ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್ ನಲ್ಲಿ ಹೂಡಿಕೆಯ ಸಾಧಕ, ಬಾಧಕಗಳ ಬಗ್ಗೆ ಇಲ್ಲಿದೆ ಮಾಹಿತಿ (ಹಣಕ್ಲಾಸು)

ಹಣಕ್ಲಾಸು-357ರಂಗಸ್ವಾಮಿ ಮೂನಕನಹಳ್ಳಿ
ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್
ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್

ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್ ಎನ್ನುವುದು ಒಂದು ಸೇವೆ ಅಥವಾ ಸೌಲಭ್ಯ. ಇಂತಹ ಸೇವೆ ಅಥವಾ ಸೌಲಭ ನೀಡುವ ಸಂಸ್ಥೆಗಳು ಗ್ರಾಹಕ ಅಥವಾ ಹೂಡಿಕೆದಾರನ ಬಯಕೆಗಳಿಗೆ ಅನುಗುಣವಾಗಿ ಹಣವನ್ನ ಸ್ಟಾಕ್ಸ್, ಫಿಕ್ಸೆಡ್ ಇನ್ಕಮ್, ಕಮಾಡಿಟಿಸ್, ರಿಯಲ್ ಎಸ್ಟೇಟ್, ಕ್ಯಾಶ್ ಜೊತೆಗೆ ಇನ್ನಷ್ಟು ಅಸೆಟ್ ಕ್ಲಾಸ್ನಲ್ಲಿ ಹೂಡಿಕೆ ಮಾಡುತ್ತಾರೆ.

ಪಿಎಂಸ್ ಎಂದು ಪ್ರಸಿದ್ಧವಾಗಿರುವ ಈ ಸೇವೆ ಅಥವಾ ಸೌಲಭ್ಯ ಕೂಡ ಹಲವು ವಿಧಗಳಲ್ಲಿ ಲಭ್ಯವಿದೆ.

