ಇಷ್ಟದ ವ್ಯಾಪಾರ ಪ್ರಾರಂಭಿಸುವುದಕ್ಕೂ ಮುನ್ನ ಗಮನಿಸಬೇಕಾದ ಅಂಶಗಳು (ಹಣಕ್ಲಾಸು)

ಹಣಕ್ಲಾಸು-393-ರಂಗಸ್ವಾಮಿ ಮೂಕನಹಳ್ಳಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿರಿವಂತರಾಗಬೇಕು ಎಂದರೆ ಅದಕ್ಕೆ ಪ್ರಯತ್ನ ಪಡಬೇಕು. ಸಿರಿತನಕ್ಕೆ ಯಾವುದೇ ಅಡ್ಡದಾರಿಗಳಲ್ಲ. ಇದ್ದರೂ ಅವು ಶಾಶ್ವತವಲ್ಲ. ಅಡ್ಡದಾರಿಯಲ್ಲಿ ಗಳಿಸಿದ ಸಂಪತ್ತು ಬಹುಕಾಲ ಉಳಿಯುವುದು ಇಲ್ಲ. ಸಿರಿತನವನ್ನು ಗಳಿಸಲು ಇರುವುದು ಒಂದೇ ಮಾರ್ಗ ಅದು ಹೂಡಿಕೆ. ಹಣವನ್ನು ಉಳಿಸಿದ್ದೇವೆ ಎಂದು ಪೂರ್ವಾಪರ ಯೋಚನೆ ಮಾಡದೆ ಹೂಡಿಕೆ ಮಾಡಿದರೂ ಸಂಕಷ್ಟ ತಪ್ಪಿದ್ದಲ್ಲ. ಹೂಡಿಕೆಯಲ್ಲಿ ಎರಡು ವಿಧ. ಮೊದಲನೆಯದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. 

ಅದು ಬೇರೆಯವರ ಕನಸಿನಲ್ಲಿ ಹೂಡಿಕೆ ಮಾಡುವುದು. ಅಂದರೆ ಸಂಸ್ಥೆಗಳ ಷೇರುಗಳಲ್ಲಿ, ಬಾಂಡ್ಗಳಲ್ಲಿ ಹೂಡಿಕೆ ಮಾಡುವುದು. ಇನ್ನೊಂದು ನಮ್ಮ ಕನಸಿನ ಮೇಲೆ ಹೂಡಿಕೆ ಮಾಡುವುದು. ಅಂದರೆ ನಮಗಿಷ್ಟವಾದ ವ್ಯಾಪಾರ, ಉದ್ದಿಮೆಯನ್ನು ಪ್ರಾರಂಭಿಸುವುದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನು ಗೊತ್ತೇ? ನಾವು ಇತರರ ಕನಸಿನಲ್ಲಿ ಹೂಡಿಕೆ ಮಾಡಿದಾಗ ಹಣ ಗಳಿಸುವ ಅಥವಾ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಮ್ಮ ಕನಸಿನಲ್ಲಿ ಹೂಡಿಕೆ ಮಾಡಿದಾಗ ಈ ಎರಡೂ ಸಾಧ್ಯತೆಯ ಜೊತೆಗೆ ನಮ್ಮ ವೇಳೆಯನ್ನು ಸಹ ನಾವು ಹೂಡಿಕೆ ಮಾಡಬೇಕಾಗುತ್ತದೆ. ಹೀಗೆ ನಾವು ವೇಳೆಯನ್ನು ಇನ್ವೆಸ್ಟ್ ಮಾಡಿದಾಗ ಆ ವೇಳೆಯ ಅಪರ್ಚುನಿಟಿ ಕಾಸ್ಟ್ ಎಷ್ಟು ಎನ್ನುವುದನ್ನು ನಾವು ಲೆಕ್ಕ ಮಾಡಬೇಕಾಗುತ್ತದೆ. ಉದಾಹರಣೆಗೆ ನಾವು ನಮ್ಮಿಷ್ಟದ ಉದ್ದಿಮೆ ಶುರು ಮಾಡುವ ಮೊದಲು ಯಾವುದೋ ಒಂದು ಹುದ್ದೆಯಲ್ಲಿ, ಕೆಲಸದಲ್ಲಿ ಇರುತ್ತೇವೆ ಅಲ್ಲವೇ? ಅಲ್ಲಿಂದ ವಾರ್ಷಿಕ ಉತ್ಪತ್ತಿ 12 ಲಕ್ಷ ಎಂದು ಕೊಂಡರೆ, ಅದನ್ನು ನಾವು ಅಪರ್ಚುನಿಟಿ ಕಾಸ್ಟ್ ಎನ್ನಬಹುದು. ನಮ್ಮ ಕನಸಿನಲ್ಲಿ ಹೂಡಿಕೆ ಮಾಡುವಾಗ ನಾವು ಗಣನೆಗೆ ತೆಗದುಕೊಳ್ಳದ ಅತಿ ದೊಡ್ಡ ಅಂಶವಿದು.

