕ ಮಟ್ಟದಲ್ಲಿ ರುಪಾಯಿಗೆ ಒಂದೊಳ್ಳೆ ಸ್ಥಾನಮಾನ ಸಿಗುತ್ತದೆ. ರಿಲಿಯಬಲ್ ಮತ್ತು ಟ್ರೇಡೆಬಲ್ ಎನ್ನುವ ನಂಬಿಕೆ ಸೃಷ್ಟಿಯಾದರೆ, ಡಾಲರ್ ಮತ್ತು ಯುರೋ ನಂತರದ ಸ್ಥಾನವನ್ನ ಭಾರತ ಪಡೆದುಕೊಳ್ಳಬಹುದು. ಇನ್ನೊಂದಷ್ಟು ವರ್ಷದಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಎಕಾನಮಿ ಎನ್ನುವ ಹೆಗ್ಗಳಿಕೆ ಪಡೆದುಕೊಳ್ಳಲಿರುವ ಭಾರತಕ್ಕೆ ಇದು ಇನ್ನೊಂದು ಹಂತದ ಶಕ್ತಿ ನೀಡುವುದು ಗ್ಯಾರಂಟಿ.
  3. ಟ್ರೇಡ್ ಡೆಫಿಸಿಟ್ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.
  4. ಡಾಲರ್ ಅಥವಾ ಯುರೋ ಬಳಕೆಗೆ ಕೊಡಬೇಕಾಗಿದ್ದ ಕಮಿಷನ್, ವಿನಿಮಯ ಬದಲಾವಣೆಯಲ್ಲಿನ ನಷ್ಟ ತಪ್ಪುತ್ತದೆ. ಇದು ಭಾರತಕ್ಕೆ ಮಾತ್ರವಲ್ಲದೆ, ರೂಪಾಯಿ ಬಳಸುವ ಇತರ ದೇಶಗಳಿಗೂ ಇದರ ಲಾಭ ಸಿಗಲಿದೆ.
  5. ತನ್ನ ಡಾಮಿನೆಂಟ್ ಕರೆನ್ಸಿ ಸ್ಥಾನವನ್ನ ಬಳಸಿಕೊಂಡು ಅಮೇರಿಕಾ ವಿಶ್ವದ ಹಲವು ದೇಶಗಳ ಮೇಲೆ, ಭಾರತ, ರಷ್ಯಾ ಸೇರಿದಂತೆ ಹಲವು ದೇಶಗಳ ಮೇಲೆ ಸ್ಯಾಂಕ್ಷನ್ಸ್ ಅಂದರೆ ಬಹಿಷ್ಕಾರ ಹಾಕುತ್ತಿತ್ತು. ಇದರಿಂದ ಈ ರೀತಿ ಸ್ಯಾಂಕ್ಷನ್ ಗೆ ಒಳಪಟ್ಟ ದೇಶಗಳ ವ್ಯಾಪಾರ ವಹಿವಾಟಿನ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರುತ್ತಿತ್ತು. ದೊಡ್ಡಣ್ಣನ ಈ ರೀತಿಯ ಸ್ಯಾಂಕ್ಷನ್ಗಳು ಇನ್ನು ಮುಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗುತ್ತದೆ.
  6. ಒಂದು ಕರೆನ್ಸಿ ಮೇಲಿನ ಅತಿಯಾದ ಅವಲಂಬನೆಯ ಪ್ರಭಾವದಿಂದ ಇಂದು ಜಗತ್ತು ಈ ಮಟ್ಟದ ಹಣದುಬ್ಬರಕ್ಕೆ ಸಾಕ್ಷಿಯಾಗಿದೆ. ಅಮೇರಿಕಾ ಕೋವಿಡ್ ಸಮಯದಲ್ಲಿ ತನ್ನ ಮರ್ಜಿಗೆ ತಕ್ಕಂತೆ 9 ಟ್ರಿಲಿಯನ್ ಹಣವನ್ನ ಹೊಸದಾಗಿ ಇಂಜೆಕ್ಟ್ ಮಾಡಿತು ಅದರ ಪರಿಣಾಮ ಹಣದುಬ್ಬರ ಇನ್ನಿಲ್ಲದ ಏರಿಕೆಯನ್ನ ಕಂಡಿದೆ. ಮೊದಲೇ ಹೇಳಿದಂತೆ ಜಗತ್ತಿನ ಅತಿ ಮುಖ್ಯವಾದ ಎಲ್ಲವನ್ನೂ ನಾವು ಡಾಲರ್ ನಲ್ಲಿ ಅಳೆಯುವುದರ ಕಾರಣ ಡಾಲರ್ನಲ್ಲಿ ಹಣದುಬ್ಬರ ಹೆಚ್ಚಾದಾಗ ಸಹಜವಾಗೇ ಜಾಗತಿಕವಾಗಿ ಕೂಡ ಹಣದುಬ್ಬರ ಶುರುವಾಯಿತು. ಅಮೇರಿಕಾ ಮಾಡಿದ ಒಂದು ತಪ್ಪು ನಿರ್ಧಾರಕ್ಕೆ ಇಂದು ಜಗತ್ತು ಬೆಲೆ ತೆರುತ್ತಿದೆ. ರೂಪಾಯಿಯಲ್ಲಿ ಟ್ರೇಡ್ ಮಾಡುವುದು ಇಂತಹ ಹುಚ್ಚಾಟಗಳಿಗೆ ಒಂದಷ್ಟು ಬ್ರೇಕ್ ಹಾಕಲಿದೆ.

ಕೊನೆ ಮಾತು: ಜಾಗತಿಕ ವಿತ್ತ ಜಗತ್ತಿನಲ್ಲಿ ಭಾರತ ದಿಟ್ಟವಾದ ಮತ್ತು ಸ್ಪಷ್ಟವಾದ ಹೆಜ್ಜೆಯನ್ನ ಇಡುತ್ತಿದೆ. ಮುಂಬರುವ ದಿನಗಳಲ್ಲಿ ಭಾರತದ ರೂಪಾಯಿ ಜಾಗತಿಕವಾಗಿ ಮಾನ್ಯತೆಯನ್ನ ಪಡೆದುಕೊಳ್ಳಲಿದೆ. ಜಾಗತಿಕ ವಿತ್ತ ನೀತಿಯಿರಬಹುದು ಅಥವಾ ವಿದೇಶಿ ನೀತಿ, ಭಾರತದ ಹೆಜ್ಜೆ ಸುಭದ್ರವಾಗಿದೆ. ಆಂತರಿಕ ಹಣಕಾಸು ನಿಯಮಗಳು ಮತ್ತು ನಿಲುವುಗಳನ್ನ ಕೂಡ ಒಂದಷ್ಟು ಬದಲಾವಣೆಗೆ ಒಗ್ಗಿಸಿಕೊಂಡರೆ ಮುಂಬರುವ ದಿನಗಳಲ್ಲಿ ಭಾರತದ ಯಶೋಗಾಥೆಗೆ ಅಡ್ಡಿ ಎನ್ನುವುದೇ ಇರುವುದಿಲ್ಲ. ಮುಂದಿನ 15/20 ವರ್ಷ ಭಾರತಕ್ಕೆ ಸೇರಿದ್ದು, ಇದರಲ್ಲಿ ಯಾವುದೇ ಅಪನಂಬಿಕೆ ಬೇಡ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com