Layoff ಅಬ್ಬರದ ಜೊತೆಗೂ ಇದ್ದೆ ಇದೆ Ray of hope! (ಹಣಕ್ಲಾಸು)

ಹಣಕ್ಲಾಸು-348ರಂಗಸ್ವಾಮಿ ಮೂನಕನಹಳ್ಳಿ
ಉದ್ಯೋಗ ಕಡಿತ (ಸಾಂಕೇತಿಕ ಚಿತ್ರ)
ಉದ್ಯೋಗ ಕಡಿತ (ಸಾಂಕೇತಿಕ ಚಿತ್ರ)

ಜಗತ್ತಿನಾದ್ಯಂತ ಇಂದಿನ ಹೊಸ ಕೂಗು ಏನು ಎನ್ನುವುದು ನಿಮಗೆಲ್ಲಾ ಗೊತ್ತೇ ಇರುತ್ತದೆ. job cut, Layoff ಎನ್ನುವುದು ಇಂದಿಗೆ ಸಾಮಾನ್ಯ ಪದವಾಗಿದೆ. 

ಗೂಗಲ್, ಯಾಹೂ, ಅಮೆಜಾನ್ ಸಂಸ್ಥೆಗಳು ಇಷ್ಟು ಸಾವಿರ ಜನರನ್ನ ಕೆಲಸದಿಂದ ತೆಗೆದವಂತೆ, ಇನ್ನಾವುದೋ ಸಂಸ್ಥೆಯಲ್ಲಿ ಇನ್ನಷ್ಟು ಸಾವಿರ ಕೆಲಸ ಹೋಗುತ್ತದಂತೆ ಎನ್ನುವ ಸುದ್ದಿಗಳದ್ದೆ ಸಾಮ್ರಾಜ್ಯವಾಗಿದೆ. ಸಂಸ್ಥೆಗಳು ಕೂಡ 2023ನ್ನ ಅತ್ಯಂತ ಕಠಿಣ ವರ್ಷವೆಂದು ಪರಿಗಣಿಸಿವೆ. 

ಹೊಸ ನೇಮಕಾತಿಗಳಿಗೆ ತಡೆ ಸಂದೇಶ ಒಡ್ಡಿಯಾಗಿದೆ, ಅದರ ಜೊತೆಗೆ ಬೇಕಿಲ್ಲದ ಕೆಲಸಗಾರರನ್ನ ಕೆಲಸದಿಂದ ತೆಗೆಯುವ ಕೆಲಸ ಕೂಡ ವೇಗವಾಗಿ ನಡೆದಿದೆ. ಸಾಫ್ಟ್ವೇರ್ ಸಂಸ್ಥೆಗಳು ಹೇಗೆ ಕೆಲಸ ನಿರ್ವಹಿಸುತ್ತವೆ ಎನ್ನುವುದನ್ನ ತಿಳಿದವರಿಗೆ ಅಥವಾ ಅಲ್ಲಿ ಕೆಲಸ ಮಾಡುತ್ತಿರುವವರಿಗೆ ಇದೇನು ದೊಡ್ಡ ಸುದ್ದಿಯಲ್ಲ, ಏಕೆಂದರೆ ಇಂದಿನ ಅಸ್ಥಿರ ಪ್ರಪಂಚದಲ್ಲಿ ಕೆಲಸಗಾರರನ್ನ ಉಳಿಸಿಕೊಳ್ಳುವುದು ಹರ್ಕ್ಯುಲೆಸ್ ಟಾಸ್ಕ್, ಹೀಗಾಗಿ ಸಂಸ್ಥೆಗಳು ಸಾಮಾನ್ಯ ಸಮಯದಲ್ಲಿ ಬೆಂಚ್ ಸ್ಟ್ರೆಂಥ್ ಇಟ್ಟುಕೊಂಡಿರುತ್ತವೆ. ಅಂದರೆ ಆಕಸ್ಮಿಕವಾಗಿ ಒಬ್ಬ ಕೆಲಸಗಾರ ಬಿಟ್ಟರೆ ಅವನ ಜಾಗಕ್ಕೆ ಇನ್ನೊಬ್ಬ ಕೆಲಸಗಾರನನ್ನ ಸಿದ್ಧವಿಟ್ಟುಕೊಂಡಿರುತ್ತದೆ. 