ಇದರ ಜೊತೆಗೆ ಅದೇ ಸಮಯವನ್ನು ಕೌಶಲ ವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರೆ? ಎನ್ನುವ ಪ್ರಶ್ನೆಯನ್ನು ಕೂಡ ಮಾಡಿಕೊಳ್ಳಬೇಕು. ನೆನೆಪಿರಲಿ ಸಿರಿವಂತಿಕೆಯ ದಾರಿಯಲ್ಲಿ ಪ್ರಮುಖ ಪಾತ್ರವಹಿಸುವುದು ಹೂಡಿಕೆ, ಕಲಿಕೆ ಜೊತೆಗೆ ಟೈಮ್! ಮುಕ್ಕಾಲು ಪಾಲು ವೇಳೆ ನಾವು ನಮ್ಮ ವೇಳೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನಮ್ಮ ವೇಳೆ ಚೀಪ್ ಅಲ್ಲ. ವೇಳೆಗಿಂತ ಮೌಲ್ಯವುಳ್ಳ ಕರೆನ್ಸಿ ಜಗತ್ತಿನಲ್ಲಿ ಬೇರಾವುದೂ ಇಲ್ಲ.

ಸರಿ ನಾವು ಬೇರೆಯವರ ಕನಸಿನಲ್ಲೂ ಅಷ್ಟಿಷ್ಟು ಹೂಡಿಕೆ ಮಾಡಿದ್ದೇವೆ, ನಮ್ಮ ಕನಸಿನ ಮೇಲೂ ಹೂಡಿಕೆ ಮಾಡುವ ಇಷ್ಟವಿದೆ ಎಂದರೆ ಅದಕ್ಕೆ ಸಿದ್ದತೆಗಳು ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ಇಲ್ಲಿ ಕೂಡ ಇನ್ನೊಂದು ಅಂಶವನ್ನು ನಿಮಗೆ ತಿಳಿಸಿಬಿಡುತ್ತೇನೆ. ಹೊಸದಾಗಿ ಆರಂಭಗೊಂಡ 100 ವ್ಯಾಪಾರ, ಉದ್ದಿಮೆಗಳಲ್ಲಿ 95ಕ್ಕೂ ಹೆಚ್ಚು ವರ್ಷದಲ್ಲಿ ಅವಸಾನವನ್ನು ಅಪ್ಪುತ್ತವೆ. ವರ್ಷಕ್ಕೂ ಮೀರಿ ಉಳಿದುಕೊಳ್ಳುವ ಉದ್ದಿಮೆಗಳ ಸಂಖ್ಯೆ ಒಂದು ಪ್ರತಿಶತಕ್ಕಿಂತ ಕಡಿಮೆ. ಜಗತ್ತಿನಲ್ಲಿ ಶ್ರೀಮಂತರು ಎನ್ನುವ ಹಣೆಪಟ್ಟಿ ಪಡೆದುಕೊಳ್ಳಲು ಸಾಧ್ಯವಾಗಿರುವುದು ಕೂಡ ಒಂದು ಪ್ರತಿಶತ ಜನಕ್ಕೆ ಮಾತ್ರ! ಹೀಗೇಕೆ? ಇದಕ್ಕೆ ಉತ್ತರ ಸ್ಪಷ್ಟವಿದೆ. ಸಿದ್ಧತೆ, ಹೌದು ಸರಿಯಾದ ಸಿದ್ಧತೆಯಿಲ್ಲದೆ ಕೇವಲ ಉತ್ಸಾಹದಿಂದ ಶುರು ಮಾಡುವ ಕೆಲಸ ಹೆಚ್ಚು ದಿನ ಬದುಕುವುದಿಲ್ಲ. ಉತ್ಸಾಹ ದಿನದಿಂದ ದಿನಕ್ಕೆ ಕುಸಿತ ಕಾಣುತ್ತದೆ. ಸಣ್ಣಪುಟ್ಟ ಜಯಗಳು ಸಿಗದ್ದಿದ್ದರೆ ಉತ್ಸಾಹದ ಜೊತೆಗೆ ಶ್ರದ್ದೆ ಕೂಡ ಕಡಿಮೆಯಾಗುತ್ತದೆ. ಈ ಕಾರಣದಿಂದ ಬಹುತೇಕ ಬಿಸಿನೆಸ್ ಸೋಲುತ್ತವೆ. ಹೀಗಾಗಿ ಒಂದು ಯಶಸ್ವಿ ಉದ್ದಿಮೆ ಕಟ್ಟುವುದಕ್ಕೆ ನಾವು ತೆಗೆದುಕೊಳ್ಳಬೇಕಾದ ಹೆಜ್ಜೆಗಳನ್ನು ಚರ್ಚಿಸೋಣ. ಒಂದರ್ಥದಲ್ಲಿ ಬೇರೊಬ್ಬರ ಕನಸಿನಲ್ಲಿ ಹೂಡಿಕೆ ಮಾಡುವುದಕ್ಕಿಂತ ನಮ್ಮ ಕನಸಿನಲ್ಲಿ ಹೂಡಿಕೆ ಮಾಡುವುದು ಲೇಸು.

