ಸವಾಲು, ಸಮಸ್ಯೆಗಳ ಸುಳಿಯಲ್ಲಿ ಸಿಎಂ ಸಿದ್ದರಾಮಯ್ಯ! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಮುಂದಿದೆ ಕಠಿಣ ಸವಾಲುಗಳ ಹಾದಿ. ಅವೆಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿಸಿ ಗೆಲ್ಲುತ್ತಾರಾ? 
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಮುಂದೆ ಕಠಿಣ ಸವಾಲುಗಳೇ ಇವೆ. ಚುನಾವಣೆಗೂ ಮುನ್ನ  ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಜಾರಿಗೆ ತರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಂತಹ ಸನ್ನಿವೇಶದಲ್ಲೇ ಈಗ ಎದುರಾಗಿರುವ ಪ್ರಶ್ನೆ ಎಂದರೆ ಪಕ್ಷ ಮತ್ತು ಸರ್ಕಾರದ ನಡುವೆ ಮುಂದಿನ ದಿನಗಳಲ್ಲಿ ಸಮನ್ವಯತೆ ಸಾಧ್ಯವಾದೀತೆ? ಎಂಬುದು.

ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದು ಒಂದು ವಾರ ಕಳೆದರೂ ಸಚಿವರಿಗೆ ಖಾತೆಗಳ ಹಂಚಿಕೆ ಆಗಿಲ್ಲ. ಮುಖ್ಯಮಂತ್ರಿ ನೇತೃತ್ವದಲ್ಲಿ ಒಂದಷ್ಟು ಅಧಿಕಾರಿಗಳ ಮಟ್ಟದ ಸಭೆ ನಡೆದಿದೆ ಎಂಬುದನ್ನು ಬಿಟ್ಟರೆ ಉಳಿದಂತೆ ಮೊದಲ ಕಂತಿನಲ್ಲಿ ಸಂಪುಟ ಸೇರಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಉಳಿದ ಸಚಿವರಿಗೆ ಖಾತೆಗಳು ಹಂಚಿಕೆ ಆಗಿಲ್ಲ. ಹೀಗಾಗಿ ಎಲ್ಲ ಸಚಿವರೂ ಎಲ್ಲ ಇಲಾಖೆಗಳ ವಿಚಾರದಲ್ಲಿ ತಮಗಿಲ್ಲದ ಅಧಿಕಾರ ಚಲಾಯಿಸುತ್ತಿದ್ದಾರೆ.

ಇದರಿಂದ ಗೊಂದಲಕ್ಕೊಳಗಾಗಿರುವವರು ಮಾತ್ರ ಅಧಿಕಾರಿಗಳು. ಮುಖ್ಯಮಂತ್ರಿ ಒಂದು ಸೂಚನೆ ಕೊಟ್ಟರೆ ಉಳಿದ ಸಚಿವರೇ ಮತ್ತೊಂದು ಆದೇಶ ಕೊಡುತ್ತಿದ್ದಾರೆ ಯಾವುದನ್ನು ಪಾಲಿಸಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲ ಅಧಿಕಾರಿಗಳದ್ದು. ಹೀಗಾಗಿ ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬಂದು ವಾರ ಕಳೆದರೂ ಸರ್ಕಾರದ ಕಾರ್ಯ ವೈಖರಿ ನಿಂತ ನೀರಾಗಿದೆ. ಮುಂದಕ್ಕೆ ಹೋಗುತ್ತಿಲ್ಲ. 