ಗಮನಿಸಿ ನೋಡಿ ಒಂದೇ ಕೆಲಸಕ್ಕೆ ಕೆಲವೊಮ್ಮೆ ಇಬ್ಬರಿಗಿಂತ ಹೆಚ್ಚು ಬ್ಯಾಕ್ ಅಪ್ ಇಟ್ಟುಕೊಂಡಿರುತ್ತಾರೆ. ಯಾವಾಗ ಆರ್ಥಿಕ ಬಿಕ್ಕಟ್ಟು ಅಥವಾ ಸಂಸ್ಥೆಯ ಲಾಭದಲ್ಲಿ ಕುಸಿತ ಉಂಟಾಗಲು ಶುರುವಾಗುತ್ತದೆ ಆಗ ಮೊದಲು ಕೆಲಸ ಕಳೆದುಕೊಳ್ಳುವವರು ಈ ರೀತಿಯ ಬೆಂಚ್ನಲ್ಲಿ ಕುಳಿತವರು. ಇದರಲ್ಲೂ ಎಕ್ಸೆಪ್ಶನ್ ಇಲ್ಲವೆಂದಿಲ್ಲ. ಹೆಚ್ಚು ವೇತನವಿರುವ ಕೆಲಸಗಾರರಿಗೆ ಬಾಗಿಲು ತೋರಿಸಿ, ಬೆಂಚ್ನಲ್ಲಿದ್ದ ಟ್ಯಾಲೆಂಟ್ಗಳನ್ನ ಬಳಸಿಕೊಳ್ಳಲು ಹವಣಿಸುವ ಸಂಸ್ಥೆಗಳಿಗೂ ಕಡಿಮೆಯಿಲ್ಲ.

ಒಟ್ಟಿನಲ್ಲಿ ದೊಡ್ಡ ಕಾರ್ಪೊರೇಟ್ ಹೌಸ್ಗಳಲ್ಲಿ ಕೆಲಸ ಸಿಕ್ಕಿದೆ, ಸಂಬಳವೂ ದೊಡ್ಡದಿದೆ ಎಂದು ಮೆರೆಯುವಂತಿಲ್ಲ, ಬಂದ ಹಣವನ್ನೆಲ್ಲಾ ಖರ್ಚು ಮಾಡಿದ್ದವರು ಇಂದು ತಲೆ ಕೆರೆದುಕೊಳ್ಳುವ ಪರಿಸ್ಥಿತಿ ನಿರ್ಮಾವಾಗಿರುತ್ತದೆ. ಯಾರೊಬ್ಬರು ನಿಯಮಿತವಾಗಿ ಉಳಿತಾಯ ಮತ್ತು ಹೂಡಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಅವರ ಪಾಲಿಗೆ ಇದೊಂದು ಸಾಗಿ ಹೋಗುವ ಮೋಡದಂತೆ! ನಾಳೆ ಎನ್ನುವ ಹೊಸ ಭರವಸೆ ಜೊತೆಗಿದ್ದೇ ಇರುತ್ತದೆ. ವೈಯಕ್ತಿಕ ಆರ್ಥಿಕ ಪರಿಸ್ಥಿತಿ ಹೇಗೆ ಇರಲಿ, ಕೆಲಸ ಹೋಯ್ತು, ಕೆಲಸದಿಂದ ತೆಗೆದರು ಎಂದ ತಕ್ಷಣ ಒಂದಷ್ಟು ವಿಷಯಗಳನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಸಮಯದಲ್ಲಿ ಆತುರದ ಮಾತು, ನಿರ್ಧಾರಗಳು ಒಳ್ಳೆಯದಲ್ಲ. ಸರಿ ಹಾಗಾದರೆ ಇಂತಹ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮೂಲಭೂತ ನಿರ್ಧಾರಗಳು ಯಾವುವು ಎನ್ನುವುದನ್ನ ನೋಡೋಣ. ವ್ಯಕ್ತಿಯಿಂದ ವ್ಯಕ್ತಿಗೆ ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಇರಬಹುದು, ಅದನ್ನ ಗಮನಿಸಬೇಕಾಗುತ್ತದೆ. ಅವರವರ ಪರಿಸ್ಥಿತಿಗೆ ಅನುಗುಣವಾಗಿ ಬೇಕಾದ ಹೊಂದಾಣಿಕೆ (Adjustments) ಮಾಡಿಕೊಳ್ಳಬೇಕಾಗುತ್ತದೆ.  