  1. ನೀವ್ಯಾರು ಎಂದು ನಿರ್ಧರಿಸಿ: ನಮ್ಮ ಮೈಂಡ್ ಸೆಟ್ ಎಂತಹುದು, ಅದು ಸ್ಯಾಲರಿಡ್ ಅಥವಾ ಉದ್ಯಮಪತಿ ಮನಸ್ಥಿತಿ ಎನ್ನುವುದನ್ನು ಮೊದಲಿಗೆ ಕಂಡುಕೊಳ್ಳಬೇಕು. ಸ್ನೇಹಿತ ಮಾಡಿದ, ಪಕ್ಕದ ಮನೆಯ ಅಂಕಲ್ ಹೆಚ್ಚು ಲಾಭ ಮಾಡುತ್ತಿದ್ದಾರೆ, ರಾಜಸ್ತಾನದಿಂದ ಬಂದಿರುವ ಕನ್ನಡ ಸರಿಯಾಗಿ ಬಾರದಿರುವ ಸೇಠು ಸಮೋಸ, ಕಚೋರಿ ಮಾರಿ ಕೋಟ್ಯಧಿಪತಿಯಾದ ಎನ್ನುವ ಮಾತುಗಳಿಗೆ ಮರುಳಾಗಬಾರದು. ನಮಗೇನು ಇಷ್ಟ ಎನ್ನುವುದು ಮುಖ್ಯವಾಗಬೇಕು. ಒಮ್ಮೆ ನಿರ್ಧಾರ ಖಚಿತವಾದ ಮೇಲಷ್ಟೇ ಮುಂದಿನ ಹೆಜ್ಜೆ ಇಡಬೇಕು. ಸಂಶಯ, ಎರಡು ಮನಸ್ಸಿನಲ್ಲಿ ಶುರು ಮಾಡುವ ಕೆಲಸದಿಂದ ಲಾಭಕ್ಕಿಂತ ಹೆಚ್ಚು ನಷ್ಟ ಎನ್ನುವುದು ನೆನಪಿರಲಿ.
  2. ಬಿಸಿನೆಸ್ ಐಡಿಯಾ ಸಿದ್ಧಪಡಿಸಿಕೊಳ್ಳಿ: ಸಮಾಜದಲ್ಲಿ ಏನು ಕೊರತೆಯಿದೆ? ಯಾವ ಸಮಸ್ಯೆಯಿದೆ ಅದಕ್ಕೆ ಪರಿಹಾರವೇನು ಎನ್ನುವುದನ್ನು ಕಂಡುಕೊಳ್ಳಬೇಕು. ಇವತ್ತಿಗೆ ಗೆದ್ದಿರುವ ಬಿಸಿನೆಸ್ ಫಾರ್ಮ್ಯಾಟ್ ಸ್ವಲ್ಪ ಗಮನಿಸಿ ನೋಡಿ. ಅವೆಲ್ಲವೂ ಮೊದಲು ಸಮಸ್ಯೆಗಳನ್ನು ಹುಡುಕಿವೆ ಮತ್ತು ಅದಕ್ಕೆ ಪ್ರಬಲ ಪರಿಹಾರವನ್ನು ನೀಡಿವೆ, ಅದಕ್ಕೆ ಅವು ಗೆದ್ದಿವೆ. ಇಲ್ಲಿ ಕೂಡ ಅವರಿವರು ಮಾಡಿದರು, ಆ ಬಿಸಿನೆಸ್ ಐಡಿಯಾ ಗೆದ್ದಿದೆ, ಟ್ರೆಂಡ್ನಲ್ಲಿದೆ ಎನ್ನುವುದರ ಬದಲು, ಸಾವಕಾಶವಾಗಿ ಕುಳಿತು ನನ್ನ ಬಲವೇನು? ವೀಕ್ನೆಸ್ಸ್ ಏನು? ಸಮಾಜದಲ್ಲಿ ಯಾವ ಬದಲಾವಣೆ ಆಗುತ್ತಿದೆ, ಮುಂಬರುವ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಆಗುವ ಬದಲಾವಣೆಗಳೇನು? ಯಾವುದಕ್ಕೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ? ಆ ಡಿಮ್ಯಾಂಡ್ ಪೂರ್ಣಗೊಳಿಸುವ ಕ್ಷಮತೆ ನನಗಿದೆಯೇ? ಹೀಗೆ ಪ್ರಶ್ನೆಗಳನ್ನು ಮಾಡಿಕೊಳ್ಳಬೇಕು. ಸಾಲಿಡ್ ಬಿಸಿನೆಸ್ ಐಡಿಯಾ ಎನ್ನಸಿದರೆ ಮಾತ್ರ ಮುಂದಿನ ಹೆಜ್ಜೆ ಇಡಬೇಕು.
  3. ಮಾರ್ಕೆಟ್ ಸರ್ವೆ, ರಿಸರ್ಚ್ ಬಹಳ ಮುಖ್ಯ: ನಮ್ಮ ಐಡಿಯಾ ನಮಗೆ ಚನ್ನಾಗೇ ಕಾಣುತ್ತದೆ. ಆದರೆ ಮಾರುಕಟ್ಟೆ ಅದನ್ನು ಒಪ್ಪಿಕೊಳ್ಳುತ್ತದೆಯೇ ಎನ್ನುವುದನ್ನು ಗಮನಿಸಿ ನೋಡಬೇಕು. ಸರ್ವೇ ಎಂದರೆ ಮತ್ತೇನಲ್ಲ ನಿಗದಿತ ಪ್ರದೇಶದಲ್ಲಿ ಟಾರ್ಗೆಟೆಡ್ ಗ್ರಾಹಕರ ಅಭಿರುಚಿ ಮತ್ತು ನಮ್ಮ ಐಡಿಯಾ ಹೊಂದಾವಣಿಕೆಯಾಗುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ. ಉದಾಹರಣೆಗೆ ನಾವೊಂದು ಹೋಟೆಲ್ ತೆಗೆಯುವುದು ಎಂದು ನಿರ್ಧರಿಸಿದರೆ ಹೋಟೆಲ್ ತೆಗೆಯುವ ಜಾಗದಲ್ಲಿನ ಜನರ ಅಭಿರುಚಿ ತಿಳಿದುಕೊಳ್ಳಬೇಕು. ಮೊದಲಿಗೆ ಸಸ್ಯಹಾರ ಅಥವಾ ಮಾಂಸಾಹಾರ ಎನ್ನುವುದು ನಿರ್ಧಾರವಾಗಬೇಕು. ನಂತರ ಅಲ್ಲಿನ ಜನ ಹೆಚ್ಚು ಖಾರ ತಿನ್ನುತ್ತಾರಾ, ಆರಾಮವಾಗಿ ಕುಳಿತು ತಿನ್ನಲು ಬಯಸುವವರ, ಅವರ ಖರ್ಚು ಮಾಡುವ ಶಕ್ತಿಯೆಷ್ಟು? ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಇಲ್ಲಿ ಓಕೆ ಎಂದಾದರೆ ಮುಂದಿನ ಹೆಜ್ಜೆ, ಎಲ್ಲಿಯೂ ದ್ವಂದ್ವಕ್ಕೆ ದಾರಿಯಿರಬಾರದು.