ಇಂತಹ ಗೊಂದಲದ ಸನ್ನಿವೇಶದಲ್ಲೇ ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಕುರಿತಂತೆ ಸಂಪುಟ ಸಹೋದ್ಯೋಗಿಗಳ ನಡುವೆಯೇ ಬಹಿರಂಗ ಕಿತ್ತಾಟ ಆರಂಭವಾಗಿದ್ದು ಅದು ರಾಜಕಾರಣದ ಭಿನ್ನಾಭಿಪ್ರಾಯಗಳನ್ನೂ ಮೀರಿ ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸನ್ನಿವೇಶವೂ ನಿರ್ಮಾಣಗೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳಲ್ಲಿ ಆಡಳಿತ ನಡೆಸುವುದಕ್ಕಿಂತ ಹೆಚ್ಚಾಗಿ ಸಂಪುಟ ಸಹೋದ್ಯೋಗಿಗಳ ನಡುವಣ ಕಿತ್ತಾಟವನ್ನು ಶಮನಗೊಳಿಸಲು ಹೆಚ್ಚು ಸಮಯ ಬೇಕಾಗಬಹುದು. 

ಇದಿಗ ಸಚಿವ ಸಂಪುಟದ ಮೊದಲನೇ ಹಂತದ ವಿಸ್ತೀರ್ಣಕ್ಕೆ ಸಿದ್ಧವಾಗುತ್ತಿರುವ ಸಂದರ್ಭದಲ್ಲೂ ಪಕ್ಷದೊಳಗಿನ ಬಿಕ್ಕಟ್ಟು ತಣ್ಣಗಾದಂತೆ ಕಂಡು ಬರುತ್ತಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಚಿವ ಸಂಪುಟಕ್ಕೆ ಸಹೋದ್ಯೊಗಿಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಒಮ್ಮತ ಮೂಡಿ ಬಂದಿಲ್ಲ. ಸಿದ್ದರಾಮಯ್ಯ ಪ್ರಸ್ತಾಪಿಸಿರುವ ಹೆಸರುಗಳಲ್ಲಿ ಜನತಾ ಪರಿವಾರದಲ್ಲಿದ್ದ ಸಂದರ್ಭದಲ್ಲಿ ಜತೆಗಿದ್ದು ನಂತರ ಕಾಂಗ್ರೆಸ್ ಸೇರಿದ ನಂತರ ತಮಗೆ ನಿಷ್ಠರಾಗಿರುವ ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ವೆಂಕಟೇಶ್ ಸೇರಿದಂತೆ ಹಿರಿಯ ಶಾಸಕರ ಹೆಸರುಗಳಿದ್ದರೆ ಈ ಹೆಸರುಗಳಿಗೆ ಶಿವಕುಮಾರ್ ವಿರೋಧ ವ್ಯಕ್ತಪಡಿಸುವ ಮೂಲಕ ತಮ್ಮದೇ ಆದ ಹಳೇ ಕಾಂಗ್ರೆಸ್ಸಿಗರ ಮತ್ತು ತಮ್ಮ ನಾಯಕತ್ವಕ್ಕೆ ನಿಷ್ಠರಾದವರ ಹೆಸರುಗಳನ್ನುಮುಂದಿಟ್ಟಿದ್ದಾರೆ. ಎರಡೂ ಪಟ್ಟಿಗಳಲ್ಲಿ ಸಮನ್ವಯತೆ ಸಾಧಿಸುವ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠ ಮಂಡಳಿಯೂ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. 