  1. ಕೆಲಸವಿಲ್ಲ ಎನ್ನುವುದನ್ನ ಸರಿಯಾಗಿ ಮನನ ಮಾಡಿಕೊಳ್ಳಲು ವೇಳೆ ತೆಗೆದುಕೊಳ್ಳಿ: ನೀವು ಯಾವುದೇ ಸಂಸ್ಥೆಯಲ್ಲಿರಿ, ಎಷ್ಟೇ ವರ್ಷ ನೀವು ಸೇವೆ ಸಲ್ಲಿಸಿರಿ, ಸಂಸ್ಥೆ ತನ್ನ ಉಳಿವಿನ, ಲಾಭದ ವಿಷಯ ಬಂದಾಗ ಮುಲಾಜಿಲ್ಲದೆ ತನಗೆ ಬೇಕಾದ ನಿರ್ಧಾರಗಳನ್ನ ಕೈಗೊಳ್ಳುತ್ತದೆ. ಇದು ಸತ್ಯ. ಹೀಗಾಗಿ ಕೆಲಸದಿಂದ ತೆಗೆದರು ಎಂದ ತಕ್ಷಣ ಅದನ್ನ ಜಗತ್ತಿಗೆ ಹೇಳುವ ಆತುರ ಬೇಡ. ಇದಂತೂ ಹೇಳಿಕೇಳಿ ಸೋಷಿಯಲ್ ಮೀಡಿಯಾ ಯುಗ. ಜಸ್ಟ್ ಗಾಟ್ ಫೈರ್ಡ್ ಅಂತಲೋ, ಇನ್ನೇನೋ ಹಾಕುವ ಆತುರ ಖಂಡಿತ ಬೇಡ. ಬದಲಿಗೆ ಸಂಸ್ಥೆಯಲ್ಲಿ ಒಟ್ಟು ಎಷ್ಟು ವರ್ಷದ ಸೇವೆ ಸಲ್ಲಿಸಿದ್ದೇನೆ, ಹೀಗೆ ಕೆಲಸದಿಂದ ವಜಾ ಮಾಡಿರುವ ಕಾರಣ ಎಷ್ಟು ಹಣ ಸಂಸ್ಥೆಯಿಂದ ಬರಲಿದೆ, ಹೀಗೆ ಬರಬಹುದಾದ ಸಂಭಾವ್ಯ ಹಣದಿಂದ ಎಷ್ಟು ತಿಂಗಳು ಜೀವನ ನಡೆಸಬಹುದು. ಮುಂದಿನ ದಾರಿಯೇನು? ಯಾವ ಮಾರ್ಗದಲ್ಲಿ ನಡೆದರೆ ಉತ್ತಮ? ಇಂತಹ ವಿಷಯಗಳ ಬಗ್ಗೆ ಲೈಫ್ ಪಾರ್ಟ್ನರ್ ಬಳಿ ಚರ್ಚಿಸುವುದು ಒಳ್ಳೆಯದು. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸ್ಥಿತಿಯ ಬಗ್ಗೆ ಮರುಕ ತೋರಿದವರು, ಲೈಕ್ ಹಾಕಿದವರು ಯಾರೂ ಸಹಾಯಕ್ಕೆ ಬರುವುದಿಲ್ಲ ಎನ್ನವುದನ್ನ ಬೇಗ ಅರಿತುಕೊಳ್ಳಬೇಕು. ಎಲ್ಲಕ್ಕೂ ಮೊದಲು 'ಇಂದಿನಿಂದ ನನಗೆ ಕೆಲಸವಿಲ್ಲ, ಅಂದರೆ ಆದಾಯ ನೀಡುವ ಕೆಲಸವಿಲ್ಲ' ಎನ್ನುವುದನ್ನ ಮೊದಲು ಮನನ ಮಾಡಿಕೊಳ್ಳಬೇಕು. ನಮ್ಮ ಸದ್ಯದ ಪರಿಸ್ಥಿತಿಯನ್ನ ಒಪ್ಪಿಕೊಳ್ಳುವು ಅರ್ಧ ಜಯಗಳಿಸದಂತೆ!  