  4. ಬಿಸಿನೆಸ್ ಪ್ಲಾನ್ ಸಿದ್ಧಪಡಿಸಿಕೊಳ್ಳಿ: ಇಲ್ಲಿಯ ತನಕ ಎಲ್ಲವೂ ಗಾಳಿಯಲ್ಲಿ ಇದ್ದವು. ಈ ವೇಳೆಗೆ ಮೂರು ಹಂತ ದಾಟಿದ ಮೇಲೆ ಒಂದಷ್ಟು ನಿಖರತೆ ಬಂದಿರುತ್ತದೆ. ಈಗ ಮಾಡಬೇಕಾದ್ದು ಸರಿಯಾದ ಬಿಸಿನೆಸ್ ಪ್ಲಾನ್ ಸಿದ್ದಪಡಿಸುವುದು! ಬಿಸಿನೆಸ್ ಪ್ಲಾನ್ ಎಂದರೆ ಎಲ್ಲವೂ ಅಂದರೆ ಅತಿ ಸಣ್ಣ ಅಂಶಗಳನ್ನು ಕೂಡ ಪ್ಲಾನ್ ಮಾಡಬೇಕಾಗುತ್ತದೆ.
  • ಬಿಸಿನೆಸ್ ಫಾರ್ಮ್ಯಾಟ್ ಯಾವುದು ಎನ್ನುವುದನ್ನು ವಿವರವಾಗಿ ಬರೆಯಬೇಕು. ಇದರಲ್ಲಿ ಕಾರ್ಯ ನಿರ್ವಾಹಕ ವಿವರ ಮತ್ತು ಒಟ್ಟಾರೆ ಬಿಸಿನೆಸ್ ಪ್ಲಾನ್ ಇರಬೇಕು.
  • ಕಾರ್ಯಕಾರಿಣಿ ಸದಸ್ಯರ ವಿವರಗಳು. ಯಾರು ಏನು ಮಾಡಬೇಕು. ಭಾದ್ಯತೆ ಮತ್ತು ಹೊಣೆಗಾರಿಕೆ ವಿವರವಾಗಿ ಮತ್ತು ಸ್ಪಷ್ಟವಾಗಿ ನಿಗದಿಪಡಿಸಿರಬೇಕು
  • ಸೇವೆ ಅಥವಾ ಸರುಕು, ಯಾವುದು ನಮ್ಮ ಬ್ಯುಸಿನೆಸ್ ಅದರ ಬಗ್ಗೆ ವಿವರಣೆಗಳು ಇರಬೇಕು .
  • ಮಾರ್ಕೆಟಿಂಗ್ ಮತ್ತು ಸೇಲ್ಸ್ ಬಗ್ಗೆ ವಿವರಗಳು ಇರಬೇಕು. ಅದಕ್ಕೆಂದು ಪ್ರತ್ಯೇಕ ಟೀಮ್ ಸಿದ್ಧವಿರಬೇಕು
  • ವ್ಯಾಪಾರದಿಂದ ಹೇಗೆ ಹಣ ಅಥವಾ ಆದಾಯ ಉತ್ಪತ್ತಿಯಾಗುತ್ತದೆ ಎನ್ನುವ ವಿವರಣೆ ನೀಡುವ ಫೈನಾಸಿಯಲ್ ಪ್ರೊಜೆಕ್ಷನ್ಸ್ ಸಿದ್ದ ಪಡಿಸಿಕೊಳ್ಳಬೇಕು .
  • ಎಲ್ಲಿಂದ ಹಣ ತರಬೇಕು? funding ಪ್ಲಾನ್ ಏನು? ಎನ್ನುವುದರ ವಿವರವಿರಬೇಕು.
  • ಉದ್ದಿಮೆ ಶುರು ಮಾಡಲು ಬೇಕಾಗುವ ಅನುಮತಿ ಪತ್ರಗಳೇನು? ಹೇಗೆ ಪಡೆಯುವುದು? ಖರ್ಚೆಷ್ಟು? ಇತ್ಯಾದಿ ವಿವರಗಳು ಇಲ್ಲಿರಬೇಕು
  • ಸಾಮಾನ್ಯವಾಗಿ ವಿವರವಾದ ಬಿಸಿನೆಸ್ ಪ್ಲಾನ್ 20/30 ಪುಟಗಳಿರುತ್ತವೆ. ಐದರಿಂದ ಹತ್ತು ಪುಟದ ಸಾರಾಂಶ ಕೂಡ ತಯಾರಿಸಿಕೊಳ್ಳುವುದು ಒಳ್ಳೆಯದು.