  1. ಆಕ್ಟಿವ್ ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್: ಮಾರುಕಟ್ಟೆ ಸೂಚ್ಯಂಕಕ್ಕಿಂತ ಮೀರಿ ಉತ್ತಮ ಗುರಿಯನ್ನ ತಲುಪುವುದು ಇದರ ಉದ್ದೇಶ. ಹೀಗಾಗಿ ಸದಾ ಚಟುವಟಿಕೆಯಿಂದ ಈ ಆಕ್ಟಿವ್ ಪೋರ್ಟ್ ಫೋಲಿಯೋ ಇರುತ್ತದೆ. ಮೊದಲೇ ಹೇಳಿದಂತೆ ಮಾರ್ಕೆಟ್ ಇಂಡೆಕ್ಸ್ ಮೀರಿ ಲಾಭಗಳಿಸಲು ಇನ್ಸ್ಟಿಟ್ಯೂಷನಲ್ ರಿಸೆರ್ಚ್, ಟ್ರಾಕಿಂಗ್ ಇಂಡೆಕ್ಸ್, ಸದಾ ಟ್ರೇಡಿಂಗ್ನಲ್ಲಿ ತೊಡಗಿಕೊಳ್ಳುವುದನ್ನ ನಾವಿಲ್ಲಿ ಕಾಣಬಹುದು. ಹೆಚ್ಚಿನ ಲಾಭಂಶ ಗಳಿಸುವುದು ಉದ್ದೇಶವಾದ ಕಾರಣ ಇದರಲ್ಲಿ ಅಪಾಯ ಕೂಡ ಹೆಚ್ಚಾಗಿರುತ್ತದೆ.
  2. ಪ್ಯಾಸಿವ್ ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್: ಇಲ್ಲಿ ಹೂಡಿಕೆಯ ಮೇಲಿನ ಲಾಭವನ್ನ ಮಾರುಕಟ್ಟೆ ಇಂಡೆಕ್ಸ್ ಜೊತೆಗೆ ಲಿಂಕ್ ಮಾಡಿರುತ್ತಾರೆ. ಅಂದರೆ ಲಾಭ ಮರುಕಟ್ಟೆಯಲ್ಲೇನಿದೆ ಅಷ್ಟು ಬಂದರೆ ಸಾಕು ಎನ್ನುವ ತತ್ವ. ಇಲ್ಲಿ ಮಾರ್ಕೆಟ್ ಇಂಡೆಸಸ್ ನ ಮಿಮಿಕ್ ಮಾಡಲಾಗುತ್ತದೆ. ಹೀಗಾಗಿ ಟ್ರಾನ್ಸಾಕ್ಷನ್ ಕಾಸ್ಟ್ ಕೂಡ ಕಡಿಮೆ ಇರುತ್ತದೆ. ಆಕ್ಟಿವ್ ಪೋರ್ಟ್ ಫೋಲಿಯೋದಲ್ಲಿ ಕಂಡಷ್ಟು ಚಟುವಟಿಕೆ ನಿಮಗೆ ಇಲ್ಲಿ ಕಾಣಸಿಗುವುದಿಲ್ಲ. ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಕಾರಣದಿಂದ ಇಲ್ಲಿನ ಲಾಭ ಅಥವಾ ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ ಕೂಡ ಕಡಿಮೆ ಇರುತ್ತದೆ.
  3. ಡಿಸ್ಕ್ರಿಷನರಿ ಪೋರ್ಟ್ ಫೋಲಿಯೋ ​ಮ್ಯಾನೇಜ್ಮೆಂಟ್: ಇಲ್ಲಿ ಹೂಡಿಕೆದಾರ ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳುವುದಿಲ್ಲ ಬದಲಿಗೆ ಪೋರ್ಟ್ ಫೋಲಿಯೋ ಮ್ಯಾನೇಜರ್ ಗೆ ತನ್ನ ಪರವಾಗಿ ಎಲ್ಲಾ ನಿರ್ಧಾರಗಳನ್ನ ತೆಗೆದುಕೊಳ್ಳುವ ಅನುಮತಿಯನ್ನ ನೀಡಲಾಗುತ್ತದೆ. ಯಾವ ಸ್ಟ್ರಾಟೆಜಿ ಬಳಸಬೇಕು, ಹೇಗೆ ಹೆಚ್ಚಿನ ಲಾಭಗಳಿಸಬೇಕು ಇತ್ಯಾದಿಗಳನ್ನ ಪೋರ್ಟ್ ಫೋಲಿಯೋ ಮ್ಯಾನೇಜರ್ ನೋಡಿಕೊಳ್ಳುತ್ತಾರೆ. ಸಮಯದ ಅಭಾವವಿರುವ ಮತ್ತು ಹೆಚ್ಚಿನ ಜ್ಞಾನವಿರದ ಆದರೆ ಹಣವಿರುವವರಿಗೆ ಇದು ಹೊಂದಿಕೆಯಾಗುತ್ತದೆ.
  4. ನಾನ್ ಡಿಸ್ಕ್ರಿಷನರಿ ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್: ಇಲ್ಲಿ ಮ್ಯಾನೇಜರ್ ಕೇವಲ ಇನ್ವೆಸ್ಟ್ಮೆಂಟ್ ಐಡಿಯಾಗಳನ್ನ ಮಾತ್ರ ಹೇಳುತ್ತಾರೆ. ಉಳಿದಂತೆ ಹೂಡಿಕೆ ಮಾಡುವುದು, ಕೊಳ್ಳುವ ಮತ್ತು ಮಾರುವ ಸಮಯ ಎಲ್ಲವನ್ನೂ ಹೂಡಿಕೆದಾರನೇ ಮಾಡಬೇಕಾಗುತ್ತದೆ. ಇಲ್ಲಿ ಪೋರ್ಟ್ ಫೋಲಿಯೋ ಮ್ಯಾನೇಜರ್ ಅವರ ಪಾತ್ರ ಬಹಳ ಸೀಮಿತವಾಗಿರುತ್ತದೆ.