  2. ಜಾಬ್ ಮಾರ್ಕೆಟ್ ಹೇಗೆ ವ್ಯವಹರಿಸುತ್ತಿದೆ, ಅಲ್ಲಿಗೇನು ಅವಶ್ಯಕೆತೆಯಿದೆ ಎನ್ನುವುದರ ಅರಿವಿರಲಿ: ನಮ್ಮ ಪರಿಸ್ಥಿತಿಯನ್ನ ಒಪ್ಪಿಕೊಂಡ ನಂತರ ಮಾಡಬೇಕಾದ ಕೆಲಸ ಜಾಬ್ ಮಾರ್ಕೆಟ್ ಹೇಗಿದೆ? ನಮ್ಮ ಲೈನ್ನಲ್ಲಿ ಬೇರೆ ಸಂಸ್ಥೆಗಳು ಹೇಗೆ ವ್ಯವಹರಿಸುತ್ತಿವೆ? ಹಾಗೊಮ್ಮೆ ಸದ್ಯದ ಡೊಮೈನ್ನಲ್ಲಿ ಕೆಲಸ ಸಿಗುವುದು ಕಷ್ಟವಿದ್ದು, ಅಲ್ಪಸ್ವಲ್ಪ ಬದಲಾವಣೆ, ಹೊಸ ಸ್ಕಿಲ್ ಕಲಿಯುವುದರಿಂದ ಕೆಲಸ ಪಡೆದುಕೊಳ್ಳುವುದು ಸಾಧ್ಯವೇ? ಮಾರುಕಟ್ಟೆ ಏನನ್ನ ಬಯಸುತ್ತಿದೆ? ಎನ್ನುವುದನ್ನ ಅರಿತುಕೊಳ್ಳಬೇಕು. ನೆನಪಿರಲಿ ಸಮಾಜ ನಮಗಾಗಿ ಬದಲಾಗುವುದಿಲ್ಲ, ನಾವು ಸಮಾಜಕ್ಕೆ ತಕ್ಕಂತೆ ಬದಲಾಗಬೇಕು. ಅಲ್ಲಿನ ಅವಶ್ಯಕತೆಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು.
  3. ಹೊಸ ಕೌಶಲ್ಯ ವೃದ್ಧಿಯ ಕಡೆಗೆ ಗಮನವಿರಲಿ: ಮಾರ್ಕೆಟ್ ಏನನ್ನ ಬಯಸುತ್ತದೆ ಎನ್ನವುದರ ಆಧಾರದ ಮೇಲೆ ಮತ್ತು ನಮ್ಮಿಂದ ಆ ಸಾಲಿನಲ್ಲಿ ಬದಲಾವಣೆ ಮಾಡಿಕೊಂಡು ಮುಂದುವರೆಯಲು ಸಾಧ್ಯವಾದರೆ ಅಂತಹ ಕೌಶಲ್ಯ ವೃದ್ಧಿಯ ಕಡೆಗೆ ಗಮನ ಕೊಡಬೇಕು. ಮೂಲ ವೃತ್ತಿಯನ್ನ ಬಿಟ್ಟು ಪೂರ್ಣವಾಗಿ ಹೊಸ ಕಲಿಕೆಯ ಮೂಲಕ ಹೊಸ ವೃತ್ತಿಯಲ್ಲಿ ತೊಡಗಿಸಿಕೊಂಡವರನ್ನ ಕಂಡಿದ್ದೇನೆ, ಹೀಗಾಗಿ ಈ ಮಾತುಗಳನ್ನ ಬರೆಯುತ್ತಿದ್ದೇನೆ. ಎಲ್ಲಿಯವರೆಗೆ ಕಲಿಕೆಯ ಹಂಬಲ ನಮ್ಮ ಜೊತೆಗಿರುತ್ತದೆ ಅಲ್ಲಿಯವರೆಗೆ ಭಯಪಡುವ ಅವಶ್ಯಕತೆಯಿಲ್ಲ. ಬದುಕಿನ ಯಾವುದೋ ಒಂದು ಹಂತದಲ್ಲಿ ಪಡೆದ ಪದವಿ ಸರ್ಟಿಫಿಕೇಟ್ ಬದುಕಿನ ಪೂರ್ತಿ ಅನ್ನ ಹಾಕುತ್ತದೆ ಎನ್ನುವುದು ಮಿಥ್ಯೆ.