5. ಹಣ ಹೂಡಿಕೆ ಬಗ್ಗೆ ನಿಖರತೆ ಇರಲಿ: ಬ್ಯುಸಿನೆಸ್ಗೆ ಬೇಕಾದ ಹಣವನ್ನು ಎಲ್ಲಿಂದ ತರುವುದು ಎನ್ನುವುದು ಇನ್ನೊಂದು ಮುಖ್ಯ ಪ್ರಶ್ನೆ. ನಮ್ಮ ಐಡಿಯಾ ಉತ್ತಮವಾಗಿದ್ದರೆ ಹಣಕ್ಕೆ ಪರದಾಡುವ ಸ್ಥಿತಿಯಲ್ಲಿ ಇಂದು ನಾವಿಲ್ಲ. ನಮ್ಮ ಕನಸುಗಳನ್ನು ಸಶಕ್ತವಾಗಿ ಕಟ್ಟಿಕೊಡುವ ಕಲೆಗಾರಿಕೆ ಬಹಳ ಮುಖ್ಯ. ಹಣವನ್ನು ಈ ಮೂಲಗಳಿಂದ ಸಂಪಾದಿಸಬಹುದು:

  • ಸ್ವತಃ ಹಣ ಹೂಡುವುದು - ಸೆಲ್ಫ್ ಫನ್ಡಿಂಗ್ .
  • ಕುಟುಂಬ ಮತ್ತು ಸ್ನೇಹಿತರಿಂದ ಪಡೆಯುವುದು
  • ಸರಾಕಾರಿ ಅಥವಾ ಇತರೆ ಅನುದಾನಗಳು
  • ಏಂಜೆಲ್ ಇನ್ವೆಸ್ಟರ್
  • ವೆಂಚರ್ ಕ್ಯಾಪಿಟಲಿಸ್ಟ್
  • ಕ್ರೌಡ್ ಫನ್ಡಿಂಗ್
  • ಗ್ರಾಹಕರಿಂದ ಮುಂಗಡ ಹಣ ಪಡೆಯುವುದು
  • ಪಾಲುದಾರರಿಂದ ಹಣ ಪಡೆಯುವುದು
  • ಬ್ಯಾಂಕಿನಿಂದ ಸಾಲ ಪಡೆಯುವುದು
  • ಇತರೆ ಬ್ಯುಸಿನೆಸ್ಸ್ಗಳಿಂದ ಸಾಲ ಪಡೆಯುವುದು