ನಮಗೇನು ಬೇಕು? ಯಾವ ಸೇವೆ ಅಥವಾ ಸೌಲಭ್ಯ ಪಡೆಯಬೇಕು ಎನ್ನುವುದನ್ನ ಹೂಡಿಕೆದಾರ ಮೊದಲಿಗೆ ನಿರ್ಧರಿಸಬೇಕು. ಕಾಸಿಗೆ ತಕ್ಕ ಕಜ್ಜಾಯ ಎನ್ನುವ ಮಾತಿದೆ ಹಾಗೆ ಯಾವ ಸೇವೆ ಬಯಸುತ್ತೇವೆ ಅದಕ್ಕೆ ತಕ್ಕಂತೆ ಸರ್ವಿಸ್ ಚಾರ್ಜ್ ಕೂಡ ಇರುತ್ತದೆ. 

ಪಿಎಂಸ್ ನಲ್ಲಿ ಹೂಡಿಕೆ ಮಾಡುವುದರ ಸಾಧಕ ಭಾದಕಗಳು:

ಸಾಧಕಗಳು:

  • ಹೆಚ್ಚಿನ ವಿಷಯ ಜ್ಞಾನವಿಲ್ಲದವರಿಗೆ ಮತ್ತು ಸಮಯವಿಲ್ಲದವರಿಗೆ ಇದು ವರದಾನ.
  • ಪೋರ್ಟ್ ಫೋಲಿಯೋ ಮ್ಯಾನೇಜರ್ ಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಅಸೆಟ್ ಕ್ಲಾಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಹೊಂದಿರುತ್ತಾರೆ. ಹೀಗಾಗಿ ಪ್ರೊಫೆಷನಲ್ ಸಹಾಯ ಸಿಗುತ್ತದೆ.
  • ಉತ್ತಮ ವೃತ್ತಿಪರರ ಸಹಾಯ ಸಿಕ್ಕುವುದರಿಂದ ಅಪಾಯ ಕಡಿಮೆಯಾಗುತ್ತದೆ.
  • ಹೂಡಿಕೆದಾರರ ಅವಶ್ಯಕತೆಗೆ ತಕ್ಕಂತೆ ಪೋರ್ಟ್ ಫೋಲಿಯೋ ಸಿದ್ಧವಾಗುವುದರಿಂದ ಹೆಚ್ಚಿನ ಲಾಭಗಳಿಸುವ ಅವಕಾಶವಿರುತ್ತದೆ.

ಭಾದಕಗಳು:

  • ಯಾವ ಸೇವೆ ಪಡೆದುಕೊಳ್ಳುತ್ತೇವೆ ಎನ್ನುವುದರ ಆಧಾರದ ಮೇಲೆ ಇದು ಖರ್ಚಿನ ಬಾಬತ್ತು. ಹೆಚ್ಚಿನ ಹಣವನ್ನ ಸೇವಾಶುಲ್ಕದ ರೂಪದಲ್ಲಿ ನೀಡಬೇಕಾಗುತ್ತದೆ.
  • ಪೋರ್ಟ್ ಫೋಲಿಯೋ ಮ್ಯಾನೇಜರ್ ವಿಶ್ಲೇಷಣೆ ಮೇಲೆ ಹೂಡಿಕೆ ನಿಂತಿರುತ್ತದೆ. ಆತನ ಕಾಂಪಿಟೆನ್ಸ್ ಸರಿಯಾಗಿದ್ದರೆ ಸರಿ ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಇದು ಅವಲಂಬನೆಯನ್ನ ಸೃಷ್ಟಿಸುತ್ತದೆ.
  • ನಿರ್ಧಾರಗಳನ್ನ ಇಲ್ಲಿ ಪೋರ್ಟ್ ಫೋಲಿಯೋ ಮ್ಯಾನೇಜರ್ ಕೈಲಿಡುತ್ತೇವೆ, ಸೇವಾಶುಲ್ಕ ನೀಡುತ್ತೇವೆ, ಮಾರುಕಟ್ಟೆಯ ಇಂಡೆಕ್ಸ್ಗಿಂತ ಹೆಚ್ಚಿನ ಹಣವನ್ನ ಗಳಿಸಿದರೂ ಅದು ಪೂರ್ಣವಾಗಿ ಹೂಡಿಕೆದಾರನಿಗೆ ಬರುವುದಿಲ್ಲ , ಹೀಗಾಗಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಅವಶ್ಯಕತೆಯೇನಿದೆ? ಸಲಹೆ ಪಡೆದು ಶುಲ್ಕ ನೀಡಿ ಗಳಿಸಿದ ಹೆಚ್ಚು ಹಣ ಖರ್ಚು ತೆಗೆದ ನಂತರ ಸಾಮಾನ್ಯ ಲಾಭ ಅಥವಾ ಅದಕ್ಕಿಂತ ಸ್ವಲ್ಪ ಮಾತ್ರ ಹೆಚ್ಚಾಗುತ್ತದೆ.
  • ಹಣವಿದ್ದು ಅಲ್ಪಸ್ವಲ್ಪ ಮಾರುಕಟ್ಟೆ ಜ್ಞಾನವಿದ್ದು ಸಮಯವಿರದ HNI ಗಳಿಗೆ ಇದು ಹೇಳಿ ಮಾಡಿಸಿದ ಸೌಲಭ್ಯ. ಇಲ್ಲಿ ಹೂಡಿಕೆ 50 ಲಕ್ಷಕ್ಕಿಂತ ಹೆಚ್ಚು ಬೇಡುವುದರಿಂದ ಸಾಮಾನ್ಯ ಹೂಡಿಕೆದಾರನ ವಿಷಯ ಇಲ್ಲಿ ಅಪ್ರಸ್ತುತ.

ರಿಜಿಸ್ಟ್ರೇಡ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್

ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್ ನಲ್ಲಿ ಕನಿಷ್ಠ 50 ಲಕ್ಷ ರೂಪಾಯಿಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಹಣವನ್ನ ಹೂಡಿಕೆ ಮಾಡಬೇಕಾಗುತ್ತದ, ಹೀಗಾಗಿ ಇದರ ಲಾಭ ಸಾಮಾನ್ಯ ಹೂಡಿಕೆದಾರನಿಗೆ ಸಿಗುವುದಿಲ್ಲ. ಇದನ್ನ ಮನಗಂಡ ಸೆಬಿ ಇದಕ್ಕೆ ಒಂದು ಪರ್ಯಾಯವನ್ನ ನೀಡಿದೆ. ಹೀಗೆ ಪ್ರತಿ ಹೂಡಿಕೆದಾರರೂ ಹಣ ಹೂಡಿಕೆಯ ಮಿತಿ ಇಲ್ಲದೆ ವೃತ್ತಿಪರರ ಸಲಹೆಯನ್ನ ಪಡೆದುಕೊಳ್ಳಬಹುದಾಗಿದೆ. ಹೀಗೆ ಸಲಹೆ ನೀಡುವವರೇ ರಿಜಿಸ್ಟ್ರೇಡ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್. 

ಇವರು ಸೆಬಿಯಲ್ಲಿ ಹೆಸರನ್ನ ನೊಂದಾಯಿಸಿಕೊಂಡಿರಬೇಕಾಗುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಸ್ಮಾಲ್ ಕೇಸಸ್ ಎನ್ನುವ ಪೋರ್ಟಲ್. ಇಲ್ಲಿಗೆ ಬ್ರೋಕರ್ ಮೂಲಕ ಅಥವಾ ಸ್ವತಃ ಲಾಗಿನ್ ಆಗಬಹುದು. ಇಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಯಾರು ಬೇಕಾದರೂ ರಿಜಿಸ್ಟ್ರೇಡ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಆಗುವಂತಿಲ್ಲ, ಸೆಬಿ ಯ ನಿಬಂಧನೆಗಳನ್ನ ಯಾರು ಪೂರೈಸುತ್ತಾರೆ ಅವರು ಮಾತ್ರ ಇದಕ್ಕೆ ಅರ್ಹರಾಗುತ್ತಾರೆ. ಇದರ ಜೊತೆಗೆ ಬೇರೆ ಫೈನಾನ್ಸಿಯಲ್ ಅಡ್ವೈಸರ್ಸ್ ಗಳಂತೆ ಸುಲಭವಾಗಿ ಹೂಡಿಕೆದಾರನಿಗೆ ನಷ್ಟವಾದರೆ ನನ್ನ ಪಾತ್ರವಿಲ್ಲ ಎಂದು ಕೈ ತೊಳೆದುಕೊಳ್ಳಲು ಬರುವುದಿಲ್ಲ. ಇಲ್ಲಿ ಹೂಡಿಕೆದಾರನ ಹಿತಾಸಕ್ತಿಯನ್ನ ಕಾಪಾಡಲು ಎಲ್ಲಾ ರೀತಿಯ ಕಸರತ್ತು ಮಾಡಲಾಗಿದೆಯೇ ಎನ್ನುವುದನ್ನ ಗಮನಿಸಲಾಗುತ್ತದೆ.

ಮಾರುಕಟ್ಟೆಯಲ್ಲಿ ಆಗುವ ಎಲ್ಲಾ ಸಾಧಕ ಭಾದಕಗಳು ಇಲ್ಲಿಯೂ ಆಗುತ್ತವೆ. ವಿಶೇಷವೆಂದರೆ ಇದು ಸಾಮಾನ್ಯ ಹೂಡಿಕೆದಾರನಿಗೂ ಲಭ್ಯವಿದೆ. ಸಾಮಾನ್ಯಜ್ಞಾನವಿದ್ದು , ಮಾರುಕಟ್ಟೆಯ ಹೆಚ್ಚು ತಿಳುವಳಿಕೆ ಇಲ್ಲದ ಹೂಡಿಕೆದಾರರು ಖಂಡಿತ ಇದರ ಉಪಯೋಗವನ್ನ ಪಡೆದುಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಲಭ್ಯವಿರುವ ಸಲಹೆಗಾರರು

ಮಾರುಕಟ್ಟೆಯಲ್ಲಿ ಹತ್ತಾರು ವರ್ಷದಿಂದ ತೊಡಗಿಕೊಂಡಿರುವ ಸಬ್ ಬ್ರೋಕರ್ಗಳ ಸಂಖ್ಯೆ ಬಹಳವಿದೆ. ಸಾಮಾನ್ಯ ಹೂಡಿಕೆದಾರನಿಗೆ ಸುಲಭವಾಗಿ ಕೈ ಸಿಕ್ಕುವವರು ಇವರು. ಹೊಸ  ವೈದ್ಯನಿಗಿಂತ ಹಳೆ ರೋಗಿ ಮೇಲು ಎನ್ನುವಂತೆ , ಇವರುಗಳು ಹತ್ತಾರು ವರ್ಷದ ಅನುಭವದಿಂದ ಉತ್ತಮ ಸಲಹೆಯನ್ನ ನೀಡಬಲ್ಲರು. ಇದಕ್ಕಾಗಿ ಇವರು ಕೇಳುವ ಹಣವೂ ಹೆಚ್ಚಿರುವುದಿಲ್ಲ. ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಅವರೆಷ್ಟು ಉತ್ತಮರು? ಅವರೆಷ್ಟು ಜ್ಞಾನವಂತರು ಎನ್ನುವುದು, ಇದರ ಜೊತೆಗೆ ಹೀಗೆ ಸಲಹೆ ನೀಡುವವರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹಣ ಗಳಿಸಿದ್ದಾರೆಯೇ ಎನ್ನವುದು! ನೊಂದಾಯಿತ ಸಲಹೆಗಾರರಿಗೆ ಇರುವಂತೆ ಇವರಿಗೆ ಯಾವುದೇ ಭಾದ್ಯತೆ ಇರುವುದಿಲ್ಲ , ಹೀಗಾಗಿ ಇಂತಹ ಸಲಹೆಗಾರರ ಸೇವೆ ಪಡೆಯುವುದಕ್ಕೆ ಮುಂಚೆ ಸಾಕಷ್ಟು ಎಚ್ಚರವಹಿಸುವುದು ಒಳಿತು. ಗಮನಿಸಿ, CA, CS, ICWA ಮತ್ತಿತರ ಫೈನಾನ್ಸಿಯಲ್ ವೃತ್ತಿಪರ ತರಬೇತಿ ಹೊಂದಿದವರು ತಮ್ಮ ಕೆಲಸದ ಜೊತೆಗೆ ಇಂತಹ ಸಲಹೆಗಳನ್ನ ನೀಡಬಹುದು ಅವರು ಇದಕ್ಕೆಂದು ಹೊಸದಾಗಿ ಸೆಬಿಯಲ್ಲಿ ನೊಂದಾಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. 

ಕೊನೆಮಾತು: ಫಂಡಮೆಂಟಲ್ ಅನಾಲಿಸಿಸ್, ಟೆಕ್ನಿಕಲ್ ಅನಾಲಿಸಿಸ್ ಜೊತೆಗೆ ಮಾರುಕಟ್ಟೆಯ ಸೆಂಟಿಮೆಂಟ್ ಎಲ್ಲವನ್ನೂ ಅರಿತುಕೊಂಡು ಸಮಯವನ್ನ ವ್ಯಯಿಸಿ ಮಾರುಕಟ್ಟೆಯಲ್ಲಿ ನಾವೇ ಟ್ರೇಡ್ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲದ ಮಾತು, ಹೀಗಾಗಿ ಮಾರುಕಟ್ಟೆಯಲ್ಲಿ ಇರುವ ಇಂತಹ ಸೇವೆ, ಸೌಲಭ್ಯಗಳನ್ನ ಬಳಸಿಕೊಂಡರೆ ಮತ್ತು ಅವುಗಳನ್ನ ಸರಿಯಾಗಿ ದುಡಿಸಿಕೊಳ್ಳುವ ಸಾಮಾನ್ಯ ಜ್ಞಾನ ನಮ್ಮದಾಗಿಸಿಕೊಂಡರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ವಿಧಾನ ಬೇರಿಲ್ಲ, ಇದಕ್ಕೆ ಪೂರಕವಾಗಿ ಮ್ಯೂಚುಯಲ್ ಫಂಡ್ ಗಳು ಸಹ ಕೆಲಸ ಮಾಡುತ್ತವೆ. ಅವುಗಳ ಬಗ್ಗೆ ಬೇರೆಯ ಅಧ್ಯಾಯದಲ್ಲಿ ತಿಳಿದುಕೊಳ್ಳೋಣ. ಮತ್ತೆ ಅದನ್ನೇ ಪುನರುಚ್ಛರಿಸುತ್ತಿದ್ದೇನೆ: ಮಾರುಕಟ್ಟೆಯ ಹೆಚ್ಚಿನ ಎಕ್ಸ್ಪೋಷರ್ ಇಲ್ಲದವರು, ಪ್ರವೇಶಕ್ಕೆ ಇಂತಹ ಸೇವೆಗಳು ಮತ್ತು ಮ್ಯೂಚುಯಲ್ ಫಂಡ್ಗಳನ್ನ ಬಳಸಿಕೊಂಡು ನಂತರ ಸ್ವಂತಂತ್ರವಾಗಿ ಹೂಡಿಕೆ ಮಾಡುವುದನ್ನ ಅನುಭವದ ಮೂಲಕ ಗಳಿಸಿಕೊಳ್ಳಬಹುದು. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com