  4. ಯಾವುದು ಮೊದಲು ಸಿಗುತ್ತದೆ ಆ ಕೆಲಸಕ್ಕೆ ಹೋಗುತ್ತೇನೆ ಎನ್ನುವ ಆತುರ ಬೇಡ: ಕೆಲಸ ಕಳೆದುಕೊಂಡ ನಂತರ ಸಿಕ್ಕ ಮೊದಲ ಆಫ಼ರ್ಗೆ ಜೈ ಎನ್ನುವುದು ಬೇಡ. ನಿಮ್ಮ ಕಾರ್ಯ ಕ್ಷಮತೆಯ ಮೇಲೆ ನಿಮಗೆ ಅಗಾಧ ವಿಶ್ವಾಸವಿದ್ದರೆ ಸಾಕು, ಉಳಿದದ್ದು ತಾನಾಗೇ ಜೊತೆಯಾಗುತ್ತವೆ. ತಾಳ್ಮೆಯಿರಲಿ, ಉತ್ತಮ ಅವಕಾಶಗಳು ಇದ್ದೇ ಇರುತ್ತವೆ. ಭಯ ಮತ್ತು ಅನಿವಾರ್ಯತೆ ಸೃಷ್ಟಿಸುವ 'ಖೆಡ್ಡಾ' ದಲ್ಲಿ ಬೀಳುವುದು ಅತಿ ಸುಲಭ. ನಮ್ಮ ಮೇಲಿನ ಕ್ಷಮತೆ ಬಗ್ಗೆ ನಂಬಿಕೆ ಅತಿ ಮುಖ್ಯ. ಎಲ್ಲಕ್ಕಿಂತ ಅತಿ ಮುಖ್ಯವಾಗಿ ಇದು ಸಂಕಷ್ಟದ ಸಮಯ ಕೆಲಸ ಸಿಕ್ಕುವುದೆ ಪುಣ್ಯ ಎನ್ನುವ ಮನಸ್ಥಿತಿಯಿಂದ ಹೊರಬರಬೇಕು. ಹತ್ತಾರು ಸಂಸ್ಥೆಗಳು ಇಂತಹ ಸಮಯದ ಉಪಯೋಗ ಪಡೆದುಕೊಂಡು ಉತ್ತಮ ಕೆಲಸಗಾರರನ್ನ ಕಡಿಮೆ ವೇತನಕ್ಕೆ ಸೇರಿಸಿಕೊಳ್ಳಲು ಹವಣಿಸುತ್ತವೆ. ನೀವು ನಿಜವಾದ ಕ್ಷಮತೆ ಹೊಂದಿದ್ದರೆ, ನೀವು ಕೇಳಿದ ವೇತನಕ್ಕೆ ಅವುಗಳು ಸೇರಿಸಿಕೊಳ್ಳುತ್ತವೆ. ನೆನಪಿರಲಿ ಇಂದಿನ ಸಮಾಜದಲ್ಲಿ ಸಂಸ್ಥೆಗೆ ಆಸ್ತಿಯಾಗಬಲ್ಲ ವ್ಯಕ್ತಿಯನ್ನ ಕೇಳಿದ ವೇತನ ಕೊಟ್ಟು ಸಂಸ್ಥೆಗಳು ಸೇರಿಸಿಕೊಳ್ಳುತ್ತವೆ.
  5. ನಿಮ್ಮ ಕುಸಿದ ಆರ್ಥಿಕತೆ ಜಗತ್ತಿಗೆ ತಿಳಿಸುವುದು ಬೇಡ:  ನೀವು ಆರ್ಥಿಕವಾಗಿ ಸಬಲರಲ್ಲದೆ ಇರಬಹುದು ಆದರೆ ಅದನ್ನ ಜಗತ್ತಿಗೆ ತೋರಿಸಿಕೊಳ್ಳುವ ಅಗತ್ಯವಿಲ್ಲ. ಮೊದಲೇ ಹೇಳಿದಂತೆ ಐ ಆಮ್ ಔಟ್ ಆಫ್ ಜಾಬ್ ಎನ್ನುವುದು , ಐ ಆಮ್ ಬ್ರೋಕ್ ಎನ್ನುವ ಮಾತುಗಳನ್ನ ಸೋಶಿಯಲ್ ಮೀಡಿಯಾ ಅಥವಾ ಇನ್ನ್ಯಾರ ಬಳಿಯೂ ಹೇಳುವ ಅವಶ್ಯಕತೆಯಿಲ್ಲ. ಈ ಮಾತುಗಳು ವ್ಯಕ್ತಿಯನ್ನ ಒತ್ತಡಕ್ಕೆ ಸಿಲುಕಿಸುತ್ತವೆ. ಒತ್ತಡದಲ್ಲಿ ಮಾತು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರುತ್ತವೆ ಎನ್ನುವ ಗ್ಯಾರಂಟಿ ಇಲ್ಲ. ಇದರ ಜೊತೆಗೆ ಸಮಾಜದ ಕೊನೆಯ ವ್ಯಕ್ತಿ ಕೂಡ ಇಲ್ಲಸಲ್ಲದ ಸಲಹೆಗಳನ್ನ ನೀಡಲು ಶುರು ಮಾಡುತ್ತಾನೆ. ಆದರೆ ವೃತ್ತಿನಿರತ ಸ್ನೇಹವರ್ಗದಲ್ಲಿ ಕೆಲಸದ ಹುಡಕಾಟ ಶುರು ಮಾಡಬೇಕು. ಅಲ್ಲಿಯೂ ಮಿತಿ ಮೀರಿದ ಮಾತುಗಳಿಗೆ ಕತ್ತರಿಹಾಕುವುದು ಉತ್ತಮ.
  6. ಕೆಲಸದಿಂದ ತೆಗೆದು ಹಾಕಿದ ಸಂಸ್ಥೆಯ ಬಗ್ಗೆ ಆಕ್ರೋಶ ಬೇಡ: ಕೆಲಸ ಹೋದ ತಕ್ಷಣ 'ಇಷ್ಟು ವರ್ಷ ಸಂಸ್ಥೆಗೆ ದುಡಿದರೂ, ಕೆಲಸದಿಂದ ತೆಗೆದು ಬಿಟ್ಟರಲ್ಲ' ಎನ್ನುವ ಆಕ್ರೋಶ, ಬೇಸರದ ಮನಸ್ಥಿತಿ ಉಂಟಾಗುತ್ತದೆ. ಸಂಸ್ಥೆಯನ್ನ ನಿಂದಿಸುವ ಪೋಸ್ಟ್ ಹಾಕುವುದು ಸಾಧುವಲ್ಲ. ನಿಮ್ಮ ಸೋಶಿಯಲ್ ಮೀಡಿಯಾದಲ್ಲಿನ ನಡವಳಿಕೆಯನ್ನ ಕೂಡ ಸಮಾಜ ಗಮನಿಸಿರುತ್ತದೆ. ಮುಂದಿನ ಕೆಲಸದ ವೇಳೆ ಅದು ಮುಳ್ಳಾಗಬಹುದು. ಬದಲಿಗೆ ಅಷ್ಟು ವರ್ಷ ಕಲಿಕೆಗೆ ಸಹಾಯಕವಾದ ವ್ಯಕ್ತಿಗಳ ಬಗ್ಗೆ ಒಂದೊಳ್ಳೆ ಮಾತು ಬರೆದು ಹಾಕಿ , ಬದುಕು ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.
  7. ಮುಂದೆ ಹೀಗಾಗುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇಲ್ಲ, ಸೊ ಅನಿರೀಕ್ಷಿತ ಸನ್ನಿವೇಶಕ್ಕೆ ಉಳಿಕೆ ಅಗತ್ಯ: ಕೆಲಸ ಹೋಯ್ತು ಎನ್ನುವುದು ಕೂಡ ಬದುಕಿನ ಒಂದು ಹಂತವೇ ಹೊರತು ಸದಾ ಅದೇ ಸ್ಥಿತಿಯಲ್ಲಿ ಯಾರೂ ಇರುವುದಿಲ್ಲ. ಬದುಕು ಜೀವನ್ಮುಖಿ, ಒಂದಲ್ಲ ಒಂದು ದಾರಿ ತೆರೆದುಕೊಳ್ಳುತ್ತದೆ. ಆದರೆ ಹೊಸ ಬದುಕಿನಲ್ಲಿ ಮರೆಯದೆ ಮಾಡಬೇಕಾದ ಕೆಲಸ ಅನಿಶ್ಚಿತ ಸಮಯಕ್ಕೆ, ಸನ್ನಿವೇಶಗಳಿಗೆ ಎಂದು ಒಂದಷ್ಟು ಹಣವನ್ನ ತೆಗೆದಿಡುವುದು. ರಾಗಿಕಲ್ಲು ಆಡುತ್ತಿದ್ದರೆ ರಾಜ್ಯವೆಲ್ಲಾ ಬಳಗ ಎನ್ನುವ ಮಾತಿದೆ. ರಾಗಿಕಲ್ಲು ಆಡುವುದು ನಿಂತರೆ ಮನೆಯಲ್ಲಿ ಸೊಳ್ಳೆ, ನೊಣ ಕೂಡ ಇರುವುದಿಲ್ಲ. ಹೀಗಾಗಿ ಹಣವನ್ನ ಜತನದಿಂದ ಮುಂದಿನ ದಿನಗಳಿಗೆ ಎಂದು ಕಾಪಿಡುವುದು ಅವಶ್ಯಕ.

ಕೊನೆಮಾತು: ನೀವು ಗಮನಿಸಿ ನೋಡಿ, ನಮ್ಮ ಪೋಷಕರು, ಅಥವಾ ನಮ್ಮ ಅಜ್ಜ ಅಜ್ಜಿಯರು ಅದ್ಯಾವ ಕಾರ್ಪೊರೇಟ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದರು? ಆದರೂ ಅವರು ನೆಮ್ಮದಿಯಿಂದ, ಖುಷಿಯಾಗಿ ಜೀವನ ಸವೆಸಿ ಹೋಗಲಿಲ್ಲವೇ? ಅವರೆಂದೂ ನಾವು ಕಂಡಷ್ಟು ಹಣವನ್ನ ಕಾಣಲಿಲ್ಲ ಆದರೂ ಅವರು ನಮಗಿಂತ ಆರೋಗ್ಯವಂತರಾಗಿ, ಖುಷಿಯಾಗಿ ಇರಲಿಲ್ಲವೇ? ಹೌದು ಅವರು ಹಾಗೆ ಇರಲು ಪ್ರಮುಖ ಕಾರಣ ಇದ್ದ ಸಂಪನ್ಮೂಲದಲ್ಲಿ ಬದುಕುವ ಅವರ ಗುಣ. ಇಂದಿಗೆ ನಾವು ಮುಂಬರುವ ಹತ್ತಾರು ವರ್ಷಗಳಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನ ಇಂದೇ ಊಹಿಸಿಕೊಂಡು ಅದನ್ನ ಪಡೆದುಕೊಂಡು ಇಂದಿಗೆ ನಮಗೆ ಎಟುಕದ ಬದುಕನ್ನ ಗಳಿಸಿಕೊಳ್ಳಲು ಹೋಗುತೇವಲ್ಲ ಅದೇ ನಮ್ಮ ಇಂದಿನ ದುಸ್ಥಿತಿಗೆ ಕಾರಣ. ಎಲ್ಲಿಯವರೆಗೆ ನಾವು ನಾವು ಬದುಕುವ ಶೈಲಿ ಬದಲಿಸಕೊಳ್ಳುವುದಿಲ್ಲ ಅಲ್ಲಿಯವರೆಗೆ ಈ ನೋವುಗಳು ಕೂಡ ತಪ್ಪುವುದಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com