ಇಷ್ಟೆಲ್ಲ ಗೊಂದಲಗಳ ನಡುವೆ ಶನಿವಾರ ( ಮೇ 27) ವಿಸ್ತರಣೆ ಆಗಲಿರುವ ಸಚಿವ ಸಂಪುಟದಲ್ಲಿ ಹೊಸ ಸಚಿವರ ಪ್ರಮಾಣ ವಚನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಆದರೆ ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ನಡೆಯಲಿರುವ ವಿದ್ಯಮಾನಗಳತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಬಹು ಮುಖ್ಯವಾಗಿ ವಿಸ್ತರಣೆಯ ಅಂತಿಮ ಹಂತದ ಕಸರತ್ತುಗಳು ನಡೆಯುತ್ತಿರುವ ಈಗಿನ ಸನ್ನಿವೇಶದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿ ಪ್ರಸಾದ್ ರವರಂತಹ ಪ್ರಮುಖರಿಗೇ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪುತ್ತಿಲ್ಲ ಎಂಬ ವರದಿಗಳು ಕಾಂಗ್ರೆಸ್ ನಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಪಕ್ಷದ ರಾಷ್ಟ್ರೀಯ ಸಮಿತಿಯಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ, ರಾಜ್ಯ ಸಭಾ ಸದಸ್ಯರಾಗಿ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಹಿರಿಯ ಮುಖಂಡರಾಗಿರುವ ಹರಿ ಪ್ರಸಾದ್  ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಪ್ರಭಾವಲಯ ಹೊಂದಿದ್ದಾರೆ. ಒಂದುವೇಳೆ ಅವರು ಸಂಪುಟ ಸೇರದಿದ್ದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಸರ್ಕಾರ ಮತ್ತು ಪಕ್ಷದ ಮೇಲೆ ಯಾವ ರೀತಿ ಯಾವ ರೀತಿ ಬೀರಬಹುದು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುತ್ತಿಲ್ಲ. ದಿಲ್ಲಿಯಿಂದ ಬರುತ್ತಿರುವ ವರದಿಗಳ ಪ್ರಕಾರ  ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕೊಟ್ಟಿರುವ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ.  ಅದೇನೇ ಇದ್ದರೂ ಅಂತಿಮವಾಗಿ ಸಚಿವರ ಪ್ರಮಾಣ ವಚನದ ನಂತರ ನಡೆಯಲಿರುವ ವಿದ್ಯಮಾನಗಳು ಮುಂದಿನ ರಾಜಕೀಯ ಬೆಳವಣಿಗೆಗಳ ದಿಕ್ಕನ್ನು ನಿರ್ಧರಿಸಲಿವೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮುಂದೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ದೊಡ್ಡ ಸವಾಲು ಇದ್ದು ಅವೆಲ್ಲವನ್ನೂ ಈಡೇರಿಸಲು ಸಂಪನ್ಮೂಲದ ಕ್ರೂಢೀಕರಣ ಆಗಬೇಕಾಗಿದೆ. ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ಕಾಮಗ್ರೆಸ್ ಪಕ್ಷದ ಉಚಿತ ವಿದ್ಯುತ್ ಭರವಸೆ ನಂಬಿದ ಜನ ಸಾಮಾನ್ಯರು ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸುತ್ತಿರುವ ಪ್ರಸಂಗಗಳು ನಡೆಯುತ್ತಿದ್ದು ಕೆಲವು ಕಡೆಗಳಲ್ಲಿ ಸಂಘರ್ಷಕ್ಕೂ ಕಾರಣವಾಗಿದೆ.  ಅದೇ ರೀತಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಭರವಸೆಯನ್ನೇ  ನಿಜವೆಂದು ನಂಬಿ ಮಹಿಳಾ ಪ್ರಯಾಣಿಕರು ನಿರ್ವಾಹಕರುಗಳ ಜತೆ ಜಗಳ ನಡೆಸುತ್ತಿರುವ ಪ್ರಸಂಗಗಳೂ ಕಂಡು ಬಂದಿವೆ. ಈ ಘಟನೆಗಳಿಂದ ಸಾರಿಗೆ ಮತ್ತು ವಿದ್ಯುತ್ ಇಲಾಖೆಗಳ ಸಿಬ್ಬಂದಿ ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಸರ್ಕಾರ ಇನ್ನೂ ಈ ವಿಚಾರದಲ್ಲಿ ಸ್ಪಷ್ಟ ಶಾಸನಾತ್ಮಕ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಸ್ಪಷ್ಟ ಪಡಿಸಿರುವಂತೆ  ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲ ಭರವಸೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಅಂದಾಜು 50 ರಿಂದ 60 ಸಾವಿರ ಕೋಟಿ ರೂ. ಆರ್ಥಿಕ ಹೊರ ಬೀಳಲಿದ್ದು ಇಷ್ಟೊಂದು ಭಾರವನ್ನು ಸರ್ಕಾರ ನಿಭಾಯಿಸುವುದು ಈಗಿನ ಆರ್ಥಿಕ ಸನ್ನಿವೇಶದಲ್ಲಿ ಕಷ್ಟ ಎಂಬುದು ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಗಿದೆ.

ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅದನ್ನೇ ಪ್ರತಿಪಕ್ಷಗಳು ಕಾಂಗ್ರೆಸ್ ವಿರುದ್ಧದ ಪ್ರಚಾರಕ್ಕೆ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುವುದು ಖಚಿತ. ಭರವಸೆಗಳನ್ನು ಈಡೇರಿಸಲೇ ಬೇಕೆಂದರೆ ಸರ್ಕಾರದ ಬೊಕ್ಕಸಕ್ಕೆ ಅಂದಾಜು 50ರಿಂದ 60 ಸಾವಿರ ಕೋಟಿ ರೂ. ಆರ್ಥಿಕ ಹೊರೆ ಬೀಳಲಿದೆ.  ಕೊರತೆ ತುಂಬಲು ಹೊಸ ತೆರಿಗೆಗಳನ್ನು ವಿಧಿಸಿದರೆ ಸಾಕಷ್ಟು ಸಮಸ್ಯೆಗಳನ್ನು ಮೈಮೇಲೆ  ಎಳೆದುಕೊಳ್ಳಬೇಕಾಗುತ್ತದೆ. ಒಂದು ರೀತಿ ಇಕ್ಕಟ್ಟಿನ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಎದುರಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಸಾಲದ ಹೊರೆಯಿಂದ ತತ್ತರಿಸುತ್ತಿದೆ. 

ಬಹು ಮುಖ್ಯವಾಗಿ ಉಚಿತ ವಿದ್ಯುತ್ ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಗಳು ಆಯಾ ಇಲಾಖೆಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.  ವಿದ್ಯುತ್ ಬಿಲ್ ನೀಡಲು ಬಾಕಿ ವಸೂಲಾತಿಗೆ ಹೋದ ವಿದ್ಯುತ್ ನಿಗಮಗಳ ಸಿಬ್ಬಂದಿ ಸಾರ್ವಜನಿಕರಿಂದ ಪ್ರತಿರೋಧ ಎದುರಿಸುತ್ತಿದ್ದು ಕೆಲವು ಕಡೆಗಳಲ್ಲಿ ಸಾರ್ವಜನಿಕರು ಹಲ್ಲೆ ನಡೆಸಲು ಮುಂದಾದ ಪ್ರಕರಣಗಳು ವರದಿಯಾಗಿವೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ರಾಜಕೀಯ ಅಸ್ತ್ರವಾಗಿಸಿಕೊಂಡಿವೆ. ಹೀಗಾಗಿ ಆರಂಭದಲ್ಲೇ ಸಿದ್ದರಾಮಯ್ಯ ಸರ್ಕಾರ ಸಂಕಟಕ್ಕೆ ಸಿಕ್ಕಿದ್ದು ಅದರಿಂದ ಪಾರಾಗಲು ಮಾರ್ಗಗಳನ್ನು ಹುಡುಕುತ್ತಿದೆ.

ಭಿನ್ನಮತದ್ದೇ ಸಮಸ್ಯೆ: ಮುಖ್ಯಮಂತ್ರಿಗೆ ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಭಿನ್ನಮತವೂ ದೊಡ್ಡ ತಲೆ ನೋವಾಗುವ ಸೂಚನೆಗಳಿವೆ. ಈಗಾಗಲೇ ಅಧಿಕಾರ ಹಂಚಿಕೆ ಕುರಿತಂತೆ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಮತ್ತು ಅದರ ಸಮರ್ಥನೆ ಪಕ್ಷ ಮತ್ತು ಸಂಫುಟದಲ್ಲಿ ಕೋಲಾಹಲ ಎಬ್ಬಿಸಿದೆ. ರಾಜಕೀಯವಾಗಿ ಎದುರಿಸಬೇಕಾಗಿದ್ದ ಈ ವಿವಾದವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೋದರ ಸಂಸತ್ ಸದಸ್ಯ ಡಿ.ಕೆ.ಸುರೇಶ್ ವೈಯಕ್ತಿಕ ಪ್ರತಿಷ್ಠೆಯ ವಿಚಾರವನ್ನಾಗಿ ಪರಿಗಣಿಸಿದ್ದು ವಿಧಾನ ಸೌಧದಲ್ಲೇ ಸಚಿವ ಪಾಟೀಲ್ ಅವರೊಂದಿಗೆ ಸಂಘರ್ಷಕ್ಕೆ ಮುಂದಾಗಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.  ಅವರು ನೀಡಿರುವ ಎಚ್ಚರಿಕೆಯ ಧಾಟಿ ಪಕ್ಷದಲ್ಲಿ ಮುಂದೇನಾಗುತ್ತದೋ ಎಂಬ ಕಳವಳಕ್ಕೆ ಕಾರಣವಾಗಿದೆ.

ಸಿದ್ದು ಚೆದುರಂಗದಾಟ!: ಬಹು ಮುಖ್ಯವಾಗಿ ಎಂ.ಬಿ.ಪಾಟೀಲ್ ಅವರನ್ನು ಮುಂದಿಟ್ಟುಕೊಂಡು ಸಿ.ಎಂ. ಸಿದ್ದರಾಮಯ್ಯ ರಾಜಕಾರಣದ ಆಟ ಆರಂಬಿಸಿದ್ದಾರೆ ಎಂಬ ಆರೋಪಗಳೂ ಕಾಂಗ್ರೆಸ್ ನಲ್ಲಿರುವ ಅವರ ವಿರೋಧಿ ಗುಂಪಿನಿಂದ ಕೇಳಿ ಬರುತ್ತಿದೆ. ಈ ಹಿಂದೆ  ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರ ವಿವಾದದಲ್ಲೂ ಎಂ.ಬಿ.ಪಾಟೀಲ್ ನೀಡಿದ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆಗಳನ್ನು ತಂದಿತ್ತು. ಆಗಲೂ ಸಿದ್ದರಾಮಯ್ಯ ಕುರಿತು ಇದೇ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈಗ ಮತ್ತೆ ಅದೇ ಎಂ.ಬಿ.ಪಾಟೀಲ್ ಮುಂದಿಟ್ಟುಕೊಂಡು ಡಿ.ಕೆ.ಶಿವಕುಮಾರ್ ವಿರುದ್ಧ ತಂತ್ರಗಾರಿಕೆ ಆರಂಭಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.   

ಸರ್ಕಾರದ್ದು ಅಲ್ಪಾಯುಷ್ಯವೆ….? 

ಈ ಎಲ್ಲ ಬೆಳವಣಿಗೆಗಳು ನಡೆದಿರುವಂತೆಯೇ ಈ ಸರ್ಕಾರದ್ದು ಅಲ್ಪಾಯುಷ್ಯ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಬೇರೆ ಪಕ್ಷದವರಾದರೂ ಇಬ್ಬರ ಹೇಳಿಕೆಯೂ ಒಂದೇ ಅಭಿಪ್ರಾಯದಿಂದ ಕೂಡಿದೆ. ಅಂದ ಮೇಲೆ ಕಾಂಗ್ರೆಸ್ ನಲ್ಲಿ ಉಂಟಾಗಬಹುದಾದ ಭಿನ್ನಮತೀಯ ಚಟುವಟಿಕೆಯ ಲಾಭ ಪಡೆಯಲು ಎರಡೂ ಪಕ್ಷಗಳು ಕಾಯುತ್ತಿವೆ ಎಂದು ಅರ್ಥ. ಸಿದ್ದರಾಮಯ್ಯ ಈ ಅಗ್ನಿ ಪರೀಕ್ಷೆಯನ್ನು ಹೇಗೆ ಎದುರಿಸುತ್ತಾರೆ ಕಾದು ನೋಡಬೇಕು.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com