6. ವ್ಯಾಪಾರದ ರಚನೆ / ಸ್ಟ್ರಕ್ಚರ್ ಯಾವುದಿರಬೇಕು?: ಇದು ಕೂಡ ಅತಿ ಮುಖ್ಯ ನಿರ್ಧಾರ. ನಾವು ಬಯಸಿ ಕಟ್ಟಲಿರುವ ಬಿಸಿನೆಸ್ ಯಾವ ರಚನೆಯಲ್ಲಿರಬೇಕು ಎನ್ನುವುದರ ನಿಖರತೆ ಕೂಡ ನಮ್ಮಲ್ಲಿ ಇರಬೇಕು. ಮುಖ್ಯವಾಗಿ ಕೆಳಗಿನ ರಚನೆಗಳು ಚಾಲ್ತಿಯಲ್ಲಿವೆ. ನಮಗೆ ಯಾವುದು ಹೆಚ್ಚು ಲಾಭದಾಯಕ ಎನ್ನುವುದನ್ನು ನಾವು ಕಂಡುಕೊಳ್ಳಬೇಕು.

  • ಏಕವ್ಯಕ್ತಿ ಸಂಸ್ಥೆ ಅಥವಾ ಏಕ ಮಾಲೀಕ ಸಂಸ್ಥೆ.
  • ಪಾರ್ಟ್ನರ್ ಶಿಪ್ ಸಂಸ್ಥೆ
  • ಪ್ರೈವೇಟ್ ಲಿಮಿಟೆಡ್ ಸಂಸ್ಥೆ
  • LLC - ಲಿಮಿಟೆಡ್ ಲಿಯಬಿಲಿಟಿ ಕಾರ್ಪೋರೇಶನ್

7. ಉದ್ದಿಮೆಗೆ ಒಂದೊಳ್ಳೆ ಹೆಸರಿಡಿ ಮತ್ತು ಅದನ್ನು ನೋಂದಾಯಿಸಿ: ಹೆಸರು ವಿವಾದಕ್ಕೆ ಎಡೆ ಮಾಡಿಕೊಡದೆ ಸಮಾಜದ ಎಲ್ಲಾ ವರ್ಗಕ್ಕೂ ಒಪ್ಪಿತವಾಗುವಂತಿರಲಿ.

8. ಎಲ್ಲಾ ಅವಶ್ಯಕ ಅನುಮತಿಗಳನ್ನು ಪಡೆದುಕೊಳ್ಳಿ

9. ಬ್ಯಾಂಕ್ ಖಾತೆ ತೆರೆಯಿರಿ

10. ವ್ಯಾಪಾರದ ಸ್ಥಳ ನಿರ್ಧರಿಸಿ.

11. ಒಂದೊಳ್ಳೆ ಟೀಮ್ ಕಟ್ಟಬೇಕು

12. ಸೇವೆ ಅಥವಾ ಸರುಕು ಸಿದ್ದಪಡಿಸಿ

13. ಪದಾರ್ಥವನ್ನು ಮಾರ್ಕೆಟ್ ಮಾಡಿ

14. ಯಾವುದೇ ಕಾರಣಕ್ಕೂ ವ್ಯಾಪಾರದ ಹಣವನ್ನು ವೈಯಕ್ತಿಕ ಹಣದ ಜೊತೆಗೆ ಬೆರಸಬೇಡಿ.

ಕೊನೆ ಮಾತು: ನಾವು ಹೇಗೆ ಬದುಕ ಬೇಕು ಎನ್ನುವ ಆಯ್ಕೆ ನಮ್ಮದ್ದು. ಜಗತ್ತಿನ ಎಲ್ಲಾ ಉದ್ದಿಮೆದಾರರ ಪೋಷಕರು ಉದ್ದಿಮೆದಾರರಾಗಿರಲಿಲ್ಲ ಎನ್ನುವುದು ನೆನಪಿರಲಿ. ಎಲ್ಲದಕ್ಕೂ ಒಂದು ಮೊದಲು ಇರಬೇಕಲ್ಲ? ಆ ಮೊದಲು ನಮ್ಮಿಂದಲೇ ಶುರುವಾಗಲಿ ಎನ್ನುವ ಉತ್ಕಟ ಬಯಕೆಯಿರಲಿ. ಸೋಲಿಗೆ ಕುಗ್ಗದ, ಗೆಲುವಿಗೆ ಹಿಗ್ಗದ ಸ್ಥಿತಪ್ರಜ್ಞತೆ ನಮ್ಮದಾಗಿರಲಿ